ಡಾ|ನಾರಾಯಣ ಎ. | Jun 24, 2011
ಇಬ್ಬರಲ್ಲಿ ಒಬ್ಬ ಮಾತ್ರವಷ್ಟೇ ಸತ್ಯ ಹೇಳಲು ಸಾಧ್ಯವಿರುವಾಗ ಇಬ್ಬರೂ ಸತ್ಯಪ್ರಮಾಣ ಮಾಡುತ್ತೇವೆ ಅಂತ ಹೊರಟರೆ ಇಬ್ಬರಲ್ಲಿ ಒಬ್ಬ ಮೋಸದ ಸತ್ಯವನ್ನಷ್ಟೇ ಹೇಳಲು ಸಾಧ್ಯ. ಕರ್ನಾಟಕದಲ್ಲಿ ಇಂತಹ ಒಂದು ಪ್ರಕರಣ ಸ್ವಲ್ಪದರಲ್ಲೇ ತಪ್ಪಿಹೋದಂತಿದೆ. ಒಂದು ವೇಳೆ ಅದು ನಡೆದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇವರೀರ್ವರ ಮಧ್ಯೆ ಯಾರು ನಿಜವಾದ ಸತ್ಯ ಹೇಳಿದರು, ಯಾರು ಮೋಸದ ಸತ್ಯ ಹೇಳಿದರು ಎನ್ನುವ ಕುತೂಹಲವಾದರೂ ಜನರಿಗೆ ಇರುತ್ತಿತ್ತು ಅಂತ ಅನ್ನಿಸುವುದಿಲ್ಲ.ಇಬ್ಬರ ಸತ್ಯನಿಷ್ಠೆಯೂ ಪ್ರಶ್ನಾರ್ಹ.
"ಅಶ್ವತ್ಥಾಮ ಹತ ಕುಂಜರಃ' ಅಂತ ಮಹಾಭಾರತದಲ್ಲಿ ಧರ್ಮರಾಜ ಹೇಳಿದಾಗ ಆತ ಹೇಳಿದ್ದು ಸತ್ಯವನ್ನೇ. ಆದರೆ ಆ ಸತ್ಯ ಸಾಧಿಸಿದ್ದು ಸುಳ್ಳು ಹೇಳುವ ಮೂಲಕ ಮಾತ್ರ ಸಾಧಿಸಬಹುದಾದ ಕಾರ್ಯವನ್ನು. ಆದುದರಿಂದ ಧರ್ಮರಾಜ ಹೇಳಿದ್ದು ಸತ್ಯ ಅಂತ ಕರೆಯಲು ಸಾಧ್ಯವಿಲ್ಲದ ಸತ್ಯ. ಸುಳ್ಳು ಅಂತ ತೆಗಳಲಾಗದ ಸುಳ್ಳು.
ಪಾಶ್ಚಾತ್ಯ ಸಾಹಿತ್ಯದಲ್ಲಿ ಒಂದು ಕತೆ ಇದೆ: ಒಬ್ಟಾತ ಇನ್ನೊಬ್ಬನಿಗೆ 100 ಚಿನ್ನದ ನಾಣ್ಯಗಳನ್ನು ಸಾಲವಾಗಿ ನೀಡಿದ. ಅವಧಿ ಕಳೆದರೂ ಸಾಲ ವಾಪಸಾಗಲಿಲ್ಲ. ಕೇಳಿದರೆ, ಸಾಲ ಪಡೆದವ ನಾನದನ್ನು ಯಾವತ್ತೋ ಹಿಂದಿರುಗಿಸಿದ್ದೇನೆ ಎಂದ. ಸಾಲ ನೀಡಿದವ ಕಂಗಾಲಾಗಿ ಚರ್ಚ್‌ನ ಗುರುಗಳ ಬಳಿ ಹೋಗುತ್ತಾನೆ. ಗುರುಗಳು ಇಬ್ಬರನ್ನೂ ಕರೆದು ದೇವರ ಮುಂದೆ ಪ್ರಮಾಣ ಮಾಡುವಂತೆ ಹೇಳುತ್ತಾರೆ. ಸಾಲ ನೀಡಿದವ ಪವಿತ್ರಪೀಠದ ಮೇಲೆ ಕೈಯಿರಿಸಿ "ನಾನು ಸಾಲ ನೀಡಿದ್ದೇನೆ. ಅದನ್ನವ ವಾಪಸು ನೀಡಲಿಲ್ಲ. ನಾನು ಸತ್ಯವನ್ನೇ ಹೇಳುತ್ತೇನೆ. ನಾನಾಡಿದ್ದು ಸುಳ್ಳಾದರೆ ದೇವರು ನನ್ನನ್ನು ಶಿಕ್ಷಿಸಲಿ' ಎಂದ. ಅನಂತರ ಸಾಲ ಪಡೆದು ಕೊಂಡವನ ಸರದಿ. ಆತ ಉದ್ದನೆಯ ಕೋಲು ಹಿಡಿದುಕೊಂಡು ಪ್ರಮಾಣಕ್ಕೆ ಹಾಜರಾಗಿದ್ದ. ಪವಿತ್ರ ಪೀಠದ ಮೇಲೆ ಕೈ ಇರಿಸುವ ಮುನ್ನ ತನ್ನ ಕೈಯಲ್ಲಿದ್ದ ಕೋಲನ್ನು ಎದುರಿಗೆ ನಿಂತಿದ್ದ ಸಾಲ ನೀಡಿದವನಿಗೆ ಕೊಟ್ಟು "ಸ್ವಲ್ಪ$ಹಿಡಿದುಕೋ' ಎಂದ. ಆತ ಅದನ್ನು ಸ್ವೀಕರಿಸಿ ಹಿಡಿದುಕೊಂಡ ಅನಂತರ ಸಾಲ ಪಡೆದವ ಪ್ರಮಾಣ ಮಾಡಿದ: "ನಾನು ಆತನಿಂದ ನೂರು ಚಿನ್ನದ ನಾಣ್ಯಗಳನ್ನು ಪಡೆದದ್ದು ಸತ್ಯ. ಅದನ್ನು ಅವನಿಗೆ ಈಗಾಗಲೇ ಹಿಂದೆ ನೀಡಿದ್ದು ಕೂಡ ಸತ್ಯ. ನಾನಾಡಿದ್ದು ಸುಳ್ಳಾದರೆ ದೇವರು ನನ್ನನ್ನು ಶಿಕ್ಷಿಸಲಿ'. ಅಷ್ಟು ಹೇಳಿ ತನ್ನ ಬೆತ್ತವನ್ನು ಹಿಂದೆ ಪಡೆದುಕೊಂಡು ಹೊರಟು ಹೋದ. ಗುರುಗಳಿಗೂ, ಸಾಲ ನೀಡಿದವನಿಗೂ ಇನ್ನೇನೂ ಮಾಡಲು ಉಳಿದಿರಲಿಲ್ಲ.
ಅಲ್ಲಿ ನಿಜವಾಗಿ ನಡೆದದ್ದು ಇಷ್ಟು. ಸಾಲ ಪಡೆದವ ಪ್ರಮಾಣ ಮಾಡುವುದಕ್ಕೆ ಮೊದಲು ತನ್ನ ಕೈಯಲ್ಲಿದ್ದ ಕೋಲನ್ನು ಸಾಲ ನೀಡಿದವನಿಗೆ ಕೊಟ್ಟನÇÉಾ, ಆ ಕೋಲಿನ ಮಧ್ಯೆ ಇರುವ ಟೊಳ್ಳಿನಲ್ಲಿ ಆತ 100 ಚಿನ್ನದ ನಾಣ್ಯಗಳನ್ನು ಇರಿಸಿದ್ದ. ಆತ ಪ್ರಮಾಣ ಮಾಡುವಾಗ ಕೋಲು ನಾಣ್ಯದ ಸಮೇತ ಸಾಲ ನೀಡಿದವನ ಕೈಯಲ್ಲಿತ್ತು. ಆದುದರಿಂದ ನಾನು ಆತನಿಗೆ ಈಗಾಗಲೇ 100 ಚಿನ್ನದ ನಾಣ್ಯಗಳನ್ನು ಹಿಂದೆ ಕೊಟ್ಟಿದ್ದೇನೆ ಅಂತ ಆತ ಹೇಳಿದ್ದು ಸತ್ಯವೇ ಆಗಿತ್ತು. ಆ ಸತ್ಯದ ಮೂಲಕ ಆತ ದೇವರಿಗೆ, ಗುರುಗಳಿಗೆ ಮತ್ತು ಸಾಲ ನೀಡಿದವನಿಗೆ ಏಕಕಾಲದಲ್ಲಿ ಮೋಸಮಾಡಿದ.
ಮಹಾಭಾರತದ ಧರ್ಮಜ ಮತ್ತು ಮೇಲಿನ ಕತೆಯಲ್ಲಿ ಸಾಲ ಪಡೆದವ ಇಬ್ಬರೂ ಒಂದು ವಿಷಯವನ್ನು ಸಾಧಿಸಿ ತೋರಿಸಿ¨ªಾರೆ: ಮೋಸ ಮಾಡಲು ಸುಳ್ಳೇ ಹೇಳಬೇಕೆಂದೇನೂ ಇಲ್ಲ. ಸತ್ಯ ಹೇಳುವ ಮೂಲಕವೂ ಯಾರನ್ನಾದರೂ ಮೋಸಗೊಳಿಸಬಹುದು. ದೇವರನ್ನು ಕೂಡ.
ಮೋಸಕ್ಕೆ ಬಳಸಿಕೊಂಡ ಸತ್ಯ ಸತ್ಯವೇ ಎನ್ನುವುದು ಮಾತ್ರ ಸುಲಭದಲ್ಲಿ ಉತ್ತರಿಸಲಾಗದ ಪ್ರಶ್ನೆ.
***
ಇಬ್ಬರಲ್ಲಿ ಒಬ್ಬ ಮಾತ್ರ ಸತ್ಯ ಹೇಳಲು ಸಾಧ್ಯ ಅನ್ನುವುದು ವಸ್ತುಸ್ಥಿತಿಯಾಗಿದ್ದಾಗ ಇಬ್ಬರೂ ಸತ್ಯಪ್ರಮಾಣ ಮಾಡುತ್ತೇವೆ ಅಂತ ಹೊರಟರೆ ಇಬ್ಬರಲ್ಲಿ ಒಬ್ಬ ಮೋಸದ ಸತ್ಯ ಮಾತ್ರ ಹೇಳಲು ಸಾಧ್ಯ ಎನ್ನುವುದು ನಿರ್ವಿವಾದಿತ. ಇಂತಹ ಒಂದು ಪ್ರಕರಣಕ್ಕೆ ಕರ್ನಾಟಕ ಸಾಕ್ಷಿಯಾಗುವ ಸನ್ನಿವೇಶವೊಂದು ಸ್ವಲ್ಪದರಲ್ಲೇ ತಪ್ಪಿಹೋದಂತಿದೆ. ಒಂದು ವೇಳೆ ಅದು ನಡೆದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇವರೀರ್ವರ ಮಧ್ಯೆ ಯಾರು ನಿಜವಾದ ಸತ್ಯ ಹೇಳಿದರು, ಯಾರು ಮೋಸದ ಸತ್ಯ ಹೇಳಿದರು ಎನ್ನುವ ಕುತೂಹಲವಾದರೂ ಜನರಿಗೆ ಇರುತ್ತಿತ್ತು ಅಂತ ಅನ್ನಿಸುವುದಿಲ್ಲ. ಇಬ್ಬರ ಸತ್ಯನಿಷ್ಠೆಯೂ ಪ್ರಶ್ನಾರ್ಹ.
ಯಡಿಯೂರಪ್ಪ ಅವರ ವಿಚಾರದಲ್ಲಿ ನಾವೂ, ನೀವೂ ಏನೂ ಹೇಳಬೇಕಿಲ್ಲ. ಯಡಿಯೂರಪ್ಪ ಕಾನೂನಿಗೆ ವಿರುದ್ಧವಾದ ರಾಜಕಾರಣ ಮಾಡುತ್ತಿಲ್ಲ, ಆದರೆ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ ಅಂತ ಅವರದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಯವರೇ ಹೇಳಿದ್ದಾರೆ. ಯಾರಾದರೂ ದೇವರೆದುರು ಸುಳ್ಳು ಹೇಳಿದರೂ ಅಷ್ಟೆ. ಅದು ಅನೈತಿಕ. ಕಾನೂನಿಗೆ ವಿರುದ್ಧವಲ್ಲ. ಇನ್ನು ಕುಮಾರಸ್ವಾಮಿ. ಅವರು ಕರ್ನಾಟಕ ರಾಜಕೀಯದ "ಮಾತುತಪ್ಪಿದ ಮಗ'. ಇತ್ತೀಚೆಗೆ ಅವರಿಗೆ ಕರ್ನಾಟಕದ ಜನತೆಯ ಬಗ್ಗೆ ಬಹಳ ಬೇಸರ. ಅದಕ್ಕೆ ಅವರೇ ನೀಡಿದ ಕಾರಣ ಏನು ಅಂದರೆ ಇಷ್ಟೆಲ್ಲಾ ಹಗರಣಗಳನ್ನು ಅವರು ಬಯಲಿಗೆಳೆದರೂ ಜನ ಅವ್ಯಾವುವನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುವುದು. ಅಂದರೆ ಜನ ತನ್ನನ್ನು ನಂಬುವುದಿಲ್ಲ ಎನ್ನುವುದು ಅವರ ಅಳಲು. ಬಹುಶಃ ಜನರ ನೆನಪಿನ ಶಕ್ತಿ ಅವರೆಂದುಕೊಂಡಷ್ಟು ಕಡಿಮೆ ಯಲ್ಲ. ಕೊಂದು ತಿನ್ನುವೆನೆಂಬ ಹುಲಿಯ ಎದುರು ಕೂಡ ಕೊಟ್ಟಮಾತಿಗೆ ತಪ್ಪಲಾರೆನು ಎಂದು ತಲೆ ಎತ್ತಿ ನಿಂತ ಹಸುವಿನ ಕತೆ ಕೇಳುತ್ತಾ ಕೇಳುತ್ತಾ ಬೆಳೆದ ಕರ್ನಾಟದೇಶದ ಜನಕ್ಕೆ ಕುಮಾರಸ್ವಾಮಿ ಹೇಳುವುದೆಲ್ಲಾ ತೋಳ ಬಂತು ತೋಳ ಅಂತ ಕೇಳಿಸಿದರೆ ಅದಕ್ಕೆ ಕಾರಣ ಹುಡುಕಬೇಕಿಲ್ಲ.
ದೇವರೆದುರು ಹೇಳಿದರೂ ಸುಳ್ಳು ಸುಳ್ಳೇ. ಟಿವಿ ಕೆಮರಾದ ಮುಂದೆ ಹೇಳಿದ ಸುಳ್ಳೂ ಸುಳ್ಳೇ. ದೇವರೆದುರು ಸುಳ್ಳು ಹೇಳಿದರೆ ಯಾರಾದರೂ ಶಿಕ್ಷೆ ಅನುಭವಿಸುತ್ತಾರೆ ಅನ್ನುವುದು ನಂಬಿಕೆಗೆ ಬಿಟ್ಟ ವಿಚಾರ. ಆದರೆ ಪ್ರಜಾತಂತ್ರದಲ್ಲಿ ಟಿವಿ ಕೆಮರಾಗಳ ಮುಂದೆ ರಾಜಕಾರಣಿಯೊಬ್ಬ ಹೇಳಿದ್ದೆಲ್ಲಾ ಸುಳ್ಳು ಅಂತ ಜನರಿಗೆ ಮನವರಿಕೆಯಾದರೆ ಆತ ಜನರ ನಂಬಿಕೆ ಕಳೆದುಕೊಳ್ಳುವ ಶಿಕ್ಷೆ ಅನುಭವಿಸುತ್ತಾನೆ. ಇದಕ್ಕೆ ಕುಮಾರಸ್ವಾಮಿ ಜೀವಂತ ಸಾಕ್ಷಿ.
***
ಈ ಪ್ರಕರಣದ ನೆರಳಲ್ಲಿ ಒಂದು ವಿಶೇಷ ಬೆಳವಣಿಗೆ ನಡೆದು ಹೋಯಿತು. ಅದು ನಮ್ಮ ಮಧ್ಯೆ ಇರುವ ಬುದ್ಧಿಜೀವಿಗಳು ಅಂತ ಕರೆಯಲ್ಪಡುವವರು ಮತ್ತು ಸಂತರು ಅಂತ ಕರೆಯಲ್ಪಡುವವರು ತಮ್ಮ ಚಾರಿತ್ರಿಕ ವರ್ಗ ಸಂಘರ್ಷ ಮರೆತು ಒಂದೇ ಧ್ವನಿಯಲ್ಲಿ ಮಾತನಾಡಿದ್ದು. ಪ್ರಮಾಣ ಬೇಡ ಅನ್ನುವುದು ಎರಡೂ ವರ್ಗಗಳ ಸಮಾನ ಆಗ್ರಹವಾಗಿತ್ತು. ಬಹುಶಃ ಪ್ರಮಾಣ ಮಾಡುತ್ತೇವೆ ಅಂತ ಹೊರಟವರು ಕೂಡ ಈ ರೀತಿ ಯಾರಾದರೂ ಆಗ್ರಹಿಸಿದರೆ ಸಾಕು ಅಂತ ಕಾಯುತ್ತಿದ್ದಿರಬೇಕು. ವೈಯಕ್ತಿಕ ವಿವಾದಗಳು ನಂಬಿಕೆಯ ನೆಲೆಯಲ್ಲಿ ಕಲ್ಲಾಗಿ ಕುಳಿತ ದೇವರ ಮುಂದೆ ಇತ್ಯರ್ಥವಾಗುವುದಕ್ಕೆ ಯಾರ ತಕರಾರೂ ಇಲ್ಲ. ಆದರೆ ಇಬ್ಬರು ರಾಜಕಾರಣಿಗಳ ನಡುವಿನ ವಿವಾದ ಹೀಗೆಲ್ಲಾ ಆಗುವುದರಿಂದ ಸಂವಿಧಾನಕ್ಕೆ ಅಪಚಾರವಾಯಿತು ಅಂತ ವಿಚಾರವಂತರ ನಿಲುವು. ರಾಜಕೀಯ ವಿವಾದವೊಂದು ದೇವಸ್ಥಾನದ ಮೆಟ್ಟಲೇರುವುದರಿಂದ ಆಸ್ತಿಕ ಭಾವನೆಗಳಿಗೆ ಘಾಸಿಯಾಗುತ್ತದೆ ಮತ್ತು ಧರ್ಮದ ಪಾವಿತ್ರ್ಯಹಾಳಾಗುತ್ತದೆ ಎನ್ನುವುದು ಸಂತ ಸಮೂಹದ ಚಿಂತೆ. ಇವೆಲ್ಲಾ ಯಾರಾದರೂ ಒಪ್ಪಿಕೊಳ್ಳಬಹುದಾದ ಕಳಕಳಿಗಳೇ. ಆದರೆ ಈ ಪ್ರಮಾಣ ಪ್ರಕರಣ ನಡೆದು ಹೋದರೆ ಅದು ಕಲಿಯುಗದ ಮಹಾದುರಂತವಾಗಿ ಬಿಡುತ್ತದೆ ಎನ್ನುವ ರೀತಿಯ ಪ್ರತಿಕ್ರಿಯೆಗಳು ಬಂದದ್ದು ಯಾಕೆ ಅಂತ ಅರ್ಥವಾಗಲಿಲ್ಲ. ಸಂವಿಧಾನಕ್ಕೆ ಅಪಚಾರವಾಗುವ, ಧಾರ್ಮಿಕ ನಂಬಿಕೆಗಳ ಪಾವಿತ್ರ್ಯ ಹಾನಿಯಾಗುವ ಘಟನೆಗಳು ಕರ್ನಾಟಕದಲ್ಲಿ ಇತ್ತೀಚೆಗೆ ಸಾಲುಸಾಲಾಗಿ ನಡೆಯುತ್ತಿವೆ.
"ಧೈರ್ಯ ಇದ್ದರೆ ನೀವು ಮಾಡಿದ ಆಪಾದನೆಯನ್ನು ಮಹಾಮಹಿಮ ಮಂಜುನಾಥ ದೇವರ ಮುಂದೆ ಇನ್ನೊಮ್ಮೆ ಮಾಡಿ' ಅಂತ ಯಡಿಯೂರಪ್ಪ 50 ಲಕ್ಷ ರೂಪಾಯಿ ವೆಚ್ಚದ ಜಾಹೀರಾತುಗಳ ಮೂಲಕ ಸವಾಲೆಸೆದದ್ದು ಮತ್ತು ಅದಕ್ಕೆ "ಓ, ನಾನು ರೆಡಿ' ಅಂತ ಕುಮಾರಸ್ವಾಮಿ ಹೇಳಿದ್ದು ಮಹಾ ನೈತಿಕ ಅಧಃಪತನದ ದೊಡ್ಡ ಅಧ್ಯಾಯದಲ್ಲೊಂದು ಪುಟ್ಟ ಸಾಲು ಅಷ್ಟೆ.
ಪರಿಸ್ಥಿತಿ ಈ ಹಂತಕ್ಕೆ ಬಂದುದಕ್ಕೆ ಯಡಿಯೂರಪ್ಪ ಒಬ್ಬರನ್ನೇ ಯಾಕೆ ದೂರಬೇಕು? ರಾಜಕೀಯ ಜಗಳಗಳನ್ನು ಜನರ ಮುಂದೆ, ನ್ಯಾಯಾಲಯದ ಮುಂದೆ, ಪಕ್ಷದ ಮುಂದೆ ಇಟ್ಟು ಪರಿಹರಿಸಿಕೊಳ್ಳಿ; ದೇವರನ್ನು, ದೇವಾಲಯಗಳನ್ನು ನಿಮ್ಮ ವಿವಾದಗಳಿಂದ ದೂರವಿಡಿ ಅಂತ ಸಂತರೆಲ್ಲಾ ಬುದ್ಧಿ ಹೇಳಿದ್ದಕ್ಕೆ ಅವರಿಗೆಲ್ಲಾ ಶರಣು ಶರಣು ಎನ್ನೋಣ. ಆದರೆ ಈ ದುರಂತ ಪರಂಪರೆಯಲ್ಲಿ ಅವರದ್ದೂ ಯಥಾಶಕ್ತಿ ದೇಣಿಗೆ ಇದೆ ಅನ್ನುವುದನ್ನು ಹೇಗೆ ಮರೆಯುವುದು? ಕರ್ನಾಟಕದಲ್ಲಿ ಹಿಂದೆ ಯಾವ ಮುಖ್ಯಮಂತ್ರಿಯೂ ರಾಜಕೀಯದ ಕೋಳಿಜಗಳವನ್ನು ದೇವಾಲಯಕ್ಕೆ ಒಯ್ಯಲಿಲ್ಲ ಎನ್ನುವುದು ಸರಿಯಾದರೆ ಹಿಂದೆ ಯಾವ ಸಂತನೂ ರಾಜಕಾರಣಿಯೊಬ್ಬನ ಬೆಂಬಲಕ್ಕೆ ಬಹಿರಂಗವಾಗಿ ಬೀದಿಗಿಳಿದಿಲ್ಲ ಎನ್ನುವುದು ಅಷ್ಟೇ ಸರಿ.
ಇವೆರಡೂ ಪರಸ್ಪರ ಸಂಬಂಧ ಇರುವ ವಿಚಾರಗಳು. ರಾಜಕೀಯ ಜಗಳಗಳೆಲ್ಲಾ ಇತ್ಯರ್ಥವಾಗಲು ಧಾರ್ಮಿಕ ಅಂಗಳವೇ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾದಾಗಲೇ ಇಂತಹ ಪ್ರತಿಭಟನೆಗಳೆಲ್ಲಾ ಬಂದಿದ್ದರೆ ಪ್ರಮಾಣಕ್ಕೆ ಆಹ್ವಾನಿಸುವ ಮೊದಲೇ ಯಡಿಯೂರಪ್ಪ ಕೂಡ ಯೋಚಿಸುತ್ತಿದ್ದರು.
***
ಈ ಪ್ರಕರಣಕ್ಕೆ ನೇರವಾಗಿ ಸಂಬಂಧಿಸದ ಆದರೆ ಧರ್ಮ, ಸಂವಿಧಾನ, ಪಾವಿತ್ರ್ಯಇತ್ಯಾದಿಗಳ ಸಂಬಂಧದ ಕುರಿತಾಗಿ ಹೇಳಲೇ ಬೇಕಾದ ಇನ್ನೊಂದು ವಿಚಾರವಿದೆ. ನಮ್ಮ ಕೋರ್ಟುಗಳಲ್ಲಿ ಸಾಕ್ಷಿ ನುಡಿಯಲು ಬಂದ ಹಿಂದೂಗಳಿಗೆ ಭಗವದ್ಗೀತೆಯ (ಇತರರಿಗೆ ಅವರವರ ಧರ್ಮಗ್ರಂಥಗಳ) ಮೇಲೆ ಕೈ ಇಟ್ಟು "ಸತ್ಯವನ್ನೇ ನುಡಿಯುತ್ತೇನೆ. ಸತ್ಯವನ್ನಲ್ಲದೆ ಇನ್ನೇನನ್ನೂ ನುಡಿಯುವುದಿಲ್ಲ' ಅಂತ ಪ್ರಮಾಣ ಮಾಡಿಸುವ ಕ್ರಮ ಇದೆ. ದುಡ್ಡು ತೆಗೆದುಕೊಂಡು ಸುಳ್ಳು ಸಾಕ್ಷಿ ಹೇಳಲು ಬಂದವರು ಕೂಡ ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡುತ್ತಾರೆ. ಪ್ರಮಾಣ ಮಾಡಿದ ಅನಂತರ ಒಂದಕ್ಷರ ಸತ್ಯ ಹೇಳದಿದ್ದರೂ ಯಾರಿಗೂ ತಕರಾರಿಲ್ಲ. ಗೀತೆಯನ್ನು ಬೋಧಿಸಿದ ಯೋಗೇಶ್ವರ ಕೃಷ್ಣ ಸುಳ್ಳು ಹೇಳಿದ್ದಕ್ಕಾಗಿ ಶಿಕ್ಷಿಸುತ್ತಾನೆ ಎನ್ನುವ ಭಯ ಇಲ್ಲ. ಗೀತೆ ಬರೀ ನಿಮಿತ್ತ ಮಾತ್ರ. ಯಾರು ಎಷ್ಟು ಸುಳ್ಳು ಹೇಳಬೇಕು ಎನ್ನುವುದೆಲ್ಲಾ ಪೂರ್ವನಿರ್ಧರಿತ.
ಸಂವಿದಾನಬದ್ಧ ನ್ಯಾಯಾಲಯದ ನಡಾವಳಿಗಳಲ್ಲಿ ಧರ್ಮಗ್ರಂಥ ಗಳದ್ದೇನು ಪಾತ್ರ?ದೇವಾಲಯವೊಂದರಲ್ಲಿ ರಾಜಕಾರಣಿಯೊಬ್ಬ ಪ್ರಮಾಣ ಮಾಡುವುದರಿಂದ ಧರ್ಮ ಮತ್ತು ಸಂವಿಧಾನಕ್ಕೆ ಏಕಕಾಲದಲ್ಲಿ ಅಪಚಾರವಾಗುತ್ತದೆ ಎಂದಾದರೆ ನ್ಯಾಯಾಲಯದಲ್ಲಿ ಗೀತೆಯ ಮೇಲೆ ಪ್ರಮಾಣ ಮಾಡುವುದರಿಂದಲೂ ಆಗುವುದು ಅದೇ ಅಲ್ಲವೆ?