ಅಶೋಕ್ ಕುಮಾರ್ ಎ. | Oct 24, 2010
ಗೂಗಲ್: ಬಾಲಿವುಡ್ ಗೀತ
ಹಿಂದಿ ಚಿತ್ರಗೀತೆಗಳ ಸಂಗ್ರಹದ ಶೋಧ ಸೇವೆ ಯನ್ನು ಗೂಗಲ್ ಈಗ ಒದಗಿಸಲಾರಂಭಿಸಿದೆ.ಕಲಾವಿದ, ಚಿತ್ರ ಅಥವಾ ಹಾಡಿನ ಸಾಲಿನ ಮೂಲಕ ಹುಡುಕಬಹುದು. ಹಾಡನ್ನು ಕೇಳಿಸಿಕೊಳ್ಳುವುದೂ ಸುಲಭ-ಹಾಡಿನ ಕೊಂಡಿಯನ್ನು ಕ್ಲಿಕ್ಕಿಸಿದರೆ ಹಾಡು ಡೌನ್‌ಲೋಡ್ ಆಗಿ ತತ್‌ಕ್ಷಣ ಪ್ಲೇ ಆಗುತ್ತದೆ. ಸದ್ಯ ಹಿಂದಿ ಹಾಡುಗಳು ಲಭ್ಯ.ಉಳಿದ ಭಾರತೀಯ ಭಾಷೆಗಳಿಗೂ ಸೇವೆ ವಿಸ್ತರಿಸುವ ನಿರೀಕ್ಷೆಯಿದೆ.
ಅಗ್ಗದ ಸೆಲ್‌ಫೋನ್
ಬಡವರು ಒಂದೇ ಮೊಬೈಲ್ ಬಳಸಿಯೂ ಪ್ರತ್ಯೇಕ ಸೆಲ್‌ಫೋನ್ ನಂಬರ್ ಪಡೆಯಬಹುದಾದ ಕೌಡ್‌ಫೋನ್ ಎನ್ನುವ ತಂತ್ರಜ್ಞಾನ ಈಗ ಲಭ್ಯ. ಬರೇ 20 ಸೆಂಟುಗಳನ್ನು ತೆತ್ತರೆ ಇದು ಲಭ್ಯ. ಮಿಂಚಂಚೆ ಖಾತೆ ಯಂತೆ ಸೆಲ್‌ಫೋನ್ ಖಾತೆಯನ್ನೂ ತೆರೆದು ಇದಕ್ಕೆ ಮೊದಲಾಗಿ ಲಾಗಿನ್ ಆಗಬೇಕಾಗುತ್ತದೆ. ಯಾವುದೇ ಕರೆ ಬಂದಿದ್ದರೆ, ಲಾಗಿನ್ ಆದೊಡನೆ ಅದರ ಬಗ್ಗೆ ಮಾಹಿತಿ ಲಭಿಸುತ್ತದೆ.ಬಳಿಕ ಆತ ಬೇಕಾದ ಕರೆ ಮಾಡಬಹುದು. ಸಿಮ್ ಕಾರ್ಡನ್ನು ಮೊಬೈಲ್ ಸಾಧನಕ್ಕೆ ಹಾಕಿಯೂ ಒಂದೇ ಹ್ಯಾಂಡ್‌ಸೆಟ್‌ನಿಂದ ಹಲವರು ಕರೆ ಮಾಡಬಹುದು ನಿಜ. ಆದರೆ ಸಿಮ್ ಅನ್ನು ಹಾಕುವುದು, ತೆಗೆಯುವುದು ಕಿರಿಕಿರಿ ತಾನೇ? ನೈಜೆಲ್ ವಾಗರ್ ಎಂಬಾತ ಕೌÉಡ್‌ಫೋನ್ ತಂತ್ರಜ್ಞಾನದ ಹರಿಕಾರ. ಆಫ್ರಿಕಾದಲ್ಲಿ ಇಂಥ ಸೇವೆ ಲಭ್ಯ.
ಮಾಯವಾಗಲು ಸಲಹೆ!!
ನಮ್ಮ ಪ್ರತಿಪಕ್ಷ ಶಾಸಕರು ಆಪರೇಶನ್ ಕಮಲದ ಖೆಡ್ಡಾಗೆ ಸಿಲುಕದಂತೆ ಮಾಡಲು ರೆಸಾರ್ಟುಗಳಲ್ಲೇ ಬೀಡುಬಿಡಬೇಕಾಗುತ್ತದೆ. ಸಾಮಾನ್ಯರೂ ಆಗೀಗ ಪೀಡಕರಿಂದ ತಪ್ಪಿಸಿಕೊಳ್ಳಲೋ ಇನ್ಯಾವುದೋ ಕಾರಣಕ್ಕೋ ಮಾಯವಾಗಬೇಕಾಗುತ್ತದೆ.ಇಂಥವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಅಂತರ್ಜಾಲ ತಾಣವೂ ಇದೆ. http://www.frankahem.com ಇಂಥವರಿಗೆ ಉಚಿತವಾಗಿಯೂ ಸಲಹೆ ಲಭ್ಯವಿದೆ. ಮೊಬೈಲ್ ಸಾಧನ ಬಳಸುವಾಗ ಅದರಲ್ಲಿ ಜಿಪಿಆರ್‌ಎಸ್ ಸೌಲಭ್ಯ ಹೊಂದದಿರುವುದು, ಕರೆ ಗಳನ್ನು ಸ್ವೀಕರಿಸಿ, ಗೂಗಲ್ ವಾಯಿಸ್ ಸೇವೆಯಂತಹ ಅಂತರ್ಜಾಲ ಸೇವೆಯ ಮೂಲಕ ಪಡೆದ ಅಂತರ್ಜಾಲ ಸೇವೆಗೆ ಕರೆಗಳನ್ನು ರವಾನಿಸುವುದು ಸಲಹೆಗಳಲ್ಲಿ ಸೇರಿದೆ.
ವಿಂಡೊಸ್ 7: ಹುಟ್ಟುಹಬ್ಬ
ಮೊದಲ ವರ್ಷ ಪೂರೈಸಿದ ವಿಂಡೊಸ್ 7 ಇದುವರೆಗೆ 24 ಕೋಟಿ ಕಂಪೂÂಟರುಗಳಲ್ಲಿ ಅನು ಸ್ಥಾಪನೆಯಾಗಿದೆ. ಇದರಿಂದ ಅತ್ಯಂತ ಯಶಸ್ವಿ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ವಿದು ಎಂದು ಸಿದ್ಧವಾಗಿದೆ. ಮೈಕ್ರೋಸಾಫ್ಟ್ ಕಂಪೆನಿಯ ಹಿಂದಿನ ವಿಸ್ತಾ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಬಗ್ಗೆ ಬಹಳಷ್ಟು ಬಳಕೆದಾರರು ಅಸಮಾಧಾನ ಹೊಂದಿದ್ದರೆ ಈ ಹೊಸ ಕಾರ್ಯ ನಿರ್ವಹಣಾ ವ್ಯವಸ್ಥೆಯ ಬಗ್ಗೆ ದೂರುಗಳು ಅತ್ಯಂತ ಕಡಿಮೆಯೆಂದೇ ಹೇಳಬೇಕು. ಈ ವ್ಯವಸ್ಥೆಗಾಗಿ ರೂಪಿತವಾದ ಹಲವಾರು ತಂತ್ರಾಂಶಗಳೂ ತೊಂದರೆ ಕೊಡದೆ ಕೆಲಸ ಮಾಡುತ್ತಿವೆ.
ರಸ್ತೆ ನೋಟ ಬೇಡ
ಗೂಗಲ್ ಮ್ಯಾಪ್ ಸೇವೆಯಲ್ಲಿ ಕೆಲವು ನಗರಗಳ ರಸ್ತೆಯ ನೋಟಗಳೂ ಲಭ್ಯ. ವಾಹನಗಳನ್ನು ಬಳಸಿ ತೆಗೆದ ಚಿತ್ರಗಳ ಸಹಾಯದಿಂದ ನೆಲಮಟ್ಟದ ನೋಟವೂ ಸಿಗುತ್ತದೆ. ಈ ಸೇವೆಯಿಂದ ಬಳಕೆದಾರನು ರಸ್ತೆಯಲ್ಲಿ ನಡೆದು ಹೋದಾಗ ಸಿಗುವ ನೋಟವೇ ಗೂಗಲ್ ಮ್ಯಾಪಿನ ಮೂಲಕ ಸಿಗುತ್ತದೆ. ಇಂತಹ ಸೇವೆಯಿಂದ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಯಾರಾದರೂ ಭಾವಿಸಿದರೆ, ಅವರ ಮನೆಯ ನೋಟವನ್ನು ಅಸ್ಪಷ್ಟಗೊಳಿಸಲು ಗೂಗಲ್ ಸಿದ್ಧವಿದೆ. ಜರ್ಮನಿಯ ನಗರಗಳ ಸುಮಾರು ಶೇ. 3 ಮನೆಗಳವರು ಇಂತಹ ಸೇವೆಯಿಂದ ತಮ್ಮ ಮನೆಗಳನ್ನು ಹೊರಗಿಡಲು ಬಯಸಿದ್ದಾರೆ. ಈ ಸೇವೆಯ ಮೂಲಕ ವ್ಯವಹಾರಸ್ಥರಿಗೆ ಅನುಕೂಲ ಕಲ್ಪಿಸುವುದು ಗೂಗಲ್ ಉದ್ದೇಶವಾಗಿದೆ. ರಸ್ತೆಸಾರಿಗೆ, ದಾರಿ ಕಂಡುಕೊಳ್ಳಲು ಅನುಕೂಲತೆ ಕಲ್ಪಿಸುವುದೂ ಅದರ ಇನ್ನೊಂದು ಉದ್ದೇಶ.
ಉದಯವಾಣಿ ವಿಶೇಷಾಂಕ ಗೆಲ್ಲಿ!
* ಬರಹ ಪದಸಂಸ್ಕಾರಕ ತಂತ್ರಾಂಶ ಅಭಿವೃದ್ಧಿ ಪಡಿಸಿದ ವ್ಯಕ್ತಿ ಯಾರು? ಮೊದಲ ಆವೃತ್ತಿ ಬಿಡುಗಡೆ ಯಾದ ವರ್ಷ ಯಾವುದು?
* ಉದಯವಾಣಿ ಅಂತರ್ಜಾಲ ಪುಟ ಯಾವುದು? ವಿಶೇಷತೆ ಏನು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಅರವಿಂದ ವಿ. ಕೆ. ಇವರಿಗೆ ಮಿಂಚಂಚೆ ಮಾಡಿ, ವಿಷಯ:
NS2 ನಮೂದಿಸಿ hallimanearavind@gmail.com).
(ಕಳೆದವಾರದ ಪ್ರಶ್ನೆಗಳಿಗೆ ಉತ್ತರ: ಸಿ++, ಜೇನ್ ಸ್ಟೌಸ್ಟ್ರಪ್; ಮುಕ್ತ ಕಾರ್ಯನಿರ್ವಹಣಾ ತಂತ್ರಾಂಶ, ವೈರಸ್ ಕಾಟರಹಿತ; ಅಕ್ಟೋಬರ್ 10.
ಬಹುಮಾನ ಗೆದ್ದ ವಿಶ್ವನಾಥ ಹೆಗ್ಡೆ, ಅಂಬಲಿಕೆ, ಶಿರಸಿ; ಅನಂತಮೂರ್ತಿ, ಕೋಟೇಶ್ವರ ಅವರಿಗೆ ಅಭಿನಂದನೆಗಳು.)
ಟ್ವಿಟರ್ ಚಿಲಿಪಿಲಿ
* ಒಂದಿಷ್ಟು ರಕ್ತದಾನ ಮಾಡಿದೆ-ಸೊಳ್ಳೆಗಳಿಗೆ!
* ಉಪ್ಪಿಟ್ಟಿಗೆ ಉಪಾ, ದೋಸೆಗೆ ದೋಸಾ, ಸಾರಿಗೆ ರಸಂ, ಹುಳಿಗೆ ಸಾಂಬಾರ್, ಬಿಸಿ ಹುಳಿ ಅನ್ನಕ್ಕೆ ಬಿಸಿ ಬೇಳೆ ಬಾತ್ ಅಂತ ಯಾಕಂತೀರಿ?
ಕನ್ನಡದಲ್ಲಿ ಶುಭಾಶಯ
http://www.Shubhashya.com ಕನ್ನಡದ ಶುಭಾಶಯ ಪತ್ರಗಳನ್ನು ಲಭ್ಯವಾಗಿಸುವ ಅಂತ ರ್ಜಾಲ ತಾಣ. ವಿವಿಧ ಸಂದರ್ಭಗಳಿಗೆ ಸೂಕ್ತವಾದ ಶುಭಾಶಯ ಪತ್ರಗಳು ಇಲ್ಲಿವೆ. ಸೂಕ್ತ ಪತ್ರವನ್ನು ವಿನ್ಯಾಸ ಮಾಡಿಕೊಡುವ ಸೇವೆಯೂ ಇಲ್ಲಿ ಲಭ್ಯ. ಆಯ್ದ ಪತ್ರವನ್ನು ಬೇಕಾದ ಮಿಂಚಂಚೆ ವಿಳಾಸಕ್ಕೆ ಕಳುಹಿಸಲು ಅನುಕೂಲವಿದೆ. ಶುಭಾಶಯ ಪತ್ರಗಳ ಜತೆ ಹಿನ್ನೆಲೆ ಸಂಗೀತ, ಆ್ಯನಿಮೇಶನ್ ಮುಂತಾದ ಸೌಲಭ್ಯಗಳೂ ಸಿಗುತ್ತವೆ.
ಪ್ರತಿಕ್ರಿಯಿಸಿ: feedback@manipalmedia.com