ಪ್ರಗತೀಪ್ರಿಯ
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 48 ಹಾಗೂ ಮೊಗ್ರು ಗ್ರಾಮದ ನಡುವೆ ಸಂಪರ್ಕ ಸಾಧಿಸುವ ನೇತ್ರಾವತಿ ನದಿ ದಾಟುವ ಮುಗೇರಡ್ಕ ತೂಗುಸೇತುವೆ ಕಾಮಗಾರಿಯು ಮಾರ್ಚ್‌ನಲ್ಲಿ ಪ್ರಾರಂಭಗೊಂಡು ಪ್ರಗತಿಯಲ್ಲಿದೆ.
ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೇ ಗುರುತಿಸಿಕೊಂಡು ಪ್ರಶಸ್ತಿ ಸಮ್ಮಾ¾ನಗಳಿಗೆ ಪಾತ್ರರಾದ ಗ್ರಾಮ ಭಾರತ ಸೇತು ನಿರ್ಮಾಣ ಪ್ರತಿಷ್ಠಾನದ ಅಧ್ಯಕ್ಷ , ತೂಗುಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಅವರ ತಾಂತ್ರಿಕ ತಜ್ಞತೆ ಹಾಗೂ ಮಾರ್ಗದರ್ಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಗೇರಡ್ಕ ತೂಗುಸೇತುವೆ ಕಾಮಗಾರಿಗೆ ಮೇ 4, 2011ರಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್ ಶಂಕುಸ್ಥಾಪನೆ ನೆರವೇರಿಸಿದ್ದರು.
ಮೊಗ್ರು ಗ್ರಾಮಸ್ಥರ ಹಲವಾರು ವರ್ಷಗಳ ಕನಸಾದ ತೂಗುಸೇತುವೆ ಕಾಮಗಾರಿಯು ಮೇ ಕೊನೆಯಲ್ಲಿ ಅಥವಾ ಜೂನ್ ತಿಂಗಳೊಳಗೆ ಪೂರ್ಣಗೊಂಡು ನಾಗರಿಕರಿಗೆ ಸಂಚಾರ ಭಾಗ್ಯ ದಕ್ಕಲಿದೆ ಎಂಬ ಭರವಸೆ ಇದೀಗ ಗ್ರಾಮಸ್ಥರಲ್ಲಿ ಮೂಡಿದೆ.

ತೂಗುಸೇತುವೆ ಸುಮಾರು 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಮುಗೇರಡ್ಕ ತೂಗುಸೇತುವೆಯು 190 ಮೀಟರ್ ಉದ್ದ ಹಾಗೂ 1.20 ಮೀಟರ್ ಅಗಲದಲ್ಲಿ ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಅತ್ಯಾಧುನಿಕ ತಾಂತ್ರಿಕತೆ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ನಿರ್ಮಾಣಗೊಳ್ಳುತ್ತಿದೆ. ಇದೀಗ ತೂಗುಸೇತುವೆಯ ಸೌಂದರ್ಯಕ್ಕೆ ಮೆರುಗು ನೀಡುವ ಎರಡು ಪ್ರಮುಖ ಪಿಲ್ಲರ್‌ಗಳು ತಲೆ ಎತ್ತಿ ಗ್ರಾಮಸ್ಥರನ್ನು ಆಕರ್ಷಿಸುತ್ತಿದ್ದು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.
ನೇತ್ರಾವತಿ ನದಿಯ ಪಿಜಕಲ - ಮುಗೇರಡ್ಕ ಎಂಬ ಎರಡು ದಡಗಳ ನಡುವೆ ನಡೆಯುತ್ತಿರುವ ತೂಗು ಸೇತುವೆ ಕಾಮಗಾರಿಯಲ್ಲಿ ಸುಮಾರು 20 ಮಂದಿ ಕಾರ್ಮಿಕರು ನದಿ ತೀರದಲ್ಲೇ ಮುಗೇರಡ್ಕ ದೆ„ವಸ್ಥಾನದ ಸನಿಹದಲ್ಲಿ ಬಿಡಾರ ಹೂಡಿ ದುಡಿಯುತ್ತಿದ್ದು ನಾಗರಿಕರ ಗಮನ ಸೆಳೆಯುತ್ತಿದ್ದಾರೆ.
ತೂಗುಸೇತುವೆ ಕನಸು ನನಸಾಗಲು ಶ್ಲಾಘನಾರ್ಹವಾಗಿ ಶ್ರಮಿಸಿದ ಪ್ರಮುಖರಲ್ಲೊಬ್ಬರಾದ ಆನಂದ ಗೌಡ ತೂಗುಸೇತುವೆ ಕಾರ್ಮಿಕರೊಂದಿಗೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.