Udayavani | Feb 14, 2013
ಕಾಳಸಂತೆಕೋರರ ಹಾವಳಿಯೋ ಅಥವಾ ಉತ್ಪಾದನೆಯೇ ಕುಸಿದಿದೆಯೋ ಗೊತ್ತಿಲ್ಲ. ಆದರೆ, ನಾಡಿನ ಜನರ ತುತ್ತಿನ ಚೀಲ ತುಂಬುವ ಪ್ರಮುಖ ಧಾನ್ಯ ಅಕ್ಕಿ ಬೆಲೆ ಮಾತ್ರ ಗಗನಚುಂಬಿಯಾಗಿದೆ. ಜನಸಾಮಾನ್ಯರ ಹೊಟ್ಟೆಗೆ ಪೆಟ್ಟು ಬೀಳುವ ಸಂದರ್ಭ ಬಂದಿದ್ದರೂ ನಿರ್ಲಜ್ಜ ಸರ್ಕಾರ ಮಾತ್ರ ಇದಕ್ಕೆಲ್ಲಾ ಕೇಂದ್ರ ಕಾರಣ ಎಂದು ಸಬೂಬು ಹೇಳಿ ನುಣುಚಿಕೊಳ್ಳುವ ಹೊಣೆಗೇಡಿತನ ತೋರುತ್ತಿದೆ. ಮಾಧ್ಯಮಗಳು ಹಾಗೂ ಸಾರ್ವಜನಿಕರಿಂದ ತೀವ್ರ ಟೀಕೆ ಬಂದ ನಂತರ ಅಕ್ಕಿ ಸಂತೆ ನಡೆಸುವ ಘೋಷಣೆಯೇನೋ ಮಾಡಿದೆ. ಆದರೆ, ಅಸಲಿಗೆ ಅಕ್ಕಿ ಸಂತೆಯಲ್ಲಿ ಕಳಪೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಚುನಾವಣೆ ಸಮೀಪಿಸಿದ್ದರೂ ಜನರ 'ಹೊಟ್ಟೆಪಾಡಿ'ನ ಬಗ್ಗೆ ಗಮನ ನೀಡದ ಸರ್ಕಾರದ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಡಿ.ಎನ್. ಜೀವರಾಜ್ ಅಕ್ಕಿ ಬೆಲೆ ಏರಿಕೆಯ ಹಿಂದಿನ ಕಾರಣ ಹಾಗೂ ಸರ್ಕಾರ ಏನು ಮಾಡುತ್ತಿದೆ ಎಂಬ ಬಗ್ಗೆ ನೇರಾನೇರ ಮಾತನಾಡಿದ್ದಾರೆ.
*ಆಹಾರ ಸಚಿವರೇ, ಅಕ್ಕಿ ಬೆಲೆ ಗಗನ ಮುಟ್ಟಿದೆ. ಇದಕ್ಕೆ ಕಾರಣ ಏನು ಎಂಬುದಾದರೂ ನಿಮ್ಮ ಇಲಾಖೆಗೆ ಗೊತ್ತಾ?
ರಾಜ್ಯದಲ್ಲಿ ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿಲ್ಲ. ಬರ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಏರಿಕೆಯಾಗಿದೆ.
*ಬರ ಕಳೆದ ವರ್ಷವೂ ಇತ್ತು. ಇಂತಹ ಕಥೆಗಳನ್ನು ಜನ ನಂಬಬೇಕೆ?
ಆಗ ಬರ ಇದ್ದದ್ದು ಹೌದು. ಆದರೆ, ಆಗ ನಮ್ಮಲ್ಲಿ ಅಕ್ಕಿ ದಾಸ್ತಾನಿತ್ತು. 2011 ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ಅಕ್ಕಿ ರಫ್ತು ಮಾಡಲು ಅನುಮತಿ ನೀಡಿದ್ದರಿಂದ ದಾಸ್ತಾನು ಕರಗುತ್ತಿದ್ದಂತೆ ಕೊರತೆ ಉಂಟಾಗಿ ಬೆಲೆ ಏರಿಕೆಯಾಯಿತು.
* ಅಕ್ಕಿ ರಫ್ತು ನಿಯಂತ್ರಿಸುವ ತಾಕತ್ತು ನಿಮಗೆ ಇಲ್ಲವಾ?
ಈಗಿನ ನಿಯಮಾವಳಿಗಳ ಪ್ರಕಾರ ಯಾವುದೇ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರ ರಫ್ತು ಮಾಡಲು ಅನುಮತಿ ನೀಡಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ರಫ್ತು ಮಾಡಲು ನೀಡಿರುವ ಅನುಮತಿ ವಾಪಸ್ ಪಡೆಯಬೇಕು ಎಂದು ಕೋರಿ ಕೇಂದ್ರಕ್ಕೆ ಜನವರಿ 31ರಂದೇ ಪತ್ರ ಬರೆದಿದ್ದೇವೆ.
*ಎಲ್ಲದಕ್ಕೂ ಕೇಂದ್ರ ಅಂತೀರಲ್ಲ. ಮತ್ತೆ ರಾಜ್ಯ ಸರ್ಕಾರ ಅಂತ ಒಂದು ಏಕೆ ಇರಬೇಕು? ಇದು ಹೊಣೆಗೇಡಿತನವಲ್ಲವೇ?
ಸಾಮಾನ್ಯವಾಗಿ ರಾಜ್ಯ ಸರ್ಕಾರ ಪತ್ರ ಬರೆದರೆ ಕೇಂದ್ರದಿಂದ ಅದಕ್ಕೆ ಉತ್ತರ ಬರುತ್ತದೆ. ಒಂದೊಮ್ಮೆ ಬರದಿದ್ದರೆ ರಾಜ್ಯದ ಹಿತದೃಷ್ಟಿಯಿಂದ ನಮ್ಮದೇ ಆದ ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ಬಿದ್ದರೆ ತುರ್ತು ಸಚಿವ ಸಂಪುಟ ಸಭೆ ಕರೆದು ತೀರ್ಮಾನಿಸುತ್ತೇವೆ. ಕಾಯ್ದೆಗೆ ತಿದ್ದುಪಡಿ ತರಲು ಹಿಂದೇಟು ಹಾಕುವುದಿಲ್ಲ.
*ಕಾಯ್ದೆಗೆ ತಿದ್ದುಪಡಿ ಆಗೋದರೊಳಗೆ ರಾಜ್ಯದ ಅಕ್ಕಿ ಆಂಧ್ರ-ತಮಿಳುನಾಡು ಪಾಲಾಗಿಹೋಗುತ್ತೆ. ಮೊದಲು ಅದನ್ನು ತಡೆಯಬೇಕಲ್ಲ. ಅದಕ್ಕೇನು ಮಾಡ್ತಿರಾ?
ಒಕ್ಕೂಟ ವ್ಯವಸ್ಥೆಯಲ್ಲಿ ನೆರೆ ರಾಜ್ಯಗಳಿಗೆ ಅಕ್ಕಿ ಸಾಗಾಟದ ಮೇಲೆ ನಿಷೇಧ ಹೇರಲು ಬರುವುದಿಲ್ಲ. ಹಾಗೆ ಮಾಡಬೇಕಾದರೆ ಮಸೂದೆ ತರಬೇಕು. ಎಲ್ಲರೂ ತಿಳಿದುಕೊಂಡಿರುವಂತೆ ಆಂಧ್ರ ಮತ್ತು ತಮಿಳುನಾಡಿಗೆ ನಮ್ಮ ಅಕ್ಕಿ ಸಾಗಣೆಯಾಗುತ್ತಿಲ್ಲ. ನಮ್ಮ ರಾಜ್ಯಕ್ಕಿಂತ ಅಕ್ಕಿಯ ಬೆಲೆ ಹೆಚ್ಚಾಗಿದ್ದರೆ ತಾನೇ ಇಲ್ಲಿನವರು ಅಲ್ಲಿಗೆ ಅಕ್ಕಿ ಕೊಂಡೊಯ್ಯುವುದು. ಅಲ್ಲಿ ಅಕ್ಕಿ ಬೆಲೆ ಕಡಿಮೆ ಇದೆ. ಹೀಗಿರುವಾಗ ಇಲ್ಲಿಂದ ಅಕ್ಕಿ ಅಲ್ಲೇಕೆ ಕೊಂಡೊಯ್ದು ಮಾರಾಟ ಮಾಡ್ತಾರೆ. ರಾಜ್ಯದಿಂದ ರಾಜ್ಯಕ್ಕೆ ಅಕ್ಕಿ ಸಾಗಣೆ ನಿಯಂತ್ರಿಸಿದರೆ ಬ್ಲಾಕ್ ಮಾರ್ಕೆಟ್ ಪ್ರಾರಂಭವಾಗುವ ಆತಂಕವೂ ಇದೆ.
* ಇಷ್ಟೆಲ್ಲಾ ಆದರೂ ಅಕ್ಕಿ ಮಿಲ್ ಮಾಲಿಕರ ಬಗ್ಗೆ ನಿಮಗೆ 'ಸಾಫ್ಟ್ಕಾರ್ನರ್' ಏಕೆ?
ಇಲ್ಲ. ಅಕ್ಕಿಮಿಲ್ ಮಾಲಿಕರ ಜತೆ ಚರ್ಚಿಸಿ ಅವರ ಸಹಕಾರದೊಂದಿಗೆ ಅಕ್ಕಿಸಂತೆ ಆಯೋಜಿಸುತ್ತಿದ್ದೇವೆ.
* ರಾಜ್ಯದಲ್ಲಿ ಕಾಳಸಂತೆಕೋರರಿಂದಾಗಿಯೇ ಅಕ್ಕಿ ಬೆಲೆ ಏರಿಕೆಯಾಗಿದೆ. ಇದು ಸುಳ್ಳಾ?
ಅದು ನಿಜ. ಅದೇ ಕಾರಣಕ್ಕೆ ಅಕ್ಕಿ ಮಿಲ್‌ಗಳ ಮೇಲೆ ಕೆಲವೆಡೆ ದಾಳಿ ನಡೆಸಲಾಯಿತು. ಆದರೆ, ಮಿಲ್‌ಗಳಲ್ಲಿದ್ದ ಭತ್ತ ಮತ್ತು ಅಕ್ಕಿ ಬೇರೆಡೆ ಸಾಗಿಸುವ ಯತ್ನಗಳು ನಡೆದವು. ಹೀಗಾಗಿ, ಭತ್ತದ ವ್ಯಾಪಾರಿಗಳು ಹಾಗೂ ಅಕ್ಕಿ ಗಿರಣಿ ಮಾಲಿಕರ ಸಭೆ ನಡೆಸಿ ಅಕ್ಕಿ ಸಂತೆ ಆಯೋಜಿಸಲು ತೀರ್ಮಾನಿಸಿದೆವು. ಮೊದಲಿಗೆ ತುಮಕೂರಿನಲ್ಲಿ ಯಶಸ್ವಿಯಾಗಿ ನಡೆದಿದೆ. ದಾವಣಗೆರೆಯಲ್ಲೂ ಫೆ.19 ಮತ್ತು 20ಕ್ಕೆ ಅಕ್ಕಿಸಂತೆ ನಡೆಯಲಿದೆ. ರಾಜ್ಯಾದ್ಯಂತ ಇದು ಮುಂದುವರಿಯಲಿದೆ.
*ಅಕ್ಕಿ ಸಂತೆ ಮಾಡ್ತೀವಿ ಅಂತ ಹೇಳಿ ಅಲ್ಲಿ ಕಳಪೆ ಅಕ್ಕಿ ನೀಡುತ್ತಿದ್ದೀರಂತಲ್ಲಾ, ಸ್ವಲ್ಪವಾದರೂ ಮನುಷ್ಯತ್ವ ಬೇಡವೇ?
ಇದುವರೆಗೂ ಆ ಕುರಿತು ನಮಗೆ ದೂರುಗಳು ಬಂದಿಲ್ಲ. ದೂರು ಬಂದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕಳಪೆ ಅಕ್ಕಿ ಮಾರಾಟ ಮಾಡುವಂತಿಲ್ಲ. ನಮ್ಮ ಇಲಾಖೆ ಆ ಬಗ್ಗೆ ಗಮನಿಸಲಿದೆ.
* ಅಕ್ಕಿಸಂತೆಯಲ್ಲಿ ಅಕ್ಕಿಯ ದರ ನಿಗದಿಯಾಗಿದೆಯಾ?
ಸೋನಾ ಮಸೂರಿ ಕೆ.ಜಿ.ಗೆ 37 ರೂ., ಸ್ವರ್ಣ- 26 ರೂ., ದಪ್ಪ ಅಕ್ಕಿ- 20 ರೂ.ಗೆ ನೀಡಲಾಗುತ್ತಿದೆ. ಬಹುತೇಕ ಇದೇ ದರ ಎಲ್ಲೆಡೆ ಇರಲಿದೆ ಎಂದು ಅಕ್ಕಿಗಿರಣಿ ಮಾಲಿಕರು ಭರವಸೆ ನೀಡಿದ್ದಾರೆ. ಇದಕ್ಕಿಂತ ಕಡಿಮೆಯೂ ಆಗಬಹುದು ಎಂಬ ನಿರೀಕ್ಷೆ ನಮ್ಮದು.
*ಅಕ್ಕಿಸಂತೆಯಲ್ಲಿ ವರ್ತಕರು ಬಂದು ಅಕ್ಕಿ ಖರೀದಿಸಿದರೆ?
ಅದಕ್ಕಾಗಿಯೇ ಅಕ್ಕಿ ಪಡೆಯುವವರು ಪಡಿತರ ಕಾರ್ಡ್ ಅಥವಾ ಗುರುತಿನ ಚೀಟಿ ತೋರಿಸುವುದು ಕಡ್ಡಾಯಗೊಳಿಸಲಾಗಿದೆ. ಅಕ್ಕಿ ಸಂತೆಯಲ್ಲಿ ಅಕ್ಕಿ ಪಡೆದವರ ಮಾಹಿತಿಯನ್ನೂ ನೋಂದಣಿ ಮಾಡಲಾಗುತ್ತದೆ.
* ಅಕ್ಕಿ ಬೆಲೆ ಈಗ ಎಷ್ಟಿದೆ?
ಸರ್ಕಾರದ ಕ್ರಮಗಳಿಂದಾಗಿ 52 ರೂ. ಇದ್ದ ಸೋನಾ ಮಸೂರಿ 45 ರೂ.ಗೆ ಇಳಿದಿದೆ.
*ನೀವು ದರ ಕಡಿಮೆಯಾಗಿದೆ ಅಂತೀರಿ. ಮಾರುಕಟ್ಟೆಯಲ್ಲಿ ಅದೇ ದರ ಇದೆ. ದಿನಸಿ ಅಂಗಡಿಗಳಲ್ಲಿ ದರ ಕಡಿಮೆ ಮಾಡಿಲ್ಲ.
ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಬೆಲೆ ಕಡಿಮೆಯಾಗಿದೆ. ಆದರೂ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
* ಅಕ್ಕಿ ಬೆಲೆ ಏರಿಕೆಗೆ ಇಲಾಖೆ ಕೈಗೊಂಡಿರುವ ಇತರೆ ಕ್ರಮಗಳೇನು?
ಬಿಹಾರ ಹಾಗೂ ಪಂಜಾಬ್‌ನಿಂದ ಕರ್ನಾಟಕಕ್ಕೆ ಭತ್ತ ತರಿಸುವ ಪ್ರಯತ್ನಗಳು ನಡೆಯುತ್ತಿವೆ. ರೈಲುಗಳ ಮೂಲಕ ಸಾಗಣೆ ವೆಚ್ಚವನ್ನೂ ರಾಜ್ಯ ಸರ್ಕಾರವೇ ಭರಿಸಲಿದೆ ಎಂಬ ಭರವಸೆಯನ್ನೂ ನೀಡಲಾಗಿದೆ. ಅಲ್ಲಿಂದ ಭತ್ತ ಬಂದರೆ ದರ ಇಳಿಯಲಿದೆ. ಜತೆಗೆ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ಪಡೆಯಬೇಕು. ರಾಜ್ಯದಲ್ಲಿ 36.70 ಲಕ್ಷ ಎಪಿಎಲ್ ಕಾರ್ಡ್‌ದಾರರಿದ್ದು, 10 ರೂ. ದರದಲ್ಲಿ 9 ಕೆ.ಜಿ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ 13 ಕೆ.ಜಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕಾರ್ಡ್‌ದಾರರು ನ್ಯಾಯಬೆಲೆ ಅಂಗಡಿಗಳಿಂದ ಅಕ್ಕಿ ಪಡೆದರೆ ದರ ತನ್ನಿಂತಾನೆ ಇಳಿಕೆಯಾಗುತ್ತದೆ.
*ಬೋಗಸ್ ಪಡಿತರ ಕಾರ್ಡ್‌ಗಳ ಪತ್ತೆ ಕಾರ್ಯ ಎಲ್ಲಿಗೆ ಬಂತು ?
ಈಗಾಗಲೇ 48 ಲಕ್ಷ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಸರ್ಕಾರಕ್ಕೆ ಮಾಸಿಕ 48 ಕೋಟಿ ರೂ. ಉಳಿತಾಯವಾಗುತ್ತಿದೆ. ಇನ್ನೂ 8 ರಿಂದ 10 ಲಕ್ಷ ಕಾರ್ಡ್‌ಗಳು ಇರುವ ಅಂದಾಜಿದ್ದು, ಅದನ್ನೂ ಪತ್ತೆ ಹಚ್ಚಲಾಗುವುದು.
*ರಾಜ್ಯದಲ್ಲಿ ಇನ್ನೂ ಹಲವಾರು ಕುಟುಂಬಗಳಿಗೆ ಪಡಿತರ ಚೀಟಿಯೇ ಇಲ್ಲವಲ್ಲ?
ರಾಜ್ಯದಲ್ಲಿ ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿ ಸ್ವೀಕಾರ ಎರಡು -ಮೂರು ದಿನಗಳಲ್ಲಿ ಪ್ರಾರಂಭವಾಗಲಿದೆ. ಬಹುಶಃ ಫೆ.18 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
* ಪಡಿತರ ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ ಆನ್‌ಲೈನ್ ದಾಸ್ತಾನು ದಾಖಲು ವ್ಯವಸ್ಥೆ ಎಲ್ಲಿಗೆ ಬಂತು?
ತುಮಕೂರು ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಚಿಕ್ಕಮಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ರಾಯಚೂರಿನಲ್ಲಿ ಅಳವಡಿಸಲಾಗುವುದು. ಮುಂದಿನ ವರ್ಷದೊಳಗೆ ರಾಜ್ಯಾದ್ಯಂತ ಅಳವಡಿಸಲಾಗುವುದು.
*ಎಲೆಕ್ಟ್ರಾನಿಕ್ ಯಂತ್ರ ಅಳವಡಿಕೆಗೆ ವಿರೋಧ ವ್ಯಕ್ತವಾಗಿದೆಯಲ್ಲಾ?
ವಿರೋಧಿಸಿದರೆ ಅಂತಹ ಮಳಿಗೆ ಪರವಾನಗಿ ರದ್ದುಪಡಿಸಿ ಹೊಣೆಗಾರಿಕೆಯನ್ನು ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗುವುದು. ಗ್ರಾಹಕರಿಗೆ ತಲುಪಬೇಕಾದ ಆಹಾರಧಾನ್ಯ ಕಾಳಸಂತೆಗೆ ಹೋಗುವುದು, ಸರ್ಕಾರಕ್ಕೆ ನಷ್ಟ ಉಂಟಾಗುವುದನ್ನು ತಪ್ಪಿಸಲು ಎಲೆಕ್ಟ್ರಾನಿಕ್ ಯಂತ್ರ ಹಾಗೂ ಆನ್‌ಲೈನ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಇದಕ್ಕೆ ವಿರೋಧಿಸಿದರೆ ಅಲ್ಲಿ ಅಕ್ರಮ ನಡೆಯುತ್ತಿತ್ತು ಎಂದೇ ಅರ್ಥ. ಸರ್ಕಾರ ಪ್ರತಿರೋಧ ಲೆಕ್ಕಿಸುವುದಿಲ್ಲ.
*ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನವಾಗಿದೆಯಲ್ಲಾ?
ನಾವೇನು ಮಾಡಲು ಸಾಧ್ಯ. ಅದು ಕೇಂದ್ರಕ್ಕೆ ಬಿಟ್ಟ ವಿಷಯ. ಸಿಲಿಂಡರ್ ಸಬ್ಸಿಡಿ ಗ್ರಾಹಕರಿಗೆ ಸರಿಯಾಗಿ ತಲುಪುವಂತಾಗಲು ಇಲಾಖೆ ಏಜೆನ್ಸಿಗಳ ಮೇಲೆ ಕಣ್ಣಿಟ್ಟಿದೆ.
* ನಿಮ್ಮದೇ ಸರ್ಕಾರ ಇರುವ ಗೋವಾದಲ್ಲಿ ಸಿಲಿಂಡರ್ ಮಿತಿ ಹೆಚ್ಚಿಸಿ ರಾಜ್ಯ ಸರ್ಕಾರವೇ ಸಬ್ಸಿಡಿ ವೆಚ್ಚ ಭರಿಸುತ್ತಿದೆ? ನಿಮಗೆ ಏಕೆ ಇಂತಹ ಕ್ರಮ ಕೈಗೊಳ್ಳುವ ಮನಸ್ಸು ಬರುವುದಿಲ್ಲ?
ಗೋವಾ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮಲ್ಲಂತೂ ರಾಜ್ಯ ಸರ್ಕಾರದಿಂದ ಸಿಲಿಂಡರ್ ಮಿತಿ ಏರಿಸುವ ಮಾತೇ ಇಲ್ಲ. ಸಬ್ಸಿಡಿ ಕಡಿಮೆ ಮಾಡಿರುವುದು ಕೇಂದ್ರದ ತಪ್ಪು. ಅದಕ್ಕೆ ನಾವ್ಯಾಕೆ ಭಾರ ಹೊರಬೇಕು. ಎಲ್ಲದರ ಸಬ್ಸಿಡಿ ತೆಗೆದು ಸಿಲಿಂಡರ್ ಮಿತಿ ಏರಿಸಬೇಕಿತ್ತು.
*ಪೆಟ್ರೋಲ್ ಬಂಕ್‌ಗಳಲ್ಲಿ ತೂಕದಲ್ಲಿ ವ್ಯತ್ಯಾಸ, ಕಲಬೆರೆಕೆ ತಡೆಗಟ್ಟುವಲ್ಲಿ ನಿಮ್ಮ ಇಲಾಖೆ ವಿಫಲವಾಗಿದೆ ಎಂಬ ಮಾತಿದೆಯಲ್ಲಾ?
ಆ ವಿಚಾರದಲ್ಲಿ ಇಲಾಖೆ ಚುರುಕಾಗಬೇಕಿದೆ. ಆದರೂ, ನಾವು ದಾಳಿ ನಡೆಸುವ ಮುನ್ನ ಬಂಕ್‌ಗಳಿಗೆ ನಿಯಮಾವಳಿ ರೂಪಿಸಿ ಕೊಡಬೇಕು. ಹೀಗೇ ಇರಬೇಕು ಎಂದು ನಿಯಮಾವಳಿಯಲ್ಲಿ ಸೂಚಿಸಬೇಕಾಗುತ್ತದೆ.
* ಅಂದರೆ, ಇನ್ನೂ ಪೆಟ್ರೋಲ್ ಬಂಕ್‌ಗಳಿಗೊಂದು ನಿಯಮಾವಳಿಯೇ ಇಲ್ಲ?
ಇಲ್ಲ. ದಾಳಿ ಅಥವಾ ಪರಿಶೀಲನೆ ನಡೆಸಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ನೇಮಕವಾದ ನಂತರ ಸ್ಪಷ್ಟ ನಿಯಮಾವಳಿ ರಚಿಸಿ ಕ್ರಮ ಕೈಗೊಳ್ಳಲಾಗುವುದು.
*ಅಕ್ಕಿ ಬೆಲೆ ಕೈಗೆ ನಿಲುಕದಂತೆ ಆಗಿ ಜನ ನರಳುತ್ತಿದ್ದಾಗ ನಿಮ್ಮ ಸರ್ಕಾರ ಪಿಟೀಲು ಬಾರಿಸಲು ಎಲ್ಲಿಗೆ ಹೋಗಿತ್ತು?
ಹಾಗೇನೂ ಇಲ್ಲ. ಮೊದಲಿಗೆ ಅಕ್ಕಿ ಬೆಲೆ ಹೆಚ್ಚಾದಾಗ ಅದರ ಲಾಭ ರೈತರಿಗೆ ಸಿಗಬಹುದು ಎಂದುಕೊಂಡಿದ್ದೆವು. ಆದರೆ, ಭತ್ತ ಖರೀದಿಯಾಗುತ್ತಿರುವ ಬೆಲೆಗೂ ಅಕ್ಕಿಯ ಬೆಲೆಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದ್ದರಿಂದ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡಿತು.
* ಎಚ್ಚೆತ್ತುಕೊಂಡು ಬಿಟ್ಟಿರಾ! ಹೊಣೆಗಾರಿಕೆ ನಿರ್ವಹಿಸಿದೆ ಎಂಬ ಆತ್ಮತೃಪ್ತಿ ನಿಜಕ್ಕೂ ನಿಮಗೆ ಇದೆಯೇ?
ಖಂಡಿತ ನಿರ್ವಹಿಸಿದ್ದೇನೆ.
ಡಿ.ಎನ್. ಜೀವರಾಜ್
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