Udayavani | Jul 15, 2012
ಬೆಂಗಳೂರು: ದೇವರ ದರ್ಶನಕ್ಕೆ ಜಾತಿ, ಮತ, ಪಂಥ, ಶ್ರೀಮಂತ, ಬಡವ, ಮೇಲು, ಕೀಳು ಎಂಬ ಯಾವ ಬೇಧ-ಭಾವ ಇಲ್ಲ. ದೇವರಿಗೆ ಎಲ್ಲರೂ ಸಮಾನರು ಎಂಬುದಕ್ಕೆ ನಗರದ ಅರಮನೆ ಮೈದಾನದ ಪ್ರಿನ್ಸೆಸ್ ಅಕಾಡೆಮಿಯಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಶಿರಡಿ ಸಾಯಿ ಬಾಬಾ ಸಮಾಧಿಯ 'ಸಾಯಿ ಅಮೃತ್‌ಧಾರ' ಪ್ರತಿರೂಪದ ದರ್ಶನ ಸಾಕ್ಷಿಯಾಯಿತು.
ಹಿರಿಯರು, ಕಿರಿಯರು, ದಂಪತಿ, ಯುವಕ- ಯುವತಿಯರು, ಮಕ್ಕಳು ಎಲ್ಲ ವರ್ಗದ ಜನರು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಯಿ ಬಾಬಾ ದರ್ಶನ ಭಾಗ್ಯ ಪಡೆದರು. ಮಧ್ಯಾಹ್ನ 2.30ರಿಂದ ಆರಂಭವಾದ ಈ ಧಾರ್ಮಿಕ ಸಮಾರಂಭದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿದ್ದರು.
ಸಾಯಿ ಸಮರ್ಥ ಟ್ರಸ್ಟ್ ತಾತ್ಕಾಲಿಕವಾಗಿ ಈ ಸಮಾಧಿಯ ಪ್ರತಿರೂಪ ಸೃಷ್ಟಿಸಿತ್ತು. ಐಟಿ/ಬಿಟಿ, ಕೈಗಾರಿಕೋದ್ಯಮವೂ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರದ ಜನರು ಭಾಗವಹಿಸಿದ್ದುದು ವಿಶೇಷವಾಗಿತ್ತು. ಭಕ್ತಾದಿಗಳು ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೇ, ಅತ್ಯಂತ ಉತ್ಸಾಹಭರಿತರಾಗಿ ಶ್ರೀ ಸಾಯಿ ಬಾಬಾ ದರ್ಶನ ಪಡೆದರು.
ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಿದ್ದರಿಂದ, ಉತ್ಸಾಹ ಮತ್ತಷ್ಟು ಇಮ್ಮಡಿಯಾದಂತೆ ಇತ್ತು. ಪೂಜಾ ಕಾರ್ಯಕ್ರಮ, ಭಕ್ತಿಗೀತೆಗಳ ಗಾಯನ, ಪ್ರಸಾದ ವಿನಿಯೋಗ ಸಂದರ್ಭದಲ್ಲೂ ಭಕ್ತರು ಭಕ್ತಿ ಭಾವದಿಂದ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾಯಿ ಅಮೃತ್ ಧಾರ, ಶ್ರೀ ಶಿರಡಿ ಸಾಯಿ ಬಾಮಾ ನಾಮ್ ಸಂಕೀರ್ತನ್, ವಿಶಾಲ್ ಸಾಯಿ ಭಜನ್ ಸಂಧ್ಯಾ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ತಮ್ಮಿಚ್ಛೆಯಂತೆ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಸ್ವಯಂ ಭಜನೆ, ಸಾಯಿ ಬಾಬಾ ಕೀರ್ತನೆ, ಮಂತ್ರ ಪಠಿಸಿ ಭಕ್ತಿ ಮೆರೆದರು.
ರಾತ್ರಿ 10 ಗಂಟೆವರೆಗೂ ಕಾರ್ಯಕ್ರಮ ನಡೆಯಿತು. ಪ್ರಸಾದ ವಿನಿಯೋಗದ ನಂತರ ಎಲ್ಲ ಭಕ್ತಾದಿಗಳಿಗೆ ಉಚಿತ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಾಯಿ ಬಾಬಾ ಭಕ್ತರಿಗೆ ಪಾರ್ಕಿಂಗ್, ಊಟ, ಪೂಜಾ ಕಾರ್ಯಕ್ರಮ ಯಾವುದರಲ್ಲೂ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು 500 ಕಾರು ಮತ್ತು 3,000 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿತ್ತು. ಪೂಜಾ ವಿಧಿ ವಿಧಾನಗಳನ್ನು ವೀಕ್ಷಿಸಲು ಯಾರಿಗೂ ಅಡ್ಡಿಯಾಗದಂತೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಇದೇ ಪ್ರಥಮ ಬಾರಿಗೆ ತಾತ್ಕಾಲಿಕವಾಗಿ ಈ ರೀತಿಯ ಶ್ರೀ ಶಿರಡಿ ಸಾಯಿ ಬಾಬಾ ಸಮಾಧಿ ಮಂದಿರದ ಪ್ರತಿರೂಪ ಸೃಷ್ಟಿಸಲಾಗಿತ್ತು.
ಶಿರಡಿ ಶ್ರೀ ಸಾಯಿ ಬಾಬಾ ಮಂದಿರದ ಮಾಜಿ ಗುರುವರ್ಯರಾದ ಪ್ರಮೋದ್ ಮೇಧಿ ಅವರು ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಖ್ಯಾತ ಗಾಯಕ ಶೈಲೇಂದ್ರ ಭಾರತಿ ಶಿರಡಿ ಸಾಯಿ ಬಾಬಾ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
'ಶಿರಡಿ ಕೆ ಸಾಯಿಬಾಬಾ' ಚಲನಚಿತ್ರದಲ್ಲಿ ಸ್ವತಃ ಶ್ರೀ ಸಾಯಿ ಬಾಬಾ ಪಾತ್ರ ವಹಿಸಿರುವ ಸುಧೀರ್ ಧಾಲ್ಪಿ ಸಾಯಿ ಬಾಬಾ ಕುರಿತ ವಿಶೇಷ ಬೋಧನಾ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯಕ ಪಂಕಜ್ ರಾಜ್ ಸಾಯಿ ಬಾಬಾ ಭಕ್ತಿಗೀತೆ ಹಾಡಿ, ಭಕ್ತರ ಮೆಚ್ಚುಗೆ ಗಳಿಸಿದರು. ಇದೇ ಸಂದರ್ಭದಲ್ಲಿ ಕಲಾವಿದ ನವನೀಶ್ ಅಗ್ನಿಹೋತ್ರಿ ಸ್ಥಳದಲ್ಲೇ ಚಿತ್ರ ಬಿಡಿಸಿದರು.
ಮುಂಬೈನ ಕಲಾ ಸಾಧನ ಸಂಸ್ಥೆ ಕಲಾವಿದರು ಶ್ರೀ ಸಾಯಿ ಬಾಬಾ ರಂಗೋಲಿ ಹಾಕುವ ಕಾರ್ಯಕ್ರಮ ನಡೆಸಿಕೊಟ್ಟರು.