Wednesday, May 22, 2013
Last Updated: 12:20:16 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಚಿತ್ರದುರ್ಗ-ಮಂಗಳೂರು ಅನಿಲ ಕೊಳವೆ ಮಾರ್ಗ
    • ದಾಬೋಲ್‌-ಬಿಡದಿ ಗ್ಯಾಸ್‌ ಪೈಪ್‌ಲೈನ್‌ ಲೋಕಾರ್ಪಣೆ
    • ಗ್ಯಾಸ್ ಇನ್ ಯೋಜನೆಗೆ ಎಂ. ವೀರಪ್ಪ ಮೊಯಿಲಿ ಸೋಮವಾರ ಚಾಲನೆ ನೀಡಿದರು.

      • Udayavani | Feb 18, 2013

         ಯೋಜನೆಯಿಂದ 700 ಮೆ.ವಾ. ವಿದ್ಯುತ್‌ ಲಭ್ಯ

        ಹೊರವರ್ತುಲವನ್ನೂ ಆವರಿಸಿದೆ ಪೈಪ್‌ಲೈನ್‌

        ಬೆಂಗಳೂರು
        : ನಗರದಲ್ಲಿ ಸಿಎನ್‌ಜಿ ಟರ್ಮಿನಲ್‌ ಮತ್ತು ಮಂಗಳೂರಿನಲ್ಲಿ ಎಲ್‌ಎನ್‌ಜಿ ಟರ್ಮಿನಲ್‌ ಸ್ಥಾಪಿಸುವಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ತೈಲ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

        ಇಲ್ಲಿ ಸಿಎನ್‌ಜಿ ಟರ್ಮಿನಲ್‌ ಸ್ಥಾಪಿಸುವ ಕುರಿತಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯಿಂದ ನಿಯಮಾವಳಿಗಳಗೆ ಸಂಬಂಧಿಸಿ ಕೆಲವು ಆಕ್ಷೇಪಗಳಿವೆ. ಪೆಟ್ರೋಲಿಯಂ ಖಾತೆ ಶೀಘ್ರ ಈ ಸಮಸ್ಯೆಯನ್ನು ಬಗೆಹರಿಸಲಿದೆ ಎಂದು ಸಚಿವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

        ಭೂ ಸ್ವಾಧೀನ ಸಮಸ್ಯೆಗಳಿಂದಾಗಿ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆವಮಾರ್ಗ ಯೋಜನೆ ತೊಂದರೆಯನ್ನು ಅನುಭವಿಸುತ್ತಿದೆ. ಆದರೆ ಯೋಜನೆ ನಿಲ್ಲಲು ಬಿಡುವುದಿಲ್ಲ. ದಾಭೋಲ್‌-ಬೆಂಗಳೂರು ಅನಿಲ ಕೊಳವೆ ಮಾರ್ಗವನ್ನು ಚಿತ್ರದುರ್ಗದ ಮೂಲಕ ಮಂಗಳೂರಿಗೆ ಒಯ್ಯಲಾಗುತ್ತದೆ ಎಂದು ಮೊಲಿ ಹೇಳಿದರು.

        350 ಕಿ.ಮೀ. ಚಿತ್ರದುರ್ಗ-ಮಂಗಳೂರು ಕೊಳವೆ ಮಾರ್ಗ ಯೋಜನೆಯ ಬೇಸ್‌ಲೈನ್‌ ಸಮೀಕ್ಷೆ ಪೂರ್ಣಗೊಂಡಿದೆ.

        ಮಂಗಳೂರಿನಲ್ಲಿ ಎಲ್‌ಎನ್‌ಜಿ ಟರ್ಮಿನಲ್‌ ಸ್ಥಾಪಿಸಲು ಮುಂದಿನ 15-20 ದಿನಗಳಲ್ಲಿ ಬಿಪಿಸಿಎಲ್‌, ಒಎನ್‌ಜಿಸಿ ಮತ್ತು ರಾಜ್ಯ ಸರಕಾರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಿವೆ. ಮೊಜಾಂಬಿಕ್‌ನಿಂದ ಪೆಟ್ರೋಲಿಯಂ ವಸ್ತುಗಳನ್ನು ನಾವು ಪಡೆಯುವುದು ನಿಶ್ಚಿತ ಎಂದು ಸಚಿವರು ತಿಳಿಸಿದರು.

        ಸಿಎನ್‌ಜಿ ಒದಗಿಸುವಂತೆ ನಾವು ತತ್‌ಕ್ಷಣ ಜಿಎಐಎಲ್‌ ಅನ್ನು ಕೋರಲಿದ್ದೇವೆ. ಮೂರರಿಂದ ನಾಲ್ಕು ಸಿಎನ್‌ಜಿ ಟರ್ಮಿನಲ್‌ಗ‌ಳನ್ನು ಸ್ಥಾಪಿಸಲು ಇಲ್ಲಿ ಅವಕಾಶವಿದೆ. ಅವರು ಕನಿಷ್ಠ ಒಂದನ್ನಾದರೂ ತತ್‌ಕ್ಷಣ ಆರಂಭಿಸಬಹುದಾಗಿದೆ ಎಂದು ಮೊಲಿ ಹೇಳಿದರು.

        ಜಿಎಐಎಲ್‌ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಜಂಟಿ ಉದ್ಯಮವನ್ನಾಗಿ ಟರ್ಮಿನಲ್‌ ಸ್ಥಾಪಿಸಲಿವೆ. ಯೋಜನೆ ಮುಂದುವರಿಯಲು ಸಾಧ್ಯವಾಗುವಂತೆ ಅವಶ್ಯವೆನಿಸಿದರೆ, ಹೆಚ್ಚುವರಿ ಪಾಲು ಬಂಡವಾಳ ಒದಗಿಸಲಾಗುವುದು ಎಂದರು.

        ಡೀಸೆಲ್‌ ದರ ಏರಿಕೆಗೆ ಮೊಯ್ಲಿ ಸಮರ್ಥನೆ

        ದೇಶದ ತೈಲ ಉತ್ಪನ್ನಗಳ ಬೇಡಿಕೆ ಪೂರೈಸಲು ಕೇಂದ್ರ ಸರ್ಕಾರ ಶೇ. 73ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಏಳು ಲಕ್ಷ ಕೋಟಿ ರೂ. ಪಾವತಿಸಬೇಕಿದೆ. ಇದನ್ನು ಯಾರು ಯಾರಿಂದ ಭರಿಸಬೇಕು? ಒಂದು ತೆರಿಗೆ ಹೆಚ್ಚಳದಿಂದ. ಮತ್ತೂಂದು ಗ್ರಾಹಕರಿಂದ ಬೆಲೆ ಏರಿಕೆ ರೂಪದಲ್ಲಿ ಪಡೆದು ಪಾವತಿಸಬೇಕು.

        - ಡೀಸೆಲ್‌ ದರ ಏರಿಕೆಗೆ ಪೆಟ್ರೋಲಿಯಂ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಅವರು ನೀಡಿದ ಸಮರ್ಥನೆ ಇದು.

        ಹೇರಳ ಪ್ರಮಾಣದಲ್ಲಿ ತೈಲ ಉತ್ಪನ್ನಗಳ ಆಮದು ಆಗುತ್ತಿದೆ. ಅದರ ಹಣ ಪಾವತಿಸಬೇಕಾದರೆ ದರ ಏರಿಕೆಯೊಂದೇ ನಮ್ಮ ಮುಂದಿರುವ ಮಾರ್ಗ. ಆದಾಗ್ಯೂ ಗ್ರಾಹಕರಿಗೆ ಹೊರೆಯಾಗದಂತೆ ಅತ್ಯಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.


        ಇನ್ಮುಂದೆ ನಲ್ಲಿ ನೀರಿನಂತೆಯೇ ಅಡುಗೆ ಅನಿಲವು ಬೆಂಗಳೂರಿಗರ ಮನೆ ಬಾಗಿಲಿಗೆ ಬರಲಿದೆ!

        ಹೌದು, ಬಹುನಿರೀಕ್ಷಿತ ಮಹಾರಾಷ್ಟ್ರದ ದಾಬೋಲ್‌ನಿಂದ ಬಿಡದಿ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಯೋಜನೆಯ ಮೊದಲ ಹಂತವು ಸೋಮವಾರ ಲೋಕಾರ್ಪಣೆಗೊಂಡಿದೆ. ಸಾವಿರ ಕಿ.ಮೀ. ಉದ್ದದ 4,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಈಗಾಗಲೇ 73 ಕಿ.ಮೀ. ವ್ಯಾಪ್ತಿಯ ನಗರದ ಹೊರವರ್ತುಲವನ್ನೂ ಅನಿಲ ಕೊಳವೆ ಮಾರ್ಗ ಸುತ್ತುವರಿದಿದೆ. ಇನ್ನೇನಿದ್ದರೂ ಮನೆ-ಮನೆಗೆ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಇದೆ. ಕೆಲವೇ ತಿಂಗಳುಗಳಲ್ಲಿ ನಲ್ಲಿ ನೀರಿನಂತೆ ಈ ನೈಸರ್ಗಿಕ ಅನಿಲ ಹರಿಯಲಿದೆ.

        ಅಲ್ಲದೇ, ಬೆಂಗಳೂರು ನಗರಕ್ಕೆ ವಿದ್ಯುತ್‌ ಪೂರೈಸಲು ಸ್ಥಾಪಿಸಲಾಗಿರುವ ಬಿಡದಿ ವಿದ್ಯುತ್‌ ಸ್ಥಾವರಕ್ಕೂ ಅನಿಲ ಪೂರೈಸುವ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ಈ ಸ್ಥಾವರದಲ್ಲಿ 1,400 ಮೆ.ವಾ. ವಿದ್ಯುತ್‌ ಉತ್ಪಾದನೆ ಮಾಡುವ ಉದ್ದೇಶವಿದೆ. ಮೊದಲ ಹಂತದಲ್ಲಿ 700 ಮೆ.ವಾ. ವಿದ್ಯುತ್‌ ಉತ್ಪಾದನೆಯಾಗಲಿದೆ. ಆ ಮೂಲಕ ನಗರದ ವಿದ್ಯುತ್‌ ಸಮಸ್ಯೆಯೂ ಬಗೆಹರಿಯಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತದ ಸೇವೆಗೆ ಪೆಟ್ರೋಲಿಯಂ ಮತ್ತು ನೈಸಗಿರಕ ಅನಿಲ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಸೋಮವಾರ ಚಾಲನೆ ನೀಡಿದರು.

        ನಗರದ ಜಾಲಹಳ್ಳಿಯ ಬಿಇಎಲ್‌ ಗೇಟ್‌ ಬಳಿ 'ಗ್ಯಾಸ್‌-ಇನ್‌' ಕಾರ್ಯಕ್ರಮದಲ್ಲಿ ಅನಿಲ ಕೊಳವೆ ಮಾರ್ಗದ ಮೊದಲ ಗ್ರಾಹಕ ಟೊಯೊಟಾ ಕಿರ್ಲೋಸ್ಕರ್‌ ಅಟೋಪಾರ್ಟ್ಸ್ ಪ್ರೈ.ಲಿ.,ಗೆ ಒಡಂಬಡಿಕೆ ಪತ್ರವನ್ನು ಹಸ್ತಾಂತರ ಮಾಡಲಾಯಿತು.

        ಶತಮಾನದ ಇಂಧನ ಮೂಲ

        ನಂತರ ಮಾತನಾಡಿದ ಸಚಿವ ವೀರಪ್ಪ ಮೊಯಿಲಿ, 'ನೈಸರ್ಗಿಕ ಅನಿಲವು ಈ ಶತಮಾನದ ಇಂಧನ ಮೂಲ. ಭವಿಷ್ಯದಲ್ಲಿ ದೇಶಕ್ಕೆ ತೈಲ ಮತ್ತು ಇಂಧನ ಭದ್ರತೆಯನ್ನು ಒದಗಿಸುವ ಮಹತ್ಕಾರ್ಯ ನೈಸರ್ಗಿಕ ಅನಿಲದಿಂದ ಆಗಲಿದೆ. ಕೃಷಿ ಬೆಳವಣಿಗೆ, ಕೈಗಾರಿಕೋದ್ಯಮದ ಅಗತ್ಯತೆಗಳನ್ನು ಇದು ಪೂರೈಸಲಿದೆ' ಎಂದು ಬಣ್ಣಿಸಿದರು.

        'ಬೆಂಗಳೂರಿಗೆ ಅಗತ್ಯವಿರುವ ವಿದ್ಯುತ್‌ನ್ನು ಈ ನೈಸರ್ಗಿಕ ಅನಿಲ ಮಾರ್ಗ ಪೂರೈಸಲಿದೆ. ನಗರದ ಹೊರವರ್ತುಲ ರಸ್ತೆಯನ್ನು ಸುತ್ತುವರಿದಿರುವ ಮಾರ್ಗದಿಂದ ಮನೆ-ಮನೆಗೆ ತಲುಪಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು' ಎಂದರು.

        ಇತರೆಡೆಯೂ ವಿಸ್ತರಣೆ

        ಮುಂದಿನ ದಿನಗಳಲ್ಲಿ ಈ ಕೊಳವೆ ಮಾರ್ಗದಿಂದ ನಗರದ ಸುತ್ತಲಿನ ಗೌರಿಬಿದನೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ ಸೇರಿದಂತೆ ಇತರ ಪ್ರದೇಶಗಳಿಗೂ ವಿಸ್ತರಿಸುವ ಉದ್ದೇಶವಿದೆ. ಬೆಂಗಳೂರಿಗೆ 2015ಕ್ಕೆ 1,500 ಮೆ.ವಾ. ವಿದ್ಯುತ್‌ ಅವಶ್ಯಕತೆ ಇದ್ದು, 1,400 ಮೆ.ವಾ. ಕೇವಲ ನೈಸರ್ಗಿಕ ಅನಿಲ ಕೊಳವೆ ಮಾರ್ಗವೇ ಪೂರೈಸಲಿದೆ ಎಂದರು.

        ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್‌.ವಿ. ರಂಗನಾಥ್‌, ಗೇಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ತ್ರಿಪಾಠಿ, ಇಂಧನ ಇಲಾಖೆ ಕಾರ್ಯದರ್ಶಿ ಪಟ್ನಾಯಕ್‌, ಕರ್ನಾಟಕ ಇಂಧನ ನಿಗಮ ನಿಯಮಿತ (ಕೆಪಿಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಕಾಂಬ್ಳೆ ಮತ್ತಿತರರು ಉಪಸ್ಥಿತರಿದ್ದರು.

        ಜಿಂದಾಲ್‌ನಲ್ಲಿ ಶಿಲಾನ್ಯಾಸ

        ನಂತರ ಜಿಂದಾಲ್‌ ಅಲ್ಯುಮಿನಿಯಂ ಕಂಪೆನಿಯಲ್ಲಿ ಸಚಿವ ವೀರಪ್ಪ ಮೊಯಿಲಿ 'ಚಿಕ್ಕಬಳ್ಳಾಪುರ ಗ್ಯಾಸ್‌ ಪೈಪ್‌ಲೈನ್‌'ಗೆ ಶಿಲಾನ್ಯಾಸ ಮಾಡಿದರು.

        28 ಕಿ.ಮೀ. ಉದ್ದದ ಈ ಮಾರ್ಗವು ದಾಬಸ್‌ಪೇಟೆಯಿಂದ ಜಿಂದಾಲ್‌ ಅಲ್ಯುಮಿನಿಯಂ ಕಂಪೆನಿಗೆ ಅನಿಲ ಸಂಪರ್ಕ ಕಲ್ಪಿಸಲಿದೆ. ಇದರಿಂದ ಕಂಪೆನಿಗೆ 7 ಮೆ.ವಾ. ವಿದ್ಯುತ್‌ ಪೂರೈಕೆಯಾಗಲಿದೆ. ಮೂರು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕಂಪೆನಿ ಉಪಾಧ್ಯಕ್ಷ ರಘುನಾಥ್‌ ತಿಳಿಸಿದರು.

        ಎಲ್ಲೆಲ್ಲಿ ಹಾದುಬಂದಿದೆ?

        ಒಂದು ಸಾವಿರ ಕಿ.ಮೀ. ಉದ್ದದ ಈ ಮಾರ್ಗವು 300 ಕಿ.ಮೀ. ಪಶ್ಚಿಮಘಟ್ಟ ಪ್ರದೇಶ, 263 ಕಿ.ಮೀ. ಮಹಾರಾಷ್ಟ್ರ ಮತ್ತು 36 ಕಿ.ಮೀ. ಗೋವಾದಲ್ಲಿ ಹಾದುಬಂದಿದೆ. ಈ ಮಾರ್ಗದಲ್ಲಿ 11 ಪ್ರಮುಖ ನದಿ ತಿರುವುಗಳು, 20 ರೈಲ್ವೆ ತಿರುವುಗಳು, 276 ನೀರಿನ ಕೊಳಗಳ ತಿರುವುಗಳು ಬಂದಿವೆ ಎಂದು ಗೇಲ್‌ ಪ್ರಕಟಣೆ ತಿಳಿಸಿದೆ.

        2030ಕ್ಕೆ ತೈಲದಲ್ಲಿ ಸ್ವಾವಲಂಬನೆ

        ಪ್ರಸ್ತುತ ಶೇ. 73ರಷ್ಟು ತೈಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು 2020ರ ವೇಳೆಗೆ ಶೇ. 50ರಷ್ಟು ಕಡಿಮೆ ಹಾಗೂ 2025ಕ್ಕೆ ಶೇ. 25ಕ್ಕೆ ಮತ್ತು 2030ರ ಹೊತ್ತಿಗೆ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಇದೆ ಎಂದು ಸಚಿವರು ತಿಳಿಸಿದರು.

        ಬೆಂಗಳೂರಿಗೆ 1,500 ಮೆ.ವಾ. ವಿದ್ಯುತ್‌ ಅಗತ್ಯವಿದೆ. ಸದ್ಯ ಅನಿಲ ಕೊಳವೆ ಮಾರ್ಗದಿಂದ 700 ಮೆ.ವಾ. ದೊರೆಯಲಿದೆ. 2ನೇ ಹಂತದ ಅಂತ್ಯಕ್ಕೆ 1,400 ಮೆ.ವಾ. ಪೂರೈಕೆಯಾಗಲಿದೆ. 350 ಮೆ.ವಾ. ವಿದ್ಯುತ್‌ ಯಲಹಂಕದಲ್ಲಿರುವ ಡೀಸೆಲ್‌ ಘಟಕವನ್ನು ಅನಿಲ ಕೊಳವೆ ಮಾರ್ಗಕ್ಕೆ ಪರಿವರ್ತಿಸಲಾಗುವುದು ಎಂದು ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಕಾಂಬ್ಳೆ ತಿಳಿಸಿದರು.

        ಯೋಜನೆ ವಿವರ

        ದಾಬೋಲ್‌ನಿಂದ ಹರಿದುಬರುವ ಈ ನೈಸರ್ಗಿಕ ಅನಿಲವು ನಗರದ ಎರಡು ಮಹತ್ವದ ಬೇಡಿಕೆಗಳನ್ನು ಪೂರೈಸಲಿದೆ.

        ಒಂದು ಬಿಡದಿಯಲ್ಲಿರುವ ವಿದ್ಯುತ್‌ ಘಟಕದಲ್ಲಿ ಈ ಅನಿಲ ವಿದ್ಯುತ್‌ ರೂಪದಲ್ಲಿ ಪರಿವರ್ತನೆಗೊಂಡು ನಗರಕ್ಕೆ ಸರಬರಾಜಾಗುತ್ತದೆ. ಮೊದಲ ಹಂತದಲ್ಲಿ ಸುಮಾರು 700 ಮೆ.ವಾ. ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಕೆಪಿಸಿಎಲ್‌ ಹೊಂದಿದೆ. ಇದಕ್ಕಾಗಿ ನಿತ್ಯ 3.2 ಮಿಲಿಯನ್‌ ಕ್ಯೂಬಿಕ್‌ ಮೀಟರ್‌ ನೈಸರ್ಗಿಕ ಅನಿಲ ದಾಬೋಲ್‌ನಿಂದ ಇಲ್ಲಿಗೆ ಬರಲಿದೆ.

        ಮತ್ತೂಂದು ಅಡುಗೆ ಅನಿಲದ ರೂಪದಲ್ಲಿ ಮನೆ ಬಾಗಿಲಿಗೆ ಬರಲಿದೆ. ಹೊರವರ್ತುಲದಲ್ಲಿ 18 ಇಂಚು ಸುತ್ತಳತೆಯ ಪೈಪ್‌ಲೈನ್‌ ಅಳವಡಿಸಿದ್ದು, ಅಲ್ಲಿಂದ ನಗರದ ಬಡಾವಣೆಗಳು, ಮನೆಗಳಿಗೆ ಪೂರೈಕೆಯಾಗಲಿದೆ.

        ಭಿಕ್ಷುಕರ ಕಾಲೊನಿಯಲ್ಲಿ ಸುತ್ತ ಅನಿಲ ಕೊಳವೆ ಮಾರ್ಗದ ಸಂಪರ್ಕ ನೀಡುವ ಕಾರ್ಯ ಆರಂಭವಾಗಿದೆ. ಮೊದಲ ಹಂತದಲ್ಲಿ ಭಿಕ್ಷುಕರ ಕಾಲೊನಿಯ ನಾಲ್ಕೂ ದಿಕ್ಕುಗಳ ಆಸುಪಾಸು ಸಂಪರ್ಕ ನೀಡಲಾಗುವುದು. ನಂತರದ ಹಂತಗಳಲ್ಲಿ ನಗರದ ಸಂಪರ್ಕ ಕಲ್ಪಿಸಲಾಗುವುದು. ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆದಿದೆ ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

        ಅನಿಲ ಆಧಾರಿತ ವಿದ್ಯುತ್‌ ಸಂಪರ್ಕದ ಜತೆಗೆ ಮೀಟರ್‌ ಅಳವಡಿಕೆ ಮಾಡಲಾಗುವುದು. ಆದರೆ, ಈ ವಿದ್ಯುತ್‌ ದರ ಇತರೆ ಮೂಲದ ವಿದ್ಯುತ್‌ಗಿಂತ ಶೇ. 50ರಷ್ಟು ಕಡಿಮೆ ಇರಲಿದೆ ಎಂದು ಹೇಳಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus