Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಜೀವನ ಕಲೆ ಕಲಿಕೆಗೆ ಯಾಕಿಲ್ಲ ಬೆಲೆ ?
  • ಜೀವನ ಕಲೆ ಕಲಿಕೆಗೆ ಯಾಕಿಲ್ಲ ಬೆಲೆ ?

    • ಡಾ. ಸುಂದರ್‌ ಸಾರುಕ್ಕೈ | Jun 04, 2011

      ಶಾಲಾಕಾಲೇಜುಗಳ ಬಾಗಿಲು ತೆರೆದಿದೆ. ಸಾಯನ್ಸ್‌  ತರಗತಿಗಳು ತುಂಬಿಬಿಟ್ಟಿವೆ. ಆರ್ಟ್ಸ್ ತರಗತಿಗಳಿಗೆ ವಿದ್ಯಾರ್ಥಿಗಳೇ ಇಲ್ಲದ ಸ್ಥಿತಿಯಾಗಿಬಿಟ್ಟಿದೆ. ಆರ್ಟ್ಸ್ ಬುದ್ಧಿವಂತರಲ್ಲದ ವಿದ್ಯಾರ್ಥಿಗಳ ಆಯ್ಕೆ ಎನಿಸಿಬಿಟ್ಟಿದೆ. ಯಾಕೆ ಹೀಗೆ?  ಆರ್ಟ್ಸ್ ಕಲಿತರೆ ಉದ್ಯೋಗ ಸಿಗುವುದು ಕಷ್ಟವೆಂಬ ಮೂಢನಂಬಿಕೆ ಸಮಾಜದಲ್ಲೇಕೆ ಬೇರೂರಿದೆ? ಕಲೆ,  , ಮಾನವಿಕ ಶಾಸ್ತ್ರ , ತಣ್ತೀಶಾಸ್ತ್ರಗಳು ಬದುಕುವ ಕಲೆಗೆ ನಿಕಟವಾಗಿದ್ದರೂ ವಿದ್ಯಾರ್ಥಿಗಳಲ್ಲಿ ಮತ್ತವರ ಹೆತ್ತವರಲ್ಲಿ ಏಕೆ ಅವುಗಳ ಬಗ್ಗೆ ನಿರ್ಲಕ್ಷ್ಯದ ಭಾವನೆ ಉಂಟಾಗಿದೆ?

      ಭಾರತೀಯ ಸಮಾಜ ಕ್ಷಿಪ್ರಗತಿಯಿಂದ ಬದಲಾಗುತ್ತಿದೆ. ಆದರೆ, ಇಂದಿನ ಸನ್ನಿವೇಶದಲ್ಲಿನ ಒಂದು ವ್ಯಂಗ್ಯವೆಂದರೆ, ನಾವು ಅನುಸರಿಸುತ್ತಿರುವ ಹಾದಿ, ಕಾಣುತ್ತಿರುವ ಭವಿಷ್ಯದ ಕನಸು ಎಲ್ಲವೂ ಇತರ ರಾಷ್ಟ್ರಗಳ ಚಿಂತನಮಾರ್ಗಗಳಿಂದ ರೂಪಿಸಿಕೊಂಡಂಥವು. ಜಾಹೀರಾತು ಕಂಪೆನಿಗಳು ತಮ್ಮ ಸರಕುಗಳು ನಿರೀಕ್ಷಿಸುವ ಜೀವನಶೈಲಿಯತ್ತ ಗಿರಾಕಿಗಳನ್ನು ಆಕರ್ಷಿಸುವ ಯತ್ನದಲ್ಲಿ ಮಕ್ಕಳನ್ನೇ ಹೇಗೆ ಗುರಿಯಾಗಿರಿಸಿಕೊಳ್ಳುತ್ತವೆಯೋ, ಹಾಗೆಯೇ ಚಿಂತನಶೀಲರೆನಿಸಿಕೊಂಡವರು ಕೂಡ ಮಕ್ಕಳು ಹಾಗೂ ಯುವಕರ ಶಿಕ್ಷಣದ ಸ್ವರೂಪವನ್ನು ಅವರ ಹಾಗೂ ಅವರ ಸುತ್ತಮುತ್ತಲಿನವರ ನಂಬಿಕೆಗಳನ್ನು ಬದಲಾಯಿಸುವುದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಎರಡೂ ಪ್ರಯತ್ನಗಳು ಅತ್ಯಂತ ಯಶಸ್ವಿಯಾಗಿವೆ-  ಆಹಾರ ಎಂದರೆ ಏನೆಂಬ ಪ್ರಶ್ನೆಗೆ ಇಂದಿನ ಮಕ್ಕಳ ಬಳಿ ಇರುವ ವ್ಯಾಖ್ಯೆಯೆಂದರೆ, ದಿಢೀರ್‌ ನೂಡಲ್ಸ್‌ , ಐಸ್‌ಕ್ರೀಮ್‌ ಮತ್ತು ಚಿಪ್ಸ್‌ ! ಇನ್ನು ಯುವಜನತೆಯ ಪಾಲಿಗೆ ಶಿಕ್ಷಣವೆಂದರೆ ಇಂಜಿನಿಯರಿಂಗ್‌, ವೈದ್ಯಶಾಸ್ತ್ರ , ಅದರಲ್ಲೂ ಈಗೀಗಂತೂ ವ್ಯವಹಾರ ನಿರ್ವಹಣಶಾಸ್ತ್ರ  (ಮ್ಯಾನೇಜ್‌ಮೆಂಟ್‌); ಹಾಗೂ ಇವುಗಳಲ್ಲಿ ಸಾ—ಸಬೇಕಾದ ವೃತ್ತಿತಜ್ಞತೆ, ವಿಶೇಷಜ್ಞತೆ. ಭಾರತದಲ್ಲಿನ ವಿದ್ಯಾಕ್ಷೇತ್ರದ ಅವಸ್ಥೆ ಹೀಗಾಗಿ ಹೋಗಿರುವುದಕ್ಕೆ ನಾವು ಜರೆಯಬೇಕಾಗಿರುವುದು ಈ ಮಕ್ಕಳು ಅಥವಾ ಯುವಕ ಯುವತಿಯರನ್ನಲ್ಲ ; ಬದಲಿಗೆ ಅವರ ಅಪ್ಪ ಅಮ್ಮಂದಿರನ್ನು .

      ಕಳೆದ ಹಲವು ವರ್ಷಗಳಿಂದ ನೋಡುತ್ತ ಬಂದಿದ್ದೇನೆ - ಹೆತ್ತವರ ಒತ್ತಾಯಕ್ಕೆ ಕಟ್ಟುಬಿದ್ದು ವಿಜ್ಞಾನ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್‌ ಕಲಿಯಲು ಹೋಗಿ ಕಂಗಾಲಾಗಿರುವ ವಿದ್ಯಾರ್ಥಿಗಳೇ ಅನೇಕರು. ಡಿಗ್ರಿಯ ಬೆನ್ನಿಗೇ ಉದ್ಯೋಗ ಲಭಿಸುವುದೆಂಬ ತತ್ಕಾಲದ ಲಾಭಕ್ಕಾಗಿ ತಾವು ತಮ್ಮ ಮಕ್ಕಳನ್ನು ಜೀವನಪರ್ಯಂತ ಔದ್ಯೋಗಿಕ ಅತೃಪ್ತಿಯ ಹಳವಂಡಕ್ಕೆ ನೂಕುತ್ತಿದ್ದೇವೆಂಬ ಸತ್ಯ ಈ ಹೆತ್ತವರಿಗೆ ಅರಿವಾದಂತಿಲ್ಲ. ಸಾಮಾನ್ಯವಾಗಿ ಭಾರತದಲ್ಲಿ ಮಕ್ಕಳ ವಿದ್ಯೆಗೆ ಹಣ ಒದಗಿಸುವವರು ಹೆತ್ತವರೇ. ಹಾಗಾಗಿ, ಮಕ್ಕಳು ಯಾವ ಕೋರ್ಸನ್ನು ಓದಬೇಕೆಂಬುದನ್ನು ತೀರ್ಮಾನಿಸುವವರೂ ಅವರೇ. ಅಪ್ಪ ಅಮ್ಮಂದಿರ ಕಾಳಜಿ ಅರ್ಥವಾಗುವಂಥದೇ. ಆದರೆ, ಮಕ್ಕಳಿಗೆ ಇಷ್ಟವಿಲ್ಲದ ವೃತ್ತಿಪರ ಕೋರ್ಸುಗಳತ್ತ ಅವುಗಳನ್ನು ದೂಡುವ ಮೂಲಕ ಹೆತ್ತವರು ಕಂದಮ್ಮಗಳ ಹಿತವನ್ನು ಬಲಿಗೊಡುತ್ತಿದ್ದಾರೆಂಬುದು ನಿಜಕ್ಕೂ ದುರಂತವೇ.

      ಒಂದು ರೀತಿಯಲ್ಲಿ ತಪ್ಪು ಕೇವಲ ಹೆತ್ತವರದಷ್ಟೇ ಅಲ್ಲ. ಪ್ರಚಾರ, ಪ್ರಸಾರ ಮಾಧ್ಯಮವನ್ನೂ ಒಳಗೊಂಡಂತೆ ಇಡೀ ಸಮಾಜ ಮಕ್ಕಳ ಮೇಲೆ ಪ್ರಭಾವ ಬೀರುವಲ್ಲಿ ಮುಖ್ಯವಾದ ಪಾತ್ರವೊಂದನ್ನು ನಿರ್ವಹಿಸುತ್ತದೆ. ನಮ್ಮಲ್ಲಿ ಬಹುತೇಕ ಎಲ್ಲ ವೃತ್ತಪತ್ರಿಕೆಗಳೂ ವೃತ್ತಿಪರ ಕೋರ್ಸುಗಳಿಗೆ ಪ್ರಚಾರ ನೀಡುವಂಥವೇ. ಇಂದು ಮ್ಯಾನೇಜ್‌ಮೆಂಟ್‌ ಕೋರ್ಸ್‌ ಎಂಬುದು ಅಕ್ಷರಶಃ ಮಾಧ್ಯಮಗಳ ಕಣ್ಮಣಿಯಾಗಿದೆ. ಶಿಕ್ಷಕರು, ಮಿತ್ರರು, ಹೆತ್ತವರು ಹಾಗೂ ಮಾಧ್ಯಮಗಳು - ಹೀಗೆ ಬೇರೆ ಬೇರೆ ಮೂಲಗಳಿಂದ ಒಂದೇ ಸವನೆ ಹರಿದುಬರುವ ಮಾಹಿತಿ ನೇರವಾಗಿ ವಿದ್ಯಾರ್ಥಿಗಳ ಪುಟ್ಟ ತಲೆಯೊಳಗೆ ತೆರಪಿಲ್ಲದಂತೆ ಸೇರಿಕೊಂಡಾಗ, ಆ ಬಡಪಾಯಿಗಳು ಕೊನೆಗೂ ಬಲಿಪಶುಗಳಾಗುವುದರಲ್ಲಿ ಅಚ್ಚರಿಯೇನಿದೆ?

      ಎಲ್ಲಕ್ಕಿಂತ ಹೆಚ್ಚು ಚಿಂತೆಗೀಡುಮಾಡುವ ಸಂಗತಿಯೆಂದರೆ ಸರಕಾರವೇ ಖುದ್ದಾಗಿ ವಿಜ್ಞಾನ ಹಾಗೂ ವೃತ್ತಿ ಶಿಕ್ಷಣಕ್ಕೆ ಬೆಂಬಲ ನೀಡುತ್ತಿರುವುದು; ಈ ಮೂಲಕ ಇತರ ಜ್ಞಾನಶಾಖೆಗಳನ್ನು ಅವಗಣಿಸುವಂತೆ ಮಾಡುತ್ತಿರುವುದು. ಐಐಟಿ, ಎನ್‌ಐಟಿಗಳಂಥ ಇಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳಿಗೆ, ಐಐಎಸ್‌ಇಆರ್‌ನಂಥ ವಿಜ್ಞಾನ ಕೋರ್ಸ್‌ಗಳ ಸಂಸ್ಥೆಗಳಿಗೆ ಹಾಗೂ ಐಐಎಂನಂಥ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳನ್ನು ಕಲಿಸುವ ಸಂಸ್ಥೆಗಳಿಗೆ ಕೇಂದ್ರ ಸರಕಾರ ಕೋಟಿಗಟ್ಟಲೆ ರೂಪಾಯಿಗಳನ್ನು ಸುರಿಯುತ್ತಿದೆ. ಅದೇ ಸಮಾಜವಿಜ್ಞಾನ, ಕಲೆ ಹಾಗೂ ಮಾನವಿಕ ಕೋರ್ಸ್‌ಗಳಿಗೆ ಸಂಬಂ—ಸಿದ ಕಾಲೇಜುಗಳಿಗಾಗಲಿ, ತತ್ಸಬಂ— ಉತ್ಕೃಷ್ಟತಾ ಆಶಯದ ಕಾರ್ಯಕ್ರಮಗಳಿಗಾಗಲಿ ಸರಕಾರ ವೆಚ್ಚಮಾಡುತ್ತಿರುವುದು ಜುಜುಬಿ ಎನ್ನಬಹುದಾದ ಮೊತ್ತವನ್ನಷ್ಟೆ !

      ವಿಜ್ಞಾನ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಅತಿಯೆನ್ನಿಸುವಷ್ಟು ನೀಡುತ್ತಿರುವ ಬೆಂಬಲ, ಕಲಾ ವಿಷಯಕ ಹಾಗೂ ಮಾನವಿಕ ಶಿಕ್ಷಣದ ಮೇಲೆ ಉಂಟುಮಾಡುತ್ತಿರುವ ಪರಿಣಾಮ ಅತ್ಯಂತ ಘೋರವಾದದ್ದು. ಸಮಾಜವಿಜ್ಞಾನ, ಕಲೆ, ಸಂಗೀತ, ತಣ್ತೀಶಾಸ್ತ್ರ , ಸಾಹಿತ್ಯ ಮತ್ತಿತರ ಮಾನವಿಕ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿರುವ ಎಳೆಯರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ತಮ್ಮ ಮೇಲೆ ಬೇರೆ ಬೇರೆ ಮೂಲಗಳಿಂದ ಬೀಳುತ್ತಿರುವ ಒತ್ತಡದಿಂದಾಗಿ ಈ ಮಕ್ಕಳು ಅಂಥ ಆಸಕ್ತಿಗಳಿಗೆ ಎಳ್ಳು ನೀರು ಬಿಟ್ಟು , ತಮ್ಮ ವಿದ್ಯೆಯನ್ನು ಹುದ್ದೆ ಸಂಪಾದನೆಯ ಸಾಧನವಾಗಿ ಪರಿವರ್ತಿಸಿಕೊಳ್ಳಬೇಕಾಗಿಬಂದಿದೆ.

      ಉದಾಹರಣೆಗೆ, ಅರ್ಹತೆಯಿದ್ದೂ ಕೆಲವು ವಿದ್ಯಾರ್ಥಿಗಳಿಗೆ ಬಿ.ಎ. ಕೋರ್ಸನ್ನು ತೆಗೆದುಕೊಳ್ಳಲು ತಕ್ಕ ಪ್ರೋತ್ಸಾಹ ಸಿಗುತ್ತಿಲ್ಲ. ವಿಜ್ಞಾನ ವಿಷಯಗಳ ಬದಲಿಗೆ ಬಿ.ಎ. ಕೋರ್ಸನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿನಿಯೊಬ್ಬಳು ಈ ಸಂದರ್ಭದ ತನ್ನ ಅನುಭವವನ್ನು ಸಾರ್ವಜನಿಕ ಸಭೆಯೊಂದರಲ್ಲಿ ಹೀಗೆ ಹೇಳಿಕೊಂಡಳು. 12ನೆಯ ತರಗತಿಯಲ್ಲಿ (ನಮ್ಮ ಕರ್ನಾಟಕದ ದ್ವಿತೀಯ ಪಿಯುಸಿ ಮಟ್ಟದ ತರಗತಿ) ಆಕೆ ಗರಿಷ್ಠ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಳು. ಹಾಗಿದ್ದೂ ಬಿ.ಎ. ಮಾಡಬೇಕೆಂಬ ಆಸೆ. ಇದಕ್ಕೆ ಶಿಕ್ಷಕರಿಂದ, ಗೆಳೆಯ ಗೆಳತಿಯರಿಂದ, ಹೆತ್ತವರಿಂದ ತೀವ್ರ ವಿರೋಧ. ಇದೇ ಸಮಯದಲ್ಲಿ ಆಕೆಯ ಸಹಪಾಠಿಯೊಬ್ಬಳು ಮನೆಯಿಂದ ಓಡಿಹೋಗಿ ಮದುವೆ ಮಾಡಿಕೊಂಡ ಘಟನೆ ನಡೆಯಿತು. ಓಡಿಹೋದ ಹುಡುಗಿಗಿಂತಲೂ ಹೆಚ್ಚಿನ ಸಮಸ್ಯೆಯನ್ನು ತಾನು ಬಿ. ಎ. , ಕೋರ್ಸನ್ನು ಆಯ್ಕೆ ಮಾಡಿ ಕೊಂಡದ್ದರಿಂದ ಅನುಭವಿಸಬೇಕಾಗಿ ಬಂತು ಎಂದಳು ಆ ವಿದ್ಯಾರ್ಥಿನಿ !

