ನೇಪಿಯರ್ : ಪ್ರವಾಸಿ ಇಂಗ್ಲಂಡ್ ವಿರುದ್ಧ ಬುಧವಾರ ನಡೆಯಲಿರುವ ದ್ವಿತೀಯ ಏಕದಿನ ಪಂದ್ಯಕ್ಕೆ ನ್ಯೂಜಿಲಂಡ್ ತಂಡವು ವೇಗಿ ಟಿಮ್ ಸೌಥಿ ಮತ್ತು ಬ್ಯಾಟ್ಸ್‌ಮನ್ ಹಾಮಿಶ್ ರುಥರ್‌ಫೋರ್ಡ್ ಅವರನ್ನು ಕರೆಸಿಕೊಂಡಿದೆ. ಗಾಯಗೊಂಡಿರುವ ಸೀಮರ್ ಮಿಚೆಲ್ ಮೆಕ್‌ಕ್ಲೀನಗನ್ ಮತ್ತು ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರ ಬದಲಿಗೆ ಸೌಥಿ ಮತ್ತು ರುಥರ್‌ಫೋರ್ಡ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.ರವಿವಾರ ನಡೆದ ಪಂದ್ಯದಲ್ಲಿ ನ್ಯೂಜಿಲಂಡ್ 3 ವಿಕೆಟ್‌ಗಳ ಗೆಲುವು ಸಾಧಿಸುವ ವೇಳೆ ಮೆಕ್‌ಕ್ಲೀನಗನ್ 4 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಆದರೆ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಅವರು ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಮಂಡಿ ನೋವಿನ ಹೊರತಾಗಿಯೂ ಅಜೇಯ 27 ರನ್ ಗಳಿಸಿ ತಂಡದ ಗೆಲುವಿಗೆ ಶ್ರಮಿಸಿದ ಗಪ್ಟಿಲ್ ಅವರು ದ್ವಿತೀಯ ಏಕದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ನ್ಯೂಜಿಲಂಡ್ ಕ್ರಿಕೆಟ್‌ನ ಪ್ರಕಟನೆ ತಿಳಿಸಿದೆ. ದ್ವಿತೀಯ ಏಕದಿನ ಪಂದ್ಯ ನೇಪಿಯರ್‌ನಲ್ಲಿ ಬುಧವಾರ ನಡೆಯಲಿದೆ.ಈ ತಿಂಗಳ ಆರಂಭದಲ್ಲಿ ಇಂಗ್ಲಂಡ್ ವಿರುದ್ಧ ನಡೆದ ಟ್ವೆಂಟಿ-20 ಪಂದ್ಯದ ಮೂಲಕ 23ರ ಹರೆಯದ ರುದರ್‌ಫೋರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಗೈದಿದ್ದರು. ಈ ಟ್ವೆಂಟಿ-20 ಸರಣಿಯನ್ನು ನ್ಯೂಜಿಲಂಡ್ 1-2 ಅಂತರದಿಂದ ಸೋತಿತ್ತು.