Udayavani | Jan 06, 2011
ಕೆಎಸ್ಸಾರ್ಟಿಸಿ, ಡಿಎಂ ಅಧಿಸೂಚನೆ ಉಲ್ಲಂಘನೆ: ಖಾಸಗಿ
ಮಂಗಳೂರು : ಮಂಗಳೂರು ನಗರದಲ್ಲಿ ಸಾರ್ವಜನಿಕ ಬೇಡಿಕೆಯನ್ನು ಪರಿಗಣಿಸಿ ಸರಕಾರಿ ಸಿಟಿ ಬಸ್‌ಗಳಿಗೆ ಪವಾನಿಗೆ ನೀಡಬೇಕೆಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಾದಿಸಿದರೆ, ಪರವಾನಿಗೆ ನೀಡುವುದು ಜಿಲ್ಲಾ ದಂಡಾಧಿಕಾರಿ ಅಧಿಸೂಚನೆ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ನೋಟಿಫಿಕೇಶನ್)ಯ ಉಲ್ಲಂಘನೆಯಾಗುತ್ತದೆ ಎಂದು ಖಾಸಗಿ ಬಸ್ ಮಾಲಕರು ಅಕ್ಷೇಪಣೆ ಸಲ್ಲಿಸಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರಗಿದ ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ(ಆರ್‌ಟಿಎ)ದ ಸಭೆಯಲ್ಲಿ ಪರವಾನಿಗೆ ಕುರಿಂತೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಸಂಸ್ಥೆಯವರು ಪರ ಹಾಗೂ ವಿರೋಧ ವಾದ ಮಂಡಿಸಿದರು.
ಕೆಎಸ್‌ಆರ್‌ಟಿಸಿ ಸಂಸ್ಥೆಯವರು ಸುರತ್ಕಲ್-ತಲಪಾಡಿ 22 ಸಿಟಿಬಸ್‌ಗಳು (224 ರೌಂಡ್ ಟ್ರಿಪ್‌ಗ್ಳು), ಮಂಗಳಾದೇವಿ-ಬೊಂದೇಲ್ ನಡುವೆ 6 ಸಿಟಿ ಬಸ್‌ಗಳು (54 ರೌಂಡ್ ಟ್ರಿಪ್‌ಗ್ಳು) ಹಾಗೂ ಮಂಗಳಾದೇವಿ- ಕುಂಜತ್ತಬೈಲ್ ನಡುವೆ 9 ಸಿಟಿಬಸ್‌ಗಳಿಗೆ (87 ರೌಂಡ್ ಟ್ರಿಪ್‌ಗ್ಳು) (ಒಟ್ಟು 374 ರೌಂಡ್ ಟ್ರಿಪ್‌ಗ್ಳು) ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಮಂಗಳೂರು ನಗರದಲ್ಲಿ ಸಾರ್ವಜನಿಕರ ಬೇಡಿಕೆಯನ್ನು ಮನ್ನಿಸಿ ಉದ್ದೇಶಿತ ಮಾರ್ಗಗಳ ಮಧ್ಯೆ ಸಿಟಿ ಬಸ್‌ಗಳ ಸಂಚಾರಕ್ಕೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಲಾಗಿದೆ. 1991ರ ಡಿಎಂ ಅಧಿಸೂಚನೆಯಲ್ಲಿ ಸ್ಟೇಟ್‌ಬ್ಯಾಂಕಿಗೆ ನೂತನ ಪರವಾನಿಗೆಗೆ ನಿಷೇಧವಿದೆ. ಸಂಸ್ಥೆ ಸಲ್ಲಿಸಿರುವ ಪರವಾನಿಗೆಯ ಬಸ್‌ಗಳು ಸ್ಟೇಟ್‌ಬ್ಯಾಂಕ್‌ಗೆ ಬರುವುದಿಲ್ಲ. ಅವುಗಳು ಜ್ಯೋತಿ ಮೂಲಕ ಕಂಕನಾಡಿಗೆ ಸಂಚರಿಸುತ್ತವೆ. ಅದುದರಿಂದ ಡಿಎಂ ಅಧಿಸೂಚನೆ ಉಲ್ಲಂಘನೆಯಾಗುವುದಿಲ್ಲ. ಉದ್ದೇಶಿತ ಮಾರ್ಗದಲ್ಲಿ ಡಿಎಂ ಅಧಿಸೂಚನೆಯ ಬಳಿಕ ಹಲವಾರು ಖಾಸಗಿ ಸಿಟಿಬಸ್‌ಗಳಿಗೆ ಪರವಾನಿಗೆ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಕಾನೂನು ಅಧಿಕಾರಿ ವಾದ ಮಂಡಿಸಿದರು.
ಸರಕಾರಿ ಸಿಟಿಬಸ್‌ಗಳಲ್ಲಿ ಸಾರ್ವಜನಿಕರಿಗೆ ಹಲವಾರು ಸೌಲಭ್ಯಗಳು ದೊರೆಯುತ್ತವೆ. 1ರಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತ ಪ್ರಯಾಣ, ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಿಯಾಯತಿ ಇದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್‌ಪಾಸ್ ವ್ಯವಸ್ಥೆ ಇದೆ. ಈಗಾಗಲೇ ರಾಜ್ಯದ ಕೆಲವು ಕಡೆಗಳಲ್ಲಿ ಸಂಸ್ಥೆಯ ಉತ್ತಮ ಸೇವೆ ನೀಡುತ್ತಿದೆ. ಖಾಸಗಿ ಬಸ್ ಸೇವೆಯ ವಿರುದ್ಧ ಈಗಾಗಲೇ ಸಾರ್ವಜನಿಕರು ದೂರುಗಳು ವ್ಯಕ್ತವಾಗುತ್ತಿವೆ. ಅದುದರಿಂದ ಪರವಾನಿಗೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಮಾನ್ಯ ಮಾಡಬೇಕು ಎಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿತು.
ಕೆಎಸ್‌ಆರ್‌ಟಿಸಿ ಸಿಟಿಬಸ್‌ಗಳಿಗೆ ಪರವಾನಿಗೆ ನೀಡುವುದನ್ನು ವಿರೋಧಿಸಿದ ಖಾಸಗಿ ಸಂಸ್ಥೆ ಪರ ನ್ಯಾಯವಾದಿಗಳು ಜ್ಯೋತಿವೃತ್ತ ಸೇರಿದಂತೆ ಪರವಾನಿಗೆಯಲ್ಲಿ ಉಲ್ಲೇಖೀಸಿರುವ ಮಾರ್ಗಗಳು ಡಿಎಂ ಅಧಿಸೂಚನೆಯಲ್ಲಿ ಸೇರಿದೆ. ಅದುದರಿಂದ ಪರವಾನಿಗೆ ನೀಡುವುದು ಅಧಿಸೂಚನೆಯ ಉಲ್ಲಂಘನೆಯಾಗುತ್ತೆ ಎಂದು ವಾದಿಸಿದರು.
ಮಂಗಳೂರು ನಗರದೊಳಗೆ ಇನ್ನಷ್ಟು ಬಸ್‌ಗಳಿಗೆ ಪರವಾನಿಗೆ ನೀಡುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಇಲ್ಲಿನ ರಸ್ತೆ ಪರಿಸ್ಥಿತಿಯೂ ಹೊಸ ಪರವಾನಿಗೆಗಳಿಗೆ ಪೂರಕವಾಗಿಲ್ಲ . ಮಂಗಳೂರು ನಗರದಲ್ಲಿ ಈಗಾಗಲೇ ಖಾಸಗಿ ಸಿಟಿಬಸ್‌ಗಳು ವ್ಯವಸ್ಥಿತ ಮತ್ತು ಉತ್ತಮ ಸೇವೆಯನ್ನು ನೀಡುತ್ತಿವೆ. ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಬಸ್‌ಪಾಸ್‌ಗಳನ್ನು ನೀಡುತ್ತಿವೆ. ಖಾಸಗಿ ಬಸ್‌ಗಳಿಂದ ಸರಕಾರಕ್ಕೆ ಹೆಚ್ಚಿನ ತೆರಿಗೆ ಸಂದಾಯವಾಗುತ್ತಿದೆ. ಇದಲ್ಲದೆ ಈಗಾಗಲೇ ಸರಕಾರಿ ಸಿಟಿಬಸ್‌ಗಳು ಚಾಲನೆಯಲ್ಲಿರುವ ಪ್ರದೇಶಗಳಲ್ಲಿ ಅವುಗಳ ಸೇವೆಯ ಬಗ್ಗೆ ದೂರುಗಳಿವೆ. ಅದುದರಿಂದ ಕೆಎಸ್‌ಆರ್‌ಟಿಸಿ ಸಿಟಿಬಸ್‌ಗಳಿಗೆ ಪರವಾನಿಗೆ ನೀಡುವ ಅಗತ್ಯವಿಲ್ಲ ಎಂದು ವಾದ ಮಂಡಿಸಿದರು.
ನಮ್ಮದೇ ಬಾಕಿ ಇರುವಾಗ ...
1990ರಿಂದ ಸುಮಾರು 1,000 ಪರವಾನಿಗೆ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗ ಕೆಎಸ್‌ಆರ್‌ಟಿಸಿಯವರು ಇತ್ತೀಚೆಗಷ್ಟೆ ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ಪರಿಗಣನೆಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಉಪ್ಪಿನಂಗಡಿ- ಮುರ, ಬಿ.ಸಿ.ರೋಡ್- ಮೆಲ್ಕಾರ್, ಉಪ್ಪಿನಂಗಡಿ- ಕಾಯರ್‌ಪಾಡಿ ವಯಾ ಇಳಂತಿಲ, ಬೆಳ್ತಂಗಡಿ- ಗುರುವಾಯನಕೆರೆ, ಮಣಿಹಳ್ಳ ಸೇತುವೆ- ಬಿ.ಸಿ.ರೋಡ್, ಮೇರೆಮಜಲು ಕ್ರಾಸ್- ಫರಂಗಿಪೇಟೆ ಮುಂತಾದ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರ ಪರವಾನಿಗೆಗೆ ಕೆಎಸ್‌ಆರ್‌ಟಿಸಿ ವಿರೋಧಿಸಿತು. ಈ ಮಾರ್ಗದಲ್ಲಿ ಪರವಾನಿಗೆ ನೀಡುವುದು ರಾಷ್ಟ್ರೀಕೃತ ಮಾರ್ಗ ನಿಯಮಕ್ಕೆ ವಿರೋಧವಾಗುವುದರಿಂದ ಖಾಸಗಿಯವರು ಪರವಾನಿಗೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ಸಂಸ್ಥೆ ಮನವಿ ಮಾಡಿತು.
ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಸುಬೋಧ್ ಯಾದವ್, ಸದಸ್ಯ ಕಾರ್ಯದರ್ಶಿ, ಆರ್‌ಟಿಒ ಸೇವಾ ನಾಯಕ್, ಎಸ್ಪಿ ಡಾ| ಸುಬ್ರಹ್ಮಣೇಶ್ವರ ರಾವ್, ಹೆಚ್ಚುವರಿ ಎಸ್ಪಿ ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಾಧಿಕಾರದ ನಿರ್ಧಾರ ಈ ತಿಂಗಳ ಅಂತ್ಯದೊಳಗೆ ಪ್ರಕಟಗೊಳ್ಳುವ ಸಂಭವ ಇದೆ ಎಂದು ಸಭೆಯ ಬಳಿಕ ಜಿಲ್ಲಾಧಿಕಾರಿಯವರು ಸುದ್ದಿಗಾರರಿಗೆ ತಿಳಿಸಿದರು.
ಕಲಾಪ ಸಕ್ರಮವಲ್ಲ : ನ್ಯಾಯವಾದಿ ಆಕ್ಷೇಪ
ನ್ಯಾಯವಾದಿಯೋರ್ವರು ಸಲ್ಲಿಸಿದ ಆಕ್ಷೇಪ ಸಾರಿಗೆ ಪ್ರಾಧಿಕಾರದ ಇಂದಿನ ಕಲಾಪವನ್ನು ಸಂದಿಗ್ಧತೆಯಲ್ಲಿ ಸಿಲುಕಿಸಿದೆ. ಪ್ರಾಧಿಕಾರದ ಸದಸ್ಯ, ಎಸ್ಪಿ ಡಾ| ಸುಬ್ರಹ್ಮಣೇಶ್ವರ ರಾವ್ ಅವರು ಕಲಾಪ ಆರಂಭಗೊಂಡ ಅರ್ಧತಾಸಿನ ಬಳಿಕ ಸಭೆಯಿಂದ ನಿರ್ಗಮಿಸಿದರು. ಹೆಚ್ಚುವರಿ ಎಸ್ಪಿ ಪ್ರಭಾಕರ್ ಅವರು ಉಪಸ್ಥಿತರಿದ್ದರು.
ಕಲಾಪ ಮುಂದುವರಿಯಿತು. ಖಾಸಗಿ ಬಸ್ ಮಾಲಕರ ಪರವಾಗಿ ವಾದ ಮಂಡಿಸಲು ಆಗಮಿಸಿದ ಬೆಂಗಳೂರಿನ ನ್ಯಾಯವಾದಿ ಬಿ.ಆರ್.ಎಸ್. ಗುಪ್ತಾ ಅವರು ಒಂದು ಹಂತದಲ್ಲಿ ಸಭೆಯ ಸಿಂಧುತ್ವದ ಬಗ್ಗೆ ಪ್ರಶ್ನೆ ಎತ್ತಿದರು. ಮೋಟಾರ್ ವಾಹನ ಕಾಯಿದೆ ಸೆಕ್ಷನ್ 68ರ ನಿಯಮ 53ರ ಪ್ರಕಾರ ಸಭೆಯ ಕಲಾಪದಲ್ಲಿ ಜಿಲ್ಲಾಧಿಕಾರಿ ಹಾಗೂ ಸದಸ್ಯ ಎಸ್ಪಿಯವರು ಉಪಸ್ಥಿರಲೇ ಬೇಕು. ಇವರ ಪೈಕಿ ಯಾರೊಬ್ಬರ ಅನುಪಸ್ಥಿತಿಯಲ್ಲಿ ಆಗುವ ಕಲಾಪ ಕರ್ನಾಟಕ ಮೋಟಾರ್ ಕಾಯ್ದೆಯ ನಿಯಗಳ ಪ್ರಕಾರ ಅಸಿಂಧುವಾಗುತ್ತದೆ ಮತ್ತು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಸಭೆಯ ಅಧ್ಯಕ್ಷರ ಗಮನ ಸೆಳೆದರು.