ಪ್ರೊ| ಅನಂತ ಪದ್ಮನಾಭ ರಾವ್ | Jan 25, 2013
ಯಕ್ಷಗಾನ, ಭರತನಾಟ್ಯ, ಉತ್ತರಾದಿ ಸಂಗೀತ, ದಕ್ಷಿಣಾದಿ ಸಂಗೀತ, ಚಿತ್ರಕಲೆ ಮೊದಲಾದ ಸಾಂಸ್ಕೃತಿಕ ಆಯಾಮಗಳ ಆಗಾಗ ಪ್ರದರ್ಶನಗಳಿಂದ ವಿಶೇಷ ಮೆರುಗು ಪಡೆದ ಕರಾವಳಿ ಉತ್ಸವ, ವಿವಿಧ ಸಂಘ ಸಂಸ್ಥೆಗಳ ವಾರ್ಷಿಕೋತ್ಸವಗಳ ನಡುವೆಯೂ ಸಾಕಷ್ಟು ಸಹೃದಯರನ್ನು ತನ್ನ ತೆಕ್ಕೆಗೆ ಆಕರ್ಷಿಸಿ, ಅವರೆಲ್ಲರಿಗೂ ತನ್ನ ಭರತನಾಟ್ಯ ಪ್ರದರ್ಶನದಿಂದ ಭರಪೂರ ಮುದ ನೀಡಿದ ಭ್ರಮರಿ ಶಿವಪ್ರಕಾಶ್ ರಸ ಗ್ರಾಹಿಗಳ ಮನದಲ್ಲಿ ಬಹಳಷ್ಟು ಸಮಯ ಉಳಿಯುತ್ತಾರೆಂಬುದು ನಿಸ್ಸಂಶಯ. ಭ್ರಮರಿಯವರು ಎಳವೆಯಲ್ಲಿ ಉಷಾ ಮೋಹನ ರಾವ್‌ಅವರಿಂದ ಸಂಗೀತವನ್ನೂ ಕೊಡವೂರು ಭಾಗವತ ಮಾಧವ ರಾವ್ ಅವರಿಂದ ಸೀನಿಯರ್ ಮತ್ತು ವಿದ್ವತ್ ಹಾಗೂ ಆಮೇಲಿನ ಭರತನಾಟ್ಯ ತರಬೇತಿ ಯನ್ನು ವಿ| ಡಾ| ವಸುಂಧರಾ ದೊರೆಸ್ವಾಮಿಯವರಿಂದಲೂ ಅಭ್ಯಸಿಸಿರುವರು. ಮೇಲಾಗಿ ಭ್ರಮರಿ ಹಿರಿಯ ರಂಗ ಕಲಾವಿದ ಪ್ರೊ| ಉದ್ಯಾವರ ಮಾಧವಾಚಾರ್ಯರ ಪುತ್ರಿ, ಕಲೆಯನ್ನು ಬಳುವಳಿಯಾಗಿ ಪಡೆದು, ಕಲೆಯನ್ನು ಬೆಳೆಸಿದವರು.
ಅವರು ತಮ್ಮ ಭರತನಾಟ್ಯ ಹೂರಣಕ್ಕೆ ಆಯ್ದುಕೊಂಡುದು ಪ್ರಖ್ಯಾತ ವೈಣಿಕ ವೀಣೆ ಶೇಷಣ್ಣನವರ ಅಪರೂಪದ ರಾಗಗಳು ಮತ್ತು ತಾಳಗಳನ್ನು. ಭರತನಾಟ್ಯ ಕಲಾವಿದೆ ಸಂಗೀತದ ಮೇಲೂ ನಿಚ್ಚಳ ಪ್ರೌಢಿಮೆ ಪಡೆದಿರಬೇಕು, ಎಂತಲೇ ಸತ್ಯವತಿ ಮೂಡಂಬಡಿತ್ತಾಯರಲ್ಲಿ ಶೇಷಣ್ಣನವರ ಕೃತಿಗಳನ್ನು ಅಭ್ಯಸಿಸಿ, ಆಯ್ದ ಕೃತಿ ಹಾಗೂ ತಾಳಗಳಿಗಾಗಿ ಡಾ| ವಸುಂಧರಾ ಅವರಲ್ಲಿ ಹೆಜೆcಗಾರಿಕೆಗಳನ್ನು ತಮ್ಮದಾಗಿಸಿಕೊಂಡರು. ಇವೆರಡನ್ನು ಸಮ್ಮಿಳನಗೊಳಿಸಿ, ವೇದಿಕೆಯ ಮೇಲೆ ತಮ್ಮ ಸೃಜನಶೀಲ ನಡೆಗಳಿಂದ ಒಪ್ಪಂದದಲ್ಲಿ ಓರಣವಾಗಿ ಸೃಷ್ಟಿಸಿ ಸಭಿಕರನ್ನು ಭ್ರಮಾಲೋಕಕ್ಕೆ ಒಯ್ದರು. ದೀಪ್ತಿ ಶ್ರೀನಾಥ್, ಗಣೇಶ ಸ್ತುತಿಯನ್ನು ಹಾಡಿ ಕಾರ್ಯಕ್ರಮ ಶುಭಾರಂಭ ಮಾಡಿದರು.
ಭ್ರಮರಿ ಮೊದಲಾಗಿ ಪ್ರಸ್ತುತಪಡಿಸಿದುದು ಮೇಳಪ್ರಾಪ್ತಿ. ನರ್ತಕಿ ಹಿಮ್ಮೇಳದೊಂದಿಗೆ ಹೊಸೆದುಕೊಂಡು ಹದವರಿತು ನರ್ತಿಸುವುದೇ ಈ ನೃತ್ಯ ಬಂಧ. ತೆರೆಯ ಹಿಂದೆ ನಡೆಯುತ್ತಿದ್ದ ಈ ಪರಂಪರೆಗೆ ಮಂಗಳ ಹಾಡಿ ಮುಂದಕ್ಕೆ ತಂದು ಪ್ರದರ್ಶನ ನೀಡಿದವರು ಡಾ| ವಸುಂಧರಾ. ಇದಕ್ಕಾಗಿ ಶೇಷಣ್ಣನವರ ಕಲ್ಯಾಣಿ ರಾಗ, ರೂಪಕ ತಾಳದ ಶಾರದೇ ವರದೇ ಸಾರಿದೆ ಬರಿದೆ ಕೇಳಿ ಕೃತಿಯನ್ನು ಆಯ್ದುಕೊಂಡು ತಮ್ಮ ಭರತನಾಟ್ಯ ಪ್ರದರ್ಶನಕ್ಕೆ ಭದ್ರ ಬುನಾದಿ ಹಾಕಿಕೊಂಡರು.
ಮುಂದಿನ ಸ್ವರಜತಿ ತಮ್ಮ ನಡೆಯಿಂದ ಸಂಗೀತ ಬೆರೆಸಿ ಇನ್ನಷ್ಟು ಅಲಂಕರಿಸಿ ಕೊಳ್ಳುವುದಾಗಿದೆ. 14 ಅಕ್ಷರ ಮಾತ್ರೆಯ ಅತೀತಗ್ರಹದಲ್ಲಿ ಸಂಯೋಜನೆ ಯಾಗಿರುವ ಮಧ್ಯಮ ಕಾಲದ ರಚನೆ, ವೀಣೆ ಶೇಷಣ್ಣ ಹಾಗೂ ಇತರ ವೈಣಿಕರಿಗೆ ಸವಾಲೇ ಸರಿ. ಅದನ್ನು ಕರ್ನಾಟಕ ಕಾಪಿ ರಾಗ, ಖಂಡಅಟ ತಾಳದ ಕೃತಿಯಲ್ಲಿ ನೃತ್ಯದ ಲಯ ಪೋಣಿಸಿ, ಭ್ರಮರಿಯವರು ಅಭಿವ್ಯಕ್ತಿಸಿದುದು ಸವಾಲಿಗೆ ಸವಾಲೇ ಸರಿ.
ಭ್ರಮರಿಯವರ ಮುಂದಿನ ನೃತ್ಯಬಂಧ, ತಾನವರ್ಣ. ದೇವದಾಸಿ ಪದ್ಧತಿ ಹಾಗೂ ರಾಜ ಮಹಾರಾಜರುಗಳ ಕೃಪಕಟಾಕ್ಷ ಈ ಭರತನಾಟ್ಯ ಪರಂಪರೆ ಉಳಿದು ಮೆರೆಯಲು ಕಾರಣವಾಗಿದೆ. ವೀಣೆ ಶೇಷಣ್ಣನವರು ನಾಲ್ವಡಿ ಕೃಷ್ಣರಾಜ ಒಡೆಯರ ಗುಣಗಾನ ಮಾಡುವುದೇ ಈ ಕೃತಿಯ ಸಾಹಿತ್ಯ. ಶೃಂಗಾರ ರಸದ ಅಭಿವ್ಯಕ್ತಿಯೇ ಇದರ ಸ್ಥಾಯೀಭಾವ. ವಿರಹ ವೇದನೆಯಲ್ಲಿ ಬಳಲುತ್ತಿರುವ ನಾಯಕಿ, ರಾಜನಿಗಾಗಿ ಪರಿತಪಿಸುವಂತೆ ಚಿತ್ರಿಸಲಾಗಿದೆ. ಕಾಮಕೋಟಿ ಸುಂದರಾಂಗನೆ... ಕಾಮಿಸಿ ಬಂದ ಈ ಸತಿಯನ್ನು ಸೇರಲೊಲ್ಲೆಯ... ಮುನಿಸೇಕೆ ಪ್ರಿಯನೇ... ನಿನಗಿದು ಸರಿಯೇ ಸ್ವಾಮೀ... ಚಾಮರಾಜೇಂದ್ರ ಭೂಪಾಲನ ಸುಕುಮಾರನೇ...! ಭ್ರಮರಿಯವರು ರಾಧೆ ಕೃಷ್ಣನಿಗಾಗಿ, ಅವನ ವಿರಹ ವೇದನೆಯಲ್ಲಿ ಪರಿತಪಿಸುವಂತೆ ಒಂದು ರೀತಿಯ ಪರಕಾಯ ಪ್ರವೇಶ ಮಾಡಿ ಅಭಿವ್ಯಕ್ತಿಸಿದುದು ಅವರ ಕಲಾಭಿಜ್ಞತೆಗೆ, ಸೃಜನಶೀಲತೆಗೆ ಹಿಡಿದ ಕೈಗನ್ನಡಿ.
ವೀಣೆ ಶೇಷಣ್ಣನವರು ಈ ಕೃತಿಯನ್ನು ಮೂಲದಲ್ಲಿ ರಾಗ ಬೇಹಾಗ್‌ನಲ್ಲಿ ಪ್ರಧಾನ ಸಂಚಾರ ನಡೆಸಿ, ಮತ್ತೆ ಸುಮಾರು 14 ಬೇರೆ ಬೇರೆ ರಾಗ ಗಳಲ್ಲಿ ಮಿಶ್ರಜಾತಿ ತ್ರಿಪುಟತಾಳದ ನಡೆಗೆ ಈ ರಾಗ ಮಾಲಿಕೆಯನ್ನು ಪ್ರಸ್ತುತಪಡಿಸಿದ್ದರು. ಭ್ರಮರಿಯವರು ಇದಕ್ಕೆ ಹೊಂದಿಕೊಳ್ಳುವ, ಈ ಲೆಕ್ಕಾಚಾರಕ್ಕೆ ಭೇಷ್ ಅನ್ನುವ ಜತಿಗಳನ್ನು ಅಳವಡಿಸಿ ಪರಿಪಕ್ವತೆ ಮೆರೆದರು. ರಾಜಾಶ್ರಯದಲ್ಲಿ ಶೇಷಣ್ಣನವರಂತಹ ಸಂಗೀತ ದಿಗ್ಗಜರಿಗೆ ಪಾಶ್ಚಾತ್ಯ, ಉತ್ತರ ಭಾರತೀಯ ಸಂಗೀತಗಾರರ ಪ್ರಭಾವ ಉಂಟಾಗಿ, ವಿಶ್ವಮಾನ್ಯವಾದ ಶ್ರುತಿ-ಲಯವನ್ನು ಮೈಗೂಡಿಸಿ, ಇಂದಿನ ಕಾಲದ ಫ್ಯೂಷನ್ ರೀತಿಯ ಈ ಕೃತಿಯನ್ನು ಅಂದೇ ಸೃಷ್ಟಿಸಿದ್ದರು ಎನ್ನುವುದು ಬೆರಗುಗೊಳಿಸುವ ವಿಚಾರ. ಭ್ರಮರಿಯವರ ನಡೆಯಲ್ಲಿ ವೇಗೋತ್ಕರ್ಷದ ಝಳಕು ನೃತ್ಯವನ್ನು ಇನ್ನಷ್ಟು ರಂಗೇರುವಂತೆ ಮಾಡಿತು.
ಶೇಷಣ್ಣನವರ ಮನೆ ದೇವರು ತಿರುಪತಿ ತಿಮ್ಮಪ್ಪ. ಅವನೇ ನಮ್ಮೆಲ್ಲ ರನ್ನು ಸಲಹುವವನು ಎನ್ನುವ ಭಾವ ಬರುವ ದೇವರ ನಾಮವನ್ನು ತಮ್ಮ ಪತ್ನಿಯ ಇಚ್ಛೆಯಂತೆ ರಚಿಸಿದ್ದರು ಎನ್ನುವುದು ಪ್ರತೀತಿ. ಎಂದೆಂದಿಗೂ ನಿನ್ನ ನಂಬಿದೆನೋ ಗೋವಿಂದ... ಮಂದಹಾಸವ ತೋರೋ ಚಂದದಿಂದ... ಸಂದರ್ಶನ ವಿತ್ತು ಸಲಹೋ ಕರುಣಾನಿಧಿಯೇ... ಕೃತಿ ಕಾಂಭೋಜಿ ರಾಗ ದಲ್ಲಿ ಮಿಶ್ರ ಝಂಪೆ ತಾಳದಲ್ಲಿ ರಚಿಸಲ್ಪಟ್ಟಿದೆ. ಭ್ರಮರಿಯವರು ಕನಕದಾಸಗೊಲಿದ ಕೃಷ್ಣನನ್ನು ಮೇಳೈಸಿ ಪ್ರಚುರಪಡಿಸಿದ ಪರಿ, ತನ್ನ ಆತ್ಮ ನಿವೇದನೆ, ಆತನ ಸನ್ನಿಧಿ, ಬಂಧನ ತರುವ ತೃಪ್ತಿ, ಪ್ರಶಾಂತತೆ ಭಾವಗಳನ್ನು ಸೃಷ್ಟಿಸಿ ವಿಜೃಂಭಿಸಿದರು. ರಾಧೆ, ಕೃಷ್ಣ ತನ್ನಲ್ಲಿ ಐಕ್ಯಗೊಂಡಂತೆ ಭಾವಪೂರ್ಣ ಅಭಿನಯ ನೀಡಿದರು.
ವೀಣೆ ಶೇಷಣ್ಣನವರು ಆಸ್ಥಾನ ವಿದ್ವಾಂಸನ ನೆಲೆಯಲ್ಲಿ ರಚಿಸಿದ ಇನ್ನೊಂದು ಅಪೂರ್ವ ಕೃತಿ ಪೂರ್ವಿ ರಾಗದಲ್ಲಿದೆ ಹಾಗೂ ಪಖವಾಝ್ಗಾಗಿ ಹೇಳಿ ಮಾಡಿದ 12 ಅಕ್ಷರಗಳ ಚೌತಾಲದಲ್ಲಿದೆ. ಅದನ್ನು ಕರ್ನಾಟಕೀ ಶೈಲಿಗೆ ಅಳವಡಿಸಿದ ಕೀರ್ತಿ ಶೇಷಣ್ಣನವರದ್ದು. ನ್ಯಾಯವೇ ಇದು ಸ್ವಾಮಿ... ಜಾಲ ಮಾಡದೇ ಬಂದು ನನ್ನನ್ನು ಸಂತೋಷಗೊಳಿಸು ಚಾಮರಾಜೇಂದ್ರ ಭೂಪಾಲ ಎಂಬ ಚಿಕ್ಕ ಚೊಕ್ಕ ಸಾಹಿತ್ಯಕ್ಕೆ ಅಷ್ಟೇ ಚುರುಕಾಗಿ ಕ್ಷಿಪ್ರ ನಡೆ ಗಳಿಂದ ತಿಲ್ಲಾನಕ್ಕೆ ಮೆರುಗು ನೀಡಿದರು.
ಶೇಷಣ್ಣನವರ ಕಾಪಾಡಬೇಕು ತಾಯೇ ಕೃತಿ ಕಮಾಚ್ ರಾಗದಲ್ಲಿ ಹಾಗೂ ಮಿಶ್ರಛಾಪು ತಾಳದಲ್ಲಿ ರಚಿಸಲ್ಪಟ್ಟಿದ್ದು, ಅದನ್ನು ಭ್ರಮರಿ ಮಂಗಳ ನೃತ್ಯಕ್ಕಾಗಿ ಆರಿಸಿಕೊಂಡರು. ಜಗನ್ಮಾತೆ, ಜಗದೀಶ್ವರಿ, ಚಾಮುಂಡೇಶ್ವರಿಗೆ ತನ್ನೆಲ್ಲವನ್ನು ಸಮರ್ಪಿಸಿ, ನೃತ್ಯದ ಒಪ್ಪು, ತಪ್ಪು ಎಲ್ಲವನ್ನು ಸಮಚಿತ್ತದಿಂದ ಅನುಗ್ರಹಿಸು ಎಂದು ನಿವೇದಿಸಿ ಜಗನ್ಮಾತೆಯ ಪಾದಕಮಲಗಳಿಗೆ ಅರ್ಪಿಸಿ ಭರತನಾಟ್ಯ ಪ್ರದರ್ಶನವನ್ನು ಮುಕ್ತಾಯಗೊಳಿಸಿದರು. ವೀಕ್ಷಕರಲ್ಲಿ "ಬಂದುದು ಸಾರ್ಥಕವಾಯಿತು' ಎನ್ನುವ ಭಾವವನ್ನು ತುಂಬಿದರು. ಹೃದಯವನ್ನು ತಟ್ಟಿ, ಮುಟ್ಟಿ, ಸಾಂತ್ವನ ಗೊಳಿಸಿ ಪ್ರಶಾಂತತೆಯನ್ನು ಮೆರೆಸಿ ದರು. ಸಮಪಕ್ವತೆಯ ಹದವರಿತ ಕಲಾಫಲಗಳ ಮಾಲೆೆಯನ್ನು ಒಂದೂವರೆ ತಾಸು ಕಾಲದ ಅಭಿವ್ಯಕ್ತಿ ಯಲ್ಲಿ ಸಭಿಕರಿಗೆ ಅರ್ಪಿಸಿ ಅವರು ತುದಿಗಾಲಲ್ಲಿ ನಿರೀಕ್ಷಿಸುವಂತೆ ಮಾಡಿ ದರು. ಅವರ ನಿರೀಕ್ಷೆಯೂ ಹುಸಿ ಯಾಗಲಿಲ್ಲ. ಭ್ರಮರಿಯವರೂ ಧನ್ಯತಾಭಾವದಿಂದ ಪುಳಕಿತರಾದರು. ಎಲ್ಲಕ್ಕಿಂತ ಮಿಗಿಲಾಗಿ ವೀಣೆ ಶೇಷಣ್ಣ ನವರ ಸಂಗೀತ ಜ್ಞಾನದ ಒಳನೋಟವನ್ನು ಇಂದಿನ ಪೀಳಿಗೆಗೆ ಭರತನಾಟ್ಯದ ಮೂಲಕ ನೀಡುವಂತಾದುದು ಗುಣಾತ್ಮಕವೇ ಸರಿ. ನಟುವಾಂಗದಲ್ಲಿ ಡಾ| ವಸುಂಧರಾ ದೊರೆ ಸ್ವಾಮಿಯೊಡಗೂಡಿದ ಹಿಮ್ಮೇಳ ಅತ್ಯಂತ ಮನೋಜ್ಞವಾಗಿ ಭ್ರಮರಿಯವರ ಜೊತೆ ಸಾಥ್ ನೀಡಿತ್ತು.
ಪ್ರಾರಂಭದಲ್ಲಿ ವೀಣೆ ಶೇಷಣ್ಣನವರ ಮರಿ ಮಗಳು ಡಾ| ರಮಾ ವಿ. ಬೆಣ್ಣೂರು ಅವರು ವೀಣೆ ಶೇಷಣ್ಣನವರ ಹೆಗ್ಗಳಿಕೆ, ಶ್ರೇಷ್ಠತೆಯ ಬಗ್ಗೆ ಮಾತನಾಡಿ ದ್ದರು. ಮಧ್ಯಂತರದಲ್ಲಿ ಉದಯೋನ್ಮುಖ ಸಂಗೀತ ಕಲಾವಿದ ಪವನ್ ಕುಮಾರ್ ಅವರು ಶೇಷಣ್ಣ ನವರ ಸಂಗೀತ ಕೃತಿಗಳ ವೈಶಿಷ್ಟ್ಯದ ಬಗ್ಗೆ ಪ್ರಸ್ತಾವಿಸಿದರು.