ಅಶೋಕ್ ಕುಮಾರ್ ಎ. | May 30, 2011
ಬೆಂಗಳೂರಿನ ಸ್ಟ್ರೀಟ್ ವ್ಯೂ
ಗೂಗಲ್ ಮ್ಯಾಪ್ ಸೇವೆಯನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್ ಬಳಕೆದಾರರಂತೂ ಜಿಪಿಎಸ್ ಸೇವೆ ಬಳಸಿ ಪ್ರಯಾಣಿಸುವಾಗ ದಾರಿ ಕಂಡುಕೊಳ್ಳಲೂ ಮ್ಯಾಪ್‌ಗ್ಳನ್ನು ಬಳಸುತ್ತಾರೆ. ಗೂಗಲ್ 27 ದೇಶಗಳಲ್ಲಿ ಈಗಾಗಲೇ ಸ್ಟ್ರೀಟ್ ವ್ಯೂ ಎನ್ನುವ ಸೇವೆಯನ್ನು ನೀಡುತ್ತಿದೆ. ಇದರಲ್ಲಿ ರಸ್ತೆಗಳ 360 ಕೋನದ ದೃಶ್ಯ ಇದೆ. ಇದರಿಂದ ಬಳಕೆದಾರರು ತಮ್ಮ ಮನೆಯನ್ನು ಇತರರಿಗೆ ತೋರಿಸಬಹುದು. ಆಸ್ತಿ ಖರೀದಿಸುವವರು, ಅದರ ಸುತ್ತಲಿನ ಪರಿಸರವನ್ನು ಗಮನಿಸಬಹುದು. ಹೀಗೆ ಹಲವು ಪ್ರಯೋಜನ ಗಳಿರುವ ಸ್ಟ್ರೀಟ್ ವ್ಯೂ ಸೇವೆಯನ್ನು ಬೆಂಗಳೂರಿನ ರಸ್ತೆಗಳಿಗೂ ತರಲು ಗೂಗಲ್ ಆರಂಭಿಸಿದೆ. ಗೂಗಲ್ ವಾಹನಗಳು ರಸ್ತೆಯಲ್ಲಿ ತಿರುಗಾಡಿ, ಕ್ಯಾಮರಾ ಮೂಲಕ ದೃಶ್ಯಗಳನ್ನು ಸೆರೆ ಹಿಡಿದು, ಸೇವೆಯನ್ನು ವಿಸ್ತರಿಸಲು ಆರಂಭಿಸಿವೆ. ಖಾಸಗಿತನದ ಉಲ್ಲಂಘನೆಯಾಗದಂತೆ, ಜನರ ಮುಖಗಳನ್ನು ಮಸುಕಾಗಿಸಲು ಮತ್ತು ವಾಹನ ನಂಬರ್ ಪ್ಲೇಟುಗಳನ್ನು ಮಂಕಾಗಿಸಲು ಗೂಗಲ್ ಕ್ರಮ ಕೈಗೊಳ್ಳುತ್ತದೆ. ಸ್ಮಾರಕಗಳ ಸ್ಟ್ರೀಟ್ ವ್ಯೂ ಕೂಡ ಸಿಗಲಿದ್ದು, ಅವುಗಳ ಚಿತ್ರೀಕರಣಕ್ಕೆ ಅನುಮತಿ ಪಡೆಯಲಾಗುತ್ತದೆ.
ಐಫೋನ್4 ಭಾರತದಲ್ಲಿ
ಐಫೋನ್4 ಸ್ಮಾರ್ಟ್‌ಫೋನ್ ಈಗ ಭಾರತದಲ್ಲೂ ಲಭ್ಯ. ಅಮೆರಿಕದಲ್ಲಿ ಇದನ್ನು ಮಾರುಕಟ್ಟೆಗೆ ಬಿಟ್ಟು ಸರಿಸುಮಾರು ಒಂದು ವರ್ಷವೇ ಆಯಿತು. ಆದರೆ ತ್ರೀಜಿ ಸೇವೆ ಲಭ್ಯವಿರುವ ಈ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಒದಗಿಸಲು ಆಪಲ್ ಇಷ್ಟು ತಡ ಮಾಡಿದ್ದರಲ್ಲಿ ಕಾರಣ ಸ್ಪಷ್ಟ- ಭಾರತದಲ್ಲಿ ತ್ರೀಜಿ ಸೇವೆ ಆಗಿನ್ನೂ ಆರಂಭವಾಗಿರಲಿಲ್ಲ ಅಥವಾ ಮಿತವಾಗಿತ್ತು. ವೀಡಿಯೋ ಕರೆಗಳನ್ನು ಮಾಡಲು ಎದುರು ಕ್ಯಾಮರಾದ ಜತೆಗೆ ಹಿಂಬದಿ ಕ್ಯಾಮರಾವೂ ಇದೆ. 16 ಜಿಬಿ ಸ್ಮರಣ ಕೋಶದ ಐಫೋನ್4ಗೆ 34 ಸಾವಿರ ರೂ. ಮತ್ತು 32 ಜೀಬಿಯದ್ದಕ್ಕೆ 41 ಸಾವಿರ ರೂ. ಬೆಲೆ ನಿಗದಿ ಪಡಿಸಲಾಗಿದೆ.
ಸ್ಮಾರ್ಟ್‌ಫೋನ್ - ಮ್ಯಾಪ್
ಗೂಗಲ್ ಮ್ಯಾಪನ್ನು ಸ್ಮಾರ್ಟ್‌ಫೋನುಗಳ ಮೂಲಕ ಬಳಸುವವರ ಸಂಖ್ಯೆ ಸತತವಾಗಿ ಏರುತ್ತಿದೆ. ಜಿಪಿಎಸ್ ಸ್ಥಾನ ಪತ್ತೆ ಸೇವೆಯ ಮೂಲಕ ರಸ್ತೆಯ ಮಾರ್ಗದರ್ಶನ ನೀಡುವ ಸೇವೆಯು ಬಹು ಉಪಯುಕ್ತ. 20 ಕೋಟಿ ಮೊಬೈಲ್ ಸಾಧನಗಳಲ್ಲಿ ಗೂಗಲ್ ಮ್ಯಾಪ್ ತಂತ್ರಾಂಶವನ್ನು ಅಳವಡಿಸಿಕೊಳ್ಳ ಲಾಗಿದೆ. ದೈನಂದಿನ ಬಳಕೆಯ ವಿವರಗಳನ್ನು ಪರಿಶೀಲಿಸಿದರೂ ಗೂಗಲ್ ಮ್ಯಾಪ್ ಬಳಕೆ ಜನಪ್ರಿಯವಾಗಿದೆ. ಇನ್ನು ವಾರಾಂತ್ಯಗಳಲ್ಲಿ ಪ್ರವಾಸಿ ಗರ ಸಂಖ್ಯೆ ಏರುವುದರಿಂದ, ಮ್ಯಾಪ್ ಬಳಕೆ ಏರುತ್ತದೆ. ಗೂಗಲ್ ಲ್ಯಾಟಿಟ್ಯೂಡ್ ಸೇವೆಯ ಬಳಕೆಯಿಂದ ವ್ಯಕ್ತಿಗೆ ಆತನ ಸುತ್ತಮುತ್ತಲು ಲಭ್ಯವಿರುವ ವಿವಿಧ ವ್ಯವಹಾರ ಸ್ಥಳಗಳ ಮಾಹಿತಿ ದೊರೆಯುತ್ತದೆ.
ಚಂದ್ರಮನಲ್ಲಿ ನೀರು
ಚಂದ್ರನ ನೆಲ ಒಣಕಲು ಅಲ್ಲ, ಅಲ್ಲಿ ನೀರಿನಂಶ ದಿಂದ ಒದ್ದೆಯಾದ ಪದರಗಳಿವೆ ಎನ್ನುವ ಅನಿರೀಕ್ಷಿತ ಅಂಶ ಬೆಳಕಿಗೆ ಬಂದಿದೆ. ಸಹರಾ ಮರುಭೂಮಿಗಿಂತ ಚಂದ್ರನ ಮೇಲ್ಮೆ„ಯಲ್ಲಿ ಹೆಚ್ಚು ಒದ್ದೆಯಾದ ಪ್ರದೇಶ ಗಳಿವೆ. ವ್ಯೋಮಯಾನಿ ಪೌಲೋ ನೆಪೋಲಿ ತೆಗೆದ ಚಿತ್ರಗಳಿಂದ ಈ ವಿಚಾರ ಪತ್ತೆಯಾಗಿದೆ. ಕಳೆದ ಅಕ್ಟೋಬರಿನಲ್ಲಿ ಚಂದ್ರನ ಕಣಿವೆಯೊಂದರಲ್ಲಿ ಅಪಾರ ಪ್ರಮಾಣದ ನೀರು ಇರುವ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಹೇಳಿದ ಬಳಿಕ, ಈ ಹೊಸ ಮಾಹಿತಿ ಚಂದ್ರನ ಬಗ್ಗೆ ನಮ್ಮ ತಿಳುವಳಿಕೆ ಅಪೂರ್ಣ ಎನ್ನುತ್ತಿದೆ. ಭೂಮಿ ಯಾವುದೋ ಆಕಾಶಕಾಯದ ಜತೆ ಢಿಕ್ಕಿಯಾಗಿ ಭೂಮಿಯ ಭಾಗ ಸಿಡಿದು ಚಂದ್ರ ಆಯಿತು ಎನ್ನುವ ಸಿದ್ಧಾಂತದ ಪ್ರಕಾರ, ಸ್ಫೋಟದಿಂದ ಬಿಡು ಗಡೆಯಾದ ಅಪಾರ ಶಕ್ತಿಯ ಕಾರಣ, ಚಂದ್ರ ನಲ್ಲಿದ್ದ ನೀರಿನಂಶ ಒಣಗಿ ಹೋಗಬೇಕಿತ್ತು. ಈಗ ಈ ಸಿದ್ಧಾಂತವೂ ಸರಿಯೇ ಎನ್ನುವ ಸಂಶಯ ಮೂಡಿದೆ.

ತುಷಾರ: ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ, ತುಷಾರ ಮಾಸಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ ಬನವತಿ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ: NS33 ನಮೂದಿಸಿ.)
*ಭ್ರಷ್ಟಾಚಾರ ನಿಯಂತ್ರಣ ಅಥವಾ ಹೋರಾಟಕ್ಕೆ ಮೊಬೈಲ್ ಮೂಲಕ ಯಾವ ರೀತಿಯಲ್ಲಿ ಸಹಾಯ ಪಡೆಯಬಹುದು?
ಕಳೆದ ವಾರದ ಸರಿಯುತ್ತರ: *ಬ್ಯಾಂಕ್ ವೆಬ್‌ಸೈಟಿನಲ್ಲಿ ಲಾಗಿನ್ ಪುಟದಲ್ಲಿ ಪಾಸ್‌ವರ್ಡ್ ಕದಿಯುವ ತಂತ್ರಾಂಶಗಳಿಂದ ರಕ್ಷಣೆ ಪಡೆಯಲು ಸವಲತ್ತು ಮಿಥ್ಯಾ ಕೀಲಿಮಣೆ. ಸ್ಕ್ರೀನಿನಲ್ಲಿ ಗೋಚರಿಸುವ ಈ ಕೀಲಿಮಣೆಯ ಕೀಲಿಗಳ ಮೇಲೆ ಕ್ಲಿಕ್ಕಿಸಿ, ಪಾಸ್‌ವರ್ಡ್ ನೀಡುವುದು ಸುರಕ್ಷಿತ.
*ಮೊಬೈಲ್ ಬಳಸಿ, ಬ್ಯಾಂಕ್ ತಾಣದಲ್ಲಿ ಬಳಕೆ ದಾರನ ಸಾಚಾತನದ ಪರೀಕ್ಷೆಗೆ ಒಮ್ಮೆ ಬಳಕೆಗೆ ಪಾಸ್ ವರ್ಡನ್ನು ನೋಂದಾಯಿತ ಮೊಬೈಲಿಗೆ ಕಳುಹಿಸ ಲಾಗುತ್ತದೆ. ಬಹುಮಾನಿತರು ಸುಮಂತ್ ಶಾನುಭಾಗ್ ವಡೇರಹೋಬಳಿ, ಕುಂದಾಪುರ. ಅಭಿನಂದನೆಗಳು.
ಗುರ್ರೆಂದ ಗುರುಗುಂಟಿರಾಯರು
ಕಳೆದವಾರ ವೃತ್ತಿಪರರ ನೆಟ್‌ವರ್ಕಿಂಗ್ ತಾಣ ಲಿಂಕ್‌ಡಿನ್ ಶೇರು ಬಗ್ಗೆ ನೀಡಿದ ತುಣುಕಿನಲ್ಲಿ ಶೇರು ಬೆಲೆ ರೂ.ಗಳು ಎಂದಿತ್ತು. ಅಮೆರಿಕದಲ್ಲಿ ಶೇರು ಬೆಲೆ ಡಾಲರುಗಳಲ್ಲವೇ ಎಂದು ಗುರುಗುಂಟಿರಾಯರು ಹರಿಹಾಯ್ದಿದ್ದಾರೆ. ಹೌದು- ಅದು ಡಾಲರು ಆಗಬೇಕಿತ್ತು. ತಪ್ಪಿಗಾಗಿ ವಿಷಾದಗಳು.