Saturday, May 25, 2013
Last Updated: 1:24:17 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪರಂಗಿ ಎಂಬ ಔಷಧೀಯ ವೃಕ್ಷ
    • ಮಾಲತಿ ಅವರ ತಾರಸಿಯ ಮೇಲೆ ಬೆಳೆದ ಪರಂಗಿ ಮರ.

      • ನೇಮಿಚಂದ್ರ | Feb 10, 2013

        ಪರಂಗಿ ಹಣ್ಣು ಪಚನ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುತ್ತದೆ, ಕರುಳುಗಳನ್ನು ಸ್ವತ್ಛವಾಗಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಉರಿಯೂತದ ವಿರುದ್ಧ ಹೋರಾಡುತ್ತದೆ. ಶ್ವಾಸಕೋಶ ಮತ್ತು ನಮ್ಮ ಕೀಲುಗಳ ಆರೋಗ್ಯವನ್ನು ಕಾಪಾಡುತ್ತದೆ. ಒಟ್ಟಾರೆ ನಮ್ಮ ದೇಹದಲ್ಲಿ ಶಕ್ತಿಯ ಸಂಚಾರವಾಗಿ ನಮ್ಮನ್ನು ಉಲ್ಲಾಸವಾಗಿ ಇಡಬಲ್ಲದು.

        ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಎಪಿಡಮಿಕ್‌ ಆಗಿದೆ. ಕಳೆದ ಮೂರು ತಿಂಗಳಲ್ಲಿ ಬಹಳಷ್ಟು ಕ್ಯಾನ್ಸರ್‌ ರೋಗಿಗಳನ್ನು ಭೇಟಿಯಾಗಿದ್ದೇನೆ. ಕ್ಯಾನ್ಸರ್‌ಗೆ ಒಂದು ಕಾರಣವಲ್ಲ, ಅದರ ಪರಿಹಾರಕ್ಕೂ ತೆರೆದಿರುವುದು ಒಂದೇ ಹಾದಿಯಲ್ಲ.

        ಕ್ಯಾನ್ಸರ್‌ ಚಿಕಿತ್ಸೆಗೆ ಜಗತ್ತಿನ ವಿವಿಧ ದೇಶಗಳಲ್ಲಿ ನೂರಾರು ವಿಧಾನಗಳಿವೆ ಎಂದು ನಿಧಾನವಾಗಿ ಅರ್ಥವಾಗುತ್ತಿದೆ. ಕಳೆದ ಎರಡು ವಾರದಿಂದ ನಾನು ಓದುತ್ತಿರುವ ಪುಸ್ತಕಗಳು, ಕ್ಯಾನ್ಸರಿಗೆ ಕಾರಣವನ್ನು ಕುರಿತಂತೆ ಅನೇಕ ಸಿದ್ಧಾಂತಗಳನ್ನು ಮಂಡಿಸುತ್ತಲೇ, ಚಿಕಿತ್ಸೆಗೂ ಅನೇಕ ಪರ್ಯಾಯ ವಿಧಾನಗಳನ್ನು ಸೂಚಿಸಿವೆ. ಆದರೆ ಎಲ್ಲಕ್ಕಿಂತ ನನಗೆ ಅಚ್ಚರಿ ಮತ್ತು ಸಂತಸವಾದ‌ದ್ದು ಹೆರಾಲ್ಡ್‌ ಟೀಟ್ಸ್‌ ಅವರ ಪುಸ್ತಕ "ಪಪಾಯ ದಿ ಮೆಡಿಸಿನ್‌ ಟ್ರೀ' ಓದಿದಾಗ. ಪರಂಗಿ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ನಮಗೆಲ್ಲ ತಿಳಿದ ವಿಷಯವೇ ಆಗಿದ್ದರೂ, ಅನೇಕ ರೋಗಗಳು ಮತ್ತು ಅವುಗಳಿಗೆ ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಪರಂಗಿ ಮರದ ಹಣ್ಣು, ಎಲೆ, ತೊಗಟೆಯನ್ನು ಬಳಸುವುದನ್ನು ಈ ಪುಸ್ತಕ ಚರ್ಚಿಸಿದೆ. ಪುಸ್ತಕದ ಪುಟ 59ಕ್ಕೆ ಬಂದಾಗ ಪರಂಗಿಯಿಂದ ಕ್ಯಾನ್ಸರ್‌ ಔಷಧಿ? ಎಂದು ಓದಿ ನನ್ನ ಕಣ್ಣರಳಿತು.

        ಹೆರಾಲ್ಡ್‌ ಅವರ ಪುಸ್ತಕ ಪರಂಗಿ ಎಲೆಗಳಿಂದ ಕ್ಯಾನ್ಸರ್‌ ಗುಣವಾದ ಕತೆಯನ್ನು ಹೇಳುತ್ತದೆ. ಪರಂಗಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಆದರೆ ಎಲೆಯನ್ನು ಚಿಕಿತ್ಸೆಗೆ ಬಳಸುವುದು ಕೇಳಿರಲಿಲ್ಲ. ನನ್ನ ಹಿರಿಯ ಸ್ನೇಹಿತರಾದ‌ ಮಾಲತಿ ಅವರು ಕೆಲವು ತಿಂಗಳ ಹಿಂದೆ ಈ ವಿಷಯ ತಿಳಿಸಿದ್ದರು, ಆದರೆ ಹೆಚ್ಚಿನ ಮಾಹಿತಿ ಲಭ್ಯವಿರಲಿಲ್ಲ. ಈ ಪುಸ್ತಕ ಪರಂಗಿ ಮರದ ಔಷಧೀಯ ಗುಣಗಳನ್ನು ವಿವರವಾಗಿ ವಿಶ್ಲೇಷಿಸಿದೆ. ಅಂದ ಹಾಗೆ, ಇತ್ತೀಚಿನ ಸಂಶೋಧನೆಗಳು ಕೂಡಾ ಪರಂಗಿ ಮರದ ಎಲೆಗಳು ಕ್ಯಾನ್ಸರ್‌ ಗುಣವಾಗಲು ಸಹಾಯಕ ಎಂದು ತೋರಿಸುತ್ತಿವೆ.

        ಪರಂಗಿ ಎಲೆಗಳ ಬಗ್ಗೆ ತಿಳಿಯುವ ಮೊದಲು, ಪರಂಗಿ ಹಣ್ಣಿನ ಬಗ್ಗೆ ನಮಗೆ ತಿಳಿದ ಪಾಠವನ್ನೇ ಮತ್ತೂಮ್ಮೆ ಮನದಟ್ಟು ಮಾಡಿಕೊಳ್ಳೋಣ. ಪರಂಗಿ ಹಣ್ಣಿನಲ್ಲಿ ವಿಟಮಿನ್‌ "ಎ', ವಿಟಮಿನ್‌ "ಸಿ', ಬೀಟಾ ಕ್ಯಾರೋಟೀನ್‌, ಪೊಟಾಸಿಯಂ, ಮೆಗ್ನಿàಶಿಯಂ, ಕ್ಯಾಲ್ಸಿಯಂ ಅಲ್ಲದೆ ಸಾಕಷ್ಟು ನಾರಿನ ಅಂಶವೂ ಇದೆ. ಪರಂಗಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ಸ್‌ , ಪಚನ ಕಿಣ್ವಗಳು (ಡೈಜೆಸ್ಟಿವ್‌ ಎನ್‌ಸೈಮ್ಸ್‌) ಇದ್ದು, ಇವೆಲ್ಲವೂ ಕ್ಯಾನ್ಸರ್‌ ಬಾರದಂತೆ ತಡೆಯಬಲ್ಲ ಗುಣವನ್ನು ಹೊಂದಿವೆ. ಕ್ಯಾನ್ಸರ್‌ ಬಾರದಂತೆ ತಡೆಯುವಲ್ಲಿ "ಸೂಪರ್‌ ಫ‌ೂಡ್ಸ್‌' ಎಂದು ಗುರುತಿಸುವ ಹಣ್ಣು ತರಕಾರಿಯ ಗುಂಪಿಗೆ, ಪರಂಗಿ ಹಣ್ಣು ಕೂಡಾ ಸೇರಿದೆ. 

        ನನ್ನ ಬಾಲ್ಯ ಮತ್ತು ಯೌವನದ ದಿನಗಳನ್ನು ನೆನಪಿಸಿಕೊಂಡರೆ, ಪ್ರತಿಯೊಂದು ಮನೆಯಲ್ಲೂ ಪರಂಗಿ ಗಿಡ ಇರುವುದು ಸಾಮಾನ್ಯವಿತ್ತು. ಆಗೆಲ್ಲ ಪರಂಗಿ ಹಣ್ಣನ್ನು ಕೊಂಡು ತರುವ ಸಂಪ್ರದಾಯ ಇರಲಿಲ್ಲ. ನಮ್ಮ ಹಿತ್ತಲಲ್ಲೇ ಪರಂಗಿ ಮರಗಳಿರುತ್ತಿದ್ದವು. ಒಂದು ಹಣ್ಣನ್ನು ಕತ್ತರಿಸಿದರೆ, ಒಳಗೆ ನೂರಾರು ಬೀಜಗಳು. ಅವನ್ನು ಹಿತ್ತಲಲ್ಲಿ ಎಸೆದಾಗ, ಮತ್ತಷ್ಟು ಸಸಿಗಳು. ಆದರೆ ಮೊನ್ನೆ ಮಾಲತಿ ಅವರು ಹೇಳಿದ ಪರಂಗಿ ಎಲೆಯ ಪ್ರಯೋಗಕ್ಕೆ, ಪರಂಗಿ ಮರ ಹುಡುಕಿ ಹೊರಟರೆ ಇಲ್ಲಿ ನಮ್ಮ ಬಡಾವಣೆಯಲ್ಲಿ ಎಲ್ಲೂ ತಟ್ಟನೆ ಕಾಣಲಿಲ್ಲ. ಸೈಟಿನ ತುಂಬಾ ಮನೆ ಕಟ್ಟಿ, ಬೀದಿಗೆ ಕಿಟಕಿ ತೆರೆಯುವ ಈ ದಿನಗಳಲ್ಲಿ  ಪರಂಗಿ ಮರ ಹಾಕಲು ಸ್ಥಳವೆಲ್ಲಿ? ನಮ್ಮ ಅದೃಷ್ಟ, ಪರಂಗಿ ಹಣ್ಣೇನೋ ಧಾರಾಳವಾಗಿ ನಮ್ಮ ದೇಶದಲ್ಲಿ ಸಿಗುತ್ತಿದೆ. ಆದರೆ ನನಗೆ ಆ ದಿನ ಮಾಲತಿ ಅವರು ಹೇಳಿದ ಪರಂಗಿ ಎಲೆಯ ಪ್ರಯೋಗ ಮಾಡಿ, ಅದರ ಕಷಾಯದ ರುಚಿ ಹೇಗಿರುತ್ತದೆ ಎಂದು ತಿಳಿಯಬೇಕಿತ್ತು.

        ಮನೆ ಮನೆಯಲ್ಲಿ ಪರಂಗಿ ಗಿಡವಿದ್ದ ಆ ಕಾಲದಲ್ಲಿ ಸಹಜವಾಗಿಯೇ ಪರಂಗಿ ಹಣ್ಣು ನಮ್ಮ ಆಹಾರದ ಭಾಗವಾಗಿತ್ತು. ಇಂದಿನಂತೆ ಬೇಕರಿ ತಿಂಡಿಗಳು, ತಂಪು ಪಾನೀಯಗಳು, ಜಂಕ್‌ ಫ‌ೂಡ್‌ಗಳಿದ್ದ ಕಾಲವಲ್ಲ. ಹಾಗೆಂದೇ ಈ ಹಣ್ಣುಗಳನ್ನು ಮನೆಮಂದಿಯೆಲ್ಲ ಪ್ರೀತಿಯಿಂದ ತಿನ್ನುತ್ತಿದ್ದೆವು. ಪುಸ್ತಕ ಓದಿ,  ಅಧ್ಯಯನ ಮಾಡದೆಯೇ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನು, ರೋಗನಿರೋಧಕ ಶಕ್ತಿಯನ್ನು ಪರಂಗಿಯಂತಹ ಹಣ್ಣುಗಳು ಒದಗಿಸಿದ್ದಲ್ಲದೆ, ಬಹುಶಃ ನಮಗೆ ಕ್ಯಾನ್ಸರ್‌ ಬಾರದ ಹಾಗೆ ಅವು ತಡೆದಿದ್ದವು.

        ಪರಂಗಿ ಹಣ್ಣು ಪಚನ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುತ್ತದೆ, ಕರುಳುಗಳನ್ನು ಸ್ವತ್ಛವಾಗಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಉರಿಯೂತದ ವಿರುದ್ಧ ಹೋರಾಡುತ್ತದೆ. ಶ್ವಾಸಕೋಶ ಮತ್ತು ನಮ್ಮ ಕೀಲುಗಳ ಆರೋಗ್ಯವನ್ನು ಕಾಪಾಡುತ್ತದೆ. ಒಟ್ಟಾರೆ ನಮ್ಮ ದೇಹದಲ್ಲಿ ಶಕ್ತಿಯ ಸಂಚಾರವಾಗಿ ನಮ್ಮನ್ನು ಉಲ್ಲಾಸವಾಗಿ ಇಡಬಲ್ಲದು.

        ಎಲ್ಲಕ್ಕಿಂತ ಮುಖ್ಯವಾಗಿ ಪರಂಗಿ ಹಣ್ಣು ಕೂಡಾ ಕ್ಯಾನ್ಸರ್‌ ವಿರುದ್ಧ ಹೋರಾಡಬಲ್ಲದು. ಇತ್ತೀಚಿನ ಸಂಶೋಧನೆಗಳು ಪರಂಗಿ ಸ್ತನದ ಕ್ಯಾನ್ಸರ್‌ ಕೋಶಗಳು ಬೆಳೆಯುವುದನ್ನು ನಿಲ್ಲಿಸುತ್ತದೆ, ಮೆಟಸ್ಟಾಸಿಸ್‌ ಅನ್ನು ತಡೆಯುತ್ತದೆ ಎಂದು ಸೂಚಿಸಿವೆ. ಕ್ಯಾನ್ಸರ್‌ ಒಂದು ಭಾಗದಿಂದ ಅದರ ಪಕ್ಕದಲ್ಲಿ ಇಲ್ಲದ ಮತ್ತೂಂದು ದೇಹ ಭಾಗಕ್ಕೆ ಹರಡುವುದನ್ನು "ಮೆಟಸ್ಟಾಸಿಸ್‌' ಎನ್ನುತ್ತಾರೆ.

        "ಇಂಟರ್‌ನಾಷನಲ್‌ ಜರ್ನಲ್‌ ಆಫ್ ಫ‌ೂಡ್‌ ಸಯನ್ಸ್‌ ಅಂಡ್‌ ನ್ಯೂಟ್ರಿಷನ್‌' ಮೇ 2009ರ ಪತ್ರಿಕೆ ಪರಂಗಿ ಸ್ತನದ ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ತಡೆಯುವಲ್ಲಿ ಅಧಿಕ ಪ್ರಭಾವ ಬೀರಿದ್ದನ್ನು ದಾಖಲಿಸುತ್ತದೆ.
        ಪರಂಗಿ ಹಣ್ಣಿನ ಕೇಸರಿ-ಗುಲಾಬಿ ಗಾಢ ಬಣ್ಣವೇ ಇದರಲ್ಲಿ ಕ್ಯಾನ್ಸರ್‌ನೊಡನೆ ಹೋರಾಡುವ "ಕ್ಯಾರೊಟೆನಾಯ್ಡ್ಸ್' ಇರುವುದನ್ನು ತೋರುತ್ತದೆ. ಪರಂಗಿಯಲ್ಲಿ ಬೀಟಾ ಕ್ಯಾರೊಟಿನ್‌ ಅಲ್ಲದೆ ಲೈಕೋಪೀನ್‌ ಕೂಡಾ ಯಥೇತ್ಛವಾಗಿದೆ. "ಇಲ್ಲಿ ನಾಯ್ಸ ವಿಶ್ವವಿದ್ಯಾಲಯ'ದ ವಿಜಾnನಿಗಳು ಪರಂಗಿಯಲ್ಲಿರುವ ಲೈಕೋಪೀನ್‌  ಆಂಟಿಆಕ್ಸಿಡೆಂಟ್‌ ಚಟುವಟಿಕೆಗೆ ಸಹಾಯಕವಾಗಿದ್ದು, ಪರಂಗಿಯನ್ನು ಅದ್ಭುತದ "ಕ್ಯಾನ್ಸರ್‌ ಫೈಟಿಂಗ್‌ ಏಜೆಂಟ್‌' ಮಾಡಿದೆ ಎನ್ನುತ್ತಾರೆ.  ಲೈಕೋಪೀನ್‌ ಕ್ಯಾನ್ಸರ್‌ ಕೋಶಗಳು ಸಾಯುವಂತೆ ಮಾಡುತ್ತದೆ, ಮೆಟಸ್ಟಾಸಿಸ್‌ ಆಗದಂತೆ ತಡೆಯುತ್ತದೆ.

        ಆಸ್ಟ್ರೇಲಿಯಾದ ಒಂದು ಅಧ್ಯಯನ ಲೈಕೋಪೀನ್‌ ಅಧಿಕ ಇರುವ ಹಣ್ಣು ತರಕಾರಿಗಳನ್ನು ತಿಂದ ಪುರುಷರಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌ ಬರುವ ಸಾಧ್ಯತೆ ಶೇಕಡಾ 82ರಷ್ಟು ಕಡಮೆ ಇದೆ ಎನ್ನುತ್ತದೆ. "ಏಷಿಯಾ ಪ್ಯಾಸಿಫಿಕ್‌ ಜರ್ನಲ್‌ ಆಫ್ ಕ್ಲಿನಿಕಲ್‌ ನ್ಯೂಟ್ರಿಷನ್‌ 2007', ಲೈಕೋಪೀನ್‌ ಅಧಿಕ ಇರುವ ಆಹಾರಗಳನ್ನು ಗ್ರೀನ್‌ ಟೀ ಜೊತೆಯಲ್ಲಿ ತೆಗೆದುಕೊಂಡಾಗ ಅದರ ಪ್ರಭಾವ ಮತ್ತೂ ಹೆಚ್ಚಿರುವುದನ್ನು ದಾಖಲಿಸಿದೆ. ಪರಂಗಿ ಹಣ್ಣಿನಲ್ಲಿ "ಐಸೋಥಿಯೋಸೈನೇಟ್ಸ್‌' ಎಂಬ ಕಾಂಪೌಂಡ್‌ ಇದೆ. ಪ್ರಾಣಿಗಳ  ಮೇಲೆ ನಡೆದ ಪ್ರಯೋಗಗಳಲ್ಲಿ ಈ ಕಾಂಪೌಂಡ್‌ ಸ್ತನ, ಶ್ವಾಸಕೋಶ, ಹೆಗ್ಗರುಳು, ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಸ್‌), ಪ್ರಾಸ್ಟೇಟ್‌ ಮತ್ತು ರಕ್ತದ ಕ್ಯಾನ್ಸರ್‌ಗಳನ್ನು ತಡೆಯುವಲ್ಲಿ ಸಹಾಯಕವಾಗಿದ್ದು, ಮನುಷ್ಯರಲ್ಲಿಯೂ ಇವುಗಳನ್ನು ತಡೆಯುವ ಸಾಧ್ಯತೆಯನ್ನು ತೋರಿವೆ. ಈ ಕಾಂಪೌಂಡ್‌ ಕ್ಯಾನ್ಸರ್‌ ಕೋಶಗಳು ರೂಪುಗೊಳ್ಳುವುದನ್ನು ಮತ್ತು ಅವು ಬೆಳೆಯುವುದನ್ನು ತಡೆಯುತ್ತವೆ ಎಂದು 2008ರ ಅಕ್ಟೋಬರ್‌ ತಿಂಗಳ "ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್ ಆಂಕಾಲಜಿ' ಹೇಳುತ್ತದೆ. ಜಪಾನಿನ "ಓಕಯಾಮ ವಿಶ್ವವಿದ್ಯಾಲಯ'ದ ಸಂಶೋಧನೆಗಳು ಕೂಡಾ ಪರಂಗಿಯಲ್ಲಿರುವ ಐಸೋಥಿಯೋಸೈನೇಟ್ಸ್‌ಗೆ ಕ್ಯಾನ್ಸರ್‌ ಕೋಶಗಳನ್ನು ಕೊಲ್ಲಬಲ್ಲ ಗುಣವಿರುವುದನ್ನು ತೋರಿಸಿವೆ. 

        ಪರಂಗಿ ಹಣ್ಣು ಮತ್ತು ಪರಂಗಿ ಮರದ ಉಳಿದ ಭಾಗಗಳಲ್ಲಿ ಶಕ್ತಿಯುತ "ಪ್ರೋಟಿಯೋಲೈಟಿಕ್‌' ಕಿಣ್ವಗಳು ಇರುವುದನ್ನು ಓದಿದೆ. ಏನಿವು ಪ್ರೋಟಿಯೋಲೈಟಿಕ್‌ ಕಿಣ್ವಗಳು ಎಂದು ಮತ್ತಷ್ಟು ತಿಳಿಯಲು ಪ್ರಯತ್ನಿಸಿದಾಗ, ಇವು ಪ್ರೋಟಿನ್‌ ಅನ್ನು ಪಚನ ಮಾಡಿಕೊಳ್ಳುವ ಕಿಣ್ವಗಳು ಎಂದು ಅರಿವಾಯಿತು. ಶಕ್ತಿಯುತ ಪ್ರೋಟಿಯೋಲೈಟಿಕ್‌ ಕಿಣ್ವಗಳಾದ ಪಾಪೇನ್‌  ಮತ್ತು ಕೀಮೋಪಾಪೇನ್‌ಗಳು ಪರಂಗಿಯಲ್ಲಿವೆ. ಈ ಕಿಣ್ವಗಳು ಆಹಾರದಲ್ಲಿರುವ ಪ್ರೊಟೀನ್‌ ಅನ್ನು ಅಮೈನೋ ಆಸಿಡ್‌ ಆಗಿ ತುಂಡರಿಸಿ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯಕವಾಗಿವೆ. ಊಟವಾದ ಮೇಲೆ ಪರಂಗಿ ಹಣ್ಣು ತಿನ್ನುವುದು ಪಚನ ಕ್ರಿಯೆಯನ್ನು ಉತ್ತೇಜಿಸುತ್ತದೆ, ಹೊಟ್ಟೆ ಉಬ್ಬರಿಸಿ ಬರುವುದಿಲ್ಲ, ಗ್ಯಾಸ್‌ ಉತ್ಪನ್ನವನ್ನು ನಿಯಂತ್ರಿಸುತ್ತದೆ. ಪಾಪೇನ್‌ ಕಿಣ್ವ ಕರುಳಿನಲ್ಲಿರುವ ಪರಾವಲಂಬಿಗಳನ್ನು ನಾಶ ಮಾಡುತ್ತದೆ.

        ಪ್ರೊಟಿಯೋಲೈಟಿಕ್‌ ಕಿಣ್ವಗಳು, ವೈರಸ್‌, ಗಡ್ಡೆಗಳು, ಫ‌ಂಗಸ್‌ ಮುಂತಾದುವುಗಳ ಸುತ್ತ ಇರುವ ಗಟ್ಟಿಯಾದ ಕವಚವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ. ಒಮ್ಮೆ ಈ ಕವಚ ಇಲ್ಲವಾಯಿತು  ಎಂದರೆ, ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಈ ವೈರಸ್‌, ಫ‌ಂಗಸ್‌ ಮತ್ತು ಕ್ಯಾನ್ಸರ್‌ ಗಡ್ಡೆಗಳನ್ನೂ ಸುಲಭವಾಗಿ ನಾಶ ಮಾಡಬಲ್ಲದು.

        ಇಷ್ಟು ಮಾಹಿತಿ ಪರಂಗಿ ಹಣ್ಣಿನ ಬಗ್ಗೆ ತಿಳಿದಿತ್ತು. ಆದರೆ ಹೆರಾಲ್ಡ್‌ ಟೀಟ್ಸ್‌ ತನ್ನ ಪುಸ್ತಕ "ಪಪಾಯ ದಿ ಮೆಡಿಸಿನ್‌ ಟ್ರೀ'ನಲ್ಲಿ ನೀಡಿರುವ ಪರಂಗಿ ಮರದ ಎಲೆಯ ರಸವನ್ನು ಕುಡಿದು ಕ್ಯಾನ್ಸರ್‌ನಿಂದ ಪಾರಾದ ಜನರ ವಿವರ ಅದ್ಭುತವಾಗಿ ಕಂಡಿತು.

        ಈ ಪುಸ್ತಕದಲ್ಲಿ ಹೆರಾಲ್ಡ್‌, ಆಸ್ಟ್ರೇಲಿಯಾದ "ಗೋಲ್ಡ್‌ ಕೋಸ್ಟ್‌ ಬುಲೆಟಿನ್‌' ಮಾಡಿದ ವರದಿಯನ್ನು ಉಲ್ಲೇಖೀಸಿದ್ದಾರೆ. ಗೋಲ್ಡ್‌ ಕೋಸ್ಟಿನ  ಸ್ಟಾನ್‌ ಶೆಲ್ಡನ್‌ ಎಂಬಾತ ಪರಂಗಿ ಎಲೆಯ ಕಷಾಯ ಮಾಡಿಕೊಂಡು ಕುಡಿದು ತನ್ನ ಕ್ಯಾನ್ಸರ್‌ ರೋಗವನ್ನು ಗುಣ ಮಾಡಿಕೊಂಡ ಘಟನೆ ಮೊಟ್ಟಮೊದಲಿಗೆ 1978ರಲ್ಲಿ "ಗೋಲ್ಡ್‌ ಕೋಸ್ಟ್‌ ಬುಲೆಟಿನ್‌'ನಲ್ಲಿ ಪ್ರಕಟವಾಗಿತ್ತು. ಈ ಪುಸ್ತಕ ಬರೆಯುವ ಹೊತ್ತಿಗೆ ಶೆಲ್ಡನ್‌ಗೆ 88 ವರ್ಷ ವಯಸ್ಸು. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ವೈಜಾnನಿಕ ಸಂಶೋಧನೆ, "ಪರಂಗಿಯಲ್ಲಿರುವ ರಾಸಾಯನಿಕ ಕಾಂಪೌಂಡ್‌ ಇಂದು ನಮ್ಮಲ್ಲಿರುವ ಕ್ಯಾನ್ಸರ್‌ ವಿರೋಧಿ ಔಷಧಿಗಳಿಗಿಂತ ನೂರು ಸಾವಿರ ಪಾಲು ಹೆಚ್ಚು ಶಕ್ತವಾಗಿದೆ' ಎಂದು ತೋರಿಸಿದೆ. ಶಿಲ್ಡನ್‌ಗೆ ಈ ವೈಜಾnನಿಕ ಸಂಶೋಧನೆಯ ಫ‌ಲಿತಾಂಶಗಳು ಅಚ್ಚರಿ ತರಿಸಿಲ್ಲ. "ನನ್ನ ಎರಡೂ ಶ್ವಾಸಕೋಶಕ್ಕೆ ಕ್ಯಾನ್ಸರ್‌ ಬಡಿದು ನಾನು ಸಾಯುತ್ತಿದ್ದೆ.
        "ನೀನು ಉಳಿಯುವುದಿಲ್ಲ' ಎಂದು ವೈದ್ಯರು ತಿಳಿಸಿದ್ದರು. ಆಗ ನನಗೆ ಪುರಾತನ ಅಬೋರಿಜಿನಲ್‌ ಔಷಧಿಯಾದ ಪರಂಗಿ ಎಲೆಗಳ ರಸದ ಪ್ರಯೋಗವನ್ನು ಯಾರೋ ತಿಳಿಸಿದರು. ಎರಡು ತಿಂಗಳ ಪ್ರಯೋಗದ ನಂತರ ನನ್ನ ಎದೆಯ ಎಕ್ಸ್‌ರೇ ತೆಗೆದಾಗ, ನನ್ನ ಶ್ವಾಸಕೋಶಗಳೆರಡೂ ಸ್ವತ್ಛವಾಗಿ ಆರೋಗ್ಯವಂತವಾಗಿದ್ದವು. ನನ್ನ ವೈದ್ಯರಿಗೆ ಹೇಳಿದೆ, ಅವರು ನನ್ನ ಮಾತುಗಳನ್ನು ನಂಬಲಿಲ್ಲ. ಆದರೆ ನಂತರ ತಮ್ಮದೇ ಪರೀಕ್ಷೆಗಳನ್ನು ಮಾಡಿ ನೋಡಿ, ನೀನು ಪರಂಗಿ ಎಲೆಯ ರಸವನ್ನು ಕುಡಿಯುತ್ತಲೇ ಹೋಗು' ಎಂದು ಆದೇಶಿಸಿದರು. ಇದೆಲ್ಲ ನಡೆದದ್ದು 1962ರಲ್ಲಿ. ಮತ್ತೆ ಕ್ಯಾನ್ಸರ್‌ ಶೆಲ್ಡನ್‌ನಲ್ಲಿ ಮರುಕಳಿಸಲಿಲ್ಲ. ತಮ್ಮ ಈ ಪರಂಗಿ ಎಲೆಯ ಕಷಾಯದ ವಿಧಾನವನ್ನು ಅನೇಕರೊಡನೆ ಅವರು ಹಂಚಿಕೊಂಡರು. ಅನೇಕರಲ್ಲಿ ಇದೇ ರೀತಿ ಕ್ಯಾನ್ಸರ್‌ ಕಾಯಿಲೆ ವಾಸಿಯಾಯಿತು.

        (ಆಸ್ಟ್ರೇಲಿಯಾದ ಸ್ಥಳೀಯ "ಅಬೊರಿಜೀನಲ್‌' ಬುಡಕಟ್ಟು ಜನಾಂಗದಲ್ಲಿ, ಗಿಡ ಮರಗಳ ಎಲೆ ತೊಗಟೆ ಕಾಯಿಗಳಿಂದ ನೂರಾರು ವರ್ಷಗಳಿಂದ ರೂಢಿಯಲ್ಲಿರುವ ಔಷಧಿ ಚಿಕಿತ್ಸೆಗಳಿವೆ. ಅವರ ಈ ಸಾಂಪ್ರದಾಯಿಕ ವೈದ್ಯ ಚಿಕಿತ್ಸಾ ಪದ್ಧತಿ ಇಂದಿಗೂ ಕೂಡಾ "ಬುಷ್‌ ಮೆಡಿಸಿನ್‌' ಎಂಬ ಹೆಸರಿನಲ್ಲಿ ಕಾಣಸಿಗುತ್ತದೆ. ಅಂದ ಹಾಗೆ, ಪರಂಗಿ ನಮ್ಮ ಆಯುರ್ವೇದ ಮತ್ತು ಯುನಾನಿಯಲ್ಲಿಯೂ ಬಳಕೆಯಲ್ಲಿದೆ.)

        ಹೆರಾಲ್ಡ್‌ ಅವರ ಪುಸ್ತಕ ಶೆಲ್ಡನ್‌ ಹೇಳಿರುವ ಪರಂಗಿ ಎಲೆಯ ಪ್ರಯೋಗದ ವಿಧಾನವನ್ನೂ ನೀಡಿದೆ. "ಮಧ್ಯಮ ಅಳತೆಯ ಕೆಲವು ಪರಂಗಿ ಎಲೆಗಳನ್ನು ತೆಗೆದುಕೊಳ್ಳಿ. ಅವನ್ನು ಹರಿದು ಒಂದು ತಪ್ಪಲೆಯಲ್ಲಿ ಎರಡು ಲೀಟರ್‌ ನೀರು ಹಾಕಿ ಕುದಿಸಿ. ನೀರು ಕುದಿದಾಗ, ನೀರಿನ ಅಳತೆ ಅರ್ಧವಾಗುವ ತನಕ ಸಿಮ್ಮರ್‌ ಮಾಡಿ. ಇದಕ್ಕೆ ಕೆಲವು ಗಂಟೆಗಳೇ ಹಿಡಿಸಬಹುದು. ದಿನಕ್ಕೆ ಮೂರು ಬಾರಿ 50 ಮಿಲಿ ಲೀಟರ್‌ ತೆಗೆದುಕೊಳ್ಳಿ' ಎನ್ನುತ್ತಾರೆ. ಫ್ರಿಜ್‌ನಲ್ಲಿ ಈ ರಸವನ್ನು ಇಡಬಹುದು. ಆದರೆ ಪ್ಲಾಸ್ಟಿಕ್‌ ಬಳಸ ಬೇಡಿ. ಒಮ್ಮೆ ಮಾಡಿದರೆ ಕೆಲವು ದಿನಗಳ ತನಕ ಉಪಯೋಗಿಸಬಹುದು ಎನ್ನುತ್ತಾರೆ. ನಿಜ ಕುಡಿಯುವುದು ಕಹಿ, ಕುಡಿಯುವುದು ಸುಲಭವಲ್ಲ. ಕೆಲವರು ಪರಂಗಿ ಎಲೆಯನ್ನು  ಬಿಸಿಲಿನಲ್ಲಿ ಒಣಗಿಸಿ, ಚಹಾ ತರಹ ಕುದಿಸಿ, ಜೇನುತುಪ್ಪ ಬೆರೆಸಿ ತೆಗೆದುಕೊಳ್ಳುತ್ತಾರೆ.

        ಆದರೆ ತಾಜಾ ಎಲೆಗಳಷ್ಟು ಪ್ರಭಾವ ಇದರಲ್ಲಿ ಬಹುಶಃ ಇರದು. 

        ಹೆರಾಲ್ಡ್‌ ಅವರ ಪುಸ್ತಕದಲ್ಲಿ ಆರ್‌.ಜೆ.ಡಬ್ಲ್ಯು ಎಂಬುವವರ ಪತ್ರದಿಂದ ಉಲ್ಲೇಖೀಸಿದ್ದಾರೆ. ಆರ್‌.ಜೆ. ಡಬ್ಲ್ಯು ಹೇಳುತ್ತಾರೆ "ಶೆಲ್ಡನ್‌ ಅನುಭವ ನನಗೆ ಸ್ಫೂರ್ತಿ ನೀಡಿತು. ನನ್ನಲ್ಲಿಗೆ ಓರ್ವ 40 ವರ್ಷದವ ಬ್ಲಾಡರ್‌ ಕ್ಯಾನ್ಸರ್‌ನಿಂದ ನರಳುತ್ತಾ ಬಂದಿದ್ದ. ಎರಡು ಆಪರೇಷನ್‌ ಆದರೂ, ಅದು ಮೆಟಸ್ಟಾಸಿಸ್‌ ಆಗುವುದನ್ನು ತಡೆದಿರಲಿಲ್ಲ. ಆತನಿಗೆ ಜಂಕ್‌ ಫ‌ೂಡ್‌ ತಿನ್ನಲೇಬಾರದು ಎಂದು ವಿಧಿಸಿದೆ. ಅಷ್ಟೇ ಅಲ್ಲ, ಯಾವುದೇ ಪ್ರಿಸರ್‌ವೆಟಿವ್‌ ಇಲ್ಲದ ತಾಜಾ ಆಹಾರವನ್ನೇ ಸೇವಿಸಬೇಕು ಎಂದೂ ಹೇಳಿದೆ. ಜೊತೆಗೆ ಮೈದಾ, ಸಕ್ಕರೆ, .ಕೃತಕ ಬಣ್ಣ, ಕೃತಕ ವಾಸನೆ ಇರುವ ಯಾವ ಆಹಾರವನ್ನೂ ಮುಟ್ಟಕೂಡದು ಎಂದೆ. ಇಷ್ಟೆಲ್ಲ ಆಹಾರದ ಬಗ್ಗೆ ತಿಳಿಸಿ ಹೇಳಿ, ಶೆಲ್ಡನ್‌ ತಿಳಿಸಿರುವ ವಿಧಾನವನ್ನು ಪರಂಗಿ ಎಲೆಯ ಕಷಾಯ ಮಾಡಿ ಚೆನ್ನಾಗಿ ಕುಡಿಯುವಂತೆ ಹೇಳಿದೆ. ಆತ ನಾನು ಹೇಳಿದಂತೆಯೇ ಮಾಡಿದ. ಐದು ವಾರದ ನಂತರ ನೋಡಿದಾಗ, ಅವನ ದೇಹದಲ್ಲಿ ಕ್ಯಾನ್ಸರಿನ ಸುಳಿವೇ ಇರಲಿಲ್ಲ'.

        ಇಂದು ಪರಂಗಿ ಎಲೆಗಳನ್ನು ಒಣಗಿಸಿ ಮಾಡಿದ "ಚಹಾ ಪುಡಿ' ವಿದೇಶಗಳಲ್ಲಿ ಅಂಗಡಿಯಲ್ಲಿ ದೊರೆಯುತ್ತದೆ.
        ಸ್ಥಳೀಯ ಜನಾಂಗಗಳ ಪುರಾತನ ವೈದ್ಯ ಪದ್ಧತಿ ಅಮೆರಿಕದ ಕ್ಯಾನ್ಸರ್‌ ತಜ್ಞ ಡಾ. ನಾಮ್‌ ಡ್ಯಾಂಗ್‌ ಅವರನ್ನು ಆಕರ್ಷಿಸಿತು. ಎಂ.ಡಿ. ಮತ್ತು ಪಿ.ಎಚ್‌.ಡಿ. ಪದವಿ ಪಡೆದಿರುವ ಡಾ. ನಾಮ್‌ ಡ್ಯಾಂಗ್‌, ಪರಂಗಿ ಎಲೆಯ ಕ್ಯಾನ್ಸರ್‌ ವಿರೋಧಿ ಗುಣಗಳ ಸಂಶೋಧನೆಯನ್ನು ಆರಂಭಿಸಿದರು. ಡಾ. ಡ್ಯಾಂಗ್‌ "ಜರ್ನಲ್‌ ಆಫ್ ಎಥೊ°ಫಾರ್ಮಕಾಲಜಿ'ಯಲ್ಲಿ ತಮ್ಮ ಸಂಶೋಧನೆಯ ಫ‌ಲಿತಾಂಶ‌ಗಳನ್ನು ದಾಖಲಿಸಿದ್ದಾರೆ. ಇವರ ಸಂಶೋಧನೆ, ಆಸ್ಟ್ರೇಲಿಯಾ ಮತ್ತು ವಿಯಟ್ನಾಂನ ಸ್ಥಳೀಯ ಜನರು ನೂರಾರು ವರ್ಷಗಳಿಂದ ಬಳಸಿಕೊಂಡು ಬಂದ ಪರಂಗಿ ಕುರಿತ ಅನುಭವದ ವರದಿಯನ್ನು ಅನುಮೋದಿಸುತ್ತದೆ.

        ಡಾ. ಡ್ಯಾಂಗ್‌ ಫ್ಲಾರಿಡಾ ವಿಶ್ವವಿದ್ಯಾಲಯದ ಕ್ಯಾನ್ಸರ್‌ ಸೆಂಟರ್‌ ಕ್ಲಿನಿಕಲ್‌ ಟ್ರಯಲ್ಸ್‌ ಆಫೀಸ್‌ನ ನಿರ್ದೇಶಕರು. ಇವರ ಪ್ರಾಥಮಿಕ ಸಂಶೋಧನೆ, ಪರಂಗಿ  ಆಶ್ಚರ್ಯಕರವಾದ ರೀತಿಯಲ್ಲಿ ಕ್ಯಾನ್ಸರ್‌ ಮೇಲೆ ಪ್ರಭಾವ ಬೀರುತ್ತದೆ ಎಂದು ತೋರಿಸಿದೆ. ಇದಕ್ಕೆ ಪೂರಕವಾದ ಸಂಶೋಧನೆಯನ್ನು ಜಪಾನಿನ ಟೋಕಿಯೋ ವಿಶ್ವವಿದ್ಯಾಲಯದ "ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸಯನ್ಸ್‌'ನ "ಅಡ್ವಾನ್ಸ್‌$x ಕ್ಲಿನಿಕಲ್‌ ರಿಸರ್ಚ್‌ ಸೆಂಟರ್‌' ಕೂಡಾ ನಡೆಸಿದೆ.

        ಡಾ. ನಾಮ್‌ ಡ್ಯಾಂಗ್‌ ಪರಂಗಿ ಎಲೆಗಳಿಂದ ಹೊರತೆಗೆದ ಸಾರ,  ಪ್ರಯೋಗಶಾಲೆಯಲ್ಲಿ ಕ್ಯಾನ್ಸರ್‌ ಕೋಶಗಳನ್ನು ನೇರವಾಗಿ ಕೊಂದಿತು. ಪಿತ್ತಜನಕಾಂಕ (ಲಿವರ್‌), ಶ್ವಾಸಕೋಶ, ಸ್ತನ, ಗರ್ಭಕೋಶದ ಕೊರಳು (ಸರ್ವಿಕ್ಸ್‌), ಮೇದೋಜೀರಕ ಗ್ರಂಥಿಯೂ ಸೇರಿದಂತೆ ಸುಮಾರು ಹತ್ತು ಬಗೆಯ ಕ್ಯಾನ್ಸರ್‌ ಕೋಶಗಳ ಮೇಲೆ ಪರೀಕ್ಷಿಸಿದಾಗ, ಅಷ್ಟೂ ಬಗೆಯ ಕೋಶಗಳ ಮೇಲೆ ಪರಂಗಿ ಎಲೆಯ ಎಕ್ಸ್‌ಟ್ರಾಕ್ಟ್ ಕೆಲಸ ಮಾಡಿತು. ಅಷ್ಟೇ ಅಲ್ಲ ಪರಂಗಿ ಎಲೆಯ ಸಾರ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಸಹಾಯಕ ಎಂದು ಗುರುತಿಸಿದರು.

        ಈ ಎಲ್ಲ ಸಂಶೋಧನೆಗಳು, ಬಹುಶಃ ಮುಂದೊಮ್ಮೆ ಅಡ್ಡ ಪರಿಣಾಮಗಳಿಲ್ಲದ ಸುಧಾರಿತ ಕ್ಯಾನ್ಸರ್‌ ಚಿಕಿತ್ಸೆಗೆ ಕಾರಣವಾಗಬಲ್ಲವು.

        ನಾನು ಓದಿದ, ಅತ್ಯಂತ ಆಸಕ್ತಿಯಿಂದ ಅಧ್ಯಯನ ಮಾಡಿ ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಆದರೆ ದಯವಿಟ್ಟು ನಿಮಗೆ ನೆನಪಿರಲಿ, ನಾನು ವೈದ್ಯಳಲ್ಲ. ಪರಂಗಿ ಎಲೆಗಳನ್ನು ಕುರಿತು ನೀವೇ ಪ್ರಯೋಗಕ್ಕೆ ಇಳಿಯಲು ಹೋಗಬೇಡಿ. ನಿÊ ‌ು¾ ವೈದ್ಯರೊಡನೆ ಸಮಾಲೋಚಿಸಿ, ಅವರ ಸಲಹೆಯನ್ನು ಪಾಲಿಸಿ. ಕ್ಯಾನ್ಸರ್‌ ಇಂದು ನಮ್ಮ ಸಮಾಜದಲ್ಲಿ ಎಂತಹ ಭಯಂಕರ ರೋಗವಾಗಿದೆ ಎಂದರೆ, ಅದನ್ನು ಬಗ್ಗು ಬಡಿಯಲು ರೋಗಿಗಳು ಮತ್ತು ವೈದ್ಯರು ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ದಿಕ್ಕಿನಲ್ಲಿ, ಆಧುನಿಕ ಸಂಶೋಧನೆಗಳ ಹಾಗೂ ಪುರಾತನ ವೈದ್ಯ ವಿಧಾನಗಳ ಮಾಹಿತಿ ಈ ರೋಗವನ್ನು ಗೆಲ್ಲುವ ಭರವಸೆಯನ್ನು ನಮಗೆ ನೀಡಬಲ್ಲದು. 

        ಆರೋಗ್ಯದ ಆಗರವಾದ ಪರಂಗಿಯನ್ನು ನಿಮ್ಮ ಮನೆಯ ಅಂಗಳದಲ್ಲಿ, ಹಿತ್ತಲಲ್ಲಿ ಬೆಳೆಯಿರಿ. ಅಂದ ಹಾಗೆ, ನೆಲವಿಲ್ಲದ ಮನೆಗಳಲ್ಲೂ ಪರಂಗಿ ಬೆಳೆಯಬಹುದೆಂದು ಮಾಲತಿಯವರಿಂದ ಅರಿತೆ. ಮಾಲತಿ ತಾರಸಿಯ ಮೆಲೆ ಒಂದಿಷ್ಟು ಇಟ್ಟಿಗೆಗಳನ್ನು ಒಟ್ಟಿ, ಮಣ್ಣು ಹಾಕಿ ಪರಂಗಿ ಗಿಡ ಬೆಳೆದು ಅದರಲ್ಲಿ ಬಿಟ್ಟ ಹಣ್ಣನ್ನು ಸಂಭ್ರಮದಿಂದ ಹಂಚಿಕೊಂಡರು. ಆರೋಗ್ಯದ ಹಾದಿ ಸರಳವಿದೆ ಮತ್ತು ನೇರವಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      • Copyright @ 2009 Udayavani.All rights reserved.
      • Designed & Hosted By 4cplus