ನಾಸಿಕ ಭೂಷಿಣಿ | Feb 16, 2013
ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಕಳೆದ ಸುಮಾರು 8 ವರ್ಷಗಳಿಂದ ಜಿಲ್ಲೆ ಯಲ್ಲಿ ಪ್ರಾತ್ಯಕ್ಷಿಕೆಗಳು, ಸಂಗೀತ ಸ್ಪರ್ಧೆಗಳು, ಸಂಗೀತ ಕಛೇರಿಗಳು, ಯಕ್ಷಗಾನದಂತಹ ಕಲಾ ಪ್ರದರ್ಶನಗಳನ್ನು ಸಂಘಟಿಸಿ ಜನಮೆಚ್ಚುಗೆ ಗಳಿಸಿದೆ.

ಇತ್ತೀಚೆಗೆ, ಮಂಗಳೂರಿನ ಪುರಭವನದಲ್ಲಿ ಹಾಗೂ ಅಲ್ಲಿಯೇ ಸನಿಹದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಅದು ಏರ್ಪಡಿಸಿದ್ದ ಎರಡು ದಿನಗಳ ರಾಗಸುಧಾ ರಸ ಸರಣಿ ಸಂಗೀತ ಕಾರ್ಯಕ್ರಮ ಸಂಗೀತದ "ವಿಶ್ವರೂಪ'ವನ್ನು ಸಂಗೀತ ಪ್ರೇಮಿಗಳಿಗೆ ದರ್ಶನ ಮಾಡಿಸಿತು. ಆರಂಭದ ದಿನ ಕರ್ನಾಟಕ ಸಂಗೀತದ ಕುರಿತಾದ ವಿಶೇಷ ಚಲನಚಿತ್ರ ಮಾರ್ಗಳಿ ರಾಗಂ ಪ್ರದರ್ಶನವು ಸಂಗೀತ ರಸಿಕರಿಗೆ ರಸಾಸ್ವಾದವನ್ನು ನೀಡಿತು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಹಿರಿಯ ನೃತ್ಯಗುರು ನಾಟ್ಯಾಚಾರ್ಯ ಕೆ. ಮುರಳೀಧರ ರಾವ್ ಇವರನ್ನು ಗೌರವಿಸಿದ್ದು ಹಾಗೂ ನಮ್ಮೂರಿನ ಹೆಮ್ಮೆಯ ಯುವ ಗಾಯಕಿ ಕು| ಮೇಘನಾ ಮೂರ್ತಿ ಇವರಿಗೆ ಯುವ ಕಲಾಮಣಿ ಪ್ರಶಸ್ತಿ ಪ್ರದಾನ ಮಾಡಿದ್ದು ಮಣಿಕೃಷ್ಣ ಸ್ವಾಮಿ ಅಕಾಡೆಮಿಗೆ ಸಂಗೀತದ ಬಗೆಗಿರುವ ಒಲವು ಎಷ್ಟು ನೈಜ ವಾದದ್ದು ಎಂಬುದನ್ನು ಎತ್ತಿ ತೋರಿಸಿತು. ಉದ್ಘಾಟನಾ ಸಮಾರಂಭದಲ್ಲಿ ಪದ್ಮಭೂಷಣ ಪ್ರೊ| ಬಿ.ಎಂ. ಹೆಗ್ಡೆಯವರು ಅಧ್ಯಕ್ಷರಾಗಿ, ಹಿರಿಯ ಕಲಾವಿಮರ್ಶಕ ಎ. ಈಶ್ವರಯ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ನೀಡಿದರು.

ಎಸ್. ಶಶಾಂಕ್ ಹಾಗೂ ಉಸ್ತಾದ್ ಶಾಹಿದ್ ಪರ್ವೇಝ್ ಖಾನ್ ಅವರ ಕೊಳಲು ಮತ್ತು ಸಿತಾರ್ ಜುಗಲ್‌ಬಂದಿ ಕಾರ್ಯಕ್ರಮವು ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಪ್ರಿಯ ರಿಗೆ ರಸದೌತಣವನ್ನೇ ನೀಡಿತು.
ಕರ್ನಾಟಕ ಶೈಲಿಯಲ್ಲಿ ಆಂದೋಳಿಕಾ ರಾಗದಲ್ಲಿ ರಾಗ ಸುಧಾರಸ ಕೃತಿಯನ್ನು ನುಡಿಸಿ ಶಶಾಂಕ್ ಕಛೇರಿಗೆ ನಾಂದಿ ಹಾಡಿದರು. ಹಿಂದೂಸ್ತಾನಿ ಶೈಲಿಯಲ್ಲಿ ಉಸ್ತಾದ್ ಶಾಹಿದ್ ಪರ್ವೇಝ್ ಖಾನ್ ಚಾರುಕೇಶಿ ರಾಗದಲ್ಲಿ ಸಭಿಕರನ್ನು ತಲುಪುವಲ್ಲಿ ಯಶಸ್ವಿಯಾದರು. ಮುಂದೆ ಈರ್ವರೂ ಕಲ್ಯಾಣಿ ರಾಗವನ್ನು ಹಿತ ಮಿತವಾದ ಮಿಳಿತದೊಂದಿಗೆ ನುಡಿಸಿ ರಸಿಕರ ಮೆಚ್ಚುಗೆಗೆ ಪಾತ್ರರಾದರು. ಮಿಶ್ರ ಖಮಾಚ್‌ನೊಂದಿಗೆ ಕಛೇರಿ ಮುಕ್ತಾಯಗೊಂಡಿತು. ಮೃದಂಗ ದಲ್ಲಿ ಪತ್ರಿ ಸತೀಶ್ ಕುಮಾರ್ ಹಾಗೂ ತಬ್ಲಾದಲ್ಲಿ ಮುಖೇಶ್ ಯಾದವ್ ತಮ್ಮತಮ್ಮ ಸೀಮಿತ ಅವಧಿಯಲ್ಲಿ ರಸಿಕರ ಮೆಚ್ಚುಗೆಗೆ ಪಾತ್ರರಾದರು.
ಎರಡನೇ ದಿನದಂದು, ಉದಯೋನ್ಮುಖ ಕಲಾವಿದ ಬಾಲಚಂದ್ರ ಪ್ರಭು ಮಿಯಾ ಕಿ ತೋಡಿ ಮತ್ತು ಆಹಿರ್ ಬೈರವ್ ರಾಗಗಳನ್ನು ಪ್ರಸ್ತುತಪಡಿಸಿದರು. ಅವರು ರಾಗಗಳನ್ನು ಸ್ವತಃ ಅನುಭವಿಸುತ್ತಾ ಶ್ರೋತೃಗಳಿಗೂ ಈ ಎರಡು ಬೆಳಗಿನ ರಾಗಗಳ ಅನುಭವವನ್ನು ಹಂಚಿದರು. ಹಾರೊ¾àನಿಯಂನಲ್ಲಿ ನರೇಂದ್ರ ಎಲ್. ನಾಯಕ್, ತಬ್ಲಾದಲ್ಲಿ ದಿನೇಶ್ ಶೆಣೈ ಪಾಂಗಾಳ ಗಾಯಕರಿಗೆ ಉತ್ತಮ ಸಾಥಿ ನೀಡಿದರು.
ಮುಂದೆ ನಡೆದ ಕರ್ನಾಟಕ ಸಂಗೀತ ಜುಗಲ್‌ಬಂದಿ ಕಛೇರಿಯು ಒಂದು ವಿಶೇಷ ವಾದ ಕಾರ್ಯಕ್ರಮ. ವಿಭಿನ್ನ ಪರಂಪರೆಗೆ ಸೇರಿದ ಇಬ್ಬರು ಪ್ರತಿಭಾನ್ವಿತ ಯುವ ಕಲಾವಿದರು, ಅನುಭವಿ ಹಿಮ್ಮೇಳ ಕಲಾವಿದ ರೊಂದಿಗೆ ಸುಮಾರು ಮೂರು ತಾಸುಗಳ ಕಾಲ ಕಛೇರಿಯನ್ನು ಪ್ರಸ್ತುತಪಡಿಸಿ ಸಂಗೀತ ಪ್ರಿಯರ ಹೃದಯಗಳಿಗೆ ಹತ್ತಿರ ವಾದರು. ಶ್ರೀ ರಾಗದಲ್ಲಿ ಎಂದರೋ ಮಹಾನುಭಾವುಲು, ಪೂರ್ವಿಕಲ್ಯಾಣಿಯಲ್ಲಿ ನಿನ್ನುವಿನಾ, ಖರಹರಪ್ರಿಯದಲ್ಲಿ ರಾಮಾನೀ ಸಮಾನಮೆವರು ಬಹುಸೂಕ್ಷ್ಮ ಹೊಳಪಿನ ಪ್ರಸುತಿಗಳಾಗಿ ಮೆಚ್ಚುಗೆ ಗಳಿಸಿದವು. ಮುತ್ತು ಸ್ವಾಮಿ ದೀಕ್ಷಿತರ ಚತುರ್ದಶಾ ಮಾಲಿಕಾ ಸುಮಾರು 13 ರಾಗಗಳನ್ನೊಳಗೊಂಡಿತ್ತು. ಶಂಕರಾಭರಣ ರಾಗ ತಾನಂ ಪಲ್ಲವಿ ದಾಶರಥೇ ಕರುಣ ಪಯೋನಿಧೇ ಇನಕುಲ ತಿಲಕ ಖಂಡ ಜಾತಿ ತ್ರಿಪುಟ ತಾಳದಲ್ಲಿ, ರಾಗಮಾಲಿಕೆಯಲ್ಲಿ ಮೂಡಿಬಂದಿತು. ವಯಲಿನ್‌ನಲ್ಲಿ ಎಚ್.ಎನ್. ಭಾಸ್ಕರ್ ತಮ್ಮ ನುಡಿಸಾಣಿಕೆಯಲ್ಲಿ ಕಲಾರಸಿಕರ ಮನಗೆದ್ದರು. ಮೃದಂಗದಲ್ಲಿ ಜೆ. ವೈದ್ಯನಾಥನ್ ಹಾಗೂ ಘಟಂನಲ್ಲಿ ಎಸ್. ಕಾರ್ತಿಕ್ ಸೈ ಎನಿಸಿ ಕೊಂಡರು. ಬೆಹಾಗ್ ರಾಗದಲ್ಲಿ ಕಂಡು ಧನ್ಯನಾದೆ ಉಡುಪಿ ಕೃಷ್ಣನ, ಕಮಲೇಶ ದಾಸರ ರಚನೆಯು ರಾಮಕೃಷ್ಣನ್ ಮೂರ್ತಿಯವರ ಸ್ಪಷ್ಟ ಉಚ್ಛಾರದೊಂದಿಗೆ ಮೂಡಿ ಬಂತು. ಕಾಪಿ ರಾಗದಲ್ಲಿ ಜಗದೋದ್ಧಾರನವನ್ನು ಋತ್ವಿಕ್‌ರಾಜ ಅವರು ಪ್ರಸ್ತುತಪಡಿಸಿದರು. ಜುಂಜೂಟಿ ರಾಗದ ತಿಲ್ಲಾನವನ್ನು ಈರ್ವರೂ ಜೊತೆಯಾಗಿಯೇ ಹಾಡಿ ಕಛೇರಿಗೆ ಕಳೆ ನೀಡಿದರು. ಮಂಗಳದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಕರ್ನಾಟಕ ಶೈಲಿ ಹಾಗೂ ಹಿಂದೂಸ್ಥಾನಿ ಶೈಲಿಯ ಸಂಗೀತವನ್ನು ಸಮಾನವಾಗಿ ಆಸ್ವಾದಿ ಸುವ ಶ್ರೋತೃವರ್ಗ ಬೆಳೆಯಬೇಕೆಂಬುದೇ ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ನಿಲುವು. ಎರಡೂ ವರ್ಗದ ಶ್ರೋತೃಗಳು ಸಭಾಂಗಣ ದಲ್ಲಿ ತುಂಬಿದ್ದು ಸಂಘಟಕರ ಉದ್ದೇಶ ಈಡೇರುತ್ತಿರುವುದರ ಸೂಚನೆ. ಮಣಿಕೃಷ್ಣ ಸ್ವಾಮಿ ಅಕಾಡೆಮಿ ಕಳೆದ ಕೆಲವಾರು ವರ್ಷ ಗಳಿಂದ ಸಂಗೀತದ ಎರಡು ಕಣ್ಣುಗಳಂತಿರುವ ಕರ್ನಾಟಕ ಮತ್ತು ಹಿಂದೂಸ್ಥಾನಿ ಪದ್ಧತಿಗಳಿಗೆ ಸಮಾನ ಆದ್ಯತೆ ಒದಗಿಸುತ್ತ ಎರಡೂ ಅಭಿರುಚಿ ಗಳನ್ನು ಜಾಗೃತಗೊಳಿಸುವ ಪ್ರಯತ್ನ ನಡೆಸುತ್ತಿದೆ. ಈ ಬಾರಿಯೂ ಸಂಗೀತ ಸಂಬಂಧಿ ಚಲನಚಿತ್ರ ಪ್ರದರ್ಶನ, ಯುವ ಕಲಾಮಣಿ ಪ್ರಶಸ್ತಿ ಪ್ರದಾನ, ಹಿರಿಯ ಸಾಧಕರಿಗೆ ಸಮ್ಮಾನ, ಕೊಳಲು - ಸಿತಾರ್ ಜುಗಲ್‌ಬಂದಿ, ದ್ರುಪದ್ ಗಾಯನ, ಹಿಂದೂಸ್ತಾನಿ ಗಾಯನ, ಕರ್ನಾಟಕ ಜುಗಲ್‌ಬಂದಿ, ಹಿಂದೂಸ್ಥಾನಿ ಮೋಹನ ವೀಣಾ ವಾದನ-ಹೀಗೆ ಸಂಗೀತ ರಾಗಸುಧೆಯನ್ನು ವೈವಿಧ್ಯಮಯವಾಗಿ ಏರ್ಪಡಿಸಿದ್ದು ಶ್ಲಾಘನೀಯ. ಮಣಿಕೃಷ್ಣ ಸ್ವಾಮಿ ಅಕಾಡೆಮಿ (ರಿ.), ಭಾರತೀಯ ವಿದ್ಯಾಭವನ, ಮಂಗಳೂರು ಇವುಗಳು ವಿವಿಧ ಸಂಘಸಂಸ್ಥೆಗಳು ಹಾಗೂ ದಾನಿ ಗಳ ನೆರವಿನಿಂದ ನಡೆಸಿದ ಈ ಕಾರ್ಯಕ್ರಮ ಎಲ್ಲ ದೃಷ್ಟಿಯಿಂದಲೂ ಅಚ್ಚುಕಟ್ಟಾಗಿತ್ತು.
ಮರುದಿನ ಬೆಳಗಿನ ಪ್ರಶಾಂತ ವಾತಾವರಣ ದಲ್ಲಿ ದ್ರುಪದ್ ಸಂಗೀತವನ್ನು ಪ್ರಸ್ತುತಪಡಿಸಿದ ಗುಂಡೇಚಾ ಬಂಧುಗಳಾದ ಪಂ| ಉಮಾಕಾಂತ ಗುಂಡೇಚಾ ಹಾಗೂ ಪಂ| ರಮಾಕಾಂತ್ ಗುಂಡೇಚಾ ಇಡೀ ಉತ್ಸವಕ್ಕೆ ವಿಶಿಷ್ಟ ಮೆರುಗನ್ನು ನೀಡಿದರು. ಇವರಿಗೆ ಪಕ್ವಾಝ್ನಲ್ಲಿ ಪಂ| ಅಖೀಲೇಶ್ ಗುಂಡೇಚಾ ಸಹಕಾರ ನೀಡಿದರು. ಗುಂಡೇಚಾ ಬಂಧುಗಳ ಗಂಭೀರ ಕಂಠದಲ್ಲಿ ಮೊಳಗಿದ ಅಸಾವರಿ, ಚಾರುಕೇಶಿ, ಮಧ್ಯಮಾ ವತಿ ರಾಗಗಳು ನೀಡಿದ ವಿಶಿಷ್ಟ ಅನುಭವ ಮರೆಯಲಾಗದ್ದು. ರಸಿಕರು ಮಂತ್ರಮುಗ್ಧವಾಗಿ ಈ ಕಛೇರಿಯನ್ನು ಆಸ್ವಾದಿಸಿದರು.
ಸಾಯಂಕಾಲದ ಕಛೇರಿಯಲ್ಲಿ ಗ್ರಾಮಿ ಪ್ರಶಸ್ತಿ ವಿಜೇತ ಮಾರ್ಗಪ್ರವರ್ತಕ ಹಿಂದೂಸ್ಥಾನಿ ಸಂಗೀತ ಕಲಾವಿದ ಪಂ| ವಿಶ್ವಮೋಹನ ಭಟ್ ಮೋಹನ ವೀಣಾ ವಾದನ ಕಛೇರಿಯನ್ನು ನೀಡಿದರು. ಇವರಿಗೆ ತಬಲಾ ಸಹಕಾರ ನೀಡಿದ್ದು ಹಿಮಾಂಶು ಮಹಾಂತ್, ಬರೋಡಾ. ಪಂ| ವಿಶ್ವಮೋಹನ್ ಭಟ್ ರಾಗಗಳ ವಿವಿಧ ಮಜಲುಗಳನ್ನು ತಮ್ಮ ಇಂಪಾದ ಕಂಠದಲ್ಲಿ ಹಾಡಿ ತೋರಿಸುತ್ತ ತಾವು ಒಳ್ಳೆಯ ಗಾಯಕರೂ ಹೌದು ಎಂಬುದನ್ನು ನಿರೂಪಿಸಿಕೊಟ್ಟರು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಸಂಘಟಕರು ಸದಾ ಪ್ರಯೋಗಶೀಲರು ಎಂಬುದನ್ನು ಈ ವರ್ಷದ ರಾಗ ಸುಧಾ ರಸ ಸ್ಪಷ್ಟವಾಗಿ ನಿರೂಪಿಸಿತು. ಅವರು ನಡೆಸುವ ಪ್ರಯೋಗಗಳು ಯಶಸ್ವಿ ಎಂಬುದಕ್ಕೆ ಎರಡೂ ದಿನಗಳಲ್ಲಿ ತುಂಬು ಸಂಖ್ಯೆಯಲ್ಲಿ ಸೇರಿ ಸಂಗೀತವನ್ನಾಲಿಸಿದ ಗುಣಗ್ರಾಹಿ ಸಂಗೀತ ಪ್ರೇಮಿಗಳೇ ಸಾಕ್ಷಿ.