Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
      • ಅಶೋಕ್‌ ಕುಮಾರ್‌ ಎ. | Oct 03, 2010

        ಜಲ ಬಳಕೆ ಎಷ್ಟು?

        ವಾಹನ ಖರೀದಿಸುವಾಗ ಇಂಧನ ದಕ್ಷತೆ, ವಿದ್ಯುತ್‌  ಬಳಸುವ ಸಾಧನ ಖರೀದಿಸುವಾಗ ವಿದ್ಯುತ್‌ ಬಳಕೆಯ ದಕ್ಷತೆಯ ಬಗ್ಗೆ ಗಮನ ನೀಡುವುದು ಸಾಮಾನ್ಯ. ಆದರೆ ನೀರಿನ ಬಳಕೆಯನ್ನೂ ಮಾನದಂಡವಾಗಿ ಬಳಸುವಷ್ಟು ನೀರಿನ ಬಗ್ಗೆ ನಮ್ಮಲ್ಲಿ ಅನೇಕರಿಗೆ ಕಾಳಜಿಯಿರಲಿಕ್ಕಿಲ್ಲ. ವಾಶಿಂಗ್‌ ಮೆಶೀನ್‌ ನಂತಹ ಸಾಧನ ಖರೀದಿಸುವಾಗ ಅದು ಬಟ್ಟೆ ಒಗೆಯಲು ಬಳಸುವ ನೀರಿನ ಪ್ರಮಾಣವೆಷ್ಟು ಎನ್ನುವುದನ್ನು ಜಾಹೀರು ಪಡಿಸುವುದನ್ನು ಕಡ್ಡಾಯವಾಗಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶವಿದೆ. ನೀರಿನ ಬಳಕೆಯ ವಿವರ ನೀಡುವುದನ್ನು ಕಡ್ಡಾಯವಾಗಿಸುವ ಜಲ ದಕ್ಷತೆಯ ಕಾರ್ಯಾಲಯವನ್ನು ಸ್ಥಾಪಿಸುವ ಅಗತ್ಯದ ಬಗ್ಗೆ ಜಲ ಸಂಪನ್ಮೂಲ ಸಚಿವಾಲಯವು ಸರಕಾರದ ಮೇಲೆ ಒತ್ತಡ ಹೇರಲಿದೆ. ಕೈಗಾರಿಕೆಗಳು, ರೈತರು ಬಳಸುವ ನೀರಿನ ಮೇಲೆ ಕಣ್ಣಿಟ್ಟು, ಅದನ್ನು ನಿಯಂತ್ರಿಸಲು ಮತ್ತು ಅವರ ನೀರಿನ ದಕ್ಷತೆಯನ್ನು ಹೆಚ್ಚಿಸಲು ಒತ್ತಾಯಿಸುವುದು ಈಗಿನ ಅಗತ್ಯವಾಗಿದೆ. ಸ್ವಾತಂತ್ರ್ಯ ಬಂದ ದಶಕದಲ್ಲಿ ಭಾರತದಲ್ಲಿ ಪ್ರತಿ ವ್ಯಕ್ತಿಗೆ 5 ಸಾವಿರ ಘ. ಮೀ. ನೀರು ಲಭ್ಯವಿದ್ದರೆ, ಈಗದು ಬರೇ 1,300 ಘ. ಮೀ.ಗಳಿಗೆ ಕುಸಿದಿದೆ. ಹಾಗಾಗಿ, ಈಗಿನ ಸನ್ನಿವೇಶದಲ್ಲಿ ನೀರಿನ ದಕ್ಷತೆಯ ಕಡೆ ಕಣ್ಣಿಡಬೇಕಾದ್ದು ಅನಿವಾರ್ಯವಾಗಿದೆ.


        ಹ್ರಸ್ವ ಯುಆರೆಲ್‌: ಗೂಗಲ್‌ ಸೇವೆ

        ಟ್ವಿಟರ್‌ನಂತಹ ತಾಣಗಳಲ್ಲಿ, ಸಂದೇಶಗಳ ಉದ್ದ ಸೀಮಿತವಾಗಿರಬೇಕಾ ಗುತ್ತದೆ. ಇಂತಹ ತಾಣಗಳಲ್ಲಿ ನೀವು ನೋಡಿದ ಅಂತರ್ಜಾಲ ಪುಟದ ಕೊಂಡಿಯನ್ನು ನೀಡಲು ಸಮಸ್ಯೆಯಾಗುವುದಿದೆ. ಉದ್ದವಾದ ವಿಳಾಸವನ್ನು ಕಿರಿದಾಗಿಸುವುದು ಅಗತ್ಯವಾಗುತ್ತದೆ. http://bit.ly/ ಅಂತಹ ತಾಣಗಳು ಇಂತಹ ವಿಳಾಸ ಕಿರಿದಾಗಿಸುವ ಸೇವೆ ಒದಗಿಸಿ, ಟ್ವಿಟರ್‌ ಬಳಕೆದಾರರಿಗೆ ನೆರವಾಗುತ್ತವೆ. ಈಗ ಗೂಗಲ್‌ ಕೂಡಾ http://goo.gl/ ಎನ್ನುವ ಇಂಥ ಸೇವೆಯನ್ನು ನೀಡಲಾರಂಭಿಸಿದೆ. ಈ ಸೇವೆ ಒದಗಿಸಿದಾಗ, ಗೂಗಲ್‌ಗೆ ಬಳಕೆದಾರನು ಯಾವ ಪುಟಗಳ ಬಗ್ಗೆ ಆಸಕ್ತಿ ಹೊಂದಿದ್ದಾನೆ ಎನ್ನುವ ಮಾಹಿತಿ ಸಿಗುತ್ತದೆ. ಇದು ಬಿಟ್‌.ಲೀಯಂತಹ ಜನಪ್ರಿಯ ಸೇವೆಗಳಿಗೆ ಯಾವ ರೀತಿ ಹಿನ್ನಡೆ ತರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಬಳಕೆದಾರನಿಗೆ ಬೇಕಾದ ಸರ್ವ ಸೇವೆಗಳನ್ನೂ ತಾನೇ ಒದಗಿಸಿ, ಅಗಾಧ ಸಂಖ್ಯೆಯ ಜನರ ಮಾಹಿತಿ, ಬಳಕೆ, ಅವರ ದತ್ತಾಂಶಗಳ ಮೇಲೆ ನಂಬಲಸಾಧ್ಯ ಹಿಡಿತ ಸಾಧಿಸುವ ಗೂಗಲ್‌ ಯತ್ನದ ಭಾಗವಾಗಿ ಈ ಹೆಜ್ಜೆಯನ್ನು ಕಾಣುವ ತಜ್ಞರಿದ್ದಾರೆ.

        ಜೆಪೆಗ್‌ ಬದಲು ಡಿಛಿಚಿಟ

        ಚಿತ್ರಗಳನ್ನು ಕಂಪ್ಯೂಟರಿನಲ್ಲಿ ಸಂಗ್ರಹಿಸುವಾಗ, ಬೇರೆ ಬೇರೆ ತೆರನ ಶೇಖರಣಾ ವಿಧಾನಗಳನ್ನು ಬಳಸಬಹುದು. ಕೆಲವು ವಿಧಾನಗಳಲ್ಲಿ ಚಿತ್ರ ವನ್ನು ಉಳಿಸಿದಾಗ ಚಿತ್ರವನ್ನು ಶೇಖರಿಸಲು ಅಗತ್ಯವಾದ ಸ್ಮರಣಕೋಶದ ಸಾಮರ್ಥ್ಯ ಹೆಚ್ಚು. ಇನ್ನು ಕೆಲವು ರೀತಿಗಳಲ್ಲಿ ರೂಪಿಸಿದಾಗ ಚಿತ್ರವು ಕಡಿಮೆ ಸ್ಮರಣಕೋಶ ಸಾಮರ್ಥ್ಯವನ್ನು ಬಳಸುತ್ತದೆ. ಜೆಪೆಗ್‌ ಇಂತಹ ರೂಪಿಸುವ ಜನಪ್ರಿಯ ವಿಧಾನವಾಗಿದೆ. ಅಂತರ್ಜಾಲದ ಹೆಚ್ಚಿನ ಚಿತ್ರಗಳು ಈ ರೀತಿಯಲ್ಲಿ ರೂಪಿಸಲಾಗಿರುತ್ತವೆ. ಈ ಶೈಲಿಯು ಚಿತ್ರವನ್ನು ತುಸು ಕೆಡಿಸಿದರೂ, ಕಡಿಮೆ ಸ್ಮರಣಕೋಶ ಸಾಮರ್ಥ್ಯವನ್ನು ಬಳಸುವುದರಿಂದ ಜನಪ್ರಿಯವಾಗಿದೆ. ಈಗ ಗೂಗಲ್‌ ಅಭಿವೃದ್ಧಿ ಪಡಿಸಿರುವ ವೆಬ್‌ಪಿ ಎನ್ನುವ ರೂಪಣಾ ವಿಧಾನವು ಜೆಪೆಗ್‌ಗಿಂತಲೂ ಶೇ. 40 ಕಡಿಮೆ ಸ್ಮರಣಸಾಮರ್ಥ್ಯವನ್ನು ಬಳಸುವುದಂತೆ. ಇದು ಹೊಸ ವಿಧಾನವಾದುದರಿಂದ ಬ್ರೌಸರ್‌, ಕ್ಯಾಮರಾ ಅಥವಾ ಚಿತ್ರವನ್ನು ಮಾರ್ಪಡಿಸುವ ತಂತ್ರಾಂಶಗಳಲ್ಲಿ ಇನ್ನೂ ಲಭ್ಯವಾಗಿಲ್ಲ.ಆದರೆ ನಿಧಾನವಾಗಿ ತಂತ್ರಾಂಶಗಳಲ್ಲಿ ಮತ್ತು ಬ್ರೌಸರುಗಳಲ್ಲಿ ಅಂತಹ ಸಾಮರ್ಥ್ಯ ಅಳವಡಿಕೆಯಾಗುವುದು ಶತಃಸಿದ್ಧ. ಈಗಿನ ಅಂತರ್ಜಾಲದ ಪುಟದ ಶೇ. 65 ಭಾಗ ಚಿತ್ರಗಳೇ ಆಗಿರುತ್ತವೆ ಎನ್ನುವ ಅಂದಾಜು ಮಾಡಲಾಗಿದೆ.ಹಾಗಾಗಿ, ವೆಬ್‌ಪಿ ವಿಧಾನವನ್ನು ಬಳಸಿದ ಪುಟಗಳು ವೇಗವಾಗಿ ಲೋಡ್‌ ಆಗುವ ಲಾಭ ಬಳಕೆದಾರರಿಗೆ ಸಿಗಲಿದೆ. ಗೂಗಲಿನ ಮುಕ್ತ, ಬಳಸಲು ಯಾವುದೇ ರಾಯಧನ ಕೊಡಬೇಕಿಲ್ಲದ ವಿಡಿಯೋ ರೂಪಿಸುವ ವಿಧಾನವಾದ ವೆಬ್‌ಎಂ ಎನ್ನುವ ವಿಧಾನದ ವುತ್ಪತ್ತಿ ವೆಬ್‌ಪಿ.

        ಸ್ವದೇಶೀ ತಂತ್ರಜ್ಞರ ಸಮಾವೇಶ

        ಗಾಂದೀಜಿಯವರ ರಾಮರಾಜ್ಯದ ಕನಸು ನನಸಾಗಲು ರೈತರಿಗೆ ಸುಲಭ, ಅಗ್ಗ, ಪರಿಸರಸ್ನೇಹಿ ಮತ್ತು ಸಣ್ಣ ಯಂತ್ರಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಪಣ ತೊಟ್ಟ ಸ್ವದೇಶೀ ತಂತ್ರಜ್ಞರ ಸಮಾವೇಶವೇ ಸ್ವತಂಸಮ್‌.ಇದರ ಅಂತರ್ಜಾಲ ತಾಣ http://swatamsam.in. ಸ್ವದೇಶೀ ತಂತ್ರಜ್ಞರು ಗಾಂದೀಜಯಂತಿಯಂದು ಆನೆಗುಡ್ಡೆಯ ಕುಂಭಾಶಿಯಲ್ಲಿ ಸಮಾವೇಶ ಏರ್ಪಡಿಸಿದ್ದರು. ಅಗ್ಗದ ಗೋಬರ್‌ ಗ್ಯಾಸ್‌ ಸಂಶೋಧಕ ಮೂಡಿಗೆರೆಯ ಕೃಷ್ಣರಾಜು ಮತ್ತು ಕಡಿಮೆ ಶ್ರಮದಾಯಕ ಸೈಕಲ್‌ ವಿನ್ಯಾಸ ರೂಪಿಸಿದ ಬೆಂಗಳೂರಿನ ನಟರಾಜ್‌ ಅವರ ಪ್ರಾತ್ಯಕ್ಷಿಕೆಗಳು ಏರ್ಪಾಡಾಗಿ ದ್ದುವು. ರೈತರು ಕೃಷಿಯ ಜತೆಗೆ ಸಿದ್ಧ ಸರಕನ್ನು ತಯಾರಿಸುವತ್ತ ಗಮನ ಹರಿಸಿದರೆ ಅವರ ಆದಾಯ ಹೆಚ್ಚುತ್ತದೆ. ಹಳ್ಳಿಗಳಲ್ಲೂ ವರ್ಷಪೂರ್ತಿ ಉದ್ಯೋಗ ದೊರಕುತ್ತದೆ. ಇದರಿಂದ ಹಳ್ಳಿಗಳ ಪ್ರಗತಿ ಸಾಧ್ಯ. ಇದಕ್ಕೆ ಅನುಕೂಲವಾಗುವ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟಿ ರುವ ಸ್ವತಂಸಂ, ಅಗ್ಗದ ಗಿರಣಿ, ಅಕ್ಕಿಮಿಲ್‌, ಕಸದಿಂದ ವಿದ್ಯುತ್‌ ಇಂತಹ ಯೋಜನೆಗಳನ್ನು ಹಾಕಿಕೊಂಡಿದೆ. ಕುಂಭಾಶಿಯ ಸಂಪತ್‌ಕುಮಾರ್‌ ಮತ್ತು ದ್ಯುತಿ ಟೆಕ್ನಾಲಜಿಯ ಹರ್ಷ ಸಾಲೀಮಠ ಸಮಾವೇಶ ಆಯೋಜಿಸಿದ್ದರು.


        ಮಿತವ್ಯಯಿ ಇನ್‌ಕುಬೇಟರ್‌

        ಅವಧಿಗಿಂತ ಮೊದಲೇ ಹುಟ್ಟಿದ ಮಕ್ಕಳು ತಮ್ಮ ದೇಹದ ಶಾಖವನ್ನು ಕಾಪಿಡಲು ವಿಫಲವಾಗುವುದಿದೆ. ಇದಕ್ಕಾಗಿ ಕಂದಮ್ಮಗಳನ್ನು ಇನ್‌ಕುಬೇಟರ್‌ ಎನ್ನುವ ಕೃತಕ ಕಾವುಪೆಟ್ಟಿಗೆಯಲ್ಲಿ ಇಡಬೇಕಾಗುತ್ತದೆ. ಹಳ್ಳಿ ಯಲ್ಲಿ ಇಂತಹ ಕಾವುಪೆಟ್ಟಿಗೆಗಳಿಲ್ಲದೆ ಮಕ್ಕಳು ಸಾಯುವುದು ಸಾಮಾನ್ಯ ವಂತೆ. ಎಂಬ್ರೇಸ್‌ ಎನ್ನುವ ಚೀಲದಂತೆ ತೋರುವ ಕಾವುಪೆಟ್ಟಿಗೆಗಳು ಮಿತವ್ಯಯಿಯಾಗಿದ್ದು, ಮಕ್ಕಳ ದೇಹದ ಶಾಖವನ್ನು ಕಾಪಿಟ್ಟು, ಜೀವವನ್ನು ಉಳಿಸಲು ನೆರವಾಗುತ್ತವೆ. ಎಂಬ್ರೇಸ್‌ ಎನ್ನುವ ಲಾಭರಹಿತ ಸಂಸ್ಥೆಯು ಮಕ್ಕಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಬಳಸಬಹುದಾದ ಕಾವುಪೆಟ್ಟಿಗೆಯನ್ನು ಅಭಿವೃದ್ಧಿಪಡಿಸಲು ಸಮರ್ಥ ವಾಗಿದೆ. ಇದಕ್ಕೆ ಆಗೊಮ್ಮೆ ಈಗೊಮ್ಮೆ ವಿದ್ಯುತ್‌ ಪೂರೈಕೆ ಇದ್ದರೆ ಸಾಕು. ಇದರಲ್ಲಿ ವಿದ್ಯುತ್‌ ಹೀಟರ್‌, ಮಗುವನ್ನು ಇರಿಸುವ ಬ್ಯಾಗ್‌, ಹೀಟರಿನ ಬಿಸಿಯನ್ನು ಕಾಪಿಡುವ ಮೇಣದ ಪದರ ಇತ್ಯಾದಿ ಭಾಗಗಳಿವೆ.

        ಟ್ವಿಟರ್‌ ಚಿಲಿಪಿಲಿ

        * ಆಪಲ್‌ ಹಣ್ಣಿನ ಬದಲು ಮರವೇ ನ್ಯೂಟನ್‌ ತಲೆ ಮೇಲೆ ಬಿದ್ದಿದ್ದರೆ, ಭೌತಶಾಸ್ತ್ರ ಇಷ್ಟು ಕಠಿನವಾಗಿ¤ರಲಿಲ್ಲವೇನೋ...

        * ಹೆಂಗಸರ ಹೆಸರಲ್ಲಿ ಶೇ. 80ರಷ್ಟು ಜನರ ಹೆಸರಿನ ಕೊನೆಯ ಅಕ್ಷರ A, ಶೇ. 15 ಜನರದ್ದು ಐ ಅಕ್ಷರದಿಂದ ಕೊನೆಗೊಂಡರೆ ಇನ್ನು ಶೇ. 3 ಹೆಂಗಸರ ಹೆಸರು, L ಅಕ್ಷರದಿಂದ ಕೊನೆಯಾಗುತ್ತವೆ.

        * ಕಟ್ಟಾ ಕೆಟ್ಟ.

        * ತಾರೀಕಿನ ತಾರೀಫು 10-10-10

        ಓದುಗರ ಪ್ರತಿಕ್ರಿಯೆಗಳು

        * ಅಪಘಾತಗಳ ವಿಶ್ಲೇಷಣೆಯಿಂದ ಶ್ರುತಪಡುವುದು ಎಂಬ ಪದ ಪ್ರಯೋಗ ಅರ್ಥವಾಗಲಿಲ್ಲ. ಗೂಗಲ್‌ನಲ್ಲಿ ಆ ಪದವಿರುವ ಪುಟಗಳು ಸಾಕಷ್ಟು ಸಿಕ್ಕಿದುವು: ಪ್ರಸನ್ನ (ಶ್ರುತ=ಕೇಳಿದ, ಆಲಿಸಿದ, ಸ್ಪಷ್ಟವಾಗು).

        * ಉತ್ತಮ ಮಾಹಿತಿಯುಳ್ಳ ಬರಹಗಳಿವೆ - ಗೋಪಿನಾಥ.

        ಪ್ರತಿಕ್ರಿಯಿಸಿ::feedback@manipalmedia.com


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus