ಕೃಷ್ಣ ಕೊಲ್ಹಾರ ಕುಲಕರ್ಣಿ | Feb 03, 2013
ಒಂದು ಕಾಲದಲ್ಲಿ ಜಗತ್ತಿನ ಎರಡನೆಯ ಅತಿ ದೊಡ್ಡ ಪಟ್ಟಣವೆಂದು ಪ್ರಸಿದ್ಧಿ ಪಡೆದಿದ್ದ ಬಿಜಾಪುರ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಳ್ಳುತ್ತಿದೆ. ಬಿಜಾಪುರದ ಇತಿಹಾಸದ ಪುಟಗಳನ್ನು ಸುಮ್ಮನೆ ಮಗುಚುತ್ತ ಹೋದರೂ ಅಲ್ಲಿನ ಸಾಂಸ್ಕೃತಿಕ ಸಿರಿವಂತಿಕೆ ಬೆರಗುಗೊಳ್ಳುವಂತಿದೆ.
ಆಗಮಿಸಲಿರುವ ಸಾಹಿತ್ಯಪ್ರೇಮಿಗಳನ್ನು ದೂರದಿಂದಲೇ ಸ್ವಾಗತಿಸುವ ಗುಮ್ಮಟಗಳ ಗೋಡೆಯಲ್ಲೊಮ್ಮೆ ಕಿವಿಯಿಟ್ಟರೆ ಕೇಳಿಸತೊಡಗುತ್ತವೆ... ಇತಿಹಾಸದ ರೋಚಕ ಕಥೆಗಳು...
ನೀವು ಈಗ ಪ್ರಪಂಚದ ವಿಸ್ಮಯಗಳಲ್ಲೊಂದನ್ನು ಕಾಣಲು ಬರುತ್ತಿದ್ದೀರಿ. ಪರಸ್ಪರ ವಿರೋಧ ಸಂಸ್ಕೃತಿಯೆಂದು ಭಾವಿಸಲಾದ ಎರಡು ಸಾಮ್ರಾಜ್ಯಗಳಿಗೆ ಜನ್ಮಕೊಟ್ಟ ಬಿಜಾಪುರ ಪರಿಸರದಂಥ ಇನ್ನೊಂದು ಪ್ರದೇಶ ಈ ದೇಶದಲ್ಲಿಯೇ ಇರಲಿಕ್ಕಿಲ್ಲ. ಬಾದಾಮಿಯ ಚಾಲುಕ್ಯರ (ಕ್ರಿ. ಶ. 6-7ನೇ ಶತಮಾನ) ಹಾಗೂ ಬಿಜಾಪುರದ ಆದಿಲ್ ಶಾಹಿ (ಕ್ರಿ.ಶ. 15-16ನೆಯ ಶತಮಾನ) ರಾಜ್ಯಗಳಿಗೆ ತಾಯಿಯೆನಿಸಿ ಅಪರೂಪದ ವಾಸ್ತುಶಿಲ್ಪ ವೈವಿಧ್ಯವನ್ನು ನೀಡಿದ ಪ್ರದೇಶವಿದು. ಜೊತೆಗೆ ವಿಭಿನ್ನ ಸಂಸ್ಕೃತಿಯ ಕಲೆ, ಸಾಹಿತ್ಯ, ಸಂಗೀತಗಳಿಗೂ ಇದು ಆಶ್ರಯ ತಾಣ. ಪ್ರದೇಶದಾದ್ಯಂತ ಅವಶೇಷಗಳು, ವಾಸ್ತುಶಿಲ್ಪಗಳು, ಗುಡಿ ಗುಂಡಾರಗಳು, ಮಂದಿರ ಮಸೀದಿಗಳು ಇಂದಿಗೂ ಜೀವಂತ ಉದಾಹರಣೆಯಾಗಿ ನಿಂತಿವೆ. ಅವುಗಳು ಮಾತನಾಡುವುದಿಲ್ಲ, ನಿಜ. ಆದರೆ, ಪ್ರವಾಸಿಯ ಕಣ್ಣು ಕೋರೈಸಿ ಕಳೆದ ದಿನಗಳ ಭವ್ಯತೆಯನ್ನು ಮೂಡಿಸಿ ಅಬ್ಟಾ ಎಂದು ಬಾಯಿತೆರೆಸುತ್ತವೆ!
ಯಾವ ದಿಕ್ಕಿನಿಂದಲೇ ಬನ್ನಿ. ಇನ್ನು ಹತ್ತೆಂಟು ಕಿಲೋಮೀಟರ್‌ಗಳಿರುವಾಗ ಬಾನಗುಂಟ ಉದಿಸುವ ಜಾಗತಿಕ ಪ್ರಸಿದ್ಧಿಯ ಗೋಲಗುಮ್ಮಟ, ಹತ್ತಿರ ಬಂದಂತೆ ಬಾನು ಭುವಿಗಳನ್ನು ಒಂದಾಗಿಸುತ್ತ ಭವ್ಯವಾಗಿ ಕಾಣುತ್ತದೆ. ಜೊತೆಗೆ, ಸಾವಕಾಶವಾಗಿ ಕಾಣಹತ್ತುವ ಜುಮ್ಮಾ ಮಸೀದಿಯ ಕಪ್ಪು ಗುಮ್ಮಟ ಅತ್ತ ಪಶ್ಚಿಮದಲ್ಲಿ ಸೂಕ್ಷ್ಮ ಕೆತ್ತನೆಯ ಇಬ್ರಾಹಿಂ ರೋಜಾ ಕಾಣಿಸುತ್ತದೆ. ಊರ ಮುಂದೆ ಬಂದಾಗ ಅಂಥದೇ ಸಣ್ಣಪುಟ್ಟ ನೂರಾರು ಗುಮ್ಮಟಗಳು, ಸುತ್ತುವರಿದಿರುವ ಕೋಟೆ ಗೋಡೆ ಎದುರು ನಿಲ್ಲುತ್ತವೆ. ಇದು ಬಿಜಾಪುರ.
ಬಿಜಾಪುರ ಜಿಲ್ಲೆ ಪ್ರೇಕ್ಷಣೀಯವಷ್ಟೇ ಅಲ್ಲ , ಪ್ರಾಚೀನ ನಗರಿಯೂ ಹೌದು. ಅದರ ಪ್ರಾಚೀನತೆ ರಾಮಾಯಣದ ಕಾಲದವರೆಗೂ ಹೋಗುತ್ತದೆ. ಕ್ರಿ.ಪೂ. 2ನೇ ಶತಮಾನದ ಈಜಿಪ್ತ್ನ ಖ್ಯಾತ ಭೂಗೋಳಜ್ಞ ಟಾಲೆಮಿಯು ಈ ಪ್ರದೇಶಗಳನ್ನು ಉಲ್ಲೇಖೀಸಿದ್ದಾನೆ. ಕ್ರಿ. ಶ. 6ರಿಂದ 9ನೇ ಶತಮಾನದವರೆಗೆ ಬಿಜಾಪುರವು ಬಾದಾಮಿಯ ಚಾಲುಕ್ಯರ ಅಧೀನದಲ್ಲಿತ್ತು. ಕಲ್ಯಾಣಿ ಚಾಲುಕ್ಯರ ಖ್ಯಾತ ರಾಜ 6ನೆಯ ವಿಕ್ರಮಾದಿತ್ಯನ (ಕ್ರಿ.ಶ. 1023) ಎರಡನೆಯ ರಾಜಧಾನಿ ಇದಾಗಿತ್ತೆಂದೂ, ಕ್ರಿ.ಶ. 1199ರಲ್ಲಿ ದೇವಗಿರಿಯ ಯಾದವರ ಆಂಶಿಕಕಾಲೀನ ರಾಜಧಾನಿಯಾಗಿತ್ತೆಂದೂ ಇಲ್ಲಿನ ಶಾಸನಗಳು ತಿಳಿಸುತ್ತವೆ. ಈ ಕಾಲದಲ್ಲಿಯೇ ಇಲ್ಲಿ ಕರ್ನಾಟಕದ ಸುಪ್ರಸಿದ್ಧ ಜೈನಕವಿ ನಾಗಚಂದ್ರನು ಪಂಪ ರಾಮಾಯಣ, ಮಲ್ಲಿನಾಥ ಪುರಾಣಗಳನ್ನು ಬರೆದನು. ಆತ ಜೈನ ಬಸದಿಯೊಂದನ್ನು ಕಟ್ಟಿಸಿದ್ದನೆಂಬ ಐತಿಹ್ಯವಿದೆ. ಮಧ್ಯಯುಗೀನ ಕಾಲದ ಇನ್ನೊಬ್ಬ ಕನ್ನಡದ ಮಹಾಕವಿ ನರಹರಿ ತನ್ನ ಕಾವ್ಯ ರಾಮಾಯಣವನ್ನು ಇಲ್ಲಿಯೇ ಬರೆದದ್ದು. ಅದು ತೊರವೆೆ ರಾಮಾಯಣವೆಂದೇ ಪ್ರಸಿದ್ಧಿಯಾಗಿದೆ.
ಯಾದವರ ರಾಜ್ಯ ಮುಸ್ಲಿಮರ ಪಾಲಾದಾಗ ಕ್ರಿ.ಶ. 1312ರಲ್ಲಿ ಕರಿಮುದ್ದೀನನು ಪ್ರಥಮ ರಾಜ್ಯಪಾಲನಾಗಿ ಬಿಜಾಪುರಕ್ಕೆ ಬಂದ. ಅವನು ಕಟ್ಟಿಸಿದ ಇಲ್ಲಿಯ ಪಾಳುಬಿದ್ದ ಹಿಂದೂ ಮಂದಿರಗಳ ತೊಲೆ ಮತ್ತು ಕಂಬ ಗಳಿಂದ ಕಟ್ಟಿಸಿದ "ಕರಿಮುದ್ದೀನ್ ಮಸೀದಿ' ಬಿಜಾಪುರದ ಮೊದಲ ಮುಸ್ಲಿಮ್ ಕುರುಹು. ಕ್ರಿ.ಶ. 1346ರಲ್ಲಿ ಹೊಸ ರಾಜಧಾನಿ ಕಲುºರ್ಗಿಯಲ್ಲಿ ಬಹಮನಿ ರಾಜ್ಯ ಸ್ಥಾಪನೆಯಾದಾಗ ಬಿಜಾಪುರವು ಒಂದು ಪ್ರಾಂತ್ಯವಾಯಿತು. ಬಹಮನಿಗಳ ಆಂತರಿಕ ಗಲಭೆಗಳ ವಿವಿಧ ಪ್ರಾಂತ್ಯಗಳು ತಮ್ಮ ಸ್ವಾತಂತ್ರ್ಯ ವನ್ನು ಸಾರಿದಾಗ ಕ್ರಿ.ಶ. 1489ರಲ್ಲಿ ರಾಜ್ಯಪಾಲನಾಗಿದ್ದ ಯೂಸುಫ್ ಖಾನನು ಬಿಜಾಪುರದಲ್ಲಿ ತನ್ನ ಹೊಸ ಆದಿಲ್‌ಶಾಹಿ ರಾಜ್ಯವನ್ನು ಪ್ರಾರಂಭಿ ಸಿದನು. ಆದಿಲ್ ಎಂಬುದು ಪರ್ಶಿಯನ್ ಶಬ್ದ. ಅದರ ಅರ್ಥ ನ್ಯಾಯ.
ಯೂಸುಫ್ ಖಾನನು ಬಿಜಾಪುರದಲ್ಲಿ ತನ್ನ ಸ್ವತಂತ್ರ ರಾಜ್ಯವನ್ನು ಪ್ರಾರಂಭಿಸುವ ಹೊತ್ತಿಗೆ ತುಂಗಭದ್ರೆಯ ದಡದಲ್ಲಿಯ ವಿಜಯನಗರ ಸಾಮ್ರಾಜ್ಯವು ತನ್ನ ಉಚ್ಛಾ†ಯ ಸ್ಥಿತಿಯಲ್ಲಿ ಇದ್ದಿತು. ಅಂಥದೇ ಒಂದು ಸಾಮ್ರಾಜ್ಯ ಉತ್ತರ ಭಾರತದಲ್ಲಿ ಮೊಘಲರದ್ದಾಗಿತ್ತು. ಅವು ತಮ್ಮದೇ ಆದ ಸಾಹಿತ್ಯ, ಶಿಲ್ಪ , ಸಂಗೀತ ಇತ್ಯಾದಿಗಳಲ್ಲಿ ಅಭಿವೃದ್ಧಿ ಹೊಂದಿದ್ದವು. ಬಿಜಾಪುರ ರಾಜ್ಯವು ಸ್ವತಂತ್ರ ರಾಜ್ಯವಾಗಿದ್ದರೂ ಅದೊಂದು ಪುಟ್ಟ ಸಂಸ್ಥಾನದಂತಿತ್ತು. ಮುಕ್ಕಾಲು ಶತಮಾನ ಹೀಗೆ ಕುಂಟುತ್ತ ಸಾಗಿದ್ದ ಆದಿಲ್‌ಶಾಹಿ ರಾಜ್ಯದ ದೈವ ತೆರೆದದ್ದು ಕ್ರಿ.ಶ. 1565ರ "ರಕ್ಕಸತಂಗಡಿ' ಕಾಳಗದಲ್ಲಿ. ಈ ಘನಘೋರ ಕಾಳಗದಲ್ಲಿ ವಿಜಯನಗರವು ಸೋತುಸುಣ್ಣವಾದಾಗ ಆದಿಲ್‌ಶಾಹಿಗಳು ತಮ್ಮ ಭಂಡಾರವನ್ನು ತುಂಬಿಕೊಂಡರು. ಕೃಷ್ಣಾ , ಭೀಮಾ ನದಿಗಳ ಮಧ್ಯಕ್ಕೆ ಸೀಮಿತವಾಗಿದ್ದ ಆದಿಲ್‌ಶಾಹಿ ರಾಜ್ಯ ಒಮ್ಮೆಲೇ ಪಶ್ಚಿಮ-ಪೂರ್ವಗಳಲ್ಲಿ ಕೊಂಕಣ ದಿಂದ ಕೃಷ್ಣಾ-ತುಂಗಾಭದ್ರೆಯರ ಸಂಗಮದವರೆಗೂ ವಿಸ್ತಾರವಾಯಿತು. ಫಲವತ್ತಾದ ಪ್ರದೇಶ, ಕೊಳ್ಳೆ ಹೊಡೆದು ತಂದ ಅಗಣಿತ ಸಂಪತ್ತು ಮುಂದಿನ ದಿನಗಳಲ್ಲಿ ಬಿಜಾಪುರ ನಗರ ಹಾಗೂ ರಾಜ್ಯದ ಅದ್ಭುತ ಪ್ರಗತಿಗೆ ದಾರಿ ಮಾಡಿಕೊಟ್ಟವು.
ಮುಂದಿನ ಸುಮಾರು 120 ವರ್ಷಗಳಲ್ಲಿ ಬಿಜಾಪುರವನ್ನು ಆಳಿದವರು ನಾಲ್ವರು ಆದಿಲ್‌ಶಾಹಿ ರಾಜರು. ಇಬ್ರಾಹಿಂ ಆದಿಲ್ ಶಾ (91580-1626), ಅವನ ಮಗ ಮಹಮ್ಮದ್ ಆದಿಲ್ ಶಾ (1626- 1656) ಇವರುಗಳ ಕಾಲದಲ್ಲಿ ರಾಜ್ಯವು ಸಾಮ್ರಾಜ್ಯವಾಗಿ ವೈಭವದ ತುತ್ತತುದಿಯನ್ನು ಮುಟ್ಟಿತು. ಆದಿಲ್‌ಶಾಹಿ (ಬಿಜಾಪುರ) ಸಾಮ್ರಾಜ್ಯ ಮಹಮ್ಮದ್ ಆದಿಲ್ ಶಾ ಮರಣ ಹೊಂದಿದಾಗ ದಕ್ಷಿಣೋತ್ತರ ತಂಜಾವೂರ ದಿಂದ ಪಶ್ಚಿಮ ಕರಾವಳಿ ಸಹಿತ ಮುಂಬಯಿವರೆಗೆ ಹಬ್ಬಿತ್ತು. ಮಹಮ್ಮದನ ಮಗ ಎರಡನೇ ಅಲಿಯ ಕಾಲದಲ್ಲಿ ರಾಜ್ಯ ಅವನತಿಯತ್ತ ಸಾಗಲು ಆರಂಭ ವಾಗಿ ಅವನ ಮಗ ಸಿಕಂದರನ ಕಾಲದಲ್ಲಿ (ಕ್ರಿ.ಶ. 1686ರಲ್ಲಿ) ಬಿಜಾಪುರವು ಔರಂಗಜೇಬನ ವಶವಾಗಿ ದೆಹಲಿಯ ಮೊಘಲ್ ಸಾಮ್ರಾಜ್ಯದಲ್ಲಿ ಸೇರಿಕೊಂಡಿತು.
1725ರವರೆಗೆ ಮೊಘಲರ ವಶದಲ್ಲಿದ್ದ ಬಿಜಾಪುರವು ಅಂದು ಸ್ವತಂತ್ರವಾದ ಹೈದರಾಬಾದಿನ ಅಸಫ್ಜಾಹಿ ಆಡಳಿತಕ್ಕೆ ಒಳಪಟ್ಟಿತು. 1760ರಲ್ಲಿ ಬಾಲಾಜಿ ಪೇಶ್ವೆಯ ವಶವಾಯಿತು. 1818ರಲ್ಲಿ ಪೇಶ್ವೆಗಳ ಅವನತಿ ಯಿಂದಾಗಿ ಸತಾರಾದ ರಾಜನ ಅಧೀನವಾಯಿತು. ಸತಾರಾದ ರಾಜ ಛತ್ರಪತಿ ಶಹಾಜಿಯು ಗಂಡು ಸಂತತಿಯಿಲ್ಲದೆ 1848ರಲ್ಲಿ ಸತ್ತಾಗ ಈ ಪ್ರದೇಶವೆಲ್ಲ ಬ್ರಿಟಿಷರ ವಶವಾಯಿತು ಹಾಗೂ ಸತಾರಾ ಜಿಲ್ಲೆಯ ಒಂದು ಹಳ್ಳಿ ಬಿಜಾಪುರವಾಯಿತು. 1863ರಲ್ಲಿ ಸೊಲ್ಲಾಪುರ ಜಿಲ್ಲೆಗೆ ವರ್ಗಾವಣೆಯಾಯಿತು. ಮರುವರ್ಷ ಕಲಾದಗಿ ಜಿಲ್ಲೆ ನಿರ್ಮಾಣವಾದಾಗ ಬಿಜಾಪುರವು ತಾಲೂಕು ಸ್ಥಳವಾಗಿ ಆ ಜಿಲ್ಲೆಗೆ ಸೇರಿತು. ಒಂದೊಮ್ಮೆ 13 ಲಕ್ಷಕ್ಕಿಂತ ಅಧಿಕವಾಗಿದ್ದ ಬಿಜಾಪುರ ನಗರದ ಜನಸಂಖ್ಯೆ ಈ ದಿನಗಳಲ್ಲಿ 12 ಸಾವಿರಕ್ಕೆ ಬಂದು ನಿಂತಿತ್ತು.
ಇಲ್ಲಿಯ ಹಾಳುಬಿದ್ದ ವಿಶಾಲ ಕಟ್ಟಡಗಳನ್ನು ಗಮನಿಸಿ. ಬ್ರಿಟಿಷರು 1885ರಲ್ಲಿ ಬಿಜಾಪುರವನ್ನು ಜಿಲ್ಲಾ ಸ್ಥಳವನ್ನಾಗಿ ಮಾಡಿದರು. ಬಹುತೇಕ ಕಟ್ಟಡಗಳು ಜಿಲ್ಲೆಯ ಆಡಳಿತ ಕಚೇರಿಗಳಾದವು. ಅದರಿಂದಾಗಿ ಅವು ಮತ್ತೆ ಸುಣ್ಣಬಣ್ಣವನ್ನು ಕಂಡವು. ಸ್ವಾತಂತ್ರಾéನಂತರವೂ ಹಲವಾರು ಸರಕಾರಿ ಕಚೇರಿಗಳು, ಅಧಿಕಾರಿಗಳ ವಸತಿಗೃಹಗಳು ಇನ್ನೂ ಆದಿಲ್‌ಶಾಹಿ ಕಟ್ಟಡಗಳಲ್ಲಿಯೇ ಮುಂದುವರಿದಿವೆ.
ಸಾಂಸ್ಕೃತಿಕ, ಸಾಹಿತ್ಯಿಕ ವೈಭವ
ಬಿಜಾಪುರದ ಬಾದಶಹರು ಹಾಗೂ ಕೆಲವು ರಾಣಿಯರು ಅಕ್ಷರಪ್ರಿಯರಾಗಿದ್ದರು.
ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದರು. ಲಲಿತಕಲೆ, ಶಿಲ್ಪಕಲೆಗಳಲ್ಲೂ ಅವರಿಗೆ ಅದಮ್ಯ ಆಸಕ್ತಿ ಇದ್ದಿತು. ಬಾದಶಹರು ಶ್ರೇಷ್ಠ ಯೋಧರಾಗಿದ್ದಂತೆ ಸಾಮಾಜಿಕ ಕಳಕಳಿ ಉಳ್ಳವರೂ ಆಗಿದ್ದರು. ಸಾಹಿತ್ಯ, ಸಂಗೀತ ಕಲೆಗಳ ಪೋಷಕರೂ ಆಗಿದ್ದರು. ಸ್ವತಃ ಸಾಹಿತಿಗಳೂ ಸಂಗೀತಗಾರರೂ ಕಲಾವಿದರೂ ಆಗಿದ್ದರು. ಆದಿಲ್‌ಶಾಹಿ ರಾಜ್ಯದ ಸ್ಥಾಪಕ ಯೂಸುಫ್ ಆದಿಲ್ ಖಾನನು ಕಾವ್ಯಪ್ರೇಮಿಯಾಗಿದ್ದ, ಸ್ವತಃ ಕವಿಯಾಗಿದ್ದ.
ಪರ್ಶಿಯಾದಿಂದ ಹೆಸರಾಂತ ಕವಿ, ಸಾಹಿತಿಗಳನ್ನು ಕರೆಯಿಸಿಕೊಂಡಿದ್ದನು. ಸ್ವತಃ ಸಂಗೀತಗಾರನೂ ಆಗಿದ್ದನು. ತಂಬೂರಿ ಹಾಗೂ "ಉದ್' ಎಂಬ ವಾದ್ಯಗಳಲ್ಲಿ ಪರಿಣತನಾಗಿದ್ದನು ಎಂದು ಇತಿಹಾಸಕಾರರು ಉಲ್ಲೇಖೀಸಿದ್ದಾರೆ. ಆತನ ಮಗ ಇಸ್ಮಾಯಿಲ್ ಕಾವ್ಯ-ಸಂಗೀತಗಳಲ್ಲಿ ನಿರತನಾಗಿರುತ್ತಿದ್ದನು. ಕೆಲವು ಬಣ್ಣದ ಚಿತ್ರಗಳು ಇದನ್ನು ದೃಢಪಡಿಸುತ್ತವೆ. ಒಂದು ಚಿತ್ರದಲ್ಲಿ ಅವನು ಸಿತಾರ್ ವಾದ್ಯವನ್ನೂ ನುಡಿಸುತ್ತ ಕುಳಿತಿರುವುದನ್ನು ಕಾಣಿಸಲಾಗಿದೆ. ಆತನ ಮಗ ಮೊದಲ ಇಬ್ರಾಹಿಂನ ಕಾಲದಲ್ಲಿ ದಖನಿ ಮತ್ತು ಸ್ಥಳೀಯ ಭಾಷೆಗಳಿಗೆ ರಾಜಾಶ್ರಯ ದೊರೆಯಿತು. ಮೊದಲ ಇಬ್ರಾಹಿಂನ ಮಗ ಮೊದಲ ಅಲಿ ಆದಿಲ್‌ಶಾಹನು ಸನ್ಯಾಸಿಯಂತೆ ಬಟ್ಟೆಯನ್ನು ತೊಟ್ಟು ಹಿಂದೂ-ಮುಸ್ಲಿಂ ಸಂತರೊಡನೆ ಬೆರೆಯುತ್ತಿದ್ದನೆಂದು ಖ್ಯಾತ ಇತಿಹಾಸಕಾರ ಫಿರಿಷ್ಟ ಹೇಳುತ್ತಾನೆ. ಅಲಿಯ ಹೆಂಡತಿ ಚಾಂದ್‌ಬೀಬಿ ಸುಪ್ರಸಿದ್ಧ ಕಲಾವಿದೆ, ಕವಯಿತ್ರಿ. ಅವಳ ಕಣ್ಣರಿಕೆಯಲ್ಲಿ ಬೆಳೆದವನು ಎರಡನೇ ಇಬ್ರಾಹಿಂ ಆದಿಲ್‌ಶಾ ಜಗದ್ಗುರು ಎನಿಸಿಕೊಂಡ.
ಅನೇಕ ಕವಿಗಳು ಆತನ ಆಸ್ಥಾನದಲ್ಲಿದ್ದರು. ಅವರುಗಳಲ್ಲಿ ಮುಲ್ಲಾಝಹೂರಿ ಎಂಬ ಕವಿ ಈಗಲೂ ಪರ್ಶಿಯನ್ ಭಾಷೆಯಲ್ಲಿ ಪ್ರಸಿದ್ಧ ಕವಿಯಾಗಿ ಸ್ಮರಣೆಯಲ್ಲಿದ್ದಾನೆ. ಇಬ್ರಾಹಿಂನು ಸಾಹಿತ್ಯ, ಸಂಗೀತ, ಕಲೆಗಳಿಗೆ ಆಶ್ರಯದಾತನಾಗಿದ್ದನು. ಆತನು ಸ್ವತಃ ಕವಿಯಾಗಿದ್ದ, ಸಂಗೀತಗಾರನಾಗಿದ್ದ, ಚಿತ್ರಕಲಾವಿದನೂ ಆಗಿದ್ದ. ಭಾರತೀಯ ಸಾಹಿತ್ಯದಲ್ಲಿಯ "ನವರಸ' ಶಬ್ದ ಇಬ್ರಾಹಿಂ ಆದಿಲ್‌ಶಾನಿಗೆ ಹುಚ್ಚು ಹಿಡಿಸಿತ್ತು. ಹೊಸದಾಗಿ ಕಟ್ಟಿದ ಪಟ್ಟಣಕ್ಕೆ "ನವರಸಪುರ' ಎಂದು ಹೆಸರಿಟ್ಟಿದ್ದ. ತಾನು ಬರೆದ ಕಾವ್ಯಕ್ಕೆ ಕಿತಾಬ್ ನವರಸ್ ಎಂದು ಶೀರ್ಷಿಕೆ ಇಟ್ಟದ್ದ. ಅವನ ನಾಣ್ಯವೂ ಕೂಡಾ "ನೌ ಇಬ್ರಾಹಿಮಿ' ಆಗಿತ್ತು. ಅವನ ಕಾಲದ ಮೊಹರಿನ ಹೆಸರು "ನವರಸ್ ಸಿಕ್ಕ' ಎಂದಾಗಿತ್ತು.
ಇಬ್ರಾಹಿಂನ ಸಂಗೀತದ ಹುಚ್ಚು ಆತ ರಚಿಸಿದ "ಕಿತಾಬ್ ನವರಸ್' ಎಂಬ ಕವನ ಸಂಕಲನದಲ್ಲಿ ಸ್ವಯಂ ವ್ಯಕ್ತವಾಗುತ್ತದೆ. ಒಂದೆಡೆ ಆತ ಹೇಳುತ್ತಾನೆ, "ಭಾಷೆ ಬೇರೆ ಬೇರೆಯಾದರೇನು, ಆತ ತುರುಕನಾಗಿರಲಿ, ಬ್ರಾಹ್ಮಣನಾಗಿರಲಿ ಭಾವ ಒಂದೇ. ಈ ಜಗತ್ತು ಜ್ಞಾನವನ್ನು ಅರಸುತ್ತಿದೆ. ಅದಕ್ಕೆ ಒಂದೇ ಮನದಿಂದ ಗುರುವನ್ನು ಆರಾಧಿಸು'.
ಪ್ರತಿ ತಿಂಗಳ ಮೊದಲ ಗುರುವಾರದಂದು ರಾಜಧಾನಿ ಬಿಜಾಪುರದಲ್ಲಿ "ಈದೆ ನವರಸ್' ಹಬ್ಬವನ್ನು ಆಚರಿಸಲಾಗುತ್ತಿತ್ತು. ಅಂದು ನಗರದಾದ್ಯಂತ ಹಲವಾರು ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಹಾಡುವವರು, ವಾದ್ಯ ನುಡಿಸುವವರು, ನೃತ್ಯದವರು ಮೊದಲಾದ ಆಸ್ಥಾನ ವಿಶೇಷ ಸಮೂಹಕ್ಕೆ ಲಷ್ಕರೆ ನವರಸ್ ಎಂಬ ಹೆಸರಿತ್ತು.
ಗಾಯಕರಲ್ಲಿ ಮೂರು ವಿಧದವರಿದ್ದರು. ಹುಜೂರಿ, ದರಬಾರಿ, ಶಹರಿ ಎಂಬುದಾಗಿತ್ತು. ಹಗಲು-ರಾತ್ರಿ ಬಾದಶಹನ ಜೊತೆಗಿದ್ದೂ ಸಂಗೀತದಲ್ಲಿ ಪಾಂಡಿತ್ಯವನ್ನು ಪಡೆದವರು - ಹುಜೂರಿಗಳು. ಆಸ್ಥಾನ ದಲ್ಲಿ ಗಾಯನ ನುಡಿಯುವವರು-ದರಬಾರಿಗಳು. ಇನ್ನುಳಿದವರು ಶಹರಿಗಳು. ಇವರಿಗೆಲ್ಲ ಜಹಗೀರು, ಇನಾಮುಗಳನ್ನೂ ಕೊಡಲಾಗುತ್ತಿತ್ತು. ಕೆಲವರಿಗೆ ಪ್ರತಿನಿತ್ಯ ವೇತನ ದೊರೆಯುತ್ತಿತ್ತು.
ಸಾಹಿತ್ಯ, ಸಂಗೀತ, ಕಲೆಗಳ ಕುರಿತು ಇಬ್ರಾಹಿಂನಿಗೆ ಆಸಕ್ತಿ ಇದ್ದಂತೆ ವಾಸ್ತುಶಿಲ್ಪದಲ್ಲಿಯೂ ಅತೀವ ವಾದ ಆಸಕ್ತಿ ಇದ್ದಿತು. ಆತ ತನ್ನ ಸಮಾಧಿಗೆಂದು ಕಟ್ಟಿಸಿದ "ಇಬ್ರಾಹಿಂ ರೋಜಾ' ಕಟ್ಟಡ ಜಗತ್ತಿನಲ್ಲೇ ಒಂದು ಸುಂದರವಾದ ವಾಸ್ತುರಚನೆಯೆಂದು ವಿಶ್ವದಾದ್ಯಂತದ ಕಲಾವಿಮರ್ಶಕರು ಹೊಗಳಿದ್ದಾರೆ. ಇನ್ನುಳಿದ ತಾಜ್‌ಚಾವಡಿ, ಆನಂದ ಮಹಲ್, ಸಾತ್‌ಮಜಲಿ, ಜಲ್‌ವುಹಲ್, ಮೆಹತರ್ ಮಹಲ್ ಇತ್ಯಾದಿ ಆತನೇ ಕಟ್ಟಿಸಿದ ವಾಸ್ತುರಚನೆಗಳು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಸರಿಸುಮಾರು 200 ವರ್ಷಗಳ ಆದಿಲ್‌ಶಾಹಿ ರಾಜ್ಯದ ಏಳು ಸುಲ್ತಾನರಲ್ಲಿ ಮೊದಲ ಅಲಿ ಅದಿಲ್‌ಶಾಹಿ ಕಟ್ಟಿಸಿದ ಜುಮ್ಮಾ ಮಸೀದಿ ಅನಂತರ ಎರಡನೇ ಇಬ್ರಾಹಿಂ ಆದಿಲ್‌ಶಾಹಿ ಕಟ್ಟಿಸಿದ ವಾಸ್ತುಶಿಲ್ಪಗಳು, ಆತನ ಮಗ ಮಹಮ್ಮದ್ ಆದಿಲ್‌ಶಾ ಕಟ್ಟಿಸಿದ ಗೋಳಗುಮ್ಮಟ, ನಂತರ ಎರಡನೇ ಆದಿಲ್‌ಶಾ ಕಟ್ಟಿಸಿದ ಅರ್ಧಕ್ಕೆ ನಿಂತ ಬಾರಾ ಕಮಾನ್ ವಾಸ್ತುವೈಭವಗಳು ಒಂದಕ್ಕಿಂತ ಒಂದನ್ನು ಮೀರಿಸುವಂತಿವೆ.
ಬಿಜಾಪುರದ ಊರು ತುಂಬ ಮತ್ತು ಸುತ್ತಮುತ್ತ ಗುಮ್ಮಟಗಳೇ. ಅಂತೆಯೇ ನಗರಕ್ಕೆ ಇನ್ನೊಂದು ಹೆಸರು "ಛಪ್ಪನ್ನ ಸೌ ಚಾವಡಿ-ಬಾವನ್ನ ಸೌ ಬಾವಡಿ' ಎಂದು ಕರೆಯುತ್ತಾರೆ. ಅದರ ಅರ್ಥ - 5600 ಮಸೀದಿಗಳು, 5,200 ಬಾವಿಗಳು.
ಬಿಜಾಪುರದಲ್ಲಿ ನೋಡಲು ನೂರಾರು ಅವಶೇಷಗಳಿದ್ದರೂ ಅವುಗಳಲ್ಲಿ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್, ಜುಮ್ಮಾ ಮಸೀದಿ, ಆಸಾರ್ ಮಹಲ್, ಗಗನ ಮಹಲ್, ಆನಂದ ಮಹಲ್, ಅರಕಿಲ್ಲಾ, ಉಪ್ಪಲಿ ಬುರುಜ್, ಮುಲ್ಕ್ ಮೈದಾನ ತೋಪು, ಮೆಹತರ್ ಮಹಲ್ ಹಾಗೂ ಸಂಗೀತ ಮಹಲುಗಳು ಪ್ರಮುಖವಾದವುಗಳು.
ಇಷ್ಟನ್ನು ನೋಡುವ ಹೊತ್ತಿಗೆ ಮೈತುಂಬ ಧೂಳು ಮೆತ್ತಿದರೂ ಸುಂದರ ಮಸೀದಿಗಳು, ಗುಮ್ಮಟಗಳು ಹಾಗೂ ಅವಶೇಷಗಳಿಂದ ಸೂಸುವ ತಂಗಾಳಿ ಪ್ರವಾಸಿಯ ಮೈ ಸೋಂಕಿ ಪುಳಕಿತನನ್ನಾಗಿ ಮಾಡುತ್ತವೆ. ಜೊತೆಗೆ ಜಿಲ್ಲೆಯ ಬಳಿ ಜೋಳದ ರೊಟ್ಟಿ , ಶೇಂಗಾ-ಬೆಳ್ಳುಳ್ಳಿ ಚಟ್ನಿ , ಶೇಂಗಾದ ಹೋಳಿಗೆ,
ಬದನೆಕಾಯಿಯ ತುಂಬುಗಾಯಿ ಪಲ್ಯ, ಕೊಲ್ಹಾರದ ಮೊಸರು-ಅವಲಕ್ಕಿ ನೀರೂರಿಸುತ್ತವೆ. ಎಡಗೈಯಲ್ಲಿ ಜೋಳದ ಒಣರೊಟ್ಟಿಯನ್ನು ಹಿಡಿದು ಅದರಲ್ಲಿ ಎಣ್ಣೆ ಖಾರದ ಪುಡಿಯನ್ನು ಬೆರೆಸಿ ಬಲಗೈಯಿಂದ ಮುರಿದು ಅದನ್ನು ಚಟ್ನಿಯೊಂದಿಗೆ ಬಾಯಿಯಲ್ಲಿ ಇಡುವ ಧೋತರ-ರುಮಾಲಿನ ಬಿಜಾಪುರದ ವಿಶಿಷ್ಟ ಉಡುಗೆಯ ರೈತ "ಬನ್ನಿ°' ಎಂದು ಊಟಕ್ಕೆ ಕರೆಯದೆ ಇರಲಾರ. ಮಗ್ಗುಲು ಕೃಷ್ಣಾ¡-ಭೀಮೆಯರು ಜುಳುಜುಳು ನಿನಾದದೊಂದಿಗೆ ಹರಿದಾರು. ಕಪ್ಪು-ಕಂದು ಬಣ್ಣದ ಕಸುವಿನ ಭೂಮಿಯಲ್ಲಿ ಜೋಳ, ಹತ್ತಿ, ಶೇಂಗಾ ಬೆಳೆಯುವ ರೈತ ಹಣೆಗೆ ಕೈಹಚ್ಚಿ ಮುಗಿಲತ್ತ ನೋಡಿ ಮಳೆಗಾಗಿ ಬಾಯಿಬಿಟ್ಟಾನು. ನದಿಗಳು ಹರಿದಿದ್ದರೂ ಅದು ಅವನ ಹಣೆಬರಹ !