ಡಾ| ಸುರೇಂದ್ರ ಯು. ಕಾಮತ್, ಪ್ರೊಫೆಸರ್, | Dec 23, 2012
ಮೂಳೆಗಳು ಆರೋಗ್ಯವಾಗಿವೆ ಎಂದರೆ ದೇಹ ಆರೋಗ್ಯವಾಗಿದೆ ಎಂದು ಅರ್ಥ. ದೇಹದಲ್ಲಿ ಮೂಳೆಗಳು ಅನೇಕ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತವೆ. ದೇಹಕ್ಕೆ ಆಕಾರವನ್ನು ನೀಡುವುದು, ಅಂಗಾಂಶಗಳನ್ನು ರಕ್ಷಿಸುವುದು, ಸ್ನಾಯುಗಳಿಗೆ ಆಧಾರ ನೀಡುವುದು ಹಾಗೂ ಕ್ಯಾಲ್ಸಿಯಂನ್ನು ಸಂಗ್ರಹಿಸುವುದು... ಈ ಎಲ್ಲ ಚಟುವಟಿಕೆಗಳನ್ನು ಮೂಳೆಗಳು ನಿರ್ವಹಿಸುತ್ತವೆ. ಸದೃಢ ಹಾಗೂ ಸಶಕ್ತ ಮೂಳೆಗಳ ಬೆಳವಣಿಗೆಗಾಗಿ, ಬಾಲ್ಯ ಹಾಗೂ ತಾರುಣ್ಯಗಳಲ್ಲಿಯೇ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು, ಹಾಗೂ ಈ ಮೂಲಕ ಮೂಳೆಗಳ ಉತ್ತಮ ಆರೋಗ್ಯವನ್ನು ಕಾಪಾಡಬಹುದು.
ಮೂಳೆಗಳ ಆರೋಗ್ಯ ಬಹಳ
ಆವಶ್ಯಕ ಯಾಕೆ ?
ನಮ್ಮ ದೇಹದ ಮೂಳೆಗಳು ನಿರಂತರವಾಗಿ ಪರಿವರ್ತನೆಗೊಳ್ಳುತ್ತಿರುತ್ತವೆ. ದೇಹದಲ್ಲಿ ಹಳೆಯ ಮೂಳೆ ನಶಿಸಿ ಹೊಸ ಮೂಳೆಗಳು ನಿರ್ಮಾಣಗೊಳ್ಳುತ್ತಿರುತ್ತವೆ. ನಾವು ತಾರುಣ್ಯದಲ್ಲಿರುವಾಗ ನಮ್ಮ ದೇಹದಲ್ಲಿ, ಹಳೆಯ ಮೂಳೆಗಳು ನಶಿಸುವುದಕ್ಕಿಂತ ವೇಗದಲ್ಲಿ, ಹೊಸ ಮೂಳೆಗಳ ನಿರ್ಮಾಣ ಆಗುತ್ತಿರುತ್ತದೆ. ಹಾಗಾಗಿ, ನಮ್ಮ ದೇಹದ ಮೂಳೆಗಳ ಸಾಂದ್ರತೆ ಹೆಚ್ಚುತ್ತಾ ಹೋಗುತ್ತದೆ. ಹೆಚ್ಚಿನ ಜನರು ತಮ್ಮ 30 ವಯಸ್ಸಿನ ಆಸುಪಾಸಿನಲ್ಲಿ ತಮ್ಮ ಜೀವನದ ಗರಿಷ್ಠ ಮೂಳೆಯ ಸಾಂದ್ರತೆಯನ್ನು ಪಡೆಯುತ್ತಾರೆ. ಆದರೆ, ಆ ಬಳಿಕ ಮೂಳೆಗಳಲ್ಲಿ ಪರಿವರ್ತನೆ ಆರಂಭವಾಗುತ್ತದೆ. ಆ ಬಳಿಕ, ನಮ್ಮ ದೇಹದಲ್ಲಿ ಮೂಳೆಗಳ ನಿರ್ಮಾಣಕ್ಕಿಂತ ನಶಿಸುವಿಕೆಯ ಪ್ರಮಾಣ ಹೆಚ್ಚುತ್ತದೆ.

ಆಸ್ಟಿಯೊಪೋರೊಸಿಸ್ ಮೂಳೆ ನಶಿಸುವಿಕೆಯನ್ನು ಅವಲಂಬಿಸಿರುವ ಒಂದು ಕಾಯಿಲೆ. ಆಸ್ಟಿಯೊಪೋರೊಸಿಸ್ ಅಂದರೆ ಮೂಳೆ ದುರ್ಬಲವಾಗಿ, ಪುಡಿಯಾಗುವ ಕಾಯಿಲೆ. ಇದು ನಾವು 30ನೇ ವಯಸ್ಸಲ್ಲಿ ಎಷ್ಟರ ಮಟ್ಟಿಗೆ ಗರಿಷ್ಠ ಮೂಳೆ ಸಾಂದ್ರತೆಯನ್ನು ಗಳಿಸಿದ್ದೆವು, ಹಾಗೂ ಆ ಮೇಲೆ ಯಾವ ಪ್ರಮಾಣದಲ್ಲಿ ನಮ್ಮ ಮೂಳೆ ನಶಿಸುತ್ತದೆ ಎಂಬುದನ್ನು ಆಧರಿಸಿದೆ. ನಮ್ಮ ಮೂಳೆಯ ಗರಿಷ್ಠ ಸಾಂದ್ರತೆ ಹೆಚ್ಚು ಇದ್ದರೆ , ನಮ್ಮಲ್ಲಿ ಹೆಚ್ಚು ಸಂಪತ್ತಿದ್ದಂತೆ. ಆಗ ನಾವು ಇಳಿವಯಸ್ಸಲ್ಲಿ ಆಸ್ಟಿಯೊಪೋರೊಸಿಸ್‌ಗೆ ಒಳಗಾಗುವ ಸಾಧ್ಯತೆಗಳು ಕಡಿಮೆ.
ಮೂಳೆಯ ಆರೋಗ್ಯದ ಮೇಲೆ
ಪ್ರಭಾವ ಬೀರುವ ಅಂಶಗಳು
ಯಾವುವು?
ಹಲವಾರು ಆಂಶಗಳು ಮೂಳೆಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ- ಕೆಲವು ಅಂಶಗಳನ್ನು ಸುಧಾರಿಸಬಹುದು, ಆದರೆ ಇನ್ನು ಕೆಲವು ಅಂಶಗಳನ್ನು ಸುಧಾರಿಸುವುದು ಅಸಾಧ್ಯ.
ನಿಮ್ಮ ಆಹಾರದಲ್ಲಿರುವ
ಕ್ಯಾಲ್ಸಿಯಂ ಪ್ರಮಾಣ
ಆಹಾರದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾದರೆ, ಮೂಳೆಯ ಸಾಂದ್ರತೆ ಕಡಿಮೆಯಾಗುತ್ತದೆ. ಈ ಕಾರಣದಿಂದ, ಬಹಳ ಬೇಗನೆ ಮೂಳೆ ನಾಶವಾಗುವ ಹಾಗೂ ಮೂಳೆ ಮುರಿಯುವ ಅಪಾಯಗಳಿವೆ.
ದೈಹಿಕ ಚಟುವಟಿಕೆಯ ಮಟ್ಟ

ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದಿ ರುವವರಿಗೆ ಹೋಲಿಸಿದರೆ, ಚಟುವಟಿಕೆ ರಹಿತವಾಗಿರುವ ಜನರಿಗೆ ಆಸ್ಟಿಯೊಪೋರೊಸಿಸ್ ಆಗುವ ಅಪಾಯ ಹೆಚ್ಚು .
ತಂಬಾಕು ಹಾಗೂ ಆಧಿಕ
ಆಲ್ಕೋಹಾಲ್ ಸೇವನೆ
ತಂಬಾಕು ಸೇವನೆಯಿಂದ ಮೂಳೆಗಳು ದುರ್ಬಲವಾಗುತ್ತವೆ ಎಂದು ಸಂಶೋಧನೆಗಳು ಹೇಳುತ್ತಿವೆ. ಅದೇ ರೀತಿಯಲ್ಲಿ , ಪ್ರತಿದಿನ ಎರಡು ಆಲೋRಹಾಲಿಕ್ ಪ್ರಮಾಣಕ್ಕಿಂತ ಹೆಚ್ಚಿಗೆ ಮದ್ಯಪಾನ ಮಾಡುವುದರಿಂದ ಆಸ್ಟಿಯೊಪೋರೊಸಿಸ್ ಅಪಾಯ ಹೆಚ್ಚುವುದು. ಮಾತ್ರವಲ್ಲ, ಕ್ಯಾಲ್ಸಿಯಂ ಹೀರುವಿಕೆಯ ಪ್ರಕ್ರಿಯೆಯ ಮೇಲೆಯೂ ಆಲ್ಕೋಹಾಲ್ ಪ್ರಭಾವವನ್ನು ಬೀರುತ್ತದೆ.
ಮಹಿಳೆಯಾಗಿರುವುದು
ಪುರುಷರಿಗಿಂತ ಮಹಿಳೆಯರಲ್ಲಿ ಮೂಳೆ ಅಂಗಾಂಶಗಳು ಕಡಿಮೆ ಇರುತ್ತವೆ.
ವಯಸ್ಸಾಗುವಿಕೆ
ನಮಗೆ ವಯಸ್ಸು ಹೆಚ್ಚುತ್ತ ಹೋದಂತೆ, ನಮ್ಮ ಮೂಳೆಗಳು ಸಪುರವಾಗುತ್ತವೆ, ಹಾಗೂ ದುರ್ಬಲವಾಗುತ್ತವೆ.
ಜನಾಂಗ, ಸ್ವರೂಪ ಹಾಗೂ
ಕೌಟುಂಬಿಕ ಹಿನ್ನೆಲೆ
ಏಷಿಯಾದವರು, ಬಿಳಿಯ ಜನಾಂಗದವರಿಗೆ ಆಸ್ಟಿಯೊಪೋರೊಸಿಸ್ ಆಗುವ ಅಪಾಯ ಹೆಚ್ಚು. ಬಹಳ ಸಪುರವಿರುವುದು (ಬಾಡಿ ಮಾಸ್ ಇಂಡೆಕ್ಸ್ 19ಕ್ಕಿಂತ ಕೆಳಗಿರುವುದು), ದೇಹದ ಆಕಾರವು ಬಹಳ ಸಣ್ಣಗೆ ಇರುವುದು... ಇವೆಲ್ಲವೂ ಸಹ ಅಪಾಯ ಪೂರಕ ಅಂಶಗಳಾಗಿವೆ. ಯಾಕೆಂದರೆ, ಇಂತಹ ಪ್ರಕರಣಗಳಲ್ಲಿ ನಮಗೆ ವಯಸ್ಸಾದಾಗ ಹೆಚ್ಚುವರಿ ಕ್ಯಾಲ್ಸಿಯಂನ್ನು ಪಡೆಯಲು ಮೂಳೆಯ ಸಾಂದ್ರತೆ ಕಡಿಮೆ ಇರುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಆಸ್ಟಿಯೊಪೋರೊಸಿಸ್‌ನ ಕೌಟುಂಬಿಕ ಹಿನ್ನಲೆ ಇರುವವರಲ್ಲಿ , ಮುಂದಿನ ಪೀಳಿಗೆಯವರಿಗೆ ಆಸ್ಟಿಯೊಪೋರೊಸಿಸ್ ಆಗುವ ಅಪಾಯ ಹೆಚ್ಚು .
ಹಾರ್ಮೋನ್ ಮಟ್ಟ
ಥೈರಾಯಿಡ್ ಹಾರ್ಮೋನ್‌ನ ಅಧಿಕ ಸ್ರವಿಕೆಯಿಂದ ಮೂಳೆ ನಾಶವಾಗುವ ಅಪಾಯವಿದೆ. ಮಹಿಳೆಯರಲ್ಲಿ ಅವರ ಋತುಬಂಧದ ಅವಧಿಯಲ್ಲಿ ಮೂಳೆ ನಾಶವಾಗುವಿಕೆಯು ಗಮನಾರ್ಹವಾಗಿ ಹೆಚ್ಚುತ್ತದೆ. ಅಂದರೆ, ಈ ಸಮಯದಲ್ಲಿ ಆಗುವ ಈಸ್ಟ್ರೋಜನ್ ಮಟ್ಟದ ಕುಸಿತವೇ ಇದಕ್ಕೆ ಕಾರಣ. ಆಮೆನೋರಿಯಾ ಅಥವಾ ಋತುಸ್ರಾವವಾಗದೇ ಇರುವುದೂ ಸಹ ಆಸ್ಟಿಯೊಪೋರೊಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಪುರುಷರಲ್ಲಿ ಟೆಸ್ಟೋಸ್ಟಿರಾನ್ ಕುಸಿತವು ಮೂಳೆಯ ಸಾಂದ್ರತೆಯನ್ನು ಕುಗ್ಗಿಸಬಹುದು.
ಆಹಾರ ಸೇವನೆಯಲ್ಲಿ ಅಸಹಜತೆ
ಹಾಗೂ ಮೂಳೆಯ ಆರೋಗ್ಯದ
ಮೇಲೆ ಪ್ರಭಾವ ಬೀರುವ
ಇನ್ನಿತರ ಆಂಶಗಳು
ಆನೋರೆಕ್ಸಿಯಾ ಅಂದರೆ ಹಸಿವಿಲ್ಲದಿರುವಿಕೆ, ಹಾಗೂ ಬುಲಿಮಿಯಾ ಅಂದರೆ ಆತಿ ಹಸಿವಿನ ಬಾಧೆಯಿಂದ ಬಳಲುತ್ತಿರುವವರಲ್ಲಿ ಮೂಳೆ ನಶಿಸುವಿಕೆಯ ಅಪಾಯ ಹೆಚ್ಚು. ಮಾತ್ರವಲ್ಲದೆ, ಹೊಟ್ಟೆಯ ಶಸ್ತ್ರಚಿಕಿತ್ಸೆ (ಗ್ಯಾಸ್ಟ್ರೆಕ್ಟಾಮಿ )ಆಗಿರುವವರಿಗೆ, ಬೊಜ್ಜು ಕಳೆಯುವ ಶಸ್ತ್ರ ಚಿಕಿತ್ಸೆ ಆಗಿರುವವರಿಗೆ, ಹಾಗೂ ಇನ್ನಿತರ ರೋಗಸ್ಥಿತಿಗಳಾದ , ಕ್ರಾನ್ಸ್ ಡಿಸೀಸ್ ಸೆಲಿಯಾಕ್ ಡಿಸೀಸ್ ಹಾಗೂ ಕುಶಿಂಗ್ಸ್ ಡಿಸೀಸ್ ಇರುವವರ ದೇಹದಲ್ಲಿ ಕ್ಯಾಲ್ಸಿಯಂ ಹೀರುವಿಕೆಯ ಸಾಮರ್ಥ್ಯ ಕಡಿಮೆ ಇರುತ್ತದೆ.
ಕೆಲವು ಔಷಧಿಗಳ ಬಳಕೆ
ಕಾರ್ಟಿಕೊಸ್ಟಿರಾಯ್ಡ ಔಷಧಿಗಳಾದ ಪ್ರಡ್ನಿಸೋನ್, ಕಾರ್ಟಿಸೋನ್, ಪ್ರಡ್ನಿಸೋಲಾನ್ ಹಾಗೂ ಡೇಕ್ಸಾಮಿಥಾಸೋನ್‌ಗಳು° ಬಹಳ ಸಮಯಗಳ ಕಾಲ ಸೇವಿಸುವುದರಿಂದ ಮೂಳೆಗಳಿಗೆ ಬಹಳ ಹಾನಿಯಾಗುತ್ತದೆ. ಆಸ್ಟಿಯೊಪೋರೊಸಿಸ್ ಅಪಾಯವನ್ನು ಹೆಚ್ಚಿಸುವ ಇನ್ನಿತರ ಔಷಧಿಗಳೆಂದರೆ, ಸ್ತನದ ಕ್ಯಾನ್ಸರಿನ ಚಿಕಿತ್ಸೆಯಲ್ಲಿ ಬಹಳ ಸಮಯ ಉಪಯೋಗಿಸುವ ಆರೋಮೆಟೇಸ್ ಇನ್ ಹಿಬಿಟರ್ಸ್ , ಶಾಮಕ ಔಷಧಿಗಳಾದ ಸೆಲೆಕ್ಟಿವ್ ಸೆರಾಟೋನಿನ್ ರೀಅಪ್‌ಟೇಕ್ ಇನ್‌ಹಿಬಿಟರ್ಸ್, ಕ್ಯಾನ್ಸರಿನ ಚಿಕಿತ್ಸೆಗೆ ಉಪಯೋಗಿಸುವ ಮೆಥೊಟ್ರೆಕ್ಸೇಟ್; ಕೆಲವು ಮೂಛೆì ನಿರೋಧಕ ಔಷಧಿಗಳು. ಆಸಿಡ್ ಬ್ಲಾಕ್ ಮಾಡುವ ಔಷಧಿಗಳಾದ ಪ್ರೋಟಾನ್ ಪಂಪ್ ಇನ್‌ಹಿಬಿಟರ್ಸ್ ಹಾಗೂ ಅಲ್ಯುಮೀನಿಯಂಯುಕ್ತ ಆಂಟಾಸಿಡ್‌ಗಳು.
ಮೂಳೆಗಳನ್ನು ಆರೋಗÂಕರವಾಗಿರಿಸಿಕೊಳ್ಳಲು ನಾವೇನು ಮಾಡಬಹುದು?
ಮೂಳೆಗಳು ನಾಶವಾಗುವುದನ್ನು ತಡೆಯಲು, ಅಥವಾ ಆ ಪ್ರಕ್ರಿಯೆನ್ನು ತಗ್ಗಿಸಲು ನಾವು ಕೆಲವು ಅಂಶಗಳನ್ನು ಆನುಸರಿಸಬಹುದು.
ನಿಮ್ಮ ಆಹಾರದಲ್ಲಿ
ಯೆಥೇತ್ಛವಾಗಿ ಕ್ಯಾಲ್ಸಿಯಂ ಸೇವಿಸಿ
ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಶಿಫಾರಸು ಮಾಡುವ ಪ್ರಕಾರ, 19 ರಿಂದ 50 ವಯಸ್ಸಿನವರು ಹಾಗೂ 51 ರಿಂದ 70 ರ ನಡುವಿನ ಪುರುಷರು ದಿನ ಒಂದಕ್ಕೆ 1,000 ಮಿ.ಗ್ರಾಂ ಕ್ಯಾಲ್ಸಿಯಂನ್ನು ಸೇವಿಸಬೇಕು. ಆದರೆ 51 ಹಾಗೂ ಅದಕ್ಕಿಂತ ಹಿರಿಯ ವಯಸ್ಸಿನ ಮಹಿಳೆಯರು ಹಾಗೂ 71 ಕ್ಕಿಂತ ಹಿರಿಯ ವಯಸ್ಸಿನ ಪುರುಷರಿಗೆ ಈ ಪ್ರಮಾಣವು 1,200 ಮಿ,ಗ್ರಾಂ. ನಷ್ಟು ಹೆಚ್ಚುವರಿಯಾಗುತ್ತದೆ. ಆಹಾರದಲ್ಲಿ ಬಳಸಬಹುದಾದ ಕ್ಯಾಲ್ಸಿಯಂಯುಕ್ತ ಪದಾರ್ಥಗಳೆಂದರೆ, ಬಾದಾಮಿ , ಬ್ರಾಕೊಲಿ ಅಥವಾ ಹೂಕೋಸು, ಒಂದು ಜಾತಿಯ ಸುರುಳಿ ಹಸಿರು ಎಲೆಗಳಿರುವ ಕೋಸು ಗಡ್ಡೆ , ಮೂಳೆಯುಕ್ತ ಸಾಲ್ಮನ್, ಸಾರ್ಡಿನ್, ಹಾಗೂ ಸೋಯಾ ಉತ್ಪನ್ನಗಳು. ಆಹಾರದಿಂದ ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ಕ್ಯಾಲ್ಸಿಯಂ ದೊರಕದಿದ್ದರೆ, ಆಗ ವೈದ್ಯರ ಸಲಹೆಯನ್ನು ಪಡೆದು, ಕ್ಯಾಲ್ಸಿಯಂ ಪೂರಣಗಳನ್ನು ಪಡೆಯಬಹುದು.
ವಿಟಾಮಿನ್ ಡಿ ಬಗ್ಗೆ ಗಮನಹರಿಸಿ
ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಸೂಚಿಸುವ ಪ್ರಕಾರ, 19 ರಿಂದ 70 ವಯಸ್ಸಿನ ಹಿರಿಯರು ಪ್ರತಿದಿನ 600 ಇಂಟರ್ ನ್ಯಾಷನಲ್ ಯುನಿಟ್
ವಿಟಾಮಿನ್ ಡಿ ಸೇವಿಸಬೇಕು. 71 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರು, ದಿನ ಒಂದಕ್ಕೆ 800 ಇಂಟರ್ ನ್ಯಾಷನಲ್ ಯೂನಿಟ್ (ಐಖೀs) ಗಳಷ್ಟು ಹೆಚ್ಚುವರಿ ವಿಟಾಮಿನ್ ಸೇವಿಸಬೇಕು . ಅನೇಕರು ಸೂರ್ಯನ ಬೆಳಕಿನಿಂದ ಸಾಕಷ್ಟು ವಿಟಾಮಿನ್ ಡಿ ಯನ್ನು ಪಡೆಯುತ್ತಾರೆ. ವಿಟಾಮಿನ್ ಡಿ ಯ ಇನ್ನಿತರ ಮೂಲಗಳು ಅಂದರೆ , ಎಣ್ಣೆಯುಕ್ತ ಮೀನುಗಳು - ಅಂದರೆ ಟ್ಯೂನಾ ಹಾಗೂ ಸಾರ್ಡೆçನ್, ಮೊಟ್ಟೆಯ ಹಳದಿ, ಫೋರಿrಫೈಡ್ ಹಾಲು ಹಾಗೂ ವಿಟಮಿನ್ ಡಿ ಪೂರಣಗಳು.
ನಿಮ್ಮ ದಿನಚರಿಯಲ್ಲಿ ದೈಹಿಕ
ಚಟುವಟಿಕೆಗಳನ್ನು ಸೇರಿಸಿಕೊಳ್ಳಿ
ಭಾರ ತಾಳುವಿಕೆಯ ವ್ಯಾಯಾಮಗಳಾದ ನಡಿಗೆ, ಜಾಗಿಂಗ್, ಟೆನ್ನಿಸ್ ಹಾಗೂ ಮೆಟ್ಟಿಲು ಹತ್ತುವುದು... ಈ ಎಲ್ಲಾ ಚಟುವಟಿಕೆಗಳು ನಿಮ್ಮ ದೇಹದ ಮೂಳೆ ನಾಶವನ್ನು ತಡೆದು, ಮೂಳೆಗಳ ಸದೃಢ ಬೆಳವಣಿಗೆಗೆ ಸಹಾಯಕವಾಗುವಂತಹ ವ್ಯಾಯಾಮಗಳು.
ದುರಭ್ಯಾಸಗಳಿಂದ ದೂರವಿರಿ
ಧೂಮಪಾನ ಮಾಡಬೇಡಿ ಹಾಗೂ ದಿನಕ್ಕೆ ಎರಡಕ್ಕಿಂತ ಹೆಚ್ಚಿನ ಆಲೋRಹಾಲಿಕ್ ಡ್ರಿಂಕ್ಸ್ ಬೇಡ.
ಮೂಳೆ -ವರ್ಧಕ ಔಷಧಿಗಳನ್ನು
ಉಪಯೋಗಿಸಿ
ಬಿಸ್‌ಪಾಸ್ಟೋನೇಟ್ ಹಾಗೂ ರೆಲಾಕ್ಲಿಫಿನ್ ಸೇರಿದಂತೆ, ಮೂಳೆ ನಶಿಸುವುದನ್ನು ನಿಧಾನಗೊಳಿಸಲು ಹಾಗೂ ಪ್ರಸ್ತುತ ಇರುವ ಮೂಳೆಯ ಸಾಂದ್ರತೆಯನ್ನು ನಿರ್ವಹಿಸಲು ಸಹಾಯಕವಾಗುವಂತಹ ಅನೇಕ ಔಷಧಿಗಳು ಲಭ್ಯ ಇವೆ. ಮೂಳೆಯ ಆರೋಗ್ಯದ ಮೇಲೆ ಪ್ರಭಾವ ಬೀರುವ ಇಂತಹ ಔಷಧಿಗಳ ಸೇವನೆಗೆ ಮೊದಲು ವೈದ್ಯರ ಸಲಹೆ ಪಡೆದರೆ ಒಳ್ಳೆಯದು. ವೈದ್ಯರು ನಿಮ್ಮ ಮೂಳೆಯ ಸಾಂದ್ರತೆಯನ್ನು ಗಮನಿಸಿ, ನಿಮ್ಮ ಮೂಳೆ ನಾಶವಾಗುವಿಕೆಯನ್ನು ತಡೆಯಲು ಸಹಾಯಕವಾಗುವ ಇನ್ನಿತರ ಔಷಧಗಳನ್ನು ಸಹ ಸೂಚಿಸಬಹುದು .
ಮಹಿಳೆಯರು ಹಾರ್ಮೋನ್
ಚಿಕಿತ್ಸೆಯನ್ನು ಪಡೆಯಬಹುದು
ಋತುಬಂಧವಾದ ಕೂಡಲೇ ಈ ಸ್ಟ್ರೋಜನ್ ಹಾರ್ಮೋನ್ ಚಿಕಿತ್ಸೆಯನ್ನು ಆರಂಭಿಸುವುದರಿಂದ, ಮೂಳೆಯ ಸಾಂದ್ರತೆಯನ್ನು ಕಾಪಾಡಿ ಕೊಳ್ಳಬಹುದು. ಆದರೆ, ಹಾರ್ಮೋನ್
ಚಿಕಿತ್ಸೆಯಿಂದ ರಕ್ತ ಹೆಪ್ಪುಗಟ್ಟುವ, ಎಂಡೋಮೆಟ್ರಿಯಲ್ ಕ್ಯಾನ್ಸರ್ ಉಂಟು ಮಾಡುವ
ಹಾಗೂ ಸ್ತನದ ಕ್ಯಾನ್ಸರಿನ ಅಪಾಯಗಳೂ ಸಹ ಇವೆ.