ಪಿ. ಬಿ. ಪ್ರಸನ್ನ | Jul 22, 2012
ಶ್ರೀ ಮಹಾವಿಷ್ಣು ಗೋ-ಮಹಿಷಿ ಕ್ಷೀರ ದಧಿ ವ್ಯಾಪಾರ ಕೇಂದ್ರ' ಗಾಬರಿ ಯಾಗಬೇಡಿ ಮಹಾರಾಯೆÅ. ಇದು ನಮ್ಮೂರಿನ ಹಾಲು ಮೊಸರು ವ್ಯಾಪಾರ ಮಾಡುವ ಒಂದು ಅಂಗಡಿಯ ಹೆಸರು. ಹೆಸರೇನೋ ಆಕರ್ಷಕವಾಗಿ ಉದ್ದವಾಗಿ ಇತ್ತು. ತೀರ ಇತ್ತೀಚಿನವರೆಗೂ ನನಗೆ ಅಲ್ಲಿ ಖರೀದಿ ಮಾಡುವ ಅವಕಾಶವಿರಲಿಲ್ಲ. ಹೆಂಡತಿ ಮಕ್ಕಳೆಲ್ಲ ಊರಿಗೆ ಹೋಗಿದ್ದಾಗ ನಾನು ಬಲವಂತದ ಬ್ರಹ್ಮಚಾರಿ. ಅನ್ನವನ್ನೇನೋ ಬೇಯಿಸಿದೆ. ಮೇಲೊಂದಿಷ್ಟು ಮೊಸರು ಬೇಕಲ್ಲಾ? ಥಟ್ಟನೆ ನೆನಪಾಯಿತು ಮಾರುದ್ದದ ಹೆಸರಿನ ಅಂಗಡಿ.
"ಮೊಸರು ಉಂಟಾ?' ಅಂತ ಕೇಳಿದೆ. ಅಂಗಡಿಯಾತ, "ಇಂಥ ಮೊಸರು ನಿಮಗೆ ಎಲ್ಲೂ ಸಿಗುದಿಲ್ಲ ಗೊತ್ತುಂಟಾ? ಚೂರಿಯೇ ಬೇಕು ಇದನ್ನು ತುಂಡು ಮಾಡ್ಲಿಕ್ಕೆ' ಅಂತ ಹೇಳಿದ. ಅವನು ಗಡಿಗೆಯಲ್ಲಿ ಹಾಕಿ ಪ್ಯಾಕ್ ಮಾಡಿದ್ದನ್ನೇ ಕೊಟ್ಟ. ಮನೆಗೆ ಒಯ್ದು ಒಂದು ಚೂರಿ ತೆಗೆದುಕೊಂಡು ತುಂಡರಿಸಲು ಸಿದ್ಧನಾದೆ. ಗಡಿಗೆಯ ಮುಚ್ಚಳ ತೆಗೆದು ಒಂದು ತಟ್ಟೆಗೆ ಸುರುವಿದೆ. ನೋಡಿದರೆ ಚೊಳ್ಳನೆ ಹರಿಯುತ್ತದೆ!
ಅಂಗಡಿಯಾತ ಹೇಳಿದ್ದಕ್ಕೆ ಸರೀ ವಿರುದ್ಧವಾಗಿತ್ತು. ಮಜ್ಜಿಗೆಗಿಂತಲೂ ಕಡೆ. ಕಂಡಾಬಟ್ಟೆ ಸಿಟ್ಟು ಬಂತು.
ಮರಳಿ ಅಂಗಡಿಗೆ ಹೋಗಿ ಅವನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡೆ. ಅವನು ಸ್ವಲ್ಪವೂ ವಿಚಲಿತನಾಗದೆ, ""ನೋಡಿ ಸ್ವಾಮಿ... ಈಗ ಬೇಸಿಗೆ, ದನಕರುಗಳಿಗೆ ಮೇವು ಸಿಗುವುದೇ ಇಲ್ಲ. ಅವು ಕುಡಿಯುವುದು ಬರೇ ನೀರು, ಹಾಗಾಗಿ ಹಾಲೂ ನೀರು, ಮೊಸರೂ ನೀರೇ. ಎಂತದೂ ಮಾಡ್ಲಿಕ್ಕೆ ಆಗೂದಿಲ್ಲ' ಅಂದ. ""ಮತ್ತೆ ಯೆಂತಕ್ಕೆ ಸುಳ್ಳು ಹೇಳಿದ್ದು?' ಅಂತ ದಬಾಯಿಸಿದೆ. ಅವನು, ""ನಾನು ಹಾಗೆ ಹೇಳದೇ ಇದ್ರೆ ನೀವು ಮೊಸರಿನ ಗಡಿಗೆ ಒಳಗೆ ಅಡಗಿದ್ದ ನೀರು ಮಜ್ಜಿಗೆಯನ್ನು ತಗೊಂಡು ಹೋಗ್ತಿದ್ರಾ?' ಅಂತ ವ್ಯಾಪಾರಿ ನಗೆ ಬೀರುತ್ತ ಹೇಳಿದ.
ಮರುದಿವಸ ಆಫೀಸಿಗೆ ಹೋದರೂ ತಲೆಯಲ್ಲಿ ಗಟ್ಟಿ ಮೊಸರು ಹುಳಿಗಟ್ಟುತ್ತಲೇ ಇತ್ತು. ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಸಹೋದ್ಯೋಗಿಯ ಬಳಿ ವಿಷಯ ತಿಳಿಸಿದೆ. ಅವನು ಪಕ ಪಕನೆ ನಕ್ಕು , "ಉತ್ತರಕನ್ನಡ ಜಿಲ್ಲೆಯಲ್ಲಿ ಇಂಥ ವಿಷಯದ ಮೇಲೆಯೇ ಒಂದು ಗಾದೆ ಉಂಟು ಗೊತ್ತುಂಟಾ ನಿಂಗೆ?' ಅಂತ ಹೇಳಿದ. ನಾನು, "ಇಲ್ಲ ' ಎಂದೆ. "ಹೆಸರು ದೊಡ್ಡ ಮೊಸರು ತೆಳ್ಳ ಅಂತ. ಅಂಗಡಿಯ ಹೆಸರು ಒಂದು ಮಾರುದ್ದ ಇತ್ತು. ಆದರೆ ಮೊಸರು ಹೇಗಿತ್ತು? ಇಂಥವ್ರನ್ನ ಕಂಡೇ ಆ ಗಾದೆ ಹುಟ್ಟಿರ್ಬೇಕು' ಅಂದ.
ಉತ್ತರಕನ್ನಡ ಅದರಲ್ಲೂ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳ ಜನರು ಹೈನುಗಾರಿಕೆಗೆ ಪ್ರಸಿದ್ಧರು. ತೆಳ್ಳನೆಯ ಹಾಲು, ಮೊಸರು ಇತ್ಯಾದಿಗಳನ್ನು ಇಷ್ಟಪಡುವವರಲ್ಲ. ಹಾಗಾಗಿ, ಇಂಥ ಗಾದೆ ಹುಟ್ಟಿಕೊಂಡಿದೆ.
ನನ್ನ ಊರಿನ ಕಡೆ ಆ ಗಾದೆಯನ್ನೇ ಹೋಲುವ ಬೇರೆ ಕೆಲವು ಗಾದೆಗಳಿವೆ. ""ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು' ""ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು' ಇತ್ಯಾದಿ. ಜನಪದ ಹಾಡೊಂದು, "ಚೆಲ್ವಿ ಚೆಲ್ವಿ ಎಂದು ಅತಿಆಸೆ ಪಡಬ್ಯಾಡ ಚಲ್ವಿದ್ದರೇನು ಫಲವಿಲ್ಲ' ಎಂದು ಹೇಳುತ್ತದೆ. ಮುಂದುವರಿಯುತ್ತ ಆ ಹಾಡಿನಲ್ಲಿ "ಅತ್ತಿಯ ಹಣ್ಣು ಬಲು ಸೊಗಸು ಒಡೆದು ನೋಡಿದರೆ ಹುಳ ಬಹಳ' ಎಂಬ ಮಾತು ಬರುತ್ತದೆ. ಚೆಲುವು ಎನ್ನುವುದು ಹೊರನೋಟದಲ್ಲಿ ವ್ಯಕ್ತವಾದರೆ ಸಾಲದು ಅಂತರಂಗದಲ್ಲಿಯೂ ಮೂಡಿ ಬರಬೇಕು ಎನ್ನುವ ಆಶಯ ಇಲ್ಲಿದೆ.
ಆದರೆ, ಇಂದಿನ ಜಗತ್ತು ಹೊರಗಣ ಆಕರ್ಷಕ ಹೆಸರಿಗೆ ಹೆಚ್ಚಿನ ಪ್ರಾಧಾನ್ಯವನ್ನು ಕೊಡುತ್ತದೆ. ಆಕರ್ಷಕ ಹೆಸರಿಡಲು ಇಂಗ್ಲಿಷ್ ಅಥವಾ ಸಂಸ್ಕೃತ ಬಹಳ ಸಹಕಾರಿ. ಹೇಗೆ ಅಂತ ನನ್ನ ಅನುಭವಗಳ ಹಿನ್ನೆಲೆಯಿಂದ ಹೇಳುತ್ತೇನೆ ಕೇಳಿ.
ನಾನು ಕೆಲಸ ಮಾಡುತ್ತಿದ್ದ ಕಂಪೆನಿಯವರು ಒಂದು ಬಾರಿ ಮುಂಬೈಗೆ ಕಳುಹಿಸಿದ್ದರು. ಉಳಿದುಕೊಳ್ಳುವುದಕ್ಕೆ ಪಂಚತಾರಾ ಹೊಟೇಲ್‌ನಲ್ಲಿ ವ್ಯವಸ್ಥೆ. ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅಂಥ ಹೊಟೇಲ್‌ನ ಒಳಗೆ ಪ್ರವೇಶ ಮಾಡಿದ ಹಳ್ಳಿ ಗಮಾರ ನಾನು. ಆದರೂ ಹಾಗೆ ತೋರಿಸಿಕೊಳ್ಳದೆ ಇರಲು ಬಯಸಿದೆ. ಕೈಗೆ ಕಾಲಿಗೆ ಸೇವಕ ಸೇವಕಿಯರು. ಓಹ್ ಸ್ವರ್ಗ ಅಂದರೆ ಇದೇ ಅಂತ ಭಾವಿಸಿದೆ. ರೆಸ್ಟೋರೆಂಟಿಗೆ ಹೋಗಿ ತಿಂಡಿಯ ಮೆನು ನೋಡಿದೆ. ಎಲ್ಲವೂ ಇಂಗ್ಲಿಷ್‌ನಲ್ಲಿದ್ದ ಚಿತ್ರವಿಚಿತ್ರ ಹೆಸರುಗಳು.
Rice cake with cucumber sauce.ನನ್ನ ಕುತೂಹಲವನ್ನು ಕೆರಳಿಸಿತು. ತರುವಂತೆ ಹೇಳಿದೆ.
ನೋಡಿದರೆ ದೊಡ್ಡ ಗಾತ್ರದ ಪ್ಲೇಟಿನಲ್ಲಿ ಎಂಟಾಣೆ ಗಾತ್ರದ ಎರಡು ಇಡ್ಲಿ ಹಾಗೂ ಒಂದು ತಟ್ಟೆಯಲ್ಲಿ ಮಂಗಳೂರು ಸೌತೆಯ ಸಾಂಬಾರು ಇತ್ತು! ಬೆಳ್ಳಿ ಲೇಪಿತ ಚಮಚಾಗಳು, ಚೂರಿ ತ್ರಿಶೂಲಗಳು- ಹೀಗೆ ಅಲಂಕಾರವೇ ಜಾಸ್ತಿಯಾಗಿತ್ತು. ಗೊಣಗುತ್ತ ಇಡ್ಲಿಗಳನ್ನು ಮುಗಿಸಿದೆ. ಹೊಟ್ಟೆ ತುಂಬಲಲ್ಲಿ. ಇನ್ನೇನಿದೆ ಅಂತ ನೋಡಿದೆ. Rice spread with coconut pasteಎಂದಿತ್ತು. ಆರ್ಡರ್ ಮಾಡಿದೆ. ಬಂದದ್ದು ನೀರು ದೋಸೆ ಮತ್ತು ತೆಂಗಿನಕಾಯಿ ಚಟ್ನಿ . ಅಲ್ಲೂ ಚಾಕು ಚೂರಿಗಳ ಮೇಳವಿತ್ತು. ಹೆಸರನ್ನು ಆಕರ್ಷಕವಾಗಿ ಇರಿಸಿ ಚೆನ್ನಾಗಿ ಯಾಮಾರಿಸಿದ್ದರು.
ಇನ್ನು ಸಂಸ್ಕೃತದ ವಿಷಯಕ್ಕೆ ಬರುತ್ತೇನೆ. ಬೆಂಗಳೂರಲ್ಲಿ ಒಮ್ಮೆ ತಿರುಗಾಡುತ್ತಿದ್ದಾಗ "ಇಲ್ಲಿ ಕೈಲಾಸದ ಕಷಾಯ ದೊರೆಯುತ್ತದೆ' ಎಂದು ಬೋರ್ಡಿತ್ತು. ನೋಡಿದರೆ ಆತ ಕೊಟ್ಟಿದ್ದ ನೀರು ಹಾಲಿನ ಕಾಫಿ. ಸಿಟ್ಟು ಬಂದು ಬೈದೆ. ಅದಕ್ಕೆ ಅಂಗಡಿಯಾತ, "ಕಾಫಿಯ ಮೂಲ ರಾಮಾಯಣದಲ್ಲಿ ಇದೆ. ಹನುಮಂತ ಸಂಜೀವಿನಿ ಪರ್ವತವನ್ನು ಎತ್ತಿಕೊಂಡು ಸಾಗುತ್ತಿದ್ದಾಗ ಗಿಡವೊಂದರಿಂದ ಕೆಲವು ಬೀಜಗಳು ಈಶ್ವರನ ತಲೆಯ ಮೇಲೆ ಉದುರಿಬಿದ್ದವು. ಆಗ ಶಿವನು ಥಂಡಿ, ಕೆಮ್ಮುಗಳಿಂದ ಒದ್ದಾಡುತ್ತಿದ್ದ. ಶಿವನ ಮೇಲೆ ಬಿದ್ದ ಬೀಜಗಳನ್ನು ಪಾರ್ವತಿ ಹುರಿದು ಕಷಾಯ ಮಾಡಿಕೊಟ್ಟಳು.
ಶಿವನ ಥಂಡಿ, ಕೆಮ್ಮು ಸಂಪೂರ್ಣ ವಾಸಿಯಾಯಿತು. ಕಪಿ ಉದುರಿಸಿದ ಬೀಜ ಕಪೀ ಬೀಜವಾಯಿತು. ಇದೇ ಕಾಫಿಯಾಯಿತು. ಶಿವನು ಅದಕ್ಕೆ ಕೈಲಾಸದ ಕಷಾಯ ಎಂದು ಹೆಸರಿಟ್ಟ ಈ ಉಲ್ಲೇಖವು ಎಂ.ಕೆ. ಇಂದಿರಾ ಅವರ ತಗ್ಗಿನ ಮನೆ ಸೀತೆ ಎಂಬ ಕಾದಂಬರಿಯಲ್ಲಿ ಬರುತ್ತದೆ. ನಾನು ಏನನ್ನು ಇಟ್ಟರೂ ಶುದ್ಧ ದೇಶೀಯ ಹೆಸರನ್ನೇ ಇಡುವವ' ಎಂದು ಸಾಹಿತ್ಯ ಸಂಸ್ಕೃತಿಯ ದೊಡ್ಡ ಭಾಷಣವನ್ನೇ ಬಿಗಿದ.
ನಮ್ಮೂರಿನ ಒಬ್ಬ ಎಸ್ಸೆಸೆಲ್ಸಿ ಮೂರು ನಾಕು ಬಾರಿ ಕಟ್ಟಿ ಸೋತಿದ್ದ. ಕೆಲವು ದಿವಸದ ಮಟ್ಟಿಗೆ ಕೆಲಸ ಅರಸಿ ಮೈಸೂರಿಗೆ ಹೋಗಿದ್ದ. ಒಂದು ದಿನ ಊರಲ್ಲಿ ಸಿಕ್ಕಿದ. ಆತನ ವೇಷಭೂಷಣ ಬದಲಾಗಿತ್ತು. ಉದ್ಯೋಗದ ಬಗ್ಗೆ ವಿಚಾರಿಸಿದೆ. "ನಾನು ಈಗ ಮೈಸೂರು ಅರಮನೆ ಹತ್ರದ ಹೋಟ್ಲಲ್ಲಿ Customer care officer ಆಗಿದ್ದೇನೆ. ಊಟ, ತಿಂಡಿ, ಸ್ಟೇ ಎಲ್ಲ ಫ್ರೀ. ಮಂತ್ಲೀ ಫೈಯ್ ತೌಸಂಡ್ ಆ್ಯಂಡ್ ಪರ್ಕ್ಸ್ ಬೊಂಬಾಟಾಗಿದೆ' ಅಂದ. "ಬಂದಾಗ ಆ ಕಡೆಗೆ ಬಾ' ಅಂತ ಹೇಳಿ ವಿಸಿಟಿಂಗ್ ಕಾರ್ಡ್ ಕೊಟ್ಟ. ಅಬ್ಟಾ ಅದೃಷ್ಟವೇ ಅಂದುಕೊಂಡೆ. ಕೆಲವು ಸಮಯದ ನಂತರ ಮೈಸೂರಿಗೆ ಹೋಗುವ ಅವಕಾಶ ಬಂತು. ಅವನ ನೆನಪಾಯಿತು. ಹುಡುಕುತ್ತ ಹೋದೆ. ನನ್ನನ್ನು ಕಂಡವನೇ ಮುಖ ಮರೆಮಾಡಿದ. ನಾನು ಬಿಡದೆ ಆತನ ಎದುರೇ ಹೋಗಿನಿಂತೆ. ಆತ ಮುಖ ಮುಚ್ಚಲು ಕಾರಣವೇನು ಗೊತ್ತೇ? ಆತ ಹೊಟೇಲ್ ಎದುರಿಗೆ ನಿಂತು ಗಿರಾಕಿಗಳನ್ನು "ನಮ್ಮ ಹೊಟೇಲಿಗೆ ಬನ್ನಿ , ನಮ್ಮ ಹೊಟೇಲಿಗೆ ಬನ್ನಿ' ಎಂದು ಕರೆಯುವುದಾಗಿತ್ತು. ಆತನು ಹೇಳಿದ ಫ್ರೀ ಸ್ಟೇ ಹೊಟೇಲಿನ ಗೋಡೌನು. ಪರ್ಕ್ಸ್ ಅಂದರೆ ಗಿರಾಕಿಗಳು ಕೊಡುವ ಟಿಪ್ಸ್ . "ಯಾಕೆ ಇಂಥ ಇಂಗ್ಲಿಷ್ ಹೆಸರು ಹೇಳಿದೆ' ಅಂತ ಕೇಳಿದರೆ, "ಮಾರಾಯಾ ಮದುವೆಯಾಗ್ಬೇಕು, ಹೋಟ್ಲಲ್ಲಿ ಸಪ್ಲಾಯರ್, ಕ್ಲೀನರ್ ಅಂತ ಹೇಳಿದ್ರೆ ಯಾರು ಹೆಣ್ಣು ಕೊಡ್ತಾರೆ ಹೇಳು? ಅದಕ್ಕೆ ಅಂಥದೊಂದು ಸ್ಟೈಲಾದ ಇಂಗ್ಲಿಷ್ ಹೆಸರು ಹೇಳಿದೆ' ಅಂದ.
ಮಗಳನ್ನು ಶಾಲೆಗೆ ಸೇರಿಸಬೇಕಾದರೆ ಸಾಕಷ್ಟು ಓಡಾಡಿದ್ದೆ. ಒಂದು ಶಾಲೆಯ ಪ್ರಚಾರ ಪುಸ್ತಕದಲ್ಲಿ ಹಲವು ವಿಷಯಗಳನ್ನು ಬೋಧಿಸುವ ಚಿತ್ರಗಳು ಇದ್ದವು. ಜೊತೆಗೆ "ವಿವಿಧ ಅಧ್ಯಾಪಕರಿಂದ ಪ್ರತಿ ತಿಂಗಳು ವಿಶಿಷ್ಟ ಶೈಲಿಯ ಬೋಧನೆ' ಎಂದು ದಪ್ಪವಾಗಿ ಮುದ್ರಿಸಿದ್ದರು. ಮಗಳನ್ನು ಶಾಲೆಗೆ ಸೇರಿಸಿದ ಮೇಲೆ ನಿಜ ತಿಳಿಯಿತು. ಶಾಲೆಯವರು ಸರಿಯಾಗಿ ಸಂಬಳವನ್ನೇ ಕೊಡುತ್ತಿರಲಿಲ್ಲ. ಇದರಿಂದಾಗಿ ತಿಂಗಳಿಗೊಬ್ಬಬ್ಬರು ಶಾಲೆ ಸೇರುವುದು ಬಿಡುವುದು ಮಾಡುತ್ತಿದ್ದರು.
ನನ್ನನ್ನು ಒಮ್ಮೆ ಖಾಸಗೀ ಕಾಲೇಜಿನವರು ಅಂತಾರಾಷ್ಟ್ರೀಯ ವಿಚಾರಸಂಕಿರಣವೊಂದರಲ್ಲಿ ಪ್ರಬಂಧ ಮಂಡಿಸಲು ಆಹ್ವಾನಿಸಿ ದ್ದರು. ಮದುವೆಯಾದ ಹೊಸದು. ಕೇಳಬೇಕೆ? ಹೆಂಡತಿಯ ಆಗ್ರಹದ ಮೇರೆಗೆ ಸ್ಥಳೀಯ ಪತ್ರಿಕೆಯಲ್ಲಿ ಫೋಟೋ ಹಾಕಿಸಿ ಕೊಂಡೆ. ಕಾಲೇಜಿನ ಆಡಳಿತ ಮಂಡಳಿಯವರು ಒಂದು ಸನ್ಮಾನ ಸಮಾರಂಭವನ್ನೂ ಏರ್ಪಡಿಸಿದ್ದರು. ಸೂಟು ಬೂಟುಧಾರಿಯಾಗಿ ಚತುಭುìಜ ಸಹಿತನಾಗಿ ಸಭಾಂಗಣಕ್ಕೆ ಹೋದೆ. ಹೆಂಡತಿ ತನ್ನ ಒಡವೆ ಅಲ್ಲದೇ ಪಕ್ಕದ ಮನೆಯವರದ್ದನ್ನೂ ಧರಿಸಿಕೊಂಡು ಸಿದ್ಧಳಾಗಿ ಬಂದಿದ್ದಳು. ಸಭಾಂಗಣಕ್ಕೆ ಹೋದರೆ ಮೂರು ನಾಲ್ಕು ಮಂದಿ ವಿದ್ಯಾರ್ಥಿಗಳಿದ್ದರು.
ಅಂತಾರಾಷ್ಟ್ರೀಯ ವಿಚಾರಸಂಕಿರಣ ಎಂಬ ಬ್ಯಾನರ್ ಒಂದನ್ನು ವೇದಿಕೆಯಲ್ಲಿ ಕಟ್ಟಲಾಗಿತ್ತು.
ಆಯೋಜಕರಾರೂ ಕಾಣಲಿಲ್ಲ. ಒಂದಿಬ್ಬರ ಬಳಿ ವಿಚಾರಿಸಿದಾಗ ಮೀಸೆಯ ಅಡಿಯಲ್ಲಿಯೇ ನಕ್ಕರು.
ಅಷ್ಟರಲ್ಲಿ ಒಬ್ಬ ಬರ್ಮುಡಾ ಧರಿಸಿದ ವಿದೇಶದವ ಬಂದ. ಅವನ ಹಿಂದೆ ಒಂದಿಬ್ಬರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಬಂದರು. ಆ ವಿದೇಶೀಯ ವೇದಿಕೆಯನ್ನೇರಿ ಒಂದಿಷ್ಟು ಹೊತ್ತು ಮಾತನಾಡಿದ.
ನನಗೂ ಮಾತನಾಡಲು ಹೇಳಿದರು. ನಾನು ಏನೇನೋ ಬಡಬಡಿಸಿ ಕೆಳಗಿಳಿದೆ. ಆ ಮೇಲೆ ತಿಳಿದ ವಿಷಯವೇನೆಂದರೆ ವಿದೇಶೀಯನೊಬ್ಬ ಅಧ್ಯಯನಕ್ಕೆಂದು ಆ ಕಾಲೇಜಿಗೆ ಭೇಟಿ ನೀಡಿದ್ದ. ಮಾರ್ಚ್ ತಿಂಗಳಾಗಿದ್ದರಿಂದ ಆ ಕಾಲೇಜಿನವರಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣ ಖರ್ಚು ಮಾಡಬೇಕಿತ್ತು. ಅದಕ್ಕೆ ಅಂತಾರಾಷ್ಟ್ರೀಯ ವಿಚಾರಸಂಕಿರಣ ಎಂದು ಹೆಸರಿಟ್ಟು ನನ್ನನ್ನು ಕರೆದಿದ್ದರು. ಟಿವಿ ಕ್ಯಾಮರಾದವರೂ ಇಲ್ಲ, ಚಪ್ಪಾಳೆ ತಟ್ಟುವವರೂ ಇಲ್ಲ. ಹೋಗಿ ಬಂದಿದ್ದಕ್ಕೆ ಭತ್ಯೆಯೂ ಇಲ್ಲ. ಕಾಸು ಖರ್ಚಿಲ್ಲದೇ ಕಾಲೇಜಿನವರು Conference ಮಾಡಿ ಮುಗಿಸಿದ್ದರು.
ನನಗೊಂದು ಬಹುಮಾನ ಬಂತು. ಸ್ವಲ್ಪ ದೊಡ್ಡ ಮೊತ್ತವೇ, ಸರಿ ಸುಮಾರು 20 ಸಾವಿರ ರೂ. ನನ್ನ ಹೆಂಡತಿ ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ತಾನು ಹರಕೆ ಹೊತ್ತಿದ್ದರಿಂದ ನಿಮಗೆ ಬಹುಮಾನ ಬಂತೆಂತು ಕೂಡಲೇ ಹರಕೆ ತೀರಿಸಬೇಕೆಂದೂ ಹಟ ಹಿಡಿದಳು. ಒಂದು ದಿನ ಅಲ್ಲಿಗೆ ಪರಿವಾರ ಸಹಿತ ಹೋದೆ. ಇದ್ದದರಲ್ಲಿ ದೊಡ್ಡ ಸೇವೆ "ಸುವರ್ಣ ಪುಷ್ಪಾರ್ಚನೆ' ಇತ್ತು. ಅದನ್ನೇ ಮಾಡಿಸಲು ಆಜ್ಞೆ ಇತ್ತಳು ಮಡದಿ. ಅದಕ್ಕೆ 25 ಸಾವಿರ ರೂ. ಸೇವಾ ವಿವರ ವನ್ನು ಬರೆದಿದ್ದ ಫಲಕದಲ್ಲಿ ದರವನ್ನು ನಮೂದಿಸಿದ್ದ ಜಾಗದ ಕೆಳಗೆ "ಸೇವಾ ನಂತರದಲ್ಲಿ ಸುವರ್ಣ ಪುಷ್ಪವನ್ನು ಭಕ್ತರಿಗೆ ನೀಡಲಾಗುವುದು' ಎಂದು ಬರೆಯಲಾಗಿತ್ತು. ದೇವರ ಸೇವೆಯೂ ಆಯಿತು, ಚಿನ್ನ ದೊರಕಿದಂತೆಯೂ ಆಯಿತು ಎಂದು ಹೆಂಡತಿ ಯೋಚಿಸಿರಬೇಕೆಂದು ಭಾವಿಸಿದೆ. ಸೇವೆ ಚೀಟಿ ಮಾಡಿಸಿದೆ.
ಪುರೋಹಿತರು ಒಂದು ಸೇವಂತಿಗೆ ಹೂ ತಂದು ನಮ್ಮ ಪರಿವಾರದವರಿಗೆ ಮುಟ್ಟಲು ಹೇಳಿದರು. ನನಗೆ ಗಾಬರಿ. ಆದರೂ ಹಾಗೇ ಮಾಡಿದೆ. ಕೊನೆಗೆ ಸೇವಂತಿಗೆಯ ಒಂದೊಂದೇ ದಳವನ್ನು ಕಿತ್ತು, ಸಮರ್ಪಿಸಿ ಕೊನೆಗೆ, ಸುವರ್ಣ ಪುಷ್ಪಂ ಸಮರ್ಪಯಾಮಿ ಎಂದು ಅದರ ದಂಟನ್ನು ದೇವರಿಗೆ ಅರ್ಚನೆ ಮಾಡಿ, ಅರ್ಧ ಕರ್ಪೂರದ ಆರತಿ ಮಾಡಿದರು. ಮರಳಿ ಬರುವಾಗ ಜೋಪಾನ ವಾಗಿ ಸೇವಂತಿಗೆ ದಂಟನ್ನು ಪ್ರಸಾದವಾಗಿ ಕೊಟ್ಟರು. ಸಿಟ್ಟಿನಿಂದ ನಾನು, "ಇದೇನು ಅನ್ಯಾಯ? ಸುವರ್ಣ ಪುಷ್ಪ ಅರ್ಚನೆ ಅಂತ 25 ಸಾವಿರ ತೆಕೊಂಡಿರಿ, ಮಾಡಿದ್ದು ಒಂದು ಸೇವಂತಿಗೆಯ ಅರ್ಚನೆ, ಏಕೆ ಇಂಥ ಮೋಸ?' ಅಂತ ಕೂಗಾಡಿದೆ. ಅವರು ಶಾಂತ ವಾಗಿ, "ಭಗವಂತ ಕರುಣಾಮಯಿ. ಭಕ್ತರು ಏನನ್ನು ಕೊಟ್ಟರೂ ತೆಗೆದುಕೊಳ್ಳುತ್ತಾನೆ. ಹಿಂದೆಲ್ಲ ಚಿನ್ನದ ಹೂವನ್ನೇ ಅರ್ಚನೆ ಮಾಡುತ್ತಿದ್ದೆವು. ಈಗ ಬೆಲೆ ದುಬಾರಿ ನೋಡಿ, ಸೇವಂತಿಗೆ ಹೂವನ್ನೇ ಚಿನ್ನದ ಹೂವನ್ನಾಗಿ ಭಾವಿಸಿ ಅರ್ಚನೆ ಮಾಡುತ್ತೇವೆ' ಅಂದರು. ಹೆಂಡತಿ ನಗುತ್ತ ಸೇವಂತಿಗೆ ದಂಟನ್ನು ಕಿವಿಗಿಟ್ಟಳು. ದೊಡ್ಡ ರೇಟಿನ, ದೊಡ್ಡ ಹೆಸರಿನ, ಸಣ್ಣ ಸೇವೆ ತೆಗೆದುಕೊಂಡ ದೇವರು ಮಾತ್ರ ಕಲ್ಲಾಗಿದ್ದ !