Wednesday, May 22, 2013
Last Updated: 12:20:16 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪುರುಷನ ಸಾಮ್ರಾಜ್ಯ ಹೊರಗೆ, ಮಹಿಳೆ ಮನೆಯೊಳಗೆ!
    • ಭಲೇ ಗಂಡು ರಚನೆ
    • ಚಕಿತ ಚಿತ್ತ
      • ಫಾ| ಪ್ರಶಾಂತ್‌ ಮಾಡ್ತ | Aug 04, 2012

        ಸಮಾಜದಲ್ಲಿರುವ ಗಂಡುತನ ಕಲ್ಪನೆಯ ತಳಹದಿಯೆಂದರೆ ಹಲವು ಜನಾಂಗಗಳಲ್ಲಿ ಪ್ರಚಲಿತವಾಗಿರುವ ಪಿತೃಪ್ರಧಾನ ವ್ಯವಸ್ಥೆ ಹಾಗೂ ಅದರೊಳಗೆ ಮೊಳಕೆಯೊಡೆಯುವ ಪುರುಷ ಪ್ರಾಧಾನ್ಯ. ಬಹುತೇಕ ಜನಾಂಗಗಳಲ್ಲಿ, ಬಹಳಷ್ಟರ ಮಟ್ಟಿಗೆ, ಹೆಣ್ಣನ್ನು ಹತೋಟಿಯಲ್ಲಿರಿಸಿ, ದಮನಿಸಿ, ಪಳಗಿಸಿ, ದೀನಳನ್ನಾಗಿ ಮಾಡುವುದೇ ಸಂಸ್ಕೃತಿಯ ರಕ್ಷಣೆ.

        ಗಂಡು/ಹೆಣ್ಣು ಎಂಬ ವರ್ಗಗಳು ಸೈದ್ಧಾಂತಿಕ ರಚನೆಗಳು ಅಥವಾ ಸಾಮಾಜಿಕ ಹೆಣಿಕೆಗಳು. ಗಂಡುತನ/ಹೆಣ್ಣುತನ ಕಲ್ಪನೆಗಳನ್ನು ಬಟ್ಟೆಯ ಮೇಲೆ ಕಸೂತಿ ಕೆಲಸದಂತೆ, ತೆಂಗಿನ ಸೋಗೆಯನ್ನು ಮಡಲು ಆಗಿ ಹೆಣೆಯುವಂತೆ ರಚಿಸಲಾಗುತ್ತದೆ. ಗಂಡು-ಹೆಣ್ಣುಗಳು ಸಾಮಾಜಿಕವಾಗಿ ಕಟ್ಟಿದ ಪಾತ್ರಗಳು. ಗಂಡು ಕಲ್ಪನೆ, ಹೆಣ್ಣು ಕಲ್ಪನೆಗಳನ್ನು ರಚಿಸುವುದೇ ಶ್ರೇಣೀಕೃತ ತರ-ತಮಗಳ ಚೌಕಟ್ಟಿನಲ್ಲಿ. ಗಂಡು ಮೇಲ್ದರ್ಜೆ, ಹೆಣ್ಣು ಕೆಳದರ್ಜೆ. ಗಂಡು-ಹೆಣ್ಣುಗಳ ನಡುವೆ ಬರೇ ದೇಹರೂಪ ವ್ಯತ್ಯಾಸಗಳಿದ್ದರೂ ಈ ವ್ಯತ್ಯಾಸಗಳನ್ನೇ ತರ-ತಮಗಳನ್ನಾಗಿ ಮಾಡಿ ಗಂಡುತನ (ಗಂಡಾಗಿರುವುದೆಂದರೆ ಹೀಗಿರಬೇಕು...) ಹಾಗೂ ಹೆಣ್ಣುತನ (ಹೆಣ್ಣಾಗಿರುವುದೆಂದರೆ ಹೀಗಿರಬೇಕು) ಹೆಣೆಯುವುದು ಸಾಮಾಜಿಕ, ಸಾಂಪ್ರದಾಯಿಕ ವಲಯದಲ್ಲಿ.

        ಸಮಾಜದಲ್ಲಿ ಬಳಕೆಯಲ್ಲಿರುವ ಗಂಡು-ತನದ ಕಲ್ಪನೆಯನ್ನು, ಗಂಡುತನವನ್ನು ಯಾವ ಚೌಕಟ್ಟಿನಲ್ಲಿ ರಚಿಸಲಾಗಿದೆ? ಗಂಡುತನ ಕಲ್ಪನೆಯ ತಳಹದಿಯೆಂದರೆ ಹಲವು ಜನಾಂಗಗಳಲ್ಲಿ ಪ್ರಚಲಿತ
        ವಾಗಿರುವ ಪಿತೃಪ್ರಧಾನ ವ್ಯವಸ್ಥೆ ಹಾಗೂ ಅದರೊಳಗೆ ಮೊಳಕೆ ಯೊಡೆಯುವ ಪುರುಷ ಪ್ರಾಧಾನ್ಯ. ಪಿತೃಪ್ರಧಾನ ವ್ಯವಸ್ಥೆಯು ಗಂಡಸಿನ ಹಾಗೂ ಹೆಂಗಸಿನ ಕಾರ್ಯವ್ಯಾಪ್ತಿ, ಕರ್ತವ್ಯ, ಮನೋಧರ್ಮ ಹಾಗೂ ದರ್ಜೆಯನ್ನು ನಿಯಮಬದ್ಧಗೊಳಿಸಿ, ಮೇಲು-ಕೀಳು, ತರ-ತಮ ಶ್ರೇಣಿಯನ್ನು ಸ್ಥಾಪಿಸುತ್ತಾ, ಗಂಡು ಗುಣಗಳನ್ನು ಮೇಲಕ್ಕೇರಿಸಿ, ಹೆಣ್ಣು ಲಕ್ಷಣಗಳನ್ನು ಗೌಣ ಗೊಳಿಸುತ್ತದೆ. ಈ ಮೌಲ್ಯಗಳನ್ನು ಶಿಕ್ಷಣ, ಧರ್ಮ, ಸಂಪ್ರದಾಯ, ಸಂಸ್ಕೃತಿ ಹಾಗೂ ಕುಟುಂಬ ಮರ್ಯಾದೆ ಎಂಬ ವ್ಯವಸ್ಥೆಗಳ ಮೂಲಕ ಹೆಣ್ಣಿನ ಮನಸ್ಸಿನಲ್ಲಿ ಎರಕ ಹೊಯ್ದು, ಅವರು ಗಂಡಸರಿಗಿಂತ ಕೆಳಮಟ್ಟದವರು ಎಂದು ಸ್ಥಾಪಿಸಲಾಗುತ್ತದೆ. ಪುರುಷಪ್ರಧಾನ ಮೌಲ್ಯಗಳನ್ನು ವಿರೋಧಿಸುವ ಹೆಣ್ಣುಗಳನ್ನು ದಮನಿಸಿ, ಅವರಿಗೆ ಬುದ್ಧಿಕಲಿಸಿ, ಬಲಪ್ರಯೋಗದಿಂದ ಸಂಪ್ರದಾಯಬದ್ಧ ಹೆಣ್ಣಾಗಿರುವಂತೆ ಕಡ್ಡಾಯಗೊಳಿಸಲಾಗುತ್ತದೆ. ಬಹುತೇಕ ಜನಾಂಗಗಳಲ್ಲಿ, ಬಹಳಷ್ಟರ ಮಟ್ಟಿಗೆ, ಹೆಣ್ಣನ್ನು ಹತೋಟಿಯಲ್ಲಿರಿಸಿ, ದಮನಿಸಿ, ಪಳಗಿಸಿ, ದೀನಳನ್ನಾಗಿ ಮಾಡುವುದೇ ಸಂಸ್ಕೃತಿಯ ರಕ್ಷಣೆ.

         ಪಿತೃಪ್ರಧಾನ ವ್ಯವಸ್ಥೆಯೆಂದರೆ ಹೆಣ್ಣಿನ ಆಶೋತ್ತರಗಳು ಗಂಡಿನ ಹಿತಾಸಕ್ತಿಗಳಿಗೆ ಅಡಿಯಾಳಾದಾಗ ಉಂಟಾಗುವ ಯಜಮಾನಿ¤ಕೆಯ ಸಂಬಂಧಗಳು. ರಾಜನು ರಾಜ್ಯದ ಯಜಮಾನ, ಗಂಡು ಮನೆಯೆಂಬ ರಾಜ್ಯದ ರಾಜ. ಹೆಣ್ಣಿನ ದೇಹವು ಗಂಡಿನ ಸೊತ್ತು. ಗಂಡಸರದ್ದು ಜಗದಗಲ ಸಾರ್ವಜನಿಕ ವ್ಯಾಪ್ತಿ, ಹೆಂಗಸರದ್ದು ಖಾಸಗಿ ಮನೆಯಂಗಳ ವ್ಯಾಪ್ತಿ. ಮನೆಯಂಗಳ ವ್ಯಾಪ್ತಿಗೆ ಸೇರಿದ ಹೆಣ್ಣು, ಹೆಂಡತಿಯಾಗಿ, ತಾಯಿಯಾಗಿ, ಮಗಳಾಗಿ, ಸೋದರಿಯಾಗಿ ಇರತಕ್ಕದ್ದು! ಸಾರ್ವಜನಿಕ ವ್ಯಾಪ್ತಿಯಲ್ಲಿ ವ್ಯವಹರಿಸುವ ಗಂಡು ಗಂಡನಾಗಿ, ತಂದೆಯಾಗಿ, ಪುರೋಹಿತನಾಗಿ, ಕಾನೂನು ರೂಪಕನಾಗಿ ವ್ಯವಹರಿಸತಕ್ಕದ್ದು! ಈ ಹಲವು "ತಕ್ಕದ್ದು'ಗಳೇ ಸಂಸ್ಕೃತಿಯೆನಿಸುತ್ತವೆ. ಮನೆಯಂಗಳ ವ್ಯಾಪ್ತಿಯ ಲಕ್ಷಣರೇಖೆಯನ್ನು ದಾಟಿ ಸಾರ್ವಜನಿಕ ವ್ಯಾಪ್ತಿಗೆ ಹೆಣ್ಣು ಕಾಲಿಟ್ಟಾಗ ಸಂಸ್ಕೃತಿ ಸಂಪ್ರದಾಯಗಳಿಗೆ ಗೆದ್ದಲು ಕಟ್ಟುತ್ತದೆ ಎಂದು ನಂಬುವ  ಗಂಡಸರು ಅಂತಹ ಹೆಣ್ಣುಗಳ ಮುಡಿಯಂ ಪಿಡಿದೆಳೆದು ಸದೆಬಡಿದು ಮನೆಯಂಗಳದೊಳಗೆ ಕೂಡಿಸಿಡುವ ಪರಿಪಾಟು ಇರುತ್ತದೆ. ಹೆಣ್ಣಾದವಳು, ಗಂಡಸರಿಗೆ ಆಪ್ಯಾಯಮಾನವಾದ, ಸಂಪ್ರದಾಯಬದ್ಧ, ಗರತಿ ಗೌರಮ್ಮನಂತೆ ವರ್ತಿಸುವುದು ಸಂಸ್ಕೃತಿಯ ನಂಬಲರ್ಹವಾದ ಅಧಿಕೃತ ಪುರಾವೆ ಎಂಬ ನಂಬಿಕೆ. ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿ ನಿಯಮಿಸುವುದು ಗಂಡು. ಹೊರತೋರ್ಕೆಗೆ ಮುಗ್ಧವಾಗಿ ಕಾಣುವ ಮಾನವ ಹಕ್ಕುಗಳೆಂದರೆ ನಿಜಕ್ಕೂ ಗಂಡಸರ ಹಕ್ಕುಗಳು. ರಾಜಕೀಯ ಪ್ರಭುತ್ವವೆಂದರೆ ಪಿತೃಪ್ರಧಾನ ಪ್ರಭುತ್ವ.

        ಗಂಡು ಎಂಬ ಕಲ್ಪನೆಯನ್ನು ಹೇಗೆ ಹೆಣೆಯುತ್ತಾರೆ? ಯಾವ ಲಕ್ಷಣಗಳನ್ನು ಹೆಣ್ಣುತನ ಎಂದು ಸಮಾಜ ಒಪ್ಪುತ್ತದೋ ಅವುಗಳನ್ನು ತಿರಸ್ಕರಿಸಿ, ಅವಕ್ಕೆ ತದ್ವಿರುದ್ಧವಾದ ಲಕ್ಷಣಗಳೇ ಗಂಡುತನದ ಪಂಚಾಂಗವೆಂದು ಭಾವಿಸುವುದು. ಹೆಣ್ಣು ಭಾವುಕಳು, ಗಂಡಾಗುವುದೆಂದರೆ ಅತೀ ಭಾವುಕನಾಗದಿರು ವುದು, ಹೆಣ್ಣು ಸೂಕ್ಷ್ಮ ಪ್ರವೃತ್ತಿಯವಳು, ಗಂಡು ಎಂದರೆ ಸೂಕ್ಷ್ಮ ಪ್ರವೃತ್ತಿಯವನಾಗದಿರುವುದು, ಹೆಣ್ಣು ನಯವಂತಿಕೆಯವಳು, ಗಂಡಾಗುವುದೆಂದರೆ ದೊರಗು ವರ್ತನೆಯನ್ನು ಆವಾಹನೆ ಮಾಡಿಕೊಳ್ಳುವುದು. ಹೆಣ್ಣಿನದು ಮೆಲುದನಿ, ಗಂಡಸಾಗು ವುದೆಂದರೆ ಗಂಭೀರ, ಗಡಸು ಧ್ವನಿಯನ್ನು ರೂಢಿಸಿಕೊಳ್ಳುವುದು. ಗಂಡೆದೆಗೆ ಅತಿಮೌಲ್ಯವನ್ನೂ ಹೆಣ್ಣಿನ ಮಮತೆಗೆ ಅಪಮೌಲ್ಯವನ್ನೂ ಒದಗಿಸಲಾಗುತ್ತದೆ. ಅಳುವುದು ಹೆಣ್ಣುಗಳ ಲಕ್ಷಣ. ಗಂಡಸರು ಅಳುತ್ತಾರೆ, ಕಣ್ಣೀರು ಸುರಿಸುತ್ತಾರೆ- ಬಿಯರ್‌ ಬಾಟಿÉಯ ಬಿರಡೆಯನ್ನು ತೆಗೆಯಲು ಕಷ್ಟವಾದಾಗ!  ರಾಜತ್ವದ ವೀರಯುಗದಲ್ಲಿ ಗಂಡಾಗುವುದೆಂದರೆ ರಣರಂಗ ದಲ್ಲಿ ರುಂಡಗಳನ್ನು ಚೆಂಡಾಡುವ ಪರಿಣತಿಯನ್ನು ಪಡೆಯುವುದು. ಗಂಡು ಎಂದರೆ ಗಂಡುಗಲಿ. ಅಭಿಮನ್ಯು ಗಂಡು ಮಾದರಿ. ಈ ಮಾದರಿಯ ಪ್ರಕಾರ, ಶತ್ರುಗಳನ್ನು ಸದೆಬಡಿಯುವುದರೊಂದಿಗೆ ಹೆಣ್ಣಿನ ಮಾನರಕ್ಷಣೆಯೂ ಗಂಡುತನದ ಲಕ್ಷಣವಾಗುತ್ತದೆ. ವೀರಯುಗದ ಮೌಲ್ಯವಾದ "ಹೆಣ್ಣುಗಳ ಮಾನರಕ್ಷಣೆ'ಯ ಕೆಲಸದಷ್ಟು ಗಂಡಸರಿಗೆ ಖುಶಿ ಕೊಡುವ ಸಂಗತಿ ಇನ್ನೊಂದಿಲ್ಲ. ಗಂಡಿನ ಇಂದಿನ ದಾದಾಗಿರಿಯು ವೀರಯುಗದ ರಣರಂಗದ ಶಕ್ತಿ ಪ್ರದರ್ಶನದ ಪಳೆಯುಳಿಕೆ.

        ಕೃಷಿಕ ಸಮಾಜದಲ್ಲಿ ಗಂಡು ಆಗುವುದೆಂದರೆ ಜಮೀನುದಾರ ನಾಗಿ, ಹಳ್ಳಿಯ ಮರಿ ಪುಢಾರಿಯಾಗಿ, ಕೈತುಂಬಾ ಸಂಪಾದನೆ ಯಿದ್ದು, ಮನೆಯಲ್ಲಿ ಒಡೆಯನಾಗಿರುವುದು. ಅವನ ಗುಣಲಕ್ಷಣ
        ಗಳೆಂದರೆ- ಎಂದೂ ತಪ್ಪು ಮಾಡದಿರುವುದು, ಅವನು ಹೇಳಿ ದ್ದೆಲ್ಲಾ ಸರಿ, ಅತೀಭಾವುಕನಲ್ಲ, ಗಾಂಭೀರ್ಯವಿದೆ, ಮನೆಯೊಳಗೂ ಹೊರಗೂ ಅವನ ಮಾತು ನಡೆಯಲೇ ಬೇಕು, ಇತರರೊಡನೆ ಎಂದೂ ಯಾಚಿಸದವನು, ಅಳದವನು, ಸ್ವಾಯತ್ತ. ಹೆಂಡತಿ ಯನ್ನು ತಿಂಗಳಿಗೆರಡು ಬಾರಿ ಹೊಡೆದು ದಬಾಯಿಸಿ ಸುಮ್ಮನಿರಿ ಸುವುದು ಅವನ ಹಲವು ಕರ್ತವ್ಯಗಳಲ್ಲಿ ಒಂದು. ಗಂಡು ಎಂದರೆ ಮನೆಯೊಳಗೆ ಯಜಮಾನ, ಹೊರಗೆ ಸ್ವಾಮಿಯೋರು. ಗಂಡಸಾದವನಲ್ಲಿ ನೋವಿನ ಛಾಯೆಯಿರುವುದಿಲ್ಲ. ಅವನ ಯಶಸ್ಸಿನ ಹಿಂದೆ ಹೆಂಡತಿಯಿರುತ್ತಾಳೆ, ಹೆಂಡತಿಯ ಹಿಂದೆ ಇನ್ನೊಬ್ಬಳು ಹೆಣ್ಣಿರುತ್ತಾಳೆ!

        ಇಂದು ಬಹುತೇಕವಾಗಿ ಪ್ರಚಲಿತವಾಗಿರುವ ಗಂಡಸು ಸಿದ್ಧ ಮಾದರಿ ಬಳಕೆಗೆ ಬಂದದ್ದು 19ನೇ ಶತಮಾನದ ಕೈಗಾರಿಕಾ ಕ್ರಾಂತಿಯ ಸನ್ನಿವೇಶದಲ್ಲಿ. ಆ ಕಾಲದಲ್ಲಿ ಆರ್ಥಿಕ ವ್ಯವಸ್ಥೆಯು ಕೃಷಿಯಿಂದ ಕಾರ್ಖಾನೆಗಳಿಗೆ ಹೊರಳಿತು. ಗಂಡಸರು ಮನೆಬಿಟ್ಟು ಕಾರ್ಖಾನೆಗಳಿಗೆ ಉದ್ಯೋಗಕ್ಕಾಗಿ ಹೋಗಬೇಕಾಯಿತು ಹೆಂಗಸರು ಮನೆಯಲ್ಲೇ ಉಳಿದು ಮಕ್ಕಳ ಲಾಲನೆ ಪಾಲನೆ ಹಾಗೂ ಮನೆಯ ಕೆಲಸಗಳಲ್ಲಿ ಮಗ್ನರಾದರು. ಗಂಡಸರ, ಹೆಂಗಸರ ಕೆಲಸಗಳೇ ಅವರ ವ್ಯಕ್ತಿತ್ವದ ಅನಿವಾರ್ಯ ಅಂಶಗಳಾದುವು.

        ಆಧುನಿಕ ಸಮಾಜದಲ್ಲಿ ಭಲೇ ಗಂಡು ಆಗಿರುವುದೆಂದರೆ, ಸಾಮಾಜಿಕ ವಲಯದಲ್ಲಿ ಸ್ಪರ್ಧಾತ್ಮಕವಾಗಿ ತನ್ನನ್ನೇ ತೊಡಗಿಸಿ ಕೊಂಡು, ಸ್ವಪ್ರಯತ್ನದ ಮೂಲಕ ಪಡೆದ ಆರ್ಥಿಕ ಯಶಸ್ಸು, ಗಳಿಸಿದ ಶ್ರೀಮಂತಿಕೆ ಪದವಿ, ಸ್ಥಾನಮಾನ ಹಾಗೂ ಭೌಗೋಳಿಕವಾಗಿ ದೂರ ದೂರ ಪ್ರಯಾಣಿಸಬಹುದಾದ ಅವಕಾಶ (ಮಗ/ಅಳಿಯ ಅಮೆರಿಕದಲ್ಲಿದ್ದಾನೆ!). ಟಿವಿ ಧಾರಾವಾಹಿಗಳು ಹೆಣ್ಣುಗಳನ್ನು ಮನೆಯೊಡತಿಯನ್ನಾಗಿ ಮಾಡಿ ಅವಳ ಕಾರ್ಯಕ್ಷೇತ್ರವು ಒಳಜಾಗವೆಂದೂ ಗಂಡಸರ ಕಾರ್ಯಕ್ಷೇತ್ರವನ್ನು ಹೊರಜಾಗ ಗಳೆಂದೂ ಚಿತ್ರಿಸುತ್ತವೆ. ಮದುವೆಯಾಗುವ ತನಕ ತನ್ನ ವಧು ಆಧುನಿಕಳಾಗಿರಬೇಕೆಂದೂ ಮದುವೆಯಾದ ಮರುದಿನದಿಂದ ಗರತಿ ಗೌರಮ್ಮನಾಗಿರಬೇಕೆಂದೂ ಗಂಡು ನಿರೀಕ್ಷಿಸುತ್ತಾನೆ. ಇಂದಿನ ಗಂಡಸರಿಗೆ ಸಪೂರ ಹೆಣ್ಣುಗಳೆಂದರೆ  ಇಷ್ಟ- ಅವರು ವಾದ ಮಾಡುವುದಿಲ್ಲ ಹಾಗೂ ಸಲಾದ್‌ ಮಾತ್ರ ತಿನ್ನುತ್ತಾರೆ.
        ನಿರ್ದಿಷ್ಟ ಬ್ರಾಂಡಿನ ಶರ್ಟು, ಅಪ್ಪ-ಅಮ್ಮನ ಸಂಸ್ಕೃತಿ, ಸಂಪ್ರದಾಯಗಳಿಗೆ ಎಳ್ಳು ನೀರು ಬಿಡುವ ಗೆಳತಿ, ಹೊಸ ಮಾಡೆಲ್‌ ಬೈಕು, ಹೊಸ ಬ್ರಾಂಡ್‌ ಶೂಸ್‌, ವಿಶಾಲ ಸಾಲಪ್ರಾಂಶು ಬಿಗಿದ ತೋಳುಗಳ ಸ್ನಾಯುಗಳು, ರಿಸ್ಟ್‌ವಾಚ್‌ ಕಟ್ಟದಿರುವುದು, ಕೊಡೆಯನ್ನು ಬಳಸದಿರುವುದು ಇವೆಲ್ಲಾ ಕಾಲೇಜಿನ ಭಲೇ ಗಂಡಿನ ಪ್ರತೀಕಗಳು.

        ಹೇಳಿಕೇಳಿ ಸಮಾಜವಂತೂ ಗಂಡುಸಮಾಜ, ಎಲ್ಲವೂ ಗಂಡಿನ ಪಕ್ಷಪಾತಿ. ಗಂಡಿನ ಚೇತನಕ್ಕೆ ಎತ್ತರದ ಮಣೆ ಕೊಡಲಾಗಿದೆ. ಇಂತಹ ಭಲೇ ಗಂಡಿಗೆ, ಹೆಣ್ಣು ಬಹು ಧಾರ್ಮಿಕಳಾಗಿ, ಹೊಂದಾಣಿಕೆಯಿಂದ ತಗ್ಗಿಬಗ್ಗಿ, ಗುಣವಂತೆಯಾಗಿ, ಪರಾವಲಂಬಿ ಹಾಗೂ ಅಬಲೆಯಾಗಿದ್ದರೆ, ತನ್ನ ಗಂಡುತನ ಸಾಬೀತು ಆದಂತೆ ಎಂದು ಅನ್ನಿಸುತ್ತದೆ. ಹೆಣ್ಣು ಹಸುಳೆಯಂತೆ, ಅವಳಿಗೆ ಪಾಪ ಕಾಮನ್‌ಸೆನ್ಸ್‌ ಇಲ್ಲ, ಕಾಂಪಿಟೆಂಟ್‌ ಅಲ್ಲ, ಭಾಳ ವೀಕ್‌, ಅಬಲೆ, ಅವಳ ಮಾನರಕ್ಷಣೆಯನ್ನು ಮಾಡಿದರೆ ಮಾತ್ರ ತಾನು ಗಂಡಸು ಎಂಬ ಅನ್ನಿಸಿಕೆ. ಚರಿತ್ರೆಯುದ್ದಕ್ಕೂ ಹೆಂಗಳೆಯರ ಮಾನರಕ್ಷಣೆ (ಇತರರಿಂದ) ಮಾಡುವುದು ಗಂಡಸರ ಲಘು ಉದ್ಯಮವಾಗಿತ್ತು. ಚರಿತ್ರೆಯುದ್ದಕ್ಕೂ ಹೆಣ್ಣು ಶೋಷಿತೆಯಾಗಿದ್ದಳು.

        ಮುಲ್ಲಾ ನಸ್ರುದ್ದೀನನ ಮಗಳು ಗಂಡನ ಹೊಡೆತವನ್ನು ಸಹಿಸಲಾರದೆ, ತವರೂರಿಗೆ ಓಡಿ ಬಂದು, ಗಂಡ ತನಗೆ ಪ್ರತಿದಿನ ದನಕ್ಕೆ ಬಡಿದಂತೆ ಬಡಿಯುತ್ತಾನೆ ಎಂದು ತಂದೆಗೆ ದೂರಿತ್ತಳು. ಮುಲ್ಲಾ ಕೂಡ ತನ್ನ ಮಗಳಿಗೆ ಸಿಕ್ಕಾಪಟ್ಟೆ ಬಡಿದ ಹಾಗೂ ಅಳಿಯನಿಗೆ ಎಚ್ಚರಿಕೆ ಸಂದೇಶ ಕಳುಹಿದನಂತೆ- ನೀನು ನನ್ನ ಮಗಳನ್ನು ಹೊಡೆದರೆ ನಾನು ನಿನ್ನ ಹೆಂಡತಿಯನ್ನು ಬಡಿಯುತ್ತೇನೆ!


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus