ನಿರೇನ್ ಜೈನ್ ,ದೀಪಿಕಾ ಪ್ರಸಾದ್ | Jul 16, 2012
ಕೇರಳ, ತಮಿಳುನಾಡು, ಮಹಾರಾಷ್ಟ್ರ - ಹೀಗೆ ಇತರೆಲ್ಲ ರಾಜ್ಯಗಳು ಪಶ್ಚಿಮ ಘಟ್ಟ ಶ್ರೇಣಿಯನ್ನು "ನೈಸರ್ಗಿಕ ಪರಂಪರೆಯ ತಾಣ'ವನ್ನಾಗಿ ಗುರುತಿಸಲು ಸಂತೋಷದಿಂದ ಮುಂದೆ ಬಂದಿರುವಾಗ ಕರ್ನಾಟಕವಷ್ಟೇ ಇದನ್ನು ವಿರೋಧಿಸಿದ್ದೇಕೆ, ಈ "ಗುರುತಿಸುವಿಕೆ'ಯ ಸಾಧಕ-ಬಾಧಕಗಳೇನು ಎಂಬುದು ಮೂಲಭೂತ ಪ್ರಶ್ನೆ...
ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಅಂಗಸಂಸ್ಥೆ (ಯುನೆಸ್ಕೊ) ನಮ್ಮ ಪಶ್ಚಿಮ ಘಟ್ಟವನ್ನು "ಜಾಗತಿಕ ನೈಸರ್ಗಿಕ ಪರಂಪರೆ ಯಾದಿ'ಯಲ್ಲಿ ಸೇರ್ಪಡೆಗೊಳಿಸಿದೆ. ನಮಗೆ ಇದೊಂದು ಹೆಮ್ಮೆಯ, ಪ್ರತಿಷ್ಠೆಯ ವಿಚಾರವಲ್ಲದೆ ಮತ್ತೇನು?
ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಅವಿಚ್ಛಿನ್ನ ಎಂಬಂತೆಯೇ ಹರಡಿ ಹಬ್ಬಿರುವ (ಪಾಲಾ^ಟ್ ಸಂದನ್ನು ಹೊರತುಪಡಿಸಿ) 1,600 ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟ ಶ್ರೇಣಿಯನ್ನು ಇಡಿಯಾಗಿ ಸಂರಕ್ಷಿತ ಪ್ರದೇಶವಾಗಿ ಕಾಯ್ದುಕೊಳ್ಳುವುದು ಅಕ್ಷರಶಃ ಕಾರ್ಯಸಾಧ್ಯವಲ್ಲ. ಹಾಗಾಗಿ, ಭಾರತ ಸರಕಾರ ನೇಮಿಸಿದ "ನೇಮಕ ಸಮಿತಿ'ಯು ಪಶ್ಚಿಮ ಘಟ್ಟ ಶ್ರೇಣಿಯನ್ನು ಒಂದು "ನೈಸರ್ಗಿಕ ಪರಂಪರೆಯ ಸರಣಿ'ಯಾಗಿ ಗುರುತಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಸರಣಿಯಲ್ಲಿ ಒಟ್ಟು 7 ವಿಭಾಗಗಳಿವೆ - ಕೇರಳ ಮತ್ತು ತಮಿಳುನಾಡಿನ ನಾಲ್ಕು ಪ್ರದೇಶಗಳು, ಮಹಾರಾಷ್ಟ್ರದ ಒಂದು ಮತ್ತು ಕರ್ನಾಟಕದ ಎರಡು. ಇದರಲ್ಲಿ ಕರ್ನಾಟಕ, ಕುದುರೆಮುಖ-ಆಗುಂಬೆ- ಸೋಮೇಶ್ವರ ಪ್ರದೇಶ ಮತ್ತು ಪುಷ್ಪಗಿರಿ-ತಲಕಾವೇರಿ-ಬ್ರಹ್ಮಗಿರಿ ಈ ಎರಡು ಪ್ರದೇಶಗಳನ್ನು ಒಳಗೊಳ್ಳುತ್ತದೆ. ಈ ಪ್ರದೇಶಗಳನ್ನು ಆಳವಾದ ಅಧ್ಯಯನದ ಬಳಿಕ ನೈಸರ್ಗಿಕ ಪರಂಪರೆಯ ಯಾದಿಯಲ್ಲಿ ಗುರುತಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಯುನೆಸ್ಕೊ ತನ್ನದೇ ಮಾನದಂಡವನ್ನು ಬಳಸುತ್ತದೆ - ನೈಸರ್ಗಿಕ ಸೌಂದರ್ಯ, ಅಗಾಧ ಜೀವ ವೈವಿಧ್ಯ ಮತ್ತು ವಿನಾಶದಂಚಿನಲ್ಲಿ ಇರುವ ಜೀವ ಸಂಕುಲ ಇರುವ ಪ್ರದೇಶ - ಇತ್ಯಾದಿ.

ಜನಸಾಮಾನ್ಯರೇನೋ ಪಶ್ಚಿಮ ಘಟ್ಟವನ್ನು ಜಾಗತಿಕ ನೈಸರ್ಗಿಕ ಪರಂಪರೆಯ ಯಾದಿಯಲ್ಲಿ ಸೇರಿಸುವ ಸುದ್ದಿಯನ್ನು ತಿಳಿದು ಸಂಭ್ರಮಿತರಾಗಿದ್ದಾರೆ. ಕರ್ನಾಟಕ ಸರಕಾರ ಹಿಂದುಮುಂದು ಯೋಚಿಸದೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಖತಿಗೊಂಡಿದ್ದಾರೆ ಕೂಡ. ನಮ್ಮ ಪಶ್ಚಿಮ ಘಟ್ಟ ನಿಜವಾಗಿಯೂ ಜಾಗತಿಕ ಪರಂಪರೆಯ ತಾಣ ಎಂಬ ಹಣೆಪಟ್ಟಿಯನ್ನು ಲಗತ್ತಿಸಿಕೊಳ್ಳುವುದಕ್ಕೆ ಯೋಗ್ಯವೆ! ಇದು ಈಗ ಸಾಮಾನ್ಯ ಜನರ ಕುತೂಹಲ. ಕೇರಳ, ತಮಿಳುನಾಡು, ಮಹಾರಾಷ್ಟ್ರ - ಹೀಗೆ ಇತರೆಲ್ಲ ರಾಜ್ಯಗಳು ಪಶ್ಚಿಮ ಘಟ್ಟ ಶ್ರೇಣಿಯನ್ನು "ನೈಸರ್ಗಿಕ ಪರಂಪರೆಯ ತಾಣ'ವನ್ನಾಗಿ ಗುರುತಿಸಲು ಸಂತೋಷದಿಂದ ಮುಂದೆ ಬಂದಿರುವಾಗ ಕರ್ನಾಟಕವಷ್ಟೇ ಇದನ್ನು ವಿರೋಧಿಸಿದ್ದೇಕೆ, ಸ್ಥಳೀಯ ಜನರಿಗೆ ಈ "ಗುರುತಿಸುವಿಕೆ'ಯ ಸಾಧಕ-ಬಾಧಕಗಳೇನು- ಇದು ಜನಸಾಮಾನ್ಯರ ಪ್ರಶ್ನೆ. ಹಾಗೆ ಹೇಳಬೇಕೆಂದರೆ ಪಶ್ಚಿಮ ಘಟ್ಟ ಶ್ರೇಣಿಯ ಒಂದು ಪಾಲು ಗೋವಾ ರಾಜ್ಯದಲ್ಲೂ ಇದೆ. ಆದರೆ, ಆ ರಾಜ್ಯದಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಯ ಯಾವ ಪ್ರದೇಶವನ್ನೂ "ನೈಸರ್ಗಿಕ ಪರಂಪರೆ'ಯ ಯಾದಿಯಲ್ಲಿ ಗುರುತಿಸುವ ಪ್ರಸ್ತಾವನೆಯಿಲ್ಲ. ಆದರೆ, ಗೋವಾ ರಾಜ್ಯ ಸರಕಾರ "ನಮ್ಮಲ್ಲಿರುವ ಪಶ್ಚಿಮ ಘಟ್ಟ ಪ್ರದೇಶವನ್ನು ಜಾಗತಿಕ ನೈಸರ್ಗಿಕ ಪರಂಪರೆಯ ಯಾದಿಯಲ್ಲಿ ಗುರುತಿಸಿ' ಎಂಬುದಾಗಿ ಭಾರತ ಸರಕಾರವನ್ನು ಕೇಳಿಕೊಂಡಿದೆ.
"ಜಾಗತಿಕ ಪರಂಪರೆಯ ಯಾದಿ' ಎಂದರೇನು?

ದೇಶ-ದೇಶಗಳ ಎಲ್ಲೆಗಳನ್ನು ಮೀರಿದ ಅಸಾಧಾರಣ ಜಾಗತಿಕ ಮೌಲ್ಯವುಳ್ಳ ಇಂದು-ನಾಳೆಯ ಮಾನವ ಸಂಕುಲಕ್ಕೆ ಪ್ರಾಮುಖ್ಯವನ್ನು ಪಡೆದ, ವಿನಾಶದ ಎಲ್ಲ ಅಪಾಯಗಳಿಂದ ಸಂರಕ್ಷಿಸಲ್ಪಡಬೇಕಾದ ಸ್ಥಳ ಎಂಬುದಾಗಿ ಯುನೆಸ್ಕೊದ "ಜಾಗತಿಕ ಪರಂಪರೆಯ ತಾಣ'ದ ಒಡಂಬಡಿಕೆ ಹೇಳುತ್ತದೆ.
ನಾವು ಬಯಸಿದ್ದೆೆ?
ಹೌದು. ಆರು ವರ್ಷಗಳ ಹಿಂದೆ, 2006ರಲ್ಲಿ ಭಾರತ ಸರಕಾರವೇ ಪಶ್ಚಿಮ ಘಟ್ಟ ಶ್ರೇಣಿಯ ಕೆಲವು ಪ್ರದೇಶಗಳನ್ನು ವಿಶ್ವಪರಂಪರೆಯ ಯಾದಿಯಲ್ಲಿ ಗುರುತಿಸುವಂತೆ ಯುನೆಸ್ಕೊಗೆ ಮನವಿ ಸಲ್ಲಿಸಿತ್ತು.
"ವಿಶ್ವ ನೈಸರ್ಗಿಕ ಪರಂಪರೆಯ ತಾಣ'ಗಳ ಯಾದಿಯಲ್ಲಿ ಗುರುತಿಸಿ ಎಂಬುದಾಗಿ ಪ್ರಸ್ತಾವನೆ ಸಲ್ಲಿಸಿದರಷ್ಟೇ ಸಾಲದು. ಈ ಹಿಂದೆಯೇ ಹೇಳಿದ ಹಾಗೆ ಯಾವುದೇ ಪ್ರದೇಶವನ್ನು "ಜಾಗತಿಕ ನೈಸರ್ಗಿಕ ಪರಂಪರೆಯ ಯಾದಿ'ಯಲ್ಲಿ ಸೇರಿಸಿಕೊಳ್ಳಬೇಕಾದರೆ ಯುನೆಸ್ಕೊ ತನ್ನದೇ ಮಾನದಂಡವನ್ನು ಅನುಸರಿಸುತ್ತದೆ. ಯುನೆಸ್ಕೊದ "ಜಾಗತಿಕ ನೈಸರ್ಗಿಕ ಪರಂಪರೆಯ ಯಾದಿ'ಯಲ್ಲಿ ಸೇರ್ಪಡೆಗೊಳ್ಳಲು 180 ಅಂಶಗಳನ್ನು "ಅಸಾಧಾರಣ ಜಾಗತಿಕ ಮೌಲ್ಯ' ಮಾಪನಕ್ಕೆ ಬಳಸಲಾಗುತ್ತದೆ.

