Tuesday, May 21, 2013
Last Updated: 2:18:15 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮುಕ್ತತೆಯ ಕನಸು
    • ಮುಕ್ತತೆಯ ಕನಸು

      • ಡಾ | ವ್ಯಾಸರಾವ್‌ ನಿಂಜೂರು | Aug 12, 2012

        ಬಾಲ್ಯವನ್ನು ಅನುಭವಿಸುತ್ತಿದ್ದ ನಾನು ಪೀಪಿ, ಗೂಡುದೀಪ, ಪೇಟಲೆ ತಯಾರಿಕೆಯಲ್ಲಿ ಅಣ್ಣನ ಜೊತೆಗೂಡುತ್ತ, ನಮ್ಮ ಗಾಡಿಯ ಎತ್ತುಗಳಾದ ಕರಿಯ, ಬೊಳ್ಳರೊಂದಿಗೆ ಆಗಾಗ ಸಂಭಾಷಿಸುತ್ತ, ಅಜ್ಜಿಯಂದಿರ ಮಡಿ ಕೆಡಿಸುತ್ತ, ನಾಗಬನದಲ್ಲಿ ಅರಶಿಣ ಬಣ್ಣದ ಮರಿನಾಗರವಿದ್ದರೆ ಬರಲಿ ಎಂದು ಮೈಲಿಗೆ ಮಾಡಿದರೂ ಹಾವು ಕಣ್ಣೆದುರು ಬರದುದನ್ನು ಕಂಡು, "ಇದು ಪುಸ್ಕಾ ನಾಗ' ಎಂದು ತೀರ್ಮಾನಿಸುತ್ತ ಇದ್ದ ದಿನಗಳಲ್ಲೆ ಇಂಡಿಯಾ ಅಥವಾ ಭಾರತ ಎನ್ನುವ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಬಿಟ್ಟಿತು.

        ಆರನೆಯ ಜಾರ್ಜ್‌ ಮಹಾಪ್ರಭು ಹಾಗೂ ವಿಕ್ಟೋರಿಯಾ ರಾಣಿಯವರ ಪ್ರಭಾವದಿಂದಲೇ ನೇಸರು ಉದಿಸುವುದು ಹಾಗೂ ವಡಭಾಂಡೇಶ್ವರ ಸಮುದ್ರದಲ್ಲಿ ಕಂತುವುದು ಎಂದೇ ಬಲವಾಗಿ ನಂಬಿದ್ದ ನಮ್ಮ ಪಡಮುನ್ನೂರು ಎಲಿಮೆಂಟರಿ ಶಾಲೆಯ ಹೆಡಾ¾ಸ್ಟರರಾದ ಫಿನ್ಲ ಪಂಚೆ, ಮ್ಯಾಂಚೆಸ್ಟರ್‌ನಿಂದ ಆಮದಾದ ಬಟ್ಟೆಯಿಂದಲೇ ಹೋಲಿಸಿಕೊಂಡ ಅರೆತೋಳಿನ ಅಂಗಿ ಧರಿಸುತ್ತಿದ್ದ ಕೆದ್ಲಾಯ ಮಾಸ್ತರರಿಗೆ ಸ್ವಾತಂತ್ರ್ಯ ಬಿಲ್‌ಕುಲ್‌ ಬೇಕಾಗಿರಲಿಲ್ಲ. ಆದರೆ ಸದಾ ಖಾದಿಧಾರಿಗಳಾಗಿರುತ್ತಿದ್ದ ಅಚ್ಚಣ್ಣ ಮಾಸ್ತರರು, ತೌಡ ಸೆಟ್ಟರು, ರಾಜು ಸಾಲಿಯಾನರು ಹಾಗೂ ಕೈಮಗ್ಗದ ಸೀರೆಯನ್ನೆ ಉಡುತ್ತಿದ್ದ ಸ್ಟೆಲ್ಲಾ ಟೀಚರಿಗೆ ಸ್ವಾತಂತ್ರ್ಯ ಬಂದದ್ದೇ ಒಂದು ದೊಡ್ಡ ಸಂಭ್ರಮ. ಬೆಳಗ್ಗಿನ ಪ್ರಾರ್ಥನೆಯಲ್ಲಿ "ಸ್ವಾಮಿದೇವನೆ, ಲೋಕಪಾಲನೆ' ಆದೊಡನೆ "ವಂದೇ ಮಾತರಮ್‌' ಹಾಗೂ ಶಾಲೆ ಬಿಡುವಾಗ "ಜನಗಣ ಮನ' ಹಾಡಿಸುವ ಹುರುಪು ಅವರದು.

        .

        ಸ್ವಾತಂತ್ರ್ಯ ದೊರೆತ ಬಳಿಕವೂ ಮನೆಯ ಚಾವಡಿಯಲ್ಲಿ ವೀಳ್ಯದ ಹರಿವಾಣವನ್ನು ಎದುರಿಗಿರಿಸಿಕೊಂಡು, ಅಡಕೆಯ ಹೊರಮೈಯ ತೊಗಲು ಕೆರೆಸುತ್ತಿದ್ದ ಅಪ್ಪಯ್ಯ ಮತ್ತು ನೆರೆಮನೆಯ ಕಿಟ್ಟಣ್ಣನವರದ್ದು ರಣಾಗ್ರ. ಕಿಟ್ಟಣ್ಣ , "ಗಾಂಧಿಯವರ ಯತ್ನವೊಂದಿಲ್ಲದಿದ್ದರೆ ಸ್ವಾತಂತ್ರ್ಯ ಬಿಲ್‌ಕುಲ್‌ ಸಿಗುತ್ತಿರಲಿಲ್ಲ' ಎಂದು ವಾದಿಸಿದರೆ, "ಟಿಳಕರು, ಸುಭಾಷ್‌ ಬೋಸ್‌ರ ಮಾತು ಕೇಳುತ್ತಿದ್ದರೆ, ಈ ಕೆಂಪು ಮುಸುಡಿಗಳು ಎಂದೋ ಪದ್ರಾಡ್‌ ಮಾಡುತ್ತಿದ್ದರು. ಬೋಸರ ಆಜಾದ್‌ ಹಿಂದ್‌ ಪೌಜ್‌ ಎಂದೋ ಬ್ರಿಟಿಷರನ್ನು ಸದೆಬಡಿಯುತ್ತಿತ್ತು.
        ಆಗ ನಮ್ಮ ಕೊಡವೂರು ಅನಂತ್ರಾಮ ಭಟ್ಟರ (ನೇತಾಜಿ ಬೋಸರ ಅನುಯಾಯಿ - ಆಜಾದ್‌ ಹಿಂದ್‌ ಪತ್ರಿಕೆಯ ಸಂಪಾದಕ. ಹಿಟ್ಲರನ ಭಾಷಣ ತರ್ಜುಮೆ ಮಾಡುತ್ತಿದ್ದ ಜರ್ಮನ್‌, ಸಂಸ್ಕೃತ ಭಾಷೆಗಳ ಪ್ರಕಾಂಡ ಪಂಡಿತ-ಲೇ) ಸಾಹಸಕ್ಕೂ ಬೆಲೆ ಬರುತ್ತಿತ್ತು. ಗಾಂಧೀಜಿಯ ಮಾತು ಕೇಳಿ ನಾವು ಕುಟ್ಟೆ ಹಿಡಿದ ರೇಶನ್‌ ಅಕ್ಕಿ, ನಾಯಿಪರುವಿನಂತಹ ಯಾರೂ ಮೂಸದ ಜೋಳ ತಿನ್ನುವ ಸ್ಥಿತಿ ಬಂತು' ಎಂದು ಅಪ್ಪಯ್ಯ ಮಾನುìಡಿಯುತ್ತಿದ್ದರು. ಹೀಗೆಯೇ ಚರ್ಚೆಯಾಗಿ, ಬಿಸಿ ಏರಿ ಸಂಧಾನಕ್ಕೆ ಅಕ್ಕಣಿಯಜ್ಜಿ ಬರಬೇಕಾಗುತ್ತಿತ್ತು. ಆದರೆ ಇದೇ ಅಪ್ಪಯ್ಯ ಗಾಂಧೀಜಿಯವರ ಹತ್ಯೆಯ ಸುದ್ದಿ ಕೇಳಿ ದಿಗೂnಢರಾಗಿ, ಯಾರೊಂದಿಗೂ ಮಾತಾಡದೆ ಮೂರು ದಿನ ಉಪವಾಸವಿದ್ದು ಗೋಡ್ಸೆಗೆ ಶಾಪವಿತ್ತು ಜನಿವಾರ ತೆಗೆದು ಬಿಸಾಕಿದ್ದರು.
        ಪಾವಾಣೆಯ ಪಾವಲಿಗೆ ಕಮ್ಮಾರನಿಂದ ತೂತು ಮಾಡಿಸಿ ಅದಕ್ಕೆ ಛತ್ರಿಯ ಕಬ್ಬಿಣದ ಕಡ್ಡಿ ಸಿಕ್ಕಿಸಿ, ಹೀಗೆ ಸಿದ್ಧಗೊಳಿಸಿದ ತಕಲಿಯಲ್ಲಿ ನೂಲು ತೆಗೆದು, ಆ ನೂಲಲ್ಲೆ ರಾಜು ಸಾಲಿಯಾನ ಮಾಸ್ಟ್ರೆ ಶಾಲೆಯ ಮಗ್ಗದಲ್ಲಿ ತಯಾರಿಸಿದ ಪಾಣಿಪಂಚೆ, ಬೈರಾಸ್‌ ಸಾಯುವವರೆಗೂ ಧರಿಸುತ್ತಿದ್ದರು.

        .

        ನಮ್ಮ ಶಾಲೆಗೆ ಒಂದೊಂದೇ ವರ್ಗ ಸೇರುತ್ತ ಎಂಟನೆಯ ತರಗತಿಯ ಮಟ್ಟಕ್ಕೆ ಬಂದಾಗ ಕೆದ್ಲಾಯ ಮಾಸ್ಟರರು ನಿವೃತ್ತಿ ಹೊಂದಿದರು. ಆದರೂ "ದೇಶ ಆಳುವುದು ಎಂದರೆ ಕುಶಾಲಾ? ಬ್ರಿಟಿಷರ ಬುದ್ಧಿಮತ್ತೆ ನಮಗೆ ಬರಲಿಕ್ಕುಂಟ? ಅವರ ಭಾಷೆಯ ಸೊಗಸಾದರೂ ಎಂಥದು, ಏನು ಕಥೆ' ಎಂದೆಲ್ಲ ಹಲುಬುವಿಕೆ ಅವರ ಇಸ್ಪೀಟಿನ ಕಳದಲ್ಲಿ ನಡೆದಾಗ, ಅದಕ್ಕೆ ಕಬೂಲು ಸೂಚಿಸುವವರು, ಆಟದಲ್ಲಿ ಪ್ರೇಕ್ಷಕ ಗಡಣದಲ್ಲಿ ಸಾಕಷ್ಟು ಮಂದಿ ಇದ್ದರು. ಮದರಾಸು ಪ್ರಾಂತದ ಭಾಗವಾಗಿದ್ದ ನಮ್ಮ ಜಿಲ್ಲೆಯ ಶಾಲೆಗಳಲ್ಲಿ ರಾಜಾಜಿಯವರ ವೃತ್ತಿ ಶಿಕ್ಷಣ ಕಡ್ಡಾಯವಾಗಿತ್ತು. ಹೀಗಾಗಿಯೇ ಲಾಳಿ ಕೈಗೆಟಕದಿದ್ದರೂ ಎಡಬಲಕ್ಕೆ ಅದನ್ನು ಓಡಿಸಿ, ರಾಜು ಸಾಲಿಯಾನ ಮಾಸ್ತರರ, ಕನ್ನಡಕ ಹಾಕಿಕೊಳ್ಳಲೆಂದೇ ಇರುವ ಅವರ ಬಿರುಗಣ್ಣ ನೋಟಕ್ಕೆ ಬೆದರಿ ಎಂಥದೋ ಬಟ್ಟೆ ನೇಯಬೇಕಾಗುತ್ತಿತ್ತು. ಆದರೆ ತೌಡ ಮಾಸ್ತರರ ತೋಟಗಾರಿಕೆಯ ಪಾಠವೆಂದರೆ ಎಲ್ಲರಿಗೂ ಅಚ್ಚುಮೆಚ್ಚು . ಒಮ್ಮೆ ನಮ್ಮ ಶಾಲೆಯ ಹೂದೋಟದ ಚೆಂಗುಲಾಬಿಯ ಗಿಡ ಬಸವಳಿದು ಭೂಶಾಯಿಯಾಗಿದ್ದನ್ನು ಕಂಡ ತೌಡ ಮಾಸ್ತರರು ಚಿಕ್ಕಮಕ್ಕಳಂತೆ ಅತ್ತಿದ್ದರು. ಸ್ಟೆಲ್ಲಾ ಟೀಚರ್‌ ಇಂಗ್ಲಿಷ್‌ ಮತ್ತು ನೀತಿ ಪಾಠದ ಕ್ಲಾಸು ತೆಗೆದುಕೊಂಡರೆ, ಕೆದ್ಲಾಯರ ನಂತರ ಹೆಡಾ¾ಸ್ಟರರಾದ ಅಚ್ಚಣ್ಣ ಮಾಸ್ತರರು ಗಣಿತ, ಕನ್ನಡ ಮತ್ತು ವಿಜ್ಞಾನ ಬೋಧಿಸುತ್ತಿದ್ದರು.

        ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಅಚ್ಚಣ್ಣ ಮಾಸ್ತರರ ಹುರುಪು ಶಿಖರವೇರಿತ್ತು. ತಾನೇ ಸ್ವತಃ ದುಡ್ಡು ಸುರಿದು ಗಾಂಧೀಜಿ, ನೆಹರೂ, ಪಟೇಲ್‌, ಅಬ್ದುಲ್‌ಕಲಮ್‌ ಆಜಾದ್‌, ಸರೋಜಿನಿ ನಾಯ್ಡು , ಕಾರ್ನಾಡು ಸದಾಶಿವ ರಾವ್‌ ಮುಂತಾದವರ ಫೋಟೋಗಳನ್ನು ಪ್ರತಿಯೊಂದು ತರಗತಿಯ ಕೋಣೆಯ ಗೋಡೆಗಳಲ್ಲಿ ತೂಗಿಸಿದ್ದರು. ಅನೂಚಾನವಾಗಿ ತಾವು ಬಳಸುತ್ತಿದ್ದ ಖಾದಿಯ ಮುಂಡು ಹಾಗೂ ಅಂಗಿಯ ಜೊತೆ ಗಾಂಧಿ ಟೋಪಿಯನ್ನು ಧರಿಸುವುದನ್ನು ರೂಢಿಮಾಡಿಕೊಂಡರು. ಸ್ವಾತಂತ್ರ್ಯ ದಿನಾಚರಣೆಯಂದು ಮಕ್ಕಳಿಗೆಲ್ಲ ಸ್ವಂತ ಖರ್ಚಿನಿಂದಲೇ ಲಾಡು ತಿನ್ನಿಸುತ್ತಿದ್ದರು.

        ಅಚ್ಚಣ್ಣ ಮಾಸ್ಟರರ ಸ್ವಾತಂತ್ರ್ಯದ ಅಮಲು, ಸೂಜಿಮೊನೆ ತಾಗಿದ ಪುಗ್ಗದಂತಾದುದು ಪ್ರಪ್ರಥಮ ಮಹಾಚುನಾವಣೆ ನಡೆದ ಸಂದರ್ಭದಲ್ಲಿ. ""ಮಾಸ್ಟ್ರೇ, ನೀವೂ ನಿಮ್ಮ ಶಾಲೆಯ ಇತರ ಶಿಕ್ಷಕರೂ ನಮ್ಮ ಪಕ್ಷಕ್ಕೆ ಓಟು ಹಾಕಬೇಕು' ಎಂದು ಪ್ರತಿಯೊಂದು ಪಕ್ಷದ ಅಭ್ಯರ್ಥಿಯೂ ಹಣದ ಆಮಿಷ ತೋರಿಸಿದಾಗ ಅಚ್ಚಣ್ಣ ಮಾಸ್ಟರರು ಮತಗಟ್ಟೆಯತ್ತ ಮುಖ ಮಾಡದೆ ಗಾಂಧೀಜಿ ಮತ್ತು ಚರಕವನ್ನು ನೆನೆಯುತ್ತ ಕುಳಿತುಬಿಟ್ಟರು.

        .

        ವಿದೇಶದಿಂದ ಮರಳಿದ ನಾನು ಊರಿಗೆ ಬಂದವನು ನನ್ನ ಪ್ರೀತಿಯ ಗುರುಗಳಾದ ಅಚ್ಚಣ್ಣ ಮಾಸ್ಟ್ರನ್ನು ವಾಪಸಾಗುವ ಮೊದಲು ಕಂಡೇ ಬರಬೇಕೆಂದು ನಿರ್ಧರಿಸಿದ್ದೆ. ಅವರ ಅರ್ಧಾಂಗಿ ಸಣ್ಣ ವಯಸ್ಸಿನಲ್ಲೆ ಗಂಡು ಮಗುವೊಂದನ್ನು ಹೆತ್ತು ಬಾಣಂತಿ ನಂಜಿನಿಂದ ಸಾವನ್ನಪ್ಪಿದ್ದು , ಅವರ ಬಾಳಿನ ಒಂದು ದುರಂತವಾದರೆ, ಪ್ರಾಯಕ್ಕೆ ಬಂದ ಅವರ ಮಗ ಮಾರಿಬಲೆಯ ಕಲಾಸಿಯಾಗಿ ಹೋದವನು ಕಡಲಿಗೆ ಬಲಿಯಾಗಿಬಿಟ್ಟಿದ್ದ. ಒಂದು ಪುಟ್ಟ ಮನೆ, ಒಂದು ಕೊçಲು ಗದ್ದೆಯಷ್ಟೆ ಮಾಸ್ಟರರ ಸಂಪತ್ತಾಗಿತ್ತು.

        ಮಾಸ್ಟರರನ್ನು ಭೇಟಿಯಾದಾಗ, ಅವರು ನಿವೃತ್ತರಾಗಿ ಅದಾಗಲೇ ವರ್ಷ ಕಳೆದಿತ್ತು. ಅರೆತೋಳಿನ ಖಾದಿ ಬನಿಯನ್‌ ಹಾಗೂ ಕೇಸರಿ ಬಣ್ಣದ ಖಾದಿಯ ಮುಂಡು ಧರಿಸಿ, ಕನಸುಗಳು ಭಗ್ನವಾದ ಕಣ್ಣುಗಳಲ್ಲಿ ನಗೆ ಸೂಸಿ ನನ್ನನ್ನು ಸ್ವಾಗತಿಸಿದರು. ಅವರು ತನ್ನ ದಿನನಿತ್ಯದ ಖರ್ಚಿಗಾಗಿ ನಾಲ್ಕು ಮೈಲು ದೂರದ ಉಡುಪಿಯ ಭಂಡಸಾಲೆಗೆ ಹೋಗಿ ಅಲ್ಲಿ ಲೆಕ್ಕಪತ್ರ ಬರೆದು ದಿನದೂಡುತ್ತಿದ್ದ ವಿಷಯ ನನಗೆ ನನ್ನ ಸಹಪಾಠಿಯಾದ ಗುರುವ ಹೇಳಿದ್ದ. ""ಮಾಸ್ಟ್ರೆ ನಿಮಗೆ ಪೆನÒನ್‌ ಬರುವುದಿಲ್ಲವೆ?' ಎಂದು ಮಾತಿನ ನಡುವೆ ನಾನು ವಿಚಾರಿಸಿದೆ. ""ಸ್ಯಾಂಕ್ಷನ್‌ ಆಗಿದೆ; ತಿಂಗಳಿಗೆ ನೂರಾಏಳು ರೂಪಾಯಿ. ಆದರೆ ಕೈಗೆ ಬರುತ್ತಿಲ್ಲ' ಎಂದು ನಿರ್ಮೋಹಿಯಾಗಿ ನುಡಿದರು, ಮಾಸ್ಟರರು. ""ಏಕೆ' ನಾನು ಕೇಳಿದೆ. ""ಇದುವೇ ನಮ್ಮ ದೇಶ ಪಡೆದ ಸ್ವಾತಂತ್ರ್ಯ' ಎಂದು ವಿಷಾದದ ನಗೆ ನಕ್ಕರು.

        ಗುರುವ ಮೂರು ಬಾರಿ ಎಂಟನೆಯ ಇಯತ್ತೆಯಲ್ಲಿ ಫೇಲ್‌ ಆಗಿ ಅಚ್ಚಣ್ಣ ಮಾಸ್ತರರ ಪುಕ್ಕಟೆ ಕೋಚಿಂಗ್‌ನಿಂದ ಎಲ್‌.ಎಸ್‌. ಪಾಸಾದ ಆಸಾಮಿ. ತಾಲೂಕು ಟ್ರೆಜರಿಯಲ್ಲಿ ಪಿಯೊನ್‌ ಆಗಿ ಕೆಲಸ ಮಾಡುತ್ತಿದ್ದ. ಅವನು ಹೇಳಿದ ವಿಷಯ ಕೇಳಿ ಮಾಸ್ಟರರಂತೆಯೇ ನನಗೂ ಸ್ವಾತಂತ್ರ್ಯದ ಬಗೆಗಿನ ಕಲ್ಪನೆ ಬುಡಮೇಲಾಗಿ ಬಿಟ್ಟಿತು. ಟ್ರೆಜರಿ ಆಫೀಸರ್‌ ಮೂರ್ತಿ, ಮಾಸ್ತರರಿಂದ ಹಲವಾರು ಬಾರಿ ಚಹಾ ಸತ್ಕಾರ ಪಡೆದು, ""ಇನ್ನೇನು ನಿಮ್ಮ ಪೆನÒನ್‌ ಸಿಕ್ಕಿಯೇ ಸಿಗುತ್ತದೆ. ಏನೂ ಗಾಬರಿ ಬೇಡ' ಎನ್ನುತ್ತ ತಿಂಗಳುಗಟ್ಟಲೆ ಮಾಸ್ತರರನ್ನು ಸತಾಯಿಸಿ ಕೊನೆಗೂ ಗುರುವನಲ್ಲಿ ಹೇಳಿದನಂತೆ ""ಒಂದು ತಿಂಗಳಿನ ಪೆನÒನ್‌ ಮೊತ್ತ ನನಗೆ ಕೊಡಲು ಹೇಳು. ಅವರಿಗೆ ಪೆನÒನ್‌ ಬೇರೆ ಕೇಡು. ಈಗಲಾದರೂ ನಮ್ಮ ಪವರ್‌ ಅವರಿಗೆ ತಿಳಿಯಲಿ' ಎಂದನಂತೆ. ಗುರುವನಾದರೂ ಇದನ್ನು ಮಾಸ್ತರರಿಗೆ ಯಾವ ಬಾಯಲ್ಲಿ ಹೇಳಲಿ.
        ಗುರುವನಂತೆಯೇ ಮೂರ್ತಿಯೂ ಲೋವರ್‌ ಸೆಕೆಂಡರಿ ಪಾಸಾಗಿದ್ದು ಅಚ್ಚಣ್ಣ ಮಾಸ್ತರರ ಕೃಪೆಯಿಂದ!

        *****

        ಮುಕ್ತತೆಯ ತವಕ

        ಡಾ| ನಯನಾ ಕಾಶ್ಯಪ್‌

        ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ಸಾಲು ಕೇಳಿದರೆ ಮನುಷ್ಯನಿಗೆ ಮೂಲಭೂತವಾಗಿ ಸ್ವಾತಂತ್ರ್ಯ ಎಂಬುದಿದೆಯೇ ಎಂಬ ಪ್ರಶ್ನೆ ಬರುತ್ತದೆ. ದೇವರೆಂಬ ಗುರುವಿನ ಚರಣಗಳಲ್ಲಷ್ಟೆ ಮನುಷ್ಯನಿಗೆ ಬಿಡುಗಡೆ, ಮುಕ್ತಿ, ಸ್ವಾತಂತ್ರ್ಯ ಎಂದಾದರೆ ಸ್ವಂತಿಕೆ, ಸ್ವಾವಲಂಬನೆ ಮುಂತಾದ ಸಂಬಂಧಿತ ಪರಿಕಲ್ಪನೆಗಳಿಗೆ ಅಧ್ಯಾತ್ಮದ ಪರಿಭಾಷೆಯಲ್ಲಿ ಹೆಚ್ಚು ಮಹತ್ವವಿದ್ದಂತಿಲ್ಲ.
        ಇದ್ದರೂ, ಅವುಗಳ ಅರ್ಥ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಬಳಕೆಯಾಗುವ ಅರ್ಥದಲ್ಲಲ್ಲ. ಅಧ್ಯಾತ್ಮದ ಪರಿಧಿಯೊಳಗೆ "ದಾಸ್ಯದಲ್ಲೇ ಸ್ವಾತಂತ್ರ್ಯ' ಎಂಬ ಮೇಲ್ನೋಟಕ್ಕೆ ವಿರೋಧಾಭಾಸದಂತೆ ತೋರುವ ಅರ್ಥವು ಸೂಚಿತವಾಗಿದೆ.

        ಆದರೆ, ಇಲ್ಲಿ ಅರ್ಥೈಸಹೊರಟಿರುವುದು ವ್ಯಕ್ತಿ-ಸಮಷ್ಟಿಯ ಪರಿಧಿಯಲ್ಲಿ ಸ್ವಾತಂತ್ರ್ಯ-ಸ್ವಾವಲಂಬನೆಗಳ ಕಲ್ಪನೆ ಮತ್ತು ಸಾಕಾರಗಳ ಕುರಿತಷ್ಟೆ ? "ಸ್ವಾತಂತ್ರ್ಯ' ಪದದ, ಕಲ್ಪನೆಯ ಉಗಮ ಹೇಗಾಯ್ತು ಎಂತ ಆಲೋಚಿಸಿದರೆ ಮಾನವಕುಲದಲ್ಲಿ ಲಾಗಾಯ್ತಿನಿಂದಲೂ ಇರುವ ದಮನಕಾರಿ, ದಬ್ಟಾಳಿಕೆಯ, ಆಳುವ ಚಿಂತನೆಗಳೇ ಅದಕ್ಕೆ ಮೂಲ ಎನಿಸುತ್ತದೆ. ಯಾವಾಗ "ಸ್ವ'ವನ್ನು ಅವಲಂಬಿಸಿ ಚಿಂತಿಸುವ, ಕ್ರಿಯಾಶೀಲರಾಗುವ, ಬದುಕುವ ಅವಕಾಶಗಳು ಸಾಮಾನ್ಯ ಅಲ್ಲವಾದವೋ ಆಗ "ಸ್ವಾತಂತ್ರ್ಯ' ಎಂಬ ಪರಿಕಲ್ಪನೆಯ ಅಗತ್ಯವುಂಟಾಯಿತು. ಹೀಗೆ ಸ್ವಾತಂತ್ರ್ಯವಿಲ್ಲದಿರುವ ಸ್ಥಿತಿಯೇ ಸ್ವಾತಂತ್ರ್ಯದ ಕನಸಿಗೆ ಮೂಲ. ಮನುಷ್ಯ ತನ್ನದೇ ಗುರಿ ಅಥವಾ ಲೋಭ ಸಾಧನೆಗೆ ಮತ್ತೂಬ್ಬರನ್ನು ಬಲಿ ತೆಗೆದುಕೊಂಡಾಗ, ದಬ್ಟಾಳಿಕೆ ನಡೆಸಿದಾಗ, ಆತ ತನ್ನದೇ ದುರಾಸೆ, ದ್ವೇಷ, ಲಾಲಸೆಗಳಲ್ಲಿ ಬಂಧಿಯಾಗಿದ್ದು ಇತರರನ್ನೂ ಬಂಧಿಯಾಗಿಸುವ ವಿಚಿತ್ರ ಪ್ರಕ್ರಿಯೆಯಲ್ಲಿ ತೊಡಗುತ್ತಾನೆ. ಹೀಗೆ ಸ್ವಾತಂತ್ರ್ಯದ ಪರಿಕಲ್ಪನೆ ಮತ್ತು ಸ್ವಾತಂತ್ರ್ಯ ಹನನದ ಕ್ರಿಯೆಗಳೆರಡೂ ವ್ಯಕ್ತಿಯಿಂದ ಆರಂಭಗೊಂಡು ಸಾಮುದಾಯಿಕ ಜೀವನದ ಪ್ರತಿ ಹೆಜ್ಜೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಪ್ರಕಟಗೊಳ್ಳುತ್ತವೆ.

        ಇವು ತಾತ್ವಿಕ ನೆಲೆಯ ಯೋಚನಾ ಸೆಲೆಗಳಾದರೆ ವಾಸ್ತವದ ರಾಜಕೀಯ, ಸಾಮಾಜಿಕ ನೆಲೆಯಲ್ಲಿ ನೋಡಿದರೆ ಭಾರತ ಬ್ರಿಟಿಷ್‌ ಆಳ್ವಿಕೆಯಿಂದ ಸ್ವತಂತ್ರವಾಗಿದೆ. ಫ್ರೀಡಂ ಇಸ್‌ ನಾಟ್‌ ಫ್ರೀ ಎಂಬ ಮಾತಿನಂತೆ ಇಂಡಿಯಾಕ್ಕೆ ದೊರೆತ ಸ್ವಾತಂತ್ರ್ಯ ಹಾಗೇ ಸುಲಭಕ್ಕೆ ಸಿಗಲಿಲ್ಲವಲ್ಲ. ಎಷ್ಟು ಮನೆಗಳು ಅತಂತ್ರವಾದವು, ಎಷ್ಟು ನೆತ್ತರು ಹರಿಯಿತು, ಎಷ್ಟು ಯುವಶಕ್ತಿ ಏಕಮಾತ್ರ ಧ್ಯೇಯಕ್ಕೆ ಮುಡಿಪಾಯಿತು, ಎಷ್ಟು ಹೆತ್ತವರು ಮಕ್ಕಳನ್ನು ಕಳೆದುಕೊಂಡರು... ಹೀಗೆ ಹೇಳುತ್ತ ಹೋದರೆ, "ಅಷ್ಟೆಲ್ಲ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯದ ಬೆಲೆ ನಮಗಿವತ್ತು ತಿಳಿದಿದೆಯೆ?' ಎಂಬ ವಿಷಾದ ಮೂಡುತ್ತದೆ.
        ಇವತ್ತು ಅದು ಚರಿತ್ರೆ. ಸ್ವಾತಂತ್ರ್ಯ ದೊರೆತು 65 ವರ್ಷಗಳಲ್ಲಿ ಇಂಡಿಯಾ ಈ ಚರಿತ್ರೆಗಿಂತ ಬಹಳ ದೂರ ಬಂದಿದೆ. ಅಂಥ ನಿಸ್ವಾರ್ಥ ದೇಶಸೇವೆ ನಿಜಕ್ಕೂ ಸಾಧ್ಯವಾಗಿತ್ತೆ ಎನ್ನುವ ಮಟ್ಟಿಗೆ ನಾವು ಬದಲಾಗಿದ್ದೇವೆ.

        ಇವತ್ತಿನ ಜಾಗತೀಕರಣದ ಸಂದರ್ಭದಲ್ಲಿ ರಾಷ್ಟ್ರೀಯತೆ, ದೇಶಪ್ರೇಮ ಮುಂತಾದವುಗಳು ಆಗೊಮ್ಮೆ ಈಗೊಮ್ಮೆ ಅಗತ್ಯಕ್ಕನುಗುಣವಾಗಿ ತಲೆ ಎತ್ತಿ ಕಂದಿಹೋಗುತ್ತವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಶಕಗಳಲ್ಲಿ ಕಿಚ್ಚಾಗಿ ಉರಿದಂತೆ ಅದೀಗ ಜ್ವಲಿಸುವುದಿಲ್ಲ. ಅದು ದೇಶದ ಅಂದಿನ ತುರ್ತು. ಈಗಿನ ತಲೆಮಾರಿನ ಇಂಡಿಯಾದ ಸ್ವಾತಂತ್ರ್ಯದ ವ್ಯಾಖ್ಯಾನವೇ ಬೇರೆಯಿದ್ದಂತಿದೆ. ಪೇಟೆ, ಪಟ್ಟಣಗಳಲ್ಲಿರುವ ಬಹುತೇಕರಿಗೆ ವಿದ್ಯಾಭ್ಯಾಸ, ವಿದೇಶ, ಹಣ ಗಳಿಕೆ, ಎರಡು ಮೂರು ಮನೆಗಳ ಒಡೆತನ, ಮನೆಯಲ್ಲಿರುವ ತಲೆಗೊಂದು ಕಾರು - ಒಟ್ಟಾರೆ ಐಷಾರಾಮದ ಬದುಕು ಅಥವಾ ಅಂಥದೊಂದು ಕನಸು ಸ್ವಾತಂತ್ರ್ಯ-ಸ್ವಾವಲಂಬನೆಯ ಕುರುಹಾಗಿರುವಂತಿದೆ. ಅದೇ, ಮತ್ತೂಂದು ವರ್ಗದ ಮಂದಿಗೆ ದಿನಕ್ಕೆರಡು ಊಟಕ್ಕೂ ತತ್ವಾರವಿರುವ ಸ್ಥಿತಿ. ಇವರ ಸ್ತರದಲ್ಲಿ ನಿಂತು ಆಲೋಚಿಸಿದರೆ ಭಾರತಕ್ಕೆ ಸಿಕ್ಕಿರುವ ಸ್ವಾತಂತ್ರ್ಯ, ಅದರ ಆಚರಣೆ ಎಲ್ಲಿಗೋ, ಯಾರಿಗೋ ಸಂಬಂಧಿಸಿದ್ದೆಂಬಂತೆ ಕಾಣುತ್ತವೆ. ಹೀಗೆ, ಸ್ವತಂತ್ರ ದೇಶದೊಳಗೇನೇ ಸ್ವಾತಂತ್ರ್ಯದ ಅರ್ಥ ಪ್ರತಿಯೊಬ್ಬರ ಮೂಗಿನ ನೇರಕ್ಕೆ ಅಂತಾಗಿ ಅರ್ಥ ಕಳೆದುಕೊಂಡಂತಿದೆ.

        ಒಟ್ಟಾರೆ ಚಿಂತಿಸಿದರೆ, ಕೊನೆಗೂ ಸ್ವಾತಂತ್ರ್ಯವೆಂಬುದು ಪಡೆಯುವವರೆಗೆ ಹಕ್ಕು-ಪಡೆದ ಮೇಲೆ ಜವಾಬ್ದಾರಿ. ಸಾಧ್ಯವಾದಷ್ಟು ಅಹಿಂಸಾತ್ಮಕವಾಗಿ ಇಂಡಿಯಾ ತನ್ನ ಹಕ್ಕು ಚಲಾಯಿಸಿ ಸ್ವಾತಂತ್ರ್ಯ ಗಳಿಸಿಯಾಗಿದೆ. ದಕ್ಕಿದ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸುವ, ನಿಭಾಯಿಸುವ ಮಾರ್ಗವನ್ನು - ವೈಯಕ್ತಿಕ ನೆಲೆಯಲ್ಲಿ , ದೇಶದ ಹಿನ್ನೆಲೆಯಲ್ಲಿ - ಕಂಡುಕೊಳ್ಳುವ, ಅತಿರೇಕವಲ್ಲದ ಇತಿಮಿತಿಯ ಬದುಕನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ, ಜವಾಬ್ದಾರಿ ನಮ್ಮ ತಲೆಮಾರಿನ ಭಾರತೀಯರ ಮೇಲಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus