Udayavani | Sep 27, 2010

* ಮನೋಹರ ಪ್ರಸಾದ್
ಮಂಗಳೂರು : ಈ 'ಸಂಸ್ಥೆ'ಯು ತನ್ನನ್ನು ಕೃಷಿ ಅಭಿವೃದ್ಧಿ ಆಧಾರಿತ ಉದ್ಯಮ ಎಂದು ಹೇಳಿಕೊಂಡಿದೆ. ಭಾರತ ಸರಕಾರದ ಮಾನ್ಯತೆ ತನಗಿದೆ ಎಂದು ಹೇಳಿದೆ. ಸಂಸ್ಥೆ ಈಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಿದವರಿಗೆಲ್ಲ ನೇಮಕಾತಿ ಪತ್ರವೂ ಬಂದಿದೆ!
ಇದು ಮೇಲ್ನೋಟದ ಸಂಗತಿ. ಆದರೆ, ವಾಸ್ತವ ಇದಲ್ಲ. ನೇಮಕಾತಿ ಪತ್ರ ಪಡೆದವರು ಈಗ ಭಾರೀ ಮೊತ್ತದ ಬ್ಯಾಂಕ್ ಡ್ರಾಫ್ಟನ್ನು ಪಾವತಿಸಿ ನೇಮಕಾತಿಯ ದೃಢೀಕರಣ ಮಾಡಿಕೊಳ್ಳಬೇಕು. ವಿಶೇಷವೆಂದರೆ, ಈ ಬ್ಯಾಂಕ್ ಡ್ರಾಫ್ಟನ್ನು 'ಭಾರತ ಸರಕಾರದ ಮಾನ್ಯತೆ' ಪಡೆದ ಈ ಸಂಸ್ಥೆಯ ಹೆಸರಿಗೆ ಕಳುಹಿಸುವಂತಿಲ್ಲ. ಈ ಡ್ರಾಫ್ಟನ್ನು ನೇಮಕಾತಿ ಪತ್ರದಲ್ಲಿ ಸೂಚಿಸಲಾದ ಓರ್ವ ವ್ಯಕ್ತಿಯ ಹೆಸರಿನಲ್ಲೇ ಕಳುಹಿಸಬೇಕು. ಇನ್ನೊಂದು ವಿಶೇಷವೆಂದರೆ, ಈ ಡ್ರಾಫ್ಟನ್ನು ಕೊರಿಯರ್ ಅಥವಾ ಸ್ಪೀಡ್‌ಪೋಸ್ಟ್ ಅಥವಾ ರಿಜಿಸ್ಟರ್ಡ್ ಮೂಲಕ 'ಕಡ್ಡಾಯವಾಗಿ' ಕಳುಹಿಸುವಂತಿಲ್ಲ. ಕೇವಲ ಸರಳ ಅಂಚೆಯ (ಸಿಂಪಲ್ ಪೋಸ್ಟ್) ಮೂಲಕವೇ ಕಳುಹಿಸಬೇಕು. ಬ್ಯಾಂಕ್ ಡ್ರಾಫ್ಟ್ ದಿಲ್ಲಿಯಲ್ಲಿ ನಗದೀಕರಣವಾಗಬೇಕು ಮುಂತಾದ ಷರತ್ತುಗಳನ್ನು ವಿಧಿಸಿರುವ ಈ ಸಂಸ್ಥೆ ಗಾಜಿಯಾಬಾದಿನ ಕಾಲನಿಯೊಂದರ ವಿಳಾಸ ಕೊಟ್ಟಿದೆ ! ದೂರವಾಣಿ ಸಂಖ್ಯೆ ಮತ್ತು ಪ್ರಚಲಿತ ಜೀವನಶೈಲಿಯ ಅನಿವಾರ್ಯ ಸೌಲಭ್ಯ ಎಂದು ಪರಿಗಣಿತವಾಗಿರುವ ಮೊಬೈಲ್ ಫೋನ್ ಸಂಖ್ಯೆಗಳನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ.
ನಿರಂತರ ದಂಧೆ
ನಿರುದ್ಯೋಗಿಗಳನ್ನು ಕೆಲವು ದಂಧೆಕೋರರು ಹೇಗೆ ಶೋಷಿಸುತ್ತಾರೆ ಅನ್ನುವುದಕ್ಕೆ ಈ ಪ್ರಕರಣ ನಿದರ್ಶನ ಮಾತ್ರ. ಇಂತಹಾ ವಂಚನಾಜಾಲಗಳು ದೇಶದಾದ್ಯಂತ ದಂಧೆಯಲ್ಲಿ ನಿರತವಾಗಿವೆ. ಉದ್ಯೋಗ ದೊರೆಯಿತೆಂದು ಸಂಭ್ರಮಿಸುವ ಅರ್ಜಿದಾರರು 'ಹಿಂದೆ ಮುಂದೆ' ನೋಡದೆ ಬ್ಯಾಂಕ್ ಡ್ರಾಫ್ಟನ್ನು ಕಳುಹಿಸುತ್ತಾರೆ.
ಹೀಗೆ ಸರಳ ಅಂಚೆಯಲ್ಲಿ ಡ್ರಾಫ್ಟ್ ಸಂಗ್ರಹಿಸಿ, ಅದನ್ನು ನಗದೀಕರಿಸಿ ವಂಚನಾ ಜಾಲದವರು ಕಣ್ಮರೆಯಾಗುತ್ತಾರೆ. ಇನ್ನು ಪೊಲೀಸರಿಗೆ ದೂರು, ಅವರಿಂದ ತನಿಖೆ ಇತ್ಯಾದಿಗಳಿಗೆ ತಿಂಗಳುಗಟ್ಟಲೆ ಬೇಕು. ಆದರೆ, ವಂಚಿಸಿ ಪರಾರಿಯಾಗುವವರಿಗೆ ಕೇವಲ ವಾರ ಸಾಕು. ಪೊಲೀಸರು ಅಲ್ಲಿಗೆ ತಲುಪುವ ವೇಳೆಯಲ್ಲಿ ಇಂತಹ ವಂಚನಾ ಜಾಲದವರು ದೇಶದ ಇನ್ನೊಂದು ಮೂಲೆಯಿಂದ ಈ ರೀತಿಯ ದಂಧೆ ಆರಂಭಿಸಿರುತ್ತಾರೆ!
ಸಂಶಯಕ್ಕೆ ಮೂಲ
ಉಲ್ಲೇಖೀತ ಪ್ರಕರಣದಲ್ಲಿ ರಾಷ್ಟ್ರೀಯ ವ್ಯಾಪ್ತಿ ಎಂದು ಹೇಳಿಕೊಂಡ ಸಂಸ್ಥೆ ತನ್ನ ಪ್ರಬಂಧಕ ಎಂದು ಹೇಳಿಕೊಂಡಿರುವ ವ್ಯಕ್ತಿಯ ಹೆಸರಿನಲ್ಲಿ ಹೇಗೆ ಹಣ ಸಂಗ್ರಹಕ್ಕೆ ಮುಂದಾಗಿದೆ ? ಇದು ಸಂಶಯಕ್ಕೆ ಮೂಲವಾಗಿದೆ.
ಹೆಚ್ಚಿನ ಮಾಹಿತಿ ಪಡೆಯಲು ಸಂಸ್ಥೆಯ ದೂರವಾಣಿಯೇ ಇಲ್ಲ. ವೆಬ್‌ಸೈಟ್ ಕೂಡಾ ಇಲ್ಲ. ಆದರೆ ಇ-ಮೇಲ್ ನೀಡಿದೆ. ಇ-ಮೇಲ್‌ನಿಂದ ಮರುಮಾಹಿತಿ ಯಾರಿಗೂ ಲಭ್ಯವಿಲ್ಲ. ಈ ಪ್ರಕರಣದ ಕೆಲವು ಸಂಗತಿ ಇಲ್ಲಿದೆ.
ಉದ್ಯೋಗ-ಕಂಪ್ಯೂಟರ್ ಆಪರೇಟರ್, ಫೀಲ್ಡ್ ಆಫೀಸರ್, ಸೂಪರ್‌ವೈಸರ್, ಟೆಕ್ನಿಕಲ್ ಸ್ಟಾಫ್. ವೇತನ- 9,700 ರೂ., ಡ್ರಾಫ್ಟ್- 2,650 ರೂ. ಅಂತೆಯೇ ಕ್ಲರ್ಕ್ ಹುದ್ದೆಗೆ 1,950 ರೂ., ಡ್ರೈವರ್, ಗಾರ್ಡ್ ಇತ್ಯಾದಿಗೆ ಡ್ರಾಫ್ಟ್ 1,450 ರೂ.
ಈ ಸಂಸ್ಥೆಯಿಂದ ಬಂದಿರುವ ಈ ಪತ್ರಗಳ ಬಗ್ಗೆ ಅನೇಕ ಅರ್ಜಿದಾರರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ. ಇಂತಹಾ ಸಂಸ್ಥೆಗಳ ಬಗ್ಗೆ ಉದ್ಯೋಗಾಕಾಂಕ್ಷಿಗಳು ಜಾಗೃತರಾಗಬೇಕೆಂಬ ಕಳಕಳಿ ಅವರಿಂದ ವ್ಯಕ್ತವಾಗಿದೆ. ಇಂತಹಾ ಸಂಸ್ಥೆಗಳ 'ಅಸ್ತಿತ್ವ'ದ ಶೋಧ ಪ್ರಚಲಿತ ತಾಂತ್ರಿಕ ಸೌಲಭ್ಯಗಳಿಂದ ಸಾಧ್ಯವಿದೆ. ಈ ಬಗ್ಗೆ ಅರ್ಜಿದಾರರು ಜಾಗೃತರಾಗಿದ್ದರೆ ಯಾವುದೇ ರೀತಿಯ ಸಮಸ್ಯೆ ಅಥವಾ ವಂಚನೆಯಿಂದ ಪಾರಾಗಬಹುದು.
ಇಲ್ಲಿ 10,000 ಮಂದಿ ತಾಂತ್ರಿಕ ಹುದ್ದೆಗೆ ತಲಾ 2,650 ರೂ. ಕಳುಹಿಸಿದರೆ ಆಗುವ ಒಟ್ಟು ಮೊತ್ತ 2.65 ಕೋಟಿ ರೂ. ಇನ್ನುಳಿದ ಹುದ್ದೆಗಳಿಗೆ ಸಹಸ್ರಾರು ಮಂದಿ ಡ್ರಾಫ್ಟ್ ಕಳುಹಿಸಿದರೆ ?
ಅಂದಹಾಗೆ..
ಈ ಪ್ರಕರಣದಲ್ಲಿ ಸಂಸ್ಥೆಯು ಸಂದರ್ಶನವೇ ಇಲ್ಲದೆ ಅರ್ಜಿಯ ಅರ್ಹತೆಯಿಂದ ನೇಮಕಾತಿ ಎಂದು ಹೇಳಿಕೊಂಡಿದೆ. ಡ್ರಾಫ್ಟ್ ಮೊತ್ತವು ಅರ್ಜಿದಾರರು ತರಬೇತಿಗೆಂದೂ ಮೊದಲ ತಿಂಗಳ ವೇತನದೊಂದಿಗೆ ಹಿಂದಿರುಗಿಸಲಾಗುವುದೆಂದೂ ಹೇಳಿದೆ. ಅ. 11ರ ಬಳಿಕದ ಡ್ರಾಫ್ಟ್ಗೆ 550 ರೂ. ವಿಳಂಬ ಶುಲ್ಕ. ಅಂದರೆ, ಅ. 11ರ ಬಳಿಕ ಸಂಸ್ಥೆ ಗಾಜಿಯಾಬಾದ್‌ನಿಂದ ಮಾಯವಾಗುವ ಪೂರ್ವ ಸೂಚನೆಯೇ?