ಅರಣ್ಯ ಮತ್ತು ತೋಟಗಳಿಂದ ಕೂಡಿದ ಜಾಲಹಳ್ಳಿ ಪ್ರದೇಶ ರಮಣೀಯವಾಗಿದೆ. ಎಂಥವರನ್ನೂ ಅದು ಸೆಳೆಯುತ್ತದೆ. ನಿಂಬೆ ಹಣ್ಣು ವ್ಯಾಪಕವಾಗಿ ಬೆಳೆಯುವ ಈ ಪ್ರದೇಶ ರಾಜ್ಯದಲ್ಲಿ ನಿಂಬೆಗೆ ಪ್ರಸಿದ್ಧಿಯಾಗಿದೆ. ಮಹಿಮಾ ಪುರುಷ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಜಾಲಹಳ್ಳಿಯಲ್ಲಿದೆ.
ಜಿಲ್ಲಾ ಕೇಂದ್ರದಿಂದ 80 ಕಿ.ಮೀ. ದೂರದಲ್ಲಿ ಮತ್ತು ತಾಲೂಕು ಕೇಂದ್ರದಿಂದ ಕೇವಲ 16 ಕಿ.ಮೀ. ದೂರದಲ್ಲಿ ತಿಂಥಿಣಿ ಮೌನೇಶ್ವರ ದೇವಸ್ಥಾನ ಇದೆ. ಕೃಷ್ಣಾ ನದಿ ದಂಡೆಯ ಮೇಲೆ ಮೌನೇಶ್ವರ ತಪಸ್ಸು ಮಾಡಿದ ಎಂಬುವುದಕ್ಕೆ ಸಂಕೇತವಾಗಿ ಇಲ್ಲಿ ಸುಂದರ ದೇವಸ್ಥಾನ ನಿರ್ಮಿಸಿದ್ದಾರೆ. ಮೌನೇಶ್ವರನ ತಪಸ್ಸಿಗೆ ಯಾವುದೇ ಭಂಗವಾಗದಿರಲೆಂಬ ಕಾರಣಕ್ಕೆ ಕೃಷ್ಣೆಯು ಇಲ್ಲಿ ನಿಶಬ್ಧವಾಗಿ ಹರಿಯುತ್ತಾಳೆ. ಹಿಂದು-ಮುಸ್ಲಿಂ ಭಾವೈಕ್ಯತೆಯ ಭಾಗವಾಗಿ ಈ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದೆ.

ಸಿರವಾರದಿಂದ ಅರಕೇರಿಗೆ ಹೋಗುವ ದಾರಿಯಲ್ಲಿ ಬರುವ ಕ್ಯಾದಿಗೇರಾ ಗ್ರಾಮದಲ್ಲಿ ಪ್ರಸಿದ್ಧ ಐತಿಹಾಸಿಕ ಕೋಟೆ ಇದೆ. ನೈಸರ್ಗಿಕವಾಗಿ ವಿಸ್ತರಿಸಿಕೊಂಡ ಕಲ್ಲು ಬಂಡೆಗಳಲ್ಲಿ ಹತ್ತಾರು ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳ ಉಗ್ರಾಣವೇ ಇದೆ.
ಬೆಂಗಳೂರು ಮತ್ತು ಮೈಸೂರು ಭಾಗವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಅಪಾರ ಭಕ್ತರನ್ನು ಹೊಂದಿದ ನರಸಿಂಹಸ್ವಾಮಿ ದೇವಸ್ಥಾನ ಕೊಪ್ಪರದಲ್ಲಿ ಇದೆ. ಜಿಲ್ಲಾ ಕೇಂದ್ರದಿಂದ 68 ಕಿ.ಮೀ. ದೂರ ಮತ್ತು ತಾಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಈ ದೇವಸ್ಥಾನ ಕೃಷ್ಣಾ ನದಿ ತಟದಲ್ಲಿದೆ.

ಗಬ್ಬೂರು
ರಾಯಚೂರು ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ತಾಲೂಕು ಕೇಂದ್ರದಿಂದ 28 ಕಿ.ಮೀ. ದೂರದಲ್ಲಿರುವ ಗಬ್ಬೂರು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಹೊಂದಿದ ಗ್ರಾಮವಾಗಿದೆ. ಈ ಹಿಂದೆ ಇದು ಬಬ್ರುವಾಹನನ ಮಣಿಪುರ ಎಂಬ ಐತಿಹ್ಯ ಹೊಂದಿದೆ. ಪಾಂಡವರ ಅಶ್ವಮೇಧ ಕುದುರೆಯನ್ನು ಬಬ್ರುವಾಹನ ಇದೇ ಸ್ಥಳದಲ್ಲಿ ಕಟ್ಟಿದ ಎಂದು ಹೇಳಲಾಗುತ್ತದೆ. ಇಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಅನೇಕ ದೇವಸ್ಥಾನಗಳು ಇವೆ.

30 ದೇವಸ್ಥಾನಗಳು ಮತ್ತು 26 ಶಿಲಾ ಶಾಸನಗಳು ಇವೆ. ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ, ಮೇಲುಶಂಕರ ದೇವಸ್ಥಾನ ಮಹಾನಂದೀಶ್ವರ ದೇವಸ್ಥಾನ, ಏಳುಬಾವಿ ಬಸವಣ್ಣ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನಗಳು ಇಲ್ಲಿವೆ. ಇದೇ ಭಾಗದಲ್ಲಿ 12ನೇ ಶತಮಾನದಲ್ಲಿ ಮುಕ್ತಾಯಕ್ಕ ಮತ್ತು ಗೋಪಾಲದಾಸರು ಹುಟ್ಟಿದ ಮಸರಕಲ್ಲು ಹಾಗೂ ವಚನಕಾರರಾದ ಅಲ್ಲಮ ಪ್ರಭುಗಳು ಕಲ್ಯಾಣ ಕ್ರಾಂತಿಯ ನಂತರ ಗೂಗಲ್‌ನಲ್ಲಿ ಬಂದು ವಾಸಿಸಿದ್ದರು.
