Wednesday, May 22, 2013
Last Updated: 1:59:53 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಅವಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಮ್ಮಜ್ಜಿ ಅಂದ್ರೆ ನಂಗಿಷ್ಟ: ಈ ಆಲಕ್ಕೆ ನೂರು ಬಿಳಲು
    • ಲಕ್ಷ್ಮೀಬಾಯಿಗೆ 8 ಜನ ಮಕ್ಕಳು, 30 ಮೊಮ್ಮಕ್ಕಳು, 54ಕ್ಕೂ ಹೆಚ್ಚು ಮರಿ ಮಕ್ಕಳು, 6 ಮರಿ ಮೊಮ್ಮಕ್ಕಳು- ಹೀಗೆ ಅವರ ಪ್ರೀತ

      • Udayavani | Jan 29, 2013

        ಲಕ್ಷ್ಮೀಬಾಯಿಗೆ 8 ಜನ ಮಕ್ಕಳು, 30 ಮೊಮ್ಮಕ್ಕಳು, 54ಕ್ಕೂ ಹೆಚ್ಚು ಮರಿ ಮಕ್ಕಳು, 6 ಮರಿ ಮೊಮ್ಮಕ್ಕಳು- ಹೀಗೆ ಅವರ ಪ್ರೀತಿಯ ನೆರಳಿನಲ್ಲಿ ಬೆಳೆದವರು ಬರೋಬ್ಬರಿ 98 ಬಿಳಲುಗಳು. ಮೊನ್ನೆ ಅಜ್ಜಿ ತೀರಿಕೊಂಡರು. ಅವರ ಜೊತೆಗಿನ ಒಡನಾಟವನ್ನು ಮೊಮ್ಮಗಳೊಬ್ಬಳು ಶ್ರದ್ಧೆಯಿಂದ ನೆನೆಯುವ ಶ್ರದ್ಧಾಂಜಲಿ ಇದು.

        ಆವತ್ತು ಮನೆಯ ಮುಂದಿನ ಅಷ್ಟು ದೊಡ್ಡ ಅಂಗಳದಲ್ಲಿ ನಾವು ಮಕ್ಕಳೆಲ್ಲ ಸೇರಿಕೊಂಡಿದ್ದೆವು. ಅದೂ ಎಂಥಾ ಅಂಗಳ ಅಂತೀರಿ? ಜೇಡಿ ಮಣ್ಣಿನಿಂದಲೇ ಮಟ್ಟ ಮಾಡಿ ನೆಲವನ್ನು ನುಣ್ಣಗೆ ಮಾಡಲಾಗಿತ್ತು. ಸಿಮೆಂಟಿನಿಂದ ಗಾರೆ ಮಾಡಿದರೂ ಆಪಾಟಿ ನುಣುಪು ಬರಲಿಕ್ಕಿಲ್ಲ. ಅಂಥ ಚೆಂದದ ಅಂಗಳದ ತುಂಬ ಬೆಳದಿಂಗಳು ಹಾಲು ಹುಯ್ದಿತ್ತು.

        ಅಂಗಳದ ಒಂದು ಮೂಲೆಯಲ್ಲಿ ಕೆಲ ಮಕ್ಕಳು ಕುಂಟಾಬಿಲ್ಲೆ ಆಡಿದರೆ ಇನ್ನೊಂದು ಮೂಲೆಯಲ್ಲೆ ಚನ್ನೆಮಣೆ ಆಟ. ಅಂಗಣದ ತುಂಬಾ ಮಕ್ಕಳದ್ದೇ ಚಿಲಿಪಿಲಿ. ಸಂಭ್ರಮ, ಖುಷಿ. ಇದಕ್ಕೆ ಕಾರಣ ಇಷ್ಟೇ; ಆವತ್ತು ಬೆಳದಿಂಗಳ ಊಟ. ನೀರು ದೋಸೆ, ಕೋಳಿ ಸುಕ್ಕಾ, ಬಗೆಬಗೆಯ ಮೀನಿನ ಫ್ರೈ, ಮೆತ್ತಗಿನ ಇಡ್ಲಿ, ತುಪ್ಪದ ಅನ್ನ, ವಿವಿಧ ಸಿಹಿ ತಿಂಡಿಗಳು... ನಮಗೆಲ್ಲ ಹಬ್ಬವೇ ಹಬ್ಬ. ಅಂಗಳದ ತುಂಬಾ ಎಷ್ಟೊಂದು ಜನ. ಮಂಜಯ್ಯ ಅವರ ದೊಡ್ಡ ಕುಟುಂಬದ ಅಷ್ಟೂ ಮಂದಿ ಅಲ್ಲಿ ಸೇರಿದ್ದರು. ಎದುರಿಗಿದ್ದ ದೊಡ್ಡ ಮನೆಯಿಂದ ಬಗೆಬಗೆಯ ಬರುತ್ತಲೇ ಇದ್ದವು.

        ಇದು ಇವತ್ತಿನ ಮಾತಲ್ಲ. ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಇಂತಹದೊಂದು ಸಂಭ್ರಮ ಇರುತ್ತಿದ್ದುದು ಅಜ್ಜಿ ಮನೆಯಲ್ಲಿ ಮತ್ತು ಪ್ರತಿ ಬೆಳದಿಂಗಳಿನಲ್ಲಿ. ನಾವೆಲ್ಲ ಅಂತಹ ಸಂಭ್ರಮವನ್ನು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಇಂತಹ ಅನೇಕ ಸಡಗರಗಳಿಗೆ ಯಜಮಾನಿಯಂತೆ ಇದ್ದವರು ನಮ್ಮ ಅಜ್ಜಿ.

        ಅವರೇ ಲಕ್ಷ್ಮೀ ಬಾಯಿ.
        ಬೆಳದಿಂಗಳ ಊಟ ಇರಲಿ, ದೀಪಾವಳಿ ಇರಲಿ, ತುಳಸೀ ಪೂಜೆ ಇರಲಿ, ಮಕ್ಕಳ ಉಪನಯನವಿರಲಿ ಅಜ್ಜಿ ತಮ್ಮ ನೀಲಾ ನೀಲಿ ಸೆರಗನ್ನು ಸೊಂಟಕ್ಕೆ ಬಿಕ್ಕೊಂಡು ಎಲ್ಲವನ್ನೂ ಎಷ್ಟು ಚೆಂದದಿಂದ ನಿಭಾಯಿಸುತ್ತಿದ್ದರೆಂದರೆ ಅದನ್ನು ಮಾತಿನಲ್ಲಿ ಹೇಳುವುದು ಕಷ್ಟ. ಎಲ್ಲರನ್ನೂ ಪ್ರೀತಿಯಿಂದ ಬಾಚಿಕೊಳ್ಳುತ್ತಿದ್ದ ಅವರು ಬದುಕಿದ್ದು ಥೇಟ್‌ ಲಕ್ಷ್ಮೀಯಂತೆ. ಅವರು ನಮಗೆ ಕೊಟ್ಟ ಪ್ರೀತಿಯ ದ್ಯೋತಕವೋ ಎಂಬಂತೆ ಬದುಕಿದ್ದು ಪೂರ್ತಿ ನೂರಾ ಏಳು ವರ್ಷ. ಧಾರಾಳತನವೇ ಅವರಿಗೆ ದೊಡ್ಡ ಬದುಕನ್ನು ಕೊಟ್ಟುಬಿಟ್ಟಿತು. ಲಕ್ಷ್ಮೀಬಾಯಿ ಅವರಂತಹ ಅಜ್ಜಿ ಸಿಗುವುದು ಬಹಳ ವಿರಳ. ಅವರೇ ಹೇಳಿಕೊಂಡ ಹಾಗೆ ಅವರ ಮದುವೆ ನಡೆದಿದ್ದು 8ನೇ ವರ್ಷದಲ್ಲಿ. ಪುಟ್ಟಲಕ್ಷ್ಮಿಯಾಗಿ ಗಂಗೊಳ್ಳಿಯ (ಕುಂದಾಪುರ ತಾಲೂಕು) ಮಂಜಯ್ಯನವರ ಮನೆ ತುಂಬಿದವರು ಮುಂದೆ ಆ ಭಾರೀ ಕುಟುಂಬವನ್ನು ಹೆಗಲಿಗೆ ಏರಿಸಿಕೊಂಡು ಎಲ್ಲರನ್ನೂ ಸಲಹಿದರು. ಅನೇಕ ಕಷ್ಟ, ಕಾರ್ಪಣ್ಯಗಳನ್ನುಂಡವರು. ಆದರೂ ತನ್ನ ಬಂಧು-ಬಳಗದವರಿಗೆ, ತನ್ನ ಬಳಿಗೆ ಬಂದವರಿಗೆ, ಓರಗೆಯವರಿಗೆ, ಕಷ್ಟದಲ್ಲಿರುವವರಿಗೆ ಅಜ್ಜಿ ಪ್ರೀತಿಯಿಂದ, ನಿಸ್ವಾರ್ಥದಿಂದ ಸಹಾಯಹಸ್ತ ಚಾಚಿದರು. 'ಅಷ್ಟಲಕ್ಷ್ಮಿ'ಯಾಗಿ ಮನೆ ಬೆಳಗಿದರು.

        ಮೊನ್ನೆ ಮೊನ್ನೆ ಡಿಸೆಂಬರ್‌ ತಿಂಗಳಲ್ಲಿ ಅವರು ಬದುಕಿನ ಕೊನೆಯ ಪುಟವನ್ನು ಮುಗಿಸಿದಾಗ ದೊಡ್ಡ ಪರಿವಾರವೇ ಅಲ್ಲಿ ನೆರೆದಿತ್ತು. ನಮಗೆ ದೊಡ್ಡ ಆಲದಮರವೇ ಧರೆಗೆ ಉರುಳಿದಂತೆ ಅನಿಸಿತ್ತು. ಲಕ್ಷ್ಮೀಬಾಯಿ ಅವರಿಗೆ 8 ಜನ ಮಕ್ಕಳು, 30 ಮೊಮ್ಮಕ್ಕಳು, 54ಕ್ಕೂ ಹೆಚ್ಚು ಮರಿ ಮಕ್ಕಳು, 6 ಮರಿ ಮೊಮ್ಮಕ್ಕಳು- ಹೀಗೆ ಅವರ ಪ್ರೀತಿಯ ನೆರಳಿನಲ್ಲಿ ಬೆಳೆದವರು ಬರೋಬ್ಬರಿ 98 ಬಿಳಲುಗಳು. ಆಲದ ಮರದ ತಂಪಾದ ನೆರಳಲ್ಲಿ ಇರುವ ಸೌಭಾಗ್ಯವನ್ನು ಪಡೆದ ನಾವೆಲ್ಲರೂ ಭಾಗ್ಯಶಾಲಿಗಳೇ ಆಗಿದ್ದೇವೆ. ನಮ್ಮ ಅಜ್ಜಿಯೊಂದಿಗೆ ಕಳೆದ ಪ್ರೀತಿಯ ಕ್ಷಣಗಳ ಕೆಲವೇ ತುಣುಕುಗಳನ್ನು ಹಂಚಿಕೊಳ್ಳುವುದೆಂದರೆ ನಿಜಕ್ಕೂ ಹೆಮ್ಮೆ.

        ಓದು ಬರಹವಿಲ್ಲದ ಅಜ್ಜಿ ಹಳ್ಳಿಯ ಮುಗೆªಯಾದರೂ ಮಾನವೀಯ ತತ್ವಗಳನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಂಡರು ಎನ್ನುವುದು ಪ್ರಶ್ನಾತೀತ! ಅಷ್ಟು ದೊಡ್ಡ ಬಳಗ ಅವರದ್ದು. ಅದನ್ನು ಯೋಚನೆ ಮಾಡಿದರೇ ಈ ತಲೆಮಾರಿನ ಹುಡ್ಗಿàರು ಭಯ ಬಿದ್ದಾರು. ದೊಡ್ಡ ಮನೆತನದೊಂದಿಗೆ ಹೊಂದಿಕೊಂಡು, ನಿಷ್ಠೆ, ಪ್ರೀತಿಯಿಂದ, ಶ್ರದ್ಧೆಯಿಂದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸುಖ, ಸಂತೋಷ, ಸಮೃದ್ಧಿಯಿಂದ ಬಾಳಿ ಬದುಕಿದ ಲಕ್ಷ್ಮೀಬಾಯಿಯವರ ಜೀವನ ರೀತಿಗೆ ತಲೆದೂಗಬೇಕು. 'ಬದುಕಿದರೆ ಇನ್ನೊಬ್ಬರಿಗಾಗಿ ಬದುಕು' ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಪುಸ್ತಕಗಳನ್ನು ಓದದೇ, ಗ್ರಂಥಗಳ ನೋಡದೆ ಬದುಕಿದ ನಮ್ಮಜ್ಜಿ, ನಗುನಗುತ್ತಾ ಎಲ್ಲರಿಗೂ ಸಹಾಯ ಮಾಡುವ, ಬಳಿಗೆ ಕರೆದು ಪ್ರೀತಿ ತೋರುವ ಜೀವನೋತ್ಸಾಹಕ್ಕೆ ಯಾರಾದರೂ ಬೆರಗಾಗಲೇ ಬೇಕು. ಸ್ವಾರ್ಥದ ಕೋಟೆಯಲ್ಲಿ ತಮ್ಮನ್ನು ಬಂಧಿಸಿಕೊಂಡು ಒದ್ದಾಡುವ ಇಂದಿನ ಪೀಳಿಗೆಗೆ ನಮ್ಮಜ್ಜಿ ಮಾದರಿಯಾಗಿ ನಿಲ್ಲಬಲ್ಲರು. 100ರ ಹರೆಯದಲ್ಲೂ ಅಜ್ಜಿಯ ಪ್ರೀತಿ ಸವಿಯನ್ನು ನಾವು ಉಂಡಿದ್ದೇವೆ ಎನ್ನುವುದೇ ನಮ್ಮ ಪಾಲಿನ ಹೆಮ್ಮೆ.

        ನಾನು ಶಾಲೆಗೆಂದು ಗಂಗೊಳ್ಳಿಗೆ ಹೋಗುತ್ತಿದ್ದಾಗ ಮಧ್ಯಾಹ್ನದ ಊಟ ಅಂತ ಇದ್ದಿದ್ದು ಅಜ್ಜಿ ಮನೆಯಲ್ಲಿ. ನಾನು ಮತ್ತು ನನ್ನ ತಮ್ಮನಿಗೆ ದಪ್ಪ ಮೊಸರು ಹಾಕಿ ಊಟಕ್ಕೆ ಬಡಿಸುತ್ತಿದ್ದರು. ಪೂರ್ತಿ ಊಟ ಮುಗಿಸುವ ತನಕ ಅಜ್ಜಿ ನಮ್ಮ ಮುಂದೆಯೇ ಕುಳಿತುಬಿಡುತ್ತಿದ್ದರು, ಒಂದೇ ಒಂದು ತುತ್ತು ಬಿಡಲು ಅವರು ಅವಕಾಶ ಕೊಡುತ್ತಿರಲಿಲ್ಲ. ಅಜ್ಜಿ ಕೈಯೂಟವನ್ನು ಅರ್ಧಕ್ಕೆ ಬಿಟ್ಟು ಏಳುವ ಮನಸ್ಸು ನಾವು ಯಾವತ್ತೂ ಮಾಡುತ್ತಿರಲಿಲ್ಲ. ಅಷ್ಟೊಂದು ಸವಿಯದು, ಅಂತಹದೊಂದು ಸೆಳೆತ ಅವರಲ್ಲಿ. ಕಲ್ಲಿನೋಡ್‌ ಮತ್ತು ನೀರು ದೋಸೆ, ತೊಂಡೆಕಾಯಿ ಪಲ್ಯ, ಹಂಚಿನ ದೋಸೆ, ಕೋಳಿತಾಳ್‌Û, ಕಾಣೆ ಮೀನಿನ ಸಾರು, ಮೋಳಿತಾಳ್‌Û... ಹೀಗೆ ಲಿಸ್ಟು ಬೆಳೆಯುತ್ತದೆ. ಅವರ ಕೈಯಡುಗೆಯ ರುಚಿಯನ್ನು ನಮಗ್ಯಾರಿಗೂ ರಿಪೀಟ್‌ ಮಾಡಲು ಸಾಧ್ಯವಾಗಿಲ್ಲ! ನನ್ನ ಬಾಲ್ಯದ ಹೆಚ್ಚಿನ ದಿನಗಳನ್ನು ಅಜ್ಜಿಯ ಮನೆಯಲ್ಲಿ ಕಳೆಯುವ ಭಾಗ್ಯ ಸಿಕ್ಕಿದ್ದು, ನನ್ನ ಅದೃಷ್ಟವೆಂದೇ ಹೇಳಬೇಕು. ಇಲ್ಲವಾದರೆ ನಗರದ ಯಾವುದೋ ಒಂದು ಮೂಲೆಯಲ್ಲಿ ಕಳೆಯುತ್ತಿದ್ದರೆ ಜೀವನ ನಿಜಕ್ಕೂ ನೀರಸವಾಗುತ್ತಿತ್ತು. ಅಜ್ಜಿ ಮನೆಯ ಹಿತ್ತಲಿನಲ್ಲಿರುವ ನೊರೆಕಾಯಿ ಮರಕ್ಕೆ ಜೋಕಾಲಿ ಕಟ್ಟಿ ಆಡಿದ್ದು, ಕಾಳಪ್ಪಾಡಿ ಮಾವಿನ ಮರಹತ್ತಿ ಹಣ್ಣು ತಿನ್ನುತ್ತಾ ಮರಕೋತಿ ಆಡುತ್ತಾ ಬಿದ್ದಿದ್ದು, ಕೈಬಾವಿಯಿಂದ ನೀರು ಸೇದಿದ್ದು, ಗದ್ದೆಯಲ್ಲಿರುವ ಕೆರೆಯ ದಂಡೆಯಲ್ಲಿ ನಾವೆಲ್ಲ ಮಕ್ಕಳು ಸೇರಿ ಮಾವಿನ ಕಾಯಿ ಪಚ್ಚಡಿ ಮಾಡಿ ತಿಂದಿದ್ದು, ಮಕ್ಕಳೇ ಸೇರಿ ಈರುಳ್ಳಿ ಬೆಳೆದಿದ್ದು, ಭತ್ತ ಕುಟ್ಟುವ ಕೋಣೆಯಲ್ಲಿ ತಿಂಡಿ ಬಚ್ಚಿಟ್ಟು ಕಂಬಳಿ ಹೊದ್ದುಕೊಂಡು ಕದ್ದು ತಿನ್ನುವಾಗಲೇ ಅಜ್ಜಿ ಕೈಯಲ್ಲಿ ಸಿಕ್ಕಿಹಾಕಿಕೊಂಡದ್ದು, ತುಳಸಿ ಹಬ್ಬಕ್ಕೆ ಅಜ್ಜ ತರುವ ಪಟಾಕಿಗೋಸ್ಕರ ಜಗಳ ಆಡಿದ್ದು... ಇವೆಲ್ಲವೂ ನಾವು ಮರಳಿ ಪಡೆಯಲಾಗದ ದಿನಗಳು. ನಮ್ಮ ಮುಂದಿನ ತಲೆಮಾರಿಗೂ ಇಂತಹುದೊಂದು ಅನುಭವಗಳು ಸಿಗುತ್ತವೆ ಎಂಬುದು ಅನುಮಾನ. ನಮ್ಮ ದೊಡ್ಡ ಬಳಗ 'ಅಜ್ಜಿ' ಎನ್ನುವ ಹಗ್ಗದಿಂದ ಬಂಧಿಸಲ್ಪಟ್ಟಿತ್ತು. ಜೀವನದ ಚದುರಂಗದಲ್ಲಿ ನಾವೆಲ್ಲರೂ ಚದುರಿ ಹೋಗಿದ್ದರೂ ನಮ್ಮನ್ನು ಆಗಾಗ ಸೆಳೆಯುತ್ತಿದ್ದುದು 'ಅಜ್ಜಿಯ ಮನೆ'.

        ಇದಕ್ಕೆಲ್ಲಾ 'ಕೇಂದ್ರ ಬಿಂದು' ಆಗಿದ್ದವರು ಅಜ್ಜಿ ಮತ್ತು ಅಜ್ಜಿ ಮಾತ್ರ. ಗಿಡ್ಡ ದೇಹ, ಗುಂಡುಗುಂಡಗೆ ಇದ್ದ ನಮ್ಮಜ್ಜಿ ಎಂಟು ಮಕ್ಕಳ ತಾಯಿಯಾಗಿದ್ದರೂ ಕೂಡ ಇಳಿ ವಯಸ್ಸಿನಲ್ಲೂ ಅವರ ಸೌಂದರ್ಯ ಮಾಸಿರಲಿಲ್ಲ. 100ರ ಹರೆಯದಲ್ಲೂ ಗಟ್ಟಿ ಮುಟ್ಟಾಗಿದ್ದರು. ಒಂದು ದಿನವೂ ಆಸ್ಪತ್ರೆ ಸೇರಿದವರಲ್ಲ. ಪ್ರೀತಿ, ನಿಸ್ವಾರ್ಥ, ಆನಂದ, ಸದಾ ಲವಲವಿಕೆ, ಕೆಲಸವನ್ನೇ ನಂಬಿಕೊಂಡಿದ್ದ ಬದುಕೇ ಅವರ ಆರೋಗ್ಯದ ಬಹುದೊಡ್ಡ ಗುಟ್ಟು. ಯಾರನ್ನೂ ಅವರು ಅಸೂಯೆಯಿಂದ ನೋಡಿದವರಲ್ಲ. ಇದು ಅವರನ್ನು ಕೊನೆಯ ಕಾಲದವರೆಗೂ ಸಲಹಿತ್ತು. ಅವರು ಇತರರಿಗೆ ಕೊಟ್ಟ ಪ್ರೀತಿ ಅವರಿಗೆ ಪೂರ್ಣ ಬದುಕನ್ನು ಕೊಟ್ಟಿತು ಎಂಬುದೇ ನನ್ನ ನಂಬಿಕೆ.

        ಅಜ್ಜಿಯ ಬಳಿ ಬಣ್ಣ ಬಣ್ಣದ ತರಾವರಿ ಜರತಾರಿ ಸೀರೆಗಳಿದ್ದವು. ನನಗೆ ಅಜ್ಜಿಯ ಸೀರೆಯ ಮೇಲೆಯೇ ಯಾವತ್ತೂ ಕಣ್ಣು, ಎಲ್ಲಿಲ್ಲದ ಪ್ರೀತಿ. ಅಜ್ಜಿಯ ಸೀರೆಯನ್ನು ಉಡುವುದೆಂದರೆ ಏನೋ ಒಂದು ಮಧುರ ಭಾವ. ಅನೇಕ ಬಾರಿ ಅವರ ಸೀರೆ ಉಟ್ಟು ಸಂತೋಷಪಟ್ಟಿದ್ದೆ. ಅವರಲ್ಲೊಂದು ಹೊಸ ಸೀರೆ ಇತ್ತೆಂದರೆ ಅದನ್ನು ಕೊನೆಗೆ ಕದ್ದಾದರೂ ಉಡಲೇಬೇಕು. ಇದು ಅಜ್ಜಿಗೂ ಗೊತ್ತಿರುವ ವಿಚಾರವೇ ಆಗಿತ್ತು. ಅವರೇ ಎಷ್ಟೋ ಬಾರಿ ತಮ್ಮ ಸೀರೆಗಳನ್ನು ಕೊಟ್ಟು ಸಮಾರಂಭಗಳಿಗೆ ನನ್ನನ್ನು ಕಳಿಸುತ್ತಿದ್ದರು. ಎಲ್ಲ ವಿಚಾರದಲ್ಲೂ ಅಜ್ಜಿ ಸಾûಾತ್‌ ಲಕ್ಷಿ$¾à. ಸೀರೆ ಇದ್ದ ಹಾಗೆ ಅವರ ಬಳಿ ಬಗೆಬಗೆಯ ಒಡವೆಗಳೂ ಇದ್ದವು. ಮೈತುಂಬಾ ಒಡವೆ ಇದ್ದರೇನೇ ಅಜ್ಜಿಗೆ ಖುಷಿ. ಲಕ್ಷಿ$¾àದೇವಿ ತನ್ನ ಭಕ್ತರಿಗೆ ಸಂಪತ್ತನ್ನು ಹಂಚುವಂತೆ ನಮ್ಮ ಲಕ್ಷಿ$¾à ಅಜ್ಜಿ ತನ್ನ ಬಳಿ ಇರುವ ಒಡವೆಗಳನ್ನೆಲ್ಲಾ ಮಕ್ಕಳು, ಮೊಮ್ಮಕ್ಕಳಿಗೆ ಹಂಚಿ ತೃಪ್ತಿಪಟ್ಟವರು. ಬಂಗಾರವೆಂದರೆ ಮಾತ್ರ ಅಜ್ಜಿಗೆ ಅಪಾರ ಆಸೆ. ನೂರು ದಾಟಿದ ಮೇಲೂ ಅವರು ಮಕ್ಕಳಿಂದ ಚಿನ್ನದ ಬಳೆಗಳನ್ನು ಮಾಡಿಸಿಕೊಂಡಿದ್ದರು. ಅದು ಕೊನೆಯ ದಿನಗಳವರೆಗೂ ಇತ್ತು. ಯಾಕೋ ಅವರಿಗೆ ಬಂಗಾರವನ್ನು ಹಾಕಿಕೊಂಡರೆ ಮಾತ್ರ ಭದ್ರತೆಯ ಭಾವನೆ ಕೊಡುತ್ತಿತ್ತು.

        ಆ ದಿನಗಳು ನಿಜಕ್ಕೂ ಸವಿದಷ್ಟೂ ಸಿಹಿ. ಕೋಟಿ ಕೊಟ್ಟರೂ ಮತ್ತೆ ಬರಲಾರದ ದಿನಗಳವು. ನಗರದ ಗಡಿಬಿಡಿಯ, ಧಾವಂತದ ಸತ್ವವಿಲ್ಲದ ಯಾಂತ್ರಿಕ ಜೀವನದಲ್ಲಿ ನಾವೆಲ್ಲೊ ಕಳೆದು ಹೋಗುತ್ತಿದ್ದೇವೆ. ಆತ್ಮೀಯ ಸಂಬಂಧಗಳು ಮಾಯವಾಗಿವೆ. ಆಧುನಿಕತೆಗೆ ಮಾರುಹೋಗಿ ವಿಶ್ವಾಸವಿಲ್ಲದ ಪ್ರೀತಿ, ಅನ್ಯೋನ್ಯತೆ ಇಲ್ಲದ ನೀರಸವಾದ ಜೀವನದಲ್ಲಿ ಬಂಧಿಗಳಾಗಿದ್ದೇವೆ. ಆಧುನಿಕತೆಯ ಅಬ್ಬರದಲ್ಲಿ ನಾವೆಲ್ಲರೂ ನಮಗರಿವಿಲ್ಲದಂತೆ ಕೊಚ್ಚಿ ಹೋಗುತ್ತಿದ್ದೇವೆ. ಪೈಪೋಟಿಯ ಜೀವನದಲ್ಲಿ ಮೈಮರೆತು ಬಿಟ್ಟಿದ್ದೇವೆ. ಅಜ್ಜಿಯಂತೆ ಬದುಕಲು ನಮಗ್ಯಾರಿಗೂ ಸಾಧ್ಯವಿಲ್ಲ. ಅಜ್ಜಿ ಬದುಕನ್ನು ಪ್ರೀತಿಸಿದರು. ಬದುಕು ಅವರನ್ನು ಪ್ರೀತಿಸಿತು. ಬದುಕೆಂದರೆ ಹಣವಲ್ಲ. ನಾನು ನನ್ನದೆನ್ನುವ ಸ್ವಾರ್ಥವಲ್ಲ. ನಮ್ಮ ಸಂಬಂಧಗಳಲ್ಲಿ ಒಲವಿದ್ದರೆ ಮಾತ್ರ ಬದುಕು ಸುಂದರ ಹಾಗೂ ಅರ್ಥಪೂರ್ಣ ಎಂಬುದಕ್ಕೆ ಲಕ್ಷ್ಮೀಬಾಯಿ ನಮಗೆ ಸಾಕ್ಷಿ. ಅದಕ್ಕಾಗಿಯೇ ಅವರು ಐದು ತಲೆಮಾರುಗಳು ತನ್ನ ಮುಂದೆ ನಲಿದಾಡುವುದನ್ನು ಕಂಡರು. ನಮ್ಮ ಅಜ್ಜ ತೀರಿಕೊಂಡಿದ್ದು 1973ರಲ್ಲಿ. ಆ ಬಳಿಕ ಅಜ್ಜಿ ಅಷ್ಟೂ ಜವಾಬುದಾರಿಕೆಯನ್ನು ಹೆಗಲಿಗೆ ಹಾಕಿಕೊಂಡು ಬದುಕಿದ್ದು ಬರೋಬ್ಬರಿ ನಲವತ್ತು ವರ್ಷ. ಬೆಳ್ಳಗಿನದೊಂದು ರವಿಕೆ, ನೀಲಿ ಸೀರೆ ಉಟ್ಟು ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳನ್ನೆಲ್ಲ ಹುರಿದುಂಬಿಸುತ್ತಿದ್ದ ಚಿತ್ರ ಈಗಲೂ-ನಾಳೆಯೂ ಹಚ್ಚಹಸಿರು. ಅಜ್ಜಿ ಕಳೆದ ಶತಮಾನದಲ್ಲಿ ನನ್ನದೂ ಅರ್ಧ ಶತಮಾನ ಎಂಬ ಹೆಮ್ಮೆ ನನಗೆ ಹಾಗೂ ನನ್ನಂತಹ ಮಕ್ಕಳು ಮೊಮ್ಮಕ್ಕಳಿಗೆ.
        'ಅಜ್ಜಿ ನೀನು ಮತ್ತೂಮ್ಮೆ ನಮ್ಮ ಕುಟುಂಬದಲ್ಲೇ ಹುಟ್ಟಿ ಬಾ'.

        -ಸತ್ಯವತಿ ಎಂ. ಶೆಟ್ಟಿ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕಿರುತೆರೆ ಮತ್ತು ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದವರು ಸುಶ್ಮಿತಾ. ''ಕವಲುದಾರಿ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತರೆಗೂ, ''ಎಕ್ಸ್‌ಕ್ಯೂಸ್‌ ಮಿ' ಮೂಲಕ ಹಿರಿತ
      • ಈ ವಿಭಾಗದಲ್ಲಿಯೂ ಇದೆ
      • picವಸಂತ ಬರೆದನು ಒಲವಿನ ಓಲೆ...
        ಹೇಳಿ ಕೇಳಿ ಇದು ಮೇ ತಿಂಗಳು. ಇಂಗ್ಲೆಂಡ್‌ನ‌ಂಥ ದೇಶಕ್ಕೆ ಲವಲವಿಕೆಯ ಕಾಲವಿದು. ಅಂತೂ ಎಲ್ಲರೂ ಕಾಯುತ್ತಿರುವ ಸ್ಪ್ರಿಂಗ್‌ ಕಾಲ ಬಂದುಬಿಟ್ಟಿತು ಎಂಬುದು ಸಂತಸದ ವಿಷಯ.
      image
      • Copyright @ 2009 Udayavani.All rights reserved.
      • Designed & Hosted By 4cplus