Wednesday, May 22, 2013
Last Updated: 1:59:53 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಶ್ಚಿಮ ಘಟ್ಟಕ್ಕೆ ವಿಶ್ವ ಪರಂಪರೆಯ ಮಾನ್ಯತೆ ಏಕೆ ಬೇಡ?
    • ಅಭಿಮತ
      • ಎಚ್‌. ಶಾಂತರಾಜ ಐತಾಳ್‌ | Aug 09, 2012

        ಪಶ್ಚಿಮ ಘಟ್ಟ ಹಾಗೂ ಅಲ್ಲಿನ ಜೀವ ವೈವಿಧ್ಯವನ್ನು ರಕ್ಷಿಸಲು ಸರ್ಕಾರ ಏನು ಮಾಡುತ್ತಿದೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಈಗ ಕಾಡಿ-ಬೇಡಿದ ನಂತರ ಒಲಿದುಬಂದ ಯುನೆಸ್ಕೋದ ವಿಶ್ವ ಪರಂಪರೆ ಪಟ್ಟವನ್ನು ರಾಜ್ಯ ಸರ್ಕಾರ ವಿರೋಧಿಸುವುದು ಸರ್ವಥಾ ಅಕ್ಷಮ್ಯ. ಪಶ್ಚಿಮ ಘಟ್ಟಗಳು ನಶಿಸಿದರೆ ಮುಂದಿನ ಜನಾಂಗ ನಮ್ಮನ್ನು ಪ್ರಶ್ನಿಸದೇ ಬಿಟ್ಟಿತೇ?

        ವಿಶ್ವಸಂಸ್ಥೆಯ ಯುನೆಸ್ಕೊ ಸಂಸ್ಥೆ ಭಾರತದ ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶವಾದ ಸಹ್ಯಾದ್ರಿ ಪರ್ವತ ಶ್ರೇಣಿಯ ಒಟ್ಟು 39 ಸ್ಥಳಗಳನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಕ್ಕೆ ಏರಿಸಿದ ತಕ್ಷಣ ಕರ್ನಾಟಕ ಸರ್ಕಾರದಲ್ಲೇ ಒಡಕು ಧ್ವನಿ ಕೇಳಿ ಬರುತ್ತಿರುವುದೊಂದು ವಿಪರ್ಯಾಸ. ಇದನ್ನೊಂದು ಬಯಸದೇ ಬಂದ ಭಾಗ್ಯ ಎಂದು ಸಂಭ್ರಮಿಸುವ ಬದಲು ವಿರೋಧ ಸೂಚಿಸುವ ಮನೋಭಾವ ಸರ್ಕಾರಕ್ಕೆ ಏಕೆ ಹುಟ್ಟಿತೋ ದೇವರೇ ಬಲ್ಲ.

        ಪಶ್ಚಿಮ ಘಟ್ಟ ಪ್ರದೇಶಕ್ಕೆ ಪಾರಂಪರಿಕ ತಾಣದ ಮಾನ್ಯತೆ ನೀಡಬೇಕೆಂದು ಕಳೆದ 6 ವರ್ಷಗಳಿಂದ ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಈ ಸಲ ಯಶಸ್ಸು ಲಭಿಸಿತು. ಹಂಪಿ ಮತ್ತು ಪಟ್ಟದಕಲ್ಲುಗಳ ಬಳಿಕ ಕರ್ನಾಟಕದ ಮೂರನೆಯ ಹಾಗೂ ಭಾರತದ 29ನೆಯ ಪಾರಂಪರಿಕ ತಾಣವಾಗಿ ಪಶ್ಚಿಮ ಘಟ್ಟ ಪ್ರದೇಶವನ್ನು ಗುರುತಿಸಲಾಗಿದೆ. ಈ ಪರ್ವತ ಶ್ರೇಣಿಯ ಒಟ್ಟು ವಿಸ್ತೀರ್ಣ 1.6 ಲಕ್ಷ  ಚದರ ಕಿ.ಮೀ. ಗಳಾಗಿದ್ದು, ಇದು ಗುಜರಾತ್‌ ಹಾಗೂ ಮಹಾರಾಷ್ಟ್ರಗಳ ಗಡಿ ಪ್ರದೇಶದಲ್ಲಿ ತಪತೀ ನದಿಯ ದಕ್ಷಿಣ ಭಾಗದಲ್ಲಿ  ಆರಂಭವಾಗುತ್ತದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳಲ್ಲಿ  ಹರಡಿರುವ ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿ ಸುಮಾರು 1,600 ಕಿ.ಮೀ. ಆಗಿದೆ.

        ವಿಶ್ವ ಹೆರಿಟೇಜ್‌ ಸೈಟ್‌ಗಾಗಿ ಆಯ್ಕೆಯ ಪ್ರಕ್ರಿಯೆ ಅಷ್ಟೇನೂ ಸುಲಭವಲ್ಲ. ಈ ಆಯ್ಕೆಗಾಗಿ ಹತ್ತು ಪ್ರಮುಖ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಈ ಹತ್ತರಲ್ಲಿ ಯಾವುದಾದರೂ ಒಂದು ಮಾನದಂಡ ಪೂರೈಕೆಯಾದರೆ ಆ ಸ್ಥಳಕ್ಕೆ ವಿಶ್ವ ಪಾರಂಪರಿಕ ತಾಣದ ಸವಲತ್ತು ದೊರಕುತ್ತದೆ. ಈ ಹತ್ತು ಮಾನದಂಡಗಳಲ್ಲಿ ಆರು ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿದ್ದರೆ ಉಳಿದ ನಾಲ್ಕು ನೈಸರ್ಗಿಕ ಮಾನದಂಡಗಳಾಗಿವೆ. ದೇಶದ ಒಟ್ಟು  29 ಸ್ಥಳಗಳಿಗೆ ಈ ಸುಯೋಗ ಲಭಿಸಿದೆ.

        1 ಕಾಜಿರಂಗ ರಾಷ್ಟ್ರೀಯ ಉದ್ಯಾನವನ: ಅಸ್ಸಾಂ ರಾಜ್ಯದೆಲ್ಲಡೆ ಅಳಿವಿನಂಚಿನಲ್ಲಿರುವ ಒಂದು ಕೊಂಬಿನ ಖಡ್ಗ ಮೃಗವನ್ನು ವೀಕ್ಷಿಸಲು ಇಲ್ಲಿ ಮಾತ್ರ ಸಾಧ್ಯ.

        2 ಮಾನಸ ರಾಷ್ಟ್ರೀಯ ಉದ್ಯಾನವನ: ಅಸ್ಸಾಂ ರಾಜ್ಯದಲ್ಲಿದೆ.

        3 ಮಹಾಬೋಧಿ ಮಂದಿರ ಬೋಧಗಯಾ: ಬಿಹಾರದಲ್ಲಿದೆ. ರಾಜಕುಮಾರ ಸಿದ್ಧಾರ್ಥನಿಗೆ ಜ್ಞಾನೋದಯವಾದ ಸ್ಥಳ.

        4 ದಿಲ್ಲಿಯ ಹುಮಾಯೂನ ಗೋರಿ: ಭಾರತೀಯ ಉಪಖಂಡದಲ್ಲಿ  ಹೂದೋಟದ ನಡುವೆ ಗೋರಿ ನಿರ್ಮಿಸುವ ಸಂಪ್ರದಾಯ ಆರಂಭವಾಗಿದ್ದೇ ಇಲ್ಲಿ.

        5 ಕುತುಬ್‌ ಮಿನಾರ್‌ ಮತ್ತು ಸ್ಮಾರಕಗಳ ಸಮುಚ್ಚಯ, ದಿಲ್ಲಿ.

        6 ದಿಲ್ಲಿಯ ಕೆಂಪುಕೋಟೆ ಸಮುಚ್ಚಯ: ಶಹಜಹಾನ್‌ 1857ರಲ್ಲಿ ನಿರ್ಮಿಸಿದ ಈ ಕಟ್ಟಡ ಐತಿಹಾಸಿಕ ಮಹತ್ವವನ್ನು ಪಡೆದಿದೆ.

        7 ಗೋವಾದ ಚರ್ಚುಗಳು ಮತ್ತು ಕಾನ್ವೆಂಟ್‌ಗಳು: 16ನೇ
        ಶತಮಾನದಲ್ಲಿ ನಿರ್ಮಾಣಗೊಂಡ ಪ್ರಸಿದ್ಧ ಸಂತ ಕ್ಸೇವಿಯರ್‌ ಚರ್ಚ್‌ ಸಹಿತ ಗೋವಾದ 60ಕ್ಕೂ ಮೇಲ್ಪಟ್ಟು ಅತ್ಯಂತ ಆಕರ್ಷಕ ಚರ್ಚುಗಳು ಈ ಪಟ್ಟಿಯಲ್ಲಿ ಸೇರಿದೆ.

        8 ಚಂಪಾನೇರ್‌ ಪಾವಗಡ ಪ್ರಾಕ್ತನ ಶೋಧನಾ ತಾಣ: ಗುಜರಾತ್‌ ರಾಜ್ಯದಲ್ಲಿದೆ.

        9 ಹಂಪಿ: ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಪ್ರಸಿದ್ಧ ವಿರೂಪಾಕ್ಷ ದೇಗುಲದ ಸಹಿತ ಹಲವಾರು ದೇವಾಲಯಗಳು, ಅರಮನೆಗಳು ಪರಂಪರೆ ಪಟ್ಟಿ ಸೇರಿವೆ.

        10 ಪಟ್ಟದಕಲ್ಲು: ಬಾಗಲಕೋಟೆ ಜಿಲ್ಲೆಯಲ್ಲಿರುವ ಪಟ್ಟದಕಲ್ಲು  ಚಾಲುಕ್ಯರ ರಾಜಧಾನಿಯಾಗಿತ್ತು.

        11 ಸಾಂಚಿಯ ಸ್ತೂಪಗಳು: ಮಧ್ಯಪ್ರದೇಶದ ರೈಸಿನ್‌ ಜಿಲ್ಲೆಯಲ್ಲಿರುವ ಈ ಸ್ತೂಪಗಳು ಅಶೋಕ ಚಕ್ರವರ್ತಿಯಿಂದ ನಿರ್ಮಿಸಲ್ಪಟ್ಟಿವೆ.

        12 ಭೀಮಬೆಟಕಾದ ಶಿಲಾಗುಹೆಗಳು: ಮಧ್ಯಪ್ರದೇಶದ ರೈಸಿನ್‌
        ಜಿಲ್ಲೆಯಲ್ಲಿವೆ. ಸುಮಾರು 240 ಶಿಲಾಗುಹೆಗಳಲ್ಲಿರುವ ಚಿತ್ರಕಲೆಗಳು
        ಅದ್ಭುತವಾಗಿವೆ.

        13 ಖಜುರಾಹೊದ ಸ್ಮಾರಕಗಳು: ಮಧ್ಯಪ್ರದೇಶದ ಛತ್ತರಪುರದ ಜಿಲ್ಲೆಯಲ್ಲಿರುವ ಈ ಸ್ಮಾರಕಗಳು ಜಗತøಸಿದ್ಧ.

        14 ಅಜಂತಾ ಗುಹೆಗಳು: ಮಹಾರಾಷ್ಟ್ರದ ಔರಂಗಾಬಾದ್‌
        ಜಿಲ್ಲೆಯಲ್ಲಿರುವ 30 ಶಿಲಾಗುಹೆಗಳಲ್ಲಿ ಪೇಂಟಿಂಗ್‌ಗಳೂ ಶಿಲಾಕೆತ್ತನೆಗಳೂ ಜನಾಕರ್ಷಣೆ ಗಳಿಸಿವೆ.

        15 ಎಲ್ಲೋರಾ ಗುಹೆ: ಮಹಾರಾಷ್ಟ್ರದ ಔರಂಗಾಬಾದ್‌  ಜಿಲ್ಲೆ.

        16 ಎಲಿಫೆಂಟಾ ಗುಹೆಗಳು: ಮುಂಬೈಯಿಂದ 10 ಕಿ.ಮೀ. ದೂರದ
        ಎಲಿಫೆಂಟಾ ದ್ವೀಪದಲ್ಲಿರುವ ಈ ಗುಹೆಗಳು 5ನೇಯ ಮತ್ತು 6ನೇಯ
        ಶತಮಾನದವು.

        17 ಛತ್ರಪತಿ ಶಿವಾಜಿ ಟರ್ಮಿನಸ್‌, ಮುಂಬೈ: ವಿಕ್ಟೋರಿಯಾ
        ಮಹಾರಾಣಿಯ ಸ್ವರ್ಣ ಮಹೋತ್ಸವದ ನೆನಪಿಗಾಗಿ ನಿರ್ಮಿಸಲಾದ
        ವಿಕ್ಟೋರಿಯಾ ಟರ್ಮಿನಸ್‌ ದೇಶದ ವಾಸ್ತುಶಿಲ್ಪದ ವಿಸ್ಮಯ. ಫ್ರೆಡರಿಕ್‌
        ವಿಲಿಯಂ ಸ್ಟೀವನ್ಸ್‌ ಎಂಬ ತಂತ್ರಜ್ಞ 1887ರಲ್ಲಿ ಇದನ್ನು ನಿರ್ಮಿಸಿದ.

        18 ಕೊನಾರ್ಕ್‌ನ ಸೂರ್ಯದೇವಾಲಯ: ಒರಿಸ್ಸಾ ರಾಜ್ಯದಲ್ಲಿದೆ.

        13ನೇ ಶತಮಾನದಲ್ಲಿ ಪೂರ್ವ ಗಂಗಾ ವಂಶದ ನರಸಿಂಹದೇವರಾಜನಿಂದ
        ನಿರ್ಮಿಸಲ್ಪಟ್ಟಿತು. ಭಗವಾನ್‌ ಶ್ರೀ ಕೃಷ್ಣನ ಮಗನಾದ ಸಾಂಬ ಇದನ್ನು ಕಟ್ಟಿಸಿದನೆಂದೂ ಪುರಾಣದಲ್ಲಿ ಉಲ್ಲೇಖವಿದೆ.

        19 ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನ ರಾಜಸ್ಥಾನ: ಆಗ್ರಾದಿಂದ 56 ಕಿ.ಮೀ. ದೂರದಲ್ಲಿದೆ.

        20 ಜಂತರ್‌ ಮಂತರ್‌, ಜೈಪುರ: ಮಹಾರಾಜ ಜೈಸಿಂಗ್‌ ದೇಶದಲ್ಲಿ ನಿರ್ಮಿಸಿದ 5 ಜಂತರ್‌ ಮಂತರ್‌ಗಳಲ್ಲಿ ಜೈಪುರದ ಜಂತರ್‌ಮಂತರ್‌ ಅತ್ಯಂತ ಉತ್ಕೃಷ್ಟ ಮಟ್ಟದ್ದು. 

        21 ಚೋಳ ದೇವಸ್ಥಾನಗಳು: ತಮಿಳ್ನಾಡಿನಲ್ಲಿರುವ ಈ ದೇಗುಲಗಳನ್ನು  ಕ್ರಿ.ಪೂ. 10ನೇ ಶತಮಾನದಲ್ಲಿ ಕಟ್ಟಲಾಗಿತ್ತು. ತಂಜಾವೂರಿನ ಬೃಹದೀಶ್ವರ ದೇವಸ್ಥಾನ, ಗಂಗೈಕೊಂಡದ ಬೃಹದೀಶ್ವರ ದೇವಸ್ಥಾನ ಹಾಗೂ ದಾರಾಸುರಮ್‌ನ ಐರಾವತೇಶ್ವರ ದೇವಾಲಯಗಳು ಜಗತøಸಿದ್ಧ.

        22 ಮಹಾಬಲಿಪುರಂ ಸ್ಮಾರಕಗಳ ಸಮುಚ್ಚಯ: ಚೆನ್ನೈ ನಗರದಿಂದ 58 ಕಿ.ಮೀ. ದೂರದಲ್ಲಿರುವ ಮಹಾಬಲಿಪುರಂ ಸ್ಮಾರಕಗಳ ನಿರ್ಮಾತೃಗಳು ಪಲ್ಲವ ದೊರೆಗಳು.

        23 ಆಗ್ರಾ ಕೋಟೆ: ಉತ್ತರ ಪ್ರದೇಶದಲ್ಲಿರುವ ಆಗ್ರಾ ಕೋಟೆ ತಾಜಮಹಲ್‌ನಿಂದ ಕೇವಲ 2.5 ಕಿ.ಮೀ. ದೂರದಲ್ಲಿದೆ.

        24 ಫ‌ತೇಪುರ ಸಿಕ್ರಿ: ಉತ್ತರಪ್ರದೇಶದ ಆಗ್ರಾ ಜಿಲ್ಲೆಯಲ್ಲಿದೆ.

        25 ತಾಜ್‌ಮಹಲ್‌: ಈ ಕಟ್ಟಡ ವಿಶ್ವದ ಅದ್ಭುತಗಳಲ್ಲೊಂದು ಎಂದೂ
        ಪರಿಗಣಿಸಲ್ಪಡುತ್ತದೆ.

        26 ಭಾರತದ ಪರ್ವತ ಶ್ರೇಣಿಯ ರೈಲು ಮಾರ್ಗಗಳು:

        1.ಪ.ಬಂಗಾಲದ ಡಾರ್ಜಿಲಿಂಗ್‌ನಲ್ಲಿರುವ ಹಿಮಾಲಯನ್‌ ರೈಲು ಮಾರ್ಗ,

        2. ತಮಿಳ್ನಾಡು ರಾಜ್ಯದ ನೀಲಗಿರೀಸ್‌ ಪರ್ವತ ರೈಲು ಮಾರ್ಗ ಹಾಗೂ 3. ಹಿಮಾಚಲ ಪ್ರದೇಶದ ಕಾಲ್ಕ - ಶಿಮ್ಲಾ ರೈಲು ಮಾರ್ಗ.

        27 ನಂದಾದೇವಿ ರಾಷ್ಟ್ರೀಯ ಉದ್ಯಾನವನ: ಉತ್ತರಾಖಂಡದ ನಂದಾದೇವಿ ಪರ್ವತದ ತುದಿಯಲ್ಲಿ 7,817 ಮೀಟರ್‌ ಎತ್ತರದಲ್ಲಿದೆ. ಇದರ ಒಟ್ಟು  ವಿಸ್ತೀರ್ಣ 630 ಚದರ ಕಿ.ಮೀ. ಇಲ್ಲಿರುವ ಪುಷ್ಪ ಕಣಿವೆ ನಯನ ಮನೋಹರ.

        28 ಸುಂದರಬನ್ಸ್‌ ರಾಷ್ಟ್ರೀಯ ಉದ್ಯಾನವನ: ಪ.ಬಂಗಾಲದ ಈ ಉದ್ಯಾನವನದಲ್ಲಿ ಕಾಂಡ್ಲಾ ಕಾಡು ವಿಶ್ವಪ್ರಸಿದ್ಧ.

        29 ಪಶ್ಚಿಮಘಟ್ಟ ಪ್ರದೇಶ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೆಯ್ನಾರ್‌, ಪೆರಿಯಾರ್‌, ಚಿನ್ನಾರ್‌, ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ, ಸೋಮೇಶ್ವರ, ಕೋಯ್ನಾ, ರಾಧಾನಗರಿ ಮುತಾದ ಕಡೆ ಇರುವ ವನ್ಯಮೃಗ ಧಾಮಗಳು, ಸೈಲೆಂಟ್‌ ವ್ಯಾಲಿ, ಕುದುರೆಮುಖ, ಚದೋಲಿ ಮುಂತಾದ ಕಡೆ ನಳನಳಿಸುತ್ತಿರುವ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಾವಿರಾರು ಪ್ರಾಣಿ ವೈವಿಧ್ಯ, ಅಳಿವಿನಂಚಿನಲ್ಲಿರುವ 325 ಪ್ರಾಣಿ ಸಂಕುಲಗಳಿವೆ. ಸಸ್ತನಿ ವರ್ಗಕ್ಕೆ ಸೇರಿದ ಸುಮಾರು 139 ಪ್ರಾಣಿಗಳಲ್ಲಿ ಚುಕ್ಕೆ ಗುರುತಿನ ಪುನುಗುಬೆಕ್ಕು ಹಾಗೂ ಸಿಂಹದ ಬಾಲ ಹೊಂದಿರುವ ಕೋತಿಗಳ ಸಂತತಿ ನಶಿಸುತ್ತಿದೆ. ನೀಲಗಿರೀಸ್‌ ಬೆಟ್ಟದಲ್ಲಿ ಆನೆಗಳು, ಸುಂದರಬನ್ಸ್‌ನ ಅನಂತರ ಕರ್ನಾಟಕ- ತಮಿಳ್ನಾಡು- ಕೇರಳ ಗಡಿ ಪ್ರದೇಶಗಳಲ್ಲಿ ಕಾಣಸಿಗುವ ಹುಲಿಗಳು, ಸಾಂಭಾರ್‌ಗಳು, ಕರಡಿಗಳು, ಚಿರತೆ, ಕಾಡುಹಂದಿಗಳಂತಹ ವೈವಿಧ್ಯಮಯ ಪ್ರಾಣಿಗಳಿಗೆ ರಕ್ಷಣೆ ಬೇಡವೇ? ದಾಂಡೇಲಿ, ಉ.ಕ.ದ ಅಭಯಾರಣ್ಯಗಳಲ್ಲಿ ಕಾಣಸಿಗುವ ಕತ್ತೆಕಿರುಬಗಳಾಗಲಿ, ಹಾರ್ನ್ಬಿಲ್‌ ಪಕ್ಷಿಗಳಾಗಲಿ, ಬೆಳಗಾವಿ ಜಿಲ್ಲೆಯ ಗುಹೆಗಳಲ್ಲಿರುವ ವಿಶಿಷ್ಟ ತಳಿಯ ಬಾವಲಿಗಳ ಸಂತತಿಯಾಗಲಿ ನಾಶ ಹೊಂದಿದರೆ ಮುಂದಿನ ಜನಾಂಗ ನಮ್ಮನ್ನು ಪ್ರಶ್ನಿಸದೇ ಬಿಟ್ಟಿತೇ?

        ಸಸ್ಯ ಸಂಕುಲದ ವೈವಿಧ್ಯಕ್ಕಂತೂ ಇಲ್ಲಿ ಎಣೆಯೇ ಇಲ್ಲ.

        ಪಶ್ಚಿಮಘಟ್ಟ ಪ್ರದೇಶ ವಿಶ್ವ ಪರಂಪರೆಯ ಪಟ್ಟಿಗೆ  ಸೇರಿದೊಡನೆ ಒದಗಬಹುದಾದ ಪ್ರಯೋಜನಗಳು ಒಂದೆರಡಲ್ಲ. ಪ್ರವಾಸೋದ್ಯಮ ವೃದ್ಧಿಯಾಗುತ್ತದೆ. ಜೀವ ವೈವಿಧ್ಯ ನಶಿಸಿ ಹೋಗುವ ಸಂಭವವಿರುವುದಿಲ್ಲ. ಅರಣ್ಯ ಸಂಪತ್ತು ಕಟುಕರ ಕೊಡಲಿ ಏಟಿನಿಂದ ಬಚಾವಾಗುತ್ತದೆ. ಪರಿಸರದಲ್ಲಿ ಮಳೆಯ ಪ್ರಮಾಣ ಹೆಚ್ಚಿ, ಜನ ನೀರಿಗಾಗಿ ಬವಣೆ ಪಡುವುದರಿಂದ ಮುಕ್ತರಾಗುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರವಿನ ಮಹಾಪೂರ ಹರಿದು ಬರುತ್ತದೆ.

        ಕೇಂದ್ರ ಸರ್ಕಾರ ಈಗ ಇನ್ನೊಂದು ಪಟ್ಟಿಯನ್ನು ತಯಾರಿಸಿದೆ. ಆದರೆ ಆ ಪಟ್ಟಿಯಲ್ಲಿ 30 ಸ್ಥಾನಗಳ ಪೈಕಿ ಕರ್ನಾಟಕದ ಒಂದು ತಾಣಕ್ಕೂ ಆದ್ಯತೆ ದೊರೆತಿಲ್ಲ! ಯುನೆಸ್ಕೋಗೆ ಒಪ್ಪಿಸುವ ಸಂಭಾವ್ಯ ತಾಣಗಳ ಪಟ್ಟಿಯಲ್ಲಿ ಮೈಸೂರು ಅರಮನೆ, ಗೋಲ್‌ಗ‌ುಂಬಜ್‌, ಬೇಲೂರು ಹಳೆಬೀಡು, ಹಲವಾರು ಪುರಾತನ ದೇವಸ್ಥಾನಗಳು, ಮಂಗಳೂರಿನ ಪುರಾತನ ಚರ್ಚುಗಳು ಇವುಗಳನ್ನೆಲ್ಲ ಸೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿಯಾರೆ?
        ಪಶ್ಚಿಮ ಘಟ್ಟ ಪ್ರದೇಶಕ್ಕೆ ವಿಶ್ವಪರಂಪರೆಯ ಮಾನ್ಯತೆ ದೊರೆಯಿತಲ್ಲಾ ಎಂಬ ಬಗ್ಗೆ ಸಂಭ್ರಮವಿರಲಿ, ಸಂತಾಪವಲ್ಲ!


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus