ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಂಜ ಉಲ್ಯದಲ್ಲಿ ನಂದಿನಿ ನದಿಯ ತಡೆಗೋಡೆಯಲ್ಲಿ ಶುಕ್ರವಾರ ಬಿರುಕು ಉಂಟಾಗಿ ನೀರು ಉಲ್ಯ ಪರಿಸರಕ್ಕೆ ನುಗ್ಗಿ ಸುಮಾರು 35 ಮನೆಗಳು ಜಲಾವೃತಗೊಂಡವು ಹಾಗೂ 500 ಎಕರೆ ಪ್ರದೇಶದ ಭತ್ತದ ಕೃಷಿಗೆ ಹಾನಿಯಾಗಿದೆ. ಅಲ್ಲಿನ ಮನೆಯವರನ್ನು ಗೃಹರಕ್ಷಕ ದಳದ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು.ಕಿಲೆಂಜೂರಿನಲ್ಲಿ ನಂದಿನಿ ನದಿಯಲ್ಲಿ ಪ್ರವಾಹ ನೆರೆ ಉಕ್ಕಿದ್ದು 7ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.ಒಡೆದು ಹೋದ ಉಲ್ಯ ತಡೆಗೋಡೆಉಲ್ಯ ತಡೆಗೋಡೆಯು ಕಳೆದ ಮಳೆಗಾಲದಲ್ಲಿ ನೆರೆಗೆ ಬಿರುಕು ಬಿಟ್ಟಿದ್ದು ಜೂನ್ ಮೊದಲ ವಾರದಲ್ಲಿ ದುರಸ್ತಿ ಮಾಡಲಾಗಿತ್ತು. ಆದರೆ ನೀರಿನ ಒತ್ತಡಕ್ಕೆ ಶುಕ್ರವಾರ ಚಿಕ್ಕ ಬಿರುಕು ಕಾಣಿಸಿಕೊಂಡಿತ್ತು. ರಾತ್ರಿ ಭಾರೀ ಮಳೆ ಸುರಿದ ಕಾರಣ ನೀರು ಉಕ್ಕಿ ಹರಿದು ತಡೆಗೋಡೆ ಸುಮಾರು 20 ಅಡಿ ಅಗಲಕೆ ಕೊಚ್ಚಿಹೋಗಿದೆ. (ಕಳೆದ ಜನವರಿಯಲ್ಲಿ ಈ ತಡೆಗೋಡೆಯ ಬಗ್ಗೆ ಉದಯವಾಣಿ ಸಚಿತ್ರ ವರದಿ ಮಾಡಿತ್ತು. ಅದಕ್ಕೆ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲೀ ಸ್ಪಂದಿಸಿರಲಿಲ್ಲ).ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಪುತ್ತೂರಾಯ, ಎಸಿಪಿ ಪುಟ್ಟಮಾದಯ್ಯ ಭೇಟಿನೀಡಿ ಸಂತ್ರಸ್ತ ಜನರನ್ನು ಕರೆತರಲು ಯಾಂತ್ರೀಕೃತ ಬೋಟ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.ಕೆಮ್ರಾಲ್ ಪಂಚಾಯತ್ ಸದಸ್ಯ ಸುರೇಶ್ ದೇವಾಡಿಗ ತಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವಲ್ಲಿ ಸಹಕರಿಸಿತು. ಸ್ಥಳಕ್ಕೆ ಜಿ.ಪಂ. ಸದಸ್ಯ ಈಶ್ವರ್ ಕಟೀಲು, ತಾ.ಪಂ. ಸದಸ್ಯ ಬೇಬಿ ಕೋಟ್ಯಾನ್ ಮತ್ತಿತರರು ಭೇಟಿ ನೀಡಿದ್ದಾರೆ.ಬೆೈಲಗುತ್ತುವಿನಲ್ಲಿ ಮೂರು ಮನೆಗಳು ಜಲಾವೃತಗೊಂಡಿದ್ದು ಇನ್ನೂ ಎರಡು ಮನೆಗಳು ಜಲಾವೃತಗೊಂಡು ಮುಳುಗುವ ಹಂತದಲ್ಲಿವೆ ಹಾಗೂ ನನ್ನ ಸ್ವಂತ ದೋಣಿಯಲ್ಲಿ ಅಲ್ಲಿಯ ಜನರನ್ನು ಸುರಕ್ಷಿತ ಸ್ಥಳಕ್ಕೆ ತರಲಾಗಿದೆ ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.ನಂದಿನಿ ನದಿಯ ಪ್ರವಾಹಕ್ಕೆ ಕಿಲೆಂಜೂರಿನ ನಡುಗೋಡು, ಶಿಬರೂರು, ಸೂರಿಂಜೆ ಪರಿಸರದ ಗದ್ದೆಗಳು ಜಲಾವೃತವಾಗಿವೆ. ಪಂಜ ಮಹಾಗಣಪತಿ ಮಂದಿಕ್ಕೆ ಹೋಗುವ ರಸ್ತೆ ಪೂರ್ತಿ ಮುಳುಗಡೆಯಾಗಿ ಸಂಪರ್ಕ ಕಳೆದುಕೊಂಡಿದೆ.ಕಿಲೆಂಜೂರಿನ ರಾಘು ಕರ್ಕೇರಾ, ದೇವಕಿ ಮತ್ತಿತರರ ಮನೆಯವರನ್ನು ಶನಿವಾರ ಮಧ್ಯಾಹ್ನ ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ತರಲಾಯಿತು. ಕಿಲೆಂಜೂರು ಮಾಡರ ಮನೆ ಪಕ್ಕದಲ್ಲಿ ಗದ್ದೆಗಳು ಪೂರ್ಣ ಮುಳುಗಿವೆ ಎಂದು ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು ತಿಳಿಸಿದ್ದಾರೆ.