ಕೇರಳ-ಕರ್ನಾಟಕದ ಗಡಿಭಾಗದಲ್ಲಿರುವ ಧಾರ್ಮಿಕ ಪ್ರಾಮುಖ್ಯತೆಯ ಮಂಜೇಶ್ವರವು ರಾಷ್ಟ್ರಕವಿ ಗೋವಿಂದ ಪೈ ಅವರಿಂದಾಗಿ ದೇಶಮಟ್ಟದಲ್ಲಿ ಹೆಸರು ಗಳಿಸಿದೆ.
ಧಾರ್ಮಿಕ ಪ್ರಾಮುಖ್ಯತೆಯ ಮಂಜೇಶ್ವರವು ಕೇರಳ-ಕರ್ನಾಟಕದ ಗಡಿಭಾಗಲ್ಲಿದೆ. ಮಂಜುಳಾಪುರ, ಮಂಜುಕ್ಷೇತ್ರ ಮುಂತಾದವುಗಳಿಂದ ಮಂಜೇಶ್ವರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಇಲ್ಲಿ ಹಲವಾರು ಆರಾಧನಾಲಯಗಳಿವೆ. ಮಾಡ ಎಂಬಲ್ಲಿರುವ ಅರಸು ಮಂಜೀಷ್ಣಾರ್ ದೈವಸ್ಥಾನ ಚಾರಿತ್ರಿಕ ಪ್ರಧಾನವಾದುದು.

ಇಲ್ಲಿನ ಉತ್ಸವವು ಹಿಂದೂ -ಮುಸ್ಲಿಂ ಸಾಮರಸ್ಯವನ್ನು ಸಾರುತ್ತಿದೆ. ದೈವಗಳು ಸಮೀಪವಿರುವ ಕುಂಜತ್ತೂರು ಮಸೀದಿಗೆ ಭೇಟಿ ನೀಡುವುದು ಈಗಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಮಸೀದಿಯಲ್ಲಿ ಮುಸ್ಲಿಂ ಬಾಂಧವರು ದೈವಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಾರೆ. ಅನಂತೇಶ್ವರ ದೇವಸ್ಥಾನ, ಕೀತೇìಶ್ವರ ದೇವಸ್ಥಾನ, ಜೈನ ದೇವಸ್ಥಾನ..ಮುಂತಾದವು ಪ್ರಮುಖ ಇತರ ದೇವಾಲಯಗಳು.

ರಾಷ್ಟ್ರಕವಿ ಎಂ. ಗೋವಿಂದ ಪೈ ಅವರಿಂದಾಗಿ ಮಂಜೇಶ್ವರ ದೇಶಮಟ್ಟದಲ್ಲಿ ಹೆಸರು ಗಳಿಸಿದೆ. ಇಲ್ಲಿ ಗೋವಿಂದ ಪೈ ಸ್ಮಾರಕವಾಗಿ ಒಂದು ಸರಕಾರಿ ಪದವಿ ಕಾಲೇಜಿದೆ. ಇಲ್ಲಿಗೆ ಸಮೀಪದ ಹೊಸಂಗಡಿ ಎಂಬುದು ರಾಜ್ಯ ರಾಜಕಾರಣದಲ್ಲಿ ಒಂದು ಗಮನಾರ್ಹ ಹೆಸರು. ಹೆಚ್ಚಿನ ರ್ಯಾಲಿ, ಮೆರವಣಿಗೆಗಳು ಆರಂಭವಾಗುವುದು ಇಲ್ಲಿಂದಲೇ.
ಗೋವಿಂದ ಪೈ ಸ್ಮಾರಕ

ರಾಷ್ಟ್ರಕವಿ ಎಂ. ಗೋವಿಂದ ಪೈ (1883-1963) ಅವರ ನಿವಾಸವನ್ನು "ಗಿಳಿವಿಂಡು' ಎಂಬ ಹೆಸರಿನಲ್ಲಿ ಕೇಂದ್ರ ಮತ್ತು ಕೇರಳ-ಕರ್ನಾಟಕ ರಾಜ್ಯ ಸರಕಾರಗಳ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸ್ಮಾರಕವಾಗಿಸಲು ಯೋಜನೆ ಸಿದ್ಧಗೊಂಡಿದೆ. ಅದೊಂದು ಬಹುಕೋಟಿ ರೂ. ವೆಚ್ಚದ ಯೋಜನೆ. ಈಗಾಗಲೇ ಅದಕ್ಕೆ ಚಾಲನೆ ನೀಡಲಾಗಿದೆ. ಆದರೆ ನಿರೀಕ್ಷಿತ ವೇಗದಲ್ಲಿ ಅದರ ಕೆಲಸಗಳು ಸಾಗುತ್ತಿಲ್ಲ. ಪೈಗಳ ನಿವಾಸ ಈಗ ದೊಡ್ಡ ಗ್ರಂಥಾಲಯವಾಗಿದೆ. ಅವರು ಬಳಸುತ್ತಿದ್ದ ವಸ್ತುಗಳನ್ನೆಲ್ಲ ಜತನದಿಂದ ಕಾಪಿಟ್ಟುಕೊಳ್ಳಲಾಗಿದೆ.

ನಾಡೋಜ ಕಯ್ನಾರರ "ಕವಿತಾ ಕುಟೀರ'
ನಾಡೋಜ ಡಾ| ಕಯ್ನಾರ ಕಿಂಞಣ್ಣ ರೈ ಅವರು ಬದಿಯಡ್ಕದಿಂದ 3 ಕಿ.ಮೀ. ದೂರದ ಹಳ್ಳಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿರುವ ಅವರು 96ರ ಹರೆಯದಲ್ಲೂ ಲವಲವಿಕೆಯಿಂದಿದ್ದಾರೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಕಾಸರಗೋಡಿನ ಏಕೀಕರಣಕ್ಕೆ ಈಗಲೂ ನಿಲುವು ಬದಲಾಯಿಸದೆ ದನಿ ಎತ್ತುತ್ತಿದ್ದಾರೆ. ಅವರ ನಿವಾಸ "ಕವಿತಾ ಕುಟೀರ' ಈಗ ಸುಮಾರು 10,000ಕ್ಕೂ ಮಿಕ್ಕಿದ ಕೃತಿಗಳ ಸಂಗ್ರಹವಿರುವ ಒಂದು ಬೃಹತ್ ಗ್ರಂಥಾಲಯವಾಗಿದೆ.