ಕನಕ ಹಾ.ಮ. | Mar 12, 2011
ಕೇರಳ ಸರ್ಕಾರದ ಪಶು ಸಂಗೋಪನಾ ಇಲಾಖೆಯವರು ಕಳೆದ ವರ್ಷ ಒಂದು ವಾರದ ಪಶು ಪ್ರದರ್ಶನ ಏರ್ಪಡಿಸಿದ್ದರು. ಅದರಲ್ಲಿ ಭಾಗವಹಿಸಲು ಕರ್ನಾಟಕದ ರಾಮಚಂದ್ರಾಪುರ ಮಠದ ಹಸುಗಳೂ ಬರಲಿವೆ ಎಂದು ಎಲ್ಲಾ ಕಡೆ ಜಾಹೀರಾತು ಕಂಡು ಬಂದಿತು. ತಿರುವನಂತಪುರದ ಮುಖ್ಯ ಸರ್ಕಲ್ಲುಗಳಲ್ಲಿ, ಮ್ಯೂಸಿಯಮ್ ಬಳಿಯ ಪೋಸ್ಟರುಗಳಲ್ಲಿ, ನಿಯಮಸಭೆಯ ಅಗಲು ಬಗಲಲ್ಲಿ, ಪತ್ರಿಕೆಗಳಲ್ಲಿ ಎಲ್ಲಾ ಜಾಹೀರಾತು, ಸುದ್ದಿ ಕಂಡು ನಾನು ನಮ್ಮ ಊರಿನಿಂದ ಬರುವ ಹಸುಗಳನ್ನು ಕಾಣಲು ಉತ್ಸುಕಳಾಗಿದ್ದೆ. ಆದರೆ ಕಡೆಗೆ ಬಂದಿದ್ದು ಎರಡೊ, ಮೂರೋ ಹಸುಗಳು ಮಾತ್ರಾ ಆಗಿದ್ದು, ಆಡು, ಕೋಳಿ, ಮೊಲಗಳೂ ಸರಿಯಾದ ಉಸ್ತುವಾರಿ ಇಲ್ಲದೇ ಯದ್ವಾತದ್ವಾ ಪ್ರದರ್ಶನ ಸ್ಥಳಗಳಲ್ಲಿ ಓಡುತ್ತಿದ್ದು ಜನರ ಕಟು ವಿಮರ್ಶೆಗೆ ಆ ಪ್ರದರ್ಶನ ಕಾರಣವಾಯಿತು.
ನಾನು ಬರೆಯಹೊರಟಿರುವುದು ಅಲ್ಲಿನ ಅವ್ಯವಸ್ಥೆಯ ಬಗ್ಗೆ ಅಲ್ಲ. ನನಗೆ ಆ ಪ್ರದರ್ಶನಕ್ಕೆ ಕಡೆಗೆ ಹೋಗಲೂ ಆಗಿರಲಿಲ್ಲ. ಹಾಗಾಗಿ ಅದರ ಬಗ್ಗೆ ನಾನು ಅವರಿವರಿಂದ ಕೇಳಿದ್ದು ಮತ್ತು ಪತ್ರಿಕೆಗಳಲ್ಲಿ ಓದಿದ್ದು ಮಾತ್ರ. ಈ ಪ್ರದರ್ಶನ ಭಾಗವಾಗಿ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು ಉದ್ಘಾಟನಾ ಸಮಾರಂಭವನ್ನು ನೋಡುವ ಅವಕಾಶ ಸಿಕ್ಕಿತು. ಅವತ್ತು ಒರಿಸ್ಸಾದಿಂದ ಇದಕ್ಕೆಂದೇ ಕರೆಸಲಾಗಿದ್ದ ಒಡಿಸ್ಸಿ ನೃತ್ಯದ ತಂಡ ಮೂರೋ, ನಾಕೋ ಬ್ಯಾಲೆಗಳನ್ನು ಪ್ರಸ್ತುತಪಡಿಸಿತು. ಮತ್ತು ಎಲ್ಲಾ ಐಟಮ್‌ಗಳೂ ಹಸುವಿಗೆ ಸಂಬಂಧಪಟ್ಟವುಗಳಾಗಿದ್ದವು. ಕೃಷ್ಣನ ಬಾಲ್ಯದ ಕಥೆ ಒಂದಾಗಿದ್ದರೆ, ವಶಿಷ್ಟರಿಂದ ಕೌಶಿಕ ರಾಜನು ಕಾಮಧೇನುವನ್ನು ಕಸಿಯುವ ಕಥೆ ಇನ್ನೊಂದು.
ಕಾಮಧೇನುವಿನ ಕಥೆ ಸಮುದ್ರ ಮಥನದಿಂದ ತೊಡಗಿ, ಕಟ್ಟಕಡೆಗೆ ಕೌಶಿಕನಿಂದ ತನ್ನನ್ನು ತಾನೇ ಸಂರಕ್ಷಿಸಿಕೊಳ್ಳುವವರೆಗೂ ನೃತ್ಯವಿತ್ತು. ಮೊದಲಿಗೆ ಕಾಮಧೇನುವಿನ ನೋವು, ಅಗಲಿಕೆಯ ಪರಿತಾಪ, ಕೊನೆಗದರ ರೋಷ ಹೆಜ್ಜೆ ಹೆಜ್ಜೆಯಾಗಿ ಗ್ರಾಫ್ ಮೇಲೇರಿ ನೋಡುತ್ತಿರುವವರೆಲ್ಲಾ ಭಾಷೆ ಅರ್ಥವಾಗದಿದ್ದರೂ ಮೌನವಾಗಿ, ಕಡು ಏಕಾಗ್ರತೆಯಿಂದ ನೃತ್ಯವನ್ನು ನೋಡುತ್ತಿದ್ದರು.
ಕನಕಕುನ್ನು ಅರಮನೆ ಪ್ರದೇಶದಲ್ಲಿರುವ ನಿಶಾಗಂಧಿ ಅÂಂಫಿ ಬಯಲು ರಂಗಮಂದಿರದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಪ್ರೇಕ್ಷಕರಾಗಿ ಬಂದಿದ್ದರು. ಸಂಜೆ ಆರಂಭವಾಗಿದ್ದ ಕಾರ್ಯಕ್ರಮ ಎಂದಿನಂತೆ ನಿಧಾನಕ್ಕೆ ರಾತ್ರಿಯಲ್ಲಿ ಜಾರಿಕೊಂಡಿದ್ದು ತಿಳಿಯಲಿಲ್ಲ. ಆದರೆ ಕಾರ್ಯಕ್ರಮ ಪ್ರಾರಂಭವಾಗಿ ಮುಗಿಯುವವರೆಗೂ ಎಲ್ಲಾ ಸ್ತರದ ಪ್ರೇಕ್ಷಕರೂ ಯಾವುದೇ ಅನಪೇಕ್ಷಿತ ರೀತಿಯಲ್ಲಿ ವರ್ತಿಸದೇ ಮೌನವಾಗಿ ನೃತ್ಯ ಪ್ರದರ್ಶನವನ್ನು ನೋಡುತ್ತಿದ್ದರು ಎನ್ನಬಹುದು. ತಮಗೆ ಇಷ್ಟವಾಗದಿದ್ದಲ್ಲಿ, ಅಥವಾ ಬೇರೆ ಇನ್ನಾ$Âವುದಾದರೂ ಕಾರಣಕ್ಕೆ ಅವರು ಎದ್ದು ಹೋಗುವುದಿದ್ದರೆ ಸದ್ದು ಮಾಡದೇ, ನಮಗೆ ಹೋದದ್ದೂ ಗೊತ್ತಾಗದಂತೆ ಸರಿದು ಹೋಗುತ್ತಿದ್ದರು. ಇದೇ ರೀತಿಯ ಶಿಸ್ತನ್ನು ನಾನು ಇಲ್ಲಿನ ಫಿಲ್ಮ್ ಫೆಸ್ಟಿವಲ್ ಸಮಯದಲ್ಲೂ ನೋಡಿದ್ದೇನೆ. ಹಾಗೆ ಮಧ್ಯದಲ್ಲಿ ಹೋಗುವವರೇ ಕಡಿಮೆ. ಸಾವಿರಾರು ಜನರು ಕುಳಿತುಕೊಳ್ಳಲು ಸ್ಥಳವಿರುವ ಇಲ್ಲಿ ಅವರು ಮಾತ್ರ ಅಲ್ಲದೇ ಸ್ಥಳ ಇಲ್ಲದೇ ನಿಂತು ನೋಡುವ ಪ್ರೇಕ್ಷಕರೂ ಇರುತ್ತಾರೆ. ಇದು ನಾನು ಇಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ಕಂಡಿದ್ದು.
ಹಾಗೇ ಅವರು ಕೊನೆಯಲ್ಲಿ ಪ್ರಸ್ತುತ ಪಡಿಸಿದ್ದು ನಮ್ಮ ಕರ್ನಾಟಕದಲ್ಲಿ ಬಹು ಪ್ರಚಲಿತ ವಿರುವ ಕಥೆ. ನೃತ್ಯ ಪ್ರಾರಂಭವಾದಂತೆ ಬೇಗನೆ ಕಥೆ ಬಿಚ್ಚಿಕೊಂಡಿತು. ನನಗೆ ಆಶ್ಚರ್ಯ ಖುಷಿ, ಯಾಕೆಂದರೆ ಅದು ನಮ್ಮ ಪುಣ್ಯಕೋಟಿಯ ಕಥೆ! ಆದರೆ ಒರಿಯಾದಲ್ಲಿ. ಕೊನೆಗೆ ಮಾತ್ರ ಹುಲಿ ಸಾವನಪ್ಪುವುದಿಲ್ಲ. ಬದಲಿಗೆ ಅದು ಒಬ್ಬ ಯಕ್ಷನಾಗಿ ಪರಿವರ್ತಿತನಾಗುತ್ತದೆ. ಪುಣ್ಯಕೋಟಿಯ ಸತ್ಯ ಪರೀಕ್ಷೆ ಮಾಡಲು ದೇವಲೋಕದಿಂದ ಬಂದ ಒಂದು ಯಕ್ಷ!
ಅದುವರೆಗೆ ಪುಣ್ಯಕೋಟಿಯ ಕಥೆ ನಮ್ಮ ಕರ್ನಾಟಕದಲ್ಲಿ ಮಾತ್ರ ಇರುವುದೆಂದುಕೊಂಡಿದ್ದ ನಾನು ಇಲ್ಲಿ ಕೇರಳದಲ್ಲಿ ಒರಿಯಾ ಭಾಷೆಯ ಒಂದು ಬ್ಯಾಲೆಯಲ್ಲಿ ಅದೇ ಕಥೆಯನ್ನು ಕಂಡು ಚಕಿತಳಾದೆ. ನನ್ನ ಪಕ್ಕದಲ್ಲೇ ಕೇರಳ ಹಾಲು ಫೆಡರೇಶನ್ನಿನ (ಮಿಲ್ಮ) ಎಂ. ಡಿ. ಮತ್ತವರ ಪತ್ನಿ ಕುಳಿತು ಬಹಳ ಉತ್ಸಾಹದಿಂದ ನೃತ್ಯವನ್ನು ಆಸ್ವಾದಿಸುತ್ತಿದ್ದರು. ಅವರು ಕಾರ್ಯಕ್ರಮದ ಮೊದಲಿಗೇ ತಮ್ಮನ್ನು ಪರಿಚಯಿಸಿಕೊಂಡು, ಇಂದು ಒಡಿಸ್ಸಿ ನೃತ್ಯ ಇರುವುದೆಂದೂ, ತಾನು ಒರಿಸ್ಸಾದವನಾದ್ದರಿಂದ ಬಹಳ ಉತ್ಸಾಹದಲ್ಲಿ ಇರುವೆನೆಂದು ಹೇಳಿಕೊಂಡಿದ್ದರು. ಹಾಗಾಗಿ ನೃತ್ಯವನ್ನು ನೋಡುವಾಗ ಕುತೂಹಲವನ್ನು ತಡೆದುಕೊಳ್ಳಲಾಗದೇ ನನ್ನ ಪ್ರಶ್ನೆಗಳನ್ನು ಅವರಲ್ಲಿ ಕೇಳಿದೆ. ""ಇದು ಮೂಲತಃ ಒರಿತಿ ಕಥೆಯೋ ಅಥವಾ ಬೇರೆ ಯಾವುದಾದರೂ ಮೂಲದಿಂದ ಎತ್ತಿಕೊಂಡಿಧ್ದೋ?' ಅದಕ್ಕವರು ""ಇದು ನಮ್ಮ ಕಡೆ ಜನರು ಬಲು ಸಾಮಾನ್ಯವಾಗಿ ಹೇಳುವ ಕಥೆ' ಎಂದರು. ""ಆದರೆ ಮೂಲತಃ ಅಲ್ಲಿ ಇದು ಪದ್ಯದ ರೂಪದಲ್ಲಿ ಇಲ್ಲ. ಈ ನೃತ್ಯಕ್ಕಾಗಿ ಇವರು ಇದನ್ನು ಹಾಡಾಗಿಸಿದ್ದಾರೆ. ಇದು ಎಲ್ಲಾ ಶಾಲಾ ಪುಸ್ತಕಗಳಲ್ಲಿಯೂ, ಹಿರಿಯರು ಹೇಳುವ ನೀತಿ ಕಥೆಗಳಲ್ಲಿಯೂ ಇರುವ ಚಿಕ್ಕಂದಿನಲ್ಲೇ ಮಕ್ಕಳು ಕೇಳಿರುವ ಕಥೆ' ಎಂದರು. ಅಲ್ಲಿ ಹಸುವಿನ ಹೆಸರು ಪುಣ್ಯಕೋಟಿ ಎಂದಿಲ್ಲ. ಅದು ಇನ್ನೊಂದು ವ್ಯತ್ಯಾಸ.
ನಮ್ಮಲ್ಲಿ ಪುಣ್ಯಕೋಟಿಯ ಹಾಡನ್ನು ಬರೆದ ಅನಾಮಧೇಯಿಯ ನಿಸ್ವಾರ್ಥದ ಬಗ್ಗೆ ಅನಂತಮೂರ್ತಿಯವರು ಹೇಳಿರುವುದನ್ನು ನಾನು ಕೇಳಿದ್ದೇನೆ. ಅನಂತಮೂರ್ತಿಯವರು ಇದನ್ನು ಹಲವು ಬಾರಿ ಉದಾಹರಣೆಯಾಗಿ ಕೊಡುತ್ತಾರೆ. ಹಾಗಿರುವಾಗ ಇದು ಕನ್ನಡದಲ್ಲಿ ಮಾತ್ರ ಇರುವ ಕಥೆ ಎಂದು ತಿಳಿದುಕೊಂಡಿದ್ದೆ. ಆದರೆ ಹೀಗೆ ಪುಣ್ಯಕೋಟಿ ಒಡಿಸ್ಸಿ ಬ್ಯಾಲೆ ಯಲ್ಲಿ ಎದುರಾಗಿ ನನಗೆ ""ಅರೆ! ಇಲ್ಲೂ ಪುಣ್ಯಕೋಟಿ!' ಎನಿಸಿತು.
ಪುಣ್ಯಕೋಟಿಯ ಕಥೆ ""ಸತ್ಯದ ಜಯ ಮತ್ತು ಹಿಂಸೆಯ ಸೋಲು' ಎನ್ನುವ ನಮ್ಮ ಸಂಸ್ಕೃತಿಯಲ್ಲಿರುವ ನಂಬಿಕೆಯ ಬಗ್ಗೆ ಇರುವ ಕಥೆ. ಕನ್ನಡದಲ್ಲಿ ಹಿಂಸೆಗೆ ಪ್ರತೀಕವಾದ ಹುಲಿಯ ಸಾವು ಎಂದರೆ ಹಿಂಸೆಯ ಸಾವೆಂದೇ ಲೆಕ್ಕ. ಆ ರೀತಿಯಲ್ಲಿ ಕನ್ನಡದ ಹಾಡು ಹೆಚ್ಚು ಶಕ್ತಿಶಾಲಿ ಹಾಗೂ ಹೃದಯ ವಿದ್ರಾವಕವಾದ ಹುಲಿಯ ಸಾವು, ಆತ್ಮಹತ್ಯೆ ಒಂದು ಸೆಲ್# ರಿಯಲೈಸೇಷನ್ನಿನ ಕಥೆ ಕೂಡಾ. ನಮ್ಮೊಳಗೇ ಇರುವ ಹಿಂಸೆಯ ಅರಿವಾಗಿ ಅದನ್ನು ನಾವಾಗಿಯೇ ಅಂತ್ಯಗೊಳಿಸಿ ಕೊಳ್ಳುವ ಕಥೆ. ನಮ್ಮೆಲ್ಲರೊಳಗೂ ಸತ್ಯದ ಪುಣ್ಯಕೋಟಿಯೂ ಇದೆ. ಹಿಂಸೆಯೆಂಬ ಹುಲಿಯೂ ಇದೆ. ಇವೆರಡರಲ್ಲಿ ಯಾವುದನ್ನು ಬೆಳಗಿ ಯಾವುದನ್ನು ಇಲ್ಲವಾಗಿಸಿಕೊಳ್ಳಬೇಕು ಎಂಬುದು ನಮನಮಗೆ ಬಿಟ್ಟದ್ದು. ಮೊದಲು ಇದನ್ನು ನಾವು ಕಂಡುಕೊಳ್ಳಬೇಕು.
ಸಾಧಾರಣವಾಗಿ ಎಲ್ಲರೂ ವ್ಯಾಕುಲರಾಗುವ ಈ ಕಥೆಯಲ್ಲಿ ಅಳು ಬರುವುದು ಹುಲಿಯ ಸಾವಿಂದ. ಅದು ಹುಲಿಯ ಒಳ್ಳೆತನಕ್ಕಾಗಿ, ಹಿಂಸೆಯ ತ್ಯಾಗಕ್ಕಾಗಿ ನಡೆವ ಬಲಿದಾನಕ್ಕೆ ಮರುಗುವ ಕಣ್ಣೀರು. ಸತ್ಯವನ್ನು ಪುರಸ್ಕರಿಸಿ ತನ್ನ ಕ್ರೌರ್ಯಕ್ಕೆ ನಾಚಿಕೆಪಟ್ಟು , ಪಶ್ಚಾತ್ತಾಪಪಟ್ಟು ಆತ್ಮಹತ್ಯೆ ಗೈಯ್ಯುವ ಹುಲಿಯ ಸಾವಿಂದಲೇ ಕನ್ನಡದಲ್ಲಿ ಇದೊಂದು ಸಂಕೀರ್ಣ ಕಥೆಯಾಗಿ ಮಾರ್ಪಡುತ್ತದೆ, ಮತ್ತು ಬೇರೆಯೇ ಎತ್ತರಕ್ಕೆ ಕೊಡೊಯ್ಯುತ್ತದೆ. ನೇರ ವಿವರದಲ್ಲಿ ಇದು ಗಾಂಧೀಜಿಯವರು ಎತ್ತಿ ಹಿಡಿದ ಸತ್ಯ ಮತ್ತು ಅಹಿಂಸೆಯ ಕಥೆ ಹಾಗೂ ಸೂಕ್ಷ್ಮ ಸ್ತರದಲ್ಲಿ ನಮ್ಮೊಳಗಿನ ಎಲ್ಲಾ ಕುಂದು ಕೊರತೆಗಳನ್ನು ನಾವೇ ಗುರುತಿಸಿಕೊಳ್ಳುವ, ಇತರರ ಒಳ್ಳೆಯದನ್ನು, ಅವರ ಭಾವನೆಗಳನ್ನು ಗೌರವಿಸುವ, ಶಿಖರ ನಮ್ರತೆಯನ್ನು ಸಮ್ಮಾನಿಸುವ ಕಥೆ. ಸಹಿಷ್ಣುತೆಯ ಕಥೆ. ಒರಿಯಾ ಭಾಷೆಯಲ್ಲಿನ ಈ ಕಥೆಯಲ್ಲಿ, ಹುಲಿ ಯಕ್ಷನಾಗಿ ಮಾರ್ಪಟ್ಟ ತಕ್ಷಣ ಕನ್ನಡದಲ್ಲಿ ಅದಕ್ಕೆ ಸಿಕ್ಕುವ ಈ ಆಯಾಮಗಳೆಲ್ಲಾ ಸಿಗದೇ ಒಂದು ನೀಯತ್ತುಳ್ಳ ಹಸುವಿನ ಸತ್ಯ ಪರೀಕ್ಷೆಯ ಸರಳ ಕಥೆಯಾಗಿ ಮಾತ್ರ ಉಳಿದುಬಿಡುತ್ತದೆ.
ಜಾನಪದ ಕಥೆಯಾದ ಪುಣ್ಯಕೋಟಿಯ ಹಲವು ವರ್ಶನ್ನುಗಳು ಇನ್ನೂ ಹಲವು ಭಾಷೆಯಲ್ಲಿ ಇರಬಹುದು. ಹಾಡಾಗಿ ಈ ರೀತಿಯಲ್ಲಿ ಇರುವುದು ಕನ್ನಡದಲ್ಲಿ ಮಾತ್ರ ಎಂಬುದು ನಮಗೊಂದು ಹೆಮ್ಮೆಯ ಸಂಗತಿ.
ಆ ಸಂಜೆ ಬೆಳ್ಳನೆಯ ಸೀರೆಯಲ್ಲಿ ಹುಡುಗಿಯರು ಹಸುಗಳಾಗಿ, ಬಣ್ಣದ ಧಿರಿಸು ತೊಟ್ಟ ಹುಡುಗನೊಬ್ಬ ಹುಲಿಯಾಗಿ ಅದ್ಭುತವಾಗಿ ಅಭಿನಯಿಸಿ ನರ್ತಿಸಿದರು. ಶಾಸ್ತ್ರೀಯ ನೃತ್ಯದಲ್ಲಿ ಪುರಾಣದ ಕಥೆಗಳಲ್ಲದೇ ಅದರಾಚೆಗಿನ ಇಂತಾ ಕಥೆಗಳನ್ನೂ$° ಬಳಸಿಕೊಂಡ ನೃತ್ಯ ರೂಪಕವನ್ನೂ$ನಿಶಾಗಂಧಿಯ ತೆರೆದ ಸಭಾಂಗಣದಲ್ಲಿ ಸೆಖೆಯಿಲ್ಲದ ಸಂಜೆಯಲ್ಲೂ, ರಾತ್ರಿಯಲ್ಲೂ ನೋಡಿ ಹಿತವೆನಿಸಿತು.