Sunday, December 21, 2014
Last Updated: 7:20:44 PM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಕಾಸರಗೋಡು: ಚರಿತ್ರೆಯ ಕೌತುಕ


   • ದಕ್ಷಿಣಕ್ಕೆ ಕಣ್ಣಾನ್ನೂರು ಜಿಲ್ಲೆ, ಉತ್ತರಕ್ಕೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ, ಪೂರ್ವಕ್ಕೆ ಪಶ್ಚಿಮ ಘಟ್ಟಗಳು ಮತ್ತು ಪಶ್ಚಿಮಕ್ಕೆ ಅರಬೀ ಸಮುದ್ರ ಕಾಸರಗೋಡಿನ ಗಡಿಗಳು. ಇತಿಹಾಸದಲ್ಲೂ, ಪುರಾಣದಲ್ಲೂ ಕಾಸರಗೋಡಿಗೆ ತನ್ನದೇ ಆದ ಮಹತ್ವ- ಘನತೆ ಇದೆ.

    ಈಗ ದೇವರ ಸ್ವಂತ ನಾಡು ಎಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕೇರಳದ ಒಂದು ಭಾಗವಾಗಿ ಉಳಿದಿರುವ ಕಾಸರಗೋಡು ಜಿಲ್ಲೆಯು ಇತಿಹಾಸದ ದಿನಗಳಲ್ಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಕ್ರಿ.ಶ. 14ರ ಕಾಲಘಟದಲ್ಲೇ ಅನೇಕ ಅರಬರು ಪ್ರವಾಸ ಮತ್ತು ವ್ಯಾಪಾರದ ಉದ್ದೇಶಕ್ಕಾಗಿ ಕಾಸರಗೋಡಿಗೆ ಭೇಟಿ ನೀಡಿದ್ದ ಉಲ್ಲೇಖಗಳು ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ.

    ಅರಬರು ಕಾಸರಗೋಡನ್ನು ಒಂದು ಪ್ರಧಾನ ವ್ಯಾಪಾರ ಕೇಂದ್ರವಾಗಿ ಪರಿಗಣಿಸಿದ್ದರು. ಈ ಪ್ರದೇಶವನ್ನು ಅವರು "ಹರ್ಕ್‌ವಿಲ್ಲಿಯಾ' ಎಂದು ಕರೆಯುತ್ತಿದ್ದರು. ಪೋರ್ಚುಗೀಸ್‌ ಪ್ರವಾಸಿಗರಾಗಿದ್ದ ಬಾಬೋ
    ìಸ್‌ ಎಂಬಾತನು 1514ರಲ್ಲಿ ಕಾಸರಗೋಡಿನ ಕುಂಬಳೆಗೆ ಬಂದಿದ್ದನು. ಅವನು ಇಲ್ಲಿಂದ ಅಕ್ಕಿ ರಫ್ತು ಮಾಡಿ ಹುರಿಹಗ್ಗವನ್ನು ಆಮದು ಮಾಡುತ್ತಿದ್ದನು. ಲಾರ್ಡ್‌ ವೆಲ್ಲೆಸ್ಲಿಯ ಕುಟುಂಬ ಡಾಕ್ಟರಾಗಿದ್ದ ಡಾ| ಫ್ರಾನ್ಸಿಸ್‌ ಬುಕಾನಿನ್‌ 1800ರಲ್ಲಿ ಕಾಸರಗೋಡಿಗೆ ಬಂದಿದ್ದನು.

    ಕಾಸರಗೋಡು ಕುಂಬಳೆ ರಾಜರ ಅಧೀನಕ್ಕೂ ಒಳಪಟ್ಟಿತ್ತು. ಆಗ ಸುಮಾರು 64 ತುಳು ಮತ್ತು ಮಲಯಾಳ ಗ್ರಾಮಗಳು ಈಪ್ರದೇಶದಲ್ಲಿತ್ತು. ಬಳಿಕ ಕಾಸರಗೋಡಿಗೆ ವಿಜಯನಗರ ರಾಜರು ದಾಳಿ ನಡೆಸಿದರು. ಆಗ ಕಾಸರಗೋಡು ನೀಲೇಶ್ವರ ಕೇಂದ್ರೀಕರಿಸಿ ಆಳ್ವಿಕೆ ನಡೆಸುತ್ತಿದ್ದ ಕೋಲತ್ತಿರಿ ರಾಜರ ಅಧೀನದಲ್ಲಿತ್ತು. ಕ್ರಮೇಣ ಕೋಲತ್ತಿರಿ ಸಾಮ್ರಾಜ್ಯ ಅಧಃಪತನಗೊಂಡು ಇಲ್ಲಿ ಇಕ್ಕೇರಿ ನಾಯಕರು ಪ್ರಾಬಲ್ಯ ಹೊಂದಿದರು. 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ ಬಳಿಕ ಇಕ್ಕೇರಿ ನಾಯಕರು ಮತ್ತಷ್ಟು ಪ್ರಬಲರಾದರು. 1645ರಲ್ಲಿ ಇಕ್ಕೇರಿಯ ವೆಂಕಪ್ಪ ನಾಯಕ ಬಿದನೂರನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ಇವರಿಂದಲೇ ಕಾಸರಗೋಡಿನ ಚಂದ್ರಗಿರಿ ಕೋಟೆ ಮತ್ತು ಬೇಕಲ ಕೋಟೆ ನಿರ್ಮಾಣಗೊಂಡಿದೆ ಎಂದು ಚರಿತ್ರೆ ಹೇಳುತ್ತಿದೆ.

    1763ರಲ್ಲಿ ಮೈಸೂರಿನ ಹೈದರ್‌ ಆಲಿಯು ಕೇರಳವನ್ನು ಸ್ವಾಧೀನ ಮಾಡುವ ಉದ್ದೇಶದೊಂದಿಗೆ ಬಿದನೂರಿಗೆ ದಾಳಿ ಮಾಡಿದನು. ಕೇರಳವನ್ನು ಸ್ವಾಧೀನಪಡಿಸುವ ತನ್ನ ಯೋಜನೆಯಲ್ಲಿ ಆತ ವಿಫಲನಾಗಿ ಮೈಸೂರಿಗೆ ಹಿಂತಿರುಗಿ, 1782ರಲ್ಲಿ ಗತಿಸಿದನು. ತಂದೆಯ ಕನಸನ್ನು ನನಸು ಮಾಡುವ ಉದ್ದೇಶದೊಂದಿಗೆ ಟಿಪ್ಪು ಸುಲ್ತಾನ್‌ ಮಲಬಾರ್‌ ಪ್ರದೇಶಕ್ಕೆ ದಾಳಿ ಮಾಡಿದನು. 1792ರ ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ ಟಿಪ್ಪು ಸುಲ್ತಾನ್‌ ತುಳುನಾಡು (ಕೆನರಾ) ಹೊರತುಪಡಿಸಿದ ಮಲಬಾರ್‌ ಪ್ರದೇಶವನ್ನು ಬ್ರಿಟಿಷರಿಗೆ ಒಪ್ಪಿಸಿದನು.

    ಒಂದು ಕಾಲದಲ್ಲಿ ಬೋಂಬೆ ಪ್ರಸಿಡೆನ್ಸಿಯ ದಕ್ಷಿಣ ಕನ್ನಡ ಜಿಲ್ಲೆಯ ಬೇಕಲ ತಾಲೂಕಿನ ಒಂದು ಭಾಗವಾಗಿತ್ತು ಕಾಸರಗೋಡು. 1882 ಎಪ್ರಿಲ್‌ 16ರಂದು ಬೇಕಲ ತಾಲೂಕು ಮದ್ರಾಸ್‌ ಪ್ರಸಿಡೆನ್ಸಿಯೊಂದಿಗೆ ವಿಲೀನವಾದಾಗ ಕಾಸರಗೋಡು ತಾಲೂಕು ರಚಿಸಲಾಯಿತು. ಆದರೂ 1913ರಲ್ಲಿ ಮದ್ರಾಸ್‌ ಗವರ್ನರ್‌ ಕೌನ್ಸಿಲ್‌ನಲ್ಲಿ ಕಾಸರಗೋಡನ್ನು ಮಲಬಾರ್‌ ಜಿಲ್ಲೆಯೊಂದಿಗೆ ವಿಲೀನಗೊಳಿಸಬೇಕು ಎಂಬ ಠರಾವು ಮಂಡಿಸಲಾಗಿತ್ತು.ಕನ್ನಡ ಸದಸ್ಯರ ತೀವ್ರ ಪ್ರತಿರೋಧದಿಂದಾಗಿ ಈ ಪ್ರಸ್ತಾವ ಬಿದ್ದು ಹೋಗಿತ್ತು.


    ಬಳಿಕ 1927ರಲ್ಲಿ ಕಲ್ಲಿಕೋಟೆಯಲ್ಲಿ ನಡೆದಿದ್ದ ರಾಜಕೀಯ ಸಮಾವೇಶವೊಂದರಲ್ಲೂ ಕಾಸರಗೋಡನ್ನು ಮಲಬಾರ್‌ ಜಿಲ್ಲೆಯೊಂದಿಗೆ ವಿಲೀನಗೊಳಿಸುವ ಬೇಡಿಕೆಯ ಠರಾವನ್ನು ಅಂಗೀಕರಿಸಲಾಗಿತ್ತು. ಅದೇ ವರ್ಷ ಮಲಯಾಳಿ ಸೇವಾ ಸಂಘ ಎಂಬ ಸಂಘಟನೆಯೊಂದು ಹುಟ್ಟಿಕೊಂಡಿತು. ಕಾಸರಗೋಡನ್ನು ಮಲಬಾರ್‌ ಜಿಲ್ಲೆಗೆ ಸೇರಿಸಲು ಇದೂ ಶ್ರಮಿಸಿತು. ಬಳಿಕ ಕೆ.ಪಿ. ಕೇಶವ ಮೆನನ್‌ ಎಂಬವರ ತೀವ್ರ ಶ್ರಮದ ಪರಿಣಾಮವಾಗಿ ಕಾಸರಗೋಡು ಎಂಬ ಕನ್ನಡ ಭೂಮಿಯನ್ನು 1956 ನವೆಂಬರ್‌ 1ರಂದು ಅನ್ಯಾಯವಾಗಿ ಕೇರಳಕ್ಕೆ ಸೇರಿಸಲಾಯಿತು.

    ಸ್ವಾತಂತ್ರ್ಯ ಹೋರಾಟದಲ್ಲೂ ಕಾಸರಗೋಡಿನವರ ಪಾಲು ಮಹತ್ತರವಾದುದು. ಭೂಸುಧಾರಣಾ ಕಾಯ್ದೆಯೂ ಈ ಪ್ರದೇಶದ ಮೇಲೆ ಗಂಭೀರ ಪರಿಣಾಮ ಬೀರಿದೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus