ಜಮ್ಮು : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 16 ಮಂದಿ ಅಮರನಾಥ ಯಾತ್ರಿಗಳು ದುರ್ಮರಣಕ್ಕೀಡಾಗಿದ್ದು, ಇತರೆ 16 ಮಂದಿ ಗಾಯಗೊಂಡಿದ್ದಾರೆ.ಅಮರನಾಥ ಯಾತ್ರಿಕರನ್ನು ಹೊತ್ತೂಯ್ಯುತ್ತಿದ್ದ ಟ್ರಕ್ ಒಂದು ಜಮ್ಮು ನಗರದಿಂದ 50 ಕಿ.ಮೀ. ದೂರದ ಸಾಂಬಾ ಜಿಲ್ಲೆಯ ಮಾನಸರ್ ವಲಯದ ಜಮೂÅಹ ಮೋರ್ಹದಲ್ಲಿ ಪ್ರಪಾತವೊಂದಕ್ಕೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಮರನಾಥದಲ್ಲಿ ಸಾಮೂಹಿಕ ಅಡುಗೆ ಕಾರ್ಯದಲ್ಲಿ ನಿರತವಾಗಿರುವ 34 ಮಂದಿ ಯಾತ್ರಿಕರು ಟ್ರಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಸ್ಕಿಡ್ ಆದ ಟ್ರಕ್, ಭಾರೀ ಆಳದ ಕಂದಕಕ್ಕೆ ಉರುಳಿತು.ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು, ಸೇನೆ ಹಾಗೂ ಗಡಿ ಭದ್ರತಾ ಪಡೆಯ ಸೈನಿಕರು ಧಾವಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಗಾಯಾಳುಗಳನ್ನು ಜಮ್ಮುವಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.9 ಮಂದಿ ಘಟನಾ ಸ್ಥಳದಲ್ಲಿಯೇ ಸಾವಿಗೀಡಾದರೆ ಇತರೆ 7 ಮಂದಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದರು. ಟ್ರಕ್‌ನಲ್ಲಿದ್ದ ಇಬ್ಬರು ಯಾತ್ರಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.ಪ್ರಸಕ್ತ ಸಾಲಿನ ಅಮರನಾಥ ಯಾತ್ರೆ ಆರಂಭಗೊಂಡ ಬಳಿಕ ತಿಂಗಳ ಅವಧಿಯಲ್ಲಿ ಜಮ್ಮು ಪ್ರದೇಶದಲ್ಲಿ ಸಂಭವಿಸಿದ ಎರಡನೇ ಅಪಘಾತ ಇದಾಗಿದ್ದು, ಜುಲೈ 14ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಂಬನ್ ಸಮೀಪ ಸರಕಾರಿ ಬಸ್ ಒಂದು ಕಂದಕಕ್ಕೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ 15 ಮಂದಿ ಮೃತಪಟ್ಟಿದ್ದರು.