ಏನಿದರ ಪ್ರಯೋಜನ?
"ಜಾಗತಿಕ ನೈಸರ್ಗಿಕ ಪರಂಪರೆಯ ತಾಣ'ವಾಗಿ ಪಶ್ಚಿಮ ಘಟ್ಟವನ್ನು ಗುರುತಿಸುವುದರಿಂದ ಪಶ್ಚಿಮ ಘಟ್ಟ ಪ್ರದೇಶದ ಸಂರಕ್ಷಣೆಗೆ ತಾತ್ವಿಕ ತಳಹದಿಯೊಂದು ದೊರೆತಂತಾಗುತ್ತದೆ. "ಜಾಗತಿಕ ನೈಸರ್ಗಿಕ ಪರಂಪರೆಯ ತಾಣ'ವಾಗಿ ಗುರುತಿಸಿಕೊಂಡ ಮೇಲೆ ಪಶ್ಚಿಮ ಘಟ್ಟ ಪ್ರದೇಶಗಳು ಎದುರಿಸುವ ಯಾವುದೇ ಅಪಾಯ/ಸಮಸ್ಯೆಗಳನ್ನು ವಿವಿಧ ರಾಜಕೀಯ, ಆಡಳಿತಾತ್ಮಕ ಅಥವಾ ನ್ಯಾಯ ವೇದಿಕೆಗಳ ಮುಂದೆ ಮಂಡಿಸಲು ಪರಿಸರವಾದಿಗಳಿಗೆ ಗಟ್ಟಿ ನೆಲೆಗಟ್ಟೊಂದು ಲಭ್ಯವಾಗುತ್ತದೆ. ಇಷ್ಟಲ್ಲದೆ, "ಜಾಗತಿಕ ನೈಸರ್ಗಿಕ ಪರಂಪರೆಯ ತಾಣ'ಗಳನ್ನು ವಿನಾಶದಿಂದ ರಕ್ಷಿಸಲು ಯುನೆಸ್ಕೊ ತನ್ನದೇ ಆದ ಪ್ರತಿಸ್ಪಂದಕ ಸರ್ವೇಕ್ಷಣೆ' ಹಾಗೂ "ಕಾಲಾನುಕಾಲಿಕ ವರದಿ'ಗಳ ವ್ಯವಸ್ಥೆಯನ್ನು ಹೊಂದಿದೆ. ಇದರಿಂದಾಗಿ ನೈಸರ್ಗಿಕ ಪರಂಪರೆಯ ಯಾದಿಯಲ್ಲಿ ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಯಾವುದೇ ವಿನಾಶಕಾರಿ ಚಟುವಟಿಕೆಗಳನ್ನು ನಡೆಸಲು ಗಣಿ, ಮರಮಟ್ಟು ವಹಿವಾಟು ಅಥವಾ ಇನ್ನಿತರ ಲಾಬಿಗಳಿಗೆ ಕಷ್ಟಸಾಧ್ಯ.
ಎಲ್ಲಾ ಜಾಗತಿಕ ನೈಸರ್ಗಿಕ ಪರಂಪರೆಯ ತಾಣಗಳನ್ನು ಸಂರಕ್ಷಿಸಲು ಮತ್ತು ನಿರ್ವಹಿಸಲು ದೀರ್ಘಕಾಲೀನ ಕ್ರಮಗಳು ಅಗತ್ಯ. ಈ ಕ್ರಮಗಳು ಸ್ಥಳೀಯ ಸಾಂಪ್ರದಾಯಿಕ ಶಾಸನ ವಿಧಿತ ಮತ್ತು ನಿರ್ಬಂಧಕ ವಿಧಿಗಳ ಜೊತೆಗೆ ಪರಿಣಾಮಕಾರಿ ಮೇಲ್ವಿಚಾರಣೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಮತ್ತು ತಜ್ಞರಿಂದ ವೈಜ್ಞಾನಿಕ ನಿರ್ವಹಣೆಯ ಮೂಲಕ ಸುಪುಷ್ಟಗೊಂಡಿರಬೇಕು. ಆಗ ಮಾತ್ರ "ಜಾಗತಿಕ ನೈಸರ್ಗಿಕ ಪರಂಪರೆಯ ತಾಣ'ಗಳ ಪರಿಣಾಮಕಾರಿ ಸಂರಕ್ಷಣೆ ಸಾಧ್ಯ.
"ಜಾಗತಿಕ ನೈಸರ್ಗಿಕ ಪರಂಪರೆಯ ತಾಣ'ವೊಂದರ ದೇಖರೇಖೀಯನ್ನು ಆಯಾ ರಾಜ್ಯಗಳು ಸರಿಯಾಗಿ ನಿರ್ವಹಿಸಲು ವಿಫಲವಾದರೆ, ಆ ತಾಣಗಳಿಗೆ ಸಂಭಾವ್ಯ ಅಥವಾ ಖಚಿತ ಆಪತ್ತು ಎದುರಾಗಿದೆ ಎಂದಾದರೆ, ಆಗ ಯುನೆಸ್ಕೊ ಆ ತಾಣವನ್ನು "ಅಪಾಯದಲ್ಲಿರುವ ಜಾಗತಿಕ ನೈಸರ್ಗಿಕ ಪರಂಪರೆಯ ತಾಣ' ಎಂಬುದಾಗಿ ವರ್ಗೀಕರಿಸುತ್ತದೆ. ಜಾಗತಿಕ ನೈಸರ್ಗಿಕ ಪರಂಪರೆಯ ತಾಣವನ್ನು ಮತ್ತಷ್ಟುಕೆಡುಕು-ವಿಕಲ್ಪಗಳಿಂದ ರಕ್ಷಿಸುವ ಸಲುವಾಗಿ ರಾಜ್ಯಗಳ ಮೇಲೆ ಒತ್ತಡ ಹೇರುವುದೇ ಈ ಮರುವರ್ಗೀಕರಣದ ಉದ್ದೇಶ.
"ಜಾಗತಿಕ ನೈಸರ್ಗಿಕ ಪರಂಪರೆಯ ತಾಣ'ದಿಂದ ತೆರವು?
ಈ ತಾಣಗಳಿಗೆ ಆಗುತ್ತಿರುವ ಹಾನಿಯನ್ನು ತಡೆಯಲು ರಾಜ್ಯಗಳು ಇನಿತೂ ಆಸಕ್ತಿ ವಹಿಸಿಲ್ಲವೆಂದಾದರೆ, ಅವು "ಅಸಾಧಾರಣ ಜಾಗತಿಕ ಮೌಲ್ಯ'ವನ್ನು ಕಳೆದುಕೊಂಡರೆ ಆಗ ಯುನೆಸ್ಕೊ ಆ ಸ್ಥಳಗಳನ್ನು ತನ್ನ "ಜಾಗತಿಕ ನೈಸರ್ಗಿಕ ಪರಂಪರೆಯ ಯಾದಿ'ಯಿಂದ ತೆರವುಗೊಳಿಸುತ್ತದೆ. ನೈಸರ್ಗಿಕ ಪರಂಪರೆಯ ತಾಣವನ್ನು ಸಂರಕ್ಷಿಸಲು ವಿಫಲವಾದ ರಾಜ್ಯದ ಬಗ್ಗೆ ಯುನೆಸ್ಕೊ ಕೈಗೊಳ್ಳಬಹುದಾದ ಗರಿಷ್ಠ ಕ್ರಮ ಇಷ್ಟೆ !
ಧನ ಸಹಾಯ?
ಯುನೆಸ್ಕೊದ ಜಾಗತಿಕ ನೈಸರ್ಗಿಕ ಪರಂಪರೆಯ ಒಡಂಬಡಿಕೆಗೆ ಸಹಿ ಹಾಕಿರುವ ಎಲ್ಲ ರಾಷ್ಟ್ರಗಳು "ಜಾಗತಿಕ ಪರಂಪರೆಯ ನಿಧಿ'ಗೆ ದೇಣಿಗೆ ನೀಡಬೇಕಾಗಿದೆ. ತಮ್ಮದೇ ವಿತ್ತ ಸಂಪನ್ಮೂಲಗಳಿಂದ ತಮ್ಮಲ್ಲಿರುವ ಜಾಗತಿಕ ನೈಸರ್ಗಿಕ ಪರಂಪರೆಯ ಸ್ಥಳಗಳನ್ನು ಸಂರಕ್ಷಿಸಲು ಸಾಧ್ಯವಿಲ್ಲದ ರಾಜ್ಯಗಳಿಗೆ ಧನಸಹಾಯ ಒದಗಿಸಲು ಈ ನಿಧಿ ಬಳಕೆಯಾಗುತ್ತದೆ. 1) ತುರ್ತು ನೆರವು 2) ಪೂರ್ವ ಸಿದ್ಧತೆಗೆ ನೆರವು 3) ಸಂರಕ್ಷಣೆ ಮತ್ತು ನಿರ್ವಹಣೆ - ಹೀಗೆ ಮೂರು ವಿಭಾಗಗಳಲ್ಲಿ ಹಿಂದುಳಿದ ದೇಶ, ಮಧ್ಯಮ ಆದಾಯದ ದೇಶ, ಸಣ್ಣ ದ್ವೀಪ ರಾಜ್ಯಗಳು - ಇತ್ಯಾದಿ ಅರ್ಹತೆಯನ್ನನುಸರಿಸಿ ಈ ನೆರವು ಬಟವಾಡೆ ಆಗುತ್ತದೆ.
ಅನನುಕೂಲತೆಗಳು
ಪಶ್ಚಿಮ ಘಟ್ಟ ಪ್ರದೇಶದ ಅನೇಕ ಸ್ಥಳಗಳು ಈಗಾಗಲೇ ನೂಕುನುಗ್ಗಲಿನ ಪ್ರವಾಸಿ ಕೇಂದ್ರಗಳಾಗಿ ಮಾರ್ಪಟ್ಟಿವೆ - ಇದರಿಂದಾಗಿ ಸ್ಥಳೀಯ ನೈಸರ್ಗಿಕ ಸಂಪನ್ಮೂಲ ಮತ್ತು ಜೀವಸಂಕುಲ ಇನ್ನಿಲ್ಲದ ಒತ್ತಡ ಅನುಭವಿಸುತ್ತಿವೆ. ಇಂಥ ಬಹುತೇಕ ಪ್ರವಾಸಿ ಸ್ಥಳಗಳ ಮೇಲೆ ಯಾವ ನಿಯಂತ್ರಣವೂ ಇಲ್ಲದುದರಿಂದಾಗಿ ಅಲ್ಲಿ ಪ್ರವಾಸಿ ವಿಹಾರಧಾಮಗಳು ಯಾವ ಎಗ್ಗೂ ಇಲ್ಲದೆ ತಲೆ ಎತ್ತುತ್ತಿವೆ. ಯುನೆಸ್ಕೊದ "ಜಾಗತಿಕ ನೈಸರ್ಗಿಕ ಪರಂಪರೆಯ ತಾಣ' ಎಂಬ ಹಣೆಪಟ್ಟಿ ಇನ್ನಷ್ಟು ಪ್ರವಾಸೀ ನೂಕುನುಗ್ಗಲಿಗೆ ಕಾರಣವಾಗಬಹುದು, ಈಗಾಗಲೇ ಇರುವ ಸೂಕ್ಷ್ಮ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಯುನೆಸ್ಕೊ ದಿನಕ್ಕಿಂತಿಷ್ಟು ಪ್ರವಾಸಿಗಳು ಮಾತ್ರ ಸಂದರ್ಶಿಸಬಹುದು ಎಂಬ ನಿಯಮವನ್ನು ಹೊಂದಿದ್ದರೂ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ನಿಭಾವಣೆ ಇಲ್ಲದೇ ಹೋದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾದೀತು. "ಜಾಗತಿಕ ನೈಸರ್ಗಿಕ ಪರಂಪರೆಯ ಯಾದಿ'ಯಲ್ಲಿ ಸೇರ್ಪಡೆಗೊಳ್ಳುವುದರಿಂದ ಅನನುಕೂಲತೆ ಇದೊಂದೇ.
ನಮ್ಮದೇಕೆ ವಿರೋಧ?
.ಪಶ್ಚಿಮ ಘಟ್ಟದಂತಹ ಅಪೂರ್ವ ಜೀವ ವೈವಿಧ್ಯದ ತಾಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತದೆ ಎಂಬ ಸ್ಥಳೀಯ ಕೆಲವು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಪಶ್ಚಿಮ ಘಟ್ಟವನ್ನು "ಜಾಗತಿಕ ನೈಸರ್ಗಿಕ ಪರಂಪರೆಯ ಯಾದಿ'ಯಲ್ಲಿ ಸೇರಿಸುವುದಕ್ಕೆ ವಿರೋಧ ಸೂಚಿಸುತ್ತಿದೆ. ಹಾಗಿದ್ದರೆ ಪಶ್ಚಿಮ ಘಟ್ಟ ಆ ಅಷ್ಟು ಪ್ರದೇಶದ ಜನರಿಗೆ ಮಾತ್ರ ಸಂಬಂಧಪಟ್ಟದ್ದೆ?
.ಯುನೆಸ್ಕೊ ಗುರುತಿಸುವಿಕೆಯಿಂದ ಪಶ್ಚಿಮ ಘಟ್ಟದ ಸಂರಕ್ಷಣೆ ಮತ್ತು ಪ್ರವಾಸೋದ್ಯಮದ ಪ್ರವರ್ಧನೆಗೆ ಆಗಬಹುದಾದ ಅನುಕೂಲಗಳ ಬಗ್ಗೆ ಸಂಬಂಧಿತ ಎಲ್ಲರ ಸಮಾಲೋಚನೆ ನಡೆಸಲು ಸರಕಾರ ಮುಂದಾಗಬೇಕಿತ್ತು. ಅಷ್ಟಕ್ಕೂ ಪಶ್ಚಿಮ ಘಟ್ಟ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೇರಿದ್ದೇ?
.ಪಶ್ಚಿಮ ಘಟ್ಟವನ್ನು ಜಾಗತಿಕ ನೈಸರ್ಗಿಕ ಪರಂಪರೆಯ ಯಾದಿಗೆ ಸೇರಿಸುವ ಪ್ರಸ್ತಾವನೆ ಸಲ್ಲಿಸುವ ಮೊದಲೇ ರಾಜ್ಯ ಸರಕಾರ ಅಸಮ್ಮತಿ ಸೂಚಿಸಿದ್ದರೂ ಭಾರತ ಸರಕಾರ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಹಾಗಾದರೆ, ಭಾರತಕ್ಕೆ ಮಾತ್ರ ಸೇರಿದ್ದೆ ಈ ಪಶ್ಚಿಮ ಘಟ್ಟ ?
.ಯುನೆಸ್ಕೊದ ಜಾಗತಿಕ ನೈಸರ್ಗಿಕ ಪರಂಪರೆಯ ಒಡಂಬಡಿಕೆ ಹೇಳುವಂತೆ ಪಶ್ಚಿಮ ಘಟ್ಟ ಇಂದಿನ ಮತ್ತು ಮುಂದಿನ ಸಮಸ್ತ ಮನುಕುಲಕ್ಕೆ ಸೇರಿದ್ದೇ?