      ಸರಿ, ಕಲಾ ವಿಷಯಗಳನ್ನು , ತಣ್ತೀಶಾಸ್ತ್ರ , ಸಾಹಿತ್ಯ ಅಥವಾ ಸಮಾಜ ವಿಜ್ಞಾನದಂಥ ವಿಷಯಗಳನ್ನು ಯಾಕೆ ಅಭ್ಯಸಿಸಬೇಕು? ಇಂಥ ಜ್ಞಾನ ಶಾಖೆಗಳು, ಮಾನವೀಯತೆ ಎಂದರೇನೆಂದು ನಮ್ಮ ಅರಿವಿಗೆ ತಂದು ಕೊಡುತ್ತವೆ ಎಂಬುದಕ್ಕಾಗಿ ! ವೃತ್ತಿಪರ ಶಿಕ್ಷಣಕ್ಕೆ ಸಂಬಂ—ಸಿದ ವಿಷಯಗಳು ಅತ್ಯಂತ ನಿರ್ದಿಷ್ಟ ಉದ್ದೇಶಗಳನ್ನು ಒಳಗೊಂಡಿವೆ ; ನೈಸರ್ಗಿಕ ವಿಜ್ಞಾನ ಭೌತಿಕ ವಿಶ್ವದ ಸ್ವರೂಪ ಹೇಗಿದೆ ಎಂಬುದನ್ನು ವಿವರಿಸುವ ಉದ್ದೇಶ ಹೊಂದಿವೆೆ. ಇಂಜಿನಿಯರಿಂಗ್‌ ಜ್ಞಾನಶಾಖೆ, ತಂತ್ರಜ್ಞಾನಕ್ಕೆ ಸಂಬಂ—ಸಿದ್ದಾಗಿದೆ. ಮ್ಯಾನೇಜ್‌ಮೆಂಟ್‌ ಕಲಿಕೆ, ಪ್ರಯೋಜನಕಾರಿ ಸಾಧನಗಳ/ವ್ಯವಸ್ಥೆಗಳನ್ನು ಪರಿಚಯಿಸುವ ಉದ್ದೇಶದ್ದಾಗಿದೆ. ವಾಸ್ತವವಾಗಿ ಈ ಯಾವ ಕ್ಷೇತ್ರಗಳೂ ಮಾನವೀಯವಾಗಿರುವುದೆಂದರೆ ಹೇಗೆಂಬುದನ್ನು ಅರಿತುಕೊಳ್ಳಲು ನೆರವಾಗಲಾರವು. ಮಾನವ ಜೀವಿಗಳಾಗಿ ನಮಗಿರುವ ವಿಶೇಷತೆಗಳೇನು? ನಾವು ಜೀವಿಸುತ್ತಿರುವ ಈ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆ? ನಾವು ಈ ಜಗತ್ತಿನಲ್ಲಿ ಯಾವ ರೀತಿ ವರ್ತಿಸುತ್ತೇವೆ? ಈ ಎಲ್ಲದರ ಬಗ್ಗೆ ಗಮನ ಹರಿಸುವ ಮತ್ತು ಮಾನವಿಕ ಶಾಸ್ತ್ರಗಳ ಅಧ್ಯಯನವೆಂಬುದು ಜೀವನ ಪರ್ಯಂತ ನಡೆಯುತ್ತಲೇ ಇರುವ ಅಧ್ಯಯನ. ನಾವು ಯಾರು? ಜಗತ್ತಿನಲ್ಲಿ ನಮಗಿರುವ ಸ್ಥಾನಮಾನ ಏನು? ಎಂಬುದರ ಅರಿವನ್ನು ಮೂಡಿಸಿ ಸಹಕರಿಸುವ ಜ್ಞಾನಶಾಖೆಯಿದು.

      ಕಲೆಯ ವಿವಿಧ ಪ್ರಭೇದಗಳು ಹಾಗೂ ಸಾಹಿತ್ಯ-ಇವು ಮೂಲಭೂತ ಮಾನವೀಯ ಪ್ರವೃತ್ತಿಗಳು. ಇವು ಮಾನವ ಮನಸ್ಸಿನ ಅತ್ಯಂತ ಸೃಷ್ಟಿಶೀಲ ಅಭಿವ್ಯಕ್ತಿಗಳು. ಎಲ್ಲಕ್ಕಿಂತ ಮುಖ್ಯವಾಗಿ ಈ ಕ್ಷೇತ್ರಗಳು ಹೇಳುತ್ತಿರುವುದು ಮಾನವರಾದ ನಮ್ಮ ಬಗ್ಗೆಯೇ ವಿನಾ ಜಗತ್ತಿನಲ್ಲಿರುವ ವಸ್ತು-ಸಾಮಗ್ರಿಗಳ ಬಗ್ಗೆ ಅಲ್ಲ. ದಬ್ಟಾಳಿಕೆ/ದಮನದ ವಿರುದ್ಧದ ಪ್ರತಿಭಟನೆಯ ಸಾಧನಗಳಾಗಿ, ಅನೇಕ ಅಲಕ್ಷಿತ ಸಮುದಾಯಗಳ ವಿಮುಕ್ತಿಗೆ ಅವಕಾಶ ಕಲ್ಪಿಸುವ ಮಾರ್ಗಗಳಾಗಿ ಅನಿಯಂತ್ರಿತ ಪ್ರಗತಿಯ ಅಪಾಯದಿಂದ, ಅನಪೇಕ್ಷಿತ ರಾಜಕೀಯ ಆಳ್ವಿಕೆಯ ಪಿಡುಗಿನಿಂದ ನಮ್ಮ ಸಮಾಜವನ್ನು ರಕ್ಷಿಸುವ ಉಪಾಯಗಳಾಗಿ ಇವು ಸಲ್ಲುತ್ತವೆ. ಬದುಕಿನ ಎಲ್ಲ ಸಂಕೀರ್ಣತೆಗಳ ನಡುವೆಯೂ ಮಾನವ ಜೀವಿಯಾಗಿ ಬದುಕನ್ನು ನಿರ್ವಹಿಸುವುದು ಹೇಗೆಂಬುದನ್ನು ಇವು ಕಲಿಸಿ ಕೊಡುತ್ತವೆ.

      ತಣ್ತೀಶಾಸ್ತ್ರವೆಂಬುದು ಬಹುತೇಕ ಎಲ್ಲ ಕಲಿಕಾ ವಿಷಯಗಳ ಅಸ್ತಿವಾರ. ತಣ್ತೀಶಾಸ್ತ್ರದ ಮೂಲಕ ನಮ್ಮ ಜಡ್ಡುಗಟ್ಟಿದ ನಂಬಿಕೆಗಳನ್ನು ಪ್ರಶ್ನಿಸುವುದು ಹೇಗೆಂಬುದನ್ನು , ಯಥಾರ್ಥತೆಯ ಸ್ವರೂಪವನ್ನು, ಭಾಷೆಯ ಸ್ವರೂಪವನ್ನು, ವಿಜ್ಞಾನದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಹೇಗೆಂಬುದನ್ನು ಕಲಿಯಲು ಸಾಧ್ಯ. ವಾಸ್ತವವಾಗಿ, ತಣ್ತೀಶಾಸ್ತ್ರದ ಅರಿವು ನಮ್ಮ ಕಲೆ ಹಾಗೂ ಸಾಹಿತ್ಯಗಳನ್ನು ಇನ್ನಷ್ಟು ಉಜ್ವಲಗೊಳಿಸಬಲ್ಲುದು. ಅದು ಮುಖ್ಯವಾಗಿ ಚಿಂತನೆಯ ಒಂದು ವಿಧಾನ. ನಮ್ಮನ್ನೇ, ನಮ್ಮ ಅನುಭವಗಳನ್ನೇ ಚಿಂತನೆಗೊಳಪಡಿಸಿಕೊಳ್ಳುವ ವಿಧಾನ. ನಶ್ವರತೆಯ ಬಗ್ಗೆ ಹೇಗೋ, ಹಾಗೇ ಸತ್ಯ ಹಾಗೂ ಜ್ಞಾನದ ಕುರಿತೂ ಚಿಂತಿಸುವ ಪರಿಯನ್ನದು ಕಲಿಸಿ ಕೊಡಬಲ್ಲುದು.

      ಮಾನವೀಯವಾಗಿ ವರ್ತಿಸಬೇಕು ಎಂದರೇನೆಂದು ಅರಿತುಕೊಳ್ಳುವ ಅಗತ್ಯವೇನಿದೆ? ನಾವು ಯಾರು ಎಂಬ ಬಗ್ಗೆ , ನಮಗೂ ನಮ್ಮ ಸಮಾಜಕ್ಕೂ ಈ ಜಗತ್ತಿಗೂ ನಾವು ಏನು ಮಾಡುತ್ತಿದ್ದೇವೆ ಎಂಬ ಬಗ್ಗೆ ಚಿಂತಿಸದೆ ನಾವೇಕೆ ಸುಮ್ಮನೆ ಬದುಕಿಕೊಂಡು ಹೋಗಬಾರದು? ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಬಾಳ್ವೆ ನಡೆಸಲು ಏಕೆ ಸಾಧ್ಯವಿಲ್ಲ ಎಂಬುದಕ್ಕೆ ಹಲವೆಂಟು ಕಾರಣಗಳಿವೆ. ಹೀಗೆ ಕುರುಡು ನಂಬಿಕೆಯೊಂದಿಗೆ ನಡೆಸುವ ಬಾಳ್ವೆ, ಸಂಕಷ್ಟಕರ ವೈಯಕ್ತಿಕ ಬದುಕಿಗೆ ಹಾದಿ ಮಾಡಿಕೊಡುವ ಪ್ರಕ್ಷುಬ್ಧ ಸಮಾಜದ ಸೃಷ್ಟಿಗೆಕಾರಣವಾಗುವ ಸಾಧ್ಯತೆಯಿದೆ. ಹೀಗಾದಲ್ಲಿ ಸಮಾಜದ ಸಂತೋಷ- ಸೂಚ್ಯಂಕ ಅಧೋಮುಖೀಯಾಗುತ್ತದೆ. ಇತರ ಹಲವು ಕಾರಣಗಳ ಬದಲಿಗೆ, ಮಕ್ಕಳ ಹೆತ್ತವರಿಗೆ ಕುತೂಹಲಕಾರಿಯೆನ್ನಿಸಬಹುದಾದ ಒಂದು ಕಾರಣ ನೀಡುತ್ತೇನೆ- ನಮ್ಮ ಮಕ್ಕಳಿಗೆ ಇನ್ನಷ್ಟು ತ್ರಾಸದಾಯಕ ಜಗತ್ತನ್ನು ನಾವು ಸೃಷ್ಟಿ ಮಾಡಿ ಕೊಡುತ್ತಿದ್ದೇವೆ ! ಎಲ್ಲ ಹೆತ್ತವರೂ ಈ ಮಾತನ್ನು ಒಪ್ಪಿಯೇ ಒಪ್ಪುತ್ತಾರೆ-ತಮ್ಮ ಮಕ್ಕಳಿಗೆ ಇನ್ನಷ್ಟು ಸಂಕಷ್ಟಕಾರಿ ಜಗತ್ತನ್ನು ಸೃಷ್ಟಿ ಮಾಡಿರುವ ಏಜೆಂಟರೆಂದು ಮಕ್ಕಳು ತಮ್ಮನ್ನು ಪರಿಗಣಿಸುವುದನ್ನು ಯಾವ ಹೆತ್ತವರೂ ಬಯಸಲಾರರು ! ಆದರೆ, ನಮ್ಮ ಮಕ್ಕಳಿಗೆ ವಿಮಶಾìತ್ಮಕ ಹಾಗೂ ಸೃಜನಶೀಲ ಚಿಂತನೆಯ ವಿಧಾನವನ್ನು ಕಲಿತುಕೊಳ್ಳಲು ಅವಕಾಶ ಮಾಡಿಕೊಡದಿದ್ದಲ್ಲಿ ; ಪಾತಕಗಳ, ಪ್ರಮಾದಗಳ, ದಮನಕಾರಿ ಶಕ್ತಿಗಳ ವಿರುದ್ಧ ಪ್ರತಿಭಟಿಸುವ ಗುಣಗಳನ್ನು ನಾವು ಮಕ್ಕಳಿಗೆ ಕಲಿಸಿ ಕೊಡದಿದ್ದಲ್ಲಿ ಮೇಲೆ ಹೇಳಿದ ಪ್ರಮಾದ ನಮ್ಮಿಂದ ನಡೆದೇ ನಡೆಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

      ನಮ್ಮ ಮಕ್ಕಳ ಮೇಲೆ ವಿಜ್ಞಾನಿಗಳಾಗುವಂತೆ, ಇಂಜಿನಿಯರ್‌ಗಳಾಗುವಂತೆ ಒತ್ತಡ ಹೇರಿದಲ್ಲಿ ಜಗತ್ತು ಇನ್ನಷ್ಟು ದಾರಿದ್ರ್ಯ ಕಾಣಲಿದೆ. ಸಂಗೀತ, ಬಣ್ಣಗಳು ಹಾಗೂ ವೈವಿಧ್ಯ ತುಂಬಿದ ಜಗತ್ತೂಂದು ಬೇಕು ನಮಗೆ. ಇಡೀ ಜಗತ್ತನ್ನೇ ವೃತ್ತಿಪರ ಶಿಕ್ಷಣ ಪಡೆದ ತಜ್ಞರುಗಳ ಕಾರ್ಖಾನೆಯನ್ನಾಗಿ ಮಾರ್ಪಡಿಸುವಂತಿಲ್ಲ ನಾವು. ಇಂಥ ವೃತ್ತಿಪರರಲ್ಲಿ ಹೆಚ್ಚಿನವರು ಒಂದೇ ರೀತಿ ಯೋಚಿಸುವವರು ಹಾಗೂ ಒಂದೇ ರೀತಿ ವರ್ತಿಸುವವರು. ನಮ್ಮ ಅಸ್ತಿತ್ವದ ಬಗೆಗೆ ನಮಗೊಂದು ಅಭಿಪ್ರಾಯವಿದೆ. ಜಗತ್ತಿನಲ್ಲಿ ಕೇವಲ ಕೆಲವೇ ಶಕ್ತ ಮಂದಿಯ ಮರ್ಜಿಗೆ ತಕ್ಕಂತೆ ನಾವು ಕುಣಿಯಲು ಸಾಧ್ಯವಿಲ್ಲವೆಂಬುದನ್ನು ಧ್ವನಿಯೆತ್ತರಿಸಿ ಹೇಳಲು ತಕ್ಕ ಸಾಮರ್ಥ್ಯ ದಕ್ಕಿಸಿ ಕೊಡುವ ವಿಧಾನವೆಂದರೆ ಕಲೆ ಹಾಗೂ ಮಾನವಿಕ ಶಾಸ್ತ್ರಗಳ ಅಧ್ಯಯನ.

      ಉದ್ಯೋಗ ಸಮಸ್ಯೆಯಲ್ಲ ...

      ಕಲೆ- ಮಾನವಿಕ ವಿಷಯಗಳ ಪದವಿ ಪಡೆದ ಬಳಿಕ ಮಕ್ಕಳ ಭವಿಷ್ಯವೇನೆಂಬುದು ಬಹುತೇಕ ಹೆತ್ತವರ ಚಿಂತೆ. ಹೌದು, ಇದೊಂದು ಮುಖ್ಯ ಸಮಸ್ಯೆ. ಆದರೆ ಕಲಾ ವಿಷಯಕ, ಮಾನವಿಕ ವಿಷಯಗಳ ಅಧ್ಯಯನ ನಡೆಸಿ ಪದವೀಧರರಾದವರಿಗೆ ಉದ್ಯೋಗ ಅಥವಾ ಸೊÌàದ್ಯೋಗದ ಅವಕಾಶ ಇಲ್ಲ ಎಂಬುದು ಇಂದಿನ ಮಟ್ಟಿಗೆ ನಿಜವಲ್ಲದ ಮಾತು. ನಮ್ಮ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಕಲೆ, ಮಾನವಿಕ ಹಾಗೂ ಸಮಾಜ ವಿಜ್ಞಾನ ಕಲಿತ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶಗಳು ಹೇರಳವಾಗಿವೆ. ಉದಾಹರಣೆಗೆ, ಇಂಥ ವಿದ್ಯಾರ್ಥಿಗಳಿಗೆ ಚಿಂತನೆ ಹಾಗೂ ಬರಹಕ್ಕೆ ಸಂಬಂ—ಸಿದಂತೆ ಒಳ್ಳೆಯ ತರಬೇತಿ ಲಭಿಸಿರುತ್ತದೆ. ಕಾರ್ಪೊರೇಟ್‌ ಜಗತ್ತಿನಲ್ಲೂ ಇಂಥವರಿಗೆ ಬೇಡಿಕೆ ಇದೆ. ಭಾರತದಲ್ಲಿರುವ ಅನೇಕ ಸರಕಾರೇತರ ಸಂಸ್ಥೆಗಳಿಗೆ ಕೂಡ ಇಂಥ ಸಮಾಜದ ಬಗ್ಗೆ ಚಿಂತಿಸುವ, ಬರೆಯುವ ಕಲೆಯಲ್ಲಿ ಸಾಕಷ್ಟು ತರಬೇತಿ ಪಡೆದ ವಿದ್ಯಾರ್ಥಿಗಳ ಅಗತ್ಯವಿದೆ.

      ಇನ್ನು, ಈ ಕ್ಷೇತ್ರಗಳಲ್ಲಿ ಶಿಕ್ಷಕ ಹುದ್ದೆಗಳೂ ಇವೆ. ಹೀಗೆ, ಉನ್ನತ ಅಧ್ಯಯನ ನಡೆಸಬಯಸುವ ವಿದ್ಯಾರ್ಥಿಗಳು ಬಳಿಕ ಹಲವಾರು ರೀತಿಯ ಉದ್ಯೋಗಗಳನ್ನು ಕಂಡುಕೊಳ್ಳುವ ಅವಕಾಶಗಳು ಇದ್ದೇ ಇವೆ. ಎಲ್ಲಕ್ಕಿಂತ ಮುಖ್ಯವಾದ ಮಾತೆಂದರೆ ಈ ಕ್ಷೇತ್ರಗಳಲ್ಲಿ ಉತ್ತಮ ರೀತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಬಲ್ಲ ವಿದ್ಯಾರ್ಥಿಗಳು ಹಣ ಸಂಪಾದನೆಗೆ ಹಲವು ಅವಕಾಶಗಳನ್ನು ಕಂಡುಕೊಳ್ಳಬಹುದಷ್ಟೇ ಅಲ್ಲ, ತಮ್ಮ ಬದುಕನ್ನೇ ಅನುಭವ ಸಮೃದ್ಧವನ್ನಾಗಿಸಿಕೊಂಡು ಸಾರ್ಥಕತೆಯನ್ನೂ ಅನುಭವಿಸುವ ಅವಕಾಶವೂ ಅವರಿಗೆ ಲಭಿಸಿಯೇ ಲಭಿಸುತ್ತದೆ. ತಮ್ಮ ಮಕ್ಕಳು ಏನೇ ಮಾಡಲಿ, ಅದರಲ್ಲಿ ಅವರಿಗೆ ತೃಪ್ತಿ ಸಿಗುವಂತಾಗಲಿ; ಅವ‌ರ ಬದುಕು ಆ ಮೂಲಕ ಹಸನಾಗಲಿ, ಸಮೃದ್ಧವಾಗಲಿ ಎಂದು ಹೆತ್ತವರು ಏಕೆ ಬಯಸಬಾರದು? ತಮ್ಮದೇ ಪ್ರಮಾದಗಳಿಂದ ಹುಟ್ಟಿರುವ ಭೀತಿಯನ್ನು ತೊಡೆದು ಹಾಕುವ ಪ್ರಯತ್ನದಲ್ಲಿ ಅವರು ತಮ್ಮ ಮಕ್ಕಳ ಆಸಕ್ತಿಯ ಹಾದಿಗೆ ಅಡ್ಡ ಬರಬೇಕೆ? ವಿದ್ಯಾರ್ಥಿಗಳೇ ಧೈರ್ಯ ಸ್ಥೆ„ರ್ಯಗಳಿಂದ ಎದ್ದು ನಿಂತು ತಮ್ಮ ಆಶೆ ನಿರೀಕ್ಷೆಗಳನ್ನು ಹೆತ್ತವರಲ್ಲಿ ನಿವೇದಿಸಿಕೊಂಡು ಅವರ ಮನವೊಲಿಸ ಕೂಡದೇಕೆ? ನಿಜವಾದ ಅರ್ಥದಲ್ಲಿ ಶಿಕ್ಷಣವೆಂದರೆ ಇದೇ ಅಲ್ಲವೇ?

      ಭಾರತದ ಪ್ರಮುಖ ತಣ್ತೀಶಾಸ್ತ್ರ ಚಿಂತಕರಾದ ಡಾ. ಸುಂದರ್‌ ಸಾರುಕ್ಕೈ ಮೂಲತಃ ಭೌತಶಾಸ್ತ್ರಜ್ಞರು. ಅಮೆರಿಕದ ಪೆರ್ಡೂÂ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಬೆಂಗಳೂರಿನ ನೇಶನಲ್‌ ಇನ್ಸಿಟ್ಯೂಟ್‌ ಆಫ್‌ ಎಡ್ವಾನ್ಸ್‌ಡ್‌ ಸ್ಟಡೀಸ್‌ನಲ್ಲಿ ತಣ್ತೀಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಪ್ರಸ್ತುತ, ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ""ಮಣಿಪಾಲ್‌ ಸೆಂಟರ್‌ ಫಾರ್‌ ಫಿಲಾಸಫಿ ಆಂಡ್‌ ಹ್ಯುಮ್ಯಾನಿಟೀಸ್‌ ವಿಭಾಗ'ವನ್ನು ಆರಂಭಿಸಿ ಅದರ ನಿರ್ದೇಶಕರಾಗಿದ್ದಾರೆ.

      ಈ ವಿಭಾಗದಲ್ಲಿ "ಇಂಟಗ್ರೇಟೆಡ್‌ ಪಿಎಚ್‌ಡಿ' ವಿಭಾಗವನ್ನು ಆರಂಭಿಸಲಾಗಿದೆ. ಅಂದರೆ, ಬಿ. ಎ ಬಳಿಕ, ಎಂ. ಎ. ಕಲಿಕೆಯೂ ಸೇರಿದಂತೆ ಒಟ್ಟು ಐದುವರ್ಷ ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆಯುವ ಅಪೂರ್ವ ಅವಕಾಶವಿದು. ಅಲ್ಲದೆ, ಕಲಿಸುವುದಕ್ಕಿಂತ ತಾನೇ ಸ್ವಯಂಸ್ಫೂರ್ತಿಯಿಂದ ಕಲಿತುಕೊಳ್ಳುವ, ವಿದ್ಯಾರ್ಥಿ ಮಟ್ಟದಲ್ಲಿಯೇ ಸಂಶೋಧನಾ ಪ್ರಬಂಧವನ್ನು ಬರೆಯಲು ಪ್ರೇರೇಪಿಸುವ ವಿಶಿಷ್ಟ ವಿಧಾನವನ್ನು ಇಲ್ಲಿ ಅನುಸರಿಸಲಾಗುತ್ತದೆ. ಭಾರತೀಯ ಮತ್ತು ಪಾಶ್ಚಾತ್ಯ ತಣ್ತೀಶಾಸ್ತ್ರ ಮತ್ತು ಜ್ಞಾನಪರಂಪರೆಯ ಬಗ್ಗೆ ಆಳವಾದ ಅಧ್ಯಯನಕ್ಕೆ ಇಲ್ಲಿ ಅವಕಾಶವಿದೆ. ಅಂತರ್‌ಶಿಸ್ತೀಯ ಅಧ್ಯಯನಕ್ಕೂ ಮಹತ್ವವನ್ನು ಕೊಡಲಾಗುತ್ತದೆ. ಈ ವಿಭಾಗದಲ್ಲೀಗ ವಿಶ್ವದರ್ಜೆಯ ಬೋಧಕರನ್ನು, ಗ್ರಂಥಾಲಯಗಳನ್ನು ಸಜ್ಜುಗೊಳಿಸಲಾಗಿದೆ.


      ಹೆಚ್ಚಿನ ಮಾಹಿತಿಗಾಗಿ :
      www.manipal.edu         ಈಮೈಲ್‌ : office.mcph@manipaledu
       ಕಾರ್ಪೊರೇಟ್‌ ಸಂಸ್ಥೆಗಳಿಗೆ ಜೀವನ ಕಲೆಯನ್ನು ಕಲಿಸುವ ವಿಭಾಗವೊಂದು ತಮಗೆ ಆವಶ್ಯಕವೆಂದು ಇಂದು ಕಂಡಿದೆ. ವೈದ್ಯಕೀಯ, ಇಂಜಿನಿಯರಿಂಗ್‌ ಕಲಿಯುವ ವಿದ್ಯಾರ್ಥಿಗಳಿಗೂ ಮಾನವಿಕ ಶಾಸ್ತ್ರದ ಒಂದು ಪಾಠ ಅಗತ್ಯವೆನ್ನಿಸಿದೆ. ಜೀವನಕಲೆಯನ್ನು ಕಲಿಸುವ ಕಲಿಕೆ ಇಂದು ಪ್ರತೀಕ್ಷೇತ್ರಕ್ಕೂ ಪ್ರಸ್ತುತವೆನ್ನಿಸಿದೆ. ಇಂಥ ಸಂದರ್ಭದಲ್ಲಿ ಹ್ಯುಮ್ಯಾನಿಟೀಸ್‌ ವಿಭಾಗದಲ್ಲಿ ಕಲಿತವರಿಗೆ ಉದ್ಯೋಗವೇನೂ ದೊಡ್ಡ ಸಮಸ್ಯೆಯಲ್ಲ . 

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
    • ಈ ವಿಭಾಗದಲ್ಲಿಯೂ ಇದೆ
    • Copyright @ 2009-2010 Udayavani.All rights reserved.
    • Designed & Hosted By 4cplus