ಅಶೋಕ್ ಕುಮಾರ್ ಎ. | Oct 17, 2010
ಬೋಟ್‌ನೆಟ್‌ಗಳ ಹಿಡಿತದಲ್ಲಿ
ಅಮೆರಿಕದಲ್ಲಿ ಸುಮಾರು 20 ಲಕ್ಷ ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿವೆಯೆಂದು ಮೈಕ್ರೋಸಾಫ್ಟ್ ಕಂಪೆನಿ ಅಂದಾಜು ಮಾಡಿದೆ. ಕೆಲವು ಅಂತರ್ಜಾಲ ತಾಣಗಳ ಪುಟಗಳನ್ನು ತೆರೆದಾಗ, ಆ ಪುಟದಲ್ಲಿರುವ ಸಣ್ಣ ತಂತ್ರಾಂಶಗಳು ನಮ್ಮ ಕಂಪ್ಯೂಟರುಗಳನ್ನು ವಶಕ್ಕೆ ತೆಗೆದುಕೊಂಡು ಹ್ಯಾಕರ್‌ನ ಹಿಡಿತಕ್ಕೆ ಒಳಪಡಿಸುವುದಿದೆ. ಈ ಕಂಪ್ಯೂಟರುಗಳನ್ನು ಬಳಸಿ, ಜನ ಬಯಸದ ಮಿಂಚಂಚೆಗಳ ಸರಣಿಯನ್ನು ಕಳುಹಿಸುವುದು, ಮಾಹಿತಿ ಕದಿಯುವುದು ಮುಂತಾದ ಅನೈತಿಕ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುವುದಿದೆ. ಕದ್ದ ಮಾಹಿತಿಗಳನ್ನು ಕೆಲವು ಅಂತ ರ್ಜಾಲ ತಾಣಗಳಲ್ಲಿ ಹರಾಜೂ ಹಾಕಲಾಗುತ್ತದೆ! ಮಾಹಿತಿ ಕೊಂಡ ವರು ಅವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಅಂತರ್ಜಾಲ ತಾಣಗಳ ಸೇವೆಗಳನ್ನು ನಿರಾಕರಿಸಲು, ಕೆಲವೊಮ್ಮೆ ದಾಳಿಗಳನ್ನು ಸಂಘಟಿಸಲು ಬೋಟ್‌ನೆಟ್ ಹಿಡಿತದಲ್ಲಿರುವ ಕಂಪ್ಯೂಟರುಗಳನ್ನು ಬಳಸಿಕೊಳ್ಳುತ್ತಾರೆ. ಎಪ್ರಿಲ್ ಮತ್ತು ಜೂನ್ ನಡುವಿನ 3 ತಿಂಗಳುಗಳಲ್ಲಿ ಮೈಕ್ರೋಸಾಫ್ಟ್ ಸುಮಾರು ಆರೂವರೆ ಲಕ್ಷ ಸೋಂಕಿರುವ ಕಂಪ್ಯೂಟರುಗಳನ್ನು ಶುದ್ಧಿಗೊಳಿ ಸಿದೆ. ಇವು ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ನೋಂದಾಯಿತ 60 ಕೋಟಿ ಕಂಪ್ಯೂಟರುಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ಸಿದ್ಧವಾದ ಅಂಶ ಗಳಾಗಿವೆ. ಬ್ರೆಜಿಲಿನಲ್ಲಿ ಐದೂವರೆ ಲಕ್ಷ ಕಂಪ್ಯೂಟರುಗಳು ಇದೇ ರೀತಿ ಬಾಧಿತವಾಗಿದ್ದುವು. ಕೊರಿಯಾದಲ್ಲಿ ಪ್ರತಿ ಸಾವಿರದಲ್ಲಿ 14 ಕಂಪ್ಯೂಟರು ಗಳು ಬೋಟ್‌ನೆಟ್ ಬಾಧೆಗೆ ಒಳಪಟ್ಟಿದ್ದ ಅಂಶ ವ್ಯಕ್ತವಾಯಿತು.
ಮೈಕ್ರೋಸಾಫ್ಟ್ ಅಪ್‌ಡೇಟ್
ಮೈಕ್ರೋಸಾಫ್ಟ್ ಕಂಪೆನಿಯು ತನ್ನ ವಿವಿಧ ತಂತ್ರಾಂಶಗಳಾದ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ, ಬ್ರೌಸರ್, ಆಫೀಸ್ ಮುಂತಾದ ತಂತ್ರಾಂಶಗಳ ಕೊರತೆಗಳನ್ನು ನಿವಾರಿಸಲು ಮತ್ತು ಭದ್ರತಾ ಕೊರತೆಯನ್ನು ಹೋಗಲಾಡಿಸಲು ಅವುಗಳ ಆಧುನಿಕ ಆವೃತ್ತಿಯನ್ನು ಪ್ರಕಟಿಸುವುದಿದೆ. ಅದರಂತೆ ಈ ಸಲ ತನ್ನ ವಿವಿಧ ತಂತ್ರಾಂಶಗಳ 49 ಕೊರತೆಗಳನ್ನು ಸರಿಪಡಿಸುವ ತಿದ್ದುಪಡಿಗಳನ್ನು ಪ್ರಕಟಿಸಿದೆ. ಇದು ಈವರೆ ಗಿನ ಅತಿದೊಡ್ಡ ತಿದ್ದುಪಡಿಯಾಗಿದೆ. ಈ ತಿದ್ದುಪಡಿಗಳಿಗೆ Mಖ 10-071 ಎಂದು ಹೆಸರಿಸಲಾಗಿದ್ದು, ಅಂತರ್ಜಾಲದಲ್ಲಿ ಇದು ಉಚಿತವಾಗಿ ಲಭ್ಯ ವಿದೆ. ಇವುಗಳ ಪೈಕಿ ಸುಮಾರು 10 ತಿದ್ದುಪಡಿಗಳು ಇಂಟರ್ನೆಟ್ ಎಕ್ಸ್ ಪ್ಲೋರರ್ ತಂತ್ರಾಂಶಕ್ಕೆ ಸಂಬಂಧಿಸಿವೆ. ತಿದ್ದುಪಡಿಗಳನ್ನು 16 ಗುಂಪುಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ವಿಂಡೊಸ್ ಬಳಕೆದಾರರು ತಮ್ಮ ಕಂಪ್ಯೂಟರುಗಳನ್ನು ಅಂತರ್ಜಾಲಕ್ಕೆ ಸಂಪರ್ಕಿಸಿದಾಗ, ಈ ತಿದ್ದುಪಡಿ ಗಳನ್ನು ತನ್ನಷ್ಟಕ್ಕೆ ಇಳಿಸಿಕೊಂಡು ಅನುಸ್ಥಾಪಿಸುವಂತೆ ಏರ್ಪಡಿಸ ಲಾಗಿರುತ್ತದೆ. ಕೆಲವು ತಿದ್ದುಪಡಿಗಳನ್ನು ಅನುಸ್ಥಾಪಿಸುವುದು ಕಂಪ್ಯೂಟರಿನ ಭದ್ರತಾ ಕೊರತೆಗಳನ್ನು ನಿವಾರಿಸಲು ಅತ್ಯಗತ್ಯ. ವಿಂಡೊಸ್ ಮೀಡಿಯಾ ಪ್ಲೇಯರ್ ವಿಡಿಯೋ, ಆಡಿಯೋ ಕಡತಗಳನ್ನು ನುಡಿಸಲು ಉಪಯುಕ್ತ ವಾದ ತಂತ್ರಾಂಶವಾಗಿದ್ದು, ಇದರ ತಿದ್ದುಪಡಿಗಳೂ ಇದರಲ್ಲಿ ಸೇರಿವೆ.
ಚಿಲಿಪಿಲಿ
* ಚಿಲಿಯಲ್ಲಿ ಗಣಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ತೆರದಲ್ಲಿ, ಭಾರತವನ್ನು ಭ್ರಷ್ಟಾಚಾರದಿಂದ ರಕ್ಷಿಸಿ ಕಾಪಾಡಿರಿ.
* ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಭಾಷೆ ತಮಿಳು? ಹಿಂದಿ? ಯಾವುದೂ ಅಲ್ಲ... ಸಿ, ಸಿ++, ಜಾವಾ!
* ಉಬುಂಟು10.10 ಕಂಪ್ಯೂಟರ್ ಬರೇ 10 ಸೆಕೆಂಡಿನಲ್ಲಿ ಬೂಟ್ ಆಗುತ್ತದೆ. ವಿವಿಧ ಸ್ಥಾನಮಾನಗಳನ್ನು ಹೊಂದಿದವರ ವಿವರಗಳೂ ಇಲ್ಲಿವೆ.
ಸ್ಪರ್ಧಾಪರೀಕ್ಷೆಗಳಿಗೆ ಸ್ಪರ್ಧಾರ್ಥಿ
http://spardharthi.blogspot.com ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಸಹಾಯ ಮಾಡುವ ಮೊದಲ ಇ-ಪತ್ರಿಕೆಯಂತೆ. ರವಿ, ಪರಶುರಾಮ್, ಲಾವಣ್ಯ, ನಿಹಾರಿಕಾ, ಗೌರಿ, ಪವನ್, ಸ್ಪಂದನಾ ಇವರೆಲ್ಲಾ ಈ ಬ್ಲಾಗಿಗೆ ವಿಷಯ ಒದಗಿಸಿದ್ದಾರೆ. ಪ್ರಚಲಿತ ವಿದ್ಯಮಾನಗಳ ಒಳನೋಟವೂ ಇಲ್ಲಿ ಲಭ್ಯ. ಇಲ್ಲಿಯ ಬರಹ ಗಳನ್ನು ಫೇಸ್‌ಬುಕ್ ಮೂಲಕ ಪಡೆಯುವ ಸವಲತ್ತೂ ಕೂಡಾ ಇದೆ. ಸುಮಾರು 800 ಜನ ಫೇಸ್‌ಬುಕ್ ಮೂಲಕ ಸ್ಪರ್ಧಾರ್ಥಿಯನ್ನು ಪಡೆಯುತ್ತಾರೆ. ಈ ಬ್ಲಾಗಿಗೆ ನೂರಕ್ಕಿಂತ ಹೆಚ್ಚು ಜನ ಹಿಂಬಾಲಕರಿದ್ದಾರೆ.
ಮಿತಿ ಮೀರುತ್ತಿದೆಯೇ?
ಒಂದು ತಿಂಗಳಲ್ಲಿ ಅಮೆರಿಕದ ಯುವಕರು 3,500ರಷ್ಟು ಕಿರು ಸಂದೇಶಗಳನ್ನು ರವಾನಿಸುತ್ತಾರೆ. ಸಂದೇಶಗಳ ಉದ್ದ ಸರಾಸರಿ 160 ಅಕ್ಷರ ಗಳಿಗೆ ಸೀಮಿತವಾಗಿದೆ. ಹಾಗೆ ನೋಡಿದರೆ ಕಿರುಸಂದೇಶ ಕಳುಹಿಸು ವುದೇ ಯುವಕರಿಗೆ ಹೆಚ್ಚು ಸುಲಭದ ಗಮ್ಮತ್ತು ನೀಡಿದೆ. ಅವರು ಮಾತಿನಲ್ಲಿ ಕಳೆಯುವ ಸಮಯ ಸುಮಾರು 600 ನಿಮಿಷಗಳು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. ದತ್ತಾಂಶಗಳ ಬಳಕೆ ಬಹಳ ಹೆಚ್ಚಿದ್ದು, 62 ಎಂಬಿ ಗಳಷ್ಟು ದತ್ತಾಂಶವನ್ನು ಬಳಸುತ್ತಾರೆ ಎನ್ನುವುದು ಅಧ್ಯಯನದಿಂದ ವ್ಯಕ್ತ ವಾಗಿದೆ. ಮಾತಿಗಾಗಿ ಮೊಬೈಲ್ ಬಳಸುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿರುವುದು 50 ವರ್ಷ ದಾಟಿದವರ ಪೈಕಿ ಮಾತ್ರ. ಚಿತ್ರ, ಎಮ್ಮೆಮ್ಮೆಸ್ ಸಂದೇಶಗಳೂ ಕಿರಿಯರ ಪೈಕಿ ಹೆಚ್ಚು ಜನಪ್ರಿಯ ವಾದ ಸೇವೆಗಳಾಗಿವೆ. ದತ್ತಾಂಶ ಸೇವೆ ಬಳಸುವವರು ಟಿವಿ ವೀಕ್ಷಿಸುವುದೇ ಹೆಚ್ಚು.
ಓದುಗರ ಪ್ರತಿಕ್ರಿಯೆಗಳು
* ಟ್ವಿಟರ್ ಚಿಲಿಪಿಲಿಯಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಹತ್ತು ವರ್ಷ ಪೂರೈಸಿದರು... ಯೆಡ್ಡಿ? ಎಂದಿತ್ತು. ಯೆಡ್ಡಿ ಹತ್ತು ಗಂಡಾಂತರಗಳಿಂದ ಪಾರಾಗಿದ್ದಾರೆ! - ಆಸು ಹೆಗ್ಡೆ, ಬೆಂಗಳೂರು.
* ತುಂಬಾ ಚೆನ್ನಾಗಿದೆ: ನಮನ, ಬಜಗೋಳಿ.
ಅಂತರ್ಜಾಲ ಟಿವಿ
ಐದು ಬಿಲಿಯನ್ ಟಿವಿ ಸೆಟ್‌ಗಳು ಪ್ರಪಂಚದ ಮೂಲೆಮೂಲೆ ಯಲ್ಲಿದ್ದು, ಮೊಬೈಲ್ ಸೆಟ್‌ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ. ಕಂಪ್ಯೂಟರ್ ಮತ್ತು ಅಂತರ್ಜಾಲಗಳನ್ನು ಬೆಸೆದರೆ ಹಲವು
ಲಾಭಗಳಿವೆ.
ಪ್ರಥಮವಾಗಿ, ನಮಗೆ ಬೇಕಾದ ಕಾರ್ಯಕ್ರಮಗಳನ್ನು ಶೋಧಿಸುವುದು ಸುಲಭವಾಗಲಿದೆ. ಜತೆಗೆ ಟಿವಿ ವೀಕ್ಷಣೆಯಲ್ಲಿ ನಾವೀನ್ಯತೆ ತರುವ ತಂತ್ರಾಂಶಗಳ ಬಳಕೆ ಸಾಧ್ಯವಾಗಲಿದೆ. ಟಿವಿ ಸೆಟ್‌ಟಾಪ್ ಬಾಕ್ಸ್ ಮಾರಾಟ ಜನಪ್ರಿಯವಾದರೆ, ಐದು ಬಿಲಿಯನ್‌ನಷ್ಟು ಸೆಟ್‌ಗಳಿಗೆ ಅವಕಾಶ ಇದೆ ಎನ್ನುವುದು ತಯಾರಕರಿಗೆ ಖುಷಿ ಕೊಡುವ ಅಂಶ. ಕಳೆದವಾರ ಲಾಜಿಟೆಕ್ ಕಂಪೆನಿಯ ಗೂಗಲ್ ಸೆಟ್‌ಟಾಪ್ ಬಾಕ್ಸ್ ರೆವುವನ್ನು ಮಾರುಕಟ್ಟೆಗೆ ತಂದುದನ್ನು ಓದಿದಿರಿ. ಮರುದಿನವೇ ಆಪಲ್ ಕಂಪೆನಿಯ ಸೆಟ್‌ಟಾಪ್ ಬಾಕ್ಸ್ ಕೂಡಾ ಮಾರುಕಟ್ಟೆಗೆ ಬಂದಿದೆ. ಇದರ ಮೂಲಕ ಕೆಲವು ಟಿವಿ ಸೀರಿಯಲ್ ನಿರ್ಮಾಪಕರ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಾತ್ರ ಸಾಧ್ಯ. ಅಂತರ್ಜಾಲ ಮೂಲಕ ಟಿವಿಯನ್ನು ನೀಡಿ, ಅಧಿಕ ವೀಕ್ಷಕರ ಮೂಲಕ ತನ್ನ ಅಂತರ್ಜಾಲ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವುದು ಗೂಗಲ್ ಯೋಜನೆ. ಸ್ಯಾಮ್‌ಸಂಗ್, ಎಲ್ಜಿ ಕಂಪೆನಿಗಳೂ ಅಂತರ್ಜಾಲ ಟಿವಿಯತ್ತ ಕಣ್ಣುಹಾಕಿವೆ. ಆದರೆ ಯಾವ ಕಂಪೆನಿಗೂ ನಿರೀಕ್ಷಿತ ಜನಪ್ರಿಯತೆ ಲಭ್ಯವಾಗಿಲ್ಲ.
ಉಬುಂಟು ಡಿವಿಡಿ ಗೆಲ್ಲಿ
* ಈ ವಾರ 25 ವರ್ಷ ಪೂರೈಸಿದ ಕಂಪ್ಯೂಟರ್ ಭಾಷೆ ಯಾವುದು? ಅದನ್ನು ಅಭಿವೃದ್ಧಿ ಪಡಿಸಿದ ವ್ಯಕ್ತಿ ಯಾರು?
* ಉಬುಂಟು ಕಂಪ್ಯೂಟರ್ ನಿರ್ವಹಣಾ ವ್ಯವಸ್ಥೆಯ ಎರಡು ಮುಖ್ಯ ಲಾಭಗಳೇನು? ಹೊಸ ಆವೃತ್ತಿ ಉಬುಂಟು 10.10 ಬಿಡುಗಡೆಯಾದ ದಿನಾಂಕ ಯಾವುದು? (ಉತ್ತರಗಳನ್ನು ಬಹು ಮಾನ ಪ್ರಾಯೋಜಿಸಿದ ಶ್ರುತಿ ಗ್ರಾಫಿಕ್ಸ್, ಉಡುಪಿ; ಇವರಿಗೆ ಮಿಂಚಂಚೆ ಮಾಡಿ, ವಿಷಯ: NS1 ನಮೂದಿಸಿ adooraniklk@gmil.com)
ಪ್ರತಿಕ್ರಿಯಿಸಿ: feedback@manipalmedia.com