ಎರಡು ವಯಲಿನ್‌ಗಳ ಕಛೇರಿಯಲ್ಲಿ ಹೆಚ್ಚಾಗಿ ಕೇಳಿ ಬರುವುದು ಒಂದು ಪೈಪೋಟಿಯ ಕಸರತ್ತು. ಇದಕ್ಕೆ ಅಪವಾದವೋ ಎಂಬಂತೆ ಇತ್ತು ಜುಲೈ 28ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಾದಮಂಟಪ (ರಿ.) ಸಂಗೀತ ಸಭಾದ ವತಿಯಿಂದ ನಡೆದ ವಯಲಿನ್ ದ್ವಂದ್ವ. ವಿದ್ವಾನ್ ಬಾಲ್‌ರಾಜ್ ಮತ್ತು ವಿದ್ವಾನ್ ಪ್ರಭಾಕರ ಕುಂಜಾರು ನಡೆಸಿಕೊಟ್ಟ ಎರಡು ವಯಲಿನ್‌ಗಳ ಭಾವ ರಾಗ ತಾಳಗಳ ಮಿಳಿತ. ಈ ಕಛೇರಿಯಲ್ಲಿ ಇದ್ದುದು ಕೇವಲ ಸಂಗೀತ - ಸಂಯಕ್‌ಗೀತ. ಅಂತಾರಾಷ್ಟ್ರೀಯ ನೆಲೆಯ ಸಂಗೀತಗಾರರು ಮಾತ್ರ ಉತ್ತಮ ಸಂಗೀತ ನೀಡಬಲ್ಲರು ಎಂಬ ಪೂರ್ವಗ್ರಹ ಪೀಡಿತರಿಗೆ ಇದು ರುಚಿಸುತ್ತದೋ ಇಲ್ಲವೊ ತಿಳಿಯದು. ಯಾಕೆಂದರೆ ಇಲ್ಲಿ ಸ್ವರಗಳ ಪೈಪೋಟಿ ಇಲ್ಲ, ನಾಗಾಲೋಟವಿಲ್ಲ. ಪಕ್ಕವಾದ್ಯಗಳ "ಶ್ವಾನ ಲಾಂಗೂಲ' ಬಡಿತಗಳಿಲ್ಲ. ತ್ರಿಸ್ಥಾಯಿ ಗಳಿಂದಾಚೆಗೆ ಸಂಚಾರಗಳಿಲ್ಲ. ಪ್ರೇಕ್ಷಕರನ್ನು ಬೆರಗಾಗು ವಂತೆ ಮಾಡುವ ಗಿಮಿಕ್‌ಗಳಂತೂ ಇಲ್ಲವೇ ಇಲ್ಲ.
ಕೇದಾರಗೌಳದ ವರ್ಣ ಪ್ರಾರಂಭದಲ್ಲೆ ಎರಡು ವಯಲಿನ್‌ಗಳ ಮೇಳೈಕೆ ವೇದ್ಯವಾಯಿತು. ದೀಕ್ಷಿತರ ಚಕ್ರವಾಕ ರಾಗದ "ಗಜಾನನಯುತಂ' ಕೀರ್ತನೆಯು ಸಂಗೀತದ ಕಿರಿಯ ವಿದ್ಯಾರ್ಥಿಗಳು ಕೂಡ ಗುರುತಿಸುವಷ್ಟು ಸಾಹಿತ್ಯ ಸ್ಪಷ್ಟತೆಯಿಂದ ಕೂಡಿತ್ತು. ಆರಭಿ ರಾಗದಲ್ಲಿ ಚಿಕ್ಕ ಆಲಾಪನೆ ಮತ್ತು ದೀಕ್ಷಿತರ "ಶ್ರೀ ಸರಸ್ವತಿ ನಮೋಸ್ತುತೇ' ಹಾಗೂ ತದನಂತರ ಎತ್ತಿಕೊಂಡ ತ್ಯಾಗರಾಜರ "ಸರಸ ಸಾಮ ದಾನ' ಕೂಡ ಕಾಪಿನಾರಾಯಣಿ ರಾಗ ಭಾವ ಸ್ಪಷ್ಟತೆಯನ್ನು ಎತ್ತಿಹಿಡಿಯಿತು. ಮುಂದೆ ಸಿಂಹೇಂದ್ರಮಧ್ಯಮ ರಾಗದ "ನಿನ್ನೇ ನಮ್ಮಿತಿನಯ್ಯ' (ಮೈಸೂರು ವಾಸುದೇವಾಚಾರ್ಯರ ಕೃತಿ) ವಿಸ್ತಾರ ಆಲಾಪನೆಯೊಂದಿಗೆ ರಂಜಿಸಿತು. "ಪನ್ನಗೇಂದ್ರ ಶಯನ' ಎಂಬ ಭಾಗದಲ್ಲಿ ನೆರವಲ್ ಮತ್ತು ಸ್ವರ ಪ್ರಸ್ತಾರಗಳು ಭಾವ, ರಾಗ, ಮಿಶ್ರಛಾಪು ತಾಳಕ್ಕೆ ಹೊಂದಿಕೊಂಡ ಸೊಗಸು ಅದ್ಭುತವಾಗಿತ್ತು. ಭಾವ -ರಾಗಗಳನ್ನು ಅನುಭವಿಸಲಿಕ್ಕೆ ಸಮಯ ಬೇಕು. ಅತಿ ವೇಗವಾಗಿ ನಿರೂಪಣೆ ಮಾಡಿದರೆ ರಸಾಸ್ವಾದನೆಗೆ ಹಿತವಲ್ಲ ಎಂದು ಅನುಭಾವಿಗಳು ಹೇಳಿದ್ದಾರೆ. ಅದಕ್ಕೆ ತಕ್ಕಂತೆ ರಸಾಸ್ವಾದನೆಗೆ ಅನುಕೂಲವಾಗಲೆಂದು ಸಾಹಿತ್ಯ ಸ್ಪಷ್ಟತೆ ಯೊಂದಿಗೆ ತ್ಯಾಗರಾಜರ "ರಾಮಕಥಾಸುಧಾರಸ' ಉಣಬಡಿಸಿದರು. ಮಧ್ಯಮಾವತಿಯ ವಿಸ್ತಾರ ಆಲಾಪನೆ ಲಾಲ್ಗುಡಿಯವರ ಶೈಲಿಯನ್ನು ನೆನಪಿಗೆ ತಂದಿತು. "ಭಾಮಾಮಣಿ ಜಾನಕಿ' ಎಂಬ ಅನುಪಲ್ಲವಿ ಯಲ್ಲಿನ ಕಲ್ಪನಾ ಸ್ವರಗಳು ಕೃತಕವಾಗಿರದೆ, ಕೇವಲ ಲೆಕ್ಕಾಚಾರಗಳಿಂದ ಕೂಡಿರದೆ "ಸ್ವರ ರಾಗ ಸುಧಾರಸ ದಂತೆ' ಹೊರಹೊಮ್ಮಿತು. ಸ್ವಾತಿ ತಿರುನಾಳ್ ಮಹಾರಾಜರ ಬೇಹಾಗ್ ರಾಗದ ಜಾವಳಿ "ಸಾರಮೈನ' ಮತ್ತು ಲಾಲ್ಗುಡಿಯವರ ಮೋಹನ ಕಲ್ಯಾಣಿ ರಾಗದ ತಿಲ್ಲಾನದೊಂದಿಗೆ ಕಛೇರಿಗೆ ಮಂಗಳ ಹಾಡಿದರು.
ಚೆನ್ನೈಯ ಶಂಖದಿಂದ ಬಾರದಿದ್ದರೂ ಈ ವಯಲಿನ್ ಕಛೇರಿಯು ಕರ್ನಾಟಕ ಸಂಗೀತದ ಪವಿತ್ರ ತೀರ್ಥವಾಗಿತ್ತು. ಪಕ್ಕವಾದ್ಯದಲ್ಲಿ ರಾಜೀವ್ ಗೋಪಾಲ್ ಸಮರ್ಥವಾಗಿ ಮೃದಂಗ ನುಡಿಸಿದರು. ಕೆಲವೊಮ್ಮೆ ಮಾತ್ರ ಅವರ ಉತ್ಸಾಹವು ಮೃದಂಗದ ಧ್ವನಿಯನ್ನು ಏರಿಸುತ್ತಿತ್ತು. ಅವರ ಜೊತೆಯಲ್ಲಿ ವಿನೀತ್ ಅವರ ಘಟಂ ಹೊಂದಾಣಿಕೆಯಾಗಿತ್ತು - ಇವರ ಚೌಕ ಕಾಲ, ಆದಿ ತಾಳದ ಉತ್ತಮ ತನಿಯು ಮಕುಟಪ್ರಾಯವಾಗಿತ್ತು.