ಹೈದರಾಬಾದ್ : ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಉಪ್ಪಲ್‌ನ 'ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ' ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಬಿಸಿಸಿಐನ ನೂತನ ಮಾರ್ಗದರ್ಶಿ ಸೂತ್ರದಂತೆ ನಡೆಯಲ್ಪಡುವ ಮೊದಲ ಟೆಸ್ಟ್ ಪಂದ್ಯ ಇದೆಂಬುದು ವಿಶೇಷ. ಆ ಪ್ರಕಾರ, ಪ್ರತಿಕೂಲ ಹವಾಮಾನ ಅಥವಾ ಇನ್ನಿತರ ಕಾರಣಗಳಿಂದ ಆಟಕ್ಕೆ ಅಡಚಣೆಯಾದರೆ ಆ ಅವಧಿಯ ಆಟವನ್ನು ಫ್ಲಡ್‌ಲೈಟ್ ಅಡಿಯಲ್ಲಿ ಮುಂದುವರಿಸಲಾಗುವುದು. ಹೈದರಾಬಾದ್ ಕ್ರಿಕೆಟ್ ಮಂಡಳಿಯ (ಎಚ್‌ಸಿಎ) ಕಾರ್ಯದರ್ಶಿ ಎಂ.ವಿ. ಶ್ರೀಧರ್ ಇದನ್ನು ತಿಳಿಸಿದರು.ಇದು ಉಪ್ಪಲ್‌ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯ. ಮೊದಲ ಟೆಸ್ಟ್ ನಡೆದದ್ದು 2010ರಲ್ಲಿ. ಅದು ಕೂಡ ನ್ಯೂಜಿಲಂಡ್ ವಿರುದ್ಧವೇ ಎಂಬುದು ವಿಶೇಷ. ಇದು ಡ್ರಾದಲ್ಲಿ ಅಂತ್ಯಗೊಂಡಿತ್ತು.ಇಲ್ಲಿನ ಸ್ಟೇಡಿಯಂ ಸುಮಾರು 40 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದ್ದು, ಎಚ್‌ಸಿಎ 34 ಸಾವಿರ ಟಿಕೆಟ್‌ಗಳನ್ನು ಮಾರಾಟಕ್ಕೆ ಬಿಡಲಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ಸ್ಟೇಡಿಯಂನ ಚಾವಣಿಯೊಂದರ ಕೆಲಸ ಬಾಕಿ ಇರುವುದರಿಂದ ವೀಕ್ಷಕರ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ ಎಂದು ಶ್ರೀಧರ್ ಹೇಳಿದರು.ಟೆಸ್ಟ್ ಪಂದ್ಯಕ್ಕೆ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಬೆದರಿಕೆ ಇದ್ದರೂ ಈ ಮುಖಾಮುಖೀ ಯಾವುದೇ ಅಡಚಣೆ ಇಲ್ಲದೆ ಸಾಗಲಿದೆ ಎಂದು ಎಂ.ವಿ. ಶ್ರೀಧರ್ ಹೇಳಿದರು.