ಸಹನಾ ಕಾಂತಬೈಲು | Jul 27, 2012
ಇವರ ಹೆಸರು ಪಿ. ಕೆ. ನೀಲಾ. ವಯಸ್ಸು 69. ಅನಾರೋಗ್ಯ ದೇಹವನ್ನಷ್ಟೇ ಬಳಲಿಸಿದೆ, ಮನಸ್ಸನ್ನಲ್ಲ. ಹೊತ್ತುಹೊತ್ತಿಗೆ ಔಷಧಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯ ನಡುವೆಯೂ ಅವರ ಕೈತೋಟ ಮಾಡುವ ಉತ್ಸಾಹ ಮಾತ್ರ ಎಂದಿಗೂ ಕುಗ್ಗಿದ್ದಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದಲ್ಲಿ ಇರುವ ಪಡಾರು ಮನೆಯ ಒಡತಿ ಅವರು.
ಆ ಮನೆ ಅಂಗಳ ಪ್ರವೇಶಿಸುತ್ತಿದ್ದಂತೆ ಹೂವಿನ ಸುಂದರ ಲೋಕ ನಮ್ಮನ್ನು ಸ್ವಾಗತಿ ಸುತ್ತದೆ. 300ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳು ಅವರ ಆರೈಕೆಯಲ್ಲಿ ಬೆಳೆದಿವೆ. 20 ಬಗೆಯ ಗುಲಾಬಿ, 35 ಜಾತಿಯ ಕ್ರೋಟನ್, 22 ಬಗೆಯ ದಾಸವಾಳ, 9 ವಿಧದ ಸೇವಂತಿಗೆ, 8 ಜಾತಿಯ ಬಿಸ್ಕೆಟ್ ಹೂ, ನಾನಾ ನಮೂನೆಯ ಕ್ಯಾಕ್ಟಸ್, ಆರ್ಕಿಡ್, ಗೌರಿ ಹೂ, ಝೀನಿಯ, ಜರ್ಬೆರಾ, ಕನಕಾಂಬರ, ಮಲ್ಲಿಗೆ, ಸಂಪಿಗೆ ಸೇರಿದಂತೆ ವೈವಿಧ್ಯಮಯ ಪುಷ್ಪ ಭಂಡಾರವೇ ಅಲ್ಲಿ ಮೇಳೈಸಿದೆ. ಓಷಧೀಯ ಗಿಡಗಳು, ಹಣ್ಣಿನ ಸಸಿಗಳು, ತರಕಾರಿ ಗಿಡಗಳೂ ಇವೆ. ಮನೆ ಆವರಣದಲ್ಲೂ ತರತರದ ಹೂಕುಂಡಗಳನ್ನು ತೂಗು ಹಾಕಿ¨ªಾರೆ. ಇದರಿಂದ ಮನೆಗೆ ವಿಶೇಷ ಕಳೆ ಬಂದಿದೆ.
ಅನಾರೋಗ್ಯದ ಅಡ್ಡ ಪರಿಣಾಮದಿಂದ ಬಲಗೈಯಲ್ಲಿ ಕೊಂಚ ಶಕ್ತಿ ಕುಂದಿದೆ. ಆದರೆ, ಎಡಗೈಯಲ್ಲಿ ಗುಂಡಿ ತೋಡಿ ಗಿಡ ನೆಡುತ್ತಾರೆ. ಕೈತೋಟಕ್ಕೆ ಅವರು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಹಟ್ಟಿಗೊಬ್ಬರ, ಸುಡುಮಣ್ಣು ಇಷ್ಟರಿಂದಲೇ ಗಿಡಗಳು ಸೊಂಪಾಗಿ ಬೆಳೆದಿವೆ. ಗಿಡಗಳಿಗೆ ಹುಳ ಬಿದ್ದರೆ ಹೆಕ್ಕಿ ಎಸೆಯುತ್ತಾರೆಯೇ ಹೊರತು ಕ್ರಿಮಿನಾಶಕ ಸಿಂಪಡಿಸುವುದಿಲ್ಲ. ಅವರ ಪುಷ್ಪಸ್ನೇಹಿ ಸ್ವಭಾವಕ್ಕೆ ಪೂರಕರಾಗಿದ್ದವರು ಪತಿ ಪಡಾರು ಕೃಷ್ಣ ಭಟ್ಟರು. ಅವರು ಹಲವು ವರ್ಷಗಳ ಹಿಂದೆ ಕೊಡಗಿನ ಚಿಟ್ಟಳ್ಳಿ ಫಾರ್ಮ್ನಿಂದ ಹೂಕುಂಡ ಒಂದಕ್ಕೆ 3 ರೂಪಾಯಿಯಂತೆ 90 ಹೂಕುಂಡಗಳನ್ನು ತಂದದ್ದುಂಟು. ಆಗ ಅದಕ್ಕೆ ನೀರು ಹಾಕಿ ಪೋಷಿಸುವುದರಲ್ಲಿ ನೀಲಾ ಅವರಿಗೂ ದಿನಗಳೆದದ್ದೇ ಗೊತ್ತಾಗುತ್ತಿರಲಿಲ್ಲ. ಜೊತೆಗೆ ಕಣ್ಣಿಗೆ ಬೀಳುವ ವಿಶೇಷವೆನಿಸುವ ಗಿಡಗಳನ್ನು ಮನೆಗೆ ತಂದು ನೀರೆರೆಯುವುದೊಂದು ಅಭ್ಯಾಸ.
"ಗಿಡಗಳ ಒಡನಾಟದಲ್ಲಿ ಒಂಟಿತನ ಕಾಡುವುದಿಲ್ಲ. ಶರೀರ ಚಟುವಟಿಕೆಯಿಂದಿ ರುತ್ತದೆ' ಎನ್ನುವ ನೀಲಾ ತಮ್ಮ ಸವಾಲಿನ ಬದುಕನ್ನು ಕೈದೋಟದಲ್ಲಿ ಸುಂದರಗೊಳಿಸಿ ದ್ದಾರೆ. ಅವರು ಪಾಕ ಪ್ರವೀಣೆಯೂ ಹೌದು. ಈಗ ಹೂದೋಟದ ಹವ್ಯಾಸಕ್ಕೆ ಸೊಸೆಯ ಸಾಥಿಯಿದೆ.