Friday, May 24, 2013
Last Updated: 9:44:39 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪದ್ಯಾಣದ್ವಯರಿಗೆ ಯಕ್ಷ ಸಂಗಮ ಸಮ್ಮಾನ
      • ಎಂ. ಶಾಂತಾರಾಮ ಕುಡ್ವ | Jul 20, 2012

        ಮೂಡಬಿದಿರೆಯ ಯಕ್ಷಸಂಗಮ ಸಂಸ್ಥೆ ಜುಲೈ 28ರಂದು ತೆಂಕುತಿಟ್ಟಿನ ಹಿರಿಯ ಭಾಗವತರಲ್ಲಿ ಒಬ್ಬರಾದ ಪದ್ಯಾಣ ಗಣಪತಿ ಭಟ್‌ ಮತ್ತು ಅನುಭವಿ ಚೆಂಡೆ-ಮದ್ದಲೆ ವಾದಕ ಶಂಕರನಾರಾಯಣ ಭಟ್‌ ಅವರನ್ನು ಸಮ್ಮಾನಿಸಿ ಗೌರವಿಸಲಿದೆ. ಈ ಹಿನ್ನೆಲೆಯಲ್ಲಿ ಈ ಈರ್ವರು ಯಕ್ಷ ಸಾಧಕರ ಕಿರು ಪರಿಚಯ ಇಲ್ಲಿದೆ. 

        ಭಾಗವತ ಪದ್ಯಾಣ ಗಣಪತಿ ಭಟ್‌

        "ಪದ್ಯಾಣ' ಪದವೇ ಸಂಗೀತ ಶ್ರೋತೃಗಳಲ್ಲಿ ಸಂಚಲನೆಯನ್ನುಂಟು ಮಾಡುವಂಥದ್ದು. ಪದ್ಯಾಣ ಕುಟುಂಬ ದಲ್ಲಿ ಜನಿಸಿದವರೆಲ್ಲರೂ ಸಂಗೀತ ಅಥವಾ ಯಕ್ಷಗಾನ ಕಲಾವಿದರೇ ಆಗಿರು ವುದು ವಾಸ್ತವ ಸಂಗತಿ. ಕಳೆದ 40 ವರ್ಷಗಳಿಂದಲೂ ಯಕ್ಷರಂಗದಲ್ಲಿ ಭಾಗವತರಾಗಿ ಮಿಂಚುತ್ತಿರುವ ಪದ್ಯಾಣ ಗಣಪತಿ ಭಟ್ಟರು ತೆಂಕುತಿಟ್ಟು ಯಕ್ಷಗಾನ ರಂಗ ಕಂಡ ಅಪೂರ್ವ ಕಲಾವಿದ.

        ಇವರು ಹಾಡುಗಾರಿಕೆಗೆ ಕುಳಿತ ರೆಂದರೆ ಶ್ರೋತೃಗಳಿಗೆ ರಸದೌತಣ. ಸಾಹಿತ್ಯಾಂಶ ಪೋಷಣೆ, ಹಿತಮಿತ ರಾಗ ಸಂಯೋಜನೆ, ಸ್ಪಷ್ಟ ಉಚ್ಛಾರದೊಂದಿಗೆ ಸಾತ್ಯಕ್ಕೆ ಪ್ರಾಧಾನ್ಯ, ಅರ್ಥಾಭಿವ್ಯಕ್ತಿಯುಕ್ತ ಯತಿವಿನ್ಯಾಸ, ತಾಳಶುದ್ಧತೆ, ರಸರಂಜನೆಗೆ ಪೂರಕವಾಗುವ ತಾಳದ ಕಸರತ್ತುಗಳು, ಸ್ವರಗಳ ಸೂಕ್ತ ಏರಿಳಿತ, ದ್ರುತ ವಿಲಂಬಿತ ಕ್ರಮಗಳು, ವಿಶೇಷ ರಾಗಗಳ ಸಮುಚಿತ ಬಳಕೆ, ಪರಂಪರೆಗೆ ಬದ್ಧವಾದ ಭಾಗವತಿಕೆ ಯೊಂದಿಗೆ ರಂಗನಿರ್ದೇಶನ ಇವೆಲ್ಲವೂ ಪದ್ಯಾಣರನ್ನು ಎತ್ತರಕ್ಕೆ ಏರಿಸಿದ ಅಂಶಗಳು.

        ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಜನನ. ಆ ಕಾಲ ದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ. ಅಜ್ಜನ ಶಿಷ್ಯರಾಗಿದ್ದ ಮಾಂಬಾಡಿ ನಾರಾಯಣ ಭಾಗವತರಲ್ಲಿ ಮುಂದಿನ ಅಭ್ಯಾಸ. ಎರಡು ವರ್ಷಗಳಲ್ಲೇ ಭಾಗವತಿಕೆಯ ಸೂಕ್ಷ್ಮಪಾಠ, ತಾಳಗತಿ ಹಾಗೂ ಪಟ್ಟುಗಳಲ್ಲಿ ಪರಿಣತಿಯತ್ತ ಸಾಗಿದ ಗಣಪತಿ ಭಟ್ಟರು 1971ರಲ್ಲಿ ಅಂದರೆ, ತಮ್ಮ 16ರ ಹರೆಯದಲ್ಲೇ ಚೌಡೇಶ್ವರೀ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಮುಂದಿನ ವರ್ಷ ಕುಂಡಾವು ಮೇಳ ಪ್ರವೇಶಿಸಿ ಅಲ್ಲಿ 2 ವರ್ಷ ಸೇವೆ ಸಲ್ಲಿಸಿದರು. ಮುಂದೆ ಕಸ್ತೂರಿ ವರದ ರಾಯ ಪೈ ಯಾಜಮಾನ್ಯದ ಸುರತ್ಕಲ್‌ ಮೇಳ ಸೇರಿದ ಪದ್ಯಾಣ ತನ್ನ ವ್ಯವಸಾಯ ಜೀವನದುದ್ದಕ್ಕೂ  ಸಿದ್ಧಿ- ಪ್ರಸಿದ್ಧಿ ಸಹಿತ ಅಪಾರ ಯಶಸ್ಸು ಪಡೆದರು.

        ಯಕ್ಷಗಾನದ ಭೀಷ್ಮ ನಾಮಾಂಕಿತ ಉದ್ದಾಮ ಕಲಾವಿದ ಡಾ| ಶೇಣಿ ಗೋಪಾಲಕೃಷ್ಣ ಭಟ್ಟ, ಯಕ್ಷರಂಗದ ದಂತಕಥೆ, ಪ್ರಕಾಂಡ ವಿದ್ವಾಂಸ ಎನಿಸಿದ ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್‌, ಕುಂಬ್ಳೆ ಸುಂದರ ರಾವ್‌ ಮೊದಲಾದ ಕಲಾವಿದರ ಒಡನಾಟದಿಂದ ಸುರತ್ಕಲ್‌ ಮೇಳದಲ್ಲಿ ವಿಜೃಂಭಿಸಿದ  ಪದ್ಯಾಣರ ಸಾಧನೆ ಅನನ್ಯ.  ಏರುಕಂಠ, ಇಂಪಾದ ರಾಗ, ಭಾವನಾತ್ಮಕ ಹಾಗೂ ಸಾಹಿತ್ಯಾತ್ಮಕವಾಗಿ ಹಾಡುವ ವಿಶಿಷ್ಟ ಶೈಲಿಯಿಂದ ಪದ್ಯಾಣರು ಶ್ರೇಷ್ಠ ಭಾಗವತರಾಗಿ ಮೂಡಿಬಂದರು.

        ಅಷ್ಟು ಸುಲಭವಾಗಿ ಯಾರನ್ನೂ ಮೆಚ್ಚದ ಡಾ| ಶೇಣಿಯವರಿಂದಲೇ  ಸೈ ಅನ್ನಿಸಿಕೊಂಡ ಭಾಗವತ ಪದ್ಯಾಣ. ತಮ್ಮನ್ನು ಯಾರಾದರೂ ತಾಳ ಮದ್ದಳೆಗೆ ಆಹ್ವಾನಿಸಿದರೆ ಭಾಗವತರು ಯಾರು ಎಂದು ವಿಚಾರಿಸಿ  ಪದ್ಯಾಣ ರನ್ನು ಕರೆಯಿರಿ, ತಾಳಮದ್ದಳೆ ಯಶಸ್ವಿ ಯಾಗುತ್ತದೆ ಎಂದು ಶಿಫಾರಸು ಮಾಡುತ್ತಿ ದ್ದರೆಂದರೆ ಪದ್ಯಾಣರ ಹಿರಿಮೆ ವೇದ್ಯ ವಾದೀತು. ಪಾತ್ರದೊಳಗೊಂದಾಗಿ ಹಾಡುವ ಪದ್ಯಾಣರ ಶೈಲಿಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿ ಬಿಡುತ್ತಾರೆ.

        ಅನಿವಾರ್ಯವಾಗಿ ಸುರತ್ಕಲ್‌ ಮೇಳ ತಿರುಗಾಟ ನಿಲ್ಲಿಸಿದಾಗ ಮೇಳದೊಂದಿಗೆ ನಿರಂತರ 26 ವರ್ಷಗಳ ಒಡನಾಟ ಒಮ್ಮೆಲೇ ಕಡಿದುಬಿದ್ದಂತಾಗಿ ಪದ್ಯಾಣರು ನೊಂದಿದ್ದರು. ಬಳಿಕ ಮಂಗಳಾದೇವಿ, ಕರ್ನಾಟಕ, ಎಡನೀರು ಮೇಳಗಳಲ್ಲಿ  ಪ್ರಧಾನ ಭಾಗವತರಾಗಿ ವಿಜೃಂಭಿಸಿದ ಪದ್ಯಾಣರು ಇದೀಗ 5 ವರ್ಷಗಳಿಂದ  ಪದ್ಯಾಣ ಮನೆತನದವರೇ ಆದ ಟಿ. ಶಾಮ ಭಟ್‌ ಅವರ ಪೋಷಕಾಶ್ರಯದಲ್ಲಿ  ನಡೆಯುತ್ತಿರುವ ಹೊಸನಗರ ಮೇಳದಲ್ಲಿ ಪ್ರಧಾನ ಭಾಗವತರು. 

        ಯಕ್ಷಗಾನದಲ್ಲಿ ಅಷ್ಟೇನೂ  ಬಳಕೆ ಯಲ್ಲಿಲ್ಲದ ಕೆಲವು ರಾಗಗಳನ್ನು ಬಳಸಿದ ಕೀರ್ತಿ ಪದ್ಯಾಣರದ್ದು. ಸಿಂಹೇಂದ್ರ ಮಧ್ಯಮ, ವೃಂದಾವನ ಸಾರಂಗ್‌, ಯಮನ್‌ ಕಲ್ಯಾಣಿ, ರೇವತಿ ಮೊದಲಾದ ರಾಗ ಪ್ರಕಾರಗಳನ್ನು ಅವರು ಭಾಗವತಿಕೆ ಯಲ್ಲಿ ದುಡಿಸಿಕೊಂಡವರು. ವಾಸಂತಿ ರಾಗವನ್ನು ಯಕ್ಷಗಾನದಲ್ಲಿ ಪ್ರಪ್ರಥಮ ವಾಗಿ ಅಳವಡಿಸಿದ ಕೀರ್ತಿ ಪದ್ಯಾಣರದ್ದು.

        ಯಾವುದೇ ಅನುಕರಣೆ, ಗಿಮಿಕ್‌ ಗಳಿಗೆ ಮಾರು ಹೋಗದೆ, ಸಂಪ್ರದಾಯ ಶೈಲಿಯಲ್ಲಿ, ಮೂಲರಾಗಕ್ಕೆ ಲೋಪ ಬಾರ ದಂತೆ ತಮ್ಮ ಪ್ರತಿಭೆಯಿಂದಲೇ ಭಾಗವತಿಕೆ ಯಲ್ಲಿ ಪರಿಪೂರ್ಣತೆ ಸಾಧಿಸುತ್ತಾ ಬಂದ ಪದ್ಯಾಣರು ಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್‌, ಕಾರ್ತಿಕ್‌ ಇವರೊಂದಿಗೆ ಸುಖೀ ಸಂಸಾರಿ. ಪ್ರಸಿದ್ಧ ಭಾಗವತರಾದ ಕಿಗ್ಗ ಹಿರಿಯಣ್ಣ ಆಚಾರ್ಯ, ಹರಿಯಪ್ಪರೈ, ರವಿಚಂದ್ರ ಕನ್ನಡಿಕಟ್ಟೆ, ಪ್ರಫ‌ುಲ್ಲಚಂದ್ರ ನೆಲ್ಯಾಡಿ, ಪುತ್ತೂರು ರಮೇಶ ಭಟ್‌, ಸಾಯಿನಾಥ ನಾವಡ ಮೊದಲಾದವರು ಸೇರಿದಂತೆ 80ಕ್ಕೂ ಅಧಿಕ ಶಿಷ್ಯರನ್ನು ಪದ್ಯಾಣ ಹೊಂದಿದ್ದಾರೆ.

        ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಪದ್ಯಾಣರು ದುಬೈ, ಮಸ್ಕತ್‌, ಕುವೈಟ್‌ ಮೊದಲಾದ ವಿದೇಶಗಳಲ್ಲಿ ಪ್ರದರ್ಶನ ನೀಡಿ ಸಮ್ಮಾನಿತರಾಗಿದ್ದಾರೆ.

        ಮುಂಬೈ, ದಿಲ್ಲಿ, ಕಾಸರಗೋಡು, ಶಿವಮೊಗ್ಗ, ಮಂಗಳೂರು  ಸೇರಿದಂತೆ ನಾಡಿನ ಹಲವೆಡೆ ಅಭಿಮಾನಿಗಳ ಗೌರವ ಸಮ್ಮಾನಗಳನ್ನು  ಅವರು ಸ್ವೀಕರಿಸಿದ್ದಾರೆ. 

        ಈಟಿವಿಯ "ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಯಕ್ಷಗಾನ ಭಾಗವತ ಎಂಬ ಕೀರ್ತಿಯೊಂದಿಗೆ  ಕಾರ್ಯಕ್ರಮದ ನಿರ್ವಾಹಕ  ಡಾ| ಎಸ್‌.ಪಿ. ಬಾಲಸುಬ್ರಹ್ಮಣ್ಯ ಅವರ ಮುಕ್ತ ಶ್ಲಾಘನೆಗೆ ಪಾತ್ರರಾದವರು ಪದ್ಯಾಣ.

        ಪದ್ಯಾಣ ಶಂಕರ ನಾರಾಯಣ ಭಟ್‌

        ಯಕ್ಷಗಾನದಲ್ಲಿ ಹಿಮ್ಮೇಳ- ಮುಮ್ಮೇಳಗಳ ಸಾಮರಸ್ಯವಿದ್ದಾಗ ಮಾತ್ರ ಪ್ರಸ್ತುತಿ ಯಶಸ್ವಿ. ಪದ್ಯಾಣ ಶಂಕರನಾರಾಯಣ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಚೆಂಡೆ-ಮದ್ದಳೆ ವಾದನ ಗಳಲ್ಲಿ ಎತ್ತಿದ ಕೈ. ಸಮಕಾಲೀನ  ಚೆಂಡೆ ಮದ್ದಳೆ ವಾದಕರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸುವವರು.

        ಭಾಗವತರ ಮನೋಧರ್ಮ ಹಾಗೂ ರಾಗ-ತಾಳಗಳಿಗೆ ಅನುಸಾರವಾಗಿ ಚೆಂಡೆ -ಮದ್ದಳೆ ನುಡಿಸುವ ಭಟ್ಟರು ನೀಳ ಕಾಯರೂ ಹೌದು; ಅಷ್ಟೇ ಎತ್ತರದ ವ್ಯಕ್ತಿತ್ವದವರೂ ಹೌದು. ಸರಳತೆ, ಸಹ ಕಲಾವಿದರೊಂದಿಗೆ ಸಮಯೋಚಿತ ಮಾರ್ಗದರ್ಶನ ನೀಡುವ ವೈಖರಿ ಹಾಗೂ ಹಾಸ್ಯಮಿಶ್ರಿತವಾಗಿ ಗಂಭೀರ ವಾಗಿ ಸಂಭಾವಿಸುವ ಪರಿ - ಇವೆಲ್ಲವೂ ಭಟ್ಟ ರನ್ನು ಯಕ್ಷಗಾನಕ್ಕೆ ಅನಿವಾರ್ಯ ರನ್ನಾಗಿಸಿದೆ ಎಂದರೆ ಅತಿಶಯೋಕ್ತಿಯಲ್ಲ.

        ಸಂಗೀತ-ಯಕ್ಷಗಾನ ಪರಂಪರೆಯ ಪದ್ಯಾಣ ಕುಟುಂಬದಲ್ಲಿ ಪದ್ಯಾಣ ರಾಮಕೃಷ್ಣ ಭಟ್‌- ಪಾರ್ವತಿ ಅಮ್ಮನವರ ಸುಪುತ್ರನಾಗಿ ಜನಿಸಿದ ಇವರಿಗೆ ಬಾಲ್ಯ ದಿಂದಲೇ ಯಕ್ಷಗಾನದಲ್ಲಿ ಒಲವು. ಅಂದಿನ ಪ್ರಸಿದ್ಧ ಭಾಗವತರಾಗಿದ್ದ ಪುಟ್ಟು ನಾರಾಯಣ ಭಾಗವತರ ತಮ್ಮನ ಮಗನಾದ ಶಂಕರನಾರಾಯಣ ಭಟ್ಟರು, ಪುಟ್ಟು$ನಾರಾಯಣ ಭಟ್ಟರ ಕಿರಿಯ ಸಹೋದರ ತಿರುಮಲೇಶ್ವರ ಭಟ್ಟ (ಪದ್ಯಾಣ ಗಣಪತಿ ಭಟ್ಟರ ತಂದೆ)ಅವರಿಂದ ಚೆಂಡೆ -ಮದ್ದಳೆಗಳ ಮೂಲ ಪಾಠ ಕಲಿತುಕೊಂಡರು. ಮುಂದೆ ಮಾಂಬಾಡಿ ನಾರಾಯಣ ಭಾಗವತ ಹಾಗೂ ಖ್ಯಾತ ಚೆಂಡೆ-ಮದ್ದಳೆವಾದಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಲ್ಲಿ ಹೆಚ್ಚಿನ ತರಬೇತಿ ಪಡೆದುಕೊಂಡ ಅವರು ಬಾಲ್ಯ ದಲ್ಲಿ ಪುಂಡುವೇಷಗಳಲ್ಲೂ ಅಭಿನಯಿಸಿ ದವರು. ಮಾಸ್ತರ್‌ ಬೈರಿಕಟ್ಟೆಯವರಲ್ಲಿ ಭರತನಾಟ್ಯವನ್ನು ಕಲಿತುಕೊಂಡ ಅವರು ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಬಿಎ ಪದವಿ ಗಳಿಸಿದರು.

        1973ರಲ್ಲಿ ಕುಂಡಾವು ಮೇಳಕ್ಕೆ ಸೇರಿದ ಭಟ್ಟರು ಮುಂದೆ ಕರ್ನಾಟಕ, ಸುರತ್ಕಲ್‌, ಸುಂಕದಕಟ್ಟೆ, ಕಟೀಲು, ಕುಂಟಾರು, ಎಡನೀರು ಮೇಳಗಳಲ್ಲಿ ತಿರುಗಾಟ ನಡೆಸಿದ್ದು, ಈ ಕಳೆದ 6 ವರ್ಷಗಳಿಂದ ಹೊಸನಗರ ಮೇಳದ ಪ್ರಧಾನ ಚೆಂಡೆ-ಮದ್ದಳೆವಾದಕರಾಗಿದ್ದಾರೆ.

        ಪುರಾಣ ಪ್ರಸಂಗಗಳ ಅಪಾರ ಅನುಭವ ಹೊಂದಿರುವ ಭಟ್ಟರು ಪಾತ್ರಗಳನ್ನು ರಂಗದಲ್ಲಿ ಮೆರೆಸುವಲ್ಲಿ ತಮ್ಮ ವಾದನದ ಮೂಲಕ ನೀಡುವ ಪ್ರೋತ್ಸಾಹ ಗಮನಾರ್ಹ. ಪರಂಪರೆಯ ವಾದನ ಕೌಶಲದೊಂದಿಗೆ ಲಯಬದ್ಧ, ಕಾಲಭೇದಗಳ ಗತಿವಿನ್ಯಾಸ, ವೈವಿಧ್ಯ ಛಂದೋಬದ್ಧ ಹಾಡುಗಳಿಗೆ ಮಾತ್ರೆ ಗಳಿಗನುಸಾರವಾಗಿ ನುಡಿಸುವ  ನುಡಿತ ಗಳು, ಭಾಗವತರ ಶ್ರುತಿಯ ಮಟ್ಟದಲ್ಲಿ ಮದ್ದಳೆ ನುಡಿಸುವ ಶೈಲಿ ಅವರದು. ಚೆಂಡೆಯ ಮಾಂತ್ರಿಕ ಎನಿಸಿಕೊಂಡಿರುವ ಶಂಕರನಾರಾಯಣ ಭಟ್ಟರು ಅವರು ಯಕ್ಷಗಾನದ ಅಪರೂಪದ ನಾಟ್ಯಗಳಾದ ಗುಬ್ಬಿ ನಾಟ್ಯ, ಗುತ್ತಿಕಾಲು ನಾಟ್ಯ, ಸಲಾಮು ಹೆಜ್ಜೆ ಮೊದಲಾದ, ಕೊಂಚ ಶ್ರಮದ ನಾಟ್ಯಗಳಿಗೆ ಮದ್ದಳೆ ನುಡಿಸುವಲ್ಲಿ ಪರಿಣತರು. ರಾವಣನ ತೆರೆಪೊರೆಪ್ಪಾಟು, ಹೆಣ್ಣು ಬಣ್ಣ, ಹನೂಮಂತನ ಪರಂಪರೆಯ ತೆರೆಪೊರೆಪ್ಪಾಟುಗಳ ವಾದನದಲ್ಲೂ ಅವರು ಸಿದ್ಧಹಸ್ತರು. ಹೀಗೆ ಚೆಂಡೆ-ಮದ್ದಳೆಗಳೆರಡರಲ್ಲೂ ಏಕಪ್ರಕಾರ ವಾದ ಹಿಡಿತವಿರುವ ಭಟ್ಟರ ವಾದನದ ಸೊಗಸಿನ ಆಸ್ವಾದನೆಗಾಗಿಯೇ ಬರುವ ಪ್ರೇಕ್ಷಕರಿದ್ದಾರೆಂದರೆ ಅತಿಶಯವಲ್ಲ.

        ವಿದೇಶಗಳಲ್ಲೂ ತಮ್ಮ ನಾದ ವೈಭವವನ್ನು ಮೆರೆದಿರುವ ಪದ್ಯಾಣರು ಬಹ್ರೈನ್‌,
        ದುಬೈ, ಜಪಾನ್‌, ಮಸ್ಕತ್‌ ಹಾಗೂ ಜರ್ಮನ್‌ ದೇಶಗಳಲ್ಲೂ ಅಪಾರ ಪ್ರೇಕ್ಷಕ ಸಂದೋಹದ ಮೆಚ್ಚುಗೆ, ಗೌರವಕ್ಕೆ ಪಾತ್ರರಾಗಿದ್ದಾರೆ. ದಿಲ್ಲಿ,  ಗೋಕರ್ಣ, ಮಂಗಳೂರು, ಎಡನೀರು, ಒಡಿಯೂರು, ಉಡುಪಿ ಮೊದಲಾದೆಡೆ ಸಮ್ಮಾನಿಸಲ್ಪಟ್ಟಿರುವ ಪದ್ಯಾಣ ಶಂಕರ ನಾರಾಯಣ ಭಟ್ಟರ ವಾದನ ನೈಪುಣ್ಯಕ್ಕೆ ಡಾ| ಕೀಲಾರು ಪ್ರತಿಷ್ಠಾನದ ಪ್ರಶಸ್ತಿ ಹಾಗೂ ಲಷ್ಕರಿ ಪ್ರಶಸ್ತಿಗಳು ಒಲಿದು ಬಂದಿವೆ.  ಮೇಳದ ಶಿಸ್ತನ್ನು ಪಾಲಿಸಿ ಯಕ್ಷಗಾನ ಕಲೆಯ ಗೌರವ ಕಾಪಾಡುವ ಪ್ರವೃತ್ತಿಯ ಪದ್ಯಾಣರು ಪತ್ನಿ ವನಜಾಕ್ಷಿ ಹಾಗೂ ಮಕ್ಕಳಾದ ಅರ್ಚನಾ ಹಾಗೂ ಅಜೇಯ ಕೃಷ್ಣ ಅವರೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus