Saturday, May 25, 2013
Last Updated: 11:52:48 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಡೆಯುವ ತಾಳ್ಮೆ ಬೇಕು, ಓಡುವ ಆತುರವಲ್ಲ...
    • ನಡೆಯುವ ತಾಳ್ಮೆ ಬೇಕು, ಓಡುವ ಆತುರವಲ್ಲ...

      • ಅನಸೂಯಾ ರಾವ್‌ | Jul 20, 2012

        ಕುಚ್ಚಿಗೆ ಅಕ್ಕಿ ಗಂಜಿ, ಮಿಡಿ ಉಪ್ಪಿನಕಾಯಿ, ಎರಡು ಚಮಚ ತುಪ್ಪ ಹಾಕಿ ಸ್ವರ್ಗ ಸುಖವನ್ನು ಅನುಭವಿಸುತ್ತ ಊಟ ಮಾಡಬೇಕೆನ್ನುವ ಹೊಂಗನಸು ಕಾಣುತ್ತ ಬಟ್ಟಲ ಮುಂದೆ ಕುಳಿತಾಗ ಜಂಗಮವಾಣಿ ಅಳುತ್ತಿದ್ದ ದನಿಗೆ ಓಗೊಟ್ಟು ಕೈಗೆತ್ತಿಕೊಂಡಾಗ ಅತ್ತಲಿಂದ ಕೇಳಿಸಿದ್ದು ಅಕ್ಕ ವೈದೇಹಿಯ ಸ್ವರ.

        ""ವಿಷಯ ಗೊತ್ತಾಯಿತೇನೇ? ಪಾರ್ವತಿಯ ಮಗಳು ಮನೆಯಿಂದ ಹೇಳದೆ ಹೋಗಿದ್ದಾಳಂತಲ್ವಾ? ಒಳ್ಳೆಯ ಕಂಪೆನಿಯಲ್ಲಿ ಕೆಲಸವಿತ್ತು. ಕೈತುಂಬಾ ಸಂಬಳ ಸಿಗ್ತಿತ್ತು. ಕೆಲಸಕ್ಕೆ ಹೋದವಳು ಮನೆಗೆ ಬಾರದೇ ಇದ್ದಾಗ ಗಾಬರಿಯಾದರಂತೆ. ಎರಡು ದಿನ ಬಿಟ್ಟು ಅಮ್ಮನಿಗೆ ತಾನು ಮದುವೆಯಾದ ವಿಷಯ ತಿಳಿಸಿದಳಂತೆ! ಪಾಪ! ಪಾರ್ವತಿ ಈ ಶಾಕಿಗೆ ಮಾನಸಿಕ ರೋಗಿಯೇ ಆಗಿದ್ದಾಳಂತೆ!'
        ಅಕ್ಕ ಹೇಳಿದುದನ್ನು ಕೇಳಿ ಗಂಜಿ ಆರಿಹೋಗುತ್ತಿರುವ ಪರಿವೆಯೂ ಇಲ್ಲದೆ ನಾನು ಯೋಚನೆಯೊಳಗೆ ಹುದುಗಿದೆ.

        ಬೆಳಿಗೆÂ ಪತ್ರಿಕೆ ಬಿಡಿಸುವಾಗ "ಹುಡುಗಿಯರ ನಾಪತ್ತೆ'ಯ ಸುದ್ದಿ ಓದುತ್ತಿದ್ದಾಗಲೆಲ್ಲಾ ಎದೆಯೊಳಗೇನೋ ಛಳಕು! ಛೇ! ಇಷ್ಟೊಂದು ಹದಗೆಟ್ಟು ಹೋಯಿತೆ ನಮ್ಮ ಸಮಾಜ? ಸುಮಾರು ಅರ್ಧ ಶತಮಾನದ ಹಿಂದೆ ಹರೆಯಕ್ಕೆ ಕಾಲಿರಿಸಿದ ಹೆಣ್ಣು ಮಕ್ಕಳು ಅಪರಿಚಿತ ಗಂಡಸರು ಮನೆಗೆ ಬಂದರೆ ನಾಚಿಕೆಯ ಮುದ್ದೆಯಾಗಿ ಒಳಗೋಡಿ ಹೆತ್ತಬ್ಬೆಯ ಹಿಂದೆ ಅಡಗಿಕೊಳ್ಳುತ್ತಿದ್ದರು. ಅಲ್ಲಿ ಬಡತನ ಇದ್ದರೂ ಮನೆತನದ ಮಾನವಂತೆಯರಾಗಿ ಬೆಳಗುತ್ತಿದ್ದರು. ಆದರೆ, ಈಗ ನಾವು ಬಡತನದಲ್ಲಿದ್ದರೂ ಆ ಬಿಸಿ ತಮ್ಮ ಮಕ್ಕಳಿಗೆ ತಾಕಬಾರದೆಂದು ಸಾಲ ಮಾಡಿಯಾದರೂ ಉತ್ತಮ ವಿದ್ಯಾಭ್ಯಾಸವನ್ನೊದಗಿಸಿ ಅವರ ಸುಂದರ ಭವಿಷ್ಯಕ್ಕಾಗಿ ಸವಿಗನಸು ಕಾಣುತ್ತಿದ್ದವರಿಗೆ ತಮ್ಮ ಮಗಳು ಹೀಗೆ "ಓಡಿಹೋದಾಗ' ಎಷ್ಟೊಂದು ಯಾತನೆಯಾಗಬಹುದು? ಬ್ಯಾಂಕಿನಲ್ಲಿ "ವಿದ್ಯಾಭ್ಯಾಸ ಸಾಲ' ಮಾಡಿ ಇಂಜಿನಿಯರಿಂಗ್‌ ಓದಿಸಿ, ಅವಳು ದುಡಿದು ಆ ಸಾಲಕ್ಕೆ ಮೋಕ್ಷ ಸಿಗಬಹುದೆಂದು ನಿಟ್ಟುಸಿರು ಬಿಡುವ ಎಷ್ಟೋ ಪಾರ್ವತಿಯರಂತಹ ಮಾತೆಯರಿಗೆ ಮಕ್ಕಳ ಈ ಕೃತ್ಯ ಕೊರಳಿಗೊಂದು ಉರುಳೇ ತಾನೆ?

        ಕಾಣೆಯಾದವರೆಲ್ಲ ತಮ್ಮ ಜೀವನವನ್ನು ತಾವೇ ರೂಪಿಸುವಷ್ಟು ಶಕ್ತರಾದರೆ ಸಮಸ್ಯೆ ಅಷ್ಟೊಂದು ತೀವ್ರವಾಗುವುದಿಲ್ಲ. ಆದರೆ, ಅವರ ಬದುಕು ಮೂರಬಟ್ಟೆಯಾಗುವುದಾದರೆ ಆ ಪಲಾಯನಕ್ಕಾದರೂ ಏನು ಅರ್ಥವಿದೆ? ಹಾಗೆಂದು ಬುದ್ಧಿ ತಿಳಿದ ಹುಡುಗಿಯರು ವಿವೇಕದ ನಿಕಶಕ್ಕೆ ಬುದ್ಧಿಯನ್ನೊಡ್ಡಿ ವಿವೇಚಿಸಿ ನಿರ್ಧಾರ ಕೈಗೊಂಡರೆ ತಪ್ಪೇನಿಲ್ಲ. ತಾನು ಮದುವೆಯಾಗುವ ಗಂಡು ಮುಂದಿನ ಜೀವನವನ್ನು ಇನ್ನಷ್ಟು ಉಜ್ವಲವಾಗಿ ಬೆಳಗಿಸಬಲ್ಲವನಾದರೆ ಆಗ ಹೆಣ್ಣಿನ ಹೆತ್ತವರಿಗೂ ಸಮಾಧಾನವೆನಿಸುತ್ತದೆ. ತಂದೆತಾಯಿಗಳಲ್ಲಿ ಪರಸ್ಪರ ತಿಳುವಳಿಕೆ ಇದ್ದ ಪಕ್ಷದಲ್ಲಿ ಓಡಿ ಹೋಗುವ ಸಂಭವವೇ ಬರುವುದಿಲ್ಲ. ಮಗಳು ಆರಿಸಿದ ಗಂಡು ತಮಗೂ ಮೆಚ್ಚುಗೆಯಾದರೆ ಯಾರು ಬೇಡವೆನ್ನುತ್ತಾರೆ!

        ಆದರೆ, ಹೆಚ್ಚಿನ ಹುಡುಗಿಯರಿಗೆ ತಮ್ಮ ಮನೆಯಲ್ಲಿ ಅನುಮತಿ ಇರುವುದಿಲ್ಲ. ಹಾಗಾಗಿ ಬಲವಂತದಿಂದ ಮದುವೆಯಾಗಲು ಯತ್ನಿಸುತ್ತಾರೆ. ಮನೆಯಿಂದ ಓಡಿಹೋಗುತ್ತಾರೆ.

        ಒಂದು ಮಾತು ನೆನಪಿಟ್ಟುಕೊಳ್ಳಬೇಕು. ವಾಸ್ತವದ ಜೀವನ ಕನಸಿನಷ್ಟು ರಮ್ಯವಾಗಿಲ್ಲ. ಯಾವುದಾದರೊಂದು ಸಿನೆಮಾದಲ್ಲಿ ಓಡಿ ಹೋದ ಹುಡುಗಿ ಆರಾಮವಾಗಿ ಬದುಕುತ್ತಾಳೆ. ಹೀರೋ ಮತ್ತು ಹೀರೋಯಿನ್‌ ರಾತ್ರಿ ಮರದ ಗೆಲ್ಲಿನಲ್ಲಿ ಮಲಗಿ ನಿದ್ದೆ ಮಾಡುತ್ತಾರೆ. ನಿಜ ಜೀವನದಲ್ಲಿ ಅದು ಸಾಧ್ಯವೆ? ಜೀವನದಲ್ಲಿ ಕನಸು ಕಾಣಬಾರದೆಂದಲ್ಲ , ಆದರೆ, ಕೈಗೂಡುವ ಕನಸುಗಳನ್ನಷ್ಟೇ ಕಾಣಬೇಕು. ಭಗ್ನವಾಗುವ ಕನಸು ಉಚಿತವಲ್ಲ.

        ಈಗಿನ ಕಾಲದ ಮಕ್ಕಳಂತೂ ತುಂಬ ಮುಂದುವರಿದಿದ್ದಾರೆ. ಮಗಳು ಇಂಟರ್‌ನೆಟ್‌ನಲ್ಲಿ ಚಾಟ್‌ ಮಾಡುತ್ತ ಕುಳಿತಿದ್ದರೆ ಅವಳೇನು ಮಾಡುತ್ತಿದ್ದಾಳೆಂದು ಅಮ್ಮನಿಗೆ ಗೊತ್ತಾಗುವುದಾದರೂ ಹೇಗೆ? ಮೊಬೈಲ್‌ನಲ್ಲಿರುವ ಮೆಸೇಜನ್ನು ತಾಯಿ ಹೇಗೆ ತಿಳಿದಾಳು? ಈ ತಲೆಮಾರಿನ ಹೆತ್ತವರು ಇನ್ನೂ ಇಪ್ಪತ್ತು ವರ್ಷ ಹಿಂದಿನ ಯೋಚನೆಯಲ್ಲಿಯೇ ಇರುವಾಗ ಮಕ್ಕಳಿಗೆ ಅದರ ಜೊತಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಕಾಲದ ಬದಲಾವಣೆ ನಮ್ಮ ಜೀವನಗತಿಯನ್ನು , ಮನೋಸ್ಥಿತಿಯನ್ನು ಬದಲಾಯಿಸುತ್ತದೆ. ವಾತ್ಸಲ್ಯದ, ಪ್ರೀತಿಯ ಮಾದರಿಗಳೂ ಬದಲಾಗುತ್ತ ಹೋಗುತ್ತವೆ. ತನ್ನೊಡನೆ ಸ್ಪಂದಿಸದಿರುವ ಹೆತ್ತವರನ್ನು ಮಗಳು ಪ್ರೀತಿಯ ಕೊರತೆ ಎಂದೇ ಭಾವಿಸುತ್ತಾಳೆ ಮತ್ತು ಆ ಪ್ರೀತಿ ಬೇರೆಲ್ಲಾದರೂ ಸಿಗುವುದೊ ಎಂದು ಕಾತರಿಸುತ್ತಾಳೆ. ಆಗ, ಯಾವನಾದರೂ ಹುಡುಗ ಅವಳಿಗೆ ಎಡತಾಕುತ್ತಾನೆ. ಆತ ತೋರಿಸುವ ಬಾಯಿ ಮಾತಿನ ಸ್ವರ್ಣ ಮಂದಿರ ಇವರ ಪಾಲಿಗೆ ಸ್ವಪ್ನ ಮಹಲೇ ಆಗಿರುತ್ತದೆ. ಆತ ಕೊಡಿಸುವ ಐಸ್‌ಕ್ರೀಮಿಗಾಗಿ, ಮಸಾಲೆದೋಸೆಗಾಗಿ, ವರ್ಣರಂಜಿತ ಉಡುಪಿಗಾಗಿ, ಮೋಜಿನ ಪ್ರವಾಸಕ್ಕಾಗಿ "ಎಷ್ಟು ಸುಂದರ ಜೀವನ' ಎಂಬ ಮೋಹಕ ಭ್ರಮೆಗಾಗಿ  ಓಡಿಹೋಗುವುದು ಎಷ್ಟೊಂದು ಸುಲಭವಾಗಿಬಿಟ್ಟಿದೆ, ಈ ಕಾಲದಲ್ಲಿ!

        ಓಡಿಹೋಗುವ ಹುಡುಗಿಯರಷ್ಟು ಓಡಿಹೋಗುವ ಹುಡುಗರು ಸಮಸ್ಯೆ ಎದುರಿಸುವುದಿಲ್ಲ. ಸಾಂಪ್ರದಾಯಿಕ ಸಮಾಜದಲ್ಲಂತೂ ಗಂಡು-ಹೆಣ್ಣು ಯಾಕೆ ಭೇದ ಇದ್ದೇ ಇದೆ. ಹೆಣ್ಣಿಗೆ ಶೀಲದ ಆವರಣವನ್ನು ಸುತ್ತಿರುತ್ತಾರೆ. ಹಾಗಾಗಿ, ಓಡಿಹೋದ ಹೆಣ್ಣು ಸಮಾಜದಿಂದ ಬಹಿಷ್ಠೆಯಾದಂತೆ ಎಲ್ಲರೂ ಭಾವಿಸುತ್ತಾರೆ. ಹಾಗಾಗಿ, ಓಡಬಯಸುವ ಹುಡುಗಿಯರು ನೂರು ಬಾರಿ ಯೋಚಿಸಬೇಕಾಗಿದೆ. ಕಾಡಿನ ಹುಲಿ ಕಾಡಿಗೆ ರಕ್ಷಣೆ ಇರುವ ಹಾಗೆಯೇ ಹುಲಿಗೆ ಕಾಡು ರಕ್ಷಣೆ ! ತಾನು ಹೆತ್ತವರಿಗೆ ಹೇಗೆ ಅಗತ್ಯವಾಗಿದ್ದೇನೋ ಹಾಗೆಯೇ ಅವರ ರಕ್ಷಣೆಯಿಲ್ಲದೆ ತಾನು ಬದುಕಲಾರೆ ಎಂಬ ಅರಿವು ಹುಡುಗಿಯರಿಗೆ ಬೇಕು.

        ಯಾವುದೋ ಆಕರ್ಷಣೆಗೊಳಗಾಗಿ ಪ್ರೀತಿಸಿ ಹೆತ್ತವರಿಂದ ದೂರವಾದವಳಿಗೆ ಎರಡು ಕಡೆಯ ಬಾಂಧವ್ಯವೂ ಕಡಿದರೆ... ಮೊದಮೊದಲು ಪ್ರೇಮದ ಅಮಲಿನಲ್ಲಿ ಗೋಚರಿಸಲಾಗದ ಕಟುಸತ್ಯದ ಅರಿವು ಮಬ್ಬು ಸರಿದಂತೆ ನಿಚ್ಚಳವಾಗಿ ಗೋಚರಿಸಿದಂತಾಗಿ ತಾನು ಮಾಡಿದ ತಪ್ಪಿನ ತಿಳಿವು ಆಗುವುದು ನಿಸ್ಸಂಶಯ! ಬಸುರಿ, ಬಾಣಂತಿ... ಹೀಗೆ ಹೆಣ್ಣಿನ ದೈಹಿಕ ಸ್ಥಿತ್ಯಂತರದ ಒಂದೊಂದು ಹಂತದಲ್ಲೂ ಹೆತ್ತಮ್ಮನ ಅಕ್ಕರೆಯ ಕಾಳಜಿ, ಮಮತೆಯ ಕಣ್ಗಾವಲು ಬಲವಾಗಿದ್ದರೆ ಆ ಹೆಣ್ಣು ಹೆಣ್ತನ ಅರಳಿ ಪರಿಪೂರ್ಣ ಮಹಿಳೆಯಾಗಲು ಸಾಧ್ಯವಾಗಿ ಮನೆಯವರ ರಕ್ಷಣೆಯ ಕೋಟೆಯೊಳಗೆ ಬೆಚ್ಚನೆಯ ತಾಯ್ತನದ ಪರಮ ಸುಖವನ್ನು ಅನುಭವಿಸುವ ಭಾಗ್ಯದಿಂದ ಇಂತಹ ಹೆಣ್ಣುಗಳು ವಂಚಿತರಾಗಲಾರರೆ? ಮುಂದೊಂದು ದಿನ ತಮ್ಮ ಕೃತ್ಯಕ್ಕಾಗಿ ಪಶ್ಚಾತ್ತಾಪಪಟ್ಟು ದಿನ ದಿನವೂ ಕೊರಗಲಾರರೆ? ಯಾರಿಗಾಗಿ ಎಲ್ಲರಿಂದ ದೂರವಾದೆನೋ ಆತ ಉತ್ತಮ ಸಂಸ್ಕಾರವಂತನಾದರೆ... ಆತನ ಮನೆಯವರು ಆಕೆಯನ್ನು ಹೃತೂ³ರ್ವಕವಾಗಿ ಸ್ವೀಕರಿಸಿದರೆ ಅವಳ ಜೀವನ ಸಹ್ಯ! ಆಕೆ ಹಾಲು ಎಂದು ಬಗೆದುದು ಹಾಲಾಹಲದಂತಾದರೆ ಆಕೆಯ ಜೀವನವೆ ದುಸ್ತರ.

        ವಿಜ್ಞಾನ ಎಷ್ಟೇ ಮುಂದುವರಿದರೂ... ಕೌಟುಂಬಿಕ ಸಾಮರಸ್ಯ, ಪರಸ್ಪರ ಪ್ರೀತಿ-ವಿಶ್ವಾಸಗಳು ಮಾತ್ರ ಬದಲಾಗಲು ಸಾಧ್ಯವೇ ಇಲ್ಲ. ಹೆತ್ತವರಿಗೆ ಮಕ್ಕಳ ಮೇಲೆ ಎಂದೂ ಪ್ರೀತಿ ಕಡಿಮೆಯಾಗಲಾರದು. ಆದ್ದರಿಂದಲೆ ಮಕ್ಕಳ ಮೇಲೆ ನಿಯಂತ್ರಣದ ಗೋಡೆ ಕಟ್ಟಿದಾಗ ಇದು ಬಂಧನ ಎಂದು ತಪ್ಪು ಅರ್ಥವನ್ನು ಕಲ್ಪಿಸುವ ಮಕ್ಕಳು ಕ್ಷಣಿಕ ಲಾಲಸೆಗೆ ಬಲಿಯಾಗಿ ಮನೆಯಿಂದ ನಾಪತ್ತೆಯಾಗಿ ಮನೆತನಕ್ಕೆ ಮಸಿ ಬಳಿಯುತ್ತಾರೆ. ಒಂದು ಪಕ್ಷ ಯಾರಾದರೊಬ್ಬರ ಪ್ರೀತಿಯ ಬಲೆಗೆ ಬಿದ್ದರೂ ಮನೆಯವರಿಗೆ ಆತನ ಪರಿಚಯ ಮಾಡಿಸಿ ನಿರುಮ್ಮಳವಾಗಿರಬೇಕು. ಆತನ ಮೌಲ್ಯಮಾಪನವನ್ನು ಮಾಡಿ ಮಗಳಿಗೆ ತಕ್ಕವನೇ ಎಂದು ಗುರುತಿಸುವ ಅನುಭವದ ಮಾಪನ ಇರುವುದು ಹಿರಿಯರಲ್ಲಿ ವಿನಾ ಅವಳಲ್ಲಲ್ಲ !

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಾಂಸಾರಿಕ ಬದುಕಿನ ಬಗ್ಗೆ , ಗಂಡ- ಹೆಂಡತಿಯರ ಬಗ್ಗೆ, ಮದುವೆಯ ಬಗ್ಗೆ ಎಷ್ಟೊಂದು ಜೋಕ್‌ಗಳನ್ನು ಓದುತ್ತ ಇರುತ್ತೇವೆ. ಹೆಚ್ಚಿನವುಗಳನ್ನು ಓದಿ ನಕ್ಕು ಬಿಡುತ್ತೇವೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus