Friday, December 19, 2014
Last Updated: 2:50:55 PM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಬಹು ಕಾರಣಿಕೆಯ ಮಧೂರು


   • ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ ಮಧೂರು ಶ್ರೀ ಮದನಂತೇಶ್ವರ ವಿನಾಯಕ ದೇವಸ್ಥಾನವು ಅಂತಾರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ.

    ಕಾಸರಗೋಡಿನಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಪ್ರಶಾಂತ ಮಧುವಾಹಿನಿ ಹೊಳೆಯ ತಟದಲ್ಲಿದೆ ಈ ದೇವಸ್ಥಾನ. ವಿಶಾಲ ಪ್ರದೇಶದಲ್ಲಿ ಹರಡಿರುವ ಈ ದೇವಸ್ಥಾನದ ವಿನ್ಯಾಸವು ಭಕ್ತರನ್ನು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಗಜಪೃಷ್ಟಾಕಾರದಲ್ಲಿ, ಮೂರು ಅಂತಸ್ತು ಹೊಂದಿರುವ ಈ ದೇವಾಸ್ಥಾನದ ಮೇಲಿನೆರಡು ಅಂತಸ್ತು ತಾಮ್ರದ ಹೊದಿಕೆ ಹೊಂದಿದೆ. ನಮಸ್ಕಾರ ಮಂಟಪದಲ್ಲಿ ಪುರಾಣಕ್ಕೆ ಸಂಬಂಸಿದ ಕಥೆಗಳ ಅತ್ಯಾಕರ್ಷಕ ಮರದ ಕೆತ್ತನೆಗಳಿವೆ. ರಾಮಾಯಣ, ಸೀತಾ ಸ್ವಯಂವರ, ಪುತ್ರಕಾಮೇಷ್ಟಿ ಯಾಗ ಮುಂತಾದವುಗಳ ಸನ್ನಿವೇಶಗಳ ಚಿತ್ರಣ ಈ ನಮಸ್ಕಾರ ಮಂಟಪದಲ್ಲಿದೆ.

    ಮೂಲತಃ ಇದು ಶಿವ ದೇವಸ್ಥಾನ. ಆದರೆ ಇದು ಪ್ರಖ್ಯಾತಿ ಪಡೆದಿರುವುದು ಇಲ್ಲಿನ ಗಣಪತಿಯ ಕಾರಣಿಕ ಮತ್ತು ವಿಶೇಷತೆಯಿಂದ. ತೆಂಕು ಮುಖ ಮಾಡಿ ಕುಳಿತಿರುವ ಗಣಪತಿಯನ್ನು ಭಕ್ತರು ಬೊಡ್ಡಜ್ಜ ಎಂದೇ ಕರೆಯುತ್ತಾರೆ. ಕಾರಣ ಗಣಪತಿ ವಿಗ್ರಹದ ರೂಪ. ಏಕದಂತನಾಗಿರುವ ಗಣಪತಿಯ ವಿಗ್ರಹವು ಮಣ್ಣಿನಿಂದ ಮಾಡಿದ್ದು. ಅದಕ್ಕೆ ಅಭಿಷೇಕ ಇಲ್ಲ.

    ಆರಂಭದಲ್ಲಿ ಸಣ್ಣ ಗಾತ್ರದಲ್ಲಿದ್ದ ಈ ವಿಗ್ರಹವು, ಕ್ರಮೇಣ ಬೆಳೆಯುತ್ತಾ ಬೆಳೆಯುತ್ತಾ ಈ ರೂಪಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ. ಕಿರಿದಾದ ಗರ್ಭಗುಡಿಯಲ್ಲಿರುವ ಗಣಪತಿಯನ್ನು ನೋಡಲು ಬರುವವರೇ ಹೆಚ್ಚು. ಈತನನ್ನು ಮನಸಾರೆ ಪೂಜಿಸಿದರೆ ಎಂಥ ದುರಿತಗಳನ್ನೂ ದೂರ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

    ಇಲ್ಲಿನ ಉದಯಾಸ್ತಮಾನ ಸೇವೆ, ಅಪ್ಪ ಸೇವೆಗೆ ವಿಶೇಷ ಬೇಡಿಕೆ. ಜತೆಗೆ ಪಚ್ಚಪ್ಪ ಮತ್ತು ರುದ್ರಾಭಿಷೇಕವೂ ಮುಖ್ಯವಾದವುಗಳೇ. ಶ್ರೀ ಮಹಾಗಣಪತಿಗೆ ವಿಶೇಷ ಸೇವೆಯೆಂದರೆ ಮೂಡಪ್ಪ ಸೇವೆ. ಇದು ಒಂದಿಬ್ಬರಿಂದ ಮಾಡಲು ಸಾಧ್ಯವಿಲ್ಲ. ಜನರು ಸಾಮೂಹಿಕವಾಗಿ ಮಾಡುವ ಸೇವೆ ಇದು. ಹಾಗೆಂದು ಆಗಿಂದಾಗ ಇದನ್ನು ಮಾಡುವುದೂ ಇಲ್ಲ. ಇತ್ತಿಚೆಗೆ ನಡೆದ ಉದಾಹರಣೆ ಸಿಗುವುದು 1992ರಲ್ಲಿ. ಕಾಸರಗೋಡಿನ ಬೇಳ ಎಂಬಲ್ಲಿ ಅಣುಸ್ಥಾವರ ನಿರ್ಮಿಸಲು ಸರಕಾರ ನಿರ್ಧರಿಸಿತ್ತು. ಅದರಿಂದ ಮಧೂರು ದೇವಸ್ಥಾನ ಸೇರಿದಂತೆ ಪರಿಸರಕ್ಕೆ ಅಪಾಯದ ಭೀತಿಯಿತ್ತು, ಸ್ಥಳಾಂತರ ಆತಂಕವಿತ್ತು. ಅಂಥ ಹೊತ್ತಿನಲ್ಲಿ ಭಕ್ತರು ಪ್ರಾರ್ಥಿಸಿದ್ದು ಮಧೂರಿನ ಸಿದ್ವಿನಾಯಕನಲ್ಲಿ.


    ಉದ್ದೇಶಿತ ಅಣುಸ್ಥಾವರವು ಬೇಳದಿಂದ ಬೇರೆ ಕಡೆಗೆ ವರ್ಗಾವಣೆಗೊಂಡರೆ ಮೂಡಪ್ಪ ಸೇವೆ ಮಾಡಿಸುತ್ತೇವೆ ಎಂದು ಹರಕೆ ಹೊತ್ತರು. ಗಣಪತಿಯ ಮಾಯೆಯೋ ತಿಳಿಯದು, ಅಣುಸ್ಥಾವರವನ್ನು ಬೇಳದಲ್ಲಿ ನಿರ್ಮಿಸುವ ನಿರ್ಧಾರದಿಂದ ಸರಕಾರ ಹಿಂದೆ ಸರಿಯಿತು. ಆ ಮೂಡಪ್ಪ ಸೇವೆಯನ್ನು 1992ರಲ್ಲಿ ದೇವರಿಗೆ ಸಲ್ಲಿಸಲಾಗಿದೆ. ಹಿಂದೆ ಬ್ರಿಟಿಷ್‌ ಸೇನೆಯು ಸಮೀಪದ ಸೂರಂಬೈಲು, ಅನಂತಪುರ ಮುಂತಾದೆಡೆ ಬೀಡು ಬಿಟ್ಟು ಅನ್ಯಾಯ ಮಾಡುತ್ತಿದ್ದಾಗಲೂ ಅವರನ್ನು ಅಲ್ಲಿಂದ ಹೊರ ಹೋಗುವಂತೆ ಮಾಡು ಎಂದು ಭಕ್ತರು ಗಣಪತಿಗೆ ಮೊರೆಯಿಟ್ಟಿದ್ದರು. ಮೂಡಪ್ಪ ಸೇವೆ ಮಾಡುವ ಹರಕೆ ಹೊತ್ತಿದ್ದರು. ಅದರಲ್ಲೂ ಭಕ್ತರ ಪ್ರಾರ್ಥನೆಗೆ ದೇವರು ಒಲಿದಿದ್ದರು!

    ಮೂಡಪ್ಪ ಸೇವೆ ಎಂದು ಗಣಪತಿಯ ವಿಗ್ರಹದ ಸುತ್ತ ಕಬ್ಬಿನ ಬೇಲಿ ರಚಿಸಿ ಅದನ್ನು ಅಪ್ಪ ಸೇರಿದಂತೆ ವಿವಿಧ ಭಕ್ಷ್ಯಗಳಿಂದ ತುಂಬಿಸುವುದು. ಅದಲ್ಲದೆ ಧಾರ್ಮಿಕ ವಿಯೂ ಸಾಕಷ್ಟಿದೆ. ಇದೊಂದು ಕೆಲವು ದಿನಗಳ ಕಾಲ ನಡೆಯುವ ಸೇವೆ. ಅಪ್ಪದ ರಾಶಿಯಿಂದ ಎದ್ದು ಬರುವಂತೆ ಕಾಣುವ ಗಣಪತಿಯನ್ನು ನೋಡುವುದು ಎಲ್ಲರಿಗೂ ಸಿಗುವ ಭಾಗ್ಯವಲ್ಲ ಎಂದು ಹೇಳಿದರೆ ತಪ್ಪಾಗದು. ಬಳಿಕ ಆ ಅಪ್ಪ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗುತ್ತದೆ.

    ಹಿಂದೆ ಉಳಿಯತ್ತಡ್ಕ ಎಂಬಲ್ಲಿ ಹರಿಜನ ಮಹಿಳೆ ಮದರು ಎಂಬಾಕೆ ಹುಲ್ಲು ಕತ್ತರಿಸುತ್ತಿದ್ದಾಗ ಆಕೆಯ ಕತ್ತಿ ಕಲ್ಲಿಗೆ ತಾಗಿ ನೆತ್ತರು ಸುರಿಸಿತು. ಆಕೆ ರಾಜನಿಗೆ ವಿಷಯ ತಿಳಿಸಿದಳು. ರಾಜನು ಜ್ಯೋತಿಷಿಗಳಿಂದ ಮಾಹಿತಿ, ಸಲಹೆ ಕೇಳಿದ. ದೇವಸ್ಥಾನ ಕಟ್ಟಬೇಕು ಎಂಬ ಸಲಹೆ ಸಿಕ್ಕಿತು. ರಾಜ ಜ್ಯೋತಿಷಿಗಳ ಸಲಹೆಯನ್ನು ಪಾಲಿಸಿದ. ದೇವಸ್ಥಾನ ಕಟ್ಟಿಸಿದ. ಮದುರುನಿಂದಾಗಿ ಆ ಪ್ರದೇಶಕ್ಕೆ ಮಧೂರು ಎಂಬ ಹೆಸರು ಬಂತು. 

     

    ಮೊದಲು ಇದು ಕೇವಲ ಶಿವ ದೇವಸ್ಥಾನ ಮಾತ್ರವೇ ಆಗಿತ್ತು. ಬಳಿಕ ಅರ್ಚಕರ ಮಕ್ಕಳು ಗೋಡೆಯಲ್ಲಿ ಗಣಪತಿ ಚಿತ್ರ ಬರೆದು ಪೂಜಿಸಿದ ಫಲವಾಗಿ ಅದನ್ನು ಶಾಶ್ವತಗೊಳಿಸಲಾಯಿತು ಎಂದು ಒಂದು ಕಥೆ ಹೇಳುತ್ತದೆ. ಮತ್ತೂಂದು ಕಥೆಯ ಮೂಲಕ ಗಣಪತಿ ವಿಗ್ರಹವು ಗೋಡೆಯಿಂದಲೇ ಮೂಡಿ ಬಂದದ್ದು ಎಂದೂ ತಿಳಿದು ಬರುತ್ತದೆ. ಮಧೂರು ಗಣಪತಿ ವಿಗ್ರಹದ ಹುಟ್ಟಿನ ಬಗ್ಗೆ ಬೇರೆ ಬೇರೆ ಕಥೆಗಳು ಪ್ರಚಲಿತದಲ್ಲಿದೆ. ಎಲ್ಲವೂ ತಿಳಿಸುವ ಸತ್ಯ ಒಂದೇ, ದೇವಾಲಯದ ಆರಂಭದಲ್ಲಿ ಇಲ್ಲಿ ಗಣಪತಿ ವಿಗ್ರಹ ಇದ್ದಿರಲಿಲ್ಲ ಎಂದು.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus