ಟಿ. ಆರ್. ಭಟ್ | Mar 08, 2011
ಮಂಗಳೂರು ಮತ್ತು ಉಡುಪಿಗಳಿಂದ ಬೆಂಗಳೂರು ಮತ್ತು ಮುಂಬಯಿಗೆ ಹೆಚ್ಚು ರೈಲುಗಳನ್ನು ಓಡಿಸುವುದರ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ರೈಲು ಯಾತ್ರಿಗಳ ಸಂಘಗಳು, ವಾಣಿಜ್ಯ ಸಂಘ ಗಳು ಮತ್ತು ಜನಪ್ರತಿನಿಧಿಗಳು ಇಲ್ಲಿಯ ಜನರ ಆಶೋತ್ತರಗಳನ್ನು ಮಂಡಿಸುತ್ತಲೇ ಇದ್ದಾರೆ. ಆಗೊಮ್ಮೆ, ಈಗೊಮ್ಮೆ ಆಶ್ವಾಸನೆ ಸಿಕ್ಕಿದೆ ಎಂಬ ಸುದ್ದಿಯಷ್ಟೇ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಜನತೆಯ ದೃಷ್ಟಿ ಹರಿಯುವಂತೆ ಮಾಡಬೇಕಾಗುತ್ತದೆ.
1. ಮಂಗಳೂರಿನಲ್ಲಿ ಈಗ ಊರ್ಜಿತವಾಗಿರುವ ರೈಲುಗಳ ವೇಳಾ ಪಟ್ಟಿಯನ್ನು ನೋಡಿದರೆ ಹಲವು ವಿಪರ್ಯಾಸಗಳು ಎದ್ದು ಕಾಣುತ್ತವೆ. ಒಂದು, ಮಂಗಳೂರಿನಂತಹ ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರದಿಂದ ರಾಜ್ಯ ರಾಜಧಾನಿಗೆ ಇಲ್ಲಿಂದಲೇ ಹೊರಡುವ ರೈಲು ಒಂದೇ ಒಂದು, ಅದೂ ವಾರದಲ್ಲಿ ಮೂರು ದಿನ ಅರಸೀಕೆರೆ ಮಾರ್ಗವಾಗಿ ಓಡುವ ಯಶವಂತಪುರ ಎಕ್ಸ್‌ಪ್ರೆಸ್ ಮಾತ್ರ. ದಿನಾ ಓಡುವ ರೈಲು ಮೈಸೂರಿಗಾಗಿ ಹೋಗುವ ಕಣ್ಣೂರು- ಯಶವಂತಪುರ ಎಕ್ಸ್‌ಪ್ರೆಸ್. ಇದಕ್ಕೆ ಹೋಲಿಸಿದರೆ ಮಂಗಳೂರಿನಿಂದ ಕೇರಳದ ರಾಜಧಾನಿ ತಿರುವನಂತಪುರಕ್ಕೆ ಇಲ್ಲಿಂದಲೇ ಹೊರಡುವ ಐದು ಎಕ್ಸ್ ಪ್ರಸ್ ರೈಲುಗಳಿವೆ. ಇವಲ್ಲದೆ ಕೇರಳದ ಇತರೆಡೆಗೆ ಇನ್ನೆರಡು ಗಾಡಿಗಳು ಇವೆ.
2. ಇಲ್ಲಿಂದ ತ.ನಾಡಿನ ರಾಜಧಾನಿ ಚೆನ್ನೈಗೆ 4 ರೈಲುಗಳಿವೆ. ಅವೂ ಅಲ್ಲದೆ, ತಿರುಚಿರಾಪಳ್ಳಿ, ಪುದು ಚೇರಿ,
ಕೊಯಮತ್ತೂರಿಗೆ ತಲಾ ಒಂದೊಂದು ರೈಲುಗಳಿವೆ. ಇವುಗಳಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಅಂದರೆ ಈ ಎÇÉಾ ರೈಲುಗಳೂ ಕೇರಳದ ಉತ್ತರ ಭಾಗದಲ್ಲಿ ಹಾದು ಹೋಗುತ್ತವೆ. ನಮ್ಮ ನೆರೆ ರಾಜ್ಯಗಳ ರಾಜಧಾನಿಗಳಿಗೆ ಹಾಗೂ ಸಣ್ಣ ಸಣ್ಣ ನಗರಗಳಿಗೆ ಮಂಗಳೂರಿನಿಂದ ದಿನಾ ಹಲವಾರು ರೈಲು ಗಳು ಓಡಾಡಬಹುದಾದರೆ ನಮ್ಮ ರಾಜಧಾನಿ, ಪ್ರಮುಖ ನಗರಗಳಿಗೆ ಮಂಗಳೂರಿನಿಂದ ಏಕಿಲ್ಲ?
3. ದೇಶದ ರಾಜಧಾನಿ ದಿಲ್ಲಿಗೆ ಮಂಗಳೂರಿನಿಂದಲೇ ಹೊರಡುವ ಯಾವುದೇ ರೈಲು ಇಲ್ಲ. ಇರುವ ಹೆಚ್ಚಿನ ರೈಲುಗಳು ಕೇರಳದಿಂದ ಅಪರಾತ್ರಿಯಲ್ಲಿ ಬರುವಾಗ ಜಾಗ ಸಿಕ್ಕಿದರೆ ಹತ್ತಿಕೊಳ್ಳಬೇಕು. ಬಹಳ ವರ್ಷ ಹಿಂದೆ ಟಿ. ಎ. ಪೈಯವರು ರೈಲು ಮಂತ್ರಿಯಾಗಿ¨ªಾಗ ಇಲ್ಲಿಂದಲೇ ಹೊರಡುವ ಜಯಂತಿ ಜನತಾ ಎಕ್ಸ್‌ಪ್ರೆಸ್ ಎಲ್ಲರಿಗೂ ಅನುಕೂಲವಾಗುತ್ತಿತ್ತು. ಮಂಗಳೂರಿನಿಂದಲೇ ಕೆಲವು ರೈಲುಗಳಾದರೂ ಯಾಕೆ ಹೊರಡಬಾರದು?
4. ಮುಂಬಯಿಗೆ ಈಗ ಇರುವುದು ಮತ್ಸ್ಯಗಂಧ ಎಕ್ಸ್‌ಪ್ರೆಸ್ ಒಂದು. ಇತ್ತೀಚೆಗಷ್ಟೇ ಕಾರವಾರ ತನಕ ಬರುತ್ತಿದ್ದ ರೈಲನ್ನು ಇಲ್ಲಿಗೆ ವಿಸ್ತರಿಸಿದರೂ ಅದು ವಾರಕ್ಕೆ ಮೂರು ದಿನ ಮತ್ತು ಮಂಗಳೂರು ಜಂಕ್ಷನ್‌ನಿಂದ ಹೊರಡುವ ಕಾರಣ ಯಾತ್ರಿಕರಿಗೆ ಅನನುಕೂಲವೇ.
5. ಇಲ್ಲಿಂದ ಬಹಳ ಮಂದಿ ದೂರದ ಹೈದರಾಬಾದಿಗೆ ಪ್ರಯಾಣಿಸುತ್ತಾರೆ. ಚೆನ್ನೈಗೆ ಹೋಗುತ್ತಾರೆ. ಹಾಸನ ರೈಲು ಮಾರ್ಗವಾಗುವಾಗ ಕೇಳಿದ ನೆನಪಿದೆ: ಇದೇ ಮಾರ್ಗವಾಗಿ ಈ ನಗರಗಳಿಗೆ ನೇರ ಸಂಪರ್ಕ ಕಲ್ಪಿಸಬಹುದು ಎಂದು. ಅದು ಸತ್ಯವೇ. ಇನ್ನು ಈಗಲೇ ಹೇಳಿದಂತೆ ರೈಲು ಮಾರ್ಗವಿರುವ ಕಾರವಾರ, ಕೊಲ್ಲೂರು, ಉಡುಪಿ, ಸುಬ್ರಹ್ಮಣ್ಯ, ಹಾಸನ ಮತ್ತು ಮೈಸೂರು ಮುಂತಾದ ಕಡೆಗೆ ಹೋಗಲು ಮಂಗಳೂರಿನಿಂದ ಎಲ್ಲಿವೆ ರೈಲುಗಳು? ಮಂಗಳೂರಿನಿಂದ ಕೇರಳದ ಪ್ರತಿಯೊಂದು ನಗರದಲ್ಲೂ ಮೇಲೆ ಹೇಳಿದ ರೈಲುಗಳು ಹೋಗುವ ಕಾರಣ ಅವರಿಗೆಲ್ಲ ಸಮಸ್ಯೆಯೇ ಇಲ್ಲ.
ಇನ್ನೊಂದು ಮಹತ್ವದ ವಿಷಯ; ಮಂಗಳೂರು -ಹಾಸನ ಮತ್ತು ಕೊಂಕಣ ರೈಲ್ವೇ ಮಾರ್ಗಗಳನ್ನು ರಚಿಸುವಾಗ ಈ ಪ್ರದೇಶದ ಉಪಯೋಗವನ್ನೇ ಮನಗಂಡು ಭೂಮಿಯನ್ನು ಸ್ವಾಧೀನಪಡಿಸಿಕೊಂಡುದು. ಭೂಮಾಲಿಕರೂ ಸಾರ್ವಜನಿಕ ಹಿತದೃಷ್ಟಿಯಿಂದ ಭೂಮಿಯನ್ನು ತ್ಯಾಗ ಮಾಡಿದ್ದರೆಂಬುದನ್ನು ಮರೆಯಲಾಗದು. ಆದರೆ ಮಾರ್ಗ ಮುಗಿದು ರೈಲು ಸಂಚಾರ ಆರಂಭಿಸಿದಾಗ ಭೂಸ್ವಾಧೀನದ ಉದ್ದೇಶ ಮತ್ತು ಜನರ ತ್ಯಾಗ ಎರಡೂ, ಅಧಿಕಾರಿಗಳಿಗಾಗಲೀ ಜನಪ್ರತಿನಿಧಿಗಳಿಗಾಗಲೀ ನೆನಪಿಲ್ಲ. ಜನರಿಗೆ ವಿಶೇಷ ಪ್ರಯೋಜನವಾಗದ ಅಭಿವೃದ್ಧಿಯ ಮಾದರಿಯಂತಾಗಿವೆ ಈ ರೈಲ್ವೇಗಳು.
ಈ ಅವಸ್ಥೆಗೆ ಯಾರು ಹೊಣೆ ಎಂಬ ಪ್ರಶ್ನೆ ಏಳುತ್ತದೆ? ಈ ನಿಟ್ಟಿನಲ್ಲಿ ಇಲ್ಲಿಯ ಜನಪ್ರತಿನಿಧಿಗಳ ಜವಾಬ್ದಾರಿ ಅತ್ಯಂತ ಗುರುತರ ಎಂಬುದು ನಿರ್ವಿವಾದ. ಅವರು ಸಂಬಂಧಪಟ್ಟ ವಿಷಯವನ್ನು ಸಂಸತ್ತಿ ನಲ್ಲಿ, ರೈಲ್ವೇ ಸಚಿವರಲ್ಲಿ ಮತ್ತು ಅಧಿಕಾರಿಗಳಲ್ಲಿ ಹಠಬಿಡದ ತ್ರಿವಿಕ್ರಮನಂತೆ ಚರ್ಚಿಸಿದಾಗ ಮಾತ್ರ ನಮ್ಮ ಬೇಡಿಕೆಯನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಹೋದ ವರ್ಷದ ಆರಂಭದಲ್ಲಿ ಇ. ಅಹಮದ್ ರೈಲ್ವೇ ರಾಜ್ಯ ಸಚಿವರಾಗಿದ್ದು ಮಂಗಳೂರಿಗೆ ಅಧಿಕೃತ ಭೇಟಿ ನೀಡಿದ್ದರು. ಇಲ್ಲಿಯ ಬೇಡಿಕೆಗಳನ್ನು ಒಳಗೊಂಡ ಮನವಿಯೊಂದನ್ನು ಅವರಿಗೆ ಸಲ್ಲಿಸಲು ಸಾರ್ವಜನಿಕರ ತಂಡ ಹೋದಾಗ ತಂಡದ ಪ್ರತಿನಿಧಿಗಳಲ್ಲಿ ಅವರು ಮಾತನಾಡುವ ಸೌಜನ್ಯವನ್ನೂ ತೋರಲಿಲ್ಲ. ಆ ವರ್ತನೆಯೇ ಅವರ ಇಲ್ಲಿಯ ಜನರ ಕುರಿತು ಇದ್ದ ಕಾಳಜಿಯ ಬಗ್ಗೆ ಒಂದು ಕನ್ನಡಿ. ಹಾಗೆಂದು ಅವರನ್ನು ದೂರಲಾಗದು. ನಮ್ಮ ಸಭ್ಯತೆಯನ್ನು ದುರುಪಯೋಗಪಡಿಸಲು ನಾವೇ ಎಡೆ ಕೊಡುತ್ತೇವೆ ಎಂದು ನನಗನ್ನಿಸುತ್ತದೆ.
ಇನ್ನಾದರೂ ಪ್ರತಿನಿಧಿಗಳು ಎಚ್ಚೆತ್ತು ಬರೇ ಆಶ್ವಾಸನೆಗಳಿಂದ ಕಾಲಹರಣ ಮಾಡುವ ಬದಲು ಕೇಂದ್ರ ರೈಲ್ವೇ ಸಚಿವರ ಮೇಲೂ ಸಚಿವಾಲಯದ ಅಧಿಕಾರಿಗಳ ಮೇಲೂ ಒತ್ತಡ ಹಾಕಿದರೆ ಮಾತ್ರ ಈ ಊರಿನ ಜನರ ಕನಸುಗಳು ನನಸಾಗಬಹುದು.
ಪ್ರತಿಕ್ರಿಯಿಸಿ: feedback@manipalmedia.com