ನಿರಂಜನ ವಾನಳ್ಳಿ | Jul 28, 2012
ಕಣ್ಣೆದುರು ನಡೆದ ಅತ್ಯಾಚಾರದ ಬಗ್ಗೆ ವರದಿಗಾರ ಪೊಲೀಸರಿಗೆ ತಿಳಿಸುವುದು ಮೊದಲ ಕರ್ತವ್ಯವಾಗಬೇಕಿತ್ತೋ ಅಥವಾ ಚಿತ್ರೀಕರಿಸುವುದೋ ಎಂಬುದನ್ನು ಭಾರತೀಯ ಪತ್ರಿಕಾ ಮಂಡಳಿ ಸ್ಪಷ್ಟಪಡಿಸಲಿ. ವೃತ್ತಿಧರ್ಮವೂ ಸಾಮಾಜಿಕ ಬದ್ಧತೆಯೂ ಎದುರು ಬದುರಾದಾಗ ಪತ್ರಕರ್ತರು ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ಅಸ್ಸಾಂ ಘಟನೆ ತೋರುಗಂಬವಾಗಲಿ.
ಪತ್ರಕರ್ತರಿಗೆ ಜವಾಬ್ದಾರಿಗಳಿವೆ. ಛಾಯಾಚಿತ್ರಗಳನ್ನು ತೆಗೆಯು ವುದು ಅವರ ಕರ್ತವ್ಯದ ಭಾಗ. ಆದರೆ ಕಣ್ಣೆದುರೇ ಹುಡುಗಿಯ ಮೇಲೆ ಅತ್ಯಾಚಾರ ನಡೆಯುವಾಗ ಪೊಲೀಸರಿಗೆ ತಿಳಿಸುವುದು ನಾಗರಿಕ ಜವಾಬ್ದಾರಿಯಾಗಿತ್ತು. ಆ ಸ್ಥಳದಲ್ಲಿದ್ದ ಪತ್ರಕರ್ತ ಯಾಕೆ ಪೊಲೀಸರಿಗೆ ತಿಳಿಸಲಿಲ್ಲ? ಆ ಪತ್ರಕರ್ತ ತನ್ನ ಕೆಲಸ ನಿಭಾಯಿಸಿಲ್ಲ.
ಈ ಮಾತನ್ನು ಹೇಳಿದವರು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್. ಜುಲೈ7ರಂದು ಅಸ್ಸಾಂನ ಗುವಹಾಟಿ ರೈಲು ನಿಲ್ದಾಣದಲ್ಲಿ ಹುಡುಗಿಯೊಬ್ಬಳ ಮೇಲೆ ಗುಂಪೊಂದು ಅತ್ಯಾಚಾರ ವೆಸಗಲು ಯತ್ನಿಸಿದ ಘಟನೆ ಈಗ ವಿಶ್ವವ್ಯಾಪಿಯಾಗಿ ಪ್ರಚಾರ ಪಡೆದಿದೆ. ಭಾರತದಲ್ಲಿ ಜನರ ಬದುಕು ಎಷ್ಟೊಂದು ಅಭದ್ರವೆಂದು ಹೇಳಲು ಮುಂದುವರಿದ ರಾಷ್ಟ್ರಗಳಿಗೆ ಮತ್ತೂಂದು ಆಧಾರ ಸಿಕ್ಕಿದೆ. ಈ ಘಟನೆಯ ತನಿಖೆ ಮುಂದುವರಿದಂತೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಒಬ್ಬ ಟಿವಿ ಪತ್ರಕರ್ತ ಹುಡುಗಿಯ ಮೇಲೆ ಗುಂಪು ದಾಳಿಯ ಈ ಪ್ರಕರಣದ ರೂವಾರಿಯಂತೆ! ಅವನು ಈ ಘಟನೆ ನಡೆಯುತ್ತಿರುವಾಗ, ಮದುವೆಗಳನ್ನು ವಿಡಿಯೋದವರು ಶೂಟಿಂಗ್ ಮಾಡುವ ರೀತಿಯಲ್ಲಿ ಶೂಟ್ ಮಾಡಿಕೊಂಡು ತಮ್ಮ "ನ್ಯೂಸ್ ಲೈವ್' ವಾಹಿನಿಯಲ್ಲಿ ಬಿತ್ತರಿಸಿ ಬೆನ್ನುತಟ್ಟಿಕೊಂಡಿದ್ದಾನೆ. ಇದರಿಂದ ಟಿವಿವಾಹಿನಿಯ ಟಿಆರ್‌ಪಿ ಪಾದರಸದಂತೆ ಮೇಲೇರಿದೆ. ಆದರೆ ಮಾಧ್ಯಮ ಪ್ರಚೋದಿತ ಈ ಪ್ರಕರಣ ನೈತಿಕವೇ, ಕಾನೂನು ಸಮ್ಮತವೇ ಎಂಬ ಪ್ರಶ್ನೆಗಳು ಚರ್ಚೆಗೆ ಬಂದು ಈ ದೃಶ್ಯವನ್ನು ಸೆರೆಹಿಡಿದು ಪ್ರಸಾರಮಾಡಿ ಬೀಗುತ್ತಿದ್ದ ಪತ್ರಕರ್ತ ಗೌರವ್ ಜ್ಯೋತಿ ನಿಯೋಗನ ಕುತ್ತಿಗೆಗೆ ಸುತ್ತಿಕೊಂಡಿದೆ.
ಜನರಿಗೆ ಕ್ಷಣಕ್ಷಣಕ್ಕೂ ರುಚಿಕರ- ರೋಚಕ ಸುದ್ದಿ ಒದಗಿ ಸಬೇಕೆಂಬ ಸ್ಪರ್ಧೆಗೆ ಬಿದ್ದಿರುವ 24 ಗಂಟೆಗಳ ಸುದ್ದಿ ವಾಹಿನಿಗಳು ಎಂಥ ಅಪಾಯಕರ, ಅನೈತಿಕ ಮಾರ್ಗಗಳನ್ನು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಬಳಸುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿರದ ವಿಷಯವೇನಲ್ಲ. ಅಮೃತಸರದಲ್ಲಿ ಕೆಲವು ವರ್ಷಗಳ ಹಿಂದೆ ಹೆಂಗಸೊಬ್ಬಳು ನ್ಯಾಯ ಬೇಡಿ ಧರಣಿ ಕುಳಿತಾಗ, ಒಬ್ಬ ಕೇಬಲ್ ಪತ್ರಕರ್ತ "ನೀನು ಹೀಗೆ ಸುಮ್ಮನೇ ಧರಣಿ ಕುಳಿತರೆ ಪ್ರಯೋಜನವಿಲ್ಲ. ಯಾರೂ ನಿನ್ನನ್ನು ಕೇಳುವುದಿಲ್ಲ. ನೀನು ಬಟ್ಟೆ ಬಿಚ್ಚಿ ಓಡು, ನಾನು ಸುದ್ದಿ ಮಾಡುತ್ತೇನೆ, ನಿನ್ನ ಧರಣಿ ಪ್ರಸಿದ್ಧವಾಗುತ್ತದೆ' ಎಂದು ಪುಸಲಾಯಿಸಿ ಆಕೆಯ ಬಟ್ಟೆ ಬಿಚ್ಚಿಸಿ ಓಡಿಸಿದ್ದ. ಮುಖ್ಯವಾಗಿ ವಾಹಿನಿಗಳು ತಮ್ಮ ಜನಪ್ರಿಯತೆ ಉಳಿಸಿಕೊಳ್ಳುವುದಕ್ಕಾಗಿ ಹಾಗೂ ಹೆಚ್ಚಿಸಿಕೊಳ್ಳುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತವೆ ಎಂಬ ಸಂಗತಿ ಸಮಾಜದ ಗಮನಕ್ಕೆ ಬಂದಿದೆ. ಅದಕ್ಕೇ ಅಲ್ಲಲ್ಲಿ ಟಿವಿ ಚಾನಲ್ಲು ಎಂದರೆ ಛೀ... ಥೂ... ಎನ್ನುವ ದಿನಗಳು ಬಂದಿವೆ.
ಗುವಹಾಟಿಯ ಘಟನೆಯಲ್ಲಿ ಮೊದಲ ನೋಟಕ್ಕೇ ಪತ್ರಕರ್ತ ತಪ್ಪೆಸಗಿರುವುದು ಸಾಬೀತಾಗುತ್ತದೆ. ವರದಿಗಾರ ನಡೆದುದನ್ನು ವರದಿ ಮಾಡಬೇಕೇ ವಿನಾ ತಾನೇ ಪ್ರಕರಣವನ್ನು ಹುಟ್ಟುಹಾಕಬಾರದು. ಇಲ್ಲಿ ದೊಡ್ಡ ಸುದ್ದಿ ಮಾಡುವ ಉಮೇದಿನಿಂದ ಹುಡುಗಿಯ ಮೇಲೆ ಗುಂಪು ದಾಳಿಯನ್ನು ನಿಯೋಜಿಸಿದ್ದೇ ಈ ವಾಹಿನಿಯ ವರದಿಗಾರ ಎಂಬ ಆರೋಪವಿದೆ. ಇದು ಸತ್ಯವೇ ಆದರೆ ಅಕ್ಷಮ್ಯ. ಇಲ್ಲವಾದರೆ ಅವನು ಕ್ಯಾಮರಾದೊಂದಿಗೆ ಸಿದ್ಧವಾಗಿರಲು ಹೇಗೆ ಸಾಧ್ಯವಿತ್ತು? ಅವನಿಗೆ ಮಾತ್ರ ಈ ಪ್ರಕರಣದ ಸುಳಿವು ಹೇಗೆ ಸಿಕ್ಕಿತ್ತು? ಇದು ಘಟನೆಯ ಒಂದು ಮುಖ. ಈ ಪ್ರಕರಣದಲ್ಲಿ ಪತ್ರಕರ್ತನ ಪಾತ್ರವೇನಾಗಬೇಕಿತ್ತು ಎಂಬುದು ಚರ್ಚೆಯಾಗುತ್ತಿರುವ ಇನ್ನೊಂದು ಬಹಳ ಮುಖ್ಯ ಮಜಲು. ಅಸ್ಸಾಂ ಮುಖ್ಯಮಂತ್ರಿ ಪ್ರಶ್ನಿಸುತ್ತಿರುವುದು "ನೀವು ಮೊದಲು ನಾಗರಿಕರೋ ಅಥವಾ ಪತ್ರಕರ್ತರೋ' ಎಂಬುದಾಗಿ. "ನಾಗರಿಕರಾಗಿ ಹುಡುಗಿಯೊಬ್ಬಳ ಮೇಲೆ ನಿಮ್ಮ ಕಣ್ಣೆದುರಿಗೆ ಅತ್ಯಾಚಾರ ನಡೆಯುತ್ತಿದ್ದರೆ ಹೇಗೆ ಸುಮ್ಮನಿದ್ದಿರಿ? ತಪ್ಪಿಸಲು ಪ್ರಯತ್ನಿಸುವುದು ಮಾನವೀಯ ಕರ್ತವ್ಯವಾಗಿತ್ತು. ಪೊಲೀಸರಿಗೆ ತಿಳಿಸುವುದು ನಾಗರಿಕ ಜವಾಬ್ದಾರಿಯಾಗಿತ್ತು. ಅವೆರಡನ್ನೂ ಮಾಡದೇ ಅತ್ಯಾಚಾರ ಪ್ರಕರಣದ ಶೂಟಿಂಗ್ ಮಾಡಿದ್ದು, ಅದನ್ನು ತಮ್ಮ ವಾಹಿನಿಯಲ್ಲಿ ಬಿತ್ತರಿಸಿ ಟಿಆರ್‌ಪಿ ಹೆಚ್ಚಿಸಿಕೊಂಡಿದ್ದು ನಾಗರಿಕ ಮನುಷ್ಯ ಮಾಡುವ ಕೆಲಸವೇ?' ಎಂಬುದು ಗೊಗೋಯ್ ಅವರ ಪ್ರಶ್ನೆ. ಇದೆಲ್ಲವೂ ಈಗ ತನಿಖೆಯಾಗುತ್ತಿದೆ. ಇಡೀ ಘಟನೆಯಲ್ಲಿ ಇನಿತಾದರೂ ಟಿವಿ ವರದಿಗಾರನ ಪಾತ್ರವಿದ್ದರೆ ಗೊಗೋಯ್ ಕೇಳುತ್ತಿರುವ ಪ್ರಶ್ನೆಗಳಲ್ಲಿ ಅರ್ಥವಿದೆ.
ಪತ್ರಕರ್ತರಿಗೆ ಕರ್ತವ್ಯ ಮೊದಲೋ, ಸಾಮಾಜಿಕ ಜವಾಬ್ದಾರಿಯೋ ಎಂಬ ಪ್ರಶ್ನೆ ಉದ್ಭವವಾಗಿರುವುದು ಇದೇ ಮೊದಲಲ್ಲ. ಪತ್ರಿಕೋದ್ಯಮದ ಆರಂಭದ ದಿನಗಳಿಂದಲೂ ಈ ಪ್ರಶ್ನೆ ಯನ್ನು ಕೇಳಲಾಗುತ್ತಿದೆ. ಪತ್ರಿಕಾ ಛಾಯಾಗ್ರಾಹಕರಾದ ನಿಮ್ಮೆದುರಿಗೆ ಒಬ್ಬ ವ್ಯಕ್ತಿ ಸೀಮೆ ಎಣ್ಣೆ ಸುರಿದುಕೊಂಡು ಕಡ್ಡಿಗೀರಿ ಆತ್ಮಹತ್ಯೆಗೆ ಪ್ರಯತ್ನಿಸಿದರೆ, ನೀವು ಅದನ್ನು ತಪ್ಪಿಸುತ್ತೀರೋ ಅಥವಾ ಅವನು ಬೆಂಕಿಹಚ್ಚಿಕೊಂಡು ಸಾಯುವುದನ್ನು ಕ್ಲಿಕ್ಕಿಸುತ್ತೀರೋ? ಪ್ರಶ್ನೆ ಸರಳ. ಉತ್ತರ ಮಾತ್ರ ಅವರವರ ಮೂಗಿನ ನೇರಕ್ಕೆ ಬರುತ್ತದೆ! ಹಿಂದೆ ನರಹಂತಕ ವೀರಪ್ಪನ್ ಅಡಗುತಾಣ ಪೊಲೀಸರಿಗೆ ತಿಳಿಯುತ್ತಿರಲಿಲ್ಲ. ಆದರೆ ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್. ಗೋಪಾಲ್ ಆಗಾಗ ಅವನನ್ನು ಸಲೀಸಾಗಿ ಭೇಟಿ ಮಾಡುತ್ತಿದ್ದ. ಸಮಾಜ ವಿದ್ರೋಹಿಯಾದ ವೀರಪ್ಪನ್ ಅಡಗು ತಾಣ ಗೊತ್ತಿರುವಾಗ ಅದನ್ನು ಪೊಲೀಸರಿಗೆ ತಿಳಿಸುವುದು ಗೋಪಾಲರ ನಾಗರಿಕ ಕರ್ತವ್ಯವೋ ಅಥವಾ ಗುಟ್ಟಾಗಿಡುವುದು ಅವರ ವೃತ್ತಿಧರ್ಮವೋ ಎಂಬ ಚರ್ಚೆ ಆಗ ನಡೆಯಿತು. ತನ್ನ ಸುದ್ದಿಮೂಲವನ್ನು ಸಂರಕ್ಷಿಸುವುದು, ಪತ್ರಕರ್ತರ ವೃತ್ತಿಬದ್ಧತೆಗಳಲ್ಲಿ ಒಂದು. ಸುದ್ದಿಮೂಲವನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡದ ಹಕ್ಕು ಪತ್ರಕರ್ತರಿಗೆ ಇದೆ. ಸಾಮಾಜಿಕ ಹಿತದೃಷ್ಟಿಯಿಂದ ಸುದ್ದಿಮೂಲದ ಗುಟ್ಟು ರಟ್ಟುಮಾಡುವುದು ಅನಿವಾರ್ಯವಾದರೆ, ನ್ಯಾಯಾಲಯಗಳಲ್ಲಿ ಇನ್ ಕ್ಯಾಮರಾ ಪ್ರೊಸೀಡಿಂಗ್‌ನಲ್ಲಿ ಮಾತ್ರ, ಪತ್ರಕರ್ತ ನ್ಯಾಯಾಲಯಕ್ಕೆ ತಿಳಿಸಬೇಕೆಂದು ಕೋರ್ಟು ಆದೇಶಿಸಿದ್ದಿದೆ. ಅಂದರೆ ಸುದ್ದಿಮೂಲದ ರಕ್ಷಣೆ ವೃತ್ತಿಧರ್ಮವಾದರೂ ಪ್ರಶ್ನಾತೀತ ಹಕ್ಕಲ್ಲ. ಅದು ಸಮಾಜದ ಹಿತಕ್ಕಿಂತ ದೊಡ್ಡದಲ್ಲ. ಭಾರತೀಯ ಮಾಧ್ಯಮ ಕೆಲಸ ಮಾಡುವುದೇ ಸಾಮಾಜಿಕ ಜವಾಬ್ದಾರಿಯ ಸಿದ್ಧಾಂತಕ್ಕೆ ಬದ್ಧವಾಗಿ.
ಗುವಹಾಟಿಯ ಪ್ರಕರಣದಲ್ಲಿ ಬ್ರೇಕಿಂಗ್ ನ್ಯೂಸ್ ಕೊಟ್ಟು ಮೀಸೆ ತಿರುವುವುದಕ್ಕಾಗಿ ವರದಿಗಾರ ಜ್ಯೋತಿ ನಿಯೋಗನೇ ಹುಡುಗಿಯ ಮೇಲೆ ಗುಂಪು ಅತ್ಯಾಚಾರವೆಸಗುವುದಕ್ಕೆ ಪುಸಲಾಯಿಸಿದ್ದರೆ, ಅಂಥದೊಂದು ಘಟನೆ ನಡೆಯುತ್ತದೆ ಎಂಬ ನಿರೀಕ್ಷೆಯಲ್ಲಿ ಕ್ಯಾಮರಾ ಹಿಡಿದು ಕಾದು ಕುಳಿತಿದ್ದರೆ ಅವನನ್ನು ಮಾಧ್ಯಮ ವೃತ್ತಿಯಿಂದ ಜೀವಾವಧಿ ಹೊರಗಿಡುವ ಜವಾಬ್ದಾರಿಯನ್ನು ಭಾರತೀಯ ಮಾಧ್ಯಮಗಳು ವಹಿಸಬೇಕು. ಪ್ರಾಥಮಿಕ ವರದಿಗಳು ಟಿವಿ ವರದಿಗಾರನ ಕುಚೋದ್ಯದ ಬಗ್ಗೆ ಬೊಟ್ಟುಮಾಡುತ್ತಿವೆಯಾದರೂ, ಈಗಲೇ ನಿರ್ಣಯಕ್ಕೆ ಬರುವುದಕ್ಕೆ ಕಾಲ ಪಕ್ವವಾಗಿಲ್ಲ. ಇನ್ನೂ ತನಿಖೆ ನಡೆದು ಸತ್ಯ ಹೊರಬರಬೇಕು. ಆಕಸ್ಮಿಕವಾಗಿ ತನಗೆ ಈ ಅವಾಂತರದ ಘಟನೆಗಳು ದಾಖಲಿಸಲು ಸಿಕ್ಕವೆಂದು ವರದಿಗಾರ ವಾದಿಸಿದರೆ, ಸಿಎಂ ತರುಣ ಗೊಗೋಯ್ ಹೇಳುವಂತೆ ಆತ ಪೊಲೀಸರಿಗೆ ತಿಳಿಸುವುದು ಮೊದಲ ಕರ್ತವ್ಯವಾಗಬೇಕಿತ್ತೋ ಅಥವಾ ಚಿತ್ರೀಕರಿಸುವುದೋ ಎಂಬುದನ್ನು ಭಾರತೀಯ ಪತ್ರಿಕಾ ಮಂಡಳಿ ಸ್ಪಷ್ಟಪಡಿಸಲಿ. ಅಂತೂ ಈ ಘಟನೆ ಭಾರತೀಯ ಮಾಧ್ಯಮ ಚರಿತ್ರೆಯಲ್ಲಿ ವೃತ್ತಿಧರ್ಮವೂ ಸಾಮಾಜಿಕ ಬದ್ಧತೆಯೂ ಎದುರುಬದುರಾದಾಗ ಪತ್ರಕರ್ತರು ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ತೋರುಗಂಬವಾಗಲಿ.
ಮುಗಿಸುವ ಮುನ್ನ: ಭಾರತಕ್ಕೆ ಹೋಗುತ್ತಿದ್ದೇನೆ, ವಾಪಸು ಬಂದರೆ ನಿನ್ನ ಪುಣ್ಯ. ಯಾಕೆಂದರೆ ಅಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದಾಗಿ ಪರದೇಶೀಯನೊಬ್ಬ ಮುಂಬೈ ದಾಳಿಯ ಬಳಿಕ ಭಾರತಕ್ಕೆ ಭೇಟಿ ನೀಡುವಾಗ ಹೆಂಡತಿಗೆ ಹೇಳಿಬಂದನೆಂದು ಎಲ್ಲೋ ಓದಿದ ನೆನಪು. ಇಂಥ ಆಕಸ್ಮಿಕಗಳಿಂದ ಒಂದು ದೇಶದ ವ್ಯವಸ್ಥೆಯ ಬಗ್ಗೆ ಮಾತನಾಡುವುದು ಅತಿಶಯದ ಮಾತು. ಅಂಥದ್ದು ಅಮೆರಿಕದಲ್ಲೂ ಘಟಿಸುತ್ತಿಲ್ಲವೇ? ಮೊನ್ನೆಮೊನ್ನೆ ಸಿನೆಮಾ ಟಾಕೀಸಿನಲ್ಲೊಬ್ಬ ಯದ್ವಾತದ್ವಾ ಗುಂಡುಹಾರಿಸಿ ಜೋಕ್‌ಗಾಗಿ ಜನರನ್ನು ಕೊಂದಿದ್ದಾನೆ! ಹಾಗೆ ನೋಡಿದರೆ ಆಧುನಿಕ ಬದುಕಿನ ಗುಣವೇ ಅಭದ್ರತೆ! ಭದ್ರತೆ ಹೆಚ್ಚಿದಷ್ಟೂ ಅಭದ್ರತೆ ಕಾಡುತ್ತದೆ. ಇದಕ್ಕೆ ಭಾರತವೂ ಹೊರತಲ್ಲ. ಈ ಕಾರಣದಿಂದ ದೇಶವನ್ನು ಹೀಗಳೆಯುವವರು, ಇಷ್ಟೆಲ್ಲಾ ತೊಂದರೆ-ತಾಪತ್ರಯಗಳ ನಡುವೆಯೂ ನಮ್ಮ ಜನ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಮಾಡಿಕೊಂಡು ಬಯಲಲ್ಲಿ ಆರಾಮ ಮಲಗುವುದನ್ನು, ಎಂಥದೇ ಬರ ಬಂದರೂ ರಾಜಕಾರಣಿಗಳು- ಅಧಿಕಾರಿಗಳ ಐಷಾರಾಮೀ ಜೀವನಕ್ಕೆ ಬರಗಾಲವಿಲ್ಲವೆಂಬುದನ್ನು ಒಮ್ಮೆ ಬಂದು ನೋಡಲಿ. ಜಗತ್ತಿನಲ್ಲಿ ಭಾರತದಷ್ಟು ಸುಖೀಗಳ ದೇಶವಿದೆಯೆ?