ಜಿ. ಪಿ. ಪ್ರಭಾಕರ ತುಮರಿ | Dec 14, 2012
ತುಳುವಿನಲ್ಲಿ ಕನ್ನಡದಂತೆ ಪ್ರಯೋಗಶೀಲ ರಂಗಭೂಮಿ ತುಳು ಜಾನಪದ, ಸಿನೆಮಾ, ಯಕ್ಷಗಾನ ಕಲಾಮಾಧ್ಯಮದಷ್ಟು ಪ್ರೌಢವಾಗಿ ಬೆಳೆಯಲಿಲ್ಲ. ತುಳು ವೃತ್ತಿರಂಗ ಭೂಮಿ ಮೊದಲು ಸ್ವಲ್ಪ ಮಟ್ಟಿಗೆ ಸಾಂಪ್ರದಾಯಿಕ ಕನ್ನಡ ರಂಗಭೂಮಿಯಿಂದ ಪ್ರೇರಿತ ವಾಗಿ ಬೆಳೆದರೂ ಇತ್ತೀಚಿನ ದಶಕದಲ್ಲಿ ಅದು ತುಳು ಹಾಸ್ಯರಂಗಭೂಮಿಯಾಗಿದೆ. ಇದರಿಂದಾಗಿ ಒಂದೆಡೆ ಕೇವಲ ಮನೋರಂಜನೆ, ಹಾಸ್ಯ, ಕೀಳು ಅಭಿರುಚಿಗಳಿಂದ ಗಾಂಭೀರ್ಯ ಕಳೆದುಕೊಳ್ಳುತ್ತಿರುವ ಆತಂಕದಲ್ಲಿ ತುಳು ರಂಗಭೂಮಿ ಇದ್ದರೆ ಇನ್ನೊಂದೆಡೆ ಹಾಗೇ ಮುಖ್ಯವಾಹಿನಿಯ ಧಾರೆಯಾಗಿ ಪ್ರಯೋಗಶೀಲ ತುಳು ರಂಗಭೂಮಿ ಕಟ್ಟುವ ಪ್ರಯತ್ನಕ್ಕೆ ಜನಪ್ರಿಯತೆಯ ಕೊರತೆ ಎದುರಾಗಿದೆ. ಈ ಎಲ್ಲಾ ಅತಿರೇಕಗಳಿಂದ ಮುಕ್ತವಾಗಿ ಹೊಸ ಸಮನ್ವಯದ ತುಳು ರಂಗಭೂಮಿ ಕಟ್ಟುವ ಕಾಳಜಿಯಲ್ಲಿ ಇತ್ತೀಚೆಗೆ ತುಳು ರಂಗ ಪ್ರಯೋಗಗಳ ಸಾಧ್ಯತೆ ಎಂಬ ವಿಷಯದಲ್ಲಿ ಒಂದು ರಂಗಗೋಷ್ಠಿ ನಡೆಯಿತು. ತುಳುಸಾಹಿತ್ಯ ಅಕಾಡೆಮಿ, ಗೋವಿಂದ ಪೈ ಸಂಶೋಧನ ಕೇಂದ್ರಗಳ ಸಹಯೋಗದಲ್ಲಿ ಉಡುಪಿಯ ರಂಗಭೂಮಿ ಸಂಸ್ಥೆ ಎಂಜಿಎಂನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದ ತುಳು ರಂಗಗೋಷ್ಠಿ ತುಳು ರಂಗಭೂಮಿ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಿತು. ಪ್ರಸ್ತುತ ತುಳುರಂಗ ಪ್ರಯೋಗಗಳ ಸಾಧ್ಯತೆಗಳು ಎಂಬ ವಿಷಯದಲ್ಲಿ ಮುಖ್ಯವಾಗಿ ಮೂವರು ರಂಗಕರ್ಮಿಗಳು ಪ್ರಬಂಧ ಮಂಡಿಸಿದರು. ತುಳು ರಂಗಭೂಮಿ ಬೆಳೆದುಬಂದ ದಾರಿಯ ಜೊತೆಗೆ ಇದರ ಬೆಳವಣಿಗೆಯ ಮುನ್ನೋಟವನ್ನು ಸಮಸ್ಯೆಯನ್ನು ಕಳಕಳಿಯನ್ನು ಈ ಗೋಷ್ಠಿಯಲ್ಲಿ ಒತ್ತಿಹೇಳಲಾಯಿತು.
ತುಳು ಆಧುನಿಕ ರಂಗಭೂಮಿಯ ಸಾಧ್ಯತೆಗಳು ಎಂಬ ವಿಷಯ ಕುರಿತು ರಂಗಕರ್ಮಿ ನಾಗೇಶ ಕುಮಾರ್ ಉದ್ಯಾವರ ಮಾತನಾಡಿದರು. ತುಳು ರಂಗಭೂಮಿಯಲ್ಲಿ ಮುಖ್ಯ ವಾಗಿ ವೃತ್ತಿಪರರು ನಾಟಕದ ಉದ್ದೇಶವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೀಳು ಅಭಿರುಚಿಯ ಹಾಸ್ಯ, ಮನೋರಂಜನೆಗಳೇ ನಾಟಕದ ಉದ್ದೇಶವೆಂದು ಅವರು ಬಗೆದಂತಿದೆ. ನಾಟಕದ ಕನಿಷ್ಠ ಶೈಕ್ಷಣಿಕ ಉದ್ದೇಶವನ್ನು ಇವರು ತಿಳಿದಂತಿಲ್ಲ. ಸಿನೆಮಾ ಮಾದರಿಗಳೇ ಇವರಿಗೆ ಪ್ರೇರಣೆ. ಆದರೂ ಗಂಭೀರ ಪ್ರಯತ್ನಗಳು ಕೆಲವು ನಡೆದಿದ್ದು ದಾಖಲಾಗಬೇಕಾಗಿದೆ. ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿಯ ಮುಖ್ಯಪ್ರಭಾವದಲ್ಲಿ ಅಮೃತ ಸೋಮೇಶ್ವರರು ಗೋಂದೋಳು ರಚಿಸಿದರು. ಇದು ಆಧುನಿಕ ರಂಗಭೂಮಿಯ ಮೊದಲ ನಿದರ್ಶನ ಎನಿಸುತ್ತದೆ. ಉದ್ಯಾವರ ಮಾಧವಾಚಾರ್ಯರು ತುಳುವಿಗೆ ಆಧುನಿಕ ರಂಗ ಭೂಮಿಯ ಸ್ಪರ್ಶ ನೀಡಿದ್ದು ಗಮನಾರ್ಹ. ಜನಾರ್ದನ ಪಿ. ಸಾಲ್ಯಾನ್ (ಮನು ಇಡ್ಯ) ನಿಜವಾಗಿ ಆಧುನಿಕ ರಂಗಭೂಮಿಯ ಗಂಭೀರ ಪ್ರಯತ್ನ ನಡೆಸಿದರೂ ಮನ್ನಣೆ ಸಿಗದಿರುವುದು ವಿಷಾದನೀಯ ಎಂದು ವಿವರಿಸಿದ ನಾಗೇಶ್, ಉಡುಪಿಯ ತುಳುಕೂಟ ಸಂಸ್ಥೆಯ ತುಳುನಾಟಕ ಸ್ಪರ್ಧೆ ಮೂಲಕ ಆಧುನಿಕ ರಂಗಭೂಮಿ ತುಳುವಿನಲ್ಲಿ ಆರಂಭಗೊಂಡಿತು. ತುಳು ರಂಗಭೂಮಿ ಬಗ್ಗೆ ಮಾತನಾಡುವಾಗ ಇಂದಿನ ಆಧುನಿಕ ಪ್ರಯೋಗಶೀಲ ರಂಗಭೂಮಿಯನ್ನು ಸೇರಿಸಿಕೊಳ್ಳಬೇಕು ಎಂದು ಆಗ್ರಹಪೂರ್ವಕವಾಗಿ ಹೇಳಿದರು. ನಾಟಕದ ಬಗ್ಗೆ ಅಕಾಡೆಮಿ ಏನೂ ಮಾಡುತ್ತಿಲ್ಲ ಎಂಬ ಸಿಟ್ಟು ಕೂಡ ನಾಗೇಶರದು. ಒಟ್ಟಾರೆ ತುಳು ರಂಗಭೂಮಿ ಆಧುನಿಕ ಪ್ರಯೋಗಶೀಲ ರಂಗಭೂಮಿಯ ಹೊಸ ಆಶಯಕ್ಕೆ, ಹೊಸ ರೂಪಕ್ಕೆ ತೆರೆದು ಕೊಳ್ಳಬೇಕು. ಕೇವಲ ಮನೋರಂಜನೆಯೇ ನಾಟಕವಲ್ಲ ಎಂಬುದು ಅವರ ಆಶಯ.
ತುಳು ರಂಗಭೂಮಿ ಅಂದು ಇಂದು ಎಂಬ ವಿಷಯದಲ್ಲಿ ಮಾತನಾಡಿದ ವಿಜಯಕುಮಾರ್ ಕೊಡಿಯಾಲ್‌ಬೈಲ್, ನಾಗೇಶರ ಮಾತನ್ನು ಆಂಶಿಕವಾಗಿ ಒಪ್ಪಿಕೊಂಡೇ ಕಲಾವಿದ, ಸಂಘಟನೆಯ ದೃಷ್ಟಿಯಿಂದ ಇರುವ ಸಮಸ್ಯೆ ಬಗ್ಗೆ ಗಮನಸೆಳೆದರು. ಕಲಾವಿದರ ದೃಷ್ಟಿ ಯಿಂದ ಯೋಚಿಸಬೇಕಾದ್ದು ತುಂಬಾ ಇದೆ. ಕಲಾವಿದರ ಜೀವನನಿರ್ವಹಣೆ ನೇರವಾಗಿ ನಮ್ಮ ಪ್ರಯೋಗಸ್ವರೂಪ ನಿರ್ಧರಿಸುತ್ತದೆ. 25ರಿಂದ 30 ಸದಸ್ಯರ 10ರಿಂದ 12 ತಂಡಗಳು ತುಳು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿವೆ. ಕೆಲವು ದಿನಗಳ ಹಿಂದೆ ನಾಟಕ ನಿಲ್ಲಿಸಿದ್ದಕ್ಕೆ ಒಬ್ಬ ನಟ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ನಿರಾಕರಿಸಲಾಗದ ಸತ್ಯ. ತುಳು ವೃತ್ತಿರಂಗಭೂಮಿಗೆ ಪ್ರಯೋಗಶೀಲ ರಂಗಭೂಮಿಯ ಆದರ್ಶಗಳು ಖಂಡಿತ ಬೇಕು ಎಂಬುದು ಅವರ ದೃಷ್ಟಿ.
ತಮ್ಮ ಯಶಸ್ವಿ ಪ್ರಯೋಗದ ಯಶೋಗಾಥೆಯನ್ನು ವಿವರಿಸಿದ ಅವರು, ಇನಿ ಎಲ್ಲೆ ನಾಟಕ ಬಹುರಾಷ್ಟ್ರೀಯ ಕಂಪೆನಿ ವಿರುದ್ಧವೇ ಆಗಿದ್ದು, ಅದರ ಪ್ರದರ್ಶನಕ್ಕೆ ಪೊಲೀಸರು ತೊಂದರೆ ಕೊಟ್ಟದ್ದನ್ನು ನೆನಪಿಸಿಕೊಂಡರು. ಸಾಮಾಜಿಕ ಜಾಗೃತಿಯ ಮತ್ತು ಎಚ್ಚರದ ಎಷ್ಟೋ ನಾಟಕವನ್ನು ಮಾಡಲು ತಾನು ಪ್ರಯತ್ನಿಸಿದ್ದನ್ನು ಹೇಳಿದರು. ಆದರೆ ಪ್ರೇಕ್ಷಕ ರಿಂದ ದೂರ ಸರಿಯುವ ಅಪಾಯವಿರುವುದರಿಂದ ಹಲವು ಬಾರಿ ಪ್ರಯೋಗವನ್ನು ಮನೋ ರಂಜನಾ ಪ್ರಧಾನವಾಗಿಯೇ ರೂಪಿಸಬೇಕಾಗುತ್ತದೆ. ಸ್ವಲ್ಪ ಭಿನ್ನವಾಗಿ ಯೋಚಿಸಿದ ಕೂಡಲೇ ಪ್ರೇಕ್ಷಕರು ತಕರಾರು ತೆಗೆಯುತ್ತಾರೆ. ಜನರ ಅಪೇಕ್ಷೆ ಈಡೇರಿಸುತ್ತಾ ಜತೆಗೆ ನಟರ ಜೀವನದ ಪ್ರಶ್ನೆಯನ್ನು ಇಟ್ಟುಕೊಂಡು ನಮ್ಮ ಪ್ರಯೋಗ ಸಿದ್ಧಗೊಳ್ಳುತ್ತದೆ. ಪ್ರಯೋಗಶೀಲ ರಂಗಭೂಮಿಯ ಹಲವು ಒಳ್ಳೆ ಅಂಶಗಳನ್ನು ತರಲು ಪ್ರಯತ್ನಿಸುತ್ತಲೂ ಇದ್ದೇವೆ ಎಂದು ವಿನಯದಿಂದ ನುಡಿದ ವಿಜಯಕುಮಾರ್, ವೃತ್ತಿ ರಂಗಭೂಮಿಯ ಅನಿವಾರ್ಯ ಅಂಶ ಗಳ ಬಗ್ಗೆ ಅಸಹಾಯಕತೆ ಹಂಚಿಕೊಂಡರು. ಆಧುನಿಕ ರಂಗಭೂಮಿಯ ಬಗ್ಗೆ ತಮಗಿರುವ ಗೌರವ ಮತ್ತು ಅಭಿಮಾನವನ್ನು ಹೇಳುತ್ತಲೇ ವೃತ್ತಿ ರಂಗಭೂಮಿಯ ಸಿದ್ಧ ಮಾದರಿಯಲ್ಲಿ ಕೆಲಸ ಮಾಡಿದರೂ ಪ್ರೇಕ್ಷಕನ ಅಭಿರುಚಿ ಬದಲಾಗುತ್ತಲೇ ಇರುವುದರಿಂದ ಪ್ರಯೋಗದ ಹೊಸ ಹುಡುಕಾಟ ಮಾಡಲೇಬೇಕಾಗುತ್ತದೆ ಎಂದು ಸಮಸ್ಯೆಗಳ ವಿವಿಧ ಮುಖ ಪರಿಚಯಿಸಿದರು.
ಈ ಇಬ್ಬರೂ ಪ್ರಬಂಧಕಾರರಿಗಿಂತ ತುಸು ಭಿನ್ನವಾಗಿ ಮತ್ತು ಹೆಚ್ಚು ಗಂಭೀರವಾಗಿ ವಿಸ್ತೃತ ಗ್ರಹಿಕೆಯಲ್ಲಿ ಮಾತನಾಡಿದವರು ಬಾಸುಮ ಕೊಡಗು. ಅವರ ಪ್ರಬಂಧದ ವಿಷಯ ಕೂಡ ತುಳು ರಂಗಭೂಮಿಗೊಂದು ವಿಸ್ತೃತ ನೆಲೆಗಟ್ಟು ಎಂದೇ ಆಗಿತ್ತು. ವಿವಿಧ ರಂಗ ಭೂಮಿಯ ಜೊತೆಗೆ ಅಂತರ್‌ಶಿಸ್ತೀಯ ಅಧ್ಯಯನವನ್ನು ಮಾಡುವ ಅಗತ್ಯವನ್ನು ವಿವರಿಸಿದರು. ಮರಾಠಿ ರಂಗಭೂಮಿ ಮತ್ತು ಬಂಗಾಳಿ ರಂಗಭೂಮಿಯ ಎಚ್ಚರ ನಮ್ಮ ನಾಟಕಕ್ಕೆ ಬರಲು ಬಹಳ ಕಾಯಬೇಕು. ಇಂದು ವೃತ್ತಿಪರತೆ ಎಂಬುದೇ ಬದಲಾಗಿದೆ. ನಾಟಕ ಎಂದರೆ ಸಂಭಾಷಣೆ ಅಷ್ಟೇ ಅಲ್ಲ. ಅದೊಂದು ಕಾವ್ಯದಂತೆ ಪ್ರತಿಮೆ, ಧ್ವನಿ, ರೂಪಕ ಮೊದಲಾದ್ದನ್ನು ಒಳಗೊಂಡಿದೆ. ರಂಗಭೂಮಿ ಗಂಭೀರ ಅಧ್ಯಯನಶೀಲತೆ, ಪ್ರಯೋಗಶೀಲತೆ ಎರಡನ್ನೂ ಬೇಡುತ್ತದೆ. ವೃತ್ತಿ ರಂಗಭೂಮಿ ಅದರ ಪಾಡಿಗೆ ಅದಿರಲಿ. ಪ್ರಯೋಗಶೀಲ ರಂಗಭೂಮಿ ತನ್ನ ಎಲ್ಲ ಅಹಂಕಾರ, ಸಣ್ಣತನ ಬಿಟ್ಟು ವಿಸ್ತೃತ ರಂಗವ್ಯಾಖ್ಯಾನ ನೀಡಬೇಕು. ರಂಗಭೂಮಿ ಯನ್ನು ಗಂಭೀರವಾಗಿ ಸ್ವೀಕರಿಸುವ ವೃತ್ತಿಪರತೆ ಈಗ ಹವ್ಯಾಸಿಗಳಿಗೂ ಬೇಕು. ಕನ್ನಡ ರಂಗಭೂಮಿಯಲ್ಲಿ ಕೆಲಸ ಮಾಡುವ ಹಲವರು ತುಳು ರಂಗಭೂಮಿಗೆ ಬಂದು ಪ್ರಯೋಗವನ್ನು ಮುಂದುವರಿಸಿದ್ದು ಕೂಡ ರಂಗಭೂಮಿಯ ಹೊಸ ಸಾಧ್ಯತೆಗೆ ನಾಂದಿ. ರಂಗಭೂಮಿಗಳ ಅಂತರ್‌ಶಿಸ್ತೀಯ ಅಧ್ಯಯನ ಮತ್ತು ವಿವಿಧ ರಂಗಪ್ರಯೋಗಗಳ ಆಳವಾದ ಅಧ್ಯಯನದಿಂದ ಹೊಸ ವಿಸ್ತೃತ ರಂಗಭೂಮಿಯ ಪರಿಕಲ್ಪನೆ ಸಾಕಾರವಾಗುತ್ತದೆ ಎಂದು ಗಂಭೀರವಾಗಿಯೇ ವಿಷಯ ಮಂಡಿಸಿದರು.
ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಡಾ| ಗಣನಾಥ ಎಕ್ಕಾರ್ ಮೂರು ಪ್ರಬಂಧಕಾರರ ನಿಲುವುಗಳನ್ನು ಮತ್ತು ಪ್ರತಿಪಾದನೆಯ ಆಶಯವನ್ನು ಸೂಕ್ಷ್ಮವಾಗಿ ವಿವರಿಸಿ ಪ್ರಬಂಧಕಾರರ ಕಳಕಳಿಯನ್ನು ಮುಕ್ತವಾಗಿ ಪ್ರಶಂಸಿಸಿದರು.
ಒಟ್ಟಾರೆ ಕರಾವಳಿಯ ಸೀಮಿತ ಪ್ರದೇಶದ ಭಾಷೆಯಾಗಿದ್ದರೂ ತುಳುಭಾಷೆ, ಕಲೆ, ಸಂಸ್ಕೃತಿಯಿಂದ ಸಮೃದ್ಧ ವಾಗಿದೆ. ಆಧುನಿಕವಾಗಿ ಮಾರುಕಟ್ಟೆ ಸಂಸ್ಕೃತಿಯ ದೃಷ್ಟಿ ಯಿಂದ ತುಳುನಾಡು ಹೆಚ್ಚು ಶ್ರೀಮಂತವಾಗುತ್ತಿದೆ. ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಇಲ್ಲಿಯ ಉದ್ಯಮಿಗಳು ತಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಇವರ ಆಶ್ರಯ ತುಳುನಾಡಿನ ಕಲೆ, ಸಂಸ್ಕೃತಿಗಳಿಗೆ ರಂಗಪ್ರಯೋಗಗಳಿಗೆ ದೊರಕುತ್ತಿದೆ. ತುಳು ಭಾಷೆ ಯಲ್ಲಿ 30ಕ್ಕೂ ಹೆಚ್ಚು ಸಿನೆಮಾಗಳು, ನೂರಾರು ಯಶಸ್ವಿ ನಾಟಕಗಳು ನಿರ್ಮಾಣಗೊಂಡು ಜನಪ್ರಿಯವಾಗಿವೆ. 1970ರಲ್ಲಿ ಕೆ. ಎನ್. ಟೈಲರರಿಂದ ಆರಂಭಗೊಂಡ ರಂಗಭೂಮಿ, ಸಿನೆಮಾ ಇಂದಿಗೂ ಆರ್ಥಿಕವಾಗಿ ಭಾರೀ ನಷ್ಟ ಅನುಭವಿಸಲಿಲ್ಲ.
ಹಲವು ಬಾರಿ ಈ ಉದಾರ ಮಾರುಕಟ್ಟೆಯೇ ಇಲ್ಲಿಯ ಸಾಂಸ್ಕೃತಿಕ ನೀತಿಯನ್ನು ರೂಪಿಸಿಬಿಟ್ಟಿದೆ. ಇದು ಕೂಡ ತುಳು ರಂಗಭೂಮಿಯ ಇನ್ನೊಂದು ಆತಂಕ. ಆದ್ದರಿಂದ ಹವ್ಯಾಸಿಗಳೇ ವೃತ್ತಿಪರತೆ ಹೆಚ್ಚಿಸಿಕೊಂಡು ಆರೋಗ್ಯಕರ ರಂಗಭೂಮಿ ಬೆಳೆಸಬೇಕಾದ ಅನಿವಾರ್ಯತೆಯೂ ಇದೆ. ಕನ್ನಡದ ಪ್ರಯೋಗಶೀಲ ರಂಗಭೂಮಿಯ ಹಲವು ನಿರ್ದೇಶಕರು, ನಟರೇ ತುಳು ರಂಭೂಮಿಯನ್ನು ಪ್ರವೇಶಿಸಿ ತುಳು ಹವ್ಯಾಸಿ ಪ್ರಯೋಗಶೀಲ ರಂಗಭೂಮಿ ಯನ್ನು ಇನ್ನಷ್ಟು ಬಲಗೊಳಿಸಬೇಕಾಗಿದೆ. ಸಂಸ್ಕೃತ, ಹಿಂದಿ, ಇಂಗ್ಲೀಷ್, ಮರಾಠಿ ನಾಟಕಗಳ ಹೊಸ ಪ್ರಯೋಗಗಳು ಇಲ್ಲಿ ರೂಪಾಂತರಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ರಂಗಭೂಮಿ ಆಯೋಜನೆಯ ಈ ಗೋಷ್ಠಿ ಅರ್ಥಪೂರ್ಣವಾಗಿತ್ತು. ಇದಕ್ಕೆ ಶ್ರಮಿಸಿದ ಪ್ರದೀಪಚಂದ್ರ ಕುತ್ಪಾಡಿ, ಶ್ರೀಪಾದ ಹೆಗಡೆ, ತುಳು ಅಕಾಡೆಮಿ ಅಧ್ಯಕ್ಷರ ಪ್ರಯತ್ನ ಪ್ರಶಂಸನೀಯ.