Udayavani | Feb 20, 2011
ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯ ವೀಡಿಯೋ ದೃಶ್ಯ
ಮಂಗಳೂರು: ರಾಜ್ಯದಲ್ಲಿ 2008 ಸಪ್ಟೆಂಬರ್ 14 ಮತ್ತು 15ರಂದು ನಡೆದ ಚರ್ಚ್ ದಾಳಿ ಬಗೆಗಿನ ತನಿಖೆಗೆ ಸರಕಾರ ನೇಮಕ ಮಾಡಿದ ನ್ಯಾ| ಬಿ.ಕೆ. ಸೋಮಶೇಖರ ಆಯೋಗವು ಚರ್ಚ್ ದಾಳಿ ಯಾಕೆ ನಡೆಯಿತು ಮತ್ತು ಯಾರು ದಾಳಿ ನಡೆಸಿದರು ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ವಿಫಲವಾಗಿದೆ. ಯಾವ ಉದ್ದೇಶಕ್ಕಾಗಿ ಆಯೋಗ ರಚಿಸಲಾಗಿತ್ತೋ, ಆ ಉದ್ದೇಶ ಈಡೇರಿಲ್ಲ. ಆದುದರಿಂದ ಈ ಆಯೋಗದ ವರದಿಯನ್ನು ತಾವು ವಿರೋಧಿಸುತ್ತೇವೆ. ಸರಕಾರ ಕೂಡಾ ಇದನ್ನು ತಿರಸ್ಕರಿಸಬೇಕು ಎಂದು ಮಂಗಳೂರು ಕ್ಯಾಥೊಲಿಕ್ ಧರ್ಮ ಪ್ರಾಂತ್ಯದ ಬಿಷಪ್ ರೈ| ರೆ| ಡಾ| ಎಲೋಶಿಯಸ್ ಪಾವ್É ಡಿ'ಸೋಜಾ ಅವರು ಹೇಳಿದರು.
ಆಯೋಗದ ವರದಿಯನ್ನು ಸಾರ್ವಜನಿಕವಾಗಿ ವಿರೋಧಿಸಿ ತಿರಸ್ಕರಿಸುವ ಸಲುವಾಗಿ ರವಿವಾರ ಮಂಗಳೂರಿನಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ನೇತೃತ್ವದಲ್ಲಿ ವಿವಿಧ ಕ್ರೈಸ್ತ ಧರ್ಮ ಸಭೆಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮೌನ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.
ಚರ್ಚ್ ದಾಳಿ ಘಟನಾವಳಿ ಸಂದರ್ಭದಲ್ಲಿ ಪೊಲೀಸರು ಅತಿರೇಕವಾಗಿ ಮತ್ತು ನಿಯಮ ಬಾಹಿರವಾಗಿ ವರ್ತಿಸಿದ್ದಾರೆ ಎಂದು ಹೇಳುವ ಆಯೋಗ, ಪ್ರತಿಭಟನಕಾರರನ್ನು ಹತೋಟಿಯಲ್ಲಿಡಲು ಪೊಲೀಸರು ಈ ಕ್ರಮ ಜರಗಿಸಿದರು ಎಂದು ಪೊಲೀಸರನ್ನು ಪ್ರಶಂಸಿಸುವ ಮೂಲಕ ದ್ವಂದ್ವ ವರದಿ ನೀಡಿದೆ. ತಪ್ಪು ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸುವ ಬದಲು ಅನ್ಯಾಯಕ್ಕೆ ಒಳಗಾದ ಕ್ರೈಸ್ತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಈ ವರದಿಯಲ್ಲಾಗಿದೆ ಎಂದು ಅವರು ಹೇಳಿದರು.
ಮತಾಂತರದ ನೆಪದಲ್ಲಿ ಕ್ರೈಸ್ತ ಧಾರ್ಮಿಕ ಚಟುವಕೆಗಳನ್ನು ವಿಧಿ ಬದ್ಧತೆಗೆ ಒಳಪಡಿಸಬೇಕು ಎಂದು ಶಿಫಾರಸು ಮಾಡುವ ಮೂಲಕ ಸಂವಿಧಾನ ಬದ್ಧ ಧಾರ್ಮಿಕ ಸ್ವಾತಂತ್ರÂವನ್ನು ಮೊಟಕು ಗೊಳಿಸುವ ಮತ್ತು ಕಸಿಯುವ ಪ್ರಯತ್ನ ಈ ವರದಿಯಲ್ಲಿದೆ. ಆದ್ದರಿಂದ ಈ ವರದಿ ತಮಗೆ ಸ್ವೀಕಾರಾರ್ಹವಲ್ಲ ಎಂದವರು ಹೇಳಿದರು.
ಚರ್ಚ್ ದಾಳಿ ಯಾಕಾಗಿದೆ, ಯಾರಿಂದ ನಡೆಯಿತು ಎನ್ನುವುದರ ನಿಜಾಂಶ ತಮಗೆ ತಿಳಿಯಬೇಕಾಗಿದೆ. ಆದ್ದರಿಂದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಅಮಾಯಕ ಯುವಕರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂತೆಗೆದು ಕೊಳ್ಳಲಾಗುವುದು ಎಂದು ಗೃಹ ಸಚಿವ ಆರ್. ಅಶೋಕ್ ಭರವಸೆ ನೀಡಿರುವುದು ಸ್ವಾಗತಾರ್ಹ. ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಬಿಷಪ್ ಹೇಳಿದರು.
ಅಲ್ಪ ಸಂಖ್ಯಾಕರಾದ ನಮ್ಮನ್ನು ದಾಳಿಗಳ ಮೂಲಕ ಭೀತಿಗೆ ಒಳಪಡಿಸಬಹುದು ಹಾಗೂ ಸದೆ ಬಡಿಯಬಹುದು ಅಥವಾ ದ್ವಂದ್ವ ವರದಿಗಳ ಮುಖಾಂತರ ಧ್ವನಿಯನ್ನು ದಮನಿಸಬಹುದು ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು ಲೆಕ್ಕಾಚಾರ. ನಮ್ಮ ಶಕ್ತಿ ನಮ್ಮ ಸಂಖ್ಯೆಯಲ್ಲಿ ಅಲ್ಲ. ನಾವು ನಂಬಿಕೆ ಮತ್ತು ವಿಶ್ವಾಸ ಇಟ್ಟಿರುವ ಯೇಸು ಸ್ವಾಮಿಯೇ ನಮಗೆ ಶಕ್ತಿಯಾಗಿದ್ದಾರೆ. ಸತ್ಯ ಮಾರ್ಗವನ್ನು ಬೋಧಿಸಿದ, ದೀನ ದಲಿತರ, ಶೋಷಿತರ ಪರವಾಗಿ ನಿಂತ ಮತ್ತು ಅದಕ್ಕಾಗಿ ಸಾಯಲೂ ಹಿಂಜರಿಯದ ಯೇಸು ಸ್ವಾಮಿಯ ಅನುಯಾಯಿಗಳು ನಾವು. ಕಿಡಿಗೇಡಿಗಳು ನಮ್ಮ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಿರಬಹುದು, ಶಿಲುಬೆ ಪುಡಿಗೈದಿರಬಹುದು, ಪರಮ ಪ್ರಸಾದಕ್ಕೆ ಅವಮಾನ ಮಾಡಿರಬಹುದು. ಇದರಿಂದ ನಮ್ಮ ನಂಬಿಕೆ ಕುಗ್ಗಿ ಹೋಗದು. ನಮ್ಮ ವಿಶ್ವಾಸ ಕರಗದು. ದಾಳಿಗಳ ಮುಂಚೆ ಹೇಗೆ ಕ್ರೈಸ್ತರಾಗಿದ್ದೆವೋ ದಾಳಿಯ ನಂತರವೂ ನಾವು ಕ್ರೈಸ್ತರಾಗಿಯೇ ಇದ್ದೇವೆ. ದಾಳಿಗಳಿಂದ ನಾವು ನೊಂದಿದ್ದೆವು ಹೌದು; ಆದರೆ ಹೆದರಲಿಲ್ಲ. ವಿಶ್ವಾಸದಲ್ಲಿ ಈಗಲೂ ಅಚಲರಾಗಿದ್ದೇವೆ ಎಂದು ಬಿಷಪ್ ಎಲೋಶಿಯಸ್ ಪಾವ್É ಡಿ'ಸೋಜಾ ಹೇಳಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾನವ ಹಕ್ಕು ಕಾರ್ಯಕರ್ತೆ ಹಾಗೂ ಕಾರ್ಪೊರೇಟರ್ ಮರಿಯಮ್ಮ ತೋಮಸ್ ಮತ್ತು ಕರ್ನಾಟಕ ಮಿಷನ್ ನೆಟ್‌ವರ್ಕ್‌ನ ಅಧ್ಯಕ್ಷ ಬ್ರ| ವಾಲ್ಟರ್ ಜೆ. ಮಾಬೆನ್ ಮಾತನಾಡಿದರು.
ನ್ಯಾ| ಬಿ.ಕೆ. ಸೋಮಶೇಖರ್ ಅವರು ಆಯೋಗದ ಮಧ್ಯಂತರ ವರದಿಯಲ್ಲಿ ಚರ್ಚ್ ದಾಳಿಗೆ ಕಾರಣವಾದ ಸಂಘಟನೆಗಳನ್ನು ಗುರುತಿಸಿ ಹೆಸರಿಸಿದ್ದರು. ಆದರೆ ಅಂತಿಮ ವರದಿಯಲ್ಲಿ ಇದಕ್ಕೆ ತದ್ವಿರುದ್ಧವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಬಹುಶಃ ಸರಕಾರದ ಮತ್ತು ಇತರರ ಭಯದಿಂದಾಗಿ ಈ ರೀತಿ ಮಾಡಿರ ಬಹುದು ಎಂದು ಮರಿಯಮ್ಮ ತೋಮಸ್ ಅಭಿಪ್ರಾಯಪಟ್ಟರು.
ಮತಾಂತರದ ಬಗ್ಗೆ ಪ್ರಸ್ತಾವಿಸಿದ ಅವರು 'ನಾವು ಇನ್ನೂ ಮತಾಂತರ ಮಾಡುತ್ತೇವೆ. ಆದರೆ ಅದು ನ್ಯಾ| ಬಿ.ಕೆ. ಸೋಮಶೇàಖರ ಅವರು ಹೇಳಿದ ಮತಾಂತರ ಅಲ್ಲ. ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿಸುವ, ರೋಗಿಗಳನ್ನು° ಆರೋಗ್ಯವಂತರನ್ನಾಗಿಸುವ, ಬಡವರನ್ನು ಶ್ರೀಮಂತರನ್ನಾಗಿಸುವ ಹಾಗೂ ದುಖೀಧಿಃತರನ್ನು ಸಂತಸಭರಿತರನ್ನಾಗಿ ಪರಿವರ್ತಿಸುವ ಮತಾಂತರವದು' ಎಂದು ವಿವರಿಸಿದರು.
ಚರ್ಚ್ ದಾಳಿ ಸ್ವಯಂ ಪ್ರೇರಿತವಲ್ಲ; ಅದು ಪೂರ್ವ ಯೋಜಿತ ಎಂಬುದರಲ್ಲಿ ಸಂಶಯವಿಲ್ಲ. ಇದಕ್ಕೆ ಸರಕಾರವೇ ನೇರವಾಗಿ ಹೊಣೆ ಎಂದು ಬ್ರ| ವಾಲ್ಟರ್ ಜೆ. ಮಾಬೆನ್ ಹೇಳಿದರು.
ತೆಲುಗು ಭಾಷೆಯಲ್ಲಿ ಸುಮಾರು 30 ವರ್ಷಗಳ ಹಿಂದೆ ಪ್ರಕಟವಾದ ಸೂರ್ಯನಾರಾಯಣ ಪರವಸ್ತು ಎಂಬವರು ಬರೆದ 'ಸತ್ಯ ದರ್ಶಿನಿ' ಪುಸ್ತಕವೇ ದಾಳಿಗೆ ಮುಖ್ಯ ಕಾರಣ ಮತ್ತು ಅದನ್ನು ನ್ಯೂ ಲೈಫ್ ಸಭೆಯವರು ಜನರಿಗೆ ಹಂಚಿದ್ದಾರೆ ಎಂದು ಅಂದು ದಾಳಿ ನಡೆಸಿದವರು ಮತ್ತು ಸರಕಾರದ ಪ್ರಮುಖರು ಸಮರ್ಥಿಸಿದ್ದರು. ಆದರೆ ಆಯೋಗ 2 ವರ್ಷಗಳ ಕಾಲ ತನಿಖೆ ಮಾಡಿ ಅದರ ಒಂದು ಪ್ರತಿಯನ್ನು ತನಗೆ ಒದಗಿಸಲು ವಿಫಲವಾಗಿದೆ. ಅಂತೂ ಇಂತೂ ಕಷ್ಟ ಪಟ್ಟು ಆಯೋಗ ಪಡೆದು ಕೊಂಡದ್ದು ಒಂದೆರಡು ಪ್ರತಿ ಮಾತ್ರ. ಅದೂ ಕೂಡಾ ಜೆರಾಕ್ಸ್ ಪ್ರತಿ. ಸರಕಾರ ಕೊಟ್ಟ 11 ಕೋಟಿ ರೂ. ಖರ್ಚು ಮಾಡಿದ ಆಯೋಗಕ್ಕೆ ಈ ಪುಸ್ತಕದ ಪ್ರತಿಗಳನ್ನು ಪಡೆಯಲು ಸಾಧ್ಯವಾಗಿಲ್ಲವೇಕೆ? ಎಂದವರು ಪ್ರಶ್ನಿಸಿದರು.
ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ಬಿಷಪ್ ರೈ| ರೆ| ಜಾನ್ ಸದಾನಂದ, ಬೆಳ್ತಂಗಡಿಯ ಬಿಷಪ್ ರೈ| ರೆ| ಲಾರೆನ್ಸ್ ಮುಕ್ಕುಳಿ, ಪುತ್ತೂರಿನ ಬಿಷಪ್ ರೆ| ರೆ| ಡಾ| ಗಿವರ್ಗೀಸ್ ಮಾರ್ ದಿವಾನ್ನಸಿಯೋಸ್, ಸಿಎಸ್‌ಐ ನಿವೃತ್ತ ಬಿಷಪ್ ಸಿ.ಎಲ್, ಫುರ್ಟಾಡೊ, ಮಂಗಳೂರು ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ಮೊ| ಡೆನಿಸ್ ಪ್ರಭು, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ನಾಯಕ ಐವನ್ ಡಿ'ಸೋಜಾ, ಜೆಡಿಎಸ್ ನಾಯಕ ಜೆ.ಎಸ್. ನೊರೊನ್ಹಾ ಮುಂತಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮನವಿ ಪತ್ರವನ್ನು ಮಂಗಳೂರು ಧರ್ಮ ಪ್ರಾಂತ್ಯದ ಸಿಒಡಿಪಿ ಸಂಸ್ಥೆಯ ನಿರ್ದೇಶಕ ಫಾ| ಒನಿಲ್ ಡಿ'ಸೋಜಾ ವಾಚಿಸಿದರು. ಬಳಿಕ ಅದನ್ನು ಪೊಲೀಸ್ ಉಪ ಅಯುಕ್ತ ಆರ್. ರಮೇಶ್ ಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಎಲ್.ಜೆ. ಫೆರ್ನಾಂಡಿಸ್, ಟೈಟಸ್ ನೊರೋನ್ಹಾ, ಜಾರ್ಜ್ ಕ್ಯಾಸ್ಟಲಿನೊ ಮತ್ತು ವಲೇರಿಯನ್ ಮೊರಾಸ್ ಕಾರ್ಯಕ್ರಮ ನಿರ್ವಹಿಸಿದರು.
ಹಕ್ಕೊತ್ತಾಯ ಬೇಡಿಕೆಗಳು:

* ಅಮಾಯಕರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಗೃಹ ಸಚಿವರು ನೀಡಿರುವ ಭರವಸೆ ಶೀಘ್ರ ಈಡೇರಿಸಬೇಕು.
* ಚರ್ಚ್ ದಾಳಿಯ ತನಿಖೆಯನ್ನು ಕೂಡಲೇ ಸಿಬಿಐಗೆ ಒಪ್ಪಿಸಿ ದಾಳಿಗೆ ಕಾರಣಗಳೇನು ಎನ್ನುವುದನ್ನು ಬಹಿರಂಗ ಪಡಿಸಬೇಕು.
* ದಾಳಿಗೆ ಕಾರಣರಾದವರನ್ನು ತತ್‌ಕ್ಷಣ ಗುರುತಿಸಿ ಅವರ ಮೇಲೆ ಕಾನೂನಿನ್ವಯ ಸೂಕ್ತ ಕ್ರಮ ಜರಗಿಸಬೇಕು.
* ದಾಳಿಯ ಸಂದರ್ಭದಲ್ಲಿ ಕಷ್ಟ - ನಷ್ಟಕ್ಕೊಳಗಾದ ವ್ಯಕ್ತಿ/ ಸಂಘ/ ಸಂಸ್ಥೆಗಳಿಗೆ ಸೂಕ್ತ ಹಾಗೂ ನ್ಯಾಯಯುತ ಪರಿಹಾರ ನೀಡಬೇಕು.
* ಅಲ್ಪ ಸಂಖ್ಯಾಕರು ಭವಿಷ್ಯದಲ್ಲಿ ನಿರ್ಭೀತಿಯಿಂದ ಜೀವಿಸುವ ವಾತಾವರಣ ಸೃಷ್ಟಿಸಿ ಅವರ ಸಾಂವಿಧಾನಿಕ ಹಕ್ಕುಗಳು ಉಲ್ಲಂಘನೆಯಾಗದಂತೆ ಸರಕಾರ ನೋಡಿಕೊಳ್ಳಬೇಕು.
* ಯಾವುದೇ ಪರಿಸ್ಥಿತಿ ನಿಭಾಯಿಸಲು ಪ್ರಸ್ತುತ ಇರುವ ಕಾನೂನುಗಳು ಯೋಗ್ಯವಾಗಿರುವುದರಿಂದ ಹೆಚ್ಚುವರಿ ಕಾನೂನುಗಳನ್ನು ಜಾರಿ ಮಾಡಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಪ್ರಯತ್ನ ಮಾಡದಿರುವುದು.
ಬೃಹತ್ ಮೌನ ಮೆರವಣಿಗೆ
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಂದ ಆಗಮಿಸಿದ ಕ್ರೈಸ್ತರು ಜ್ಯೋತಿ ವೃತ್ತದಲ್ಲಿ ಸೇರಿ
ಅಲ್ಲಿಂದ ಮೌನ ಮೆರವಣಿಗೆಯಲ್ಲಿ ಸಾಗಿ ನೆಹರು ಮೈದಾನ ಸೇರಿದರು.
ಬಿಷಪ್ ಎಲೋಶಿಯಸ್ ಪಾವ್É ಡಿ'ಸೋಜಾ ಮತ್ತು ಇತರ ಬಿಷಪರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು. ಧರ್ಮ ಗುರುಗಳು, ಧರ್ಮ ಭಗಿನಿಯರು ಮತ್ತು ಅಸಂಖ್ಯ ಕೈÅಸ್ತ ಬಾಂಧವರು ಭಾಗವಹಿಸಿದ್ದರು. ಪ್ರತಿಭಟನೆಯ ಸಂಕೇತವಾಗಿ ಕೈಯಲ್ಲಿ ಕಪ್ಪು ಧ್ವಜ ಮತ್ತು ಬಾಯಿಗೆ ಕಪ್ಪು ಬಟ್ಟೆ ಕಟ್ಟಿದ್ದರು.
ನೆಹರು ಮೈದಾನಿನಲ್ಲಿ ಮಾತ್ರ ಘೋಷಣೆಗಳು ಕೇಳಿ ಬಂದವು.
'ಪರಲೋಕದಲ್ಲಿರುವ ನಮ್ಮ ತಂದೆಯೇ...' ಎಂಬ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವನ್ನು ಬಿಷಪ್ ಎಲೋಶಿಯಸ್ ಪಾವ್É ಡಿ'ಸೋಜಾ ಪ್ರಾರಂಭಿಸಿದರು.
ನಿಗದಿತ 3 ಗಂಟೆಗೆ ಮೆರವಣಿಗೆ ಹಾಗೂ 4.15 ಕ್ಕೆ ಪ್ರತಿಭಟನಾ ಸಭೆ ಆರಂಭಗೊಂಡಿತ್ತು. 5.15 ರ ವೇಳೆಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.
45ಕ್ಕೂ ಮಿಕ್ಕಿದ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಪ್ರವಾಹೋಪಾದಿಯಲ್ಲಿ ಹರಿದು ಬಂದ ಕ್ರೈಸ್ತ ಜನರಿಗೆ ನೆಹರು ಮೈದಾನಿನಲ್ಲಿ ಕೆಳಗಿನ ಫುಟ್ಬಾಲ್ ಗ್ರೌಂಡ್‌ನಲ್ಲಿ ಸ್ಥಳಾವಕಾಶ ಸಾಕಾಗದೆ ಮೇಲಿನ ಗ್ರೌಂಡ್‌ಗೆ ಕಳುಹಿಸಲಾಯಿತು.
ಮೆರವಣಿಗೆ ಪ್ರಾರಂಭವಾಗುವ ಸಂದರ್ಭದಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು.