ಗುರು ಮುಂಡಾಜೆ
ಇಂದಿನ ಆಧುನಿಕ ಶೈಲಿಯ ಜೀವನದಿಂದಾಗಿ ಇಂತಹ ಕಷ್ಟಕರ ಕೆಲಸವನ್ನು ಯಾರೂ ಇಷ್ಟ ಪಡುತ್ತಿಲ್ಲ. ಹಿಂದೆ ಒಂದೊಂದು ಹಳ್ಳಿಗೆ ಒಂದೊಂದು ಕಮ್ಮಾರ ಶಾಲೆಗಳಿತ್ತು. ಆದರೆ ಈಗ ಬೇರೆ ಬೇರೆ ಊರುಗಳಿಂದ ಕುಲುಮೆಯಲ್ಲಿ ಕೆಲಸ ಮಾಡುವವರಲ್ಲಿಗೆ ಹುಡುಕಿಕೊಂಡು ಬರುವ ಪರಿಸ್ಥಿತಿ ಬಂದೊದಗಿದೆ.
ಕಬ್ಬಿಣವನ್ನು ಕಾದಾಗ ಬಡಿದರೆ ಮಾತ್ರ ಅದು ತಮಗೆ ಬೇಕಾದ ಆಕಾರಕ್ಕೆ ಬರುತ್ತದೆ. ಇದೇ ಕಾದ ಕಬ್ಬಿಣವನ್ನು ಬಡಿದು ಜೀವನದ ಬಂಡಿಯನ್ನು ಚಲಾಯಿಸುವ ಅದೆಷ್ಟೋ ಮಂದಿ ಶ್ರಮಜೀವಿಗಳನ್ನು ನಾವು ಇಂದಿಗೂ ಕಾಣಬಹುದು.
ಮುಖ್ಯವಾಗಿ ಕೃಷಿ ಹಾಗೂ ಮನೆ ಕೆಲಸ ನಿರ್ವಹಿಸಲು ಅನೇಕ ಕಬ್ಬಿಣದ ಸಲಕರಣೆಗಳು ಬಹು ಮುಖ್ಯ. ಇದರಲ್ಲಿ ಕತ್ತಿ, ಹಾರೆ, ಪಿಕ್ಕಾಸು, ಗುದ್ದಲಿ ಮೊದಲಾದ ಸಲಕರಣೆಗಳನ್ನು ಕಮ್ಮಾರ ಶಾಲೆಯ ಕುಲುಮೆಯಲ್ಲಿ ತಯಾರಿ ಸುವುದೇ ಕಮ್ಮಾರನ ಮುಖ್ಯ ಕಾಯಕ.
ಕಮ್ಮಾರನ ಶಾಲೆಯಲ್ಲಿರುವ ಕುಲುಮೆಗೆ ಇದ್ದಿಲು ಹಾಕಿ ಬೆಂಕಿ ಹಚ್ಚಿ ಕಬ್ಬಿಣದ ತುಂಡನ್ನು ಆ ಬೆಂಕಿಯ ಕಿನ್ನಾಲಗೆಯಲ್ಲಿ ಕಾಯಿಸಿ ಕಬ್ಬಿಣ ಕೆಂಪು ಬಣ್ಣಕ್ಕೆ ತಿರುಗಿದಾಗ ತಮಗೆ ಬೇಕಾದ ಆಕಾರಕ್ಕೆ ಬರುವಂತೆ ಕಮ್ಮಾರ ತನ್ನಲ್ಲಿರುವ ಸುತ್ತಿಗೆಯ ಮೂಲಕ ಬಡಿದು ಒಂದು ರೂಪ ಕೊಡುತ್ತಾನೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿ ನಿಂದ ಫೆಬ್ರವರಿ ತಿಂಗಳಿನ ವರೆಗೆ ಕುಲುಮೆ ಯಲ್ಲಿ ದುಡಿಯುವವರಿಗೆ ಬೇಡಿಕೆ ಅಧಿಕ. ಈ ಅವಧಿಯಲ್ಲಿ ಕೃಷಿ ಕೆಲಸಕRೆ ಬೇಕಾಗುವ ಕಬ್ಬಿಣದ ವಿವಿಧ ಸಲಕರಣೆಗಳನ್ನು ತಯಾರಿಸಿಕೊಡುವುದೇ ಇವರ ಮುಖ್ಯ ಕಾಯಕವಾಗಿರುತ್ತದೆ.
ತೋಳ್ಬಲವೇ ಮುಖ್ಯ: ಈ ಕೆಲಸ ನೆಚ್ಚಿಕೊಳ್ಳುವವರು ಬಹಳ ವಿರಳ. ಕೆಲಸಕ್ಕೆ ನೈಪುಣ್ಯತೆಯ ಜೊತೆಗೆ ದೈಹಿಕ ಸಾಮರ್ಥ್ಯವೂ ಅಷ್ಟೇ ಅಗತ್ಯ. ಒಲೆಯಲ್ಲಿರುವ ಬೆಂಕಿಯ ಶಾಖವನ್ನು ತಡೆದುಕೊಂಡು ಕಾದ ಕಬ್ಬಿಣವನ್ನು ಬೇಕಾದ ಆಕಾರಕ್ಕೆ ತರಬಲ್ಲ ತೋಳ್ಬಲ ಕೆಲಸಗಾರನಿಗೆ ಅತೀ ಮುಖ್ಯ. ಕುಲುಮೆಯ ಕೆಲಸಕ್ಕೆ ಮುಖ್ಯವಾಗಿ ಇದ್ದಿಲು, ಮರದ ಹಿಡಿಗಳು, ಚಮ್ಮಡಿ, ಸುತ್ತಿಗೆ. ಭತ್ತದ ಹೊಟ್ಟು ಬೇಕು. ಬೆಂಕಿಯ ಕಾವು ಹೆಚ್ಚಾಗಲು ಭತ್ತದ ಹೊಟ್ಟನ್ನು ಹಾಕಲಾಗುತ್ತದೆ. ಕತ್ತಿ ಮೊದಲಾದವುಗಳಿಗೆ ಹಿಡಿ ಮಾಡಲು ಗೇರುಬೀಜದ ಮರವನ್ನು ಬಳಸಲಾಗುತ್ತದೆ.
ಶ್ರಮಕ್ಕೆ ತಕ್ಕ ಫಲ: ಕುಲುಮೆಯಲ್ಲಿ ಎಷ್ಟು ಕೆಲಸ ಮಾಡುತ್ತಾನೋ ಅಷ್ಟೇ ಆದಾಯವೂ ಇದೆ. ದಿನವೊಂದಕ್ಕೆ 500 ರೂ. ನಿಂದ ಸುಮಾರು 750 ರೂ. ವರೆಗೆ ಆದಾಯವಿದೆ. ಸೀಸನ್‌ನಲ್ಲಿ ಸಾವಿರ ದಾಟುವುದೂ ಉಂಟು. ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಪಡೆಯಬಹುದು ಎನ್ನುತ್ತಾರೆ ಮುಂಡಾಜೆಯ ಮಂಜುನಾಥ್ ಅವರು.
ಮರೆಯಾಗುತ್ತಿವೆ ಕುಲುಮೆಗಳು : ಇಂದಿನ ಆಧುನಿಕ ಶೈಲಿಯ ಜೀವನ ದಿಂದಾಗಿ ಇಂತಹ ಕಷ್ಟಕರ ಕೆಲಸವನ್ನು ಯಾರೂ ಇಷ್ಟಪಡುತ್ತಿಲ್ಲ. ಹಿಂದೆ ಒಂದೊಂದು ಹಳ್ಳಿಗೆ ಒಂದೊಂದು ಕಮ್ಮಾರ ಶಾಲೆಗಳಿದ್ದವು. ಆದರೆ ಈಗ ಬೇರೆ ಬೇರೆ ಊರುಗಳಿಂದ ಕುಲುಮೆಯಲ್ಲಿ ಕೆಲಸ ಮಾಡುವವರಲ್ಲಿಗೆ ಹುಡುಕಿಕೊಂಡು ಬರುವ ಪರಿಸ್ಥಿತಿ ಬಂದೊದಗಿದೆ.
ಬಿಸಿಲ ಝಳಕ್ಕೆ ಮೈ ಒಡ್ಡಲು ಹಿಂದೇಟು ಹಾಕುವ ಈ ಕಾಲದಲ್ಲಿ ಬೆಂಕಿಯ ಬೇಗೆಗೆ ಬೆವರು ಸುರಿಸಲು ಯಾರು ತಾನೆ ಇಷ್ಟ ಪಡುತ್ತಾರೆೆ. ಹವಾನಿಯಂತ್ರಿತ ಕೊಠಡಿ ಯಲ್ಲಿ ಅಥವಾ ಫ್ಯಾನಿನ ಕೆಳಗೆ ಕುಳಿತು ಕಂಪ್ಯೂಟರ್ ಎದುರಿನ ಕೆಲಸವನ್ನೇ ಇಂದಿನ ಯುವ ಪೀಳಿಗೆ ನೆಚ್ಚಿಕೊಂಡಿರುವಾಗ ಇಂತಹ ಕಠಿನ ಕೆಲಸಕ್ಕೆ ಒಗ್ಗುವವರಾದರೂ ಇನ್ಯಾರು. ಕಂಪ್ಯೂಟರ್ ಕೀಬೋರ್ಡ್, ಮೊಬೈಲ್‌ಗಳನ್ನು ಒತ್ತುವ ಕೈಗಳು ಸುತ್ತಿಗೆ ಹಿಡಿಯಬಹುದೇ?