Wednesday, May 22, 2013
Last Updated: 11:32:54 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿಶಿಷ್ಟ ರಂಗ ಪ್ರಯೋಗ
    • ಮೂರು ಹೆಜ್ಜೆ ಮೂರು ಲೋಕ
    • "ನಮ್ಮ ಕಲಾವಿದರು'' ಅಭಿನಯಿಸಿದ "ಮೂರು ಹೆಜ್ಜೆ ಮೂರು ಲೋಕ'' ಕನ್ನಡ ನಾಟಕ.

      • ಕರುಣಾಕರ ಬಳ್ಕೂರು | Aug 10, 2012

        ಕಾಪು ಕಳತ್ತೂರಿನ ಕುಶಲಶೇಖರ ಸಭಾಂಗಣ ದಲ್ಲಿ ಮುದ್ರಾಡಿಯ "ನಮ್ಮ ಕಲಾವಿದರು' ಅಭಿನಯಿಸಿದ "ಮೂರು ಹೆಜ್ಜೆ ಮೂರು ಲೋಕ' ಕನ್ನಡ ನಾಟಕ ವಿಶಿಷ್ಟ ರೀತಿಯಲ್ಲಿ ಪ್ರಯೋಗಗೊಂಡು ನೆರೆದವರನ್ನು ರಂಜಿಸಿತು.

        ತುಳುನಾಡಿನ ಹಿರಿಯ ನಾಟಕಕಾರ ಡಿ. ಕೆ. ಚೌಟ ಅವರ ಮೂಲ ತುಳು ಕೃತಿ "ಮೂಜಿ ಮುಟ್ಟು ಮೂಜಿ ಲೋಕ'ವನ್ನು ಹಿರಿಯ ರಂಗಕರ್ಮಿ ಡಾ| ನಾ. ದಾಮೋದರ ಶೆಟ್ಟಿಯವರು ಕನ್ನಡಕ್ಕೆ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಅದನ್ನು ರಸವತ್ತಾಗಿ ಪ್ರಯೋಗಕ್ಕೆ ಅಣಿಗೊಳಿಸಿದ ಕೀರ್ತಿ ಯುವ ನಿರ್ದೇಶಕ ಶ್ರೀಪಾದ ಭಟ್‌ ಅವರಿಗೆ ಸಲ್ಲಬೇಕು.

        ತುಳುನಾಡಿನ ಇತಿಹಾಸ ಮತ್ತು ಒಂದಾನೊಂದು ಸಮಯದಲ್ಲಿ ತುಳುಲೋಕ ವನ್ನಾಳಿದ ಕೋಶರರ ಸಂಸ್ಕೃತಿ, ಸತ್ಯ, ತ್ಯಾಗ, ಬಲಿದಾನ, ಕೃಷಿ ಚಟುವಟಿಕೆಗಳನ್ನು ಪರಿಚಯಿಸುತ್ತಾ ಪ್ರಾರಂಭವಾಗುವ ನಾಟಕದ ಉದ್ದಕ್ಕೂ ತುಳು ಪಾಡªನಗಳಿಂದ ಆಯ್ದ ಕಾಲ್ಪನಿಕ ಶೈಲಿ ವ್ಯಕ್ತಗೊಳ್ಳುತ್ತ ಹೋಗುತ್ತದೆ.

        ಜಗತ್ತನ್ನು ಸೃಷ್ಟಿಸುವ ಈಶ್ವರ ಮತ್ತು ಉಳ್ಳಾಲ್ತಿ, ಸೃಷ್ಟಿಕಾರರಿಂದಲೇ ಶಾಪಕ್ಕೆ ಒಳಗಾಗಿ ಮೇಲಿನ ಲೋಕದಿಂದ ಭೂಲೋಕಕ್ಕೆ ಇಳಿಯುವ ವರಾಹ ರೂಪಿಗಳು, ಶಿರಾಡಿ ಘಟ್ಟ ದಲ್ಲಿ ಅಣ್ಣತಂಗಿಯರಂತೆ ಏಳುಮಲೈಯಲ್ಲಿ ತಾಯಿ, ಮಗ ಮತ್ತು ಕೆಳಗಿನ ಸುಬ್ರಾಯ ಘಟ್ಟದಲ್ಲಿ ಗಂಡಹೆಂಡಿರಂತೆ ಜೀವಿಸಲು ಬಂದು, ಆ ಸಮಯದಲ್ಲಿ ಇಲ್ಲಿ ಆಳ್ವಿಕೆ ಮಾಡುತ್ತಿದ್ದ ಅಮ್ಮು ಬಳ್ಳಾಲ್ತಿಯ ಗಂಡನನ್ನು ಕೊಂದು ಮಾಯಾರೂಪದಲ್ಲಿ ಅಮ್ಮು ಬಳ್ಳಾಲ್ತಿಯ ಆಳ್ವಿಕೆಗೆ ಬೆಂಗಾವಲಾಗಿ ಇರುತ್ತಾರೆ. ಅಮ್ಮು ಬಳ್ಳಾಲ್ತಿಯ ಕಡು ವಿರೋಧಿ ನಣ್ಣಿ ಹೆಗಡೆ ಯನ್ನು ಸೋಲಿಸಿ ಯುವರಾಜ ಪಟ್ಟದಿಂದ ರಾಜ ಪದವಿಗೇರುತ್ತಾನೆ.

        ಅನಂತರ ಬಲಿ ಚಕ್ರವರ್ತಿಯ ಕಥೆ ಎಲ್ಲರಿಗೂ ತಿಳಿದಿರುವ ಹಾಗೆ ಮುಂದೆ ಸಾಗುತ್ತದೆ. ಕೊನೆಯಲ್ಲಿ ವಾಮನ ಅವತಾರ ತಾಳಿರುವ ನಾರಾಯಣ ದೇವರಿಗೆ ಅಮ್ಮು ಬಳ್ಳಾಲ್ತಿ ಹಿಡಿ ಶಾಪ ಹಾಕಿ ಒಂದು ಸಾವಿರ ವರ್ಷಗಳ ಕಾಲ ತುಳುನಾಡಿನಲ್ಲಿ ನಿನಗೆ ಪೂಜೆ ಇರದೇ ಹೋಗಲಿ ಮತ್ತು ತುಳುವರು ದೈವಾರಾಧನೆಯನ್ನು ನೆಚ್ಚಿಕೊಂಡಿರಲಿ ಎಂದು ಹೇಳುತ್ತಾಳೆ. ಕೊನೆಗೆ ಬಲಿ ಪಾತಾಳ ಲೋಕಕ್ಕೆ ಹೋಗುವಲ್ಲಿಗೆ ನಾಟಕ ಮುಕ್ತಾಯಗೊಳ್ಳುತ್ತದೆ.

        ಮುದ್ರಾಡಿಯ ಕಲಾ ಕುಟುಂಬ ನಾಟಕ ವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಪ್ರಮುಖ ಭೂಮಿಕೆಯಲ್ಲಿ ಸುಕುಮಾರ್‌ ಮೋಹನ್‌ ಸೇರಿ ದಂತೆ ಎÇÉಾ ಕಲಾವಿದರು ಪಾತ್ರಕ್ಕೆ ಪ್ರಾಮಾಣಿಕ ವಾಗಿ ಜೀವ ತುಂಬಿ¨ªಾರೆ. ನಾಟಕಕ್ಕೆ ಬಳಸಿದ ರಂಗತಂತ್ರ, ನಡುನಡುವೆ ಬಳಸಿಕೊಂಡ ಕೋಲ, ಯಕ್ಷಗಾನದ ಚೆಂಡೆ ಬಡಿತಗಳು, ವಿಶಿಷ್ಟವಾದ ರಂಗಪರಿಕರ ಮತ್ತು ವೇಷಭೂಷಣಗಳು ನಾಟಕಕ್ಕೆ ಮೆರುಗು ಕೊಟ್ಟವು. ಪ್ರೇಕ್ಷಕರ ನಡುವಿ ನಿಂದಲೇ ಬರುವ ಆಟಿ ಕಳಂಜ ಅದಕ್ಕಾಗಿ ಉಪಯೋಗಿಸಿದ ವಿಭಿನ್ನ ವಸ್ತ್ರವಿನ್ಯಾಸ, ಬೆಳಕು ನಾಟಕದ ವಿಭಿನ್ನತೆಯನ್ನು ಸಾರುತ್ತಿತ್ತು.

        ನೀನಾಸಮ್‌ ಪದವೀಧರ ಪ್ರತಿಭಾನ್ವಿತ ಸ್ವಾಮಿ ಗಾಮನಹಳ್ಳಿಯವರ ಸಂಗೀತ ಹಾಗೂ ಸುಮಧುರ ಹಾಡುಗಳು ನಾಟಕವನ್ನು ಎತ್ತರಕ್ಕೆ ಏರಿಸುವಲ್ಲಿ ಸಹಕಾರಿಯಾಗಿಸಿದ್ದು ಸತ್ಯ. ಶ್ರೀಪಾದ ಭಟ್‌ ಅವರ ನಿರ್ದೇಶನ ಕೌಶಲವನ್ನು ನೆನೆಯಬೇಕು. ಅದೇ ರೀತಿಯಲ್ಲಿ "ನಮ್ಮ ತುಳುವೆರ್‌' ಸಂಘಟನೆಯ ಬೆನ್ನೆಲುಬಾದ ಧರ್ಮದರ್ಶಿ ಮೋಹನ್‌ ಪಾತ್ರಿಯವರನ್ನು ಅಷ್ಟೇ ಪ್ರೀತಿಪೂರ್ವಕವಾಗಿ ಸ್ಮರಿಸಬೇಕು.

        ನಿರ್ದೇಶಕರು ಅಲ್ಲಲ್ಲಿ ತುಳು ಶಬ್ದಗಳನ್ನು ಬಳಸಿದ್ದು ಕೊಂಚ ಮಟ್ಟಿಗೆ ಅಭಾಸವೆನಿಸಿತು. ನಿರೂಪಣೆಯ ಸ್ಪಷ್ಟತೆಯಲ್ಲಿ ಸ್ವಲ್ಪಮಟ್ಟಿನ ಕೊರತೆ ಕಂಡು ಬಂತು. ಸ್ವಲ್ಪಹೆಚ್ಚೇ ನಿಧಾನ ಎನಿಸುವ ಹೆಜ್ಜೆಗಳು ಮತ್ತು ಚೆಂಡೆಯ ಬಡಿತಗಳು ಇದ್ದರೂ ಒಟ್ಟು ನಾಟಕದ ರಸಗ್ರಹಣಕ್ಕೆ ವಿಶೇಷ ತೊಂದರೆ ಎದುರಾಗಲಿಲ್ಲ. ದೃಶ್ಯದಿಂದ ದೃಶ್ಯಕ್ಕೆ ಬದಲಾವಣೆ ಇನ್ನಷ್ಟು ವೇಗವಾಗಿರುತ್ತಿದ್ದರೆ ನಾಟಕ ಮತ್ತಷ್ಟು ಪರಿಣಾಮಕಾರಿಯಾಗುತ್ತಿತ್ತು. ಪ್ರಾಯಶಃ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತಾ ಹೋಗುವಾಗ ಆ ಕೊರತೆಯನ್ನು ನೀಗಿಸಬಲ್ಲ ಶಕ್ತಿ ತಂಡಕ್ಕೆ ಖಂಡಿತವಾಗಿಯೂ ಇದೆ.

        ಸದ್ಯದಲ್ಲೆ ತಿರುಗಾಟ ಆರಂಭಿಸಲಿರುವ ಮತ್ತು ದೇಶಾದ್ಯಂತ ಪ್ರದರ್ಶನ ನೀಡಲಿರುವ ತಂಡಕ್ಕೆ ಅಭಿನಂದನೆ ಮತ್ತು ಶುಭ ಹಾರೈಕೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus