ದೇಶಕ್ಕೆ ಈಗ ಅಗತ್ಯವಿರುವುದು ಬಲಿಷ್ಠ ನಾಗರಿಕ ಆಂದೋಲನಗಳೇ ಹೊರತು ಇನ್ನಷ್ಟು ರಾಜಕೀಯ ಪಕ್ಷಗಳಲ್ಲ. ನಮಗೆ ಗ್ರಾ.ಪಂ.ಗಳನ್ನೂ ಸೇರಿಸಿ ಎಲ್ಲ ಹಂತಗಳಲ್ಲಿ ಸಾರ್ವಜನಿಕ ಸ್ಫೂರ್ತಿಯುಳ್ಳ ಪ್ರಜೆಗಳ ಆವಶ್ಯಕತೆಯಿದೆ. ದೇಶ ಇಂದು ಅತಿಯಾದ ರಾಜಕೀಯದಿಂದ ನರಳುತ್ತಿದೆ. ನಮ್ಮಲ್ಲಿ ಪ್ರಜಾಪ್ರಭುತ್ವದ ಕೊರತೆಯುಂಟಾಗಿದೆ.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಕೂಡ ಈಗ ಚುನಾವಣೆಯ ರಾಜಕೀಯವನ್ನು ಪ್ರವೇಶಿಸುವ ವಾಂಛೆಯನ್ನು ನಿವಾರಿಸಿಕೊಳ್ಳಲು ಶಕ್ತವಾಗಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವ ಇನ್ನೊಂದು ರಾಜಕೀಯ ಪಕ್ಷ ನಮ್ಮೆದುರಿಗೆ ಬರಲಿದೆ.ನಮ್ಮ ವಿಶಾಲ ಜನಸಂಖ್ಯೆಗೆ ಸರಿಯಾಗಿ ನೂರಾರು ರಾಜಕೀಯ ಪಕ್ಷಗಳು ನಮ್ಮಲ್ಲಿವೆ. ಇವುಗಳಲ್ಲಿ ಕೆಲವು ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದವು, ಇನ್ನು ಕೆಲವು ನೋಂದಾವಣೆ ಗೊಂಡಿವೆ ಅಷ್ಟೆ. ಎಲ್ಲ ರಾಜಕೀಯ ಪಕ್ಷಗಳೂ ಮಹಾನ್‌ಆಶ್ವಾಸನೆಗಳಿಂದಲೇ ಆರಂಭಗೊಂಡಂಥವು. ನಮ್ಮ ಕರ್ನಾಟಕ ದಲ್ಲೇ ತೀರ ಇತ್ತೀಚೆಗೆ ಉದಯಿಸಿರುವ ಬಿ. ಶ್ರೀ ರಾಮುಲು (ಬಿ.ಎಸ್.ಆರ್.) ಕಾಂಗ್ರೆಸ್ ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸುವ ಧ್ಯೇಯ ಹೊಂದಿ ಆರಂಭಗೊಂಡು ವಿಧಾನಸಭೆಯಲ್ಲಿ ಈಗಾಗಲೇ ಪ್ರತಿನಿಧಿಯನ್ನು ಹೊಂದಿದೆ. ಶ್ರೀರಾಮುಲು ಅವರಂತಹ ಕಳಂಕಿತ ರಾಜಕಾರಣಿಯನ್ನು ಅನುಸರಿಸಿ ಎಂಥ ಸ್ವಾಭಿಮಾನವನ್ನು ಈ ರಾಜ್ಯಗಳಿಸಿಕೊಳ್ಳಬಹುದು ಎಂಬುದು ಅವರವರ ಊಹೆಗೆ ಬಿಟ್ಟ ವಿಚಾರ. ಇದುವರೆಗೆ ಅಣ್ಣಾ ಹಜಾರೆ ಮತ್ತವರ ಆಪ್ತ ಸಹವರ್ತಿಗಳನ್ನು ನೋಡಿ ನಾವು ಹೆಮ್ಮೆಪಟ್ಟಿದ್ದೇವೆ. ಸೇನೆಯ ಉನ್ನತ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರದ ಗುಟ್ಟನ್ನು ರಟ್ಟಾಗಿಸಿದ ಜ| ವಿ. ಕೆ. ಸಿಂಗ್ ಅವರ ಇತ್ತೀಚೆಗಿನ ಅನುಯಾಯಿ. ಅಣ್ಣಾ ಅವರ ರಾಜಕೀಯ ಪಕ್ಷ ಯಾರನ್ನೆಲ್ಲ ಒಳಗೊಳ್ಳುತ್ತದೆ ಎಂಬುದೇನೂ ನಮಗೆ ತಿಳಿದಿಲ್ಲ. ಒಮ್ಮೆ ರಾಜಕೀಯ ಪಕ್ಷವನ್ನು ಆರಂಭಿಸಿದರೆ ಕೆಟ್ಟ ಮನುಷ್ಯರು ಅದರೊಳಗೆ ಪ್ರವೇಶಿಸುವುದನ್ನು ತಡೆಯುವುದು ಅಶಕ್ಯ. ರಾಜಕೀಯ ಪ್ರವೇಶಿಸುವವರು ಸನ್ಯಾಸಿಗಳಾಗಿ ಉಳಿಯಬೇಕೆಂದು ನಿರೀಕ್ಷಿಸುವುದೂ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ಪಕ್ಷ ನಿಧಿಯನ್ನು ಒಗ್ಗೂಡಿಸಬೇಕಾಗುತ್ತದೆ. ಪಕ್ಷಕ್ಕೆ ನಿಧಿಯನ್ನು ಒದಗಿಸುವವರು ತಮ್ಮ ಬಂಡವಾಳಕ್ಕೆ ಪ್ರತಿಫಲವನ್ನು ಅಪೇಕ್ಷಿಸುತ್ತಾರೆ. ತಮ್ಮಲ್ಲಿರುವ ಕಪ್ಪು ಹಣವನ್ನು ನಿವಾರಿಸಿಕೊಳ್ಳುವುದಕ್ಕಾಗಿ ಚುನಾವಣೆಗೆ ಸ್ಪರ್ಧಿಸುವವರೂ ಇದ್ದಾರೆ. ಇನ್ನು ಕೆಲವರು ತೃತೀಯ ದರ್ಜೆಯ ಸಿನೆಮಾಗಳಲ್ಲಿ ಕಪ್ಪು ಹಣ ಹೂಡುತ್ತಾರೆ, ಗಲ್ಲಾ ಪೆಟ್ಟಿಗೆಯಲ್ಲಿ ಅದರ ಗತಿಯೇನಾಯಿತು ಎಂಬ ಗೊಡವೆಗೆ ಹೋಗುವುದಿಲ್ಲ.ಅಣ್ಣಾ ಆಂದೋಲನ ಕೂಡ ರಾಜಕೀಯ ಪ್ರವೇಶಿಸಿದ ಬಳಿಕ, ರಾಜಕೀಯದಿಂದ ದೂರವೇ ಉಳಿದ ದೇಶದ ಬೃಹತ್ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘವೊಂದೇ ಆಗಿದೆ. ಅದು ತನ್ನ ಸದಸ್ಯರಿಗೆ ರಾಜಕೀಯ ರಂಗಕ್ಕೆ ಧುಮುಕಲು ಅವಕಾಶ ನೀಡುತ್ತದೆಯೇನೋ ನಿಜ. ಆದರೆ, ಯಾರು ಏನೇ ಹೇಳಲಿ, ಆರೆಸ್ಸೆಸ್ ತನ್ನ ಹೆಸರಿನಲ್ಲಿ ಇದುವರೆಗೆ ಚುನಾವಣೆ ಸ್ಪರ್ಧಿಸಿದ್ದಿಲ್ಲ. ಅದೊಂದು ಸಾಮಾಜಿಕ ಸಂಘಟನೆಯಾಗಿಯೇ ತನ್ನ ಸ್ಥಾನಮಾನವನ್ನು ಕಾಯ್ದುಕೊಂಡಿದೆ. ದೇಶಕ್ಕೆ ಈಗ ಅಗತ್ಯವಿರುವುದು ಬಲಿಷ್ಠ ನಾಗರಿಕ ಆಂದೋಲನಗಳೇ ಹೊರತು ಇನ್ನಷ್ಟು ರಾಜಕೀಯ ಪಕ್ಷಗಳಲ್ಲ. ನಮಗೆ ಗ್ರಾಮ ಪಂಚಾಯತ್‌ಗಳನ್ನೂ ಸೇರಿಸಿ ಎಲ್ಲ ಹಂತಗಳಲ್ಲಿ ಸಾರ್ವಜನಿಕ ಸ್ಫೂರ್ತಿಯುಳ್ಳ ಪ್ರಜೆಗಳ ಆವಶ್ಯಕತೆಯಿದೆ. ದೇಶ ಇಂದು ಅತಿಯಾದ ರಾಜಕೀಯದಿಂದ ನರಳುತ್ತಿದೆ. ನಮ್ಮಲ್ಲಿ ಪ್ರಜಾಪ್ರಭುತ್ವದ ಕೊರತೆಯುಂಟಾಗಿದೆ. ಲೋಕಪಾಲ ಮಸೂದೆಯ ಬಗ್ಗೆ ತನ್ನೊಡನೆ ಮಾತುಕತೆಗೆ ಇಳಿಯುವಂತೆ ಸರಕಾರವನ್ನು ಬಲವಂತಪಡಿಸಿದ್ದು ಅಣ್ಣಾ ಆಂದೋಲನದ ಬಲು ದೊಡ್ಡ ಸಾಧನೆ. ಲೋಕಪಾಲ ಮಸೂದೆಯ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಹೊರಬಿದ್ದಿಲ್ಲವಾದರೂ ಅದು ಮಂಜೂರಾಗುವುದನ್ನು ಯುಪಿಎ ಸರಕಾರ ಪಡೆಯುವ ಸ್ಥಿತಿಯಲ್ಲಿಲ್ಲ. ಅಣ್ಣಾ ತಂಡ ತಪ್ಪು ಮಾಡಿದ್ದು ತನ್ನ ಹಠಮಾರಿ ನಿಲುವಿನಿಂದ.ಅಣ್ಣಾ ಹಜಾರೆ ಅವರ ಅಣ್ಣಾ ಪಕ್ಷ ಆರಂಭವಾದರೆ ಅದು ದೇಶದ ದ್ವಿತೀಯ "ಅಣ್ಣಾ ಪಕ್ಷ'. ಮೊದಲನೆಯದ್ದು ಡಿಎಂಕೆಯ ಸ್ಥಾಪಕ ಸಿ. ಎನ್. ಅಣ್ಣಾದೊರೈ ಅವರ ಆದರ್ಶಗಳನ್ನು ಎತ್ತಿಹಿಡಿಯಲು ಸ್ಥಾಪನೆಯಾದ "ಆಲ್ ಇಂಡಿಯಾ ಅಣ್ಣಾ ಡಿಎಂಕೆ' ಅಥವಾ ಎಐಎಡಿಎಂಕೆ. ತಮಿಳುನಾಡಿನಲ್ಲಿ ಅಧಿಕಾರ ಗಳಿಸುತ್ತ, ಕಳೆದುಕೊಳ್ಳುತ್ತ ಇದ್ದರೂ ಎಐಎಡಿಎಂಕೆ ನಶಿಸುತ್ತ ಇದೆ.ಒಂದು ಜನಾಂದೋಲನ ರಾಜಕೀಯ ಅಭಿಯಾನವಾಗಿ ಪರಿವರ್ತನೆಯಾಗುತ್ತಿರುವುದರ ಬಗ್ಗೆ ತದ್ವಿರುದ್ಧ ಅಭಿಪ್ರಾಯಗಳಿವೆ. ಪರಿಶುದ್ಧ ವ್ಯಕ್ತಿತ್ವದ ಅಣ್ಣಾ ಹಜಾರೆ ಅವರಂತಹ ವ್ಯಕ್ತಿಯಿಂದ ಆರಂಭಗೊಂಡ ಪಕ್ಷ ನಮ್ಮ ರಾಜಕೀಯ ಕ್ಷೇತ್ರವನ್ನು ಶುಚಿಗೊಳಿಸುವ ಮಹತ್ಕಾರ್ಯವನ್ನು ಸಾಧಿಸುತ್ತದೆ ಎಂದು ನಂಬುವ ಆಶಾವಾದಿಗಳಿದ್ದಾರೆ. ಇನ್ನೊಂದೆಡೆ, ಅಣ್ಣಾ ಆಂದೋಲನದ ಒಳಗೆಯೇ ರಾಜಕೀಯ ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿದೆ. ಟೀಮ್ ಅಣ್ಣಾ ರಾಜಕೀಯ ಪಕ್ಷ ಆರಂಭಿಸುವ ಬಗ್ಗೆ ಮಾಜಿ ಲೋಕಾಯುಕ್ತ ಜ| ಎನ್. ಸಂತೋಷ್ ಹೆಗ್ಡೆ ಅಸಮಾಧಾನದಿಂದಿದ್ದಾರೆ. ಗಾಂಧೀಜಿ ಆಂದೋಲನ ತನ್ನ ರಾಜಕೀಯೇತರ ಗುಣಲಕ್ಷಣಗಳನ್ನು ಸ್ವಾತಂತ್ರಾéನಂತರ ಹೇಗೆ ವರ್ಜಿಸಿಕೊಂಡಿತು ಎಂಬುದು ನಮ್ಮ ಕಣ್ಣೆದುರಿಗೆ ಇದೆ. ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಗಾಂಧೀಜಿಯವರೇ ಕಾಂಗ್ರೆಸನ್ನು ವಿಸರ್ಜಿಸಿ ಅದನ್ನು ಲೋಕಸೇವಕ ಸಂಘವಾಗಿ ಪರಿವರ್ತಿಸುವ ಒಲವುಳ್ಳವರಾಗಿದ್ದರು. ಆ ಹೆಸರಿನ ಪಕ್ಷವೊಂದು ನಮ್ಮ ಕರ್ನಾಟಕದಲ್ಲಿಯೇ ರೂಪುಗೊಂಡಿತ್ತು. ಅದರ ನಾಯಕರಲ್ಲೊಬ್ಬರಾದ ವಿಶ್ವನಾಥ ರೆಡ್ಡಿ ಮದ್ನಾಳ್ ಬಳಿಕ ಜನತಾದಳ ಸೇರಿ ಸಚಿವರೂ ಆದರು. ಹಾಗೆ ಕರ್ನಾಟಕದ ಲೋಕಸೇವಾ ಸಂಘ ಚರಿತ್ರೆಯ ಪುಟ ಸೇರಿತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಾತ್ವಿಕವಾಗಿ ಅದು ನಶಿಸಿಹೋಗುತ್ತದೆ ಎಂದು ಗಾಂಧೀಜಿ ನಂಬಿದ್ದರು. ಜೆಪಿ ಆಂದೋಲನ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿ ಬಳಿಕ ಠುಸ್ಸೆಂದ ಉದಾಹರಣೆ ಇತ್ತೀಚೆಗಿನದು. ಲಾಲೂ ಪ್ರಸಾದ್ ಅವರಂಥ ಕುಖ್ಯಾತ ರಾಜಕಾರಣಿ ಇದೇ ಜೆಪಿ ಆಂದೋಲನದಿಂದ ಉದಯಿಸಿದವರು. ಕೇಂದ್ರ ರೈಲ್ವೇ ಸಚಿವರಾಗಿ ಅವರು ಒಂದಷ್ಟು ಒಳ್ಳೆಯದನ್ನು ಮಾಡಿದರಾದರೂ ಅವರ ಮೇವು ಹಗರಣ ಮತ್ತು ಅವರ ಕಾಲದಲ್ಲಿ ಬಿಹಾರ ರಸಾತಳವನ್ನು ತಲುಪಿತ್ತೆಂಬುದನ್ನು ಮರೆಯುವುದು ಹೇಗೆ? ಕೇಂದ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವನ್ನು ಸ್ಥಾಪಿಸಿದ್ದು ಜೆಪಿ ಆಂದೋಲನದ ಪ್ರಧಾನ ಸಾಧನೆ. ಉತ್ತರ ರಾಜ್ಯಗಳಲ್ಲಿ ಅದರಲ್ಲೂ ಬಿಹಾರದಲ್ಲಿ ಜೆಪಿ ಆಂದೋಲನದ ತೀವ್ರತೆ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಕಂಗಾಲು ಮಾಡಿತು ಮತ್ತು ಅವರು 1975ರ ಜೂನ್‌ನಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು. ತುರ್ತುಪರಿಸ್ಥಿತಿಯ ಲಾಭ ಗಳಿಸಿ ಜನತಾಪಕ್ಷ 1977ರಲ್ಲಿ ಅಧಿಕಾರಕ್ಕೆ ಬಂತು. ಕರ್ನಾಟಕದಲ್ಲಿ ಜೆಪಿ ಆಂದೋಲನ ಹೆಚ್ಚು ಪ್ರಭಾವ ಬೀರಲಿಲ್ಲ. ಅದರಲ್ಲಿ ಭಾಗವಹಿಸಿದ ಹಲವರು ಜನತಾ ಅಥವಾ ಜನತಾದಳ ಅಧಿಕಾರಕ್ಕೆ ಬಂದಾಗ ಸಚಿವರಾಗಿ ಅಪಾರ ಸಂಪತ್ತನ್ನು ಶೇಖರಿಸಿಕೊಂಡರು.ಜಯಪ್ರಕಾಶ್ ನಾರಾಯಣ್, ಅಣ್ಣಾ ಹಜಾರೆ ಅವರಂತಲ್ಲ. ಜೆಪಿ ಒಬ್ಬ ರಾಜಕೀಯ ವ್ಯಕ್ತಿ. ಅವರು ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಳಿಕ ಸಮಾಜವಾದಿ ಪಕ್ಷದಲ್ಲಿದ್ದವರು. ಸುಮಾರು ಮೂರು ದಶಕಗಳ ಕಾಲ ದೇಶದ ರಾಜಕೀಯ ಚಿಂತನೆಯನ್ನು ಪ್ರಭಾವಿಸಲು ಶಕ್ತವಾದರೂ ಸಮಾಜವಾದಿ ಪಕ್ಷ ಒಂದು ರಾಜಕೀಯ ಪಕ್ಷವಾಗಿ ವೈಫಲ್ಯವನ್ನು ಕಂಡಿತು. ರಾಮಮನೋಹರ ಲೋಹಿಯಾ, ಮಧು ಲಿಮಯೆ ಮತ್ತು ಕರ್ನಾಟಕದವರೇ ಆದ ಎಸ್. ಗೋಪಾಲ ಗೌಡರಂತಹ ವಿಚಾರಶೀಲ ಸಮಾಜವಾದಿಗಳು ಪಕ್ಷದಲ್ಲಿದ್ದುದರಿಂದಲೇ ಸಮಾಜವಾದಿ ಪಕ್ಷ ದೇಶದ ರಾಜಕೀಯ ಚಿಂತನೆಯನ್ನು ಪ್ರಭಾವಿಸಿತು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸಮಾಜವಾದಿಗಳು ಅಧಿಕಾರ ಪಡೆದ ತತ್‌ಕ್ಷಣ ಬಂಡವಾಳಶಾಹಿಗಳಾಗಿ ಬದಲಾಯಿಸಿಬಿಟ್ಟರು.ಜೆಪಿ ಆಂದೋಲನ ರೂಪುಗೊಳ್ಳುವುದಕ್ಕೆ ಮುನ್ನವೇ ಗುಜರಾತ್‌ನಲ್ಲಿ ಪ್ರಬಲ ಜನಾಂದೋಲನವೊಂದು ಅಸ್ತಿತ್ವದಲ್ಲಿತ್ತು. ನವನಿರ್ಮಾಣ ಚಳವಳಿ 1974ರಲ್ಲಿ ಭ್ರಷ್ಟ ಚಿಮನ್ ಭಾç ಪಟೇಲ್ ಸರಕಾರವನ್ನು ಅಧಿಕಾರ ಪಲ್ಲಟಗೊಳಿಸಿತು. ಗಾಂಧೀವಾದಿ ಮಧು ಭಾç ಪಟೇಲ್ 1975ರ ಜೂನ್‌ನಲ್ಲಿ ಅಧಿಕಾರಕ್ಕೆ ಬರುವಂತಾಗಲು ಇದೇ ಚಳುವಳಿ ಕಾರಣ. ಆದರೆ ಚಿಮನ್ ಭಾç ಪಟೇಲ್ ಜನತಾ - ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿ ಮತ್ತೂಮ್ಮೆ ಅಧಿಕಾರಕ್ಕೇರಿದರು. ನವನಿರ್ಮಾಣ್ ಮೋರ್ಚಾ ಸಾಧಿಸಿದ್ದು ನಿಷ#ಲವಾಯಿತು.ಲೋಕಪಾಲ ಮಸೂದೆ ಜಾರಿಗೊಂಡ ಮಾತ್ರದಿಂದ ಭ್ರಷ್ಟಾಚಾರ ಸಮೂಲ ನಾಶವಾಗದು ಎಂಬುದು ಅಣ್ಣಾ ತಂಡದವರಿಗೆ ತಿಳಿಯದ್ದೇನಲ್ಲ. ಲೋಕಪಾಲ ಕಾಯಿದೆ ಪ್ರಧಾನಿ ಸಹಿತ ಉನ್ನತ ಹುದ್ದೆಯಲ್ಲಿದ್ದು ಭ್ರಷ್ಟಾಚಾರ ಎಸಗುವವರನ್ನು ಶಿಕ್ಷಿಸುವುದಕ್ಕೆ ಸಹಾಯವಾದೀತು ಅಷ್ಟೆ. ತನ್ನ ನಿರ್ಧಾರವನ್ನು ಆಗಾಗ್ಗೆ ಪುನರ್‌ಪರಿಶೋಧಿಸಿ ದೇಶದ ರಾಜಕೀಯ ಚಿಂತನೆಯನ್ನು ಪ್ರಭಾವಿಸುವ ಕೆಲಸವನ್ನು ಅಣ್ಣಾ ಅವರ ರಾಜಕೀಯ ಪಕ್ಷ ಮಾಡಬೇಕು. ದೇಶಕ್ಕಿಂದು ಅಗತ್ಯವಾಗಿರುವುದು ಕೇವಲ ಚುನಾವಣಾ ಸುಧಾರಣೆಯಷ್ಟೇ ಅಲ್ಲ. ರಾಜಕೀಯ ಪಕ್ಷಗಳ ಸುಧಾರಣೆಯೂ ಕಾಲದ ಅಗತ್ಯವಾಗಿ ಬೆಳೆದು ನಿಂತಿದೆ. ಬೆಂಗಳೂರಿನ "ಸೆಂಟರ್ ಫಾರ್ ಸ್ಟಾಂಡರ್ಡ್ಸ್ ಇನ್ ಪಬ್ಲಿಕ್ ಲೈಫ್' ಸಂಸ್ಥೆ ತಯಾರಿಸಿದ ಕರಡು ಮಸೂದೆ ಇದರ ನಾಂದಿಬಿಂದುವಾಗಬಲ್ಲದು. ಈ ಸಂಸ್ಥೆಯನ್ನು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜ| ಎಂ.ಎನ್. ವೆಂಕಟಾಚಲಯ್ಯ ಮುನ್ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಪರಾಭವ ಹೊಂದಿದರೆ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಹಿನ್ನಡೆಯುಂಟಾದೀತು ಎಂಬುದನ್ನು ಅಣ್ಣಾ ಮೊದಲಿಗರು ನೆನಪಿಟ್ಟುಕೊಳ್ಳಬೇಕು. ಲಂಚ ರುಷುವತ್ತುಗಳಿಂದ ಮಾತ್ರ ಸರಕಾರಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯ, ಲಂಚದಿಂದ ಮಾತ್ರ ಕಾರ್ಯ ಯಶಸ್ಸು ಗಳಿಸಬಹುದು ಎಂಬ ಭಾವನೆಯನ್ನು ಜನಸಾಮಾನ್ಯರ ಮನಸ್ಸಿನಿಂದ ತೊಡೆದು ಹಾಕುವ ಕಾರ್ಯವನ್ನು ಅಣ್ಣಾ ಆಂದೋಲನ ಮಾಡಬೇಕು. ಈ ಹೊತ್ತಿನಲ್ಲಿ ದೇಶದ ಎಲ್ಲರೂ ಭ್ರಷ್ಟಾಚಾರ ವಿರೋಧಿಗಳಾಗಿ ಇಲ್ಲ. ಜನರ ಈ ಮನೋಭಾವವನ್ನು ಬೇರು ಸಹಿತ ಬದಲಾಯಿಸಿ ಬಿಟ್ಟರಷ್ಟೇ ಪರಿವರ್ತನೆ ಸಾಧ್ಯವಾದೀತು.