Sunday, May 26, 2013
Last Updated: 5:54:45 AM IST
  • ನಾನೆಲ್ಲಿರುವೆ:
  • ಮುಖಪುಟ Columns VIP_Column_-_Celeb_Writes
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಿಜೆಪಿ ಆಡಳಿತದ ಕೊನೆಯ ದಿನಗಳು
    • ಕೆಡಿಸುವಷ್ಟು ಕೆಡಿಸಿದ ಅನಂತರ ಮಾಡುವುದೆಲ್ಲವೂ ಒಳ್ಳೆಯದೇ ಆಗಿರುತ್ತದೆ. ಪುರಾಣದ ಕತೆಗಳಲ್ಲಿ ಕೆಲ ರಾಕ್ಷಸರ ಉಲ್ಲೇಖಗಳು

      • Udayavani | Feb 15, 2013

        ಕೆಡಿಸುವಷ್ಟು ಕೆಡಿಸಿದ ಅನಂತರ ಮಾಡುವುದೆಲ್ಲವೂ ಒಳ್ಳೆಯದೇ ಆಗಿರುತ್ತದೆ. ಪುರಾಣದ ಕತೆಗಳಲ್ಲಿ ಕೆಲ ರಾಕ್ಷಸರ ಉಲ್ಲೇಖಗಳು ಬರುತ್ತವೆ. ಅವರೆಲ್ಲಾ ಜೀವನದ ಉದ್ದಕ್ಕೂ ದುರಾಚಾರದಲ್ಲೇ ತೊಡಗಿರುತ್ತಾರೆ. ಕೊನೆಗೆ ದೇವತೆಗಳ ಕೋಪಕ್ಕೆ ತುತ್ತಾಗಿ ಯಾವುದೋ ದೇವತೆಯ ಕೈಯಲ್ಲಿ ಯುದ್ಧ ಮಾಡುತ್ತಾ ಮಾಡುತ್ತಾ ಇನ್ನು ಸೋಲು ಮತ್ತು ಸಾವು ನಿಶ್ಚಿತ ಎನ್ನುವ ಹಂತಕ್ಕೆ ಬಂದ ಅನಂತರ ಇದ್ದಕ್ಕಿದ್ದಂತೆಯೇ ಅವರಿಗೆ ತಮ್ಮ ಪೂರ್ವಜನ್ಮದ ನೆನಪಾಗುತ್ತದೆ. ಅವರು ರಾಕ್ಷಸ ಜನ್ಮದಲ್ಲಿ ತಾವು ಮಾಡಿದ ಕೆಲಸಗಳಿಗೆ ಪಶ್ಚಾತ್ತಾಪಪಟ್ಟು ತನ್ನೆದುರು ಹಂತಕನಾಗಿ ನಿಂತಿರುವ ದೇವತೆಯನ್ನು ವಿಧವಿಧವಾಗಿ ಸ್ತುತಿಸುತ್ತಾರೆ. ತನಗೆ ಮೋಕ್ಷ ನೀಡೆಂದು ಕೇಳಿಕೊಳ್ಳುತ್ತಾರೆ. ಬಿಜೆಪಿ ಸರಕಾರ ಈಗ ಈ ಹಂತ ತಲುಪಿದೆ. ಮುಂದಿನ ಚುನಾವಣೆಯಲ್ಲಿ ಪವಾಡವೇನೂ ನಡೆಯದೇ ಹೋದರೆ ಪಕ್ಷಕ್ಕೆ ಸೋಲು ನಿಶ್ಚಿತ. ಕರ್ನಾಟಕದಲ್ಲಿ ಬಿಜೆಪಿಗೆ ಮುಂದೆ ನೋಡುವುದಕ್ಕೆ ಏನೂ ಉಳಿದಿಲ್ಲ. ಅದೇನಿದ್ದರೂ ಈಗ ಹಿಂದೆ ನೋಡಬೇಕಾಗಿದೆ. ಅಂದರೆ ಅದಕ್ಕೀಗ ಪಶ್ಚಾತ್ತಾಪಪಡುವ, ಪೂರ್ವಜನ್ಮವನ್ನು ನೆನಪಿಸಿಕೊಳ್ಳುವ ಮತ್ತು ಮೋಕ್ಷ ಅಪೇಕ್ಷಿಸುವ ಕಾಲ.

        ಗುಟುಕು ಜೀವ ಹಿಡಿದು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವ ಬಿಜೆಪಿ ಸರಕಾರ ಮಾಡುತ್ತಿರುವ ಯೋಚನೆಗಳನ್ನು, ಇಡುತ್ತಿರುವ ಹೆಜ್ಜೆಗಳನ್ನು ನೋಡಿ. ಹದಿನಾರು ತಿಂಗಳುಗಳಷ್ಟು ಕಾಲ ಖಾಲಿ ಇರಿಸಿದ್ದ ಲೋಕಾಯುಕ್ತ ಹುದ್ದೆಯನ್ನು ಸರಕಾರ ಕೊನೆಗೂ ತುಂಬಿದೆ. ಲೋಕಾಯುಕ್ತದ ಚರಿತ್ರೆಯಲ್ಲಿ ಮತ್ತೂಮ್ಮೆ ಹೊರ ರಾಜ್ಯಕ್ಕೆ ಸೇರಿದ ನಿವೃತ್ತ ನ್ಯಾಯಾಧೀಶರೊಬ್ಬರನ್ನು ಲೋಕಾಯುಕ್ತರನ್ನಾಗಿ ಅದು ನೇಮಿಸಿದೆ. ಇನ್ನೊಂದೆಡೆ, ಬಿಜೆಪಿ ಇದ್ದಕ್ಕಿದ್ದಂತೆಯೇ ವಿಶ್ವವಿದ್ಯಾನಿಲಯಗಳನ್ನು ಸುಧಾರಿಸಲು ಹೊರಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗಮನ ಸೆಳೆಯುವ ಅಂಶ ಇದು. ಯಾಕೆಂದರೆ ಐದು ವರ್ಷಗಳ ಬಿಜೆಪಿ ಆಡಳಿತದ ಚರಿತ್ರೆ ಎಂದರೆ ಅದು ಎಲ್ಲಾ ರೀತಿಯ ಸಾರ್ವಜನಿಕ ಸಂಸ್ಥೆಗಳ ಮತ್ತು ಸಾಂವಿಧಾನಿಕ ಹುದ್ದೆಗಳ (ಸಾಕ್ಷಾತ್‌ ವಿಧಾನಮಂಡಲ ಮತ್ತು ಸ್ಪೀಕರ್‌ ಹುದ್ದೆಯೂ ಸೇರಿದಂತೆ) ಘನತೆಯನ್ನು ನಿರ್ನಾಮ ಮಾಡಿದ ಚರಿತ್ರೆ. ಈ ಕಾರಣಕ್ಕಾಗಿ ಮತ್ತೆ ಮತ್ತೆ ಉಚ್ಚ ನ್ಯಾಯಾಲಯದಿಂದ, ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಕತೆ. ಹೀಗೆ ತಾನು ಕೆಡಿಸಿದ ಸಂಸ್ಥೆಗಳ ಪೈಕಿಯೂ ಬಿಜೆಪಿ ಅತ್ಯಂತ ನಿಕೃಷ್ಟ ಮಟ್ಟಕ್ಕೆ ಇಳಿಸಿದ್ದು ವಿಶ್ವವಿದ್ಯಾನಿಲಯಗಳನ್ನು. ಇದರ ಬೇರೆ ಆಯಾಮಗಳನ್ನು ಈಗಿನ ಉನ್ನತ ಶಿಕ್ಷಣ ಸಚಿವರೇ ಆಗಾಗ ಸಾರ್ವಜನಿಕವಾಗಿ ಹೇಳಿರುವುದರಿಂದ ಈ ಲೇಖನದಲ್ಲಿ ಯಾವುದೇ ರೀತಿಯ ಉತ್ಪ್ರೇಕ್ಷೆ ಇದೆ ಎಂದು ಯಾರೂ ತಿಳಿದುಕೊಳ್ಳುವುದಕ್ಕೆ ಅವಕಾಶವಿಲ್ಲ. ಇನ್ನೇನು ಅವಧಿ ಅಂತ್ಯಗೊಳ್ಳಲು ಕ್ಷಣಗಣನೆ ಆರಂಭವಾಗಿದೆ ಎನ್ನುವಾಗ ಅದೂ ಒಂದು ಪ್ರಯತ್ನ ಇರಲಿ ಎಂದು ಸರಕಾರ ವಿಶ್ವವಿದ್ಯಾನಿಲಯಗಳನ್ನೂ ಸುಧಾರಿಸಲು ಹೊರಟಿದೆ.

        ಅಧಿಕಾರ ಅವಧಿಯ ಉದ್ದಕ್ಕೂ ಒಂದೆಡೆ ವಿವೇಕಾನಂದರಂತಹ ವಿಚಾರವಾದಿ ಸಂತರ ಹೆಸರು ಜಪಿಸುತ್ತಾ, ಇನ್ನೊಂದೆಡೆ ಬೀದಿಬೀದಿಗಳಲ್ಲಿ ವಿಭೂತಿ - ಕುಂಕುಮ ಹಚ್ಚಿ ಕುಳಿತಿರುವ ಕ್ಷುದ್ರ ವಿದ್ಯಾಪಾರಂಗತರ ಮಾಟ, ಮಂತ್ರ, ಜಾದೂ, ವಾಸ್ತು ಇತ್ಯಾದಿಗಳ ಮೊರೆಹೊಕ್ಕಿದ್ದ ಬಿಜೆಪಿ ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಇದನ್ನೆಲ್ಲಾ ಸ್ವಲ್ಪ ಮಟ್ಟಿಗೆ ನಿಯಂತ್ರಿಸುವ ಯೋಚನೆ ಮಾಡಿತ್ತಂತೆ. ಅಂದರೆ ಇನ್ನು ಮುಂದೆ ವಿಧಾನಸೌಧದಲ್ಲಿ ಮಾಟ, ಮಂತ್ರ, ಪೂಜೆ, ಪುನಸ್ಕಾರ, ವಾಸ್ತುಪ್ರೇರಿತ ಪುನಾರಚನೆ ಇತ್ಯಾದಿಗಳಿಗೆ ಅವಕಾಶ ನಿರಾಕರಿಸಲು ಒಂದು ಮಸೂದೆ ತರುವ ಕುರಿತು ಈಗಿನ ಮುಖ್ಯಮಂತ್ರಿಗಳು ಯೋಚಿಸಿದ್ದರು ಎಂಬ ವರದಿಗಳಿದ್ದವು. ಆಮೇಲೆ ಏನಾಯಿತೋ ಗೊತ್ತಿಲ್ಲ. ಅಂತೂ ಇಂತಹದ್ದೊಂದು ಯೋಜನೆಯಾದರೂ ಆ ಪಕ್ಷದೊಳಗೆ ಯಾರಿಗಾದರೂ ಬಂದೀತೆಂದು ಅದರ ಐದು ವರ್ಷಗಳ ಆಡಳಿತ ನೋಡಿದ ಯಾರೇ ಆದರೂ ಊಹಿಸಲೂ ಸಾಧ್ಯವಿರಲಿಲ್ಲ. ಯಡಿಯೂರಪ್ಪನವರ ಬೆಂಬಲಿಗ ಎಂಎಲ್‌ಎಗಳು ಒಬ್ಬೊಬ್ಬರಾಗಿ ರಾಜೀನಾಮೆ ನೀಡುತ್ತಿದ್ದಾಗ ಇದು ಜನರಿಗೆ ಮಾಡುವ ವಿಶ್ವಾಸದ್ರೋಹ ಎಂದು ಮುಖ್ಯಮಂತ್ರಿ ಶೆಟ್ಟರ್‌ ಹೇಳಿದ್ದು ವರದಿಯಾಗಿತ್ತು. ಹೌದು, ವಿಶ್ವಾಸದ್ರೋಹವೇ. ಇಂತಹದ್ದೊಂದು ವಿಶ್ವಾಸದ್ರೋಹದ ಆರಂಭ ಆಪರೇಶನ್‌ ಕಮಲದ ಹೆಸರಿನಲ್ಲಿ ನಡೆಯಲು ಪೌರೋಹಿತ್ಯ ವಹಿಸಿದ್ದು, ಅಂದು ಸ್ಪೀಕರ್‌ ಹುದ್ದೆಯಲ್ಲಿದ್ದು ಇದೇ ಶೆಟ್ಟರ್‌. ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ಬಂದಾಗ ಎಲ್ಲಾ ಸತ್ಯಗಳು ಒಮ್ಮಿಂದೊಮ್ಮೆಲೇ ಗೋಚರವಾಗತೊಡಗುತ್ತವೆ.

        ಕೊನೆಯ ಕಾಲದಲ್ಲಿ ಬಿಜೆಪಿ ನಡೆಸುತ್ತಿರುವ ಈ ವೈಟ್‌ವಾಷ್‌ಗೆ ಯಡಿಯೂರಪ್ಪ ಪಕ್ಷ ಬಿಟ್ಟುಹೋದದ್ದು ಅನುಕೂಲವೇ ಆಯಿತು. ಯಡಿಯೂರಪ್ಪ ಯಾವತ್ತು ಪಕ್ಷದಿಂದ ಹೊರನಡೆದಿದ್ದರೋ ಅಂದೇ ಬಿಜೆಪಿಯ ಮಂದಿಗೆ ಮುಖದ ಮೇಲಿನ ಮುಸುಕು ತೆಗೆದು ಬೀದಿಯಲ್ಲಿ ಓಡಾಗುವ ಪರಿಸ್ಥಿತಿ ಬಂತು. ಇನ್ನೂ ಬಿಜೆಪಿಯಲ್ಲಿ ಹಲವಾರು ಮರಿ ಯಡಿಯೂರಪ್ಪಗಳು ಉಳಿದಿದ್ದಾರೆ. ಆದರೂ ಯಡಿಯೂರಪ್ಪ ಹೋದಾಕ್ಷಣ ಬಿಜೆಪಿಯ ಪಾಪವೆಲ್ಲವೂ ತೊಳೆದುಹೋದಂತೆ ಎಂದು ಆ ಪಕ್ಷದಲ್ಲಿ ಉಳಿದವರು ಭಾವಿಸಿದ್ದಾರೆ. ಅದರಲ್ಲೂ ಲಿಂಗಾಯತ ನಾಯಕ ಜಗದೀಶ್‌ ಶೆಟ್ಟರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಪ್ರತಿಷ್ಠಾಪಿಸಿದ ಅನಂತರ ಯಡಿಯೂರಪ್ಪ ಬಿಜೆಪಿ ತ್ಯಜಿಸಿದ್ದು, ಪಕ್ಷದ ಪಾಲಿಗೆ ದೊಡ್ಡ ವರದಾನ. ಅಧಿಕಾರ ಹೇಗೂ ಹೋಗಬಹುದು. ಆದರೆ ಯಡಿಯೂರಪ್ಪ ಹೊರಹೋದದ್ದಕ್ಕೆ ಪಕ್ಷದ ಮುಖವಾದರೂ ಉಳಿಯಿತು. ಇನ್ನು ಸೋತರೂ ನಮ್ಮದು ಧೀರ ಸೋಲು ಅಂತ ಬಿಜೆಪಿಗೆ ಹೇಳಿಕೊಳ್ಳಬಹುದು. ಒಂದರ್ಥದಲ್ಲಿ ಯಡಿಯೂರಪ್ಪನವರನ್ನು ಬಿಜೆಪಿ ಕಳೆದುಕೊಂಡಾಗ ನಿಜಕ್ಕೂ ನಷ್ಟ ಅನುಭವಿಸಿದ್ದು ವಿರೋಧ ಪಕ್ಷಗಳು. ಬಿಜೆಪಿಯ ವಿರುದ್ಧ ಸಮರ ಸಾರಲು ವಿರೋಧ ಪಕ್ಷಗಳಿಗಿದ್ದ ಬಹುದೊಡ್ಡ ಅಸ್ತ್ರವೊಂದು ಆ ಮೂಲಕ ತಪ್ಪಿಹೋಯಿತು. ಅಷ್ಟರಮಟ್ಟಿಗೆ ಚುನಾವಣಾ ಕಣ ಸಪ್ಪೆಯಾಯಿತು. ಈಗ ಲೋಕಾಯುಕ್ತರನ್ನು ನೇಮಿಸುವ ಮೂಲಕ, ವಿಶ್ವವಿದ್ಯಾನಿಲಯಗಳನ್ನು ಸುಧಾರಿಸುವ ಮೂಲಕ ಇನ್ನೂ ಕೆಲ ಅಸ್ತ್ರಗಳನ್ನು ವಿರೋಧ ಪಕ್ಷದವರ ಕೈಯಿಂದ ಬಿಜೆಪಿ ಕಸಿದುಕೊಂಡಿದೆ.

        ಇನ್ನು ಕಾಂಗ್ರೆಸ್ಸಿನವರು ಭ್ರಷ್ಟಾಚಾರ ಎಂದರೆ ಭ್ರಷ್ಟರು ಪಕ್ಷದಿಂದ ಹೊರಹೋಗಿದ್ದಾರೆ ಎನ್ನಬಹುದು. ಸಕಾಲ ಹೇಗೂ ಇದೆ. ಅದರ ಬಗ್ಗೆ ಯಾರಿಗೂ ತಕರಾರು ಇರಲು ಸಾಧ್ಯವಿಲ್ಲ. ಸಕಾಲ ಕೂಡ ಯಡಿಯೂರಪ್ಪ ಹೋಗಿ ಸದಾನಂದ ಗೌಡ ಬಂದದ್ದಕ್ಕೆ ಸಕಾಲದಲ್ಲಿ ಬಂತು. ಅದು ಚುನಾವಣೆಯಲ್ಲಿ ನೆರವಾಗುತ್ತದೋ ಇಲ್ಲವೋ, ಆ ಮಾತು ಬೇರೆ. ಮುಖ ಉಳಿಸಿಕೊಳ್ಳಲು ಸಕಾಲದ ಮಂತ್ರವನ್ನು ಬಿಜೆಪಿ ಜಪಿಸಬಹುದು. ಈಗ ಕಾಂಗ್ರೆಸ್‌ ಲೋಕಾಯುಕ್ತ ಹುದ್ದೆ ಖಾಲಿ ಇಟ್ಟಿದ್ದೀರಿ ಅಂತ ಬಿಜೆಪಿಯನ್ನು ಟೀಕಿಸುವ ಹಾಗೂ ಇಲ್ಲ. ಕೊನೆಗೂ ಒಬ್ಬ ಲೋಕಾಯುಕ್ತರು ಬಂದಿದ್ದಾರೆ. ಅದೂ ರಾಜ್ಯದಿಂದ ಹೊರಗಿನವರನ್ನು ನೇಮಿಸುವ ಮೂಲಕ ಕಾಂಗ್ರೆಸ್ಸಿಗಿಂತ ತಾನೊಂದು ಮೆಟ್ಟಿಲು ಮೇಲೆ ಅಂತ ಬಿಜೆಪಿ ಹೇಳಿಕೊಳ್ಳಬಹುದು. ಆದರೆ ತನ್ನ ಅವಧಿಯ ಅತ್ಯಂತ ಕ್ಲಿಷ್ಟಕರ ಕಾಲಘಟ್ಟದಲ್ಲಿ ಲೋಕಾಯುಕ್ತರ ಕಿರುಕುಳ ಇಲ್ಲದಂತೆ ಬಿಜೆಪಿ ತಪ್ಪಿಸಿಕೊಂಡಿತ್ತು. ಮುಂದಿನ ಸರಕಾರದ ಅವಧಿಯ ಅರ್ಧಾಂಶಕ್ಕೂ ಹೆಚ್ಚು ಕಾಲ ಬಿಜೆಪಿ ನೇಮಿಸಿದ ಲೋಕಾಯುಕ್ತ, ಬಿಜೆಪಿ ನೇಮಿಸಿದ ವಿಶ್ವವಿದ್ಯಾನಿಲಯಗಳ ಕುಲಪತಿಗಳು, ಸಿಂಡಿಕೇಟ್‌ ಸದಸ್ಯರು ಮುಂತಾದವರೆಲ್ಲಾ ಅಬಾಧಿತರಾಗಿ ಇರುತ್ತಾರೆ. ಬಿಜೆಪಿ ಸರಕಾರದ ಎಲ್ಲಾ ಸುಧಾರಣೆಗಳ ಫ‌ಲ ಅನುಭವಿಸಬೇಕಾಗಿರುವುದು ಮುಂದೆ ಬರುವ ಸರಕಾರ.

        ಹಿಂದೆ ರಾಜ್ಯವಾಳಿದ ಕಾಂಗ್ರೆಸ್‌ ಸರಕಾರಗಳು, ಜನತಾದಳ ಸರಕಾರಗಳು ಕೂಡ ಬಿಜೆಪಿ ಸರಕಾರದ ಎಲ್ಲಾ ಸಮಸ್ಯೆಗಳನ್ನು, ಹೆಚ್ಚಿನ ಆಪಾದನೆಗಳನ್ನು ಬೇರೆಬೇರೆ ರೀತಿಯಲ್ಲಿ ಎದುರಿಸಿವೆ. ಆದರೆ ಒಂದು ವ್ಯತ್ಯಾಸ ಎಂದರೆ ಅವುಗಳು ಅಲ್ಪಸ್ವಲ್ಪ ಒಳ್ಳೆಯ ಕೆಲಸಗಳನ್ನು ಆರಂಭದಲ್ಲಿ ಮಾಡಿ ಕೊನೆಯ ಕಾಲಕ್ಕೆ ಕೈ ಚೆಲ್ಲಿ ಕುಳಿತಿದ್ದರೆ, ಬಿಜೆಪಿ ಸರಕಾರ ಆರಂಭದಿಂದ ಮುಕ್ಕಾಲು ಪಾಲು ಅವಧಿಗೆ ಮಾಡಬಾರದನ್ನೆಲ್ಲಾ ಮಾಡಿ ಕೊನೆಯ ಕಾಲಕ್ಕೆ ಸುಭಗತನ ತೋರುತ್ತಿದೆ. ಇಲ್ಲೂ ಬಿಜೆಪಿಯೇ ಮಾದರಿ. ಐದು ವರ್ಷಗಳ ಬಿಜೆಪಿಯ ಆಡಳಿತ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಖ್ಯಾತಿಯನ್ನು ಹಲವು ದಶಕಗಳಷ್ಟು ಹಿಂದಕ್ಕಟ್ಟಿದೆ. ಮುಂದೆ ಬರುವ ಸರಕಾರ, ಅದು ಯಾವುದೇ ಪಕ್ಷದ್ದಿರಲಿ, ಇದೇ ಮಾದರಿಯನ್ನು ಅನುಸರಿಸಿದರೆ ಕರ್ನಾಟಕ ಚರಿತ್ರೆಯಲ್ಲಿ ಇನ್ನೆಷ್ಟು ಹಿಂದೆ ಸರಿಯಲಿದೆಯೋ ಊಹಿಸಲಾಗದು.

        *ನಾರಾಯಣ.ಎ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus