ಡಾ.ರಾಜೇಶ್ ಬೆಜ್ಜಂಗಳ
ಮನೆಯಲ್ಲಿ ಉತ್ಪಾದನೆಯಾಗುವ ಕೊಳೆಯುವ ಎಲ್ಲಾ ತ್ಯಾಜ್ಯಗಳನ್ನು ಬಳಸಿ ಅಡುಗೆ ಅನಿಲವಾಗಿ ಬಯೋಗ್ಯಾಸ್ ಉತ್ಪಾದಿಸಬಹುದು.
ಜಾಗತೀಕರಣದ ಈ ಯುಗದಲ್ಲಿ ಹಳ್ಳಿಪ್ರದೇಶಗಳೆಲ್ಲಾ ನಗರಗಳಾಗಿ ಪರಿವರ್ತನೆಗೊಳ್ಳುತ್ತಿರುವ ಸಂದರ್ಭದಲ್ಲಿ ತ್ಯಾಜ್ಯ ವಿಲೇವಾರಿ ಎಂಬುದು ಬಲು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಜೊತೆಗೆ ಪ್ರತಿಯೊಂದು ಮನೆಗೆ ಹೋದಾಗ ಮಾತನಾಡುವ ಎಲ್ಲಾ ವಿಷಯಗಳೊಂದಿಗೆ ತಪ್ಪದೇ ಪ್ರವೇಶಿಸುವ ಇನ್ನೊಂದು ವಿಷಯವೆಂದರೆ ಅಡುಗೆ ಅನಿಲ ಸಮಸ್ಯೆ ಮತ್ತು ಸಿಲಿಂಡರ್‌ನ್ನು ಮಿತಿಗೊಳಿಸಿರುವುದು.
ಈ ಮೇಲಿನ ಸಮಸ್ಯೆಗಳಿಗೆ ಪರಿಹಾರ ನಾವೇ ನೀಡುವುದಾದರೆ ಅದು ನಮ್ಮ ಮನೆಯಿಂದಲೇ ಸಾಧ್ಯವಾಗುವುದಿದ್ದರೆ ನಾವೇಕೆ ಪ್ರಯತ್ನಿಸಬಾರದು. ಸಮಸ್ಯೆಯನ್ನೇ ದೂರುತ್ತಾ ಹೋಗುವುದಕ್ಕಿಂತ ಅದಕ್ಕೊಂದು ಪರಿಹಾರ ಕಂಡುಕೊಳ್ಳುವುದು ಬುದ್ಧಿವಂತಿಕೆಯಾಗುತ್ತದೆ. ಇದಕ್ಕೆ ಪರಿಹಾರವಾಗಿ ಬಂದಿರುವುದೇ ಬಯೋಗ್ಯಾಸ್.

ಮನೆಯಲ್ಲಿ ಉತ್ಪಾದನೆಯಾಗುವ ಕೊಳೆಯುವ ಎಲ್ಲಾ ತ್ಯಾಜ್ಯಗಳನ್ನು ಬಳಸಿ ಈ ಅನಿಲವನ್ನು ಉತ್ಪಾದಿಸಬಹುದು. ಕನಿಷ್ಠ 3ಕೆ.ಜಿ. ತ್ಯಾಜ್ಯದಿಂದ 250ಕೆ.ಜಿ.ಯ ವರೆಗಿನ ತ್ಯಾಜ್ಯದಿಂದ ವಿವಿಧ ಅಳತೆಯಲ್ಲಿ ಈ ವ್ಯವಸ್ಥೆ ಬಳಸಬಹುದಾಗಿದೆ.
ಈ ಬಯೋಗ್ಯಾಸ್‌ನಿಂದ ಉತ್ಪಾದನೆಯಾಗುವ ಅನಿಲದಿಂದ ಮನೆ ಬಳಕೆಯ ಅನಿಲದಲ್ಲಿ ಶೇ. 50ನ್ನು ಉಳಿಸಲು ಸಾಧ್ಯವಿದೆ.
ತರಕಾರಿ ಉಳಿಕೆ, ಆಹಾರ ಉಳಿಕೆ, ಮಾಂಸ, ಕೋಳಿ, ಮೀನು ತ್ಯಾಜ್ಯ ಇತ್ಯಾದಿಗಳನ್ನು ಇದಕ್ಕೆ ಬಳಸಬಹುದಾಗಿದೆ. ಇದರಿಂದಾಗಿ ಯಾವುದೇ ದುರ್ವಾಸನೆಯಿಲ್ಲದೆ ತ್ಯಾಜ್ಯಕ್ಕೆ ಅತ್ಯುತ್ತಮ ಮೌಲ್ಯ ಲಭಿಸುವುದರ ಜೊತೆಗೆ ಉತ್ತಮ ಅಡುಗೆ ಅನಿಲ ಸಿಗುತ್ತದೆ.