Friday, May 24, 2013
Last Updated: 5:15:31 PM IST
  • ನಾನೆಲ್ಲಿರುವೆ:
  • ಮುಖಪುಟ Columns Nera_Nera_-_Inverviews
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನನಗೆ ಹಣದಿಂದ ಯಾವುದೇ ಪ್ರಯೋಜನವಿಲ್ಲ: ಬಿಲ್‌ ಗೇಟ್ಸ್‌
    • ಸುಮಾರು 3.25 ಲಕ್ಷ ಕೋಟಿ ರೂ. ಆಸ್ತಿ ಹೊಂದಿರುವ ಜಗತ್ತಿನ ಮಾಜಿ ಅತಿದೊಡ್ಡ ಶ್ರೀಮಂತ ಬಿಲ್‌ ಗೇಟ್ಸ್‌ ಈಗ ಸಂಪೂರ್ಣವಾಗಿ

      • Udayavani | Feb 17, 2013

        ಸುಮಾರು 3.25 ಲಕ್ಷ ಕೋಟಿ ರೂ. ಆಸ್ತಿ ಹೊಂದಿರುವ ಜಗತ್ತಿನ ಮಾಜಿ ಅತಿದೊಡ್ಡ ಶ್ರೀಮಂತ ಬಿಲ್‌ ಗೇಟ್ಸ್‌ ಈಗ ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ನಿಯ ಜೊತೆ ಸೇರಿ ಸ್ವಯಂ ಸೇವಾ ಸಂಸ್ಥೆ ಆರಂಭಿಸಿ ಅದರ ಮೂಲಕ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸುತ್ತಿದ್ದಾರೆ. ಈಗ ಅವರು ಪ್ರಪಂಚದಲ್ಲೇ ಅತಿ ಹೆಚ್ಚು ಹಣವನ್ನು ಸಮಾಜ ಸೇವೆಗೆ ನೀಡುತ್ತಿರುವ ವ್ಯಕ್ತಿ. ಈ ಔದಾರ್ಯಕ್ಕೆ ಕಾರಣ ಹಾಗೂ ತಮ್ಮ ಕನಸುಗಳನ್ನು ಅವರಿಲ್ಲಿ ಬಿಚ್ಚಿಟ್ಟಿದ್ದಾರೆ. ಭಾರತಕ್ಕೆ ಮುಂದೊಂದು ದಿನ ಯಾರ ನೆರವೂ ಬೇಕಿಲ್ಲ ಎಂಬುದು ಅವರ ಭವಿಷ್ಯವಾಣಿ.

        *ಒಂದು ಕಾಲದಲ್ಲಿ ಪ್ರಪಂಚದ ನಂ.1 ಶ್ರೀಮಂತರಾಗಿದ್ದ ನೀವು ಏಕಾಏಕಿ ನೀವೇ ಕಟ್ಟಿದ ಮೈಕ್ರೋಸಾಫ್ಟ್ ಎಂಬ ದೈತ್ಯ ಕಂಪನಿಯಿಂದ ಹೊರಬಿದ್ದು ಸಮಾಜ ಸೇವೆಗೆ ಇಳಿದಿರಿ? ಅದಕ್ಕೆ ಪ್ರೇರಣೆಯೇನು?
        ಗೇಟ್ಸ್‌: ಪ್ರೇರಣೆ ಅಂತೇನೂ ಇಲ್ಲ. ಅದೃಷ್ಟವಶಾತ್‌ ನಾವು ಗಳಿಸಲು ಸಾಧ್ಯವಾದ ಈ ಹಣವನ್ನು ಹೇಗಾದರೂ ಪ್ರಪಂಚದ ಒಳಿತಿಗೆ ಬಳಸಬೇಕು, ಅದರಿಂದ ಕಷ್ಟದಲ್ಲಿರುವ ಕೆಲವರ ಬದುಕಾದರೂ ಸಹನೀಯವಾಗಬೇಕು ಎಂದು ಯಾವಾಗಲೂ ನಾನು ಮತ್ತು ನನ್ನ ಪತ್ನಿ ಮೆಲಿಂದಾ ಯೋಚಿಸುತ್ತಿದ್ದೆವು. ನಾವಿಬ್ಬರೂ ಮೈಕ್ರೋಸಾಫ್ಟ್ನಲ್ಲಿ ಕೆಲಸ ಮಾಡುತ್ತಿದ್ದವರು. ಹಣ ಗಳಿಸಿದ್ದು ಸಾಕಷ್ಟಾಯಿತು ಎನ್ನಿಸಿದ್ದ ದಿನ ಅದನ್ನು ಖರ್ಚು ಮಾಡಲು ಸಿದ್ಧರಾಗಿ ನಿಂತೆವು. ಆಗ ಹುಟ್ಟಿದ್ದೇ ಬಿಲ್‌ ಅಂಡ್‌ ಮೆಲಿಂದಾ ಗೇಟ್ಸ್‌ ಫೌಂಡೇಶನ್‌.

        ನಿಜ ಹೇಳಬೇಕೆಂದರೆ ನಾನು ಮತ್ತು ಮೆಲಿಂದಾ ಮದುವೆಗೆ ಮುನ್ನವೇ ಈ ಬಗ್ಗೆ ಮಾತಾಡುತ್ತಿದ್ದೆವು. ನಾನು 40ರಲ್ಲಿದ್ದಾಗ ನನ್ನ ಗಮನ ಪೂರ್ತಿ ಮೈಕ್ರೋಸಾಫ್ಟ್ ಮೇಲಿತ್ತು. ಆ ದಶಕದಲ್ಲಿ ಕಂಪನಿಯನ್ನು ಸಾಕಷ್ಟು ಬೆಳೆಸಿದೆ. ನಂತರ ಸಮಾಜ ಸೇವೆಗೆ ಇಳಿದಿದ್ದು ನನ್ನ ಬದುಕಿನ ಬಹುದೊಡ್ಡ ತಿರುವು.

        *ಇಲ್ಲಿಯವರೆಗೆ ನಿಮ್ಮ ಪ್ರತಿಷ್ಠಾನದಿಂದ ಏನೇನು ಕೆಲಸ ಮಾಡಿದ್ದೀರಿ? ಎಷ್ಟು ಖರ್ಚು ಮಾಡಿದ್ದೀರಿ?
        ಗೇಟ್ಸ್‌: ಜಗತ್ತಿನ ಕಡುಬಡವರು ನಮ್ಮ ಗುರಿ. ಅವರು ಊಟವನ್ನು ಹೇಗಾದರೂ ಸಂಪಾದಿಸಿಕೊಳ್ಳುತ್ತಾರೆ. ಆದರೆ ಆರೋಗ್ಯ ಹಾಗೂ ಶಿಕ್ಷಣ ಅವರಿಗೆ ದುರ್ಲಭ. ಅದನ್ನು ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಡ ಮಕ್ಕಳ ಶಿಕ್ಷಣ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ನಮ್ಮ ಆದ್ಯತೆ. ಇದಕ್ಕಾಗಿ ಸುಮಾರು 1.4 ಲಕ್ಷ ಕೋಟಿ ರೂ. ಖರ್ಚು ಮಾಡಿದ್ದೇವೆ. ಅದರಲ್ಲಿ 40 ಸಾವಿರ ಕೋಟಿ ರೂ.ಗಳನ್ನು ಆರೋಗ್ಯ ಸೇವೆಗಳಿಗಾಗಿ ಬಳಸಿದ್ದೇವೆ. ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನೂ ಪರಿಹರಿಸುತ್ತೇವೆಂದು ಹೊರಟರೆ ಕೊನೆಯಲ್ಲಿ ಏನೊಂದನ್ನೂ ಪೂರ್ಣಗೊಳಿಸಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಪೋಲಿಯೋ ಲಸಿಕೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ.

        *ಪೋಲಿಯೋ ಈಗ ಬಹಳ ಅಪರೂಪವಲ್ಲವೇ? ಅದಕ್ಕಾಗಿ ಇಷ್ಟೆಲ್ಲ ಹಣ ಖರ್ಚು ಮಾಡುವ ಅಗತ್ಯವಿದೆಯೇ?
        ಗೇಟ್ಸ್‌: ಖಂಡಿತ ಇದೆ. ಮುಂದುವರಿದ ಅಮೆರಿಕ, ಯುರೋಪ್‌ ಹಾಗೂ ವೇಗವಾಗಿ ಮುಂದುವರಿಯುತ್ತಿರುವ ಭಾರತದಂತಹ ದೇಶದಲ್ಲೀಗ ಪೋಲಿಯೋ ಇಲ್ಲ. ಆದರೆ ಆಫ್ರಿಕಾದ ನೈಜೀರಿಯಾ, ಕೀನ್ಯಾ, ಏಷ್ಯಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮೊದಲಾದ ದೇಶದಲ್ಲಿ ಇದೆ. ಇವೆಲ್ಲ ಮುಸ್ಲಿಂ ರಾಷ್ಟ್ರಗಳು. ಅಲ್ಲಿನ ಜನರಲ್ಲಿ ಒಂದು ಅಪನಂಬಿಕೆಯಿದೆ. ಪೋಲಿಯೋ ಲಸಿಕೆಯನ್ನು ಸಂತಾನ ನಿಯಂತ್ರಣಕ್ಕಾಗಿ ರಹಸ್ಯವಾಗಿ ಹಾಕಲಾಗುತ್ತದೆ ಎಂಬುದೇ ಆ ಅಪನಂಬಿಕೆ. ಅದನ್ನು ಹೋಗಲಾಡಿಸಿ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸುವುದು ದೊಡ್ಡ ಸವಾಲು. ನಾವು ಪ್ರಯತ್ನ ನಿಲ್ಲಿಸುವುದಿಲ್ಲ. ಪಾಕಿಸ್ತಾನದಲ್ಲಿ ಪೋಲಿಯೋ ಲಸಿಕೆ ಹಾಕುತ್ತಿದ್ದ ಆರೋಗ್ಯ ಕಾರ್ಯಕರ್ತೆಯರನ್ನೇ ತಾಲಿಬಾನಿಗಳು ಗುಂಡಿಕ್ಕಿ ಕೊಂದರು. ನಾವೀಗ ಪಾಕ್‌ ಸರ್ಕಾರದ ಜೊತೆ ಮಾತುಕತೆ ನಡೆಸಿ ಆರೋಗ್ಯ ಕಾರ್ಯಕರ್ತೆಯರಿಗೆ ಭದ್ರತೆ ನೀಡುವಂತೆ ಮನವೊಲಿಸುತ್ತಿದ್ದೇವೆ.

        *ಬಹುಶಃ ನೀವು ಮೈಕ್ರೋಸಾಫ್ಟ್ ಬಿಟ್ಟಿದ್ದರಿಂದಲೇ ಆ್ಯಪಲ್‌ ಹಾಗೂ ಗೂಗಲ್‌ ಕಂಪನಿಗಳು ಅದನ್ನು ಹಿಂದಿಕ್ಕಿ ಬೆಳೆಯುತ್ತಿವೆ. ನೀವು ಮರಳಿ ಮೈಕ್ರೋಸಾಫ್ಟ್ನ ಸಾರಥ್ಯ ವಹಿಸಿಕೊಳ್ಳಬೇಕು ಎಂಬ ಕೂಗಿದೆ. ಏನು ಮಾಡುತ್ತೀರಿ?
        ಗೇಟ್ಸ್‌: ನನ್ನ ಬದುಕಿನ ಇನ್ನುಳಿದ ದಿನಗಳು ಪ್ರತಿಷ್ಠಾನದ ಕೆಲಸಗಳಿಗೆ ಮೀಸಲು. ಆದರೆ, ನಾನೇನೂ ಮೈಕ್ರೋಸಾಫ್ಟನ್ನು ತೊರೆದಿಲ್ಲ. ಈಗಲೂ ಅಲ್ಲಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದೇನೆ. ಮೈಕ್ರೋಸಾಫ್ಟ್ಗೆ ಇಂದಿಗೂ ನಾನೇ ಅಧ್ಯಕ್ಷ. ಆದರೆ, ಕಂಪನಿಯ ದಿನನಿತ್ಯದ ವ್ಯವಹಾರಗಳ ಕಡೆ ತಲೆ ಹಾಕುತ್ತಿಲ್ಲ. ಅದನ್ನು ನೋಡಿಕೊಳ್ಳಲು ಸಮರ್ಥರಿದ್ದಾರೆ.

        ನಾನು ಎರಡು ರೀತಿಯ ವೃತ್ತಿ ಬದುಕನ್ನು ನೋಡಿದೆ. ಅದೃಷ್ಟವಶಾತ್‌ ಎರಡೂ ಅದ್ಭುತವಾಗಿದ್ದವು. ನಾನು ಮೈಕ್ರೋಸಾಫ್ಟನ್ನು ಬಹಳ ಪ್ರೀತಿಸುತ್ತೇನೆ. ಇವತ್ತೇನು ಮಾಡುತ್ತಿದ್ದೇನೋ ಅದಕ್ಕೆ ನನ್ನನ್ನು ಸಿದ್ಧಗೊಳಿಸಿದ್ದೇ ಮೈಕ್ರೋಸಾಫ್ಟ್. ಆಗ ಕಂಪ್ಯೂಟರ್‌ ಹಾಗೂ ಇಂಟರ್ನೆಟ್‌ ಕ್ರಾಂತಿಯನ್ನು ಹತ್ತಿರದಿಂದ ನೋಡಿದೆ. ಈಗ ಮಕ್ಕಳ ಸಾವಿನ ಪ್ರಮಾಣ ಇಳಿಯುತ್ತಿರುವುದನ್ನು ನೋಡುತ್ತಿದ್ದೇನೆ. ಇದರಿಂದ ಸಿಗುವ ಖುಷಿಯನ್ನು ಹೇಗೆ ವಿವರಿಸಲಿ.

        *ನಿಮ್ಮಲ್ಲಿ ಕೀನ್ಯಾದ ಒಟ್ಟು ರಾಷ್ಟ್ರೀಯ ಉತ್ಪನ್ನದ ಎರಡು ಪಟ್ಟು ಸಂಪತ್ತಿದೆ ಎಂದು ಹೋಲಿಕೆ ಮಾಡಲಾಗುತ್ತದೆ. ಆದರೂ ಇದರಿಂದ ಜಗತ್ತಿನ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಎಷ್ಟು ಸಾಧ್ಯ ಎಂಬುದನ್ನು ಅಂದಾಜು ಮಾಡಿದ್ದೀರಾ?
        ಗೇಟ್ಸ್‌: ಇಂತಹ ಹೋಲಿಕೆ ಮಾಡಬಾರದು. ಪ್ರಪಂಚದಲ್ಲಿ ಪ್ರತಿ ವರ್ಷ ಆರೋಗ್ಯ ಕ್ಷೇತ್ರಕ್ಕಾಗಿ ಖರ್ಚು ಮಾಡುತ್ತಿರುವ ಹಣದ ಮುಂದೆ ನಮ್ಮ ಪ್ರತಿಷ್ಠಾನದ ಹಣ ದೊಡ್ಡದಲ್ಲ. ಆರೋಗ್ಯ ಸಮಸ್ಯೆಗಳ ಅಗಾಧತೆಗೆ ಹೋಲಿಸಿದರೂ ನಮ್ಮಲ್ಲಿರುವ ಹಣ ಏನೇನೂ ಅಲ್ಲ. ಹಾಗಾಗಿ ಇಂತಹ ಹೋಲಿಕೆಗಳನ್ನು ಮಾಡುತ್ತ ಹೋದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಬದಲಾವಣೆ ಸಣ್ಣ ಮಟ್ಟದಲ್ಲೇ ಆರಂಭವಾಗಬೇಕು. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಡೋಣ.

        *ಪ್ರಪಂಚದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತಿವೆಯೇ ಅಥವಾ ಹೆಚ್ಚುತ್ತಿವೆಯೇ? ಆಶಾದಾಯಕ ಬೆಳವಣಿಗೆಯನ್ನು ಕಾಣಬಹುದೇ?
        ಗೇಟ್ಸ್‌: ಖಂಡಿತ ಕಾಣಬಹುದು. 1990ರಲ್ಲಿ ಐದು ವರ್ಷದೊಳಗಿನ 1.2 ಕೋಟಿ ಮಕ್ಕಳು ಸಾಯುತ್ತಿದ್ದರು. ಇಂದು ಅದು 70 ಲಕ್ಷಕ್ಕೆ ಇಳಿದಿದೆ. ವಿಶ್ವಸಂಸ್ಥೆಯ ಪ್ರಕಾರ ಈ ಸಾವಿಗೆ ಕಾರಣ ನ್ಯುಮೋನಿಯಾ (ಶೇ.18), ಹುಟ್ಟುವ ಮುಂಚಿನ ಸಮಸ್ಯೆಗಳು (ಶೇ.14), ಅತಿಸಾರ (ಶೇ.11), ಜನನದ ವೇಳೆಯ ಸಮಸ್ಯೆಗಳು (ಶೇ.9) ಮತ್ತು ಮಲೇರಿಯಾ (ಶೇ.7). ಈ ಎಲ್ಲದರ ಪ್ರಮಾಣವೂ ಈಗ ಇಳಿಯುತ್ತಿದೆ. ನಾವು ಒಂದೊಂದೇ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾವು ಸದ್ಯಕ್ಕೆ ಪೋಲಿಯೋವನ್ನು ಕೈಗೆತ್ತಿಕೊಂಡಿದ್ದೇವೆ. ಅದರ ನಿರ್ಮೂಲನೆಗೆ ಮಾಡಬೇಕಿರುವುದು ಇಷ್ಟೆ- ಶೇ.90ರಷ್ಟು ಮಕ್ಕಳಿಗೆ ಮೂರು ಬಾರಿ ಲಸಿಕೆ ಹಾಕುವುದರಿಂದ ರೋಗ ಹರಡುವುದು ನಿಲ್ಲುತ್ತದೆ. ಕ್ರಮೇಣ ರೋಗದ ಪ್ರಮಾಣ ಶೂನ್ಯಕ್ಕಿಳಿಯುತ್ತದೆ. ನಾವು ಆರಂಭಿಸಿದಾಗ ನಾಲ್ಕು ಲಕ್ಷ ಮಕ್ಕಳು ಪ್ರತಿವರ್ಷ ಪೋಲಿಯೋಕ್ಕೆ ತುತ್ತಾಗುತ್ತಿದ್ದರು. ಈಗ ವರ್ಷಕ್ಕೆ ಸಾವಿರ ಪ್ರಕರಣಗಳಷ್ಟೇ ವರದಿಯಾಗುತ್ತಿವೆ. ಇದನ್ನು ಸಂಪೂರ್ಣ ನಿಲ್ಲಿಸಿದ ಮೇಲೆ ಮಲೇರಿಯಾ ಹಾಗೂ ಸಿಡುಬು ನಿರ್ಮೂಲನೆಗೆ ನಮ್ಮ ಬಳಿಯಿರುವ ಹಣ ಬಳಸಿಕೊಳ್ಳಬಹುದು.

        *ಎಲ್ಲಾ ಹಣವನ್ನೂ ಸಮಾಜ ಸೇವೆಗೆ ಖರ್ಚು ಮಾಡುತ್ತಿದ್ದೀರಿ ಎಂದು ನಿಮ್ಮ ಮಕ್ಕಳಿಗೆ ಬೇಸರವಿದೆಯೇ?
        ಗೇಟ್ಸ್‌: ಇಲ್ಲ. ಅವರಿಗೆ ಬಡತನವೆಂದರೇನು ಎಂಬುದು ಯಾವತ್ತೂ ತಿಳಿಯುವುದಿಲ್ಲ ಬಿಡಿ! ಅವರಿಗೆ ಲಕ್ಷಾಂತರ ಕೋಟಿ ರೂ. ಆಸ್ತಿ ಸಿಗದೇ ಇರಬಹುದು. ಆದರೆ, ನೂರಾರು ಕೋಟಿಯಂತೂ ಸಿಕ್ಕೇ ಸಿಗುತ್ತದೆ. ಏಕೆಂದರೆ ನನ್ನ ಸಂಪತ್ತಿನ ಪ್ರತಿ ಸಾವಿರ ರೂ.ನಲ್ಲಿ 955 ರೂ. ಪ್ರತಿಷ್ಠಾನಕ್ಕೆ ಹೋಗುತ್ತದೆ. ಇನ್ನುಳಿದ ಹಣವನ್ನು ನಾನೂ, ನನ್ನ ಕುಟುಂಬದವರೂ ಬಳಸಬಹುದು.

        ನಮಗೆ ಹೊಟ್ಟೆಗೂ ಬಟ್ಟೆಗೂ ಸಮಸ್ಯೆಯಿಲ್ಲ! ಒಂದು ಹಂತ ದಾಟಿದ ಮೇಲೆ ಹಣದಿಂದ ಯಾವುದೇ ವೈಯಕ್ತಿಕ ಪ್ರಯೋಜನಗಳು ಇರುವುದಿಲ್ಲ. ನನಗೂ ಈಗ ಹಣದಿಂದ ಯಾವುದೇ ಪ್ರಯೋಜನವಿಲ್ಲ. ಕಷ್ಟದಲ್ಲಿರುವವರಿಗೆ ಅದು ಪ್ರಯೋಜನಕ್ಕೆ ಬರುತ್ತದೆ ಎಂದಾದರೆ ಅದಕ್ಕಿಂತ ಒಳ್ಳೆಯ ಸಂಗತಿ ಬೇರೇನಿದೆ.

        *ಭಾರತದಲ್ಲೂ ನೀವು ಸಾಕಷ್ಟು ಕೆಲಸ ಮಾಡುತ್ತಿದ್ದೀರಿ. ಅದರ ಜೊತೆಗೆ ಜಗತ್ತಿನಾದ್ಯಂತ ಶ್ರೀಮಂತ ಉದ್ಯಮಿಗಳು ತಮ್ಮ ಆದಾಯದ ದೊಡ್ಡ ಪಾಲನ್ನು ಸಮಾಜ ಸೇವೆಗೆ ನೀಡಬೇಕೆಂದು ಮನವೊಲಿಸುವ ಕೆಲಸವನ್ನೂ ಮಾಡುತ್ತಿದ್ದೀರಿ. ಇದಕ್ಕೆಲ್ಲ ಪ್ರತಿಕ್ರಿಯೆ ಹೇಗಿದೆ?

        ಗೇಟ್ಸ್‌: ನಿಜಕ್ಕೂ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ವಾರನ್‌ ಬಫೆಟ್‌ ತಮ್ಮೆಲ್ಲಾ ಆಸ್ತಿಯನ್ನೂ ಸಮಾಜ ಸೇವೆಗೆ ಬರೆದಿದ್ದಾರೆ. ಭಾರತದಲ್ಲಿ ಅಜೀಂ ಪ್ರೇಮ್‌ಜೀ, ನಂದನ್‌ ಹಾಗೂ ರೋಹಿಣಿ ನಿಲೇಕಣಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಮೆರಿಕದಲ್ಲಂತೂ ದೊಡ್ಡ ಸಂಖ್ಯೆಯಲ್ಲಿ ಉದ್ಯಮಿಗಳು ಹಣ ನೀಡುತ್ತಿದ್ದಾರೆ. ಕೆಲವರು ಹೇಳಿಕೊಳ್ಳುತ್ತಾರೆ, ಕೆಲವರು ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾರೆ. ಭಾರತದಲ್ಲಿ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸರ್ಕಾರ ಹಾಕಿಕೊಂಡಿರುವ ಯೋಜನೆಗಳು ಕೂಡ ಬಹಳ ಪರಿಣಾಮಕಾರಿಯಾಗಿವೆ. ಆದರೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಸೋರಿಕೆ ಹೆಚ್ಚು. ಹಾಗಾಗಿ ಫ‌ಲಿತಾಂಶ ಕಡಿಮೆ. ಆದರೂ ಮುಂದೊಂದು ದಿನ ಭಾರತ ಯಾರ ನೆರವನ್ನೂ ಕೇಳಬೇಕಿಲ್ಲದ ಮಟ್ಟಕ್ಕೆ ಬೆಳೆಯುತ್ತದೆ.

        *ಬಿಲ್‌ ಗೇಟ್ಸ್‌
        ಮೈಕ್ರೋಸಾಫ್ಟ್ ಸಂಸ್ಥಾಪಕ, ಸಮಾಜ ಸೇವಕ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಪಕ್ಕಾ ಒಕ್ಕಲುತನದ ಕುಟುಂಬದಿಂದ ಬಂದವರಾದರೂ ಎಸ್‌. ಎಂ. ಕೃಷ್ಣ ಹಾಗೂ ಕೃಷ್ಣ ಭೈರೇಗೌಡ ಅವರನ್ನು ಕೃಷಿಯ ಅವತಾರದಲ್ಲಿ ಊಹಿಸಿಕೊಳ್ಳುವುದು ಕಷ್ಟವೇ ಸರಿ! ಇಬ್ಬರೂ ''ಫಾರಿನ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus