ಡಾ| ಬಿ. ಎಚ್. ಆನಂದ ರಾವ್,ಪ್ರೊಫೆಸರ್ , ಸರ್ಜರಿ ವಿಭಾಗ | Jul 23, 2012
ಪಿತ್ತಕೋಶ ಸಂಪೂರ್ಣ ಖಾಲಿ ಆಗದಿರುವುದು
ಪಿತ್ತಕೋಶವು ಸಂಪೂರ್ಣವಾಗಿ ಅಥವಾ ಸಾಕಷ್ಟು ಖಾಲಿ ಆಗದಿದ್ದರೆ, ಅದರಲ್ಲಿರುವ ಪಿತ್ತರಸವು ಪ್ರಬಲವಾಗಿ, ಕಲ್ಲುಗಳಾಗಬಹುದು. ಗರ್ಭಿಣಿಯರಲ್ಲಿ ಈ ರೀತಿ ಆಗುತ್ತದೆ. ಸ್ವಲ್ಪವೇ ಆಹಾರವನ್ನು ಸೇವಿಸುವುದು ಅಥವಾ ಬಹಳ ಸಮಯ ಹೊಟ್ಟೆಯನ್ನು ಖಾಲಿಯಾಗಿ ಇರಿಸುವುದು- ಇದರಿಂದ ಪಿತ್ತಕೋಶದ ಸಂಕುಚನೆಯು ಕುಗ್ಗುತ್ತದೆ. ಪಿತ್ತಕೋಶವು ಸಂಕುಚಿಸುವುದು ಕಡಿಮೆಯಾದರೆ, ಪಿತ್ತಕೋಶವು ಖಾಲಿಯಾಗಲು ಅಥವಾ ಪದೇ ಪದೇ ಖಾಲಿಯಾಗಲು ಕಷ್ಟವಾಗುತ್ತದೆ.
ಅಪಾಯ ಪೂರಕ ಅಂಶಗಳು
ಪಿತ್ತಕೋಶದ ಕಲ್ಲುಗಳಾಗುವ ಕಾಯಿಲೆಯು ಆನುವಂಶಿಕವಾಗಿ ಬರುವ ಸಾಧ್ಯತೆ ಇದೆ. ಇತರ ಅಪಾಯಕಾರಿ ಅಂಶಗಳೆಂದರೆ:
ಲಿಂಗ
20ರಿಂದ 60 ವರ್ಷ ಪ್ರಾಯದೊಳಗಿನ ಮಹಿಳೆಯರಿಗೆ ಈ ಕಾಯಿಲೆ ಬರುವ ಸಾಧ್ಯತೆ, ಇದೇ ವಯೋಮಾನದ ಪುರುಷರಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಸ್ತ್ರೀ ಹಾರ್ಮೋನ್ ಈಸ್ಟ್ರೋಜನಿನ ಕಾರಣದಿಂದ ಅಧಿ—ಕ ಪ್ರಮಾಣದ ಕೊಲೆಸ್ಟರಾಲ್ ಪಿತ್ತರಸಕ್ಕೆ ಸೇರುತ್ತದೆ. ಗರ್ಭಾವಸ್ಥೆಯು ಸ್ತ್ರೀಯರ ಈಸ್ಟ್ರೋಜನ್ ಮಟ್ಟವನ್ನು ಏರಿಸುತ್ತದೆ. ಇದರಿಂದ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಅಪಾಯವಿದೆ. ಇಷ್ಟು ಮಾತ್ರವಲ್ಲದೆ, ಜನನ ನಿಯಂತ್ರಣ ಮಾತ್ರೆಗಳು ಹಾಗೂ ಹಾರ್ಮೋನ್ ಚಿಕಿತ್ಸೆಗಳು ಪಿತ್ತರಸದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಏರಿಸುತ್ತವೆ. ಇದೇ ಕಾರಣದಿಂದ ಪಿತ್ತಕೋಶವು ಸಂಪೂರ್ಣವಾಗಿ ಖಾಲಿ ಆಗದೇ ಇರಬಹುದು. ಪಿತ್ತಕೋಶದಲ್ಲಿ ಕಲ್ಲುಗಳಿದ್ದು, ನೀವು ಮೇಲೆ ಹೇಳಿರುವ ಔಷಧೋಪಚಾರವನ್ನು ಪಡೆಯುತ್ತಿರುವಿರಾದರೆ, ಈ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.
ದೇಹ ತೂಕ
ದೇಹದ ಗಾತ್ರ ಸೂಚಕವು ನಿಮ್ಮ ದೇಹತೂಕವು ಹೆಚ್ಚುತ್ತಿರುವ ಸೂಚನೆಯನ್ನು ನೀಡುತ್ತಿದೆಯಾದರೆ, ನಿಮಗೆ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಅಪಾಯವಿರಬಹುದು. ಒಂದು ಹದಕ್ಕಿಂತ ಹೆಚ್ಚು ಇರುವ ದೇಹ ತೂಕದಿಂದ ಪಿತ್ತರಸದಲ್ಲಿ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುವ ಅಪಾಯವಿದೆ. ದೇಹತೂಕ ಹೆಚ್ಚಾಗುವುದರಿಂದ, ಕೊಲೆಸ್ಟರಾಲ್ ಪ್ರಮಾಣವೂ ಹೆಚ್ಚು ತ್ತದೆ. ಇದರಿಂದಾಗಿ ಪಿತ್ತರಸದ ಪ್ರಮಾಣವು ತಗ್ಗುತ್ತದೆ. ಜೊತೆಗೆ ಪಿತ್ತಕೋಶವು ಸಂಕುಚನಗೊಳ್ಳುವ ಹಾಗೂ ಖಾಲಿಯಾಗುವ ಪ್ರಮಾಣವು ಕಡಿಮೆಯಾಗುತ್ತದೆ.
ಆಹಾರ ಕ್ರಮ
ಕಡಿಮೆ ಪೋಷಕಾಂಶವಿರುವ ಆಹಾರ, ಶೀಘ್ರವಾಗಿ ತೂಕವಿಳಿಸುವ ಆಹಾರ ಕ್ರಮಗಳಿಂದಾಗಿ ಪಿತ್ತರಸದ ಚಟುವಟಿಕೆಗಳಲ್ಲಿ ವ್ಯತ್ಯಾಸಗಳಾಗಬಹುದು. ಇದೇ ಕಾರಣದಿಂದ ಪಿತ್ತಕೋಶದ ಸಂಕುಚನಾ ಪ್ರವೃತ್ತಿಯೂ ಕುಗ್ಗಬಹುದು. ವಾರಕ್ಕೆ ಮೂರು ಪೌಂಡುಗಳಿಗಿಂತಲೂ ಹೆಚ್ಚು ತೂಕವನ್ನು ಒಮ್ಮೆಲೇ ಕಳೆದುಕೊಳ್ಳುವುದರಿಂದ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಅಪಾಯವಿದೆ. ನಿಧಾನಕ್ಕೆ ತೂಕವನ್ನು ಇಳಿಸಿಕೊಳ್ಳುವಲ್ಲಿ ಈ ಅಪಾಯವಿರುವುದಿಲ್ಲ.
ತೂಕ ಇಳಿಸಿಕೊಳ್ಳಲು ಗ್ಯಾಸ್ಟ್ರೊಇಂಟೆಸ್ಟೈನಲ್ ಅಥವಾ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಒಳಗಾಗುವವರಿಗೂ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಸಾಧ್ಯತೆ ಇದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾಗುವ ಪ್ರತೀ ಮೂವರಲ್ಲಿ ಒಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಕೆಲವು ತಿಂಗಳ ಬಳಿಕ ಪಿತ್ತಕೋಶದಲ್ಲಿ ಕಲ್ಲುಗಳಿರುವ ಲಕ್ಷಣಗಳು ಕಂಡುಬರುತ್ತವೆ.
ವಯಸ್ಸು
ವಯಸ್ಸು ಹೆಚ್ಚಾದಂತೆ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಯುವಕರಿಗೆ ಹೋಲಿಸಿದರೆ, 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಪಿತ್ತಕೋಶದ ಕಲ್ಲಿನ ತೊಂದರೆ ಹೆಚ್ಚು ಕಂಡುಬರುತ್ತದೆ.
ವೈದ್ಯರ ಸಲಹೆ ಯಾವಾಗ
ಪಡೆಯಬೇಕು?
ಹೊಟ್ಟೆಯಲ್ಲಿ ಹಠಾತ್ತಾಗಿ ತೀವ್ರ ನೋವು ಕಾಣಿಸಿಕೊಂಡರೆ, ಜೊತೆಗೆ ವಾಂತಿ, ವಾಕರಿಕೆ, ಜ್ವರಗಳೂ ಇದ್ದರೆ, ಕೂಡಲೇ ವೈದ್ಯರನ್ನು ಕಾಣಿರಿ. ಪಿತ್ತರಸ ಗ್ರಂಥಿಯ ಅಡಚಣೆಯ ಲಕ್ಷಣಗಳಾದ ಹೊಟ್ಟೆನೋವು, ಚರ್ಮ ಹಾಗೂ ಕಣ್ಣಿನ ಬಿಳಿ ಭಾಗಗಳು ಹಳದಿಯಾಗುವುದು, ಮೂತ್ರದ ಬಣ್ಣ ದಟ್ಟವಾಗುವುದು, ಚಳಿ ಹಾಗೂ ತೀವ್ರ ಜ್ವರ... ಇತ್ಯಾದಿ ಲಕ್ಷಣಗಳಲ್ಲಿ ಒಂದು ಅಥವಾ ಹೆಚ್ಚು ಲಕ್ಷಣಗಳು ಇದ್ದಲ್ಲಿ, ಕೂಡಲೇ ವೈದ್ಯಕೀಯ ನೆರವನ್ನು ಪಡೆಯಿರಿ.
ತಪಾಸಣೆ ಮತ್ತು ಪರೀಕ್ಷೆಗಳು
ಬೇರೆ ರೋಗ ಬಾಧೆಗಳ ಕಾರಣ ದಿಂದ ಮಾಡುವ ಅಲ್ಟ್ರಾಸೌಂಡ್ ಅಥವಾ ಕಂಪ್ಯೂಟರೈಸ್ಡ್ ಟೊಮೋಗ್ರಫಿಯ ಸಂದರ್ಭದಲ್ಲಿ ಚಿಹ್ನೆ ಹಾಗೂ ಲಕ್ಷಣಗಳು ಏನೂ ಇರದಿರುವ ಪಿತ್ತಕೋಶದ ಕಲ್ಲುಗಳು ಪತ್ತೆಯಾಗುತ್ತವೆ.
ಒಂದು ವೇಳೆ ನಿಮಗೆ ಪಿತ್ತಕೋಶದಲ್ಲಿ ಕಲ್ಲುಗಳಾಗಿರುವ ಲಕ್ಷಣಗಳು ಇದ್ದರೆ, ವೈದ್ಯರು ಅದನ್ನು ನಿಮ್ಮ ಆರೋಗ್ಯ ಹಿನ್ನೆಲೆ ವಿಚಾರಣೆ ಹಾಗೂ ದೈಹಿಕ ಪರೀಕ್ಷೆಯ ಮೂಲಕ ಪತ್ತೆ ಮಾಡುತ್ತಾರೆ. ನಿಮ್ಮ ದೇಹದ ಚರ್ಮ ಹಾಗೂ ಕಣ್ಣಿನ ಬಿಳಿಯ ಭಾಗ ಹಳದಿಯಾಗಿದೆಯೇ, ಹೊಟ್ಟೆಯಲ್ಲಿ ನೋವು ಇದೆಯೇ ಎಂದು ಒತ್ತಿ ಪರೀಕ್ಷಿಸುತ್ತಾರೆ. ವೈದ್ಯರು ನಿಮ್ಮದು ಪಿತ್ತಕೋಶದ ಕಲ್ಲಿನ ತೊಂದರೆಯೇ ಎಂಬ ಸಂದೇಹ ನಿವಾರಣೆಗಾಗಿ ರಕ್ತಪರೀಕ್ಷೆಯನ್ನು ಮಾಡುವಂತೆ ಸೂಚಿಸಬಹುದು. ರಕ್ತದಲ್ಲಿ ಸೋಂಕಿರುವ ಲಕ್ಷಣಗಳಿದ್ದರೆ, ಅಂದರೆ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚಿದ್ದರೆ, ಪಿತ್ತಜನಕಾಂಗದ ಮಟ್ಟವು ಅಸಹಜವಾಗಿದ್ದರೆ ಅಥವಾ ಬಿಲಿರುಬಿನ್, ಪಿತ್ತಕೋಶದ ಕಿಣ್ವ... ಇತ್ಯಾದಿಗಳ ಪ್ರಮಾಣದಲ್ಲಿ ಅಸಹಜತೆಗಳಿದ್ದರೆ, ಈ ಮೂಲಕ ವೈದ್ಯರು ನಿಮಗಾಗಿರುವುದು ಪಿತ್ತ ಕೋಶದ ಕಲ್ಲಿನ ತೊಂದರೆ ಎಂಬುದನ್ನು ಖಚಿತಗೊಳಿಸುತ್ತಾರೆ. ಇಷ್ಟಲ್ಲದೆ, ನೀವು ಇತರ ತಪಾಸಣಾ ಪರೀಕ್ಷೆಗಳನ್ನೂ ಮಾಡಿಸಿಕೊಳ್ಳಬೇಕಾಗಬಹುದು.
ಅಲ್ಟ್ರಾಸೊನೋಗ್ರಫಿ
ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಎಕ್ಸ್-ರೇ ಕಿರಣಗಳು ಪಿತ್ತಕೋಶ ಇತ್ಯಾದಿ ಅಂಗಗಳ ಪ್ರತಿಬಿಂಬವನ್ನು ಮೂಡಿಸುತ್ತವೆ. ಪಿತ್ತಕೋಶದಲ್ಲಿ ಅಥವಾ ಸಾಮಾನ್ಯ ಪಿತ್ತರಸ ಗ್ರಂಥಿಯಲ್ಲಿ ಕಲ್ಲುಗಳಿವೆಯೇ ಎಂದು ಈ ಪರೀಕ್ಷೆಯಿಂದ ನಿಖರವಾಗಿ ತಿಳಿಯಬಹುದು.
ಕಂಪ್ಯೂಟರೈಸ್ಡ್ ಟೊಮೊಗ್ರಫಿ
ಈ ಪರೀಕ್ಷೆಯಲ್ಲಿ ಕಂಪ್ಯೂಟರ್‌ನಿಂದ ಉತ್ಪಾದಿತ ಎಕ್ಸ್-ರೇಗಳ ಪ್ರವಾಹವು ದೇಹದ ಒಳ ಅಂಗಗಳ ವಿಸ್ತೃತ ಬಿಂಬವನ್ನು ಒದಗಿಸುತ್ತದೆ.
ರೇಡಿಯೋ ನ್ಯೂಕ್ಲೈಡ್‌ಸ್ಕ್ಯಾನ್
ಈ ಪರೀಕ್ಷೆಯಲ್ಲಿ ನಿಮಗೆ ವಿಕಿರಣಶೀಲ ಪತ್ತೆಕಾರಕ ಅಂಶವೊಂದನ್ನು, ರಕ್ತನಾಳಕ್ಕೆ ಚುಚ್ಚುತ್ತಾರೆ ಹಾಗೂ ಸ್ಕ್ಯಾನ್ ಮೂಲಕ ಅದು ಕ್ರಮಿಸುವ ಹಾದಿಯನ್ನು ಗಮನಿಸುತ್ತಾರೆ. ಪಿತ್ತಕೋಶದಲ್ಲಿ ಕಲ್ಲುಗಳಿರದೆ ಯಾವುದೇ ರೀತಿಯ ಅಡಚಣೆಗಳು ಇಲ್ಲದಿದ್ದರೆ, ವಿಕಿರಣಶೀಲ ಪತ್ತೆಕಾರಕವು ಪಿತ್ತಕೋಶದ ತೆರವಿನ ಮೂಲಕ ಹೊರಬರುತ್ತವೆ.
ಎಂಡೊಸ್ಕೋಪಿಕ್
ರೆಟ್ರಾಗ್ರೇಡ್ ಕೊಲಾಂಜಿಯೋ
ಪ್ಯಾಂಕ್ರಿಯಾಟೊಗ್ರಫಿ
ಪಿತ್ತಕೋಶದಲ್ಲಿ ಕಲ್ಲು ಇರುವ ಜಾಗ ಪತ್ತೆ ಮಾಡಲು ಹಾಗೂ ಕಲ್ಲನ್ನು ತೆಗೆದು ಹಾಕಲು ವೈದ್ಯರು ಈ ಪರೀಕ್ಷೆಯನ್ನು ನಡೆಸುತ್ತಾರೆ. ಉRಇಕಯಲ್ಲಿ ವೈದ್ಯರು ಸೂಕ್ಷ್ಮವಾದ, ಬಳುಕುವ, ಬೆಳಕು ಬೀರುವ ಎಂಡೊಸ್ಕೋಪ್ ಎಂಬ ಸಾಧನವನ್ನು ಬಾಯಿಯ ಮೂಲಕ, ಹೊಟ್ಟೆಗೆ ಅಂದರೆ ಸಣ್ಣ ಕರುಳಿನ ಮೇಲಿನ ಭಾಗಕ್ಕೆ ಇಳಿಸುತ್ತಾರೆ. ಮೇದೋಜೀರಕ ರಸಗ್ರಂಥಿ ಹಾಗೂ ಪಿತ್ತರಸ ಗ್ರಂಥಿಗಳ ತೆರವನ್ನು ಸರಿಯಾಗಿ ನೋಡಿಕೊಂಡು ಚಿಕಿತ್ಸೆ ನೀಡಲು ಜೀರ್ಣಾಂಗ ವ್ಯೂಹದೊಳಕ್ಕೆ ಗಾಳಿಯನ್ನು ಸೇರಿಸಿ ಅದನ್ನು ಉಬ್ಬಿಸುತ್ತಾರೆ. ಆಮೇಲೆ ಸೂಕ್ಷ್ಮ ನಳಿಕೆಯ ಮೂಲಕ ಗ್ರಂಥಿಗಳಿಗೆ ಬಣ್ಣವನ್ನು ಚುಚ್ಚುತ್ತಾರೆ. ಆ ಬಣ್ಣವು ಎಂಡೊಸ್ಕೋಪ್‌ನ ಮೂಲಕ ಚಲಿಸುತ್ತದೆ. ಅಂತಿಮವಾಗಿ ಇದರ ಎಕ್ಸ್-ರೇ ಬಿಂಬವನ್ನು ಪಡೆಯುತ್ತಾರೆ.
ಕಲ್ಲಿನಿಂದಾಗಿ ಯಾವುದಾದರೂ ಗ್ರಂಥಿಯಲ್ಲಿ ಅಡಚಣೆಯಾಗಿದ್ದರೆ; ಈ ಕಲ್ಲನ್ನು ಕತ್ತರಿಸಲು ವಿಶೇಷವಾದ ಸಾಧನವನ್ನು ಎಂಡೊಸ್ಕೋಪ್ ಮೂಲಕ ಆ ಜಾಗದಲ್ಲಿ ಅಳವಡಿಸುತ್ತಾರೆ. ಕೆಲವು ಆರೋಗ್ಯ ಕೇಂದ್ರಗಳಲ್ಲಿ ಮ್ಯಾಗ್ನೆಟಿಕ್ ರೆಸಾನೆನ್ಸ್ ಕೋಲ್ಯಾಂಜಿಯೋ ಪ್ಯಾಂಕ್ರಿಯಾಟೋಗ್ರಫಿ ಎಂಬ ವಿಧಾನದಿಂದ ಪಿತ್ತರಸ ಗ್ರಂಥಿಯಲ್ಲಿ ಅಡಚಣೆಯಾಗಿರುವ ಕಲ್ಲನ್ನು ಪತ್ತೆಮಾಡುತ್ತಾರೆ. ಆದರೆ ಈ ವಿಧಾನದಿಂದ ಕಲ್ಲನ್ನು ನಿವಾರಿಸಲು ಸಾಧ್ಯವಾಗಲಾರದು.
ಎಂಡೊಸ್ಕೋಪಿಕ್
ಅಲ್ಟ್ರಾಸೌಂಡ್
ಸಾಮಾನ್ಯ ಪಿತ್ತರಸ ಗ್ರಂಥಿಯಲ್ಲಿರುವ ಕಲ್ಲನ್ನು ವೈದ್ಯರು ಈ ವಿಧಾನದಿಂದ ಪತ್ತೆಮಾಡುತ್ತಾರೆ. ಒಂದು ಅಲ್ಟ್ರಾಸೌಂಡ್ ಟ್ರಾನ್ಸ್‌ಡ್ನೂಸರ್‌ನ್ನು ಎಂಡೊಸ್ಕೋಪ್‌ನ ತುದಿಯಲ್ಲಿ ಇರಿಸಿ, ಅದನ್ನು ಬಾಯಿಯ ಮೂಲಕ ಹೊಟ್ಟೆಗೆ ಇಳಿಸುತ್ತಾರೆ. ಪಿತ್ತರಸ ಗ್ರಂಥಿಗೆ ಈ ಅಲ್ಟ್ರಾಸೌಂಡ್ ಸಾಧನವು ಅತ್ಯಂತ ಸಮೀಪದಲ್ಲಿ ಇರುವುದರಿಂದ, ಇತರ ವಿಧಾನಗಳಿಗಿಂತ ಈ ವಿಧಾನದಲ್ಲಿ ಬಿಂಬವು ಹೆಚ್ಚು ನಿಖರವಾಗಿ ದೊರಕುತ್ತದೆ. ಆದರೆ ಈ ವಿಧಾನದಲ್ಲಿ ಕಲ್ಲುಗಳನ್ನು ಪತ್ತೆಮಾಡಲು ಮಾತ್ರ ಸಾಧ್ಯವಿರುವುದರಿಂದ ಕಲ್ಲುಗಳ ನಿವಾರಣೆಗೆ ಮತ್ತೆ ಉRಇಕ ವಿಧಾನವನ್ನೇ ಮಾಡಬೇಕಾಗುತ್ತದೆ.
ತೊಡಕುಗಳು
ಸಾಮಾನ್ಯ ಪಿತ್ತರಸ ಗ್ರಂಥಿಯ ಅಡಚಣೆ
ಕೆಲವು ಸಲ ಪಿತ್ತಕೋಶ, ಪಿತ್ತಜನಕಾಂಗ ಅಥವಾ ಪ್ಲೀಹದಿಂದ ಸಣ್ಣ ಕರುಳಿನ ವರೆಗಿನ ಗ್ರಂಥಿಗಳು ಕಲ್ಲಿನಿಂದ ಅಡಚಣೆಗೊಂಡಿರುತ್ತವೆ. ಈ ರೀತಿಯ ಅಡಚಣೆಯನ್ನು ಪಿತ್ತರಸ ಗ್ರಂಥಿಯ ಅಡಚಣೆ ಎಂದು ಹೇಳುತ್ತಾರೆ. ಇದರ ಲಕ್ಷಣವೆಂದರೆ ಕಣ್ಣಿನ ಬಿಳಿಭಾಗ ಹಾಗೂ ಚರ್ಮ ಹಳದಿಯಾಗುವುದು, ಮೂತ್ರದ ಬಣ್ಣ ದಟ್ಟವಾಗುವುದು ಹಾಗೂ ಮೇಲಿನ ಹೊಟ್ಟೆಯಲ್ಲಿ ನೋವು... ಇತ್ಯಾದಿ. ಒಂದು ವೇಳೆ ನಿಮಗೆ ಚಳಿ ಹಾಗೂ ಜ್ವರಗಳೂ ಇದ್ದರೆ, ಅದು ಪಿತ್ತಕೋಶದ ಉರಿಯೂತ ಅಥವಾ ಪಿತ್ತರಸ ಗ್ರಂಥಿಯ ಸೋಂಕಿನ ಸೂಚನೆ ಇರಬಹುದು.
ಪ್ಲೀಹದ ಉರಿಯೂತ
ಪ್ಲೀಹದ ಸಮೀಪದ ಸಾಮಾನ್ಯ ಪಿತ್ತರಸ ಗ್ರಂಥಿಯ ಅಡಚಣೆಯಿಂದ ಪ್ಲೀಹದಲ್ಲೂ ಅಡಚಣೆಯಾಗುತ್ತದೆ. ಇದನ್ನು ಪ್ಲೀಹದ ಉರಿಯೂತ ಎಂದು ಹೇಳುತ್ತಾರೆ. ಕೆಲವು ಜನರಲ್ಲಿ ಸಾಮಾನ್ಯ ಪಿತ್ತರಸ ಗ್ರಂಥಿ ಹಾಗೂ ಪ್ಲೀಹಗಳನ್ನು ಕರುಳಿಗೆ ಸೇರಿಸುವ ತೆರವು ಒಂದೇ ಆಗಿರುತ್ತವೆ.
ಪ್ಲೀಹದ ರಸಗ್ರಂಥಿಯ ಉರಿಯೂತದಲ್ಲಿ ಮೇಲಿನ ಹೊಟ್ಟೆಯಲ್ಲಿ ತೀವ್ರವಾದ, ಒಂದೇ ರೀತಿಯ ನೋವು ಇರುತ್ತದೆ. ಈ ನೋವು ಎದೆ, ಬೆನ್ನುಗಳಿಗೂ ಚಲಿಸಬಹುದು. ಅಂಗಾತ ಮಲಗಿದಾಗ ತೀವ್ರಗೊಳ್ಳುವ ನೋವು, ಎದ್ದು ಕುಳಿತಾಗ ಅಥವಾ ಮುಂದಕ್ಕೆ ಬಾಗಿದಾಗ ಕಡಿಮೆಯಾಗಬಹುದು. ಕೆಲವು ಸಲ ವಾಂತಿ, ವಾಕರಿಕೆ, ಜ್ವರಗಳೂ ಇರಬಹುದು. ಕೆಲವೊಮ್ಮೆ ಈ ಲಕ್ಷಣಗಳು ನಾಲ್ಕಾರು ದಿನಗಳಲ್ಲಿ ಕಡಿಮೆ ಆಗುತ್ತವೆ. ಆದರೆ ಪ್ಲೀಹದ ತೀವ್ರ ಉರಿಯೂತದಿಂದ ಪ್ರಾಣಕ್ಕೆ ಅಪಾಯವಾಗುವ ಸಂಭವವಿದೆ.
ಪಿತ್ತಕೋಶದ ಅಬುìದ
ಪಿತ್ತಕೋಶದಲ್ಲಿ ಕಲ್ಲುಗಳಿರುವವರಿಗೆ ಕ್ಯಾನ್ಸರ್ ಆಗಬಹುದಾದ ಸಾಧ್ಯತೆಗಳಿವೆ. ಸಂಶೋಧನೆಗಳು ಹೇಳುವುದೇನೆಂದರೆ, ಕಲ್ಲುಗಳಿರುವ ಕಾರಣದಿಂದ ಪಿತ್ತಕೋಶವು ಪಿತ್ತರಸವನ್ನು ಸ್ರವಿಸುವ ಪ್ರಮಾಣವು ಕಡಿಮೆಯಾಗುತ್ತದೆ. ಇದು ಅಂಗಾಂಶಗಳು ಪಿತ್ತರಸದಲ್ಲಿರುವ ಕ್ಯಾನ್ಸರ್‌ಕಾರಕ ಅಂಶಗಳಿಗೆ ತೆರೆದುಕೊಳ್ಳುವ ಅವಧಿ—ಯನ್ನು ಹೆಚ್ಚಿಸುತ್ತದೆ. ಆದರೆ ಪಿತ್ತಕೋಶದಲ್ಲಿ ಕಲ್ಲುಗಳಿರುವ ಕೆಲವರಿಗೆ ಯಾವತ್ತೂ ಕ್ಯಾನ್ಸರ್ ಬಾರದೆಯೂ ಇರಬಹುದು.
ಚಿಕಿತ್ಸೆ ಹಾಗೂ ಔಷಧಿ—ಗಳು
ಹೆಚ್ಚಿನವರಿಗೆ ತಮಗೆ ಪಿತ್ತಕೋಶದಲ್ಲಿ ಕಲ್ಲುಗಳಿವೆ ಎಂಬ ಅರಿವೇ ಇರುವು ದಿಲ್ಲ. ಬೇರೆ ಯಾವುದೋ ರೋಗ ತಪಾಸಣೆಯ ಸಂದರ್ಭದಲ್ಲಿ ಪಿತ್ತ ಕೋಶದ ಕಲ್ಲುಗಳು ಪತ್ತೆಯಾಗುತ್ತವೆ. ಇಂತಹ ಸಂದರ್ಭದಲ್ಲಿ ವೈದ್ಯರು ಕಾದು ನೋಡುವ ಚಿಕಿತ್ಸಾ ವಿಧಾನವನ್ನು ಸೂಚಿಸುತ್ತಾರೆ. ಒಂದು ವೇಳೆ ಪಿತ್ತಕೋಶದ ಕಲ್ಲುಗಳಿಂದ ನೋವಿನ ಲಕ್ಷಣಗಳಿದ್ದರೆ, ಸಾಧ್ಯವಿರುವ ಚಿಕಿತ್ಸಾ ವಿಧಾನಗಳೆಂದರೆ,
ಶಸ್ತ್ರ ಚಿಕಿತ್ಸೆ
ಪಿತ್ತಕೋಶದಲ್ಲಿ ಕಲ್ಲುಗಳಿದ್ದು, ಅವುಗಳಿಂದ ತೀವ್ರ ತೊಂದರೆಯ ಲಕ್ಷಣಗಳಿದ್ದರೆ ವೈದ್ಯರು ಪಿತ್ತಕೋಶವನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆಯನ್ನು ಅಂದರೆ ಕೊಲೆಸಿಸ್ಟೆಕ್ಟಮಿಯನ್ನು ಸೂಚಿಸಬಹುದು. ಈ ಶಸ್ತ್ರಚಿಕಿತ್ಸೆಯನ್ನು ಎರಡು ವಿಧಾನದಲ್ಲಿ ನಡೆಸುತ್ತಾರೆ.
ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
ಲ್ಯಾಪರೊಸ್ಕೋಪ್ ಎಂಬ ಸಾಧನವನ್ನು ಉಪಯೋಗಿಸಿಕೊಂಡು ಈ ವಿಧಾನದ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ. ಲ್ಯಾಪರೊಸ್ಕೋಪ್ ಅಂದರೆ ಇದು ಪೆನ್ಸಿಲ್ ಮೊನೆಯಷ್ಟೇ ಸೂಕ್ಷ್ಮವಾದ ನಳಿಗೆ. ಇದರಲ್ಲಿ ಬೆಳಕು ಹಾಗೂ ಕೆಮೆರಾವನ್ನು ಅಳವಡಿಸಿರುತ್ತಾರೆ. ಕ್ಯಾನುಲಾದ ಅಂದರೆ ಟೊಳ್ಳು ಕೊಳವೆಯ ಮೂಲಕ ವೈದ್ಯರು ಲ್ಯಾಪರೊಸ್ಕೋಪನ್ನು ಹೊಟ್ಟೆಯ ಭಾಗದಲ್ಲಿ ಮಾಡಿದ ಸಣ್ಣ ರಂಧ್ರದ ಮುಖಾಂತರ ಒಳ ತೂರಿಸುತ್ತಾರೆ. ಇದರಲ್ಲಿರುವ ಕ್ಯಾಮೆರಾ ತೆಗೆದ ದೇಹದ ಒಳ ಅಂಗಗಳ ಚಿತ್ರವು ಹೊರಭಾಗದಲ್ಲಿ ಜೋಡಿಸಿದ ಪರದೆಯಲ್ಲಿ ಮೂಡುತ್ತದೆ. ಇಲ್ಲಿ ವೈದ್ಯರು ದೇಹದೊಳಗಿನ ಚಿತ್ರಣಗಳನ್ನು ವಿವರವಾಗಿ ನೋಡಿಕೊಂಡು, ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಪಿತ್ತಕೋಶವನ್ನು ಕತ್ತರಿಸಲು ಹೊಟ್ಟೆಯಲ್ಲೇ ಮಾಡಿದ ಬೇರೊಂದು ರಂಧ್ರದ ಮೂಲಕ ಕತ್ತರಿ ಸುವ ಸೂಕ್ಷ್ಮ ಸಾಧನಗಳನ್ನು ಒಳಭಾಗಕ್ಕೆ ಕಳುಹಿಸುತ್ತಾರೆ. ಲ್ಯಾಪರೊಸ್ಕೋಪಿಕ್ ವಿಧಾನವು ಸಣ್ಣ ರಂಧ್ರಗಳ ಮೂಲಕ ಸಣ್ಣ ಸಣ್ಣ ಸಾಧನಗಳನ್ನು ಉಪಯೋಗಿಸಿ ಮಾಡುವ ಶಸ್ತ್ರಚಿಕಿತ್ಸೆಯಾದುದರಿಂದ, ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ನೀವು ನಿಮ್ಮ ಸಹಜ ಚಟುವಟಿಕೆಗಳಿಗೆ ಮರಳಬಹುದು. ಲ್ಯಾಪರೊಸ್ಕೋಪಿಕ್ ವಿಧಾನದ ಮೂಲಕ ಪಿತ್ತಕೋಶವನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆಯು ಬಹಳಷ್ಟು ಜನರಿಗೆ ಪರಿಣಾಮಕಾರಿ ಎನಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಕೆಲವು ಸಲ ವೈದ್ಯರು ಪಿತ್ತಕೋಶವನ್ನು ತೆಗೆದುಹಾಕಲು ತೆರೆದ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ.
ತೆರೆದ ಶಸ್ತ್ರಚಿಕಿತ್ಸೆ
ಈ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯಲ್ಲಿ ಸೀಳುಗಾಯವನ್ನು ಮಾಡಿ, ಆ ಮೂಲಕ ಪಿತ್ತಕೋಶವನ್ನು ತೆಗೆದುಹಾಕುತ್ತಾರೆ. ಪಿತ್ತಕೋಶದ ಕಲ್ಲುಗಳ ತೊಂದರೆ ತೀವ್ರ ಸ್ವರೂಪದಲ್ಲಿದ್ದರೆ, ವೈದ್ಯರು ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಸೂಚಿಸುತ್ತಾರೆ. ಪಿತ್ತಕೋಶದ ಗೋಡೆಯು ದಪ್ಪವಾಗಿದ್ದರೆ, ಗಡುಸಾಗಿದ್ದರೆ, ಪಿತ್ತಕೋಶಕ್ಕೆ ಸೋಂಕಾಗಿದ್ದರೆ ಅಥವಾ ಈ ಮೊದಲು ಮಾಡಿದ ಶಸ್ತ್ರಚಿಕಿತ್ಸೆಯಲ್ಲಿ ನ್ಯೂನತೆಗಳಿದ್ದರೆ, ತೆರೆದ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ. ಶಸ್ತ್ರಚಿಕಿತ್ಸೆಯ ಬಳಿಕ ಒಂದು ವಾರ ಕಾಲ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆದು, ಆ ಮೇಲಿನ ಕೆಲವು ವಾರ ಮನೆಯಲ್ಲೇ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.
ಪಿತ್ತರಸ ಗ್ರಂಥಿ ಹಾಗೂ ಪಿತ್ತಕೋಶ ಎರಡರಲ್ಲೂ ಕಲ್ಲುಗಳಿದ್ದರೆ, ವೈದ್ಯರು ಮೊದಲು ಗ್ರಂಥಿಯ ಕಲ್ಲನ್ನು ತೆಗೆದುಹಾಕಿ, ಪಿತ್ತಕೋಶವನ್ನು ಆ ಬಳಿಕ ತೆಗೆದುಹಾಕಬಹುದು. ಒಂದು ವೇಳೆ ಪಿತ್ತರಸ ಗ್ರಂಥಿಯ ಕಲ್ಲನ್ನು ಉRಇಕ ವಿಧಾನದಲ್ಲಿ ತೆಗೆದರೆ, ಪಿತ್ತಕೋಶವನ್ನು ಆ ಮೇಲಿನ ದಿನಗಳಲ್ಲಿ ತೆಗೆದುಹಾಕಬಹುದು. ಎಂಡೊಸ್ಕೋಪಿಕ್ ವಿಧಾನದಲ್ಲಿ ಕತ್ತರಿಸುವ ಸಾಧನವನ್ನು ಪಿತ್ತರಸ ಗ್ರಂಥಿಯ ಬಳಿ ಇರಿಸಿ ಗ್ರಂಥಿಯನ್ನು ಹಿಗ್ಗಿಸುತ್ತಾರೆ. ಕಲ್ಲು ಗ್ರಂಥಿಯಿಂದ ಹೊರಬರುತ್ತದೆ. ಮೇದೋಜೀರಕ ಗ್ರಂಥಿಯಲ್ಲಿ ಇರುವ ಕಲ್ಲನ್ನು ಇದೇ ರೀತಿಯಿಂದ ಹೊರತೆಗೆಯುತ್ತಾರೆ.
ಶಸ್ತ್ರಚಿಕಿತ್ಸೆಯ ನಂತರ
ಶಸ್ತ್ರಚಿಕಿತ್ಸೆಯ ನಂತರವೂ ನಿಮ್ಮ ಪಿತ್ತಜನಕಾಂಗವು ನಿಮ್ಮ ಆಹಾರ ಜೀರ್ಣವಾಗಲು ಅಗತ್ಯವಿರುವಷ್ಟು ಪಿತ್ತರಸವನ್ನು ಉತ್ಪಾದಿಸುತ್ತಿರುತ್ತದೆ. ಆದರೆ ಆ ಮೇಲಿನ ದಿನಗಳಲ್ಲಿ ಮಲ ವಿಸರ್ಜನೆ ಜಾಸ್ತಿ ಆಗುವುದು ಹಾಗೂ ನೀರು ನೀರಾಗಿ ವಿಸರ್ಜನೆ ಆಗುತ್ತಿರುವುದು ನಿಮ್ಮ ಗಮನಕ್ಕೆ ಬರಬಹುದು. ಆದರೆ ಈ ಸಮಸ್ಯೆ ಸ್ವಲ್ಪ ದಿನಗಳಲ್ಲಿ ಕಡಿಮೆ ಆಗುತ್ತದೆ. ಪಿತ್ತಕೋಶ ತೆಗೆದು ಹಾಕಿದವರಲ್ಲಿ ನೂರರಲ್ಲಿ ಒಬ್ಬರಿಗೆ ಅತಿಸಾರದ ತೊಂದರೆ ಹಾಗೆಯೇ ಮುಂದುವರಿಯುವ ಸಾಧ್ಯತೆ ಇದೆ. ಒಂದು ವೇಳೆ ಈ ಸಮಸ್ಯೆ ಮುಂದುವರಿದರೆ, ಆಹಾರ ಕ್ರಮದಲ್ಲಿ ವ್ಯತ್ಯಾಸ ಮಾಡಿಕೊಂಡು, ಸ್ವಯಂ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ. ಮಸಾಲೆ, ಕೊಬ್ಬು, ಹಾಲಿನ ಉತ್ಪನ್ನ ಆಹಾರಗಳನ್ನು ಕಡಿಮೆ ಸೇವಿಸಬೇಕು. ಆಹಾರದಲ್ಲಿ ನಾರಿನ ಅಂಶವನ್ನು ಹೆಚ್ಚು ಸೇವಿಸುವುದರಿಂದ ಅತಿಸಾರವನ್ನು ನಿಯಂತ್ರಿಸಬಹುದು.