Thursday, June 20, 2013
Last Updated: 3:49:01 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ನನ್ನ ಬಗ್ಗೆ ಹಗುರವಾಗಿ ಮಾತನಾಡುವಾಗ ಎಚ್ಚರವಿರಲಿ
  • ವಿರೋಧಿಗಳಿಗೆ ಯಡಿಯೂರಪ್ಪ ತರಾಟೆ
    • Udayavani | Aug 21, 2012

      ಶಿವಮೊಗ್ಗ: ಯಡಿಯೂರಪ್ಪನ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಮಾತಿನ ಮೇಲೆ ಎಚ್ಚರವಿರಲಿ. ಇಲ್ಲದಿದ್ದರೆ ರಾಜ್ಯದ ಜನತೆ ಸರಿಯಾದ ಉತ್ತರ ನೀಡುತ್ತಾರೆ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

      ಸೋಮವಾರ ಶಿಕಾರಿಪುರ ತಾಲೂಕು ಅಂಜನಾಪುರ ಜಲಾಶಯದಲ್ಲಿ ಬಾಗಿನ ಅರ್ಪಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ' ಕೆಲವರು ನನ್ನ ಬಗ್ಗೆ ಹಗುರವಾದ ಟೀಕೆಗಳನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಹೀಗೆ ಮುಂದುವರಿದರೆ ರಾಜ್ಯದ ಜನತೆ ಉತ್ತರ ಕೊಡುತ್ತಾರೆ. ಜೊತೆಗೆ ಸರಿಯಾದ ಪಾಠ ಕೂಡ ಕಲಿಸುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

      ರಾಜ್ಯಾಧ್ಯಕ್ಷನಾಗಲು ಪ್ರವಾಸ ಕೈಗೊಳ್ಳುತ್ತಿಲ್ಲ:

      ನಾನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಪಡೆಯುವ ಉದ್ದೇಶದಿಂದ ರಾಜ್ಯ ಸುತ್ತುತ್ತಿಲ್ಲ. ರಾಜ್ಯದ ಜನ ಬರಗಾಲದಿಂದ ತತ್ತರಿಸುತ್ತಿದ್ದಾರೆ. ಇವರ ಕಷ್ಟಗಳನ್ನು ನೋಡಿ ಅರಿಯಲು ರಾಜ್ಯ ಪ್ರವಾಸ ನಡೆಸಿದ್ದೇನೆ. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಇದರಲ್ಲಿ ಬೇರೆ ರಾಜಕೀಯ ಹುಡುಕುವ ಅಗತ್ಯವಿಲ್ಲ. ರಾಜ್ಯದ ರೈತರು, 6 ಕೋಟಿ ಜನರು ನನಗೆ ಅತೀ ಮುಖ್ಯ. ನಂತರ ನನಗೆ ಪಕ್ಷ, ಸರ್ಕಾರ. ರೈತರ ಕಷ್ಟವನ್ನು ಅರಿಯುವುದೇ ನನ್ನ ಪ್ರವಾಸದ ಉದ್ದೇಶ ಎಂದರು.

      ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದು ರೈತರು ಬಹಳ ಕಷ್ಟದ ಸ್ಥಿತಿಯಲ್ಲಿದ್ದಾರೆ. ಇವರ ಕಷ್ಟಗಳನ್ನು ಅರಿಯಲು ಮೊದಲ ಹಂತದಲ್ಲಿ 10 ದಿನಗಳ ರಾಜ್ಯ ಪ್ರವಾಸ ಮಾಡಿ ಸರ್ಕಾರಕ್ಕೆ ಸಮಗ್ರ ವರದಿ ಒಪ್ಪಿಸುವುದಾಗಿ ಅವರು ತಿಳಿಸಿದರು.

      ಮುಂದಿನ ಮುಂಗಾರಿನವರೆಗೆ ಜನ, ಜಾನುವಾರುಗಳಿಗೆ ನೀರು, ಮೇವು ಒದಗಿಸುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕು. ರಾಜ್ಯದ ಎಲ್ಲಾ ಕೆರೆಗಳ ಹೂಳೆತ್ತಲು ವಿಶೇಷ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಅಧಿಕಾರಿಗಳು ಸಬೂಬು ಹೇಳದೆ ಕೆರೆ ಹೂಳೆತ್ತುವ ಕಾರ್ಯವನ್ನು ಶೀಘ್ರದಲ್ಲಿ ಮುಗಿಸಬೇಕು. ಅಧಿಕಾರಿಗಳು ನಾಳೆ ಆಗುವ ಕೆಲಸವನ್ನು ಇಂದೇ ಪೂರೈಸುವ ಮೂಲಕ ಕಷ್ಟದಲ್ಲಿರುವ ಜನರ ಕಣ್ಣೀರು ಒರೆಸುವ ಕಾಯಕಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

      ನನ್ನ ರೈತರ ಹೋರಾಟ ನಿರಂತರ:

      ರಾಜಕೀಯಕ್ಕೆ ಬಂದಾಗಿನಿಂದಲು ಯಾವತ್ತು ಸುಮ್ಮನೆ ಕುಳಿತಿಲ್ಲ. ರೈತರ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಇದರ ಫಲವಾಗಿ ರಾಜ್ಯದಲ್ಲಿ 1.40 ಕೋಟಿ ಕುಟುಂಬಗಳು ಸರ್ಕಾರದ ಪ್ರಯೋಜನ ಪಡೆಯುತ್ತಿವೆ. ಮುಂದೆ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಮುಂತಾದ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

      ಹಿಂದೆ ಶಿಕಾರಿಪುರ ತಾಲೂಕು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕಾಗಿತ್ತು. ನಂತರದ ದಿನಗಳಲ್ಲಿ ರಾಜ್ಯದಲ್ಲಿಯೇ ಶಿಕಾರಿಪುರ ಮಾದರಿ ತಾಲೂಕಾಗಿದೆ. ಅದೇ ರೀತಿ ಮುಂದಿನ 5 ವರ್ಷಗಳಲ್ಲಿ ರಾಜ್ಯದ 223 ತಾಲೂಕುಗಳನ್ನು ಅಭಿವೃದ್ಧಿ ಮಾಡಲಾಗುವುದು. ಹಾಗೆ ಸಂಪೂರ್ಣ ಶೌಚಾಲಯ, ನಿರುದ್ಯೋಗ ನಿವಾರಣೆ ಸೇರಿದಂತೆ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು. ಇದನ್ನೆಲ್ಲ ಗಮನಿಸಿದರೆ ಹಿಂದಿನ ಜನಪ್ರತಿನಿಧಿಗಳಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಳಕಳಿ ಇರಲಿಲ್ಲವಾ? ಎಂದು ಪ್ರಶ್ನಿಸಿದರು.

      ವಿಪಕ್ಷ ನಾಯಕನ ಪಾತ್ರ ಅನಿವಾರ್ಯವಾಗಿತ್ತು:

      ಸರ್ಕಾರ ನಿದ್ದೆ ಮಾಡ್ತಿಲ್ಲ. ರೈತರ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನಂತೆ ವರ್ತಿಸಬೇಕಾಯಿತು. ಇದರಿಂದಾಗಿ ತಕ್ಷಣ ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ 25 ಸಾವಿರ ರೂ. ಸಾಲ ಮನ್ನಾ ಆಯ್ತು. 17 ಲಕ್ಷ ರೈತರಿಗೆ ವರದಾನವಾಯಿತು. ಅದೇ ರೀತಿ ನಾನು ರೈತರ ಪರವಾಗಿದ್ದೇನೆ ಎಂದು ಹೇಳುವ ರಾಜಕೀಯ ಪಕ್ಷಗಳಿವೆ. ಅವನ್ನು ಎಂದಿಗೂ ನಂಬಬೇಡಿ ಎಂದು ಪ್ರತಿಪಾದಿಸಿದರು.

      ಇದು ಯಡಿಯೂರಪ್ಪ ಕಾಲ ಮಹಿಮೆ !:

      ಅಯನೂರು ಮಂಜುನಾಥ ಮಾತನಾಡಿ, ಯಡಿಯೂರಪ್ಪನವರ ಕಾಲ ಗುಣದಿಂದಾಗಿ ಅವರ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಬರದ ಛಾಯೆ ಇರಲಿಲ್ಲ. ಅವರು ಅಧಿಕಾರದಿಂದ ಕೆಳಗಿಳಿದಿದ್ದೆ ತಡ ಬರಗಾಲ ಬಂದೆ ಬಿಟ್ಟಿತು. ಇವರು ಎಂದೆಂದಿಗೂ ನಮ್ಮ ನಾಯಕರು. ಇಲ್ಲಿಯವರೆಗೂ ಅಮವಾಸ್ಯೆಗಳು ಇದ್ದವು. ಮುಂದಿನ ದಿನಗಳಲ್ಲಿ ಹುಣ್ಣಿಮೆಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    image
    • Copyright @ 2009 Udayavani.All rights reserved.
    • Designed & Hosted By 4cplus