ತಿರುವನಂತಪುರ: ಪಶ್ಚಿಮ ಘಟ್ಟ ಅರಣ್ಯದಲ್ಲಿ ನಕ್ಸಲರ ಉಪಸ್ಥಿತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಪಿಡುಗನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಉದ್ದೇಶದಿಂದ ನಕ್ಸಲ್ ನಿಗ್ರಹ ಪಡೆಯನ್ನು ರಚಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ ಎಂದು ಗೃಹ ಸಚಿವ ತಿರುವಂಚೂರು ರಾಧಾಕೃಷ್ಣನ್ ವಿಧಾನಸಭೆಗೆ ತಿಳಿಸಿದ್ದಾರೆ.ನಕ್ಸಲ್ ನಾಯಕ ಎ.ವರ್ಗೀಸ್ ಮತ್ತು ಆದಿವಾಸಿ ನಾಯಕ ಜೋಗಿಯ ಸಾವಿನ ವಾರ್ಷಿಕ ದಿನವಾದ ಮಂಗಳವಾರ ನಕ್ಸಲರು ರಾಜ್ಯದಲ್ಲಿ ಹಿಂಸಾಚಾರ ಎಸಗಲು ಷಡ್ಯಂತ್ರ ರೂಪಿಸಿರುವ ಬಗ್ಗೆ ಗುಪ್ತಚರ ಪಡೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಬಿಗುಬಂದೋಬಸ್ತಿನ ಏರ್ಪಾಡು ಮಾಡಲಾಗಿದೆ. ದೇಶದಲ್ಲಿ ಮಾವೋವಾದಿ ಚಟುವಟಿಕೆಗಳಿಗೆ ನಿಷೇಧವಿದ್ದರೂ ನಕ್ಸಲರು ಪಶ್ಚಿಮ ಘಟ್ಟ ದಟ್ಟಾರಣ್ಯವನ್ನು ನೆಲೆಯಾಗಿಸಿಕೊಂಡು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ತಮ್ಮ ಜಾಲ ಹರಡುತ್ತಿದ್ದಾರೆ ಎಂದರು.ರಾಜ್ಯಕ್ಕೆ ನಕ್ಸಲ್ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಪೊಲೀಸ್ ಪಡೆಯನ್ನು ಗರಿಷ್ಠ ಕಟ್ಟೆಚ್ಚರದಲ್ಲಿರಿಸಲಾಗಿದೆ. ಆದರೆ ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದು ಅಸಾಧ್ಯ ಎಂದರು.