ನೇಮಿಚಂದ್ರ | Aug 12, 2012
ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ನಿಧನದೊಡನೆೆ ಯುಗವೊಂದು ಮುಗಿಯಿತು. ಜೀವನವಿಡೀ ಬಡವರ, ದೀನ ದಲಿತರ ಬದುಕನ್ನು ಬದಲಿಸಲು ಹೋರಾಡಿದ ಮಹಾನ್ ಚೇತನ ತನ್ನ 98ನೇ ವಯಸ್ಸಿನಲ್ಲಿ ವಿಶ್ರಮಿಸಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ಸೇರಿ ಮಹಿಳೆಯರ ಸೇನೆಯನ್ನೇ ಕಟ್ಟಿ ದೇಶದ ಸ್ವಾತಂತ್ರಕ್ಕೆ ಹೋರಾಡಿದ ಈ ದೇಶಭಕ್ತ ಮಹಿಳೆ, ಸದ್ದಿಲ್ಲದೆ ಕಾನ್ಪುರದ ಗಲ್ಲಿಯೊಂದರಲ್ಲಿ ವೈದ್ಯಳಾಗಿ ಅರ್ಧ ಶತಮಾನಕ್ಕೂ ಮೀರಿ ನಿರಾಶ್ರಿತರ, ನಿರ್ಗತಿಕರ ಸೇವೆಯಲ್ಲಿ ತೊಡಗಿದ್ದು ನಮ್ಮಲ್ಲಿ ಅನೇಕರಿಗೆ ತಿಳಿಯದು.
ತೊಂಬತ್ತು ದಾಟಿದ ವಯಸ್ಸಿನಲ್ಲೂ ಕ್ಯಾಪ್ಟನ್ ಲಕ್ಷಿ ¾ ಅವರು ಮುಪ್ಪರಿಯದೆ ದುಡಿಯುತ್ತಿದ್ದ ಪರಿ ಅವರನ್ನು ಹತ್ತಿರದಿಂದ ಕಂಡವರ ಆಪ್ತ ನೆನಪುಗಳಲ್ಲಿ ಅಚ್ಚಳಿಯದೆ ಉಳಿದಿದೆ.
ಪತ್ರಕರ್ತೆ ವಿನುತಾ ಮಲ್ಯಾ ಅವರು ಕ್ಯಾಪ್ಟನ್ ಲಕ್ಷ್ಮೀ ಅವರ ಸಂದರ್ಶನಕ್ಕೆ ಹೋದ ಒಂದು ಸಂದರ್ಭವನ್ನು ವರ್ಣಿಸಿ¨ªಾರೆ. ಲಕ್ಷ್ಮೀ ಅವರ ಧೀಮಂತ ವ್ಯಕ್ತಿತ್ವದ ಸಾûಾತ್ಕಾರವನ್ನು ಇಲ್ಲಿ ಕಾಣಬಹುದು. ಅವರು ಬರೆಯುತ್ತಾರೆ - "ಜನವರಿ 2006 ಒಂದು ಮುಂಜಾನೆ, ಶಿಶಿರದ ಹೊಳೆವ ಸೂರ್ಯನಿದ್ದರೂ, ಚಳಿ ಕೊರೆದಿತ್ತು. ಕಾನ್ಪುರದ ಆರ್ಯನಗರದ ಆ ಕಿರುಗಲ್ಲಿಯಲ್ಲಿ, ಕಾದು ನಿಂತ ಹೆಂಗಸರ ಸರಣಿ ಬೆಳೆಯುತ್ತಲೇ ಹೋಗಿತ್ತು. ಅಲ್ಲಿ ನಿಂತವರಲ್ಲಿ ಹೆಚ್ಚು ಮಂದಿ ಗರ್ಭಿಣಿ ಹೆಂಗಸರು. ನಾನು ಒಂದಿಷ್ಟು ದೂರ ವೆರಾಂಡದಲ್ಲಿ ಬೆಂಚಿನ ಮೇಲೆ ಕುಳಿತಿ¨ªೆ. "ಲೇಬರ್ ಕಾಲೊನಿ'ಯಲ್ಲಿದ್ದ ಆ ಪುರಾತನ ಮನೆ, ಕ್ಲಿನಿಕ್ ಮತ್ತು ಹೆರಿಗೆ ಆಸ್ಪತ್ರೆಯಾಗಿತ್ತು. ಒಬ್ಬೊಬ್ಬ ರೋಗಿ ಒಳಗೆ ಹೋಗಿ, ಹೊರ ಬಂದಂತೆ, ಅರೆ ತೆರೆದ ಬಾಗಿಲಿನ ಮೂಲಕ ಅತ್ಯಂತ ಸರಳವಾದ ಪರೀಕ್ಷಣಾ ಕೋಣೆಯಲ್ಲಿ ತಮ್ಮ ಕಾರ್ಯದಲ್ಲಿ ಸಂಪೂರ್ಣ ಮಗ್ನರಾದ ಕ್ಯಾಪ್ಟನ್ ಲಕ್ಷ್ಮೀಯ ಚೆಹರೆ ಕಾಣುತ್ತಿತ್ತು. ನಾನು ಮತ್ತು ಆ ಎಲ್ಲ ಬಡ ಗರ್ಭಿಣಿ ಮಹಿಳೆಯರು ಇಲ್ಲಿ ಈ ಒಬ್ಬ ಮಹಿಳೆಗಾಗಿ ಕಾದಿ¨ªೆವು - ಆಕೆ ತನ್ನ ಜೀವಿತ ಕಾಲದಲ್ಲಿಯೇ ದಂತಕತೆಯಾದ ಕ್ಯಾಪ್ಟನ್‌ಲಕ್ಷ್ಮೀ ಸೆಹಗಲ್...
"ಕಾನ್ಪುರದ ಮೂಲೆ ಮೂಲೆಯಿಂದ, ಹತ್ತಿರದ ಲಕ್ನೋನಿಂದಲೂ ಬಂದ ಆ ಎÇÉಾ ಮಹಿಳೆಯರ ತಪಾಸಣೆ ಮುಗಿಯುವವರೆಗೆ ನಾನು ಕಾಯಬೇಕಿತ್ತು. ಕಾರಣ, ಅವರಂತೆ ನಾನು ವೈದ್ಯ ತಪಾಸಣೆಗೆ ಬಂದಿರಲಿಲ್ಲ, ಕ್ಯಾಪ್ಟನ್ ಲಕ್ಷ್ಮೀಯವರನ್ನು ಸಂದರ್ಶಿಸಲು ಬಂದಿ¨ªೆ. ಅವರ ಮೊದಲ ಆದ್ಯತೆ ಅವರ ರೋಗಿಗಳಾಗಿದ್ದರು. ಆಗ ಅವರಿಗೆ 91 ವರ್ಷ. ಇದೇ ಕ್ಲಿನಿಕ್‌ನಲ್ಲಿ ಅವರು 1951ರಿಂದ ತಮ್ಮ ರೋಗಿಗಳ ಸೇವೆಯಲ್ಲಿ ತೊಡಗಿದ್ದರು. ಆಕೆಯ ಬಳಿಗೆ ಬಂದ ಈ ರೋಗಿಗಳ ಸಾಗರ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಅತ್ಯಂತ ಕೆಳ ವರ್ಗದ ಗುಂಪಿನದಾಗಿತ್ತು. ಕಾನ್‌ಪುರದಲ್ಲಿ ಮಿಲ್‌ಗಳು ಮುಚ್ಚಿ, ಕೆಲಸವಿಲ್ಲದೆ ಕೂಲಿಯಿಲ್ಲದೆ ಜೀವನ ನಡೆಸಲು ತತ್ತರಿಸುತ್ತಿದ್ದ ಮಂದಿ ಇವರು. ಆರೋಗ್ಯದ ಅನುಕೂಲ, ಆಸ್ಪತ್ರೆಯ ಸೌಕರ್ಯವಿಲ್ಲದ ಹೆಂಗಸರು ಮಕ್ಕಳು ಇಲ್ಲಿ ನೆರೆದಿದ್ದರು...
"ಅಲ್ಲಿ ಕುಳಿತು ಕಾಯುತ್ತಿರುವ ರೋಗಿಗಳಿಗೆ ಈ ಅಸಾಧಾರಣ ಮಹಿಳೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತೆ ಎಂಬ ಅರಿವಿರಲಿಲ್ಲ'
ಪತ್ರಕರ್ತೆ ಪಾರ್ವತಿ ಮೆನನ್ ತಮ್ಮ ಹೃದಯಸ್ಪರ್ಶಿ ಲೇಖನದಲ್ಲಿ ಕ್ಯಾಪ್ಟನ್ ಲಕ್ಷ್ಮೀ ಅವರನ್ನು ನೆನಪಿಸಿಕೊಂಡು ಬರೆಯುತ್ತಾರೆ - ""ತೊಂಬತ್ತು ದಾಟಿದ ವಯಸ್ಸಿನಲ್ಲಿಯೂ ಅವರ ಕಾನ್ಪುರದ ಕ್ಲಿನಿಕ್‌ನಲ್ಲಿ ರೋಗಿಗಳು ತುಂಬಿ ತುಳುಕಿದ್ದರು. ಅವರ ನಡುವೆ ಕುಳಿತಂತೆ ಕ್ಯಾಪ್ಟನ್ ಲಕ್ಷ್ಮೀ ಹೇಳಿದ್ದರು, "ಹೋರಾಟ ಮುಂದುವರೆಯುತ್ತದೆ'. ಅವರ ಹೋರಾಟ ದೇಶಕ್ಕೆ ಸ್ವಾತಂತ್ರ್ಯ ಬಂದೊಡನೆ ನಿಂತದ್ದಲ್ಲ. ಹೋರಾಟ ಮತ್ತೂಂದು ರೂಪದಲ್ಲಿ ಮುಂದುವರೆಯಿತು. ಎಲ್ಲಿಯವರೆಗೆ ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾತಂತ್ರ್ಯವನ್ನು ದೇಶ ಗಳಿಸುವುದಿಲ್ಲವೋ, ಅಲ್ಲಿಯವರೆಗೆ ನಾಡಿಗೆ ನಿಜವಾದ ಬಿಡುಗಡೆ ಇಲ್ಲ ಎಂದು ಅವರಿಗೆ ತಿಳಿದಿತ್ತು'.
ಕ್ಯಾಪ್ಟನ್ ಲಕ್ಷ್ಮೀ ಹೇಳಿದ್ದರು ""ಸ್ವಾತಂತ್ರ್ಯ ಎಂಬುದು ಮೂರು ರೂಪದಲ್ಲಿ ಬರುತ್ತದೆ. ಮೊದಲನೆಯದು ರಾಜಕೀಯ ಸ್ವಾತಂತ್ರ್ಯ, ಎರಡನೆಯದು ಆರ್ಥಿಕ ಸ್ವಾತಂತ್ರ್ಯ ಮತ್ತು ಮೂರನೆಯದು ಸಾಮಾಜಿಕ ಬಿಡುಗಡೆ. ಭಾರತ ಮೊದಲನೆಯದನ್ನು ಸಾಧಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಇನ್ನೂ ಸಾಧಿಸಬೇಕಿದೆ'.
.
ಈ ಭಾನುವಾರ "ಕನ್ನಡ ಸಾಹಿತ್ಯ ಪರಿಷತ್'ಗೆ ಹೋಗಿ¨ªೆ. ಕೊಡಗಿನ ಗೌರಮ್ಮನ ಶತಮಾನೋತ್ಸವದ ಈ ವರ್ಷ ಎಚ್. ನಾಗವೇಣಿ ಅವರು ಕೊಡಗನ್ನು ಸುತ್ತಿ, ಕ್ಷೇತ್ರ ಕಾರ್ಯ ನಡೆಸಿ, ಗೌರಮ್ಮನ ಮಗನನ್ನು ಭೇಟಿ ಮಾಡಿ, ಅಗಾಧ ವಿಷಯಗಳನ್ನು ಸಂಗ್ರಹಿಸಿ ಬರೆದ "ಕೊಡಗಿನ ಗೌರಮ್ಮ' ಪುಸ್ತಕದ ಬಿಡುಗಡೆ ಇತ್ತು. ಸ್ವಾತಂತ್ರ್ಯ ಪೂರ್ವದ ವರ್ಷಗಳಲ್ಲಿ ಸಮಾಜ ಸಂಪ್ರದಾಯದ ಸರಹದ್ದನ್ನು ಮೀರಿನಿಂತು, ವಿಧವಾ ಸಮಸ್ಯೆ, ವರದಕ್ಷಿಣೆ, ಬಾಲ್ಯವಿವಾಹ, ವಿಷಮ ದಾಂಪತ್ಯದಂತಹ ವಿಚಾರಗಳನ್ನು ತಮ್ಮ ಕಥನ ಶೈಲಿಯಲ್ಲಿ ಬೆಸೆದ ಗೌರಮ್ಮನ ಸಾಹಿತ್ಯಿಕ ಸಾಧನೆಯ ಅರಿವಿತ್ತು. ಕೇವಲ 27ರ ವಯಸ್ಸಿನಲ್ಲಿ ಹಟ್ಟಿಹೊಳೆಗೆ ಈಜಲು ಹೋದವರು ಅಕಾಲ ಮೃತ್ಯುವಿಗೆ ಗುರಿಯಾದದ್ದೂ ತಿಳಿದಿತ್ತು. ಆದರೆ, ಇಂದು ನನ್ನ ಮನಸ್ಸನ್ನು ಆವರಿಸಿದ್ದು , ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡಗಿನ ಗೌರಮ್ಮ ಮಿಡಿದ ರೀತಿ.
ಎಳೆಯ ವಯಸ್ಸಿನಲ್ಲಿಯೇ ಗೌರಮ್ಮ ದೇಶಭಕ್ತರ ಚರಿತ್ರೆಗಳಿಂದ ಪ್ರಭಾವಿತರಾದರು. ಮಹಾತ್ಮಾ ಗಾಂಧಿ ಆರಂಭಿಸಿದ ಕರ ನಿರಾಕರಣ ಚಳುವಳಿ, ಖಾದಿ ಚಳುವಳಿಯತ್ತ ಆಕರ್ಷಿತರಾಗಿ, ಹದಿನಾರನೇ ವಯಸ್ಸಿನಿಂದಲೇ ಖಾದಿ ಸೀರೆಯನ್ನು ಉಡಲು ತೊಡಗಿದರು.
1934, ಫೆಬ್ರವರಿ ತಿಂಗಳಿನ ಕೊನೆಯಲ್ಲಿ ಹರಿಜನ ಕಲ್ಯಾಣ ನಿಧಿ ಸಂಗ್ರಹಣೆಗಾಗಿ ಗಾಂಧೀಜಿಯವರು ಕರ್ನಾಟಕದಲ್ಲಿ ಹನ್ನೆರಡು ದಿನಗಳ ಪ್ರವಾಸವನ್ನು ಕೈಗೊಂಡು, ಫೆಬ್ರವರಿ 22ನೇ ತಾರೀಖು ಕೊಡಗು ಜಿÇÉೆಗೆ ಬಂದು ಅಲ್ಲಿ ಎರಡು ದಿನಗಳ ವಾಸ್ತವ್ಯವನ್ನು ಹೂಡಲಿದ್ದರು. ಈ ಸಂದರ್ಭದಲ್ಲಿ ಊರಿನ ಸ್ವಾಗತ ಮಂಡಲಿಯವರ ಪೂರ್ವನಿರ್ಧಾರದಂತೆ, ಗಾಂಧೀಜಿಯವರು ಒಂದು ಸಂಜೆಗೆ ಶುಂಠಿಕೊಪ್ಪದ ಗುಂಡುಕುಟ್ಟಿಯಲ್ಲಿ ಗೌರಮ್ಮನವರ ಮನೆಯ ಪಕ್ಕವೇ ಇರುವ, ಗುಂಡುಕುಟ್ಟಿ ಮಂಜುನಾಥಯ್ಯನವರ ಎಸ್ಟೇಟ್ ಬಂಗಲೆಯÇÉೇ ತಂಗುವುದಿತ್ತು. ಈ ಮೊದಲೇ ಗೌರಮ್ಮನವರು ಊರಿನ ಸ್ವಾಗತ ಮಂಡಲಿಯವರಲ್ಲಿ "ಗಾಂಧೀಜಿಯವರನ್ನು ನಮ್ಮ ಮನೆಗೂ ಕರೆತರಬೇಕು, ನಾನವರಿಗೆ ಒಡವೆ ಅರ್ಪಿಸುವುದಿದೆ' ಎಂದು ಕೋರಿದ್ದರೂ ಆ ಕೋರಿಕೆಯನ್ನು ಸ್ವಾಗತ ಮಂಡಲಿಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಗೌರಮ್ಮ ಗಾಂಧೀಜಿ ತಮ್ಮ ಮನೆಗೆ ಬರಬೇಕೆಂದು ಆಗ್ರಹಿಸಿ ಹಠ ಹಿಡಿದು ಅನ್ನ ನೀರು ಬಿಟ್ಟು ಉಪವಾಸ ಸತ್ಯಾಗ್ರಹವನ್ನೇ ಆರಂಭಿಸಿ ಬಿಟ್ಟರು. ತರುಣಿಯೊಬ್ಬಳು ತನ್ನ ಕಾರಣಕ್ಕೆ ನೊಂದು, ಅನ್ನ ನೀರು ಬಿಟ್ಟು ಹಠ ಹಿಡಿದ ಸುದ್ದಿ ಸಹಾಯಕರ ಮೂಲಕ ತಿಳಿದ ಗಾಂಧೀಜಿ ಗೌರಮ್ಮನವರ ಮನೆಗೆ ಬಂದರು. ಮನೆಗೆ ಬಂದ ಗಾಂಧೀಜಿಯವರಿಗೆ ಖಾದಿಯುಟ್ಟ ಗೌರಮ್ಮ, ಮುತ್ತೆçದೆಯ ಒಡವೆಗಳಾದ ಮಂಗಳ ಸೂತ್ರ, ಕಿವಿಯ ಓಲೆ, ಮೂಗುಬೊಟ್ಟನ್ನು ಬಿಟ್ಟು, ತಮ್ಮಲ್ಲಿದ್ದ ಅಷ್ಟೂ ಒಡವೆಗಳನ್ನು ಹೋರಾಟದ ನಿಧಿಗೆ ಅರ್ಪಿಸಿದರು. ಅವರು ಮತ್ತೆಂದೂ ಬದುಕಿರುವವರೆಗೆ ಮುತ್ತೆçದೆ ಒಡವೆಗಳನ್ನು ಬಿಟ್ಟು ಮತ್ತೇನನ್ನೂ ಧರಿಸಲಿಲ್ಲ.
ಹದಿನಾರನೆ ಎಳೆಯ ವಯಸ್ಸಿಗೆ ಖಾದಿ ಧರಿಸಿ, 22ರ ಪ್ರಾಯದಲ್ಲಿ ತನ್ನೆಲ್ಲ ಒಡವೆಗಳನ್ನು ದೇಶ ಕಲ್ಯಾಣಕ್ಕೆ ಅರ್ಪಿಸಿದ ಗೌರಮ್ಮನಂತಹ ಅದೆಷ್ಟೋ ಹೆಣ್ಣು ಮಕ್ಕಳು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸದ್ದಿಲ್ಲದೆ, ಸುದ್ದಿಯಾಗದೆ ಭಾಗಿಯಾಗಿದ್ದರು.
.
ಗಾಂಧೀಜಿಯವರ ಸತ್ಯಾಗ್ರಹದ ಹಾದಿಯನ್ನು ತುಳಿದ ಅಸಂಖ್ಯಾತ ಮಹಿಳೆಯರಿದ್ದರು. ಹಾಗೆಯೇ ನೇತಾಜಿ ಅವರ ಸಶಸ್ತ್ರ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಬಂದೂಕು ಹಿಡಿದು ನಿಂತ ವೀರಾಂಗಣೆಯರಿದ್ದರು. ದೇಶಕ್ಕಾಗಿ ಹೋರಾಡಿದ ದೇಶಭಕ್ತರ ಹಾದಿಗಳು ಹಲವಿದ್ದವು. ಪರಮ ತ್ಯಾಗದ ಕಠಿಣ ಹೋರಾಟದ ಹಾದಿಗಳವು. ಆದರೆ, ಅವರೆಲ್ಲರ ಗುರಿ ನಾಡಿನ ಬಿಡುಗಡೆಯಾಗಿತ್ತು. ಅವರೆದೆಯಲ್ಲಿ ಹೊತ್ತಿ ಉರಿದ ದೇಶಭಕ್ತಿಯ ಕಿಡಿ ಒಂದೇ ಆಗಿತ್ತು.
ಸ್ವತಂತ್ರ ಭಾರತದಲ್ಲಿ ಹುಟ್ಟಿದ ನನ್ನಂಥವರು ಈ ಸ್ವಾತಂತ್ರ್ಯವನ್ನು ಒಂದು ರೀತಿ, ಜನ್ಮ ಸಿದ್ಧ ಹಕ್ಕಿನಂತೆ ಪಡೆದೆವು. ಅದರ ಮೌಲ್ಯವೇ ನಮಗೆ ಅರಿವಾಗಿರಲಿಲ್ಲ.
ಆದರೆ ನಾವಿಂದು ಎರಡನೇ ಸ್ವಾತಂತ್ರ್ಯ ಹೋರಾಟದ ಹೊಸ್ತಿಲಲ್ಲಿದ್ದೇವೆ. ಆರ್ಥಿಕ, ಸಾಮಾಜಿಕ, ನೈತಿಕ ಭ್ರಷ್ಟಾಚಾರದ ಹಿಡಿತದಿಂದ ಭಾರತದ ಬಿಡುಗಡೆಗೆ ಏನು ಮಾಡಬೇಕು, ಹೇಗೆ ಮಾಡಬೇಕು ಎಂದು ತವಕಿಸುತ್ತಿರುವ ಈ ಹೊತ್ತಿನಲ್ಲಿ, ಲಕ್ಷ್ಮೀ ಸೆಹಗಲ್ ಅವರ ವೀರಗಾಥೆ ನಮಗೆ ದಾರಿ ತೋರಲಿ. ದೇಶದತ್ತಲ ನಮ್ಮ ಜವಾಬ್ದಾರಿಯನ್ನು ನೆನಪಿಸಲಿ.
ಬದುಕಿಡೀ ಪರರಿಗಾಗಿ ದುಡಿದ ಈ ಜೀವ, ತನ್ನ ಸಾವಿನ ಹಿಂದಿನ ದಿನವೂ ರೋಗಿಗಳ ತಪಾಸಣೆ ಮಾಡಿತ್ತು. ಅವರ ಮರಣಶಾಸನದಲ್ಲಿ ವ್ಯಕ್ತ ಪಡಿಸಿದ ಕೊನೆಯ ಇಚ್ಛೆಯಂತೆ ಮಗಳು ಸುಹಾಸಿನಿ ಅಲಿ, ಅವರ ಕಣ್ಣುಗಳನ್ನು ದಾನ ಮಾಡಿ, ತಾಯಿಯ ದೇಹವನ್ನು "ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ಮೆಡಿಕಲ್ ಕಾಲೇಜ್'ಗೆ ನೀಡಿದರು.
ಶತಮಾನದ ಹೋರಾಟದ ಬದುಕಿಗೆ ತೆರೆ ಬಿದ್ದಿತು. ಲಕ್ಷ್ಮೀ ಸೆಹಗಲ್ ಅವರೊಂದಿಗೆ ಯುಗವೊಂದು ಮುಗಿಯಿತು. ಆದರೆ, ಹೋರಾಟ ಮುಗಿಯದು.
ಗೆಳತಿ ಗಾಯತ್ರಿ ಇಮೇಲ್ ಮೂಲಕ "ಝಾನ್ಸಿ ರಾಣಿ ರೆಜಿಮೆಂಟ್'ನ ಹಾಡುಗಳ ಲಿಂಕ್ ಕಳುಹಿಸಿದ್ದರು. ಆಜಾದ್ ಹಿಂದ್ ಫೌಜ್‌ನ ಬಲವಂತ್ ಸಿಂಗ್ ಅವರು ಬರೆದ ಹಮ್ ಭಾರತ್ ಕೀ ಬೇಟಿ ಹೈ, ಅಬ್ ಉಠಾ ಚುಕಿ ತಲವಾರ್ ಗೀತೆ ತೂರಿ ಬಂತು. ಅದು ಮುಗಿಯುತ್ತಿದ್ದಂತೆಯೇ ನನಗೆ ಪ್ರಿಯವಾದ ಈ ದೇಶಭಕ್ತಿ ಗೀತೆ ಕದಮ್ ಕದಮ್ ಉಠಾಯೆ ಜಾ, ಖುಷೀ ಕೆ ಗೀತ್ ಗಾಯೆ ಜಾ.. ತೇಲಿ ಬಂತು. ಅಜಾದ್ ಹಿಂದ್ ಫೌಜ್ ನ "ಮಾರ್ಚಿಂಗ್' ಹಾಡು ಇದಾಗಿತ್ತು ಎಂದು ನನಗೆ ತಿಳಿದೇ ಇರಲಿಲ್ಲ. ಸ್ವಲ್ಪವೇ ಹೊತ್ತು, ಸಾಲು ಸರಮಾಲೆಯಾಗಿ ದೇಶಭಕ್ತಿ ಗೀತೆಗಳ ಝೇಂಕಾರ ಇಡೀ ಕೋಣೆಯನ್ನು ದಟ್ಟವಾಗಿ ಆವರಿಸಿ, ಸ್ವಾತಂತ್ರ್ಯ ಪೂರ್ವದ ಆ ದಿನಗಳಿಗೆ ನನ್ನನ್ನು ಸೆಳೆದೊಯ್ದಿತ್ತು.
ಮೊಹಮ್ಮದ್ ರಫಿ ಅವರ ಆದ್ರì ದನಿಯಲ್ಲಿ "ನೀನು ಕಂಬನಿಗರೆಯಬೇಡ ಭಗತ್‌ಸಿಂಗ್‌ನ ತಾಯೇ...' ಕೇಳುತ್ತಿದ್ದಂತೆ, ಗಂಟಲುಬ್ಬಿ ಬಂದಿತ್ತು.
ತೂ ನಾ ರೋನಾ, ಕೆ ತೂ ಭಗತ್‌ಸಿಂಗ್ ಕೀ ಮಾ
ಮರ್‌ಕೆ ಭೀ ಲಾಲ್ ತೇರಾ ಮರೇಗಾ ನಹೀ
ಘೋಡೀ ಚಡಕೇ ತೋ ಲಾತೆ ಹೈ ದುಲ್ಹನ್ ಸಭೀ
ಹಸ್ಕೆ ಹರ್ ಕೋಯೀ ಫಾಂಸೀ ಚಡೇಗಾ ನಹೀ
ನೀನು ಕಂಬನಿಗರೆಯಬೇಡ ಭಗತ್‌ಸಿಂಗ್‌ನ ತಾಯೇ
ಮರಣಿಸಿಯೂ ನಿನ್ನ ಮಗನಿಗೆ ಸಾವಿಲ್ಲ
ಕುದುರೆ ಏರಿ ವಧುವ ಕರೆತರುವರು ಎಲ್ಲ
ಯಾರೆಂದರವರು ನಗು ನಗುತ್ತಾ ಗಲ್ಲಿಗೇರುವುದಿಲ್ಲ
ಇಶ್ಕ್ ಆಜಾದೀ ಸೆ ಆಶಿಕೋ ನೆ ಕೀ
ದೇಖ್ ಲೇನಾ ಉಸೆ ಹಮ್ ಬ್ಯಾಹ್ ಲಾಯೇಂಗೆ
"ಇಶ್ಕ್', "ಆಶಿಕ್' ಪದಗಳನ್ನು ಕನ್ನಡಕ್ಕೆ ಹೇಗೆ ಅನುವಾದಿಸಲಿ? ಅದು ಕೇವಲ ಪ್ರೀತಿಯಲ್ಲ , ಆತ ಕೇವಲ ಪ್ರೇಮಿಯಲ್ಲ. ಸ್ವಾತಂತ್ರ್ಯದ ಉತ್ಕಟ ಪ್ರೇಮಿಗಳು. "ಆಜಾದೀ'ಯನ್ನು ವರಿಸಿ ತರಲು ಹೊರಟ ರಣವೀರರು - "ಆಜಾದೀ ಕೆ ಪರವಾನೆ'. ಸ್ವಾತಂತ್ರ್ಯ ಜ್ಯೋತಿಯತ್ತ ಹಾರಿ ಪತಂಗಗಳಂತೆ ಉರಿದುರಿದು ಬೂದಿಯಾದವರು.
ಏ ವತನ್ ಏ ವತನ್ ಹಮ್ ಕೊ ತೇರೀ ಕಸಮ್
ತೇರಿ ರಾಹೋ ಮೆ ಜಾನ್ ತಕ್ ಲುಟಾ ಜಾಯೇಂಗೆ
ಫೂಲ್ ಕ್ಯಾ ಚೀಸ್ ಹೈ ತೇರೆ ಕದಮೋ ಪೆ ಹಮ್
ಭೇಂಟ್ ಅಪನೆ ಸರೋಂ ಕೀ ಚಡಾ ಜಾಯೆಂಗೇ
ಹೇ ನಮ್ಮ ಮಾತೃಭೂಮಿಯೇ ನಮಗೆ ನಿನ್ನಾಣೆ
ನಿನ್ನ ಹಾದಿಯಲ್ಲಿ ಪ್ರಾಣವನ್ನು ಚೆÇÉಾಡಿ ಸಾಗುತ್ತೇವೆ
ಪುಷ್ಪಗಳೇನು, ನಿನ್ನ ಪಾದಕ್ಕೆ ನಮ್ಮ ಶಿರಗಳನ್ನೇ ಅರ್ಪಿಸುತ್ತೇವೆ
ಕಟ್ಟಕಡೆಯಲ್ಲಿ ರಫಿಯವರ ಗದ್ಗದಿತ ದನಿ ಹಾಡಿತ್ತು -
ಜಬ್ ಶಹೀದೋಂ ಕೀ ಡೋಲೀ ಉಠೆ ಧೂಮ್ ಸೇ
ದೇಶ್‌ವಾಲೋ ತುಮ್ ಆಂಸೂ ಬಹಾನಾ ನಹೀ
ಪರ್ ಮನಾವೋ ಜಬ್ ಆಜಾದ್ ಭಾರತ್ ಕಾ ದಿನ್
ಉಸ್ ಘಡೀ ತುಮ್ ಹಮೆ ಭೂಲ್ ಜಾನಾ ನಹೀ
"ಹೆಗಲ ಮೇಲೆ ಹುತಾತ್ಮರ ಅಸ್ಥಿ ಹೊರಟಾಗ, ದೇಶವಾಸಿಗಳೆ ಕಂಬನಿ ಮಿಡಿಯಬೇಡಿ. ಆದರೆ ಸ್ವತಂತ್ರ ಭಾರತದ ದಿನವನ್ನು ಆಚರಿಸಿದ ಹೊತ್ತು, ಆ ಘಳಿಗೆ ನಮ್ಮನ್ನು ಮರೆಯಬೇಡಿ' ಎಂದು ಹೇಳಿ ಹೊರಟವರು. ಮರೆತೆವಲ್ಲವೆ ನಾವು ಅವರ ತ್ಯಾಗವನ್ನು?
ಸಾವಿರಾರು ದೇಶಭಕ್ತರ ಬಲಿದಾನದ ಬುನಾದಿಯ ಮೇಲೆ ನಿಂತಿದೆ ನಮ್ಮ ಸ್ವಾತಂತ್ರ್ಯ. ನಿಜಕ್ಕೂ ಇಷ್ಟೆಲ್ಲ ಯೋಧರ ಬಲಿದಾನಕ್ಕೆ ನಾವು ಅರ್ಹರೆ? ದೇಶಕ್ಕಾಗಿ ಮಡಿದ ದೇಶಭಕ್ತರು ಕಂಡ ಸ್ವಾತಂತ್ರ್ಯದ ಕನಸು ಇಂದು ನಾವಿರುವ ಭಾರತವಾಗಿತ್ತೆ?
ಜಗತ್ತಿನ ಮೂರನೇ ಒಂದು ಭಾಗದಷ್ಟು ಬಡವರು ಭಾರತದಲ್ಲಿ¨ªಾರೆ. "ಪಟ್ಟಣದಲ್ಲಿ ಇರುವ ಓರ್ವ ಭಾರತೀಯ ದಿನವೊಂದಕ್ಕೆ 29 ರೂಪಾಯಿಯನ್ನು, ಗ್ರಾಮಾಂತರ ಪ್ರದೇಶದಲ್ಲಿರುವ ಭಾರತೀಯ 23 ರೂಪಾಯಿಯನ್ನು ಖರ್ಚು ಮಾಡಿದರೆ ಅವನನ್ನು ಬಡವನೆಂದು ಕರೆಯಲಾಗದು' ಎನ್ನುತ್ತದೆ ಭಾರತದ ಪ್ಲಾನಿಂಗ್ ಕುಮಿಷನ್. ಯಾರಾದರೂ ಇಂದು ದಿನವೊಂದಕ್ಕೆ 23 ರೂಪಾಯಿಗಳಲ್ಲಿ ಬದುಕಬಲ್ಲರೆೆ?
ದೇಶಕ್ಕೆ ನಿಜಕ್ಕೂ ಆರ್ಥಿಕ ಸ್ವಾತಂತ್ರ್ಯ ಬಂದಿದೆಯೆ? ಸಾಮಾಜಿಕ ನ್ಯಾಯ ದೊರೆತಿದೆಯೆ?
ಕಳೆದ ತಿಂಗಳು, ಅಲ್ಲಿ ಅಸ್ಸಾಮಿನಲ್ಲಿÉ, ನಿಂತು ನೋಡಿದ ಜನರ ನಡುವೆ ಒಂದು ಕಿಶೋರ ಪ್ರಾಯದ ಹೆಣ್ಣು ಮಗು, 20 ಜನ ಕೀಚಕರ ಕೈಗೆ ಸಿಕ್ಕಿಬಿದ್ದು ನಡುಬೀದಿಯಲ್ಲಿ ನಲುಗಿ ಹೋಗುತ್ತದೆ. ಇÇÉೇ ಮಂಡ್ಯದಲ್ಲಿ ಹಾಡು ಹಗಲೇ ಯುವತಿಯೊಬ್ಬಳ ಮೇಲೆ ನಾಲ್ಕು ಜನ ಧಾಂಡಿಗರು ಮುಗಿ ಬೀಳುತ್ತಾರೆ, ಪ್ರತಿಭಟಿಸಿದ ಆಕೆಯನ್ನು ಓಡುತ್ತಿರುವ ರೈಲಿನಿಂದ ಆಚೆಗೆ ತಳ್ಳುತ್ತಾರೆ. ಮಂಗಳೂರಿನಲ್ಲಿ ಹುಡುಗಿಯರನ್ನು ಎಳೆದಾಡಿ, ಅಮಾನುಷವಾಗಿ ಹÇÉೆ ಮಾಡಿ ತಮ್ಮ 'ನೈತಿಕತೆ'ಯನ್ನು ಮೆರೆಯುತ್ತಾರೆ.
ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಬಂದಿದೆಯೆ? ಇಂದು ಭಾರತದಲ್ಲಿ ಹೆಣ್ಣುಮಗುವಿಗೆ ಹುಟ್ಟುವ ಸ್ವಾತಂತ್ರ್ಯ ಕೂಡಾ ಇಲ್ಲ. ಹೆಣ್ಣುಭ್ರೂಣ ಹತ್ಯೆ ಪಟ್ಟಣಗಳಲ್ಲೂ ವಿದ್ಯಾವಂತ ಕುಟುಂಬಗಳಲ್ಲೂ ನಡೆಯುತ್ತಿದೆ. ದೇಶದ ಅರ್ಧ ಜನಕ್ಕೆ, ಅಂದರೆ ಮಹಿಳೆಯರಿಗೆ ಸ್ವಾತಂತ್ರ Âವಿದೆ ಎಂದು ಎದೆಯ ಮೇಲೆ ಕೈಯಿಟ್ಟು ನಾವು ಹೇಳಬÇÉೆವೆ? 2011ರ ಜನಗಣತಿಯ ಪ್ರಕಾರ 0-6 ವರ್ಷದ ವಯಸ್ಸಿನ ಮಕ್ಕಳಲ್ಲಿ ಪ್ರತಿ 1000 ಹುಡುಗರಿಗೆ ಕೇವಲ 914 ಹುಡುಗಿಯರಿ¨ªಾರೆ. ಸ್ವಾತಂತ್ರ್ಯದ ನಂತರ ಈ ವಯಸ್ಸಿನ ಹೆಣ್ಣು ಮಕ್ಕಳ ಸಂಖ್ಯೆ ಇಷ್ಟು ತಳಕ್ಕೆ ಇಳಿದಿರುವುದು ಇದೇ ಮೊದಲು.
ಹಾಗಾದರೆ 'ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ?'
ನಾವು ಸ್ಪಷ್ಟವಾಗಿ ಮತ್ತೂಂದು ಸ್ವಾತಂತ್ರ್ಯ ಹೋರಾಟದ ಹೊಸ್ತಿಲಲ್ಲಿ ನಿಂತಿದ್ದೇವೆ. ತಮ್ಮ ದೇಹ ಪ್ರಾಣಗಳನ್ನು ಅರ್ಪಿಸಿ, ಕರ್ ಚಲೆ ಹಮ್ ಫಿದಾ ಜಾನ್-ಓ-ತನ್ ಸಾಥಿಯೋ, ಅಬ್ ತುಮ್ಹಾರೆೆ ಹವಾಲೆ ವತನ್ ಸಾಥಿಯೋ.. ಎಂದು ದೇಶಭಕ್ತರು ನಮ್ಮ ಕೈಗೆ ಒಪ್ಪಿಸಿ ಹೋದ ಅವರ ಪ್ರೀತಿಯ ಭಾರತವನ್ನು ಉಳಿಸಿಕೊಳ್ಳುವ ಛಲ ನಮ್ಮದಾಗಬೇಕಲ್ಲವೆ? ನಾನು ನಾನೆಂಬ ಸ್ವಾರ್ಥದಾಚೆಗೆ ನಡೆದು, ಜಾತಿಯಿಲ್ಲದ ಭೀತಿಯಿಲ್ಲದ ಬಡತನವಿಲ್ಲದ ನಾಡಕಟ್ಟುವ ಹುಮ್ಮಸ್ಸು ನಮ್ಮದಾಗಬೇಕು. ನಮ್ಮ ಸುತ್ತಲಿನ ಸಮಾಜದ ಹೋರಾಟದ ಭಾಗವಾಗದೆ ನಾವು ನಮ್ಮ ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಾರೆವು.
ಕ್ಯಾಪ್ಟನ್ ಲಕ್ಷ್ಮೀ ಹೇಳಿದ್ದರು, "ಹೋರಾಟ ಮುಂದುವರೆಯುತ್ತದೆ'. ನಾಡಿನ 65ನೇ ಸ್ವಾತಂತ್ರ್ಯದ ದಿನದಂದು ದೇಶಕ್ಕಾಗಿ ಮಡಿದ ಯೋಧರ, ದುಡಿದ ಮಹನೀಯರ ಸ್ಮರಣೆಯ ಹಣತೆ, ಆರ್ಥಿಕ ಅಸಮಾನತೆಯ, ಸಾಮಾಜಿಕ ಅನ್ಯಾಯದ ಕತ್ತಲೆಯ ಹಾದಿಯಲ್ಲಿ ನಮಗೆ ದಾರಿ ತೋರಲಿ